Monday, 14 April 2014

ಡೈರಿ - ಪುಟ ೧೪

                                                   

                                            "ಮೋದಿ ಪತ್ನಿಗೆ ಭದ್ರತೆ ಒದಗಿಸಬೇಕೆಂದು ಕಾಂಗ್ರೆಸ್ ನಾಯಕರ ಒತ್ತಾಯ. ವಾಹ್, ಇವರಿಗೆಲ್ಲಾ ಒಮ್ಮೆಲೆ ಮೋದಿ ಹೆಂಡತಿ ಮೇಲೇಕೆ ಇಷ್ಟೊಂದು ಕಾಳಜಿ ಬಂದಿದೆಯೋ ಏನೋ. ಅದು ಕಾರಣ ಯಾಕಂತೆ ಗೊತ್ತಾ..?? ಮೋದಿಗೆ ಅವರಿಗೆ ಭಯೋತ್ಪಾದಕರು, ನಕ್ಸಲರಿಂದೆಲ್ಲಾ ಜೀವ ಬೆದರಿಕೆಯಿದೆಯಂತೆ. ಹಾಗಾಗಿ ಅವರ ಪತ್ನಿಯ ಪ್ರಾಣಕ್ಕೂ ಅಪಾಯವಿದೆ ಎನ್ನುವುದು ಇವರ ಪಾಯಿಂಟ್. ಅಲ್ಲಾ, ಅವರ ಹೆಂಡತಿಯ ರಕ್ಷಣೆ ಕುರಿತು ಮೋದಿ ನೋಡಿಕೊಳ್ಳೊದಿಲ್ವಾ..?? ಇಲ್ಲವೆಂದರೆ ಜಶೋದಾ ಬೆನ್ ಅವರ ತವರು ಮನೆಯವರು ಅದರ ಬಗ್ಗೆ ಯೋಚಿಸೋದಿಲ್ವಾ..?? ಇವರಿಗೆ ಚುನಾವಣೆ ಸಂಗತಿ ಬದಿಗಿಟ್ಟು ಇನ್ನೊಬ್ಬರ ಹೆಂಡತಿ ಬಗ್ಗೆ ತಲೆ ಕೆಡಿಸಿಕೊಳ್ಳೊ ಕರ್ಮ ಇವರಿಗ್ಯಾಕೆ..??" ನ್ಯೂಸ್ ಪೇಪರ್ ತಿರುವುತ್ತ ಮಾತನಾಡ್ತಾ ಇದ್ದೆ ನಾನು. ಮೋದಿ ಹೆಂಡತಿ ವಿಷಯದಲ್ಲಿ ಕಾಂಗ್ರೆಸ್ ನಾಯಕರ ಆಸಕ್ತಿ ಬಹಳವೇ ಕಾಮೆಡಿ ಅಂತಾ ಅನಿಸ್ತಿತ್ತು.
                                       "ಕಾಂಗ್ರೆಸ್ ಅವ್ರಿಗೆ ತಮ್ಮ ಸಾಧನೆ ಅಂತ ಹೇಳಿಕೊಳ್ಳೊದಿಕ್ಕೆ ಏನೇನು ಇಲ್ಲಾ. ಇಷ್ಟು ದಿನ ಉಳಿದ ಪಕ್ಷದ ನಾಯಕರ ವಿರುದ್ಧ ಹರಿಹಾಯ್ದು ಮುಗೀತು. ಈಗ ಮತ್ತೇನು ಮಾತನಾಡೋಕೆ ಸಿಗ್ತಾ ಇಲ್ಲಾ. ಅದ್ಕೆ ಎಲ್ಲಾ ಬಿಟ್ಟು ಭಂಗಿ ನೆಟ್ಟ ಅನ್ನೋ ಥರ ಮೋದಿ ಹೆಂಡತಿ ಬಗ್ಗೆ ಜೋರು ಇಂಟರೆಸ್ಟ್ ತೋರಿಸ್ತಾ ಇದಾರೆ. ಪಾಪ ಕಣೇ, ಅವರಿಗೆ ಸೋಲಿನ ಭಯ ಇದೆ ಅಲ್ವಾ..?? ಸ್ವಲ್ಪ ಮತಿಭ್ರಮಣೆ ಆಗಿರ್ಬೇಕು." ನಗುತ್ತಾ ಉತ್ತರಿಸಿದಳು ನಮ್ಮ ರೂಮ್ ಮೇಟ್ ಮಹಾಶಯಿತಿ.
                               "ಇವರೊಂದೆ ಅಲ್ಲ ಕಣೇ. ಜನರಿಗೆ ಯಾವಾಗಲೂ ಬೇರೆಯವರ ಬಗ್ಗೆ ಆಸಕ್ತಿ ಜಾಸ್ತಿನೇ ಅಲ್ವಾ..?? ಅವರೇನು ಮಾಡ್ತಿದಾರೆ, ಎಲ್ಲಿಗೆಲ್ಲಾ ಹೋಗ್ತಾರೆ, ಯಾರ್‍ಯಾರ ಜೊತೆಗೆಲ್ಲಾ ಓಡಾಡ್ತಾರೆ, ಏನೇನು ತಿಂತಾರೆ, ಯಾವ್ಯಾವ ಡ್ರೆಸ್ ಹಾಕ್ತಾರೆ, ಯಾವ ಸೆಲ್ ಫೋನ ಇಟ್ಕೊಂಡಿದಾರೆ, ಎಷ್ಟು ಸಿಮ್ಸ್ ಇಟ್ಕೊಂಡಿದಾರೆ - ಇದೆಲ್ಲ ಬೇಡದ ವಿಷಯಗಳು ಬೇಕು. ಇದನ್ನೆಲ್ಲಾ ಇಟ್ಕೊಂಡು ಅವರೇನು ಮಾಡ್ತಾರೆ ಅಂತಾ ಆ ಶ್ರೀಕೃಷ್ಣನಿಗೂ ಅರ್ಥವಾಗಲಿಕ್ಕಿಲ್ಲ. ಬೇರೆಯವರ ಸಲುವಾಗಿ ಅನಾವಶ್ಯಕವಾಗಿ ಹಾಳು ಮಾಡುವ ಸಮಯವನ್ನೆಲ್ಲಾ ತಮ್ಮದೇ ಸ್ವಂತ ಕೆಲಸಗಳಿಗೆ ಖರ್ಚು ಮಾಡಿದ್ರೆ ಇವ್ರಿಗೆನೇ ಒಳ್ಳೆದಲ್ವಾ..?? ಅದೆಲ್ಲಾ ಅರಿತುಕೊಳ್ಳುವಷ್ಟು ಪುರಸೊತ್ತಾದರೂ ಇರ್ಬೇಕಲಾ. ಬೇರೆಯವರ ಕುರಿತು ಜಪ ಮಾಡಿಲಿಕ್ಕಾಗಿಯೇ ಅದೂ ಸಹ ಮೀಸಲು. ಛೇ, ಇವರೆಲ್ಲಾ ತಮ್ಮ ಸಣ್ಣತನವನ್ನು ಯಾವಾಗ ಬಿಡ್ತಾರೋ..??"
                                 "ಅವರು ಹಾಗೆಯೇ ಇರಲಿ ಬಿಡೆ. ನಷ್ಟ ಅವರಿಗೇ ತಾನೇ..?? ಅವರು ನಮ್ಮ ಬಗ್ಗೆ ಆಡಿಕೊಳ್ತಾರೆ ಅಂದ್ರೆ, ನಾವು ಏನೋ ಡಿಫರೆಂಟ್ ಆಗಿರೋದನ್ನ ಮಾಡ್ತಾ ಇದೀವಿ ಅಂತ ಅಲ್ವಾ..?? ನಮ್ಮ ತಪ್ಪಿಲ್ಲ ಅಂದ್ಮೇಲೆ ನಾವ್ಯಾಕೆ ಅದ್ರ ಬಗ್ಗೆ ತಲೆ ಕೆಡಿಸಿಕೊಳ್ಬೇಕು. ಆರಾಮಾಗಿ ನಮ್ಮ ಪಾಡಿಗೆ ನಾವು ನಮ್ಮ ಕೆಲಸ ಮಾಡ್ತಾ ಇದ್ರೆ ಆಯ್ತಪ್ಪಾ." ರೂಮ್ ಮೇಟ್ ಹೇಳಿದ್ದು ಸರಿಯಾಗಿದೆ ಎಂದು ನಾನು ಸುಮ್ಮನೆ ಅವಳತ್ತ ತಿರುಗಿ ನಕ್ಕೆನಷ್ಟೆ.


No comments:

Post a Comment