Wednesday, 23 April 2014

ಇರುವುದೆಲ್ಲವ ಬಿಟ್ಟು (ಭಾಗ -೧)

                  
              "ಹುಡುಗಾ, ಇದು ನನ್ನ ಜೀವನದಲ್ಲಿ ನಿನ್ನ ಪಾತ್ರದ ಕಟ್ಟ ಕಡೆಯ ಅಂಕವೆಂದುಕೊ. ಈ ಒಂದು ಪತ್ರ ಬರೆದು ಹರಿದು ಹಾಕಿದ ಮೇಲೆ ಪುನಃ ನಿನ್ನ ಕುರಿತು ಯೋಚನೆಯನ್ನೂ ಸಹ ನಾನು ಮಾಡಲಾರೆ. ನೀನು ನನ್ನ ಪಾಲಿಗೆ ಸತ್ತು ಹೋದೆಯೆಂದುಕೊಂಡರೆ ತಪ್ಪಾಗುತ್ತದೆ. ಯಾಕೆಂದರೆ ಸತ್ತವರ ಕುರಿತಾಗಿನ ನೆನಪುಗಳು ಕಾಡುತ್ತವೆ. ನನಗೆ ನಿನ್ನ ನೆನಪುಗಳೂ ಸಹ ಬೇಡವಾಗಿವೆ. ನನ್ನ ಜೀವನದಲ್ಲಿ ನೀನು ಪ್ರವೇಶಿಸಲೇ ಇಲ್ಲ ಎಂದುಕೊಳ್ಳುತ್ತಾ ಭೂತವನ್ನೇ ಬದಲಾಯಿಸಿ ಭವಿಷ್ಯದ ಕಡೆ ಹೆಜ್ಜೆ ಹಾಕಬೇಕೆಂದುಕೊಂಡಿದ್ದೇನೆ.
               ಈ ಪತ್ರ ಬರೆಯಲು ಕಾರಣವಿದೆ. ನಿನ್ನಲ್ಲಿ ನಾನು ಕೇಳಬೇಕಾದ ಹಲವು ಪ್ರಶ್ನೆಗಳು ಹಾಗೇ ಬಾಕಿ ಉಳಿದಿವೆ. ನಾನು ನಿನ್ನನ್ನು ಪ್ರೀತಿಸಿದ್ದೆ ತಾನೇ..?? ನಿನಗೆ ಗೊತ್ತಿಲ್ಲವೆಂದರೆ ಮತ್ತೊಮ್ಮೆ ಕೊನೆಯದಾಗಿ ಹೇಳುತ್ತೇನೆ. ನಾನು ನಿನ್ನನ್ನು ಮನಸಾರೆ ಪ್ರೀತಿಸಿದ್ದೆ. ನಿನ್ನೊಂದಿಗೆ ನನ್ನ ಬದುಕು ಸಾಗಲೆಂದು ಬಯಸಿದ್ದೆ. ಹಾಗಂತ ನಿನ್ನ ಬಳಿ ನನ್ನ ಪ್ರೀತಿಯನ್ನು ನಾನು ಹೇಳಿಕೊಂಡಿದ್ದು ಮಾತ್ರವೇ ಹೊರತು ನನ್ನನ್ನು ನೀನು ಪ್ರೀತಿಸಲೇಬೇಕೆಂದು ನಿನ್ನ ಬೆನ್ನು ಬಿದ್ದಿದ್ದೆನಾ..?? ನನ್ನ ಈ ಏಕ ಮುಖ ಪ್ರೀತಿ ನಿನಗೇನಾದರೂ ತೊಂದರೆಯನ್ನುಂಟು ಮಾಡಿತ್ತೇ..?? ನೀನು ನನಗೆಷ್ಟು ನೋವು, ದುಃಖ ನೀಡಿದರೂ ಅದನ್ನೆಲ್ಲ ಬದಿಗೊತ್ತಿ ನಿನಗಾಗಿ ಕಾದು ಕೂತಿದ್ದೆನಲ್ಲವೇ..?? ನೀನೇ ತಾನೇ ಹೇಳಿದ್ದು, "ಮೊದಲು ಓದು ಮುಗಿಲಿ. ಆಮೇಲೆ ಆ ಬಗ್ಗೆ ಯೋಚಿಸೋಣ" ಎಂದು. ಅದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆಗಾಗಿ ಕಾದು ಕುಳಿತಿದ್ದೆ ನಾನು ನನ್ನ ಪಾಡಿಗೆ.
                         ಆದರೆ ನೀನೇನು ಮಾಡಿದೆ..?? ನಿನಗಿಷ್ಟ ಬಂದಷ್ಟು ದಿನ ಚೆನ್ನಾಗಿಯೇ ಇದ್ದು ಆಮೇಲೆ ಬಳಸಿ ಮುಗಿದ ಪೆನ್ನಿನ ರೀಫಿಲಿನಂತೆ ನನ್ನನ್ನು ಕಸದ ಬುಟ್ಟಿಗೆ ಎಸೆದೆಯಲ್ಲಾ. ಏನು ತಪ್ಪು ಮಾಡದಿದ್ದರೂ ನನ್ನ ಹೆಸರು ಕೆಡಿಸಿ ಹಾಕಿದೆಯಲ್ಲಾ. ಹಾಗೆ ಮಾಡಲು ನಿನ್ನಂಥ ಹುಡುಗನಿಗೆ ಮನಸಾದರೂ ಹೇಗೆ ಬಂತೆಂದು ಆಶ್ಚರ್ಯವಾಗುತ್ತದೆ ನನಗೆ. ಬಹುಶಃ ನಾನು ಪ್ರೀತಿಸಿದ್ದ ಹುಡುಗನೇ ಬೇರೆ, ಈಗಿರುವ ನೀನೇ ಬೇರೆ ಎಂದು ತೋರುತ್ತದೆ. ನಿನ್ನ ಮೇಲಿನ ನನ್ನ ಪ್ರೀತಿಗೆ ಪ್ರತಿಯಾಗಿ ನೀನು ನನಗೆ ಕೊಟ್ಟಿದ್ದಾದರೂ ಏನು..?? ನೋವು, ಬೇಸರ, ನಿಲ್ಲದ ಕಣ್ಣೀರು, ಹತಾಶೆ, ಕೊನೆಯಲ್ಲಿ ಅತಿಯಾದ ಅವಮಾನ. ಹೇಗೆ ಸಹಿಸಲಿ ಇವೆಲ್ಲವನ್ನೂ..?? ಎಷ್ಟು ದಿನಗಳ ಕಾಲ ಸಹಿಸಲಿ..?? ಎಲ್ಲದಕ್ಕೂ ಒಂದು ಮಿತಿಯೆಂಬುದಿದೆಯಲ್ಲವೇ..?? ನಿನ್ನ ಆಟಕ್ಕೂ ಇದೆ. ಇದೇಕೆ ಹೀಗೆ ಮಾಡಿದೆ ನೀನು..?? ಯಾವ ಪುರುಷಾರ್ಥಕ್ಕಾಗಿ..??
                      ಕಲ್ಲು ಹೃದಯದವನಾದ ನಿನಗೆ ನಾನು ಜೊತೆಗಿಲ್ಲವೆಂಬುದರ ಅರಿವೂ ಸಹ ಆಗದೇನೋ. ನನಗೆ ಸ್ವಲ್ಪ ಮಟ್ಟಿಗೆ ಎಲ್ಲವನ್ನೂ ಅಳಿಸಿ ಹಾಕಲು ಕಷ್ಟವಾಗುತ್ತದೆ. ಆದರೂ ಹಳೆಯದನ್ನೆಲ್ಲಾ ಸಮಾಧಿ ಮಾಡಿ ಮುಂದೆ ಹೋಗಬೇಕೆಂದಿದ್ದೇನೆ. ಅದಕ್ಕಾಗಿ ಕಾಯುತ್ತ ಕೂರುವಷ್ಟು ಸಮಯವಾಗಲಿ, ತಾಳ್ಮೆಯಾಗಲಿ ನನಗಿಲ್ಲ. ಈ ಕ್ಷಣವೇ ಎಲ್ಲವನ್ನೂ, ಎಲ್ಲರನ್ನೂ ಬಿಟ್ಟು ದೂರದ ಅಪರಿಚಿತ ಜಾಗಕ್ಕೆ ಹೊರಡಲು ಅಣಿಯಾಗಿ ನಿಂತಿದ್ದೇನೆ. ನಿನಗೊಂದು ಕೊನೆಯ ವಿದಾಯ ಹೇಳೋಣವೆನಿಸುತ್ತದೆ. ಒಂದು ಮಾತ್ರ ನೆನಪಿಟ್ಟುಕೊ. ನನ್ನ ಬಾಳಿನಲ್ಲಿ ಆಟವಾಡಿದ ಹಾಗೆ ಬೇರೆ ಯಾವ ಹುಡುಗಿಯ ಜೊತೆಗೂ ಆಟವಾಡಬೇಡ. ಹುಡುಗಿಯ ಕಣ್ಣೀರಿನ ಒಂದೊಂದು ಹನಿಯೂ ಸಾವಿರ ಶಾಪಗಳಿಗೆ ಸಮವೆಂಬುದು ನೆನಪಿರಲಿ. ಶಾಶ್ವತವಾಗಿ ನಿನ್ನಿಂದ ದೂರ ಹೋಗುತ್ತಿದ್ದೇನೆ.
                            ಇದೋ ವಿದಾಯ. "
                       ಹೊರಗಡೆಯಿಂದ ಕಿವಿಗೆ ಅಪ್ಪಳಿಸುತ್ತಿರುವ ಅಳು, ಗೋಳಾಟಗಳ ಸದ್ದು ಇನ್ನೂ ಜಾಸ್ತಿಯಾಗಿದೆಯೆಂದು ಅನಿಸಿತ್ತು ನನಗೆ. ಈಗಂತೂ ಜನರು ಬಹಳವೇ ಬಂದು ಸೇರಿದ್ದರು. ಸಾವಿನ ಮನೆಯ ಸ್ಮಶಾನ ವಾತಾವರಣಕ್ಕಿಂತ ಘೋರ ನರಕ ಬೇರೆ ಇನ್ನೊಂದಿದೆಯೇ..?? ಅಲ್ಲಿ ಹೊರಗಡೆ ಕೂರಲಿಕ್ಕೆ ಹಿಂಸೆಯಾಗಿ ನಾನು ಮಹಡಿಯ ಮೇಲೆ ಹತ್ತಿ ಗುಮ್ಮನಂತೆ ಕುಳಿತಿದ್ದೆ. ಬ್ಯಾಗಿನಿಂದ ಡೈರಿಯನ್ನು ಹೊರಗಡೆ ತೆಗೆದು ಪುಟಗಳನ್ನು ತಿರುಗಿಸುತ್ತಿದ್ದಂತೆ ಕೈಗೆ ಸಿಕ್ಕಿತು ನಾಲ್ಕು ವರ್ಷಗಳ ಹಿಂದೆ ಬರೆದ ಈ ಪತ್ರ. ಏಕೋ ಹರಿದು ಹಾಕಲಾಗದೇ ಹಾಗೆಯೇ ಇಟ್ಟಿದ್ದೆ. ಎಲ್ಲವನ್ನೂ ಅಪ್ಪನ ಹತ್ತಿರ ಹೇಳಿಕೊಳ್ಳುತ್ತಿದ್ದ ನಾನು ಈ ಒಂದು ವಿಷಯವನ್ನು ಏಕೆ ಮುಚ್ಚಿಟ್ಟೆನೆಂಬ ಸಂಗತಿ ನನಗೇ ಗೊತ್ತಿಲ್ಲ. ಅಕಸ್ಮಾತ್ ಒಮ್ಮೆ ಹೇಳಿಕೊಂಡಿದ್ದರೆ..?? ಕತೆಯೇ ಬೇರೆಯದಾಗುತ್ತಿತ್ತೋ ಏನೋ. ಆದರೆ, ಇನ್ನೆಲ್ಲಿ ಹೇಳುವುದು..?? ಅಪ್ಪ ಅಲ್ಲಿ ಹೊರಗಡೆ ಚಿರನಿದ್ರೆಯಲ್ಲಿ ಮಲಗಿರುವವರಲ್ಲಾ.
                                ಒಮ್ಮೆಲೇ ನನ್ನ ಬಗ್ಗೆ ನನಗೇ ಅಸಹ್ಯವೆನಿಸಿತು. ಹೆತ್ತ ಅಪ್ಪ ಹೆಣವಾಗಿ ಮಲಗಿರುವಾಗ ನಾನಿಲ್ಲಿ ಕುಳಿತು ನನ್ನ ಹಳೆಯ ಪ್ರೇಮವನ್ನು ನೆನೆಸಿಕೊಳ್ಳುತ್ತಾ ಇರುವೆನಲ್ಲಾ. ಛೇ, ಮುದ್ದಿನ ಮಗಳು ಮಾಡುವ ಕೆಲಸವೇ ಇದು..?? ಇನ್ನು ಕೆಲವು ಗಂಟೆಗಳಲ್ಲಿ ಎಲ್ಲರಿಗಿಂತ ಜಾಸ್ತಿ ನನ್ನನ್ನು ಎತ್ತಿ ಆಡಿಸಿದ, ತಮ್ಮ ಭುಜದ ಮೇಲೆ ನನ್ನನ್ನು ಕೂರಿಸಿಕೊಂಡು ಊರಿನ ತುಂಬಾ ಪಲ್ಲಕ್ಕಿಯಂತೆ ತಿರುಗಿಸುತ್ತಿದ್ದ, ನನಗೆ ಕೈತುತ್ತು ತಿನ್ನಿಸಿದ್ದ, ನನ್ನ ಕಣ್ಣೀರು ಒರೆಸಿದ್ದ, ಎಲ್ಲಾ ಸಮಯದಲ್ಲೂ ನನ್ನ ಬೆನ್ನುಲುಬಾಗಿ ನಿಂತಿದ್ದ ನನ್ನ ಪ್ರೀತಿಯ ಅಪ್ಪನ ದೇಹ ಬೂದಿಯಾಗಿ ಹೋಗಲಿದೆ. ಅದಷ್ಟು ಹೊತ್ತಾದರೂ ಅಪ್ಪನ ಪಕ್ಕ ಕೂತಿರಬಾರದೇಕೆ ಎಂದೆನಿಸಿತು. ಅಪ್ಪನ ಮುಖ ನೋಡುತ್ತಿದ್ದರೆ ಎಂಥ ಹಿಂಸೆಯೂ ಅನುಭವಕ್ಕೆ ಬರಲಾರದು ಎಂದುಕೊಳ್ಳುತ್ತಾ ಎದ್ದು ಮಹಡಿಯಿಳಿದು ಕೆಳಗೆ ಬಂದೆ. ಗಂಡಸರೆಲ್ಲಾ ಮುಂದಿನ ಕೆಲಸ-ಕಾರ್ಯಗಳಿಗೆ ತಯಾರಿ ನಡೆಸುತ್ತಿದ್ದರು. ಅಂಗಳಕ್ಕೆ ನಾನು ಕಾಲಿಟ್ಟ ಕೂಡಲೇ ಹೆಂಗಸರ ಅಳು ಇನ್ನೂ ಜೋರಾಯಿತು. ನನ್ನ ಕಣ್ಣುಗಳು ಅಮ್ಮನಿಗಾಗಿ ಹುಡುಕಾಡಿದವು. ಅಪ್ಪ ಸತ್ತ ಸುದ್ದಿ ಕೇಳಿದಾಗಿನಿಂದ ದೇವರ ಕೋಣೆ ಹೊಕ್ಕಿದ ಅಮ್ಮ ಅಲ್ಲಿಂದ ಇನ್ನೂ ಹೊರಬಂದಿಲ್ಲವೆಂಬ ನೆನಪಾಯಿತು. ನಾನು ಏನೊಂದು ಮಾತನಾಡದೇ ಶಾಂತವಾಗಿ ನಡೆದು ಅಪ್ಪನ ತಲೆಯ ಪಕ್ಕ ಹೋಗಿ ಕುಳಿತೆ.
                        ಇಲ್ಲ, ನಂಬಲಿಕ್ಕೆ ಆಗುತ್ತಿಲ್ಲ ನನಗೆ. ಅಪ್ಪನ ಮುಖ ನೋಡುತ್ತಿದ್ದರೆ ಅವರು ಹಾಗೆ ಸುಮ್ಮನೆ ವಿಶ್ರಾಂತಿಗಾಗಿ ಲಘು ನಿದ್ದೆಯಲ್ಲಿದ್ದಾರೆನಿಸುತ್ತಿದೆ. ಸ್ವಲ್ಪ ಹೊತ್ತು ಬಿಟ್ಟು ಏಳುತ್ತಾರೆ ಎನ್ನುವಂತಿದೆ ಅವರ ಮುಖ ಭಾವ. ಹೆಣದ ಮುಖದಲ್ಲಿ ಭಾವಗಳನ್ನು ಶೋಧಿಸುತ್ತಿರುವ ನನ್ನ ಕುರಿತು ನನಗೇ ಸಿಟ್ಟು ಬಂತು. ಯಾವಾಗ ಅಪ್ಪನ ಮುಖದ ಭಾವಗಳನ್ನು ಅರಿತುಕೊಳ್ಳಬೇಕಾಗಿತ್ತೋ ಆವಾಗ ಆ ಕೆಲಸ ಮಾಡದೇ ಹೇಡಿಯಂತೆ ದೂರ ಹೊರಟು ಹೋಗಿದ್ದೆನಲ್ಲವೇ..?? ಎಲ್ಲವೂ ಜೀವಕಳೆದುಕೊಂಡಿರುವಾಗ ಈಗ ಯಾವ ಅರ್ಥದ ಜಾಡು ಹಿಡಿದು ಭಾವಗಳಿಗಾಗಿ ಶೋಧ..?? "ಅಪ್ಪಾ, ನೀವೇಕೆ ಹೀಗೆ ನನ್ನ ಬಿಟ್ಟು ಹೋದಿರಿ..?? ಆ ಹಾಳು ಕೆರೆಗೆ ಹಾರುವ ನಿರ್ಧಾರ ಕೈಗೊಂಡಾಗಲೀ, ಹಾರುವ ಮುಂಚೆಯಾಗಲೀ ಒಮ್ಮೆ ಕೂಡ ನಿಮ್ಮ ಮುದ್ದಿನ ಮಗಳ ನೆನಪಾಗಲಿಲ್ಲವೇ..?? ನಿಮ್ಮ ಬದುಕನ್ನು ನೀವೇ ಹೀಗೆ ಕೊನೆಗಾಣಿಸಿಕೊಂಡಿರಿ ಏಕೆ..??" ನನ್ನ ಮನಸ್ಸು ಒಳಗೊಳಗೆ ಮತ್ತೆ ಮತ್ತೆ ಪ್ರಶ್ನಿಸುತ್ತಿತ್ತು.
                          ಥಟ್ಟನೆ ಅದಕ್ಕೆ ಉತ್ತರವಾಗಿ ಇನ್ನೊಂದು ಮನಸ್ಸು ಅಪ್ಪನ ದನಿಯಲ್ಲಿ ಮಾತನಾಡಲಾರಂಭಿಸಿತು. "ನಾಲ್ಕು ವರ್ಷಗಳ ಕೆಳಗೆ ಹಿಂದೆ ಮುಂದೆ ನೋಡದೇ ಕೊನೆಗೆ ನನಗೂ ಒಂದು ಮಾತು ತಿಳಿಸದೇ ಓಡಿ ಹೋದೆಯಲ್ಲ ಮಗಳೇ, ಆಗ ನಿನಗೆ ಈ ಅಪ್ಪನ ನೆನಪಾಗಲಿಲ್ಲವಾ..?? ನಿನ್ನ ನೋವು, ಬೇಸರಗಳಿಗೆ ಸದಾ ಕಿವಿಯಾಗಿದ್ದ ನಿನ್ನ ಹುಟ್ಟಿಸಿದ ಅಪ್ಪನೂ ನಿನಗೆ ಬೇರೆಯವನು ಎಂದೆನಿಸಿದನಾ..?? ನಿನಗಾಗಿ ಏನು ಬೇಕಾದರೂ ಮಾಡಲು ಸಿದ್ಧವಿದ್ದ ಅಪ್ಪನಿಗೂ ಮುಖ ತೋರಿಸದೇ ದೂರ ಹೋದೆಯಲ್ಲ ಮಗಳೇ, ಹಾಗೆ ಹೋಗುವಾಗ ಒಮ್ಮೆಯೂ ನನ್ನ ನೆನಪು ನಿನಗಾಗಲಿಲ್ಲವೇ..??" ಅಂದರೆ, ಅಪ್ಪನ ಸಾವಿಗೆ ನಾನೇ ಪರೋಕ್ಷ ಕಾರಣಳೇ..?? ಯೋಚಿಸಿದಂತೆ ತಲೆ ತಿರುಗತೊಡಗಿತು. ಎದೆಯಲ್ಲಿ ಸಣ್ಣದಾಗಿ ನೋವು ಕಾಣಿಸಿಕೊಂಡಿತು. ಅಲ್ಲಿಯ ತನಕ ಕಲ್ಲು ಬಂಡೆಯಂತೆ ಕೂತಿದ್ದವಳು ಅಯ್ಯೋ ಎಂದು ಚೀರಿಕೊಂಡು ಮರುಕ್ಷಣವೇ ಅಳತೊಡಗಿದೆ. (ಮುಂದುವರೆಯುವುದು)


1 comment:

  1. ತುಂಬಾ ಭಾವುಕ ಬರಹ.. ಆ ನೋವು ತಳಮಳ ಹೃದಯವನ್ನು ಹಿಂಡಿದಂತಿದೆ. ಹಾಗೆ ಓದುಗರನ್ನ ಓಡಿ(ದಿ)ಸಿಕೊಂಡು ಹೋಗುತ್ತಿದೆ. ಉತ್ತಮ ಪ್ರಯತ್ನ.
    ಮುಂದೆನಾಯಿತೆಂದು ತಿಳಿಯುವ ಕಾತರದಲ್ಲಿದ್ದೇನೆ.

    ReplyDelete