Saturday, 12 April 2014

ಡೈರಿ - ಪುಟ ೧೨

                                                       
 
                                  "ಲೇ, ಇವತ್ತೇನಾಯ್ತು ಗೊತ್ತಾ..?? ಮಾರ್ಕೆಟ್ಟಿಗೆ ಅಂತ ಹೋಗಿದ್ನಲ್ಲಾ, ಮೊದಲು ಕೊಪ್ಪಿಕರ್ ಕಡೆ ಹೋಗಿದ್ದೆ. ಆದ್ರೆ, ಅಲ್ಲಿ ನನಗೆ ಬೇಕಾಗಿದ್ದು ಸಿಗ್ಲೇ ಇಲ್ಲಾ. ಅದಕ್ಕೆ ಅಲ್ಲಿಂದ ನೇರವಾಗಿ ಈಸಿ ಡೇ ಮಾರ್ಕೆಟ್ ಗೆ ಹೋಗೋಣ ಅಂತಾ ಗೋಕುಲ ರೋಡ್ ಕಡೆದು ಬಸ್ ಹತ್ತಿದೆ. ಬಸ್ಸಲ್ಲಿ ಇದ್ದವರೆಲ್ಲರೂ ನಾ ಹತ್ತಿದ ತಕ್ಷಣ ಒಮ್ಮೆಲೆ ನನ್ನತ್ತ ನೋಡಿದ್ರು. ಅರೇ, ಇವರ್‍ಯಾಕೆ ಹೀಗೆ ನೋಡ್ತಿದಾರೆ ಅಂತಾ ನಾನೂ ಸಹ ಒಮ್ಮೆ ಎಲ್ಲರತ್ತ ಕಣ್ಣು ಹಾಯಿಸಿದೆ. ಆಗಲೇ ಅರಿವಾಗಿದ್ದು ನನಗೆ. ಬಸ್ ಅಲ್ಲಿ ನನ್ನ ಬಿಟ್ರೆ ಬೇರೆ ಯಾವುದೂ ಹೆಣ್ಣು ಪ್ರಾಣಿ ಇರಲಿಲ್ಲ ಅಂತ. ಒಮ್ಮೆಲೆ ಗೊಳ್ಳನೆ ನಗು ಬಂತು ನನಗೆ. ಅಲ್ಲಾ ಕಣೇ, ಬೇರೆ ಗ್ರಹದಿಂದ ಬಂದ ಏಲಿಯನ್ ಅನ್ನೋ ಥರಾ ಅವರೆಲ್ಲಾ ಲುಕ್ ಕೊಡೊವಂಥದ್ದು ಏನಿತ್ತು..?? ಬರೇ ಗಂಡಸರೇ ಇದ್ದರು ಅಂತ ನಾನು ಬಸ್ ಹತ್ತದೇ ಇರ್ಬೇಕಿತ್ತಾ..?? ಈ ಜನ ಹೇಗೆಲ್ಲಾ ಆಡ್ತಾರೆ ನೋಡು." ಹುಬ್ಬುಗಳನ್ನೆಲ್ಲಾ ಕೊಂಕಿಸಿ ಸಹಿಸಲಸಾಧ್ಯವೆನ್ನುವಂಥ ಮುಖಭಾವದೊಂದಿಗೆ ನಡೆದ ಪ್ರವರವನ್ನು ಹೇಳಿದಳು ನನ್ನ ರೂಮ್ ಮೇಟ್.
                            "ಅಯ್ಯೋ ಇದೇನು ಹೊಸತೇನೆ..?? ಯಾವಾಗಲೂ ಇದ್ದಿದ್ದೇ. ನೀನು ಬರೇ ಗಂಡಸರೇ ಇದ್ದ ಬಸ್ ಹತ್ತಿದ್ದು ವಿಷಯವಲ್ಲ. ನೀ ಒಬ್ಬಳೇ ಇದ್ದೆಯಲ್ಲ, ಅದು ಮ್ಯಾಟರ್. ಹುಡುಗಿಯರು ಒಬ್ಬಳೇ ಓಡಾಡುವುದು ಮಹಾಪಾಪ ಅಲ್ಲವೇನೆ..?? ನಿನಗೆ ಗೊತ್ತಿಲ್ಲದ ವಿಷಯವಾ ಇದು..?? ಹುಡುಗಿಯರ ಮೇಲೆ ಇಲ್ಲಸಲ್ಲದ ದೌರ್ಜನ್ಯಗಳು ನಡೀತಾ ಇರೋ ಈ ದಿನಗಳಲ್ಲಿ ಯಾರು ತಾನೇ ಒಬ್ಬಳೇ ಓಡಾಡ್ತಾರೆ..??"
                                  "ದೌರ್ಜನ್ಯಗಳು ನಡೀತಾ ಇರ್ತವೆ ಅಂತಾ ನಾವು ಹೊರಗಡೆಯೇ ಬಾರದೇ ನಮ್ಮ  ಮನೆಯಲ್ಲೇ ಸುಮ್ಮನೆ ಕೂರಲಿಕ್ಕೆ ಆಗ್ತದಾ..?? ಜೊತೆಗೆ ಯಾರೂ ಸಿಗಲಿಲ್ಲ ಅಂತಾ ನಮ್ಮ ಕೆಲಸ-ಕಾರ್ಯಗಳನ್ನೆಲ್ಲಾ ಬಿಟ್ಟು ಬಿಡೋದಾ ಮಾರಾಯ್ತಿ..?? ಸಿಕ್ಕರೆ ಒಳ್ಳೆಯದೇ, ಸಿಗದಿದ್ದರೆ ಪರವಾಗಿಲ್ಲ ಎಂದುಕೊಂಡು ನಮ್ಮ ಕೆಲಸವನ್ನ ನಾವೇ ತಾನೇ ಮಾಡ್ಬೇಕು. ಜನಕ್ಕೆ ಇದೆಲ್ಲ ಅರ್ಥ ಆಗಲ್ಲ. ಎಲ್ಲರೂ ತಮ್ಮ ತಮ್ಮ ಮೂಗಿನ ನೇರಕ್ಕೆ ಮಾತನಾಡ್ತಾರೆ ಅಷ್ಟೆ. ಮತ್ತೊಂದು ವಿಷಯ ಏನಪ್ಪಾ ಅಂತಂದ್ರೆ, ನಾವು ಹುಡುಗಿಯರೂ ಸಹ ಅತಿಯಾಗಿ ಮಾಡ್ತೀವಿ. ಸ್ವಲ್ಪವೂ ಸ್ವಾವಲಂಬಿಗಳಾಗಲು ಪ್ರಯತ್ನಿಸೋದಿಲ್ಲ. ಸುರಕ್ಷತೆ ಅನ್ನೋ ನೆಪ ಇಟ್ಕೊಂಡು ಆಮೆ ತನ್ನ ಚಿಪ್ಪಿನ ಒಳಗೆ ಹುದುಗಿಕೊಳ್ಳುತ್ತಲ್ಲಾ, ಹಾಗೆ ಅಡಕೊಂಡು ಕೂರ್ತೀವಿ. ಅಪ್ಪಿತಪ್ಪಿಯೂ ತಲೆ ಹೊರಗಡೆ ಹಾಕಿ ಪ್ರಪಂಚ ನೋಡುವ ಕೆಲಸಕ್ಕೆ ಹೋಗುವುದಿಲ್ಲ. ಅದಕ್ಕೆ ಹೀಗಾಗಿರೋದು." ಉದ್ದದ ಭಾಷಣವನ್ನೇ ಬಿಗಿದಳು ಪುಣ್ಯಾತ್ಗಿತ್ತಿ.
                                   "ನೀನು ಮಹಿಳಾ ಹಕ್ಕುಗಳ ಹೋರಾಟ ಸಂಘಕ್ಕೆ ಸೇರಿಕೊ. ಒಳ್ಳೆಯ ಭವಿಷ್ಯವುಂಟು ನಿನಗೆ. ನನಗೆ ಭಯಂಕರ ಹಸಿವಾಗಿದೆ. ನೀ ಬರುವುದನ್ನೇ ಕಾಯ್ತ ಇದ್ದೆ. ಮೊದಲು ಊಟಕ್ಕೆ ನಡಿ. ಆಮೇಲೆ ಬೇಕಾದಷ್ಟು ಇದೇ ವಿಷಯದ ಬಗ್ಗೆ ಚರ್ಚೆ ಮಾಡೋಣ".


1 comment:

  1. ಹುಬ್ಬಳ್ಳಿಯೊಳಗ ಇದ್ದೀರಿ ಹುಬ್ಬಳ್ಳಿ ಭಾಷಾದಾಗ ಬರದಿದ್ರ
    ಲೇಖನ ಇನ್ನೂ ಮಸ್ತಇರತಿತ್ತು...

    ReplyDelete