Thursday, 10 April 2014

ಗೆಳೆಯನಿಗೊಂದು ಪತ್ರ-೨೨: ನಮ್ಮೊಳಗೆ ಇದ್ದು ನಮ್ಮನ್ನೇ ಕೊಲ್ಲಲೆತ್ನಿಸುವ ಶತ್ರುಗಳು


ಪ್ರಿಯ ಗೆಳೆಯ,
                   ಬೇಸರವಾಗುತ್ತಿದೆ ಕಣೋ. ಈಗ ನಾಲ್ಕು ದಿನಗಳ ಹಿಂದೆ ನನ್ನ ಗೆಳತಿಯೊಬ್ಬಳು ನಮ್ಮನ್ನೆಲ್ಲಾ ಬಿಟ್ಟು ಹೋಗಿಬಿಟ್ಟಳು. ಚಿಕ್ಕಂದಿನಿಂದಲೂ ನಾವಿಬ್ಬರು ಒಟ್ಟಿಗೆ ಆಡಿದವರು, ಓದಿದವರು. ಅವಳು ನನಗಿಂತ ಒಂದು ವರ್ಷಕ್ಕೆ ಸಣ್ಣವಳು. ಈ ಕ್ಷಣ ಅವಳಿಲ್ಲ ಎಂಬ ಸತ್ಯವನ್ನು ಇನ್ನೂ ಅರಗಿಸಿಕೊಳ್ಳಲು ನನ್ನಿಂದಾಗುತ್ತಿಲ್ಲ. ಅವತ್ತು ಅಪ್ಪ ಫೋನ್ ಮಾಡಿ ಹೇಳಿದಾಗಿನಿಂದ ನನ್ನ ಮನಸ್ಸು ಅಲ್ಲೋಲ ಕಲ್ಲೋಲವಾಗಿಯೇ ಇದೆ.
                        ಅಷ್ಟಕ್ಕೂ ಅವಳು ತೀರಿಕೊಂಡಿದ್ದಾದರೂ ಹೇಗೆ..?? ಬ್ಲಡ್ ಕ್ಯಾನ್ಸರ್ ನಿಂದ. ೨೧ ವರ್ಷಕ್ಕೆ ಅವಳಿಗೆ ಆ ಮಹಾರೋಗ ಹೇಗೆ ಬಂತೆಂಬುದೇ ಯಾರಿಗೂ ಅರ್ಥವಾಗಿಲ್ಲ. ಅಷ್ಟಕ್ಕೂ ಅವಳು ಯಾವಾಗಲೂ ಆರೋಗ್ಯವಂತಳಾಗಿಯೇ ಇದ್ದವಳು. ಜೊತೆಗೆ ತಿನ್ನುವ ವಿಷಯದಲ್ಲಿ ಬಹಳವೇ ಕಾಳಜಿ. ವಿಷಾದದ ಸಂಗತಿಯೆಂದರೆ, ಅವಳಿಗೆ ಬ್ಲಡ್ ಕ್ಯಾನ್ಸರ್ ಇರುವ ವಿಷಯ ಗೊತ್ತಾಗುವ ವೇಳೆಗಾಗಲೇ ಅದು ಗುಣಪಡಿಸಲಾಗದ ಹಂತವನ್ನು ತಲುಪಿ ಬಿಟ್ಟಿತ್ತಂತೆ.
                         ಕೆಲವೇ ತಿಂಗಳಿಗಳ ಹಿಂದೆ ನನ್ನ ಸೀನಿಯರ್ ಒಬ್ಬ ತೀರಿಕೊಂಡಿದ್ದ. ಒಂದು ವರ್ಷದ ಕೆಳಗೆ ಎಕ್ಸಾಮ್ ಬರೆಯುತ್ತಿದ್ದವನು ಕಣ್ಣು ನೋವು ಜೊತೆಗೆ ಏನೂ ಸರಿಯಾಗಿ ಕಾಣಿಸುತ್ತಿಲ್ಲವೆಂದು ಅರ್ಧಕ್ಕೆ ಎದ್ದು ಬಂದಿದ್ದೆ ಅವನಿಗೆ ತಗುಲಿದ ಅದ್ಯಾವುದೋ ಅರ್ಥವಾಗದ ಖಾಯಿಲೆಗೆ ಮುನ್ನುಡಿ ಬರೆಯಿತೋ ಏನೋ. ಆಮೇಲೆ ಮುಂದಿನ ಒಂದು ವರುಷ ಅವನು ಏನೇನೆಲ್ಲಾ ಕಷ್ಟ ಅನುಭವಿಸಿದನೋ ಹೇಳುವುದಕ್ಕಿಲ್ಲ. ಒಬ್ಬನೇ ಮಗನಾಗಿದ್ದ ಆತ ಇಹಲೋಕ ಬಿಟ್ಟು ನಡೆದಾಗ ಪಾಪ ಆತನ ಅಪ್ಪ-ಅಮ್ಮಂದಿರ ದುಃಖವನ್ನು ನೋಡುವುದೇ ಬೇಡ.
                    ಇವತ್ತಿನ ದಿನಗಳಲ್ಲಿ ಈ ಥರ ಎಳೆ ವಯಸ್ಸಿನಲ್ಲಿ ಯಾವ್ಯಾವುದೋ ಗುಣಪಡಿಸಲಾಗದ ದೊಡ್ಡ ದೊಡ್ಡ ಖಾಯಿಲೆಗಳಿಗೆ ಬಲಿಯಾಗಿ ಸಾಯುವವರು ಬಹಳವಾಗಿದ್ದಾರೆ. ತಂತ್ರಜ್ಞಾನದಿಂದಾಗಿ ವೈದ್ಯಕೀಯ ರಂಗದಲ್ಲೂ ಹೊಸ ಹೊಸ ಆವಿಷ್ಕಾರಗಳಾಗುತ್ತಿದ್ದರೂ, ಹಲವಾರು ರೋಗಗಳಿಗೆ ಔಷಧಗಳು ಲಭ್ಯವಿದ್ದರೂ ಸಾವಿನ ಸಂಖ್ಯೆ ಮಾತ್ರ ಹೆಚ್ಚುತ್ತಲೇ ಇದೆ. ಗುಣಪಡಿಸಲಾಗದೇ ವ್ಯಕ್ತಿಯು ಸಾವಿಗೀಡಾಗುವ ಕೇಸುಗಳಿಗಿಂತಲೂ ಖಾಯಿಲೆ ಯಾವುದೆಂದು ಕೊನೆಯ ಹಂತದವರೆಗೆ ತಿಳಿಯದೇ ಅದಕ್ಕೆ ಬಲಿಯಾಗುವವರೇ ಅಧಿಕ. ಇದಕ್ಕೆ ಕಾರಣವಾದರೂ ಏನು ಎಂಬುದು ಮಾತ್ರ ಇನ್ನೂ ಉತ್ತರ ದೊರೆಯದ ಪ್ರಶ್ನೆ. ವೈದ್ಯಕೀಯ ರಂಗದಲ್ಲಿನ ಕುಂದು ಕೊರತೆಗಳಿಂದಾಗುವ ವೈಫಲ್ಯವೇ..?? ಅಥವಾ ನಮ್ಮ ದಿನ ನಿತ್ಯದ ಆಹಾರ ಕ್ರಮವೇ..?? ಕೆಲವೊಮ್ಮೆ ಔಷಧಗಳೂ ಸಹ ಶತ್ರುಗಳಾಗುವುದುಂಟು. ಯಾವುದೋ ಒಂದು ಖಾಯಿಲೆಗೆಂದು ತೆಗೆದುಕೊಂಡ ಮಾತ್ರೆಗಳು ಅಡ್ಡ ಪರಿಣಾಮವನ್ನು ಬೀರಿ ಇನ್ನೊಂದು ಖಾಯಿಲೆಯ ಜನ್ಮಕ್ಕೆ ಕಾರಣವಾದ ಸಂಗತಿಗಳೂ ಹಲವಾರಿವೆ. ಅದಕ್ಕೆ ಈಗ ಡಾಕ್ಟರ್ ಹತ್ತಿರ ಹೋಗಲಿಕ್ಕೂ ಸ್ವಲ್ಪ ಹೆದರಿಕೆಯೇ. ಎರಡನೆಯದನ್ನೂ ತೆಗೆದು ಹಾಕುವಂತಿಲ್ಲ. ಇಂದು ನಾವು ಯಾರೂ ಪೌಷ್ಠಿಕ ಆಹಾರವನ್ನು ತಿನ್ನುತ್ತಿಲ್ಲ. ಒಂದೊಮ್ಮೆ ತಿನ್ನಬೇಕೆಂದುಕೊಂಡರೂ ದೊರಕದ ಸ್ಥಿತಿಯಲ್ಲಿ ನಾವು ಬದುಕುತ್ತಿದ್ದೇವೆ. ಎಲ್ಲ ಕಡೆಯೂ ಬೇಕರಿ ಅಂಗಡಿಗಳು ಎದ್ದು ಕಾಣಿಸುತ್ತವೆಯೇ ಹೊರತು ಹಣ್ಣಿನ ಅಂಗಡಿಗಳನ್ನು ಹುಡುಕಿಕೊಂಡು ಹೋಗಬೇಕಾದಂಥ ವಾತಾವರಣ. ಬಾಯಿರುಚಿಯ ತಿಂಡಿ ತಿನಿಸುಗಳೇ ಎಲ್ಲರಿಗೂ ಬೇಕು. ಅವು ಆರೋಗ್ಯಕ್ಕೆ ಮಾರಕವೋ ಇಲ್ಲವೋ ಎಂದು ಯಾರೂ ವಿಚಾರ ಮಾಡುವುದಿಲ್ಲ. ಇಂಥ ಆಹಾರ ಅಭ್ಯಾಸಗಳಿಂದಾಗಿ ಹಾನಿಕಾರಕ ವಸ್ತುಗಳು ಸುಲಭವಾಗಿ ನಮ್ಮ ದೇಹವನ್ನು ಪ್ರವೇಶಿಸಿ ನಮಗೆ ಅರಿವೇ ಆಗದಂತೆ ನಮ್ಮನ್ನು ಸಾವಿನ ಮನೆಯ ಎದುರಿಗೆ ತಂದು ನಿಲ್ಲಿಸುತ್ತವೆಯಷ್ಟೆ. ಆಮೇಲೆ ವೈದ್ಯರು ಬಿಡಿ, ದೇವರೂ ಕೂಡ ಯಮರಾಯನನ್ನು ತಡೆಯಲಾರ. 'ಆರೋಗ್ಯವೇ ಭಾಗ್ಯ' ಎನ್ನುವ ಮಾತನ್ನು ಹಿರಿಯರು ಸುಮ್ಮನೆ ಹೇಳಿದ್ದಾರೆಯೇ..??
                               ಅವಳ ನೆನಪಾದರೆ ಮತ್ತೆ ಬೇಸರವಾಗುತ್ತದೆ. ಛೇ, ಪಾಪ. ಅಂದ ಹಾಗೆ ನಿನ್ನ ಆರೋಗ್ಯ ಹೇಗಿದೆ..?? ಸರಿಯಾಗಿ ಊಟ, ನಿದ್ರೆಗಳನ್ನು ಮಾಡುತ್ತಿರುವೆ ತಾನೇ..?? ಏನೇ ಆಗಲಿ, ಜಾಗ್ರತೆ. ನಾನೀಗ ಊಟಕ್ಕೆ ಹೋಗಬೇಕು. ಮತ್ತೊಮ್ಮೆ ಮಾತನಾಡೋಣ. ಬರಲಾ..??

                                   ಪ್ರೀತಿಯಿಂದ,

                                                                                                                    ಎಂದೆಂದೂ ನಿನ್ನವಳು,
                                                                                                                       ನಿನ್ನೊಲುಮೆ


No comments:

Post a Comment