Sunday, 13 April 2014

ಡೈರಿ - ಪುಟ ೧೩


                                     ಇವತ್ತು ಏನು ಬರೀಲಿ ಅಂತಾನೇ ಗೊತ್ತಾಗ್ತಿಲ್ಲ. ವಿಷಯವೇ ಸಿಗ್ತಾ ಇಲ್ಲ. ಹೇಯ್, ಮತ್ತೆ ನೀನು ನಿನ್ನ ರೂಮ್ ಮೇಟ್ ಏನಾದ್ರು ಜಗಳವಾಡಿದಿರಾ ಅಂತಾ ಸುಮ್ನೆ ಸಂದೇಹ ಪಡಬೇಡಿ.  ಹಾಗೇನು ಆಗಿಲ್ಲ. ಡೈರಿಲಿ ಬರೆಯೋಕೆ ಏನು ನೆನಪಾಗ್ತಾನೇ ಇಲ್ಲ. ದಿನವಿಡೀ ಏನು ಮಾಡಿದೆ ನಾನು..?? ನ್ಯೂಸ್ ಪೇಪರ್ ಓದಿದೆ. ಆಮೇಲೆ ಸ್ನಾನ ಮುಗಿಸಿ, ಕಳೆದ ಒಂದು ವಾರದಿಂದ ಹಾಗೆಯೇ ಬಿದ್ದು ನಾರುತ್ತಿದ್ದ ಬಟ್ಟೆಗಳನ್ನೆಲ್ಲಾ ಒಗೆದಾಯಿತು. ಆಮೇಲೆ ಎರಡು ಪೋಸ್ಟುಗಳನ್ನು ಬ್ಲಾಗಿಗೆ ಎಸೆದಿದ್ದಾಯಿತು. ನಂತರ ಗೆಳತಿಯ ಜೊತೆ ಮಾತನಾಡುತ್ತಾ ಕುಳಿತಿದ್ದೇ. ನಾಲ್ಕು ತಾಸುಗಳು ಹೇಗೆ ಕಳೆದವೋ ತಿಳಿಯಲಿಲ್ಲ. ಆಮೇಲೆ ಒಂದು ತಾಸು ಮಲಗಿಕೊಂಡಿದ್ದಾಯಿತು. ಅಷ್ಟರಲ್ಲಿ ಸಂಜೆ ಆವರಿಸಿತ್ತು. ಬೇಸಿಗೆರಾಯನ ಆಶೀರ್ವಾದದಿಂದಾಗಿ ಇನ್ನೊಂದು ಬಾರಿ ಸ್ನಾನ ಮುಗಿಸಿ ಊಟ ಎಲ್ಲವನ್ನೂ ಮುಗಿಸಿ ಕೂರುವ ವೇಳೆಗೆ ೮.೩೦. ಯಪ್ಪಾ, ಮುಗಿದೇ ಹೋಯಿತಲ್ಲ ಈ ದಿನ ಎನಿಸಿತು.
                                ಪ್ರತಿದಿನವೂ ಏಳುವಾಗ ಮಾತ್ರ ಮುಖದ ಮೇಲೆ ಗೆರೆಗಳನ್ನು ಮೂಡಿಸುತ್ತಾ ಇನ್ನೊಂದು ದಿನ ಪ್ರಾರಂಭವಾಯಿತಲ್ಲ ಎಂದುಕೊಳ್ಳುತ್ತೇವೆ, ಅಂತ್ಯವಿಲ್ಲದ ಒಂದು ಯುಗ ಪ್ರಾರಂಭವಾಯಿತೆಂಬಂತೆ. ಆದರೆ ಒಂದು ಸೆಕೆಂಡು ಕೂಡಾ ಆಗಿಲ್ಲವೆನ್ನುವಂತೆ ದಿನ ಕಳೆದು ಹೋಗಿರುತ್ತದೆ. ಆಮೇಲೆ ಅಲವೊತ್ತುಕೊಳ್ಳುವುದು,"ಛೇ, ಈ ದಿನ ನಾನು ಏನು ಮಾಡೇ ಇಲ್ಲ ನೋಡು. ಸುಮ್ಮನೆ ಟೈಮ್ ವೇಸ್ಟ್ ಮಾಡುತ್ತಲೇ ಇಡೀ ದಿನ ಕಳೆದೆ." ಮತ್ತೆ ಮನಸ್ಸಿನಲ್ಲಿಯೇ ಭೀಷ್ಮ ಪ್ರತಿಜ್ಞೆಗೈಯ್ಯುವುದು, "ನಾಳೆಯಿಂದ ಹೀಗೆ ಮಾಡಲ್ಲ, ಅಂದುಕೊಂಡ ಎಲ್ಲಾ ಕೆಲಸಗಳನ್ನು ಮಾಡಿ ಮುಗಿಸುತ್ತೇನೆ." ಆದರೆ ಆ ನಾಳೆಯೆನ್ನುವುದು ಮರೀಚಿಕೆಯಂತೆ.
                           ಈಗ ಗಂಟೆ ರಾತ್ರಿ ೨.೦೦. ಮತ್ತೊಂದು ದಿನ ಪ್ರಾರಂಭವಾಗಿದೆ. ಇವತ್ತಾದರೂ ಅಂದುಕೊಂಡ ಕೆಲಸಗಳನ್ನೆಲ್ಲಾ ಮಾಡಿ ಮುಗಿಸುತ್ತೀನಾ..?? ಯಾವನಿಗೊತ್ತು ಸ್ವಾಮಿ..?? ನಾವು ಬೆಂಕಿ ಬಿದ್ದಾಗ ಬಾವಿ ತೋಡುವ ಜಾತಿಯವರು. ಆಮೇಲೆ ಬೆಂಕಿ ನಂದಿಸಲಾಗಲಿಲ್ಲವೆಂದರೆ ಬಾವಿ ತೋಡಿ ನಮ್ಮ ಕೆಲಸ ನಾವು ಮಾಡಿದ್ದೇವೆ. ಬಾವಿಯಲ್ಲಿ ನೀರೇ ಇರಲಿಲ್ಲವೆಂದರೆ ಅದು ನಮ್ಮ ತಪ್ಪೇ..?? ಎನ್ನುತ್ತಾ ಜಾಣತನದಿಂದ ಜಾರಿಕೊಳ್ಳುವುದು. ನಮ್ಮ ಜೀವನದಲ್ಲೂ ಆ ನಾಳೆ ಬರುತ್ತದಾ..?? ಅದು ಗೊತ್ತಾಗಬೇಕು ಅಂದ್ರೆ ಮೊದಲು ಮಲಗಿಕೊಳ್ಳಬೇಕು. ನಾಳೆ ಬೇರೆ ಫಿಲ್ಮ್ ಗೆ ಹೋಗಲಿಕ್ಕಿದೆ, ಬೇಗನೇ ಏಳಬೇಕು. ಮತ್ತಿನ್ನೇನು..?? ಶುಭರಾತ್ರಿ.


No comments:

Post a Comment