Saturday, 12 April 2014

ಡೈರಿ - ಪುಟ ೧೧


                                        "ಲಕ್ಷದ್ವೀಪದಲ್ಲಿ ದಾಖಲೆ ಮತದಾನ" ಆಗ ತಾನೇ ನ್ಯೂಸ್ ಪೇಪರ್ ಕೈಗೆತ್ತಿಕೊಂಡಿದ್ದ ನನ್ನ ರೂಮ್ ಮೇಟ್ ದೂರದರ್ಶನದ ವಾರ್ತಾ ಸುದ್ದಿ ವಾಹಕರ ಶೈಲಿಯನ್ನು ಅನುಕರಿಸುತ್ತಾ ನುಡಿದಳು. ಗಂಟೆ ಎಂಟೂವರೆಯಾಗಿದ್ದರೂ ನಾನಿನ್ನೂ ಹಾಸಿಗೆಯಲ್ಲೇ ಉಳ್ಳಾಡುತ್ತಾ ಮಲಗಿದ್ದೆ. ನಿದ್ದೆ ಮಂಪರು ಸರಿಯಾಗಿ ಇಳಿದಿರಲಿಲ್ಲ. ಅಂದು ನನ್ನ ತರಗತಿಗಳು ಮಧ್ಯಾನ್ಹ ೧೨.೩೦ಯಿಂದ ಶುರುವಾಗುತ್ತಿದ್ದವು. ಹೇಗಿದ್ದರೂ ನಾಳೆ ಮಧ್ಯಾನ್ಹ ಕ್ಲಾಸು ಎಂದು ಹಿಂದಿನ ದಿನ ತಡರಾತ್ರಿ ಮಲಗುವುದು ಇದ್ದೇ ಇರುತ್ತಿತ್ತು. ಹಾಗೆಯೇ ಮುಂಜಾನೆ ಲೇಟ್ ಆಗಿ ಏಳುವುದು ಕೂಡ. ಬೆಳಿಗ್ಗೆ ಬೇಗನೆ ಎದ್ದು ರೆಡಿ ಆಗುವ ತಲೆಬಿಸಿಯಿಲ್ಲವೆಂದು ಖುಶಿಯಿದ್ದರೂ ಥೂ, ಈ ಸೆಕೆಯಲ್ಲಿ ಮಧ್ಯಾನ್ಹ ಕ್ಲಾಸ್ ಇಡುತ್ತಾರಲ್ಲಾ, ಅವರ ತಲೆಯಲ್ಲಿ ಬುದ್ಧಿ ಇದೆಯೋ ಇಲ್ಲಾ ಲದ್ದಿ ಇದೆಯೋ ಎಂದು ಪ್ರತಿ ಬಾರಿಯೂ ಬಯ್ಯುತ್ತಲೇ ಕ್ಲಾಸಿಗೆ ಹೋಗುವುದಾಗಿತ್ತು.
                           "ಮಾರಾಯ್ತಿ, ನಿನ್ನ ಪಾಡಿಗೆ ನೀನು ಓದ್ಕೊ. ನನಗೆ ಸುಪ್ರಭಾತವನ್ನೇಕೆ ಹಾಡ್ತಾ ಇದ್ದೀಯಾ..?? ಸೊಗಸಾದ ನಿದ್ದೆಯನ್ನು ಹಾಳು ಮಾಡಿದೆಯಲ್ಲೆ ಪಾಪಿ. ಜೊತೆಗೆ ಏನೋ ಚೆಂದದ ಕನಸು ಬೀಳ್ತಾ ಇತ್ತು. ಅದೂ ಸಹ ಅರ್ಧಕ್ಕೆ ಮಾಯವಾಗೋಯ್ತು." ನಾನು ಅಸಮಾಧಾನದಿಂದ ಹುಸಿ ಮುನಿಸು ತೋರುತ್ತಾ ಹೇಳಿದೆ. ಆಕೆಗೆ ಅದೇನೂ ಕೇಳಿಸಿದಂತೆ ತೋರಲಿಲ್ಲ. "ನಿನ್ನ ನಿದ್ದೆಗೇನು, ಸಂಜೆ ಕ್ಲಾಸ್ ಮುಗಿದ ಮೇಲೆ ಮತ್ತೆ ಮಲಗು. ನೋಡೆ, ಈ ಸುದ್ದಿಯನ್ನ. ಮೂರನೇ ಹಂತದ ಮತದಾನ ನಡೆದ ಎಲ್ಲಾ ಕಡೆಗಳಲ್ಲೂ ವೋಟಿಂಗ್ ಪ್ರಮಾಣದಲ್ಲಿ ಏರಿಕೆಯಾಗಿದೆ. ದೆಹಲಿಯಲ್ಲಿ ಮೂರು ದಶಕದಲ್ಲೇ ಗರಿಷ್ಠ ಮತದಾನವಾಗಿದೆ. ನಿಜವಾಗ್ಲೂ ಇದು ಒಳ್ಳೆ ಬೆಳವಣಿಗೆ ಕಣೇ. ನಮ್ಮ ಜನ ಬದಲಾವಣೆನ ಬಯಸ್ತಾ ಇದಾರೆ ಅಲ್ವಾ..?? ಅವರ ಮನೋಭಾವನೆ ಬದಲಾಗ್ತಾ ಇದೆ. ಇಲ್ಲಿ ತನಕ ಎಲ್ಲಾ ಅನುಕೂಲತೆಗಳಿದ್ದರೂ, ಸರ್ಕಾರ ಮತಹಾಕಲು ಸಹಾಯಕವಾಗುವಂತೆ ಎಲ್ಲ ತರಹದ ಪೂರ್ವಸಿದ್ಧತೆಗಳನ್ನು ಮಾಡಿಕೊಟ್ಟರೂ, ಕೆಲವರಂತೂ ಮನೆಯ ಹತ್ತಿರ ಮತಗಟ್ಟೆಯಿದ್ದರೂ ಮತದಾನವನ್ನೇ ಮಾಡದೇ ಮನೆಯಲ್ಲೇ ಇರ್ತಾ ಇದ್ರು. ಈಗ ಅಂತೂ ಮನೆಯಿಂದ ಹೊರಬೀಳುತ್ತಿದ್ದಾರೆ ಅಂತಾಯಿತಲ್ಲ. ಒಂದಿಷ್ಟು ಜನ ಯಾವಾಗಲೂ ಹೇಳ್ತಾನೆ ಇರ್ತಾರಲ್ಲಾ. ಭಾರತ ಮಾತ್ರ ಯಾವತ್ತಿದ್ದರೂ ಉದ್ಧಾರವಾಗಲ್ಲ, ಇಲ್ಲಿನ ಜನ ಬದಲಾಗಲ್ಲ, ವ್ಯವಸ್ಥೆ ಬದಲಾಗಲ್ಲ ಅಂತೆಲ್ಲಾ ಸರ್ಟಿಫಿಕೇಟ್ ಕೊಡ್ತಾರಲ್ಲಾ. ಅವ್ರಿಗೆಲ್ಲಾ ಈ ಸುದ್ದಿನಾ ಓದ್ಲಿಕ್ಕೆ ಹೇಳ್ಬೇಕು. ಏನಂತೀಯಾ..??" ಅವಳು ಮಾತು ಮುಗಿಸುವಂತೆ ಕಾಣುತ್ತಿರಲಿಲ್ಲ.
                                    "ಜನ ಉದ್ಧಾರವಾಗಿರಬಹುದು. ಆದರೆ, ನನ್ನ ನಿದ್ದೆ ಹಾಳು ಮಾಡಿದೆ ನೋಡು. ನೀನು ಮಾತ್ರ ಈ ಜನ್ಮದಲ್ಲಿ ಮಾತ್ರವೇ ಅಲ್ಲ, ಯಾವತ್ತಿಗೂ ಉದ್ಧಾರವಾಗಲಾರೆ. ಈಗೋ, ನನ್ನ ಶಾಪವಿದೆ ನಿನಗೆ ತರುಣಿ, ತಥಾಸ್ತು" ನಾಟಕೀಯವಾಗಿ ಹೇಳಿದೆ. "ಇದಕ್ಕೇನೂ ಕಮ್ಮಿಯಿಲ್ಲ. ಕಾಲೇಜು ಫೆಸ್ಟ್ ನಲ್ಲಿ ಮಾಡು ನಿನ್ನ ನಾಟಕವನ್ನೆಲ್ಲಾ. ಮಲಗಿದ್ದು ಸಾಕು, ಏಳು. ಮೆಸ್ ಗೆ ಹೋಗೋದು ಬೇಡವಾ..??" ನನ್ನ ಮುಸುಕೆಳೆಯುತ್ತಾ ಹೇಳಿದಳಾಕೆ.


No comments:

Post a Comment