Tuesday, 29 April 2014

ಇರುವುದೆಲ್ಲವ ಬಿಟ್ಟು (ಭಾಗ - ೩)

                                 

                                  ಒಮ್ಮೆಲೇ ಅಪ್ಪನ ನೆನಪಾಯಿತು. ಅವರ ಬಳಿ ಸಣ್ಣ ಪುಟ್ಟ ಸಂಗತಿಗಳಿಂದ ಹಿಡಿದು ಎಲ್ಲವನ್ನೂ ಬಿಡದೇ ಹೇಳುತ್ತಿದ್ದ ನಾನು ನನ್ನ ಪ್ರೀತಿಯ ಕುರಿತಾಗಿ ಮಾತ್ರ ಏನೂ ಹೇಳಿರಲಿಲ್ಲ. ಅದೇಕೆ ಹಾಗೆ ಮುಚ್ಚಿಟ್ಟೆನೋ ಕಾರಣ ಗೊತ್ತಿಲ್ಲ. ಆದರೆ ಅವತ್ತು ಮಾತ್ರ ನಾಳೆಯೇ ಅಪ್ಪನೊಂದಿಗೆ ಎಲ್ಲವನ್ನೂ ಹೇಳಿಯೇ ಬಿಡಬೇಕೆಂಬ ಆಸೆ ಬಲವಾಯಿತು. ನಾಳೆ ಬೆಳಿಗ್ಗೆ ಮೊದಲು ಈ ಕೆಲಸ ಮಾಡಬೇಕು. ಅಪ್ಪನಿಗೆ ಫೋನ್ ಮಾಡಿ ಒಮ್ಮೆ ಇಲ್ಲಿಗೆ ಬನ್ನಿ ಎಂದರೆ ಬಂದೇ ಬರುತ್ತಾರೆ ಎಂದುಕೊಂಡಾಗ ಏನೋ ಒಂದು ಬಗೆಯ ಸಮಾಧಾನವಾಗಿ ನಿದ್ರೆ ಆವರಿಸಿತು. ಮರುದಿನ ಬೆಳಿಗ್ಗೆ ಅಪ್ಪನೊಂದಿಗೆ ಮಾತನಾಡಲು ಮನೆಯ ನಂಬರ್ ಹುಡುಕುತ್ತಿದ್ದಂತೆಯೇ ಮೊನ್ನೆ ಮೊನ್ನೆಯಷ್ಟೆ ಅಪ್ಪ ಬ್ಯಾಂಕಿನಲ್ಲಿ ಉಂಟಾಗಿರುವ ತಾಪತ್ರಯಗಳ ಕುರಿತು ಹೇಳಿದ್ದು ನೆನಪಾಗಿ ಅವರೇ ಒಂದು ಸಮಸ್ಯೆಯಲ್ಲಿ ಸಿಲುಕಿರುವಾಗ ನನ್ನ ಕಷ್ಟಗಳ ಕುರಿತು ಹೇಳಿ ಅವರ ತಲೆ ಬಿಸಿಯನ್ನು ಇನ್ನೂ ಜಾಸ್ತಿಯಾಗಿಸುವುದು ಸರಿಯಲ್ಲವೆಂದಿನಿಸಿತು. ನಂಬರನ್ನು ಸರ್ಚ್ ಮಾಡಿದರೂ ಬೆರಳುಗಳು ಡಯಲ್ ಕೀಯನ್ನು ಪ್ರೆಸ್ ಮಾಡಲೇ ಇಲ್ಲ. ಮತ್ತೊಮ್ಮೆ ಈಗೇನು ಮಾಡುವುದು ಎಂಬ ಪ್ರಶ್ನೆ ಎದುರು ಸುಳಿದಾಡಿತು. ಏಳು ಸಲ ಢಣ್ ಎಂದು ಬಾರಿಸಿದ ಗಡಿಯಾರ ನನ್ನನ್ನು ಕಾಲೇಜು ಇದೆಯೆಂದು ಎಚ್ಚರಿಸಿತು. ಅಲ್ಲದೇ ಅವತ್ತು ಲ್ಯಾಬ್ ಬೇರೆ ಇತ್ತು. ಹೋಗದೇ ಉಳಿದರೆ ಸುಮ್ಮನೆ ತೊಂದರೆಯಾಗುವುದೆಂದು ಕಾಲೇಜಿಗೆ ಹೋದೆ.
                        ಲ್ಯಾಬ್ ನಲ್ಲಿ ಹೋಗಿ ಕೂರುತ್ತಿದ್ದಂತೆಯೇ ಮತ್ತೆ ಕಪ್ಪು ಚುಕ್ಕೆ ಇನ್ನಷ್ಟು ಢಾಳಾಗಿ ಕಾಣತೊಡಗಿತು. ಕಂಪ್ಯೂಟರ್ ಮುಂದೆ ನಾನು ಕೂತಿದ್ದಷ್ಟೆ. ಮನಸ್ಸು ಮಾತ್ರ ಮಂಕಾಗಿ ಹೋಗಿತ್ತು. ಎದುರಿಗಿನ ಬಿಳಿಯ ಸ್ಕ್ರೀನ್ ಸಹ ಕಪ್ಪಾಗಿ ತೋರಲು ಪ್ರಾರಂಭವಾಯಿತು. ನನಗೇನಾಗುತ್ತಿದೆಯೆನ್ನುವುದು ನನ್ನ ಅರಿವಿಗೆ ನಿಲುಕದಾಯಿತು. ಅವತ್ತು ಅಲ್ಲಿ ಮೂರು ತಾಸು ಹೇಗೆ ಕುಳಿತೆನೋ, ಏನು ಬರೆದೆನೋ ಆ ಕೃಷ್ಣನಿಗೇ ಗೊತ್ತು. ಲ್ಯಾಬ್ ಮುಗಿದ ನಂತರ ಸೀದ ಅಲ್ಲಿಂದ ಹೊರಟು ಹಾಸ್ಟೆಲ್ ಗೆ ಮರಳುವಾಗ ಒಂದಿಬ್ಬರು ಸ್ನೇಹಿತೆಯರು ಕಂಡು ಹಾಯ್ ಎಂದರು. ಇದೀಗ ಹೊಸದೊಂದು ಸಂದೇಹದ ಭೂತ ನನ್ನ ತಲೆಯನ್ನು ಹೊಕ್ಕಿತು. ಅವರು ಮುಗುಳ್ನಕ್ಕ ನಂತರ ನನ್ನ ಹಿಂದಿನಿಂದ ಏನು ಮಾತನಾಡಿಕೊಂಡರೋ. ಅವರಿಗೂ ವಿಷಯ ಗೊತ್ತಾಗಿರಬಹುದಾ..?? ನನ್ನ ಸುತ್ತ ಓಡಾಡುತ್ತಿರುವವರೆಲ್ಲರೂ ನನ್ನ ಬಗ್ಗೆಯೇ ಆಡಿಕೊಳ್ಳುತ್ತಿದ್ದಾರೆನೋ ಎಂಬ ಶಂಕೆ ನನಗೇ ಹುಚ್ಚು ಹಿಡಿಸತೊಡಗಿತು. ರೂಮಿಗೆ ಬಂದವಳೇ ಮತ್ತೆ ಅಳಲು ಪ್ರಾರಂಭಿಸಿದೆ. ಇದೇ ಸ್ಥಿತಿ ಮುಂದಿನ ಹತ್ತು ದಿನಗಳ ತನಕ ಮುಂದುವರೆಯಿತು.
                          ಒಂದೆಡೆ ಓದಿನಲ್ಲಿ ಆಸಕ್ತಿ ಕಡಿಮೆಯಾಗುತ್ತಿರುವುದು, ಇನ್ನೊಂದೆಡೆ ಪ್ರೀತಿಯಿಂದ ಅನುಭವಿಸಬೇಕಾಗಿ ಬಂದಿರುವ ನೋವು, ಅವಮಾನ, ಮತ್ತೊಂದೆಡೆ ಇವುಗಳನ್ನೆಲ್ಲಾ ಯಾರೊಂದಿಗೂ ಹಂಚಿಕೊಳ್ಳಲಾಗದ ಅಸಹಾಯಕತೆ - ಎಲ್ಲವೂ ಜೊತೆಯಾಗಿ ಸೇರಿ ನನ್ನ ಮನಸ್ಸನ್ನು ಕದಡಿ ಮನಶ್ಶಾಂತಿಯನ್ನು ದೂರ ಓಡಿಸಿದ್ದವು. ಒಂದು ಕ್ಷಣ ಕೂಡ ಇಲ್ಲಿರುವುದು ಅಸಹನೀಯವೆನಿಸತೊಡಗಿತು. ಮತ್ತೆಲ್ಲಿಗೆ ಹೋಗುವುದು...?? ಅದೂ ಕಾಲೇಜನ್ನು ಬಿಟ್ಟು. ಇಲ್ಲಿಯೇ ಇದ್ದರೆ ಮಾತ್ರ ಒಂದೋ ಹುಚ್ಚು ಹಿಡಿಯುತ್ತದೆ, ಇಲ್ಲವೇ ಸಾವು ಸೆಳೆಯುತ್ತದೆ ಎಂಬ ಹೆದರಿಕೆ ಜಾಸ್ತಿಯಾಗತೊಡಗಿತು. ಹಾಗಂತ ಓಡಿ ಹೋಗುವುದೆಲ್ಲಿಗೆ..?? ಊರಿಗೆ..?? ಅದಂತೂ ಅಸಾಧ್ಯದ ಮಾತಾಗಿತ್ತು. ಕೇವಲ ಮನೆಯವರಷ್ಟೇ ಅಲ್ಲ, ನಾನೆಂದರೆ ಅತಿ ಪ್ರೀತಿ, ಮಮತೆ, ಹೆಮ್ಮೆಯಿಂದ ಕಾಣುವ ಊರ ಜನರೆಲ್ಲರ ಮುಂದೆ ತಲೆ ಎತ್ತಲಾಗುವುದುಂಟೆ..?? ಹಾಗಂತ ಇಲ್ಲಿ ಇರುವುದಂತೂ ಜೀವಂತ ಶವಕ್ಕೆ ಸಮಾನ.
                        ಪ್ರತಿ ದಿನ ಪ್ರತಿ ಕ್ಷಣವೂ ಇದೇ ಚಿಂತೆ ನನ್ನನ್ನು ಬಾಧಿಸತೊಡಗಿತು. ದಿನೇ ದಿನೇ ಎಲ್ಲಿಗಾದರೂ ಓಡಿ ಹೋಗುವ ಯೋಚನೆ ಬಲವಾಗುತ್ತ ಸಾಗಿತು. ಅದೊಂದು ದಿನ ರಾತ್ರಿ ನನ್ನಲ್ಲೊಳಗೆ ಅದ್ಯಾವ ಭೂತ ಹೊಕ್ಕಿತ್ತೊ ಏನೋ. ನನ್ನ ರೂಮ್ ಮೇಟ್ ಮಲಗಿ ನಿದ್ರಿಸಿದ ಕೂಡಲೇ ನನ್ನ ಬಟ್ಟೆ-ಬರೆಗಳನ್ನು, ಅತಿ ಅವಶ್ಯವೆನಿಸಿದ ವಸ್ತುಗಳನ್ನೆಲ್ಲಾ ದೊಡ್ಡದೊಂದು ಬ್ಯಾಗಿಗೆ ತುಂಬತೊಡಗಿದೆ. ಕಪಾಟಿನಲ್ಲಿ ಬಟ್ಟೆ ರಾಶಿಗಳ ಮಧ್ಯೆ ಬೆಚ್ಚಗೆ ಕುಳಿತಿದ್ದ ಅಪ್ಪ-ಅಮ್ಮನ ಫೋಟೋ ಕಣ್ಣಿಗೆ ಕಂಡಾಗ ಮನಸ್ಸು ಒಮ್ಮೆ ತನ್ನ ಉಸಿರನ್ನೇ ಮರೆತಂತಾಯಿತು. ತಕ್ಷಣವೇ ಆ ಫೋಟೋವನ್ನು ಬದಿಗಿಟ್ಟು ಬೇಗ ಬೇಗನೆ ಪ್ಯಾಕಿಂಗ್ ಕೆಲಸವನ್ನು ಮುಂದುವರೆಸಿದೆ. ಎಲ್ಲ ಮುಗಿಸಿ ಕೂತಾಗ ಗಡಿಯಾರ ೪.೩೦ ಎಂದು ಸಮಯವನ್ನು ತೋರಿಸಿತು. "ದಯವಿಟ್ಟು ನನ್ನೆಲ್ಲ ವಸ್ತುಗಳನ್ನು ಮನೆಗೆ ತಲುಪಿಸುವ ವ್ಯವಸ್ಥೆ ಮಾಡು. ನಾನೆಂದೂ ತಿರುಗಿ ಮತ್ತಿಲ್ಲಿಗೆ ಬರಲಾರೆ." ಎಂದು ಚಿಕ್ಕ ಹಾಳೆಯಲ್ಲಿ ಬರೆದು ರೂಮ್ ಮೇಟ್ ಟೇಬಲ್ ಮೇಲಿಟ್ಟೆ. ಆಗ ಏಕೋ ಅಂದಿನ ನನ್ನ ಸ್ಥಿತಿಗೆ ಪರೋಕ್ಷವಾಗಿ ಕಾರಣನಾದ ಹುಡುಗನಿಗೊಂದು ಪತ್ರ ಬರೆಯಬೇಕೆನ್ನಿಸಿತು. ಅದನ್ನು ಹರಿದು ಹಾಕಬೇಕೆಂದುಕೊಂಡಿದ್ದರೂ ಮನಸ್ಸಾಗದೇ ಹಾಗೆ ಎತ್ತಿ ಡೈರಿಯಲ್ಲಿರಿಸಿದೆ. ಇಷ್ಟೆಲ್ಲವನ್ನೂ ಮಾಡಿ ಮುಗಿಸಿದಾಗ ಬೆಳಗಿನ ಜಾವ ಐದೂ ಮುಕ್ಕಾಲು. ರೂಮಿನಲ್ಲಿದ್ದ ಉಡುಪಿ ಕೃಷ್ಣನ ಮೂರ್ತಿಗೆ ಕೊನೆಯ ಬಾರಿಗೆಂಬಂತೆ ನಮಸ್ಕರಿಸಿ ಲಗೇಜನ್ನೆತ್ತಿಕೊಂಡು ಹಾಸ್ಟೆಲಿನಿಂದ ಹೊರಗೆ ಬಂದೆ. ಬಸ್ ಸ್ಟಾಪ್ ಹತ್ತಿರವಾದಾಗ ಮುಂದೆಲ್ಲಿಗೆ ಹೋಗುವುದು ಎನ್ನುವುದೇ ಪ್ರಶ್ನಾತ್ಮಕ ಚಿಹ್ನೆಯಾಗಿ ಎದುರಿಗೆ ನಿಂತಿತು. ಹಣಕ್ಕೇನೂ ಕೊರತೆಯಿರಲಿಲ್ಲವಾದ್ದರಿಂದ ಎಲ್ಲಾದರೂ ದೂರದ ಊರಿಗೆ ಹೋಗುವುದೇ ಲೇಸೆನಿಸಿ ರೈಲ್ವೆ ಸ್ಟೇಷನ್ನಿಗೆ ಹೋಗುವ ಬಸ್ಸು ಹತ್ತಿ ಕುಳಿತೆ.
                          ಬಸ್ಸು ಮುಂದೆ ಸಾಗಿದಷ್ಟೂ ನನ್ನ ಮನಸ್ಸು ಹಿಂದೆ ಹಿಂದೆ ಓಡುತ್ತಿತ್ತು. ಎಸ್ಸೆಸ್ಸೆಲ್ಸಿ ಫಲಿತಾಂಶ ಬಂದ ಮಾರನೇ ದಿನ ಅಪ್ಪನಿಗೆ ಸಿಕ್ಕಿದ ನಮ್ಮ ಸರ್ ಒಬ್ಬರು ಹೀಗೆ ಹೇಳಿದರೆಂದು ಅಪ್ಪ ಖುಷಿಯಿಂದ ಅಮ್ಮನ ಬಳಿ ಹೇಳಿದ್ದ ಮಾತು ನೆನಪಾಯಿತು. "ನಿಮ್ಮ ಮಗಳು ಸಾಮಾನ್ಯ ಹುಡುಗಿಯಲ್ಲ. ಪ್ರತಿಭೆ, ಪಾಂಡಿತ್ಯ, ವಯಸ್ಸಿಗೆ ಮೀರಿದ ಪ್ರಭುದ್ಧತೆ - ಎಲ್ಲವೂ ದೈವದತ್ತವಾಗಿ ಅವಳಲ್ಲಿವೆ. ಇಂಥ ಮಗಳನ್ನು ಹೆತ್ತ ನೀವು ಬಹಳವೇ ಪುಣ್ಯವಂತರು." ಊರಿನಲ್ಲಿ ಎಲ್ಲರೂ ಹೇಳುತ್ತಿರಲಿಲ್ಲವೇ..?? "ನೀನು ನಿಜಕ್ಕೂ ಜಾಣೆ ಮಗಳೇ. ನಮ್ಮ ಊರಿನ ಹೆಸರು ಇಡೀ ದೇಶಕ್ಕೆ ತಿಳಿಯುವಂತೆ ಮಾಡುತ್ತೀ." ಆದರೆ ಈಗ ನಾನೇನು ಮಾಡಹೊರಟಿದ್ದೇನೆ..?? ಎಲ್ಲಿ ಹೋದವು ನನ್ನ ಪ್ರತಿಭೆ, ಪ್ರಭುದ್ಧತೆಗಳೆಲ್ಲ...?? "ಯಾರ್‍ ರೀ, ಸ್ಟೇಷನ್..??" ಎಂದು ಕಂಡಕ್ಟರ್ ಕೂಗಿದಾಗ ಸ್ಮೃತಿಯ ಲೋಕದಿಂದ ಎಚ್ಚೆತ್ತು ಲಗುಬಗೆಯಿಂದ ಬಸ್ಸಿನಿಂದಿಳಿದೆ. ಸ್ಟೇಷನ್ ಒಳಗಡೆ ಬಂದಾಗ ಮುಂದೆ ಹೋಗುವುದೆಲ್ಲಿಗೆ ಎಂಬ ಪ್ರಶ್ನೆ ಪುನಃ ಎದುರು ನಿಂತಿತು. ವಿಚಾರಣಾ ವಿಭಾಗದಲ್ಲಿ ಕೇಳಿ ನೋಡಿದಾಗ ಇನ್ನು ಹತ್ತು-ಹದಿನೈದು ನಿಮಿಷಗಳಲ್ಲಿ ಪುಣೆಗೆ ಹೋಗುವ ಗರೀಬ್-ನವಾಜ್ ಎಕ್ಸ್ ಪ್ರೆಸ್ ಹೊರಡಲಿದೆಯೆಂದು ತಿಳಿಯುತ್ತಲೇ ಪುಣೆಯ ಟಿಕೇಟನ್ನು ಖರೀದಿಸಿ ಬೆಂಚೊಂದರ ಮೇಲೆ ಕುಳಿತೆ. ಆಗ ತಾನೇ ಬೆಳಗಾಗುತ್ತಿದ್ದ ಹೊತ್ತಾದರೂ ಪ್ರಯಾಣಿಕರಿಂದ ಸ್ಟೇಷನ್ ಗಿಜಿಗುಡುತ್ತಿತ್ತು. ಮಕ್ಕಳು, ವಯಸ್ಕರು, ವೃದ್ಧರು - ಎಲ್ಲರೂ ಎತ್ತಲೋ ಹೊರಟವರು. ಇದೆಲ್ಲವನ್ನೂ ನೋಡುತ್ತಿದ್ದಂತೆ ಅಡಿಗರನ್ನ ನೆನೆಸಿಕೊಂಡ ಮನಸ್ಸು ‘ಇರುವುದೆಲ್ಲವ ಬಿಟ್ಟು’ ಎಂದು ಹಾಡತೊಡಗಿತು. (ಮುಂದುವರೆಯುವುದು)


3 comments: