Friday, 25 April 2014

ಇರುವುದೆಲ್ಲವ ಬಿಟ್ಟು (ಭಾಗ - ೨)
                            " ನಾನು ಇದು ಮೂರನೇ ಸಲ ಬೇರೆಯವರ ಬಾಯಿಂದ ಕೇಳ್ತಾ ಇರೋದು ಕಣೇ. ವಿಷಯ ಬಹಳ ಜನಕ್ಕೆ ಗೊತ್ತಾಗಿರಬೇಕು. ನೀನು ಯಾರೆಂದು ಕೂಡ ತಿಳಿಯದ ನನ್ನ ತರಗತಿಯ ಇಬ್ಬರು ಹುಡುಗಿಯರು ಇವತ್ತು ನಿನ್ನ ಬಗ್ಗೆ ಚರ್ಚಿಸುತ್ತಿದ್ದುದು ಕಿವಿಗೆ ಬಿತ್ತು. ಏನು ಮಾತನಾಡಿಕೊಳ್ಳುತ್ತಿದ್ದರೆನ್ನುವುದು ಸ್ವಷ್ಟವಾಗಲಿಲ್ಲ. ಆದರೆ ವಿಷಯ ಏನೆಂದು ಮಾತ್ರ ಖಚಿತವಾಯಿತು." ಮೆಸ್ಸಿನಲ್ಲಿ ಊಟ ಮಾಡುತ್ತಿದ್ದಾಗ ರೂಮ್ ಮೇಟ್ ಈ ಮಾತುಗಳನ್ನು ಹೇಳುತ್ತಿದ್ದಂತೆಯೇ ಗಂಟಲಿನಲ್ಲಿದ್ದ ಅನ್ನದ ತುತ್ತು ಒಳಗಿಳಿಯದೇ ಅಲ್ಲೇ ಸಿಕ್ಕಿಹಾಕಿಕೊಂಡಂತಾಯಿತು. ಅದನ್ನು ಹೇಗೋ ನೀರು ಕುಡಿಯುತ್ತ ನುಂಗಿದರೂ ಉಳಿದ ಅನ್ನವನ್ನು ಬಾಯಿಗೆ ಹಾಕಲು ಬಲಗೈಗೆ ಶಕ್ತಿ ಸಾಲದಾಯಿತು. ಹಾಗೆಯೇ ಕಲಸುತ್ತಾ ಕಲೆಯುತ್ತಾ ಕುಳಿತೆ. ಅವಳು ಕಾಲೇಜಿನ ಕುರಿತಾಗಿ ಇನ್ನೂ ಹತ್ತು ಹಲವು ವಿಷಯಗಳನ್ನು ಹೇಳುತ್ತಿದ್ದರೂ ಮೊದಲು ಕೇಳಿದ ಸುದ್ದಿ ನನ್ನ ಕಿವಿಗಳನ್ನು ಕೆಪ್ಪಗಾಗಿಸಿತ್ತು. ಅಷ್ಟೊಂದು ಜನರಿಗೆ ಹೇಗೆ ಗೊತ್ತಾಗಲು ಸಾಧ್ಯ ಎನ್ನುವ ಪ್ರಶ್ನೆಯೊಂದೇ ತಲೆಯನ್ನು ಕೊರೆಯತೊಡಗಿತು. ಹಾಗೇ ಅವಳ ಮಾತುಗಳಿಗೆ ಕಿವಿಯನ್ನು ಮುಚ್ಚಿಕೊಂಡು ಕುಳಿತಿರುವುದು ಅಸಾಧ್ಯವೆನಿಸಿದಾಗ, "ನೀನು ಊಟ ಮುಗಿಸಿ ಬಾ. ನಾನು ರೂಮಿಗೆ ಹೋಗಿರುತ್ತೇನೆ." ಎಂದು ಹೇಳಿ ಪ್ರತಿಕ್ರಿಯೆಗೂ ಕಾಯದೇ ಎದ್ದು ಕೈ ತೊಳೆದುಕೊಂಡು ರೂಮಿಗೆ ಬಂದೆ.
                             ಅದು ಹೇಗೆ ತಾನೇ ಅಷ್ಟೊಂದು ಜನರಿಗೆ ಗೊತ್ತಾಗಲಿಕ್ಕೆ ಸಾಧ್ಯ..?? ಅದು ಕೂಡ ಕಹಿ ಘಟನೆಗಳೆಲ್ಲಾ ಮುಗಿದ ಕತೆಗಳು, ಈಗ ಎಲ್ಲವೂ ಸರಿಯಾಗಿದೆಯೆಂದು ನಾನು ಅಂದುಕೊಂಡಿರುವಾಗ ಮತ್ತೆ ಇದ್ಯಾವ ಸಮಸ್ಯೆ ಹುಟ್ಟಿಕೊಂಡಿತು..?? ಯೋಚಿಸಿದಂತೆ ತಲೆ ಸಿಡಿಯುತ್ತಿರುವ ಅನುಭವವಾಯಿತು. ಹೃದಯ ಬಿಗಿ ಹಿಡಿದುಕೊಂಡಂತಾಗಿ ಭಾರವಾಯಿತು. ಕೂರುವುದು ಅಸಾಧ್ಯವೆನಿಸಿ ಹಾಗೆಯೇ ಹಾಸಿಗೆಗೆ ಒರಗಿಕೊಂಡೆ. ನಿಧಾನವಾಗಿ ಕಣ್ಣಂಚುಗಳಲ್ಲಿ ನೀರು ತುಂಬಿಕೊಳ್ಳತೊಡಗಿತು. ನಾನೆಷ್ಟು ಪ್ರಯತ್ನ ಮಾಡಿದರೂ ಸಫಲವಾಗದೇ ಕೆನ್ನೆಗಳ ಮೇಲಿನಿಂದ ಹನಿಗಳು ಕೆಳಗಿಳಿಯತೊಡಗಿದವು. ಅಂದರೆ ಇಡೀ ಕಾಲೇಜು ನನ್ನ ಬಗ್ಗೆ ಆಡಿಕೊಳ್ಳುವಂತಾಗಿದೆಯೇ..?? ಅಯ್ಯೋ ಕೃಷ್ಣಾ, ಇದೇನಾಗಿ ಹೋಯಿತು..?? ಹೀಗಾದರೆ ನಾನು ಕ್ಯಾಂಪಸ್ಸಿನಲ್ಲಿ ಹೇಗೆ ತಾನೇ ತಲೆ ಎತ್ತಿ ಓಡಾಡಲಿ..?? ಕೊನೆಗೂ ನನ್ನ ಬದುಕಿನಲ್ಲೊಂದು ಕಪ್ಪು ಚುಕ್ಕೆ ಮೂಡಿತಲ್ಲ. ಹೊಟ್ಟೆಯಲ್ಲಿದ್ದ ಅನ್ನವೂ ನನ್ನ ಬಗ್ಗೆ ಆಡಿಕೊಳ್ಳುತ್ತಿದೆಯೇನೋ ಎನ್ನುವಂತೆ ಒಡಲೊಳಗೆ ಸಂಕಟವಾಗತೊಡಗಿತು. ಅಳು ಇನ್ನೂ ಜೋರಾಗಿ ಒತ್ತರಿಸಿಕೊಂಡು ಬಂತು. ಬೇರೆಯವರಿಗೆ ಕೇಳಿಸಬಾರದೆಂದು ಮೌನವಾಗಿ ಬಿಕ್ಕಳಿಸುತ್ತ ಮಲಗಿದವಳಿಗೆ ನಿದ್ರಾದೇವಿಯ ವಶವಾಗಿದ್ದು ಅರಿವಿಗೆ ಬರಲಿಲ್ಲ.
                          " ಈ ಹುಡುಗನೇಕೆ ನನಗಿಷ್ಟು ಅತಿಯಾಗಿ ಇಷ್ಟವಾಗುತ್ತಿದ್ದಾನೆ..?? ಅವನೇನೂ ನನ್ನ ಮಾವನ ಮಗನಲ್ಲ. ಸುರ ಸುಂದರಾಂಗನೂ ಅಲ್ಲ. ಆದರೂ ದಿನದಿಂದ ದಿನಕ್ಕೆ ನನ್ನ ಹೃದಯಕ್ಕೆ ಹತ್ತಿರವಾಗುತ್ತಿದ್ದಾನಲ್ಲ." ಕಳೆದೆರಡು ದಿನಗಳಿಂದ ಮನಸ್ಸು ಅವನ ಧ್ಯಾನದಲ್ಲೇ ಮುಳುಗಿತ್ತು. ಹುಡುಗರು ಇಂಥವರು ಇರಬಹುದೆನ್ನುವ ನಂಬಿಕೆ ಇಲ್ಲದಿದ್ದವಳಿಗೆ ಅವನ ಮಾತು, ಯೋಚನೆ, ನಡತೆಗಳೆಲ್ಲವೂ ಹೊಸದಾಗಿದ್ದವು. ನನಗೆ ಬಹಳಷ್ಟು ಹುಡುಗರು ಸ್ನೇಹಿತರಿದ್ದರೂ ಈತ ಬಹಳವೇ ಭಿನ್ನನಾಗಿ ತೋರಿದ್ದ. ಅವನ ಜೊತೆಯ ಸ್ನೇಹ ಅದ್ಯಾವ ಕ್ಷಣದಲ್ಲಿ ಪ್ರೀತಿಯಾಗಿ ಮಾರ್ಪಟ್ಟಿತೋ ಆ ಕೃಷ್ಣನಿಗೂ ತಿಳಿದಿರಲಾರದು. ಅವನಿಗೆ ವಿಷಯ ಗೊತ್ತಾದಾಗ ಅದೆಷ್ಟು ಪ್ರಬುದ್ಧತೆಯಿಂದ ನನ್ನ ಬಳಿ ವರ್ತಿಸಿದ್ದ. ಎಲ್ಲವನ್ನೂ ಹೇಳಿಕೊಂಡ ನನಗೇ ಅವನೊಂದಿಗೆ ಮಾತನಾಡಲು ಏನೋ ಒಂದು ಬಗೆಯ ಮುಜುಗರವಾಗುತ್ತಿತ್ತು. ಆದರೆ ಅವನೇ ತಾನೇ ಫೀಲ್ ಫ್ರೀ ಎನ್ನುತ್ತಾ ತಲ್ಲಣಗೊಂಡಿದ್ದ ನನ್ನ ಮನಸ್ಸನ್ನು ಶಾಂತವಾಗಿಸಿದ್ದು..?? ಮನದ ಮಾತನ್ನು ಬಿಚ್ಚಿ ಹೇಳಿಕೊಂಡ ಮೇಲೆಯೇ ನಾವಿಬ್ಬರೂ ಬಹಳ ಹತ್ತಿರವಾಗಿದ್ದೆವು. ಮುಂದಿನ ಒಂದು ವರುಷ ಎಲ್ಲವೂ ಎಷ್ಟು ಸುಂದರವಾಗಿತ್ತು. ಎಂಥ ಸಂದರ್ಭದಲ್ಲೂ ಒಬ್ಬರನ್ನೊಬ್ಬರು ಬಿಡಲಾರೆವೆಂಬ ನಂಬಿಕೆ ಇಬ್ಬರಲ್ಲಿತ್ತು. ಪ್ರೀತಿಯಲ್ಲಿ ಇದಕ್ಕಿಂತ ಹೆಚ್ಚಾಗಿ ಇರಬೇಕಾದದ್ದೇನಿದೆ..??
                    ಆದರೆ ಆಮೇಲೆ ಅದೇನಾಗಿ ಹೋಯಿತು..?? ನನಗೆ ಹಾಗೇಕಾಯಿತೆನ್ನುವುದು ಈಗಲೂ ತಿಳಿದಿಲ್ಲ, ತಿಳಿಯುವಂತೆಯೂ ಇಲ್ಲ. ಸಡನ್ ಆಗಿ ಆತ ಮಾತು ನಿಲ್ಲಿಸಿಬಿಟ್ಟ. ಫೋನು, ಮೆಸೇಜುಗಳಿಗೂ ಉತ್ತರ ಬರದಾಯಿತು. ಒಮ್ಮೆಗೊಮ್ಮೆಗೇ ಆತ ಹೀಗೇಕೆ ವರ್ತಿಸುತ್ತಿದ್ದಾನೆಂದೇ ನನಗೆ ಅರ್ಥವಾಗಲಿಲ್ಲ. ನಾನು ಅದೆಷ್ಟು ಬಾರಿ ಸಂಪರ್ಕಿಸಲು ಪ್ರಯತ್ನಿಸಿದೆನೋ ಲೆಕ್ಕಕ್ಕಿಲ್ಲ. ಆದರೆ ಫಲಿತಾಂಶ ಮಾತ್ರ ಶೂನ್ಯವೇ ಆಯಿತು. ಆ ಸಮಯದಲ್ಲಿ ನನ್ನ ದಿಂಬು ಒದ್ದೆ ಆಗದ ದಿನಗಳೇ ಇರಲಿಲ್ಲ. ಇದೇ ಸಮಯದಲ್ಲಿ ಆತನ ಸ್ನೇಹಿತರು ಕಾಲೇಜಿನಲ್ಲಿ ನಾನು ಕಂಡಾಗಲೆಲ್ಲ ಅವನ ಹೆಸರು ಕೂಗಲಾರಂಭಿಸಿದರು. ದಿನದಿಂದ ದಿನಕ್ಕೆ ಇದು ವಿಪರೀತಕ್ಕಿಟ್ಟುಕೊಂಡಿತು. ಇದೆಲ್ಲ ಹುಡುಗಾಟಿಕೆಯ ಕುರಿತೂ ಅವನಿಗೆ ತಿಳಿದಿದ್ದರೂ ಆತ ಮೌನ ಮಾತ್ರ ಮುರಿಯಲಿಲ್ಲ. ಆಮೇಲೆ ಇದ್ದಕ್ಕಿದ್ದಂತೆ ಒಮ್ಮೆಗೆ ಎಲ್ಲವೂ ನಿಂತು ಹೋಯಿತು. ಕೊನೆಗೂ ಒಂದು ದಿನ ಆತ ಮಾತಿಗೆ ಸಿಕ್ಕಿದ. ಪ್ರೀತಿಯ ಸಂಬಂಧಕ್ಕೆ ಸ್ನೇಹದ ತೇಪೆ ಹಚ್ಚಿದ ಆತನ ಕುರಿತು ನನಗೆ ಬೇಸರವಾದರೂ ತೋರ್ಪಡಿಸದೇ ಹೃದಯದ ಒಳಗಿನ ಪ್ರೀತಿಯನ್ನು ನಿಧಾನವಾಗಿ ಕೊಲ್ಲಬೇಕಾಗಿ ಬಂತು. ಆದರೆ ಈಗ ಏನಾಗಿದೆ..?? ಅಷ್ಟು ಪ್ರಬುದ್ಧನೆಂದುಕೊಂಡಿದ್ದ ಆತನೇ ಇಂದು ನನ್ನ ಹೆಸರ ಮೇಲೆ ಕೆಸರು ಚೆಲ್ಲಿ ಹಾಕಿದನಲ್ಲಾ..??
                               ಥಟ್ಟನೆ ಎಚ್ಚರವಾಯಿತು. ಕಣ್ಣುಜ್ಜುತ್ತಾ ಕುಳಿತಾಗ ಥೂ ಕನಸಿನಲ್ಲೂ ಹಳೆಯ ನೆನಪುಗಳೇ ಬರಬೇಕೆ ಎಂದು ಕಿರಿಕಿರಿಯಾಯಿತು. ನಿದ್ದೆಯಿಂದ ಪೂರ್ತಿ ಎಚ್ಚರವಾಗಿ ರೂಮ್ ಮೇಟ್ ಮುಖ ನೋಡುತ್ತಿದ್ದಂತೆಯೇ ಅವಳಾಡಿದ ಮಾತುಗಳು ನೆನಪಾಗಿ ಮತ್ತೆ ಬೇಸರದ ಮೋಡ ಕವಿದರೂ ತೋರ್ಪಡಿಸದೇ ಮುಖ ತೊಳೆದುಕೊಳ್ಳುವಾಗ ಇದೆಲ್ಲವನ್ನೂ ಬದಿಗೆ ಹಾಕಿ ಮನಸ್ಸನ್ನು ರಿಲ್ಯಾಕ್ಸ್ ಮಾಡಿಕೊಳ್ಳಬೇಕು ಎಂದು ನಿರ್ಧರಿಸಿ ಸ್ವಲ್ಪ ನಾರ್ಮಲ್ ಆಗಿರಲು ಪ್ರಯತ್ನಿಸಿದೆ. ಮುಂದಿನ ಮೂರು-ನಾಲ್ಕು ದಿನಗಳು ಮನಸ್ಸು ಶಾಂತವಾಗಿಯೇ ಇತ್ತು. ಅವತ್ತೊಂದು ದಿನ ರಾತ್ರಿ ನನ್ನ ಸೀನಿಯರ್ ಗೆಳೆಯನೊಬ್ಬ ಮೆಸೇಜು ಮಾಡಿದಾಗ ಹೇಳಿದ ಸತ್ಯ ನನ್ನ ತಲೆಯನ್ನು ತಿರುಗಿಸಿತು.
                         "ಹೇಯ್, ನಿನ್ನ ಪ್ರೇಮ ಪುರಾಣ ನಮ್ಮ ಸ್ನೇಹಿತರಿಗೆಲ್ಲಾ ಗೊತ್ತಾಗಿದೆ. ಮೊನ್ನೆ ಯುನಿವರ್ಸಿಟಿ ಫೆಸ್ಟ್ ಗೆ ಹೋದಾಗ ಈ ವಿಷಯ ಗೊತ್ತಾಯಿತು."
                        "ನಾನಂತೂ ನನ್ನ ೨-೩ ಸ್ನೇಹಿತೆಯರು ಬಿಟ್ಟು ಮತ್ಯಾರಿಗೂ ಹೇಳಿಲ್ಲ. ಅದು ಹೇಗೆ ನಿಮ್ಮ ಬ್ಯಾಚ್ ನವರಿಗೆ ಗೊತ್ತಾಗಲು ಸಾಧ್ಯ..??"
                          "ಏನೋ, ನನಗೆ ಗೊತ್ತಿಲ್ಲ. ನೋಡು, ನೀನು ಮಾಡಿದ ಒಂದು ತಪ್ಪಿನಿಂದ ಇಡೀ ಕಾಲೇಜಿನಲ್ಲಿ ನಿನ್ನ ಬಗ್ಗೆ ಬ್ಯಾಡ್ ಇಂಪ್ರೆಷನ್ ಬರೋ ಹಾಗಾಯ್ತು"
                          "ತಪ್ಪು..?? ನಾನೇನು ತಪ್ಪು ಮಾಡಿದ್ದೇನೆ..?? ಅವನನ್ನು ಪ್ರೀತಿಸಿದ್ದು ತಪ್ಪಾ..??"
                          " ಹೌದು ಮತ್ತೆ. ಅವನಿಗೆ ಇಷ್ಟವಿಲ್ಲದಿದ್ದರೂ ಅವನ ಹಿಂದೆ ಬಿದ್ದದ್ದು ತಪ್ಪು."
                          " ಹಲೋ, ನಾನ್ಯಾವತ್ತೂ ಅವನ ಹಿಂದೆ ಬಿದ್ದಿಲ್ಲ. ಅವನಾಗಿಯೇ ಮಾತು ಬಿಟ್ಟರೂ ನನಗಾದ ಬೇಸರವನ್ನು ಯಾರೆದುರೂ ತೋರ್ಪಡಿಸದೇ ಒಳಗೊಳಗೇ ನೋವು ಅನುಭವಿಸಿದವಳು ನಾನು. ಯಾವತ್ತೂ ಅವನ ಕಾಲಿಗೆ ಬಿದ್ದು ಪ್ರೀತಿಸೆಂದು ಬೇಡಿಕೊಂಡಿಲ್ಲ." ನನಗೆ ತುಸು ಸಿಟ್ಟು ಬಂತು.
                         " ಏನೋ ಬಿಡು. ಮುಗಿದ ಕತೆ ಅದು. ಈಗ್ಯಾಕೆ ಸುಮ್ಮನೆ ಹಳೆಯದರ ಕುರಿತು ಮಾತು..??"
                          ನನಗೆ ನಿಜಕ್ಕೂ ಬೇಸರವಾಗಿತ್ತು. ಸ್ನೇಹಿತನೆನಿಸಿಕೊಂಡವನೇ ಹೀಗೆ ಹೇಳಿದರೆ..?? ಇವನೊಬ್ಬನೇ ಅಲ್ಲ, ಇನ್ನು ೨-೩ ಸ್ನೇಹಿತರೂ ತಪ್ಪೆಲ್ಲ ನನ್ನದೇ ಎನ್ನುವಂತೆ ಮಾತನಾಡಿದ್ದರು. ಛೇ, ಇವರನ್ನೆಲ್ಲ ಸ್ನೇಹಿತರು ಎಂದು ಭಾವಿಸಿದ್ದು ನನ್ನದೇ ತಪ್ಪು. ಇವರ ಮಾತಿಗೆಲ್ಲ ತಲೆ ಕೆಡಿಸಿಕೊಂಡರೆ ಆಯಿತು ಕತೆ ಎಂದುಕೊಂಡು ಇನ್ನೊಂದು ವಾರದಲ್ಲಿ ಬರಲಿದ್ದ ಇಂಟರ್ನಲ್ಸ್ ಗೆ ಓದೋಣವೆಂದುಕೊಂಡು ಪುಸ್ತಕವನ್ನು ತೆರೆದೆ. ನೆಟ್ಟಗೆ ಎರಡು ಪುಟ ಓದಿರಲಿಲ್ಲ. ಸ್ನೇಹಿತ ಹೇಳಿದ್ದ ಮಾತು ನನ್ನ ಏಕಾಗ್ರತೆಯನ್ನು ಹಾಳು ಮಾಡಿತು. " ನೋಡು, ನೀನು ಮಾಡಿದ ಒಂದು ತಪ್ಪಿನಿಂದ..." ನಾನೇನು ತಪ್ಪು ಮಾಡಿದೆ..?? ಹೋಗಲಿ, ಅಲ್ಲಿ ತಪ್ಪು ಎನ್ನುವಂಥದ್ದು ಏನಾಗಿದೆಯೆಂದು ಇವರೆಲ್ಲರೂ ಹೀಗೆ ಹೇಳುತ್ತಿರುವುದು..?? ಮೊದಲು ನನ್ನ ಪ್ರೀತಿಯ ಬಗ್ಗೆ ತಿಳಿದಾಗ ನನಗೆ ಸಪೋರ್ಟ್ ಮಾಡಿದವರು ಇವರೇ ಅಲ್ಲವೇ..?? ಈಗ ಏಕೆ ಹೀಗೆ ವಿರೋಧ ಪಕ್ಷದಲ್ಲಿ ನಿಂತಿದ್ದಾರೆ..?? ಯೋಚಿಸಿದಷ್ಟೂ ಮನಸ್ಸು ಬಾಡತೊಡಗಿತು. ಪುಸ್ತಕ ಯಾವಾಗಲೋ ಮುಚ್ಚಿಹೋಗಿತ್ತು. ನಿಮಿಷಗಳು ಸರಿದಂತೆ ಕಣ್ಣುಗಳು ತುಂಬಿದವು. ಮತ್ತೆ ಅಳು ಬಂತು. ಹೊಟ್ಟೆಯ ಹಸಿವನ್ನೂ ಮರೆಸುವಂಥ ಅಳು ಕರುಳಿನಿಂದ ಒದ್ದುಕೊಂಡು ಬರುತ್ತಿತ್ತು. ಎರಡು ತಾಸುಗಳ ಕಾಲ ಪೂರ್ತಿಯಾಗಿ ಅತ್ತರೂ ಮನಸ್ಸು ತಹಬದಿಗೆ ಬರಲಿಲ್ಲ. ಆದರೆ ಕಣ್ಣು ನೋಯುತ್ತಿತ್ತು, ತಲೆ ಸಿಡಿಯುತ್ತಿತ್ತು. ಈಗ ಸುಮ್ಮನೆ ಮಲಗುವುದು ಲೇಸೆಂದು ಹಾಸಿಗೆಗೆ ಮೈ ಚಾಚಿದರೆ ನಿದ್ರೆಯೂ ಬಳಿಗೆ ಸುಳಿಯಲಿಲ್ಲ. ಕಣ್ಣ ಮುಂದೆ ಕಪ್ಪು ಚುಕ್ಕೆಯೊಂದು ಬೃಹದಾಕಾರ ತಳೆದು ನಿಂತಂತೆ ತೋರುತ್ತಿತ್ತು. ಸ್ನೇಹಿತರೇ ನನ್ನನ್ನು ಅರಿತುಕೊಳ್ಳುವುದಿಲ್ಲವೆಂದಾದರೆ ನನ್ನ ನೋವು, ಅವಮಾನ, ಹತಾಶೆಗಳ ಕುರಿತು ಯಾರ ಬಳಿ ಹೇಳಿಕೊಳ್ಳಲಿ..?? (ಮುಂದುವರೆಯುವುದು)


No comments:

Post a Comment