Friday, 11 April 2014

ಮುಲಾಯಂ ಅವರೇ, ಅತ್ಯಾಚಾರವೆನ್ನುವುದು ಹುಡುಗರು ಮಾಡುವ ಸಹಜ ತಪ್ಪೇ..??


                           ಕಳೆದೊಂದು ತಿಂಗಳಿಂದೀಚೆಗೆ ಪ್ರತಿದಿನವೂ ದಿನಪತ್ರಿಕೆಯನ್ನು ತಿರುವುತ್ತಿದ್ದರೆ ಕನಿಷ್ಠವೆಂದರೂ ೨-೩ ರಾಜಕಾರಣಿಗಳ ವಿವಾದಿತ ಹೇಳಿಕೆಗಳು ಕಣ್ಣೀಗೆ ಬೀಳುವುದು ಸಾಮಾನ್ಯವಾಗಿದೆ. ಇಂದೂ ಹಾಗೆಯೇ ನಮ್ಮ ಸಮಾಜವಾದಿ ಪಕ್ಷದ ಮುಲಾಯಂ ಅವರ ಯಡವಟ್ಟು ಮಾತು ಕಣ್ಣೀಗೆ ಬಿತ್ತು. ಸುದ್ದಿಯ ತಲೆಬರಹ ಓದುತ್ತಿದ್ದಂತೆ ಅರಿವಾಯಿತು, ಇದು ಯಡವಟ್ಟು ಅಲ್ಲ, ಮತಿಗೇಡಿ ಹೇಳಿಕೆಯೆಂದು. ಭಾರತದ ರಾಜಕಾರಣದ ಮುನ್ನುಡಿ ಬರೆಯುವ ಉತ್ತರ ಪ್ರದೇಶದಂತಹ ರಾಜ್ಯದ ಮಾಜಿ ಮುಖ್ಯಮಂತ್ರಿ, ದೇಶದ ಮಾಜಿ ರಕ್ಷಣಾ ಸಚಿವ, ಹಿರಿಯ(ವಯಸ್ಸಿನಲ್ಲಿ ಮಾತ್ರವೇ ಬಿಡಿ) ರಾಜಕಾರಣಿಯೊಬ್ಬರು ಈ ರೀತಿಯ ಬೇಜವಾಬ್ದಾರಿ ಮಾತನಾಡುವುದಲ್ಲದೇ ಅದನ್ನು ಸಮರ್ಥಿಸಿಕೊಳ್ಳುತ್ತಾರಲ್ಲಾ, ಪ್ರಜಾಪ್ರಭುತ್ವಕ್ಕೆ ಇದಕ್ಕಿಂತ ಹೆಚ್ಚಿನ ಅಪಮಾನ ಬೇಕೆ..??
                        ಮುಲಾಯಂ ಅವರ ಹೇಳಿಕೆ ನೋಡಿ "ಅತ್ಯಾಚಾರಿಗಳಿಗೇಕೆ ಗಲ್ಲು..?? ಹುಡುಗರು ತಪ್ಪು ಮಾಡೋದು ಸಹಜ". ತಲೆ ಸರಿ ಇದ್ದವರು ಯಾರಾದರೂ ಹೇಳುವ ಮಾತೇ ಇದು..?? ತಾವೇನು ಮಾತನಾಡುತ್ತಿದ್ದೇನೆ ಎಂಬ ಅರಿವಾದರೂ ಮುಲಾಯಂಗೆ ಇದ್ದಂತೆ ತೋರುವುದಿಲ್ಲ. ಸ್ವಾಮಿ, ನಿಮ್ಮ ಕಣ್ಣಿಗೆ ಅತ್ಯಾಚಾರವೆಂದರೆ ಬರೇ ತಪ್ಪು ಎಂದು ತೋರುವುದೇ..?? ಹೆಣ್ಣು ಜೀವವೊಂದನ್ನು ದೈಹಿಕವಾಗಿ ಮಾನಸಿಕವಾಗಿ ಹಿಂಸಿಸಿ ಆಕೆಯನ್ನು ಜೀವಚ್ಛವದಂತಾಗಿಸುವ ಅತ್ಯಾಚಾರವೆನ್ನುವ ಮಾನಹಾನಿ ಕೆಲಸ ನಿಮಗೆ ಕೇವಲ ತಪ್ಪು ಅನಿಸುತ್ತಿದೆಯೇ..?? ಅದು ಕುಕೃತ್ಯಗಳ ಸಾಲಿನಲ್ಲಿ ನಿಲ್ಲುವ ಅಪರಾಧವೇ ಹೊರತು ತಪ್ಪಿನಷ್ಟು ಕೆಳಮಟ್ಟದಲ್ಲಲ್ಲ. ಅತ್ಯಾಚರವೆನ್ನುವ ಪದ ಕೇಳಿದರೆ ಸಾಕು ಇನ್ನೂ ಐದನೇ ತರಗತಿಯಲ್ಲಿ ಓದುತ್ತಿರುವ ಮಗು ಕೂಡ ಬೆಚ್ಚು ಬೀಳುತ್ತದೆ, ಅಷ್ಟು ಭಯಾನಕವಾದ ಕ್ರೈಮ್ ಅದು. ನಿಮಗೆ ಅಷ್ಟೊಂದು ಅಜ್ಞಾನವೇ..??
                      ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸಬಾರದು. ಹುಡುಗರು ತಪ್ಪು ಮಾಡುವುದು ಸಹಜ ಎಂದು ಸಮರ್ಥಿಸಿಕೊಂಡಿದ್ದೀರಲ್ಲಾ ಮುಲಾಯಂ ಮಹಾಶಯರೇ, ತಪ್ಪು ಮಾಡುವುದು ಸಹಜವೇ ಒಪ್ಪಿಕೊಳ್ಳೋಣ. ಆದರೆ ಅತ್ಯಾಚಾರದಂತಹ ಹೀನಕೃತ್ಯವೆಸಗುವುದು ‘ಸಹಜ’ ಎನ್ನುವದರ ಅಡಿಯಲ್ಲಿ ಬರುವ ಕೆಲಸವೇ..?? ಹುಡುಗರ ಪರವಾಗಿ ಇಷ್ಟು ಅವಿವೇಕತನದಿಂದ ಮಾತನಾಡುವಾಗ ಹೆಣ್ಣು ಮಕ್ಕಳ ನೆನಪಾಗಲಿಲ್ಲವೇ ನಿಮಗೆ..?? ಬೇರೆ ಯಾರೂ ಬೇಡ ಸ್ವಾಮಿ. ನಿಮ್ಮ ಹೆತ್ತ ತಾಯಿ, ಕೈಹಿಡಿದ ಹೆಂಡತಿ, ಮಕ್ಕಳು, ಅಕ್ಕ-ತಂಗಿಯರು, ಸೊಸೆಯಂದಿಯರು - ಇವರೆಲ್ಲರೂ ಹೆಣ್ಣು ಜೀವಗಳೇ ಎಂಬ ಸಂಗತಿ ನಿಮಗೆ ಮರೆತು ಹೋಗಿತ್ತೇ..?? ನಿಮ್ಮ ಈ ಮಾತಿನಿಂದ ಅವರೆಲ್ಲರಿಗೂ ಎಷ್ಟು ಅಪಮಾನವಾಗಿರಬಹುದು ಎಂದು ಯೋಚಿಸುವಷ್ಟಾದರೂ ನಿಮ್ಮ ಮೆದುಳು ಸರಿಯಾಗಿ ಕೆಲಸ ಮಾಡುತ್ತದೆಯೇ..?? ಮತಿಭ್ರಮಣೆಯಾದಂತಿದೆ ನಿಮಗೆ. ಯಾವುದಕ್ಕೂ ನೀವು ಒಮ್ಮೆ ಮನಸಿಕ ತಜ್ಞರನ್ನು ಭೇಟಿ ಮಾಡುವುದೊಳಿತು.


                       ಜೊತೆಗೆ ಇನ್ನೊಂದು ಘನಂದಾರಿ ಹೇಳಿಕೆಯನ್ನು ನೀಡಿದ್ದೀರಿ. ಅತ್ಯಾಚಾರಿಗಳನ್ನು ಶಿಕ್ಷಿಸುವ ಸಂಬಂಧ ಈಗಿರುವ ಕಾನೂನಿಗೆ ತಿದ್ದು ಪಡಿ ತರಲಾಗುವುದು ಎನ್ನುತ್ತಾ ವಾರದ ಹಿಂದಷ್ಟೇ ಮುಂಬೈನಲ್ಲಿ ನಡೆದ ಎರಡು ಅತ್ಯಾಚಾರ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮೂವರು ಯುವಕರಿಗೆ ಮರಣದಂಡನೆ ವಿಧಿಸಿದ ನ್ಯಾಯಾಲಯದ ತೀರ್ಪನ್ನೇ ಖಂಡಿಸಿದ್ದೀರಿ. ಆ ಅಪರಾಧಿಗಳ ಪರವಾಗಿ ಮಾತನಾಡಿದ್ದೀರಲ್ಲಾ, ಅವರೇನು ನಿಮ್ಮ ಭಾವನೆಂಟರೇ..?? ಅವರು ಮಾಡಿದ್ದ ನಾಚಿಕೆಗೇಡಿನ ಕೆಲಸಕ್ಕೆ ಅವರಿಗೆ ಗಲ್ಲು ಶಿಕ್ಷೆ ವಿಧಿಸದೇ ಇನ್ನೇನು ಶಾಲು ಹೊದೆಸಿ ಸನ್ಮಾನಿಸಬೇಕಿತ್ತೇ..?? ಕಾನೂನಿಗೆ ತಿದ್ದುಪಡಿ ತರಲಾಗುವುದು ಎಂದಿದ್ದೀರಿ. ಹೌದು, ನಿಜವಾಗಲೂ ನಮ್ಮದೇಶದಲ್ಲಿ ಅತ್ಯಾಚಾರದಂಥ ಅಪರಾಧಗಳಿಗೆ ಸಂಬಂಧಿಸಿದ ಕಾನೂನಿಗೆ ತಿದ್ದು ಪಡಿ ಬೇಕಿದೆ. ಆದರೆ ಅದು ನೀವು ಯೋಚಿಸುವ ರೀತಿಯಲ್ಲಲ್ಲ. ಪರದೇಶದ ಕಾನೂನುಗಳಿಗೆ ಹೋಲಿಸಿದರೆ ನಮ್ಮ ದೇಶದ ಕಾನೂನು ಬಹಳವೇ ಸಡಿಲವಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯ ಮಿತಿ ಮೀರಿರುವುದರಿಂದ ಈಗಿನ ಕಾನೂನನ್ನೇ ಇನ್ನಷ್ಟು ಬಿಗಿಯಾಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆ ಹೊರತು ನಿಮ್ಮಂತೆ ಅತ್ಯಾಚಾರಿಗಳಿಗೇ ವರವಾಗುವಂತಲ್ಲ.
                  ಸ್ವಾಮಿ, ನೀವೆಲ್ಲಾ ನಮ್ಮ ದೇಶವನ್ನಾಳುವ ರಾಜಕಾರಣಿಗಳು ಎನ್ನುವುದನ್ನು ನೆನೆದರೆ ನಿಜಕ್ಕೂ ನಮ್ಮ ಬಗ್ಗೆ ನಮಗೇ ನಾಚಿಕೆಯೆನಿಸುತ್ತದೆ. ನಿಮ್ಮಂಥ ಜನಪ್ರತಿನಿಧಿಗಳಿಂದ ಉತ್ತಮವಾದದ್ದೇನನ್ನಾದರೂ ನಿರೀಕ್ಷಿಸಲಾದಿತೇ..?? ನಿಮ್ಮ ನಿಜವಾದ ಮುಖ ಈ ಪರಿಗೆ ಬಹಿರಂಗವಾದ ಮೇಲೂ ನಿಮಗೆಲ್ಲಾ ರಾಜ್ಯಾಧಿಕಾರದ ಹಕ್ಕನ್ನು ಕೊಟ್ಟರೆ ಬೇಲಿಯೇ ಎದ್ದು ಹೊಲ ಮೇಯಿದಂತಾಗುತ್ತದೆಯಷ್ಟೆ. ನಿಜಕ್ಕೂ ಮತದಾರ ಪ್ರಭುಗಳು ಯೋಚಿಸಬೇಕಾದ ಗಂಭೀರ ಸಂಗತಿ ಇದು.


No comments:

Post a Comment