Saturday, 12 April 2014

ಗೆಳೆಯನಿಗೊಂದು ಪತ್ರ - ೨೩: ನಡೆಯುವರೆಡಹುವರಲ್ಲದೆ ಕುಳಿತವರೆಡಹುವರೇ..??


ಅಂತರಂಗದ ಸಖನೇ,
                                   ಎಲ್ಲಾ ಸೌಖ್ಯವೇ..?? ನೀನಂತೂ ಇತ್ತೀಚೆಗೆ ಬಹಳವೇ ಅಪರೂಪದ ಅತಿಥಿಯಾಗಿ ಬಿಟ್ಟೆ ನನ್ನ ಪಾಲಿಗೆ. ಗೆಳತಿಯ ಮಾತನಾಡಲು ಬಿಡುವು ಕೂಡ ಇಲ್ಲದಷ್ಟು ಕೆಲಸಗಳೇ ನಿನಗೆ..?? ದೊಡ್ಡ ಮನುಷ್ಯನಾಗಿಬಿಟ್ಟಿದ್ದೀಯ ನೋಡು. ಇರಲಿ ಬಿಡು. ನಿನ್ನ ಬ್ಯುಸಿ ಶೆಡ್ಯೂಲ್ ನಡುವೆ ಸ್ವಲ್ಪ ಬಿಡುವು ಮಾಡಿಕೊಂಡು ನನ್ನ ಪತ್ರಗಳನ್ನಾದರೂ ಓದುತ್ತಿರು.
                            ಒಂದು ಪ್ರಶ್ನೆಯನ್ನು ಕೇಳಲಿಕ್ಕಿದೆ ನಿನಗೆ. ನೀನು ಜೀವನದಲ್ಲಿ ಇಲ್ಲಿಯವರೆಗೆ ಭಾರಿ ಬೆಲೆ ತೆರಬೇಕಾದಂತಹ ತಪ್ಪುಗಳನ್ನು ಎಷ್ಟು ಬಾರಿ ಮಾಡಿರುವೆ..?? ಅ ತಪ್ಪುಗಳೆಲ್ಲಾ ಜರುಗಿದ ಮೇಲೆ ನಿನಗೆ ಪಶ್ಚಾತ್ತಾಪವಾಗಿರಬೇಕಲ್ಲವೇ..?? ನಂತರ ಅವುಗಳನ್ನೆಲ್ಲಾ ತಿದ್ದುಕೊಂಡು ಇನ್ನೆಂದೂ ಆ ರೀತಿ ಜರುಗದಂತೆ ಜಾಗೃತೆ ವಹಿಸುತ್ತಾ  ಸಾಗಿರುವೆಯಲ್ಲವೇ..?? ಅಥವಾ ತಪ್ಪುಗಳಾದ ಮಾತ್ರಕ್ಕೆ ಇನ್ನೆಂದೂ ಮೇಲೇಳುವುದೇ ಇಲ್ಲವೆಂದು ಶಪಥಗೈದು ಕುಳಿತೆಯಾ..??
                               ನಮಗೆಲ್ಲರಿಗೂ ಇದೊಂದು ದೌರ್ಬಲ್ಯವೇ ಸರಿ. ತಿಳಿದೋ ತಿಳಿಯದೆಯೋ ನಮ್ಮಿಂದ ಏನಾದರೂ ತಪ್ಪಾದಲ್ಲಿ ಅದನ್ನು ತಿದ್ದಿಕೊಂಡು ಮುನ್ನಡೆಯುವ ಬದಲು ಏನೋ ದೊಡ್ಡ ಅನಾಹುತವೇ ಆಯಿತೆಂಬಂತೆ ತಲೆಯ ಮೇಲೆ ಕೈ ಹೊತ್ತು ಕುಳಿತುಬಿಡುತ್ತೇವೆ. ಮನುಷ್ಯ ತಪ್ಪುಗಳನ್ನು ಮಾಡುವುದು ಸಹಜವೇ ಹೊರತು ಮರಗಳು ತಪ್ಪು ಮಾಡುತ್ತವೆಯೇ...?? ನಡೆಯುವವ ಎಡವದೇ ಇರುತ್ತಾನೆಯೇ..?? ಆಗ ತಾನೇ ನಡೆಯಲು ಕಲಿತ ಪುಟ್ಟ ಮಗುವೊಂದು ಅದೆಷ್ಟು ಬಾರಿ ಎಡವಿ ಬೀಳುವುದಿಲ್ಲ. ಹಾಗಂತ ಅದು ಎಂದಿಗೂ ನಡೆಯುವ ಪ್ರಯತ್ನವನ್ನು ಕೈ ಬಿಡುವುದಿಲ್ಲವಲ್ಲ. ಬಿದ್ದಷ್ಟೂ ಸಲವೂ ಎದ್ದು ನಿಂತು ಇನ್ನು ಹೆಚ್ಚಿನ ಬಾರಿ ನಡೆಯುತ್ತದೆ. ಜೊತೆಗೆ ಹೆಚ್ಚಿನ ಎಚ್ಚರಿಕೆಯಿಂದ ನಡೆಯುತ್ತದೆ. ಮಗುವಾಗಿದ್ದಾಗ ನಾವೂ ಸಹ ಹೀಗೆಯೇ ಬಿದ್ದು ಎದ್ದು ನಡೆಯುವುದನ್ನು ಕಲಿತಿರುತ್ತೇವೆ. ಆದರೆ ಯಾವಾಗ ಸ್ವಲ್ಪ ದೊಡ್ಡವರಾಗುತ್ತೇವೆಯೋ ಈ ಎಲ್ಲ ಸಂಗತಿಗಳನ್ನು ಮರೆಯುತ್ತೇವೆ. ಇನ್ನು ಮಾಡಿದ ತಪ್ಪಿಗೆ ಶಿಕ್ಷೆಯಾಗಲೇಬೇಕು ಎನ್ನುವುದೂ ಕೂಡಾ ಸರಿಯಾದದ್ದೇ. ಕಾನೂನುಗಳು ಕೊಡುವ ಶಿಕ್ಷೆ ಏನೇ ಇರಲಿ. ವ್ಯಕ್ತಿಯೊಬ್ಬನಿಗೆ ತಾನು ಮಾಡಿದ ತಪ್ಪಿನ ಅರಿವಾದ ಮೇಲೆ ಆತ ಪಡುವ ಪ್ರಾಯಶ್ಚಿತ್ತಕ್ಕಿಂತ ದೊಡ್ಡ ಶಿಕ್ಷೆ ಬೇರೆಯೇನಿದೆ..?? ತಪ್ಪು ಮಾಡುವುದು ನಿಜವಾದ ಅಪರಾಧವೆನಿಸುವುದಿಲ್ಲ. ಅದಕ್ಕೆ ಕ್ಷಮೆಯೆನ್ನುವುದೊಂದಿದೆ.  ಆದರೆ ನಮ್ಮಿಂದಾದ ತಪ್ಪುಗಳನ್ನು ತಿದ್ದಿಕೊಳ್ಳದೇ ಮತ್ತೆ ಮತ್ತೆ ಪುನಃ ತಪ್ಪು ಗೈದರೆ, ಜೊತೆಗೆ ತಪ್ಪು ಮಾಡಿದ್ದರಿಂದ ಇನ್ನು ಮುಂದೆ ಬದುಕೇ ಇಲ್ಲ ಎನ್ನುವಂತೆ ಕುಳಿತುಕೊಳ್ಳುವುದು ಮಾತ್ರ ನಿಜವಾದ ಅಪರಾಧವಾಗುತ್ತದೆ.
                           ನಾನಂತೂ ತಪ್ಪು ಮಾಡದೇ ಇರುವವಳೇ ಅಲ್ಲ. ತಪ್ಪು ಮಾಡಿಲ್ಲವೆಂದರೆ ನನ್ನ ನಡೆ ಮುಂದೆ ಹೋಗುವುದೇ ಇಲ್ಲ. ನಿನ್ನ ಸಂಗತಿ ಹೇಗೆ..?? ಈಗ ಬೇಡ. ಮುಂದಿನ ಸಲ ಭೇಟಿಯಾದಾಗ ಖಂಡಿತ ಹೇಳಬೇಕು ಓಕೆ..??

                                 ಪ್ರೀತಿಯಿಂದ,

                                                                                                          ಎಂದೆಂದೂ ನಿನ್ನವಳು,
                                                                                                               ನಿನ್ನೊಲುಮೆ


No comments:

Post a Comment