Tuesday, 29 April 2014

ಶೃಂಗಾರ

         
ಅಲೆಗಳೆದ್ದು ಹೊಯ್ದಾಡುವ ಪರಿಯನ್ನು
ತಣಿಸುವ ಬಗೆಯಲ್ಲಿನ ತೃಪ್ತಿ
ಬಿಸಿಯನ್ನಾರಿಸುವ ಹಸಿ ಕಾರ್ಯವು
ಕಿಚ್ಚು ಹೆಚ್ಚಿದಷ್ಟೂ ಸುಲಭವಾದಂತೆ
ಕರಗಿ ನೀರಾಗುವ ಹೊತ್ತಿಗೆ
ಏನೋ ಕಳೆದರೂ ಎಲ್ಲವನ್ನೂ ಗಳಿಸಿದಂತೆ

ದೇಹದ ತಾಳಕ್ಕೆ ತಕ್ಕಂತೆ ಭಾವಗಳು ಕುಣಿಯುತ್ತ
ಚಿತ್ತದ ರಾಗಕ್ಕೆ ಬಯಕೆಗಳು ಸ್ಫುರಿಸುತ್ತ
ಸಮಾಗಮದ ನೆರಳ ತಂಪಿನಲ್ಲಿ
ಸಮ್ಮಿಲನದ ಬೆಳಕು ಬೀರುವ ಹೊಳಪು
ಯೌವ್ವನದ ಚೆಲುವಿಗೆ ಬೊಟ್ಟಿಟ್ಟು ನಲಿದಾಗ
ಪರಿಪೂರ್ಣತೆಯ ಸ್ವರವು ಮೊದಲ ಬಾರಿಗೆ ಮೀಟಿದಂತೆ

ನವರಸಗಳು ಕಲೆತಾಗ ಮೂಡುವ ಅಭಿವ್ಯಕ್ತಿಗೆ
ಅನುಭೂತಿಯ ಮೆರುಗು ಹಚ್ಚಿ
ಅನಿರ್ವಚನೀಯತೆಯ ಮಡಿಲಲ್ಲಿ ಮಲಗುವ
ಆನಂದದ ಕೂಸಿನ ಸುಖ ನಿದ್ರೆಯ ಮೆಲುಕು
ಸ್ವಂತಿಕೆಯೇ ಹೊಸ ಜನ್ಮ ತಳೆದು
ನೂತನ ನಾವೆಯಲ್ಲಿ ಹುಟ್ಟು ಹಾಕಿದಂತೆ

ಡೈರಿ - ಪುಟ ೨೭


                    "ಮುಂದಿನ ವಾರ ಲಾಸ್ಯಳ ರಂಗಪ್ರವೇಶವಂತೆ ಕಣೇ. ಹಾಗಂತ ಫೇಸ್ ಬುಕ್ಕಿನಲ್ಲಿ ಹಾಕಿದ್ದಾಳೆ ನೋಡು. ಇನ್ವಿಟೇಷನ್ ಕಾರ್ಡ್ ದು ಫೋಟೋ ಸಹ ಹಾಕಿದ್ದಾಳೆ. ಎಷ್ಟು ಚೆಂದ ಇದೆ ಗೊತ್ತಾ..?? ಅವಳಂತೂ ಭರತನಾಟ್ಯದ ವೇಷ ಭೂಷಣದಲ್ಲಿ ಒಳ್ಳೆ ಅಪ್ಸರೆ ಥರಾ ಕಾಣಸ್ತಾಳೆ." ಹೈಸ್ಕೂಲು ಸ್ನೇಹಿತೆಯ ಫೇಸ್ ಬುಕ್ ಸ್ಟೇಟಸ್ ನೋಡುತ್ತಾ ಕುಳಿತಿದ್ದ ನನ್ನ ರೂಮ್ ಮೇಟ್ ಒಮ್ಮೆಲೇ ಧ್ವನಿ ಎತ್ತಿರಿಸಿ ಹೇಳಿದಳು.
                       "ಓಹ್, ಹೌದಾ..?? ಹೋಗಬೇಕಿತ್ತು ಕಣೇ. ಅವಳು ಅದ್ಭುತವಾಗಿ ಭರತನಾಟ್ಯ ಮಾಡ್ತಾಳೆ. ಹತ್ತನೆಯ ತರಗತಿಯಲ್ಲಿ ಸ್ಕೂಲ್ ಆನ್ಯುವಲ್ ಡೇ ನಲ್ಲಿ ಅವಳ ಡ್ಯಾನ್ಸ್ ನೋಡಿದ್ದೇ ಕೊನೆ. ಆಮೇಲಿಂದ ಅವಳ ಮುಖ ದರ್ಶನವೂ ಆಗಲಿಲ್ಲ." ನನಗೆ ಹೋಗಬೇಕೆಂದು ಬಹಳವೇ ಆಸೆಯಾಯಿತು.
                        "ಅಪ್ಪಿ, ನನಗೂ ಹೋಗಬೇಕೆಂದಿದೆ. ಆದರೆ ಹೇಗೆ ಹೋಗುವುದು..?? ಕಾರ್ಯಕ್ರಮ ಇರುವುದು ಶಿರಸಿಯಲ್ಲಿ. ಅದೂ ಸಹ ಸಂಜೆ ಆರು ಗಂಟೆಗೆ. ಅದರ ಮಾರನೆಯ ದಿನವೇ ನಮಗೆ ಲ್ಯಾಬ್ ಎಕ್ಸಾಮ್ ಇದೆಯಲ್ಲ." ಅವಳು ಹೇಳಿದಾಗ ನನಗೂ ಹೌದೆನಿಸಿತು. ಅವಳು ಮಾತು ಮುಂದುವರೆಸಿದಳು, "ಅಲ್ಲಾ ಕಣೇ, ಅವಳು ಎರಡನೇ ತರಗತಿಯಿಂದಲೇ ಡ್ಯಾನ್ಸ್ ಮಾಡ್ತಾ ಇದಾಳೆ ಅಲ್ವಾ..?? ಅಂದರೆ, ಸುಮಾರು ೧೩-೧೪ ವರ್ಷಗಳಾದವು. ಇಷ್ಟು ವರ್ಷಗಳ ತನಕ ನಡುವೆ ಒಮ್ಮೆಯೂ ಬಿಡದೇ ಅಭ್ಯಾಸ ಮಾಡಿದಳಲ್ಲ. ನಿಜಕ್ಕೂ ಮೆಚ್ಚಬೇಕಾದದ್ದೇ ಅವಳ ಸಾಧನೆಯನ್ನು."
                        "ನೃತ್ಯ ಎಂದರೆ ಒಂದು ಕಲೆ ಕಣೇ. ಅದರಲ್ಲಿ ತೊಡಗಿಸಿಕೊಂಡವರಿಗೆ ಎಂದೂ ಅದರ ಕುರಿತಾಗಿ ಬೇಸರ ಬಾರದು. ಡ್ಯಾನ್ಸ್ ಎಂದರೆ ಕೇವಲ ಅಂಗಾಂಗಗಳನ್ನು ಕುಣಿಸುವುದೆಂದರ್ಥವಲ್ಲ. ಅದು ದೇಹ, ಮನಸ್ಸು ಮತ್ತು ಭಾವನೆಗಳು - ಈ ಮೂರು ಕಲೆತು ಅಂಗಾಂಗಗಳ ಚಲನೆಯ ಮೂಲಕ ಹೊಮ್ಮುವ ಅಂತರಂಗದ ಅಭಿವ್ಯಕ್ತಿ. ಇದೊಂದು ಶಕ್ತಿಯುತವಾದ ಸಂವಹನ ಮಾಧ್ಯಮವೆಂದರೂ ತಪ್ಪಾಗಲಾರದು. ನೃತ್ಯಕ್ಕೆ ವಯಸ್ಸಿನ ಅಂತರವಿಲ್ಲ. ಆಸಕ್ತಿಯಿರುವ ಯಾರೂ ಬೇಕಾದರೂ ಕಲಿಯಬಹುದು. ಡ್ಯಾನ್ಸ್ ಮಾಡುವುದರಿಂದ ಬಹಳಷ್ಟು ಲಾಭಗಳಿವೆ. ಮಾನಸಿಕ ಸಾಮರ್ಥ್ಯ ಹೆಚ್ಚುತ್ತದೆ. ಸಿಟ್ಟು, ಬೇಸರ, ಒತ್ತಡಗಳಿಗೊಳಗಾದ ಸಂದರ್ಭಗಳಲ್ಲಿ ಅವುಗಳಿಂದ ಹೊರಬರಲು ನೃತ್ಯ ಬಹಳವೇ ಸಹಕಾರಿ. ಎಲ್ಲಕ್ಕಿಂತಲೂ ಹೆಚ್ಚಾಗಿ ಅಪರಿಮಿತ ಆನಂದ ದೊರಕುತ್ತದೆ. ಅಂಗ ಸೌಷ್ಟವ ಪ್ರಮಾಣ ಬದ್ಧವಾಗಿರುತ್ತದೆ. ಹೃದಯ, ಶ್ವಾಸಕೋಶಗಳ ಕಾರ್ಯಕ್ಷಮತೆ ಹೆಚ್ಚುತ್ತದೆ. ಈಗಂತೂ ನೃತ್ಯ ಚಿಕಿತ್ಸೆಯೆನ್ನುವುದು ಹಲವಾರು ರೋಗಗಳಿಗೆ ಮದ್ದಾಗಿದೆ. ಇಷ್ಟೆಲ್ಲ ಇರುವ ನೃತ್ಯವನ್ನು ಹಾಗೆಲ್ಲ ಅರ್ಧಕ್ಕೆ ಬಿಡಲಾಗುತ್ತದೆಯೇ..?? ಬಿಟ್ಟರೆ ಅದು ಮೂರ್ಖತನವಾಗುತ್ತದೆ ಅಷ್ಟೇ."
                             "ಅಬ್ಬಾ, ಅವಳು ನೃತ್ಯ ಮಾಡುವುದರಲ್ಲಿ ಪ್ರವೀಣೆಯಾದರೆ ನೀನು ನೃತ್ಯದ ಕುರಿತು ಮಾತನಾಡುವುದರಲ್ಲಿ ಪ್ರವೀಣೆ. ಇದೇ ವಿಷಯದ ಕುರಿತಾಗಿ ಒಂದು ಪ್ರಬಂಧ ಬರಿ. ಪಿ ಎಚ್ ಡಿ ಪುರಸ್ಕಾರ ದೊರೆಯಬಹುದು." ರೂಮ್ ಮೇಟ್ ಅಣಕಿಸುತ್ತಾ ನುಡಿದಳು.


ಇರುವುದೆಲ್ಲವ ಬಿಟ್ಟು (ಭಾಗ - ೩)

                                 

                                  ಒಮ್ಮೆಲೇ ಅಪ್ಪನ ನೆನಪಾಯಿತು. ಅವರ ಬಳಿ ಸಣ್ಣ ಪುಟ್ಟ ಸಂಗತಿಗಳಿಂದ ಹಿಡಿದು ಎಲ್ಲವನ್ನೂ ಬಿಡದೇ ಹೇಳುತ್ತಿದ್ದ ನಾನು ನನ್ನ ಪ್ರೀತಿಯ ಕುರಿತಾಗಿ ಮಾತ್ರ ಏನೂ ಹೇಳಿರಲಿಲ್ಲ. ಅದೇಕೆ ಹಾಗೆ ಮುಚ್ಚಿಟ್ಟೆನೋ ಕಾರಣ ಗೊತ್ತಿಲ್ಲ. ಆದರೆ ಅವತ್ತು ಮಾತ್ರ ನಾಳೆಯೇ ಅಪ್ಪನೊಂದಿಗೆ ಎಲ್ಲವನ್ನೂ ಹೇಳಿಯೇ ಬಿಡಬೇಕೆಂಬ ಆಸೆ ಬಲವಾಯಿತು. ನಾಳೆ ಬೆಳಿಗ್ಗೆ ಮೊದಲು ಈ ಕೆಲಸ ಮಾಡಬೇಕು. ಅಪ್ಪನಿಗೆ ಫೋನ್ ಮಾಡಿ ಒಮ್ಮೆ ಇಲ್ಲಿಗೆ ಬನ್ನಿ ಎಂದರೆ ಬಂದೇ ಬರುತ್ತಾರೆ ಎಂದುಕೊಂಡಾಗ ಏನೋ ಒಂದು ಬಗೆಯ ಸಮಾಧಾನವಾಗಿ ನಿದ್ರೆ ಆವರಿಸಿತು. ಮರುದಿನ ಬೆಳಿಗ್ಗೆ ಅಪ್ಪನೊಂದಿಗೆ ಮಾತನಾಡಲು ಮನೆಯ ನಂಬರ್ ಹುಡುಕುತ್ತಿದ್ದಂತೆಯೇ ಮೊನ್ನೆ ಮೊನ್ನೆಯಷ್ಟೆ ಅಪ್ಪ ಬ್ಯಾಂಕಿನಲ್ಲಿ ಉಂಟಾಗಿರುವ ತಾಪತ್ರಯಗಳ ಕುರಿತು ಹೇಳಿದ್ದು ನೆನಪಾಗಿ ಅವರೇ ಒಂದು ಸಮಸ್ಯೆಯಲ್ಲಿ ಸಿಲುಕಿರುವಾಗ ನನ್ನ ಕಷ್ಟಗಳ ಕುರಿತು ಹೇಳಿ ಅವರ ತಲೆ ಬಿಸಿಯನ್ನು ಇನ್ನೂ ಜಾಸ್ತಿಯಾಗಿಸುವುದು ಸರಿಯಲ್ಲವೆಂದಿನಿಸಿತು. ನಂಬರನ್ನು ಸರ್ಚ್ ಮಾಡಿದರೂ ಬೆರಳುಗಳು ಡಯಲ್ ಕೀಯನ್ನು ಪ್ರೆಸ್ ಮಾಡಲೇ ಇಲ್ಲ. ಮತ್ತೊಮ್ಮೆ ಈಗೇನು ಮಾಡುವುದು ಎಂಬ ಪ್ರಶ್ನೆ ಎದುರು ಸುಳಿದಾಡಿತು. ಏಳು ಸಲ ಢಣ್ ಎಂದು ಬಾರಿಸಿದ ಗಡಿಯಾರ ನನ್ನನ್ನು ಕಾಲೇಜು ಇದೆಯೆಂದು ಎಚ್ಚರಿಸಿತು. ಅಲ್ಲದೇ ಅವತ್ತು ಲ್ಯಾಬ್ ಬೇರೆ ಇತ್ತು. ಹೋಗದೇ ಉಳಿದರೆ ಸುಮ್ಮನೆ ತೊಂದರೆಯಾಗುವುದೆಂದು ಕಾಲೇಜಿಗೆ ಹೋದೆ.
                        ಲ್ಯಾಬ್ ನಲ್ಲಿ ಹೋಗಿ ಕೂರುತ್ತಿದ್ದಂತೆಯೇ ಮತ್ತೆ ಕಪ್ಪು ಚುಕ್ಕೆ ಇನ್ನಷ್ಟು ಢಾಳಾಗಿ ಕಾಣತೊಡಗಿತು. ಕಂಪ್ಯೂಟರ್ ಮುಂದೆ ನಾನು ಕೂತಿದ್ದಷ್ಟೆ. ಮನಸ್ಸು ಮಾತ್ರ ಮಂಕಾಗಿ ಹೋಗಿತ್ತು. ಎದುರಿಗಿನ ಬಿಳಿಯ ಸ್ಕ್ರೀನ್ ಸಹ ಕಪ್ಪಾಗಿ ತೋರಲು ಪ್ರಾರಂಭವಾಯಿತು. ನನಗೇನಾಗುತ್ತಿದೆಯೆನ್ನುವುದು ನನ್ನ ಅರಿವಿಗೆ ನಿಲುಕದಾಯಿತು. ಅವತ್ತು ಅಲ್ಲಿ ಮೂರು ತಾಸು ಹೇಗೆ ಕುಳಿತೆನೋ, ಏನು ಬರೆದೆನೋ ಆ ಕೃಷ್ಣನಿಗೇ ಗೊತ್ತು. ಲ್ಯಾಬ್ ಮುಗಿದ ನಂತರ ಸೀದ ಅಲ್ಲಿಂದ ಹೊರಟು ಹಾಸ್ಟೆಲ್ ಗೆ ಮರಳುವಾಗ ಒಂದಿಬ್ಬರು ಸ್ನೇಹಿತೆಯರು ಕಂಡು ಹಾಯ್ ಎಂದರು. ಇದೀಗ ಹೊಸದೊಂದು ಸಂದೇಹದ ಭೂತ ನನ್ನ ತಲೆಯನ್ನು ಹೊಕ್ಕಿತು. ಅವರು ಮುಗುಳ್ನಕ್ಕ ನಂತರ ನನ್ನ ಹಿಂದಿನಿಂದ ಏನು ಮಾತನಾಡಿಕೊಂಡರೋ. ಅವರಿಗೂ ವಿಷಯ ಗೊತ್ತಾಗಿರಬಹುದಾ..?? ನನ್ನ ಸುತ್ತ ಓಡಾಡುತ್ತಿರುವವರೆಲ್ಲರೂ ನನ್ನ ಬಗ್ಗೆಯೇ ಆಡಿಕೊಳ್ಳುತ್ತಿದ್ದಾರೆನೋ ಎಂಬ ಶಂಕೆ ನನಗೇ ಹುಚ್ಚು ಹಿಡಿಸತೊಡಗಿತು. ರೂಮಿಗೆ ಬಂದವಳೇ ಮತ್ತೆ ಅಳಲು ಪ್ರಾರಂಭಿಸಿದೆ. ಇದೇ ಸ್ಥಿತಿ ಮುಂದಿನ ಹತ್ತು ದಿನಗಳ ತನಕ ಮುಂದುವರೆಯಿತು.
                          ಒಂದೆಡೆ ಓದಿನಲ್ಲಿ ಆಸಕ್ತಿ ಕಡಿಮೆಯಾಗುತ್ತಿರುವುದು, ಇನ್ನೊಂದೆಡೆ ಪ್ರೀತಿಯಿಂದ ಅನುಭವಿಸಬೇಕಾಗಿ ಬಂದಿರುವ ನೋವು, ಅವಮಾನ, ಮತ್ತೊಂದೆಡೆ ಇವುಗಳನ್ನೆಲ್ಲಾ ಯಾರೊಂದಿಗೂ ಹಂಚಿಕೊಳ್ಳಲಾಗದ ಅಸಹಾಯಕತೆ - ಎಲ್ಲವೂ ಜೊತೆಯಾಗಿ ಸೇರಿ ನನ್ನ ಮನಸ್ಸನ್ನು ಕದಡಿ ಮನಶ್ಶಾಂತಿಯನ್ನು ದೂರ ಓಡಿಸಿದ್ದವು. ಒಂದು ಕ್ಷಣ ಕೂಡ ಇಲ್ಲಿರುವುದು ಅಸಹನೀಯವೆನಿಸತೊಡಗಿತು. ಮತ್ತೆಲ್ಲಿಗೆ ಹೋಗುವುದು...?? ಅದೂ ಕಾಲೇಜನ್ನು ಬಿಟ್ಟು. ಇಲ್ಲಿಯೇ ಇದ್ದರೆ ಮಾತ್ರ ಒಂದೋ ಹುಚ್ಚು ಹಿಡಿಯುತ್ತದೆ, ಇಲ್ಲವೇ ಸಾವು ಸೆಳೆಯುತ್ತದೆ ಎಂಬ ಹೆದರಿಕೆ ಜಾಸ್ತಿಯಾಗತೊಡಗಿತು. ಹಾಗಂತ ಓಡಿ ಹೋಗುವುದೆಲ್ಲಿಗೆ..?? ಊರಿಗೆ..?? ಅದಂತೂ ಅಸಾಧ್ಯದ ಮಾತಾಗಿತ್ತು. ಕೇವಲ ಮನೆಯವರಷ್ಟೇ ಅಲ್ಲ, ನಾನೆಂದರೆ ಅತಿ ಪ್ರೀತಿ, ಮಮತೆ, ಹೆಮ್ಮೆಯಿಂದ ಕಾಣುವ ಊರ ಜನರೆಲ್ಲರ ಮುಂದೆ ತಲೆ ಎತ್ತಲಾಗುವುದುಂಟೆ..?? ಹಾಗಂತ ಇಲ್ಲಿ ಇರುವುದಂತೂ ಜೀವಂತ ಶವಕ್ಕೆ ಸಮಾನ.
                        ಪ್ರತಿ ದಿನ ಪ್ರತಿ ಕ್ಷಣವೂ ಇದೇ ಚಿಂತೆ ನನ್ನನ್ನು ಬಾಧಿಸತೊಡಗಿತು. ದಿನೇ ದಿನೇ ಎಲ್ಲಿಗಾದರೂ ಓಡಿ ಹೋಗುವ ಯೋಚನೆ ಬಲವಾಗುತ್ತ ಸಾಗಿತು. ಅದೊಂದು ದಿನ ರಾತ್ರಿ ನನ್ನಲ್ಲೊಳಗೆ ಅದ್ಯಾವ ಭೂತ ಹೊಕ್ಕಿತ್ತೊ ಏನೋ. ನನ್ನ ರೂಮ್ ಮೇಟ್ ಮಲಗಿ ನಿದ್ರಿಸಿದ ಕೂಡಲೇ ನನ್ನ ಬಟ್ಟೆ-ಬರೆಗಳನ್ನು, ಅತಿ ಅವಶ್ಯವೆನಿಸಿದ ವಸ್ತುಗಳನ್ನೆಲ್ಲಾ ದೊಡ್ಡದೊಂದು ಬ್ಯಾಗಿಗೆ ತುಂಬತೊಡಗಿದೆ. ಕಪಾಟಿನಲ್ಲಿ ಬಟ್ಟೆ ರಾಶಿಗಳ ಮಧ್ಯೆ ಬೆಚ್ಚಗೆ ಕುಳಿತಿದ್ದ ಅಪ್ಪ-ಅಮ್ಮನ ಫೋಟೋ ಕಣ್ಣಿಗೆ ಕಂಡಾಗ ಮನಸ್ಸು ಒಮ್ಮೆ ತನ್ನ ಉಸಿರನ್ನೇ ಮರೆತಂತಾಯಿತು. ತಕ್ಷಣವೇ ಆ ಫೋಟೋವನ್ನು ಬದಿಗಿಟ್ಟು ಬೇಗ ಬೇಗನೆ ಪ್ಯಾಕಿಂಗ್ ಕೆಲಸವನ್ನು ಮುಂದುವರೆಸಿದೆ. ಎಲ್ಲ ಮುಗಿಸಿ ಕೂತಾಗ ಗಡಿಯಾರ ೪.೩೦ ಎಂದು ಸಮಯವನ್ನು ತೋರಿಸಿತು. "ದಯವಿಟ್ಟು ನನ್ನೆಲ್ಲ ವಸ್ತುಗಳನ್ನು ಮನೆಗೆ ತಲುಪಿಸುವ ವ್ಯವಸ್ಥೆ ಮಾಡು. ನಾನೆಂದೂ ತಿರುಗಿ ಮತ್ತಿಲ್ಲಿಗೆ ಬರಲಾರೆ." ಎಂದು ಚಿಕ್ಕ ಹಾಳೆಯಲ್ಲಿ ಬರೆದು ರೂಮ್ ಮೇಟ್ ಟೇಬಲ್ ಮೇಲಿಟ್ಟೆ. ಆಗ ಏಕೋ ಅಂದಿನ ನನ್ನ ಸ್ಥಿತಿಗೆ ಪರೋಕ್ಷವಾಗಿ ಕಾರಣನಾದ ಹುಡುಗನಿಗೊಂದು ಪತ್ರ ಬರೆಯಬೇಕೆನ್ನಿಸಿತು. ಅದನ್ನು ಹರಿದು ಹಾಕಬೇಕೆಂದುಕೊಂಡಿದ್ದರೂ ಮನಸ್ಸಾಗದೇ ಹಾಗೆ ಎತ್ತಿ ಡೈರಿಯಲ್ಲಿರಿಸಿದೆ. ಇಷ್ಟೆಲ್ಲವನ್ನೂ ಮಾಡಿ ಮುಗಿಸಿದಾಗ ಬೆಳಗಿನ ಜಾವ ಐದೂ ಮುಕ್ಕಾಲು. ರೂಮಿನಲ್ಲಿದ್ದ ಉಡುಪಿ ಕೃಷ್ಣನ ಮೂರ್ತಿಗೆ ಕೊನೆಯ ಬಾರಿಗೆಂಬಂತೆ ನಮಸ್ಕರಿಸಿ ಲಗೇಜನ್ನೆತ್ತಿಕೊಂಡು ಹಾಸ್ಟೆಲಿನಿಂದ ಹೊರಗೆ ಬಂದೆ. ಬಸ್ ಸ್ಟಾಪ್ ಹತ್ತಿರವಾದಾಗ ಮುಂದೆಲ್ಲಿಗೆ ಹೋಗುವುದು ಎನ್ನುವುದೇ ಪ್ರಶ್ನಾತ್ಮಕ ಚಿಹ್ನೆಯಾಗಿ ಎದುರಿಗೆ ನಿಂತಿತು. ಹಣಕ್ಕೇನೂ ಕೊರತೆಯಿರಲಿಲ್ಲವಾದ್ದರಿಂದ ಎಲ್ಲಾದರೂ ದೂರದ ಊರಿಗೆ ಹೋಗುವುದೇ ಲೇಸೆನಿಸಿ ರೈಲ್ವೆ ಸ್ಟೇಷನ್ನಿಗೆ ಹೋಗುವ ಬಸ್ಸು ಹತ್ತಿ ಕುಳಿತೆ.
                          ಬಸ್ಸು ಮುಂದೆ ಸಾಗಿದಷ್ಟೂ ನನ್ನ ಮನಸ್ಸು ಹಿಂದೆ ಹಿಂದೆ ಓಡುತ್ತಿತ್ತು. ಎಸ್ಸೆಸ್ಸೆಲ್ಸಿ ಫಲಿತಾಂಶ ಬಂದ ಮಾರನೇ ದಿನ ಅಪ್ಪನಿಗೆ ಸಿಕ್ಕಿದ ನಮ್ಮ ಸರ್ ಒಬ್ಬರು ಹೀಗೆ ಹೇಳಿದರೆಂದು ಅಪ್ಪ ಖುಷಿಯಿಂದ ಅಮ್ಮನ ಬಳಿ ಹೇಳಿದ್ದ ಮಾತು ನೆನಪಾಯಿತು. "ನಿಮ್ಮ ಮಗಳು ಸಾಮಾನ್ಯ ಹುಡುಗಿಯಲ್ಲ. ಪ್ರತಿಭೆ, ಪಾಂಡಿತ್ಯ, ವಯಸ್ಸಿಗೆ ಮೀರಿದ ಪ್ರಭುದ್ಧತೆ - ಎಲ್ಲವೂ ದೈವದತ್ತವಾಗಿ ಅವಳಲ್ಲಿವೆ. ಇಂಥ ಮಗಳನ್ನು ಹೆತ್ತ ನೀವು ಬಹಳವೇ ಪುಣ್ಯವಂತರು." ಊರಿನಲ್ಲಿ ಎಲ್ಲರೂ ಹೇಳುತ್ತಿರಲಿಲ್ಲವೇ..?? "ನೀನು ನಿಜಕ್ಕೂ ಜಾಣೆ ಮಗಳೇ. ನಮ್ಮ ಊರಿನ ಹೆಸರು ಇಡೀ ದೇಶಕ್ಕೆ ತಿಳಿಯುವಂತೆ ಮಾಡುತ್ತೀ." ಆದರೆ ಈಗ ನಾನೇನು ಮಾಡಹೊರಟಿದ್ದೇನೆ..?? ಎಲ್ಲಿ ಹೋದವು ನನ್ನ ಪ್ರತಿಭೆ, ಪ್ರಭುದ್ಧತೆಗಳೆಲ್ಲ...?? "ಯಾರ್‍ ರೀ, ಸ್ಟೇಷನ್..??" ಎಂದು ಕಂಡಕ್ಟರ್ ಕೂಗಿದಾಗ ಸ್ಮೃತಿಯ ಲೋಕದಿಂದ ಎಚ್ಚೆತ್ತು ಲಗುಬಗೆಯಿಂದ ಬಸ್ಸಿನಿಂದಿಳಿದೆ. ಸ್ಟೇಷನ್ ಒಳಗಡೆ ಬಂದಾಗ ಮುಂದೆ ಹೋಗುವುದೆಲ್ಲಿಗೆ ಎಂಬ ಪ್ರಶ್ನೆ ಪುನಃ ಎದುರು ನಿಂತಿತು. ವಿಚಾರಣಾ ವಿಭಾಗದಲ್ಲಿ ಕೇಳಿ ನೋಡಿದಾಗ ಇನ್ನು ಹತ್ತು-ಹದಿನೈದು ನಿಮಿಷಗಳಲ್ಲಿ ಪುಣೆಗೆ ಹೋಗುವ ಗರೀಬ್-ನವಾಜ್ ಎಕ್ಸ್ ಪ್ರೆಸ್ ಹೊರಡಲಿದೆಯೆಂದು ತಿಳಿಯುತ್ತಲೇ ಪುಣೆಯ ಟಿಕೇಟನ್ನು ಖರೀದಿಸಿ ಬೆಂಚೊಂದರ ಮೇಲೆ ಕುಳಿತೆ. ಆಗ ತಾನೇ ಬೆಳಗಾಗುತ್ತಿದ್ದ ಹೊತ್ತಾದರೂ ಪ್ರಯಾಣಿಕರಿಂದ ಸ್ಟೇಷನ್ ಗಿಜಿಗುಡುತ್ತಿತ್ತು. ಮಕ್ಕಳು, ವಯಸ್ಕರು, ವೃದ್ಧರು - ಎಲ್ಲರೂ ಎತ್ತಲೋ ಹೊರಟವರು. ಇದೆಲ್ಲವನ್ನೂ ನೋಡುತ್ತಿದ್ದಂತೆ ಅಡಿಗರನ್ನ ನೆನೆಸಿಕೊಂಡ ಮನಸ್ಸು ‘ಇರುವುದೆಲ್ಲವ ಬಿಟ್ಟು’ ಎಂದು ಹಾಡತೊಡಗಿತು. (ಮುಂದುವರೆಯುವುದು)


Monday, 28 April 2014

ಡೈರಿ - ಪುಟ ೨೬


                                       "ದಕ್ಷಿಣ ಕೊರಿಯಾ ಹಡಗು ಮುಳುಗಡೆಯ ನೈತಿಕ ಹೊಣೆ ಹೊತ್ತು ಅಲ್ಲಿನ ಪ್ರಧಾನಿ ಚುಂಗ್ ಹಾಂಗ್ ವಾನ್ ಭಾನುವಾರ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ." ರೂಮ್ ಮೇಟ್ ಬೆಳಂಬೆಳಿಗ್ಗೆಯೇ ದಿನ ಪತ್ರಿಕೆ ಕೈಯ್ಯಲ್ಲಿ ಹಿಡಿದು ಕೂತಿದ್ದಳು. "ನೋಡು, ಅಲ್ಲಿ ಒಂದು ಹಡಗು ಮುಳುಗಿದರೂ ಖುದ್ದು ಪ್ರಧಾನ ಮಂತ್ರಿಗಳೇ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡುತ್ತಾರೆ. ನಮ್ಮ ದೇಶದಲ್ಲಿ ಮಂತ್ರಿಗಳೆಲ್ಲಾ ಹಗರಣಗಳ ಕೊಚ್ಚೆ ಗುಂಡಿಯಲ್ಲಿ ಹೂತು ಹೋಗಿದ್ದರೂ ರಾಜೀನಾಮೆ ಎಂಬ ಪದವೇ ತಿಳಿದಿಲ್ಲವೆಂಬಂತೆ ಆರಾಮಾಗಿ ಪದವಿಯ ಕುರ್ಚಿಯಲ್ಲಿ ಕೂತಿರುತ್ತಾರೆ, ಛೇ." ಅವಳು ಮುಂದುವರೆದು ಹೇಳಿದಳು.
                             "ನಮ್ಮ ದೇಶದಲ್ಲಿ ಕುರ್ಚಿಗೆ ಭಾಳ ಗೌರವವಿದೆ ಕಣೇ. ಎಲ್ಲರಿಗೂ ಅದರ ಮೇಲಿನ ಅಪಾರವಾದದ್ದು. ಒಮ್ಮೆ ಸಿಕ್ಕಿತೆಂದರೆ ಅಷ್ಟೇ ಸಾಕು. ಆ ಕುರ್ಚಿಯನ್ನು ಸುಲಭವಾಗಿ ಬಿಟ್ಟುಕೊಡುವುದೇ ಇಲ್ಲ. ಒಂದೊಮ್ಮೆ ಆಕಸ್ಮಾತಾಗಿ ಬಿಡುಬೇಕಾಗಿ ಬಂದರೂ ಆ ಕುರ್ಚಿ ಬೇರೆ ಯಾರದೋ ಪಾಲಾಗದೇ ತಮ್ಮ ವಂಶಸ್ಥರಲ್ಲಿಯೇ ಉಳಿಯುವಂತೆ ನೋಡಿಕೊಳ್ಳುತ್ತಾರೆ. ಹೀಗಿರುವಾಗ ಇಂಥವರಿಂದ ರಾಜೀನಾಮೆ ಅನ್ನೋದನ್ನೆಲ್ಲಾ ನಿರೀಕ್ಷಿಸೋದು ನಮ್ಮದೇ ತಪ್ಪಲ್ವಾ..?? ಇಷ್ಟು ದೊಡ್ದವರಾದ ಮೇಲೂ ನಾವು ಅಂಥ ತಪ್ಪನ್ನೆಲ್ಲ ಮಾಡಬಾರದು. ಇದು ಕೇವಲ ಪಾಲಿಟಿಕ್ಸ್ ಗೆ ಮಾತ್ರ ಸೀಮಿತವಲ್ಲ. ಬೇಕಾದರೆ ಬಸ್ಸುಗಳಲ್ಲಿ, ಆಸ್ಪತ್ರೆಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ, ಬ್ಯಾಂಕುಗಳಲ್ಲಿ - ಎಲ್ಲ ಕಡೆಯೂ ಇದೇ ಕತೆ. ಸಾಫ್ಟ್ ವೇರ್ ಕಂಪನಿಗಳಲ್ಲಿ ಇನ್ನೂ ಈ ಪದ್ಧತಿ ಬಂದಿಲ್ಲವೆಂದು ತೋರುತ್ತದೆ. ಅದಕ್ಕೆ ಅಲ್ಲಿದ್ದವರು ಬೇಗನೆ ಕುರ್ಚಿಯ ಭಾಗ್ಯ ಕಳೆದುಕೊಳ್ಳುವ ಸಂಭವ ಜಾಸ್ತಿ." ನಾನು ಸಣ್ಣ ಭಾಷಣವನ್ನೇ ಬಿಗಿದೆ.
                             ಅವಳಿಗೆ ನಗು ತಡೆಯಲಾಗಲಿಲ್ಲ. ನಗುತ್ತಲೇ ಹೇಳಿದಳು, "ಹ್ಹ ಹ್ಹ ಹ್ಹಾ ಹ್ಹಾ. ಇದು ಮಾತ್ರ ಸತ್ಯವಾದದ್ದು ನೋಡು. ಈಗ ಸದ್ಯಕ್ಕೆ ಮೇ ೧೬ರ ತನಕ ಕಾಯಬೇಕಾಗಿದೆಯಲ್ಲ. ದೊಡ್ಡ ಕುರ್ಚಿಯ ಮುಂದಿನ ವಾರಸುದಾರರು ಯಾರೆಂದು ತಿಳಿಯಲಿಕ್ಕೆ."


ಆತನಿದ್ದಾನೆಯೇ..??


ನಿಜವಾಗಲೂ ಆತನಿದ್ದಾನೆಯೇ..??
ಎಲ್ಲೋ ಮೇಲೆ ಮೂಲೆಯ ಮರೆಯಲ್ಲಿ
ಹೆಸರಲ್ಲದ ಹೆಸರು ಹೊತ್ತಿರುವ ದೇವರು
ಕಣ್ಣಿಗೆ ಕಾಣಿಸದವ, ಕಿವಿಗೆ ಕೇಳಿಸದವ
ಕಲ್ಪನೆಗಳಿಗೂ ತರ್ಕಗಳಿಗೂ ನಿಲುಕದವ
ಅವನ ಅಸ್ಮಿತೆಯ ಮರ್ಮ ಬಲ್ಲವರಾರು..??

ಕಷ್ಟ ಬಂದಾಗ ಎಲ್ಲರಿಂದ ಪ್ರಾರ್ಥಿಸಲ್ಪಡುವ
ಎಂದಿಗೂ ಕೈಬಿಡುವುದಿಲ್ಲವೆಂಬ ಅಭಯದ
ಪರಿಹಾರದ ಮೂಲವೆಂಬ ಮಹಾನ್ ಶಕ್ತಿ
ಆದರಾತ ಸ್ಪಂದಿಸದೇ ಕುಳಿತರೆ
ಕರೆ ಮೊರೆಗಳಿಗೆ ಕಿವುಡನಾದರೆ
ಭರವಸೆ ಕಳೆದುಕೊಳ್ಳುವುದು ನಮ್ಮ ಭಕ್ತಿ

ಒಮ್ಮೆ ನನ್ನತ್ತ ನೋಡದೇ
ಕಲ್ಲಿನಂತೆ ಕುಳಿತಿಹೆ ನೀನು
ಇಷ್ಟು ಕಠಿಣ ಹೃದಯದವನಾಗಿಹೆ ನೀನೇಕೆ..??
ನಿನ್ನ ಕೃಪೆ ನನ್ನ ಮೇಲಾಗಲು
ಪ್ರಾರ್ಥನೆಯ ಸಂಭಾವನೆಯ ಜೊತೆಗೆ
ಕಣ್ಣೀರಿನ ದಕ್ಷಿಣೆಯನ್ನೂ ಕರುಣಿಸಬೇಕೆ..??

ಗುಡಿ, ಆಲಯಗಳಲ್ಲಿ ಬಂಧಿಸಿ ನಿನ್ನ
ಕಣ್ಣಿಗೆ ಬಟ್ಟೆ ಕಟ್ಟಿ ಕೂರಿಸಿಹರು
ಹೊರಗೆ ಬಂದು ನೋಡೊಮ್ಮೆ ನಿನ್ನ ಕಂದಮ್ಮರನ್ನು
ಸೃಷ್ಟಿಯೊಂದೇ ಅಲ್ಲ
ಸ್ಥಿತಿಯ ಸೂತ್ರಧಾರನೂ ನೀನೇ
ಮರೆಯದೇ ನಿಭಾಯಿಸಬೇಕು ನೀ ನಿನ್ನ ಪಾತ್ರವನ್ನು


Sunday, 27 April 2014

ಡೈರಿ - ಪುಟ ೨೫


                           "ನೋಡೇ, ಆ ರೆಡ್ ಕಲರ್ ಡ್ರೆಸ್ ಹಾಳಾಗಿ ಹೋಯಿತಲ್ಲೆ. ಐದು ನೂರು ರೂಪಾಯಿ ಕೊಟ್ಟು ತಂದಿದ್ದು ಅದು. ಒಂದೇ ಒಂದು ಸಲ ಹಾಕ್ಕೊಂಡಿದ್ದು. ಒಮ್ಮೆಗೆ ವಾಷ್ ಮಾಡುವಷ್ಟರಲ್ಲೇ ಒಳ್ಳೆ ನೆಲ ಒರೆಸುವ ಬಟ್ಟೆಯ ಹಾಗಾಯಿತು." ಭಾಳ ಇಷ್ಟಪಟ್ಟು ಖರೀದಿಸಿದ್ದ ಚೆಂದದ ಚೂಡಿದಾರ್ ಅಂದಗೆಟ್ಟಿದ್ದು ನೋಡಿ ರೂಮ್ ಮೇಟ್ ಅಲವತ್ತುಕೊಳ್ಳುತ್ತಿದ್ದಳು. ನನಗೆ ಅಯ್ಯೋ ಎನಿಸಿತು.
                       "ನಿನಗೆ ನಾನು ಅವತ್ತು ಮಾಲ್ ಗೆ ಹೋಗ್ತಿನಿ ಅಂದಾಗಲೇ ಹೇಳಿದ್ದೆ. ಅಲ್ಲಿ ಬಟ್ಟೆಗಳು ನೋಡಲಿಕ್ಕಷ್ಟೇ ಚೆಂದ, ದುಬಾರಿ ಎನ್ನುವುದರ ಜೊತೆಗೆ ಗುಣಮಟ್ಟ ಕೂಡ ಚೆನ್ನಾಗಿರುವುದಿಲ್ಲ ಎಂದು. ನಿನಗೆ ಯಾಕೋ ಅವತ್ತು ಮಾಲ್ ಭೂತ ತಲೆಯಲ್ಲಿ ಹೊಕ್ಕಿತ್ತು. ನೋಡಲಿಕ್ಕೆ ಕಟ್ಟು ಮಸ್ತಾಗಿದ್ದರೂ ಆಯಸ್ಸು ಕಡಿಮೆ ಇರೋ ಪೈಲ್ವಾನ್ ನಂತಿಹ ಡ್ರೆಸ್ ಅನ್ನು ತಗೊಂಡು ಬಂದೆ." ಅವಳನ್ನೇ ದೂರುತ್ತಾ ಮಾತನಾಡಿದೆ ನಾನು.
                           "ಇದಕ್ಕಿಂತ ಸಣ್ಣ ಸಣ್ಣ ಅಂಗಡಿಗಳಲ್ಲಿ ದೊರೆಯುವ ಬಟ್ಟೆಗಳೇ ವಾಸಿ. ದರವೂ ಕಡಿಮೆಯಿರುತ್ತದೆ. ಬಹಳ ದಿನಗಳ ತನಕ ಬಾಳಿಕೆಯೂ ಬರುತ್ತವೆ. ಅಲ್ಲಾ ಕಣೇ, ಇದೆಲ್ಲ ವಿಷಯ ಜನರಿಗೆ ಗೊತ್ತಿಲ್ಲವಾ..?? ಆದರೂ ಮಾಲ್ ಗಳಿಗೆ ದುಡ್ಡು ಸುರಿಯುತ್ತಾರಲ್ಲಾ..?? ಹೀಗೆಲ್ಲಾ ಮೋಸವಾದರೆ ಕಂಪ್ಲೇಂಟ್ ಮಾಡೋದಿಲ್ವಾ..??"
                           "ಮಾಲ್ ನ ಕ್ಲಾಥ್ಸ್ ಅಂದ್ರೆ ಎಲ್ಲಾರಿಗೂ ಒಂಥರಾ ಕ್ರೇಜ್. ಅವುಗಳನ್ನು ಧರಿಸಿ ತಮಗೇನೋ ಭಾರತರತ್ನ ಬಂದಂತೆ ಬೀಗುವವರೆಷ್ಟಿಲ್ಲ..?? ಅಂಥವರಿಗೆಲ್ಲಾ ಬಾಳಿಕೆಯ ಬಗ್ಗೆ ಯೋಚನೆಯಿರುವುದಿಲ್ಲ. ಬಟ್ಟೆ ಬ್ರಾಂಡೆಡ್ ಆದರಾಯಿತು. ಎಷ್ಟು ಹಣ ತೆತ್ತಾದರೂ ಮಾಲ್ ನಲ್ಲಿಯೇ ಖರೀದಿಸುತ್ತಾರೆ. ಏನಾದರೂ ಮೋಸವಾದರೆ ಹೊಸದೊಂದು ಬಟ್ಟೆ ಖರೀದಿಸುತ್ತಾರೆಯೇ ಹೊರತು ದೂರು ನೀಡುವ ಕೆಲಸಕ್ಕೆ ಹೋಗುವುದಿಲ್ಲ. ಇಂಥವರಿಂದಾಗಿ ಸಣ್ಣ ಸಣ್ಣ ವ್ಯಾಪಾರಿಗಳಿಗೆ ಭಾರಿ ಹೊಡೆತ ಬೀಳುತ್ತದೆ. ಆದರೂ ತಮಗೆ ಸಿಗುವ ಕಮೀಷನ್ನಿಗೋಸ್ಕರ ದೇಶದಲ್ಲಿ ಸರ್ಕಾರ ಮಾಲ್ ಗಳಿಗೆ ಮುಕ್ತ ಮಾರುಕಟ್ಟೆಯನ್ನು ನಿರ್ಮಿಸಿಕೊಟ್ಟಿದೆ. ಬಡ ವ್ಯಾಪಾರಿಗಳ ಗೋಳನ್ನು ಕೇಳುವವರಿಲ್ಲ. ನೀನೊಮ್ಮೆ ಭಾರತ್ ಮಾಲ್ ಸಿನೆಮಾ ನೋಡು. ಅಲ್ಲಿ ಇದೆಲ್ಲವನ್ನೂ ಚೆಂದವಾಗಿ ಚಿತ್ರಿಸಿದ್ದಾರೆ."


Saturday, 26 April 2014

ಸೋಲು


ನನ್ನೊಳಗೆ ನಾ ಇಳಿಯುತ್ತಲಿದ್ದರೂ
ಹೃದಯ ಎತ್ತರದಲ್ಲಿ ರೆಕ್ಕೆ ಬಿಚ್ಚಿ ಹಾರಿದಂತೆ
ಮನಸು ಭಾವಗಳ ಕೊಳದ ಆಳದಲ್ಲಿದ್ದರೂ
ಕನಸುಗಳು ಕಲ್ಪನೆಗಳ ಬೇಲಿ ದಾಟಿ
ಮೋಹದ ಮೇಘಗಳ ಮೇಲೆ ಪಯಣಿಸಿದಂತೆ

ಎತ್ತ ಕೊಂಡೊಯ್ಯುತಿದೆ ನನ್ನನಿದು..??
ಮೈಮನವನ್ನಾವರಿಸಿಹ ನಿನ್ನ ಮಾಯೆ
ಕದ್ದೊಯ್ದಿದೆ ನನ್ನ ಉಸಿರಿನ ಬಿಸಿಯನ್ನು
ನಿನ್ನ ಮೇಲಿನ ಹಸಿ ಪ್ರೀತಿಯ ಹುಚ್ಚು
ಅಪರಿಚಿತಳಾಗಿಹೆನಲ್ಲ ನನಗೆ ನಾನೇ

ಇನ್ನೆಷ್ಟು ಕಾಲ ಹೀಗೆ ಬಚ್ಚಿಡಲಿ ನಾನು..??
ನಿನ್ನೊಲವಿಗೆ ನಾ ಸೋತಿದ್ದು ಸುಳ್ಳೇನು..??
ಸೋಲಿನ ಸವಿ ಉಣ್ಣದೆ ದೊರೆಯುವುದೇ ಪ್ರೀತಿ
ಅದರ ಸಿಹಿ ಅರಿವಾದಾಗಿನ ಅನುಭೂತಿ
ಅದಲ್ಲವೇ ನಿಜವಾದ ಗೆಲುವಿನ ರೀತಿ


ಡೈರಿ - ಪುಟ ೨೪


                        "ಈ ಕೊಪ್ಪಿಕರ್ ರೋಡಿನಲ್ಲಿ ಒಳ್ಳೆ ಫಜೀತಿ ಮಾರಾಯ್ತಿ. ಇವತ್ತು ಸಿನೆಮಾ ನೋಡಿ ವಾಪಸ್ಸು ಅಲ್ಲಿಂದ ಬರುವಷ್ಟರಲ್ಲಿ ಸಾಕು ಬೇಕಾಯಿತು." ರೂಮಿನೊಳಗೆ ಕಾಲಿಡುತ್ತಲೇ ಹಣೆ ಸಿಂಡರಿಸಿಕೊಂಡು ಹೇಳಿದಳು ನನ್ನ ರೂಮ್ ಮೇಟ್.
                     "ಯಾಕೆ..?? ಏನಾಯಿತು..?? ಯಾವುದಾದರೂ ಹುಡುಗ ಬೆನ್ನು ಹತ್ತಿದ್ದನಾ..?? ಪ್ರೊಪೋಸ್ ಮಾಡಿ ನನ್ನನ್ನೇ ಮದುವೆ ಆಗು ಎಂದು ಗೋಳು ಹೊಯ್ದುಕೊಂಡನಾ..??" ಬೇಕೆಂತಲೇ ಅವಳನ್ನು ಕೆಣಕಿದೆ.
                     "ನಿನಗೆ ತಮಾಷೆಗೆ ಹೊತ್ತು ಗೊತ್ತು ಇಲ್ಲ ನೋಡು. ಅವತ್ತೊಂದಿನ ನೀನೇ ಹೇಳಿದ್ದೆ ನೆನಪಿದೆಯಾ..?? ಯು ಮಾಲ್ ಗೆ ಹೋಗುತ್ತಿದ್ದಾಗ ೨-೩ ಸಣ್ಣ ಸಣ್ಣ ಮಕ್ಕಳು ಚಿಲ್ಲರೆ ಹಣಕ್ಕಾಗಿ ಬೆನ್ನು ಹತ್ತಿದ್ದರೆಂದು. ಇವತ್ತು ನನಗೂ ನನ್ನ ಸ್ನೇಹಿತರಿಗೂ ಅವರಿಂದ ತಪ್ಪಿಸಿಕೊಂಡು ಬಿಡುವಷ್ಟರಲ್ಲಿ ಅಯ್ಯಪ್ಪಾ ಎನ್ನಿಸಿಬಿಟ್ಟಿತು. ಅಲ್ಲಾ ಕಣೇ, ಅವರೆಲ್ಲ ಏಳೋ ಎಂಟೋ ವರ್ಷ ವಯಸ್ಸಿನ ಮಕ್ಕಳು. ತಮ್ಮ ಸುಂದರ ಬಾಲ್ಯದ ಜೊತೆಗೆ ಮೂಲಭೂತ ಹಕ್ಕಾದ ಶಿಕ್ಷಣದಿಂದಲೂ ವಂಚಿತರಾಗುತ್ತಾರಲ್ಲಾ,  ಅಂಥ ಬಡ ಮಕ್ಕಳಿಗೋಸ್ಕರ ಸರ್ಕಾರ ಏನು ಸಹಾಯ ಮಾಡುವುದಿಲ್ಲವಾ..?? ಹೋಗಲಿ, ಬೇರೆ ಯಾವುದಾದರು ಸಂಘ ಸಂಸ್ಥೆಗಳೂ ಸಹ ಅವರ ಕುರಿತು ಕಾಳಜಿ ವಹಿಸುವುದಿಲ್ಲವಾ..?? ಪಾಪ ಕಣೇ."
                      "ಸರ್ಕಾರವೇನೋ ತಮ್ಮ ಇಲಾಖೆಯಿಂದ ಬಡ ಮಕ್ಕಳಗಾಗಿ ಹಣ ಬಿಡುಗಡೆ ಮಾಡಿದರೂ ಅದು ಅವರ ಕೈ ತಲುಪುವ ಹೊತ್ತಿಗೆ ಖಾಲಿಯಾಗಿರುತ್ತದೆ. ಅದಲ್ಲದೇ ನಮ್ಮ ಸರ್ಕಾರಗಳು ಎಲ್ ಕೆ ಜಿ, ಯು ಕೆ ಜಿ ಶಿಕ್ಷಣಕ್ಕಾಗಿ ಲಕ್ಷಗಟ್ಟಲೇ ಡೋನೇಷನ್ ಪಡೆಯುವ ಸಂಘ ಸಂಸ್ಥೆಗಳಿಗೆ ಎಲ್ಲಾ ತರಹದ ಅನುಕೂಲತೆಯನ್ನೂ ಮಾಡಿಕೊಡುತ್ತವೆ. ಯಾಕೆಂದರೆ ತಮಗೂ ಡೋನೇಷನ್ ಅಲ್ಲಿ ಪಾಲು ಸಿಗುತ್ತದಲ್ಲಾ. ಬಡ ಮಕ್ಕಳ ಕಲ್ಯಾಣಕ್ಕಾಗಿ ಹೊರಟವರಿಗೆ ಸಹಾಯ ಮಾಡಿದರೆ ಸರ್ಕಾರಕ್ಕೇನೂ ದೊರೆಯುತ್ತದೆ..?? ಆದರೂ ಹಲವಾರು ಎನ್ ಜಿ ಓ ಗಳು ಈ ಕೆಲಸದಲ್ಲಿ ತಮ್ಮನ್ನು ತಾವು ಪ್ರಾಮಾಣಿಕವಾಗಿ ತೊಡಗಿಸಿಕೊಂಡಿದ್ದಾರೆ. ಆದರೆ ಅವುಗಳ ಕುರಿತು ಸರಿಯಾದ ಮಾಹಿತಿ ಎಲ್ಲರಿಗೆ ಗೊತ್ತಿಲ್ಲ. ಅದೊಂಥರಾ, ಆ ಕಡೆ ದಡವಿದೆ. ಈ ಕಡೆ ನದಿ ದಾಟಬೇಕಾದ ಪ್ರಯಾಣಿಕನಿದ್ದಾರೆ. ಆದರೆ ನದಿ ದಾಟಿ ದಡವನ್ನು ಸೇರುವುದು ಅವರಿಗೆ ತಿಳಿದಿಲ್ಲ. ಸೇರಿಸುವವರೂ ಯಾರು ಇಲ್ಲ."


Friday, 25 April 2014

ಇರುವುದೆಲ್ಲವ ಬಿಟ್ಟು (ಭಾಗ - ೨)
                            " ನಾನು ಇದು ಮೂರನೇ ಸಲ ಬೇರೆಯವರ ಬಾಯಿಂದ ಕೇಳ್ತಾ ಇರೋದು ಕಣೇ. ವಿಷಯ ಬಹಳ ಜನಕ್ಕೆ ಗೊತ್ತಾಗಿರಬೇಕು. ನೀನು ಯಾರೆಂದು ಕೂಡ ತಿಳಿಯದ ನನ್ನ ತರಗತಿಯ ಇಬ್ಬರು ಹುಡುಗಿಯರು ಇವತ್ತು ನಿನ್ನ ಬಗ್ಗೆ ಚರ್ಚಿಸುತ್ತಿದ್ದುದು ಕಿವಿಗೆ ಬಿತ್ತು. ಏನು ಮಾತನಾಡಿಕೊಳ್ಳುತ್ತಿದ್ದರೆನ್ನುವುದು ಸ್ವಷ್ಟವಾಗಲಿಲ್ಲ. ಆದರೆ ವಿಷಯ ಏನೆಂದು ಮಾತ್ರ ಖಚಿತವಾಯಿತು." ಮೆಸ್ಸಿನಲ್ಲಿ ಊಟ ಮಾಡುತ್ತಿದ್ದಾಗ ರೂಮ್ ಮೇಟ್ ಈ ಮಾತುಗಳನ್ನು ಹೇಳುತ್ತಿದ್ದಂತೆಯೇ ಗಂಟಲಿನಲ್ಲಿದ್ದ ಅನ್ನದ ತುತ್ತು ಒಳಗಿಳಿಯದೇ ಅಲ್ಲೇ ಸಿಕ್ಕಿಹಾಕಿಕೊಂಡಂತಾಯಿತು. ಅದನ್ನು ಹೇಗೋ ನೀರು ಕುಡಿಯುತ್ತ ನುಂಗಿದರೂ ಉಳಿದ ಅನ್ನವನ್ನು ಬಾಯಿಗೆ ಹಾಕಲು ಬಲಗೈಗೆ ಶಕ್ತಿ ಸಾಲದಾಯಿತು. ಹಾಗೆಯೇ ಕಲಸುತ್ತಾ ಕಲೆಯುತ್ತಾ ಕುಳಿತೆ. ಅವಳು ಕಾಲೇಜಿನ ಕುರಿತಾಗಿ ಇನ್ನೂ ಹತ್ತು ಹಲವು ವಿಷಯಗಳನ್ನು ಹೇಳುತ್ತಿದ್ದರೂ ಮೊದಲು ಕೇಳಿದ ಸುದ್ದಿ ನನ್ನ ಕಿವಿಗಳನ್ನು ಕೆಪ್ಪಗಾಗಿಸಿತ್ತು. ಅಷ್ಟೊಂದು ಜನರಿಗೆ ಹೇಗೆ ಗೊತ್ತಾಗಲು ಸಾಧ್ಯ ಎನ್ನುವ ಪ್ರಶ್ನೆಯೊಂದೇ ತಲೆಯನ್ನು ಕೊರೆಯತೊಡಗಿತು. ಹಾಗೇ ಅವಳ ಮಾತುಗಳಿಗೆ ಕಿವಿಯನ್ನು ಮುಚ್ಚಿಕೊಂಡು ಕುಳಿತಿರುವುದು ಅಸಾಧ್ಯವೆನಿಸಿದಾಗ, "ನೀನು ಊಟ ಮುಗಿಸಿ ಬಾ. ನಾನು ರೂಮಿಗೆ ಹೋಗಿರುತ್ತೇನೆ." ಎಂದು ಹೇಳಿ ಪ್ರತಿಕ್ರಿಯೆಗೂ ಕಾಯದೇ ಎದ್ದು ಕೈ ತೊಳೆದುಕೊಂಡು ರೂಮಿಗೆ ಬಂದೆ.
                             ಅದು ಹೇಗೆ ತಾನೇ ಅಷ್ಟೊಂದು ಜನರಿಗೆ ಗೊತ್ತಾಗಲಿಕ್ಕೆ ಸಾಧ್ಯ..?? ಅದು ಕೂಡ ಕಹಿ ಘಟನೆಗಳೆಲ್ಲಾ ಮುಗಿದ ಕತೆಗಳು, ಈಗ ಎಲ್ಲವೂ ಸರಿಯಾಗಿದೆಯೆಂದು ನಾನು ಅಂದುಕೊಂಡಿರುವಾಗ ಮತ್ತೆ ಇದ್ಯಾವ ಸಮಸ್ಯೆ ಹುಟ್ಟಿಕೊಂಡಿತು..?? ಯೋಚಿಸಿದಂತೆ ತಲೆ ಸಿಡಿಯುತ್ತಿರುವ ಅನುಭವವಾಯಿತು. ಹೃದಯ ಬಿಗಿ ಹಿಡಿದುಕೊಂಡಂತಾಗಿ ಭಾರವಾಯಿತು. ಕೂರುವುದು ಅಸಾಧ್ಯವೆನಿಸಿ ಹಾಗೆಯೇ ಹಾಸಿಗೆಗೆ ಒರಗಿಕೊಂಡೆ. ನಿಧಾನವಾಗಿ ಕಣ್ಣಂಚುಗಳಲ್ಲಿ ನೀರು ತುಂಬಿಕೊಳ್ಳತೊಡಗಿತು. ನಾನೆಷ್ಟು ಪ್ರಯತ್ನ ಮಾಡಿದರೂ ಸಫಲವಾಗದೇ ಕೆನ್ನೆಗಳ ಮೇಲಿನಿಂದ ಹನಿಗಳು ಕೆಳಗಿಳಿಯತೊಡಗಿದವು. ಅಂದರೆ ಇಡೀ ಕಾಲೇಜು ನನ್ನ ಬಗ್ಗೆ ಆಡಿಕೊಳ್ಳುವಂತಾಗಿದೆಯೇ..?? ಅಯ್ಯೋ ಕೃಷ್ಣಾ, ಇದೇನಾಗಿ ಹೋಯಿತು..?? ಹೀಗಾದರೆ ನಾನು ಕ್ಯಾಂಪಸ್ಸಿನಲ್ಲಿ ಹೇಗೆ ತಾನೇ ತಲೆ ಎತ್ತಿ ಓಡಾಡಲಿ..?? ಕೊನೆಗೂ ನನ್ನ ಬದುಕಿನಲ್ಲೊಂದು ಕಪ್ಪು ಚುಕ್ಕೆ ಮೂಡಿತಲ್ಲ. ಹೊಟ್ಟೆಯಲ್ಲಿದ್ದ ಅನ್ನವೂ ನನ್ನ ಬಗ್ಗೆ ಆಡಿಕೊಳ್ಳುತ್ತಿದೆಯೇನೋ ಎನ್ನುವಂತೆ ಒಡಲೊಳಗೆ ಸಂಕಟವಾಗತೊಡಗಿತು. ಅಳು ಇನ್ನೂ ಜೋರಾಗಿ ಒತ್ತರಿಸಿಕೊಂಡು ಬಂತು. ಬೇರೆಯವರಿಗೆ ಕೇಳಿಸಬಾರದೆಂದು ಮೌನವಾಗಿ ಬಿಕ್ಕಳಿಸುತ್ತ ಮಲಗಿದವಳಿಗೆ ನಿದ್ರಾದೇವಿಯ ವಶವಾಗಿದ್ದು ಅರಿವಿಗೆ ಬರಲಿಲ್ಲ.
                          " ಈ ಹುಡುಗನೇಕೆ ನನಗಿಷ್ಟು ಅತಿಯಾಗಿ ಇಷ್ಟವಾಗುತ್ತಿದ್ದಾನೆ..?? ಅವನೇನೂ ನನ್ನ ಮಾವನ ಮಗನಲ್ಲ. ಸುರ ಸುಂದರಾಂಗನೂ ಅಲ್ಲ. ಆದರೂ ದಿನದಿಂದ ದಿನಕ್ಕೆ ನನ್ನ ಹೃದಯಕ್ಕೆ ಹತ್ತಿರವಾಗುತ್ತಿದ್ದಾನಲ್ಲ." ಕಳೆದೆರಡು ದಿನಗಳಿಂದ ಮನಸ್ಸು ಅವನ ಧ್ಯಾನದಲ್ಲೇ ಮುಳುಗಿತ್ತು. ಹುಡುಗರು ಇಂಥವರು ಇರಬಹುದೆನ್ನುವ ನಂಬಿಕೆ ಇಲ್ಲದಿದ್ದವಳಿಗೆ ಅವನ ಮಾತು, ಯೋಚನೆ, ನಡತೆಗಳೆಲ್ಲವೂ ಹೊಸದಾಗಿದ್ದವು. ನನಗೆ ಬಹಳಷ್ಟು ಹುಡುಗರು ಸ್ನೇಹಿತರಿದ್ದರೂ ಈತ ಬಹಳವೇ ಭಿನ್ನನಾಗಿ ತೋರಿದ್ದ. ಅವನ ಜೊತೆಯ ಸ್ನೇಹ ಅದ್ಯಾವ ಕ್ಷಣದಲ್ಲಿ ಪ್ರೀತಿಯಾಗಿ ಮಾರ್ಪಟ್ಟಿತೋ ಆ ಕೃಷ್ಣನಿಗೂ ತಿಳಿದಿರಲಾರದು. ಅವನಿಗೆ ವಿಷಯ ಗೊತ್ತಾದಾಗ ಅದೆಷ್ಟು ಪ್ರಬುದ್ಧತೆಯಿಂದ ನನ್ನ ಬಳಿ ವರ್ತಿಸಿದ್ದ. ಎಲ್ಲವನ್ನೂ ಹೇಳಿಕೊಂಡ ನನಗೇ ಅವನೊಂದಿಗೆ ಮಾತನಾಡಲು ಏನೋ ಒಂದು ಬಗೆಯ ಮುಜುಗರವಾಗುತ್ತಿತ್ತು. ಆದರೆ ಅವನೇ ತಾನೇ ಫೀಲ್ ಫ್ರೀ ಎನ್ನುತ್ತಾ ತಲ್ಲಣಗೊಂಡಿದ್ದ ನನ್ನ ಮನಸ್ಸನ್ನು ಶಾಂತವಾಗಿಸಿದ್ದು..?? ಮನದ ಮಾತನ್ನು ಬಿಚ್ಚಿ ಹೇಳಿಕೊಂಡ ಮೇಲೆಯೇ ನಾವಿಬ್ಬರೂ ಬಹಳ ಹತ್ತಿರವಾಗಿದ್ದೆವು. ಮುಂದಿನ ಒಂದು ವರುಷ ಎಲ್ಲವೂ ಎಷ್ಟು ಸುಂದರವಾಗಿತ್ತು. ಎಂಥ ಸಂದರ್ಭದಲ್ಲೂ ಒಬ್ಬರನ್ನೊಬ್ಬರು ಬಿಡಲಾರೆವೆಂಬ ನಂಬಿಕೆ ಇಬ್ಬರಲ್ಲಿತ್ತು. ಪ್ರೀತಿಯಲ್ಲಿ ಇದಕ್ಕಿಂತ ಹೆಚ್ಚಾಗಿ ಇರಬೇಕಾದದ್ದೇನಿದೆ..??
                    ಆದರೆ ಆಮೇಲೆ ಅದೇನಾಗಿ ಹೋಯಿತು..?? ನನಗೆ ಹಾಗೇಕಾಯಿತೆನ್ನುವುದು ಈಗಲೂ ತಿಳಿದಿಲ್ಲ, ತಿಳಿಯುವಂತೆಯೂ ಇಲ್ಲ. ಸಡನ್ ಆಗಿ ಆತ ಮಾತು ನಿಲ್ಲಿಸಿಬಿಟ್ಟ. ಫೋನು, ಮೆಸೇಜುಗಳಿಗೂ ಉತ್ತರ ಬರದಾಯಿತು. ಒಮ್ಮೆಗೊಮ್ಮೆಗೇ ಆತ ಹೀಗೇಕೆ ವರ್ತಿಸುತ್ತಿದ್ದಾನೆಂದೇ ನನಗೆ ಅರ್ಥವಾಗಲಿಲ್ಲ. ನಾನು ಅದೆಷ್ಟು ಬಾರಿ ಸಂಪರ್ಕಿಸಲು ಪ್ರಯತ್ನಿಸಿದೆನೋ ಲೆಕ್ಕಕ್ಕಿಲ್ಲ. ಆದರೆ ಫಲಿತಾಂಶ ಮಾತ್ರ ಶೂನ್ಯವೇ ಆಯಿತು. ಆ ಸಮಯದಲ್ಲಿ ನನ್ನ ದಿಂಬು ಒದ್ದೆ ಆಗದ ದಿನಗಳೇ ಇರಲಿಲ್ಲ. ಇದೇ ಸಮಯದಲ್ಲಿ ಆತನ ಸ್ನೇಹಿತರು ಕಾಲೇಜಿನಲ್ಲಿ ನಾನು ಕಂಡಾಗಲೆಲ್ಲ ಅವನ ಹೆಸರು ಕೂಗಲಾರಂಭಿಸಿದರು. ದಿನದಿಂದ ದಿನಕ್ಕೆ ಇದು ವಿಪರೀತಕ್ಕಿಟ್ಟುಕೊಂಡಿತು. ಇದೆಲ್ಲ ಹುಡುಗಾಟಿಕೆಯ ಕುರಿತೂ ಅವನಿಗೆ ತಿಳಿದಿದ್ದರೂ ಆತ ಮೌನ ಮಾತ್ರ ಮುರಿಯಲಿಲ್ಲ. ಆಮೇಲೆ ಇದ್ದಕ್ಕಿದ್ದಂತೆ ಒಮ್ಮೆಗೆ ಎಲ್ಲವೂ ನಿಂತು ಹೋಯಿತು. ಕೊನೆಗೂ ಒಂದು ದಿನ ಆತ ಮಾತಿಗೆ ಸಿಕ್ಕಿದ. ಪ್ರೀತಿಯ ಸಂಬಂಧಕ್ಕೆ ಸ್ನೇಹದ ತೇಪೆ ಹಚ್ಚಿದ ಆತನ ಕುರಿತು ನನಗೆ ಬೇಸರವಾದರೂ ತೋರ್ಪಡಿಸದೇ ಹೃದಯದ ಒಳಗಿನ ಪ್ರೀತಿಯನ್ನು ನಿಧಾನವಾಗಿ ಕೊಲ್ಲಬೇಕಾಗಿ ಬಂತು. ಆದರೆ ಈಗ ಏನಾಗಿದೆ..?? ಅಷ್ಟು ಪ್ರಬುದ್ಧನೆಂದುಕೊಂಡಿದ್ದ ಆತನೇ ಇಂದು ನನ್ನ ಹೆಸರ ಮೇಲೆ ಕೆಸರು ಚೆಲ್ಲಿ ಹಾಕಿದನಲ್ಲಾ..??
                               ಥಟ್ಟನೆ ಎಚ್ಚರವಾಯಿತು. ಕಣ್ಣುಜ್ಜುತ್ತಾ ಕುಳಿತಾಗ ಥೂ ಕನಸಿನಲ್ಲೂ ಹಳೆಯ ನೆನಪುಗಳೇ ಬರಬೇಕೆ ಎಂದು ಕಿರಿಕಿರಿಯಾಯಿತು. ನಿದ್ದೆಯಿಂದ ಪೂರ್ತಿ ಎಚ್ಚರವಾಗಿ ರೂಮ್ ಮೇಟ್ ಮುಖ ನೋಡುತ್ತಿದ್ದಂತೆಯೇ ಅವಳಾಡಿದ ಮಾತುಗಳು ನೆನಪಾಗಿ ಮತ್ತೆ ಬೇಸರದ ಮೋಡ ಕವಿದರೂ ತೋರ್ಪಡಿಸದೇ ಮುಖ ತೊಳೆದುಕೊಳ್ಳುವಾಗ ಇದೆಲ್ಲವನ್ನೂ ಬದಿಗೆ ಹಾಕಿ ಮನಸ್ಸನ್ನು ರಿಲ್ಯಾಕ್ಸ್ ಮಾಡಿಕೊಳ್ಳಬೇಕು ಎಂದು ನಿರ್ಧರಿಸಿ ಸ್ವಲ್ಪ ನಾರ್ಮಲ್ ಆಗಿರಲು ಪ್ರಯತ್ನಿಸಿದೆ. ಮುಂದಿನ ಮೂರು-ನಾಲ್ಕು ದಿನಗಳು ಮನಸ್ಸು ಶಾಂತವಾಗಿಯೇ ಇತ್ತು. ಅವತ್ತೊಂದು ದಿನ ರಾತ್ರಿ ನನ್ನ ಸೀನಿಯರ್ ಗೆಳೆಯನೊಬ್ಬ ಮೆಸೇಜು ಮಾಡಿದಾಗ ಹೇಳಿದ ಸತ್ಯ ನನ್ನ ತಲೆಯನ್ನು ತಿರುಗಿಸಿತು.
                         "ಹೇಯ್, ನಿನ್ನ ಪ್ರೇಮ ಪುರಾಣ ನಮ್ಮ ಸ್ನೇಹಿತರಿಗೆಲ್ಲಾ ಗೊತ್ತಾಗಿದೆ. ಮೊನ್ನೆ ಯುನಿವರ್ಸಿಟಿ ಫೆಸ್ಟ್ ಗೆ ಹೋದಾಗ ಈ ವಿಷಯ ಗೊತ್ತಾಯಿತು."
                        "ನಾನಂತೂ ನನ್ನ ೨-೩ ಸ್ನೇಹಿತೆಯರು ಬಿಟ್ಟು ಮತ್ಯಾರಿಗೂ ಹೇಳಿಲ್ಲ. ಅದು ಹೇಗೆ ನಿಮ್ಮ ಬ್ಯಾಚ್ ನವರಿಗೆ ಗೊತ್ತಾಗಲು ಸಾಧ್ಯ..??"
                          "ಏನೋ, ನನಗೆ ಗೊತ್ತಿಲ್ಲ. ನೋಡು, ನೀನು ಮಾಡಿದ ಒಂದು ತಪ್ಪಿನಿಂದ ಇಡೀ ಕಾಲೇಜಿನಲ್ಲಿ ನಿನ್ನ ಬಗ್ಗೆ ಬ್ಯಾಡ್ ಇಂಪ್ರೆಷನ್ ಬರೋ ಹಾಗಾಯ್ತು"
                          "ತಪ್ಪು..?? ನಾನೇನು ತಪ್ಪು ಮಾಡಿದ್ದೇನೆ..?? ಅವನನ್ನು ಪ್ರೀತಿಸಿದ್ದು ತಪ್ಪಾ..??"
                          " ಹೌದು ಮತ್ತೆ. ಅವನಿಗೆ ಇಷ್ಟವಿಲ್ಲದಿದ್ದರೂ ಅವನ ಹಿಂದೆ ಬಿದ್ದದ್ದು ತಪ್ಪು."
                          " ಹಲೋ, ನಾನ್ಯಾವತ್ತೂ ಅವನ ಹಿಂದೆ ಬಿದ್ದಿಲ್ಲ. ಅವನಾಗಿಯೇ ಮಾತು ಬಿಟ್ಟರೂ ನನಗಾದ ಬೇಸರವನ್ನು ಯಾರೆದುರೂ ತೋರ್ಪಡಿಸದೇ ಒಳಗೊಳಗೇ ನೋವು ಅನುಭವಿಸಿದವಳು ನಾನು. ಯಾವತ್ತೂ ಅವನ ಕಾಲಿಗೆ ಬಿದ್ದು ಪ್ರೀತಿಸೆಂದು ಬೇಡಿಕೊಂಡಿಲ್ಲ." ನನಗೆ ತುಸು ಸಿಟ್ಟು ಬಂತು.
                         " ಏನೋ ಬಿಡು. ಮುಗಿದ ಕತೆ ಅದು. ಈಗ್ಯಾಕೆ ಸುಮ್ಮನೆ ಹಳೆಯದರ ಕುರಿತು ಮಾತು..??"
                          ನನಗೆ ನಿಜಕ್ಕೂ ಬೇಸರವಾಗಿತ್ತು. ಸ್ನೇಹಿತನೆನಿಸಿಕೊಂಡವನೇ ಹೀಗೆ ಹೇಳಿದರೆ..?? ಇವನೊಬ್ಬನೇ ಅಲ್ಲ, ಇನ್ನು ೨-೩ ಸ್ನೇಹಿತರೂ ತಪ್ಪೆಲ್ಲ ನನ್ನದೇ ಎನ್ನುವಂತೆ ಮಾತನಾಡಿದ್ದರು. ಛೇ, ಇವರನ್ನೆಲ್ಲ ಸ್ನೇಹಿತರು ಎಂದು ಭಾವಿಸಿದ್ದು ನನ್ನದೇ ತಪ್ಪು. ಇವರ ಮಾತಿಗೆಲ್ಲ ತಲೆ ಕೆಡಿಸಿಕೊಂಡರೆ ಆಯಿತು ಕತೆ ಎಂದುಕೊಂಡು ಇನ್ನೊಂದು ವಾರದಲ್ಲಿ ಬರಲಿದ್ದ ಇಂಟರ್ನಲ್ಸ್ ಗೆ ಓದೋಣವೆಂದುಕೊಂಡು ಪುಸ್ತಕವನ್ನು ತೆರೆದೆ. ನೆಟ್ಟಗೆ ಎರಡು ಪುಟ ಓದಿರಲಿಲ್ಲ. ಸ್ನೇಹಿತ ಹೇಳಿದ್ದ ಮಾತು ನನ್ನ ಏಕಾಗ್ರತೆಯನ್ನು ಹಾಳು ಮಾಡಿತು. " ನೋಡು, ನೀನು ಮಾಡಿದ ಒಂದು ತಪ್ಪಿನಿಂದ..." ನಾನೇನು ತಪ್ಪು ಮಾಡಿದೆ..?? ಹೋಗಲಿ, ಅಲ್ಲಿ ತಪ್ಪು ಎನ್ನುವಂಥದ್ದು ಏನಾಗಿದೆಯೆಂದು ಇವರೆಲ್ಲರೂ ಹೀಗೆ ಹೇಳುತ್ತಿರುವುದು..?? ಮೊದಲು ನನ್ನ ಪ್ರೀತಿಯ ಬಗ್ಗೆ ತಿಳಿದಾಗ ನನಗೆ ಸಪೋರ್ಟ್ ಮಾಡಿದವರು ಇವರೇ ಅಲ್ಲವೇ..?? ಈಗ ಏಕೆ ಹೀಗೆ ವಿರೋಧ ಪಕ್ಷದಲ್ಲಿ ನಿಂತಿದ್ದಾರೆ..?? ಯೋಚಿಸಿದಷ್ಟೂ ಮನಸ್ಸು ಬಾಡತೊಡಗಿತು. ಪುಸ್ತಕ ಯಾವಾಗಲೋ ಮುಚ್ಚಿಹೋಗಿತ್ತು. ನಿಮಿಷಗಳು ಸರಿದಂತೆ ಕಣ್ಣುಗಳು ತುಂಬಿದವು. ಮತ್ತೆ ಅಳು ಬಂತು. ಹೊಟ್ಟೆಯ ಹಸಿವನ್ನೂ ಮರೆಸುವಂಥ ಅಳು ಕರುಳಿನಿಂದ ಒದ್ದುಕೊಂಡು ಬರುತ್ತಿತ್ತು. ಎರಡು ತಾಸುಗಳ ಕಾಲ ಪೂರ್ತಿಯಾಗಿ ಅತ್ತರೂ ಮನಸ್ಸು ತಹಬದಿಗೆ ಬರಲಿಲ್ಲ. ಆದರೆ ಕಣ್ಣು ನೋಯುತ್ತಿತ್ತು, ತಲೆ ಸಿಡಿಯುತ್ತಿತ್ತು. ಈಗ ಸುಮ್ಮನೆ ಮಲಗುವುದು ಲೇಸೆಂದು ಹಾಸಿಗೆಗೆ ಮೈ ಚಾಚಿದರೆ ನಿದ್ರೆಯೂ ಬಳಿಗೆ ಸುಳಿಯಲಿಲ್ಲ. ಕಣ್ಣ ಮುಂದೆ ಕಪ್ಪು ಚುಕ್ಕೆಯೊಂದು ಬೃಹದಾಕಾರ ತಳೆದು ನಿಂತಂತೆ ತೋರುತ್ತಿತ್ತು. ಸ್ನೇಹಿತರೇ ನನ್ನನ್ನು ಅರಿತುಕೊಳ್ಳುವುದಿಲ್ಲವೆಂದಾದರೆ ನನ್ನ ನೋವು, ಅವಮಾನ, ಹತಾಶೆಗಳ ಕುರಿತು ಯಾರ ಬಳಿ ಹೇಳಿಕೊಳ್ಳಲಿ..?? (ಮುಂದುವರೆಯುವುದು)


Thursday, 24 April 2014

ಸಂಭಾಷಣೆ


ಪದಗಳಾಗದ ಭಾವಗಳನ್ನು
ಕಣ್ಣಿನ ದೃಷ್ಟಿ ಸೆರೆ ಹಿಡಿಯುತ್ತಲಿ
ಮಾತುಗಳಾಗದ ಸ್ವರಗಳನ್ನು
ಕರ್ಣದ ಪದರವು ಆಹ್ವಾದಿಸುತ್ತಿದೆ
ನಿಶ್ಶಬ್ದದ ನೀರವತೆಯ ಮೌನದಲ್ಲೂ
ಹೊಮ್ಮಿದೆ ಸುಪ್ತ ಸಂಭಾಷಣೆಯ ನಾದ

ಮೈ ಸೋಕುವ ಗಾಳಿಯ ತಂಪಿನಲ್ಲಿ
ನಿಟ್ಟುಸಿರಿನ ಭಾಷೆ ಬಿಗಿದಪ್ಪಿದಂತೆ
ಬಿಸಿಯುಸಿರಿನ ಅಕ್ಷರಗಳ ಸೌರಭವು
ನರನಾಡಿಗಳಲ್ಲಿ ಮೂಡಿನಿಂತಾಗ
ಹೊಸದಾದ ವರ್ಣಮಾಲೆಯೊಂದು
ಹೃದಯದ ಪುಟಗಳಲ್ಲಿ ದಾಖಲಾದಂತೆ

ಬಳೆಗಳ ರಾಗದಲ್ಲಿ ಗೆಜ್ಜೆಯ ತಾಳವೂ ಸೇರಿ
ಹೊಮ್ಮುವ ಸಂಗೀತಕ್ಕೆ ಶ್ರೋತ್ರಿಯೇಕೆ ಇನ್ನು
ಹೆಜ್ಜೆಗೂ ಆವರಿಸಿದಂತಿದೆ ಲಜ್ಜೆ
ಸಪ್ಪಳವಿಲ್ಲದೇ ನಡೆಯುತ್ತಿದೆ ಮನಸು
ಒಳಗಿನ ಮಾತು ಕತೆಗಳಿಗೆ ಭಂಗಬರದಂತೆ
ಶಾಂತತೆಯ ರಾಯಭಾರಿ ತಾನೆನ್ನುತ್ತ

ನೆನಪುಗಳ ಬುತ್ತಿಯನ್ನು ತೆಗೆದಾಗ
ಅರಳಿ ನಿಲ್ಲುವ ಕತೆಗಳ ಗುಚ್ಛದಲ್ಲಿ
ಪಾತ್ರಗಳೇ ಜೀವವಾಗಿ ನುಡಿಯುವಾಗ
ಸುತ್ತಲ ಪ್ರಪಂಚವೆಲ್ಲ ಎತ್ತಲೂ ದೂರವಾಗಿ
ಸ್ಮೃತಿಯ ಕೊಡೆಯನ್ನು ಹೊತ್ತು
ಕನಸಿನ ಮಳೆಯಲ್ಲಿ ಸಂಭಾಷಿಸುವ ಆಸೆ


Wednesday, 23 April 2014

ಡೈರಿ - ಪುಟ ೨೩

                                "ಲೇ ಏನ್ ಗೊತ್ತಾ..?? ಮೊನ್ನೆ ಒಬ್ಬಳು ಬೆಂಗಾಲಿ ಹುಡುಗಿ ಫೇಸ್ ಬುಕ್ ನಲ್ಲಿ ಪರಿಚಯ ಆಗಿದಾಳೆ ಅಂತ ಹೇಳಿದ್ದೆನಲ್ಲಾ, ಅವಳಿಗೆ ನಾನು ಕನ್ನಡದಲ್ಲಿ ಬರೆಯುವುದನ್ನು ಕೇಳಿ ಬಹಳ ಖುಷಿಯಾಯಿತಂತೆ. ಅದಕ್ಕೆ ಅವಳೀಗ ಕನ್ನಡ ಕಲಿಯಲಿಕ್ಕೆ ಹೊರಟಿದ್ದಾಳೆ. ಕನ್ನಡ ಕಲಿತು ನನ್ನ ಬರಹಗಳನ್ನು ಓದುತ್ತಾಳಂತೆ. ಹುಡುಗಿ ಪರವಾಗಿಲ್ಲ ಅಲ್ಲವೇನೇ..??" ಅವಳು ಕನ್ನಡ ಕಲಿಯುತ್ತೇನೆಂದು ಹೇಳಿದ್ದು ನನಗೆ ತುಂಬಾನೇ ಸಂತಸ ತಂದಿತ್ತು. ನನ್ನ ಮಾತಿನಲ್ಲಿ ಅದು ವ್ಯಕ್ತವಾಗುತ್ತಿತ್ತು.
                              "ಅವಳು ಹೇಳಿದ್ದು ಕೇಳಿ ರೈಟರ್ ಅಮ್ಮಾವ್ರಿಗೆ ದಿಲ್ ಖುಷ್ ಆಗಿರ್ಬೇಕಲಾ..?? ಅವಳು ಹೇಳಿದ್ದು ನಿಜಕ್ಕೂ ಪ್ರಶಂಸೆ ಮಾಡಬೇಕಾದ್ದೆ ನೋಡು. ಕನ್ನಡ ಮಾತ್ರ ಭಾಷೆಯಾಗಿರೊ ಮಂದಿನೇ ಇವತ್ತು ಕನ್ನಡದಲ್ಲಿ ಮಾತನಾಡಲ್ಲ. ಕನ್ನಡವೆಂದರೆ ಏನೋ ಒಂದು ಬಗೆಯ ಅಸಡ್ಡೆ ಅವರಿಗೆಲ್ಲಾ. ಅವತ್ತು ಇಲೆಕ್ಷನ್ ದಿನ ಮನೆಯಲ್ಲಿ ನ್ಯೂಸ್ ಚಾನೆಲ್ ಒಂದರಲ್ಲಿ ಮೈಸೂರ್ ಲೋಕಸಭಾ ಕ್ಷೇತ್ರದ ಬಗ್ಗೆ ಚರ್ಚೆ ನಡೀತಾ ಇತ್ತು. ವಿವಿಧ ಪಕ್ಷಗಳ ಪ್ರತಿನಿಧಿಯಾಗಿ ಕೆಲವು ಗಣ್ಯ ವ್ಯಕ್ತಿಗಳು ಪಾಲ್ಗೊಂಡಿದ್ದರು. ಅಲ್ಲಿ ನಮ್ಮ ಕನ್ನಡ ಚಿತ್ರರಂಗದ ನಟಿ ಮಣಿಯೊಬ್ಬಳೂ ಇದ್ದಳು. ಆ ಪುಣ್ಯಾತ್ಗಿತ್ತಿ ಬರೇ ಇಂಗ್ಲಿಷಿನಲ್ಲಿ ಮಾತನಾಡಿದಳು ಗೊತ್ತಾ..?? ತಾನು ಕುಳಿತಿರುವುದು ಕನ್ನಡದ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಅನ್ನುವಷ್ಟು ಸೆನ್ಸ್ ಇಲ್ಲದೇ ಹೋಯಿತು ಅವಳಿಗೆ. ಹಾಗಿರೋವಾಗ ಬೆಂಗಾಲಿ ಹುಡುಗಿ ಕನ್ನಡ ಕಲಿಯಲು ಹೊರಟಿರುವುದು ಮೆಚ್ಚಬೇಕಾದ ವಿಷಯವೇ."
                               "ಇಂದಿನ ತಾಂತ್ರಿಕ ಯುಗದಲ್ಲಿ ಉತ್ತಮ ಆರ್ಥಿಕ ವ್ಯವಸ್ಥೆಯನ್ನು ಹೊಂದಿ ಜೀವನ ಸಾಗಿಸಲು ಇಂಗ್ಲಿಷ್ ಖಂಡಿತ ಬೇಕು. ಹಾಗಂತ ಮಾತೃ ಭಾಷೆಯನ್ನು ಮರೆಯಲಿಕ್ಕೆ ಆದೀತೇ..?? ಅದರಲ್ಲೂ ಕನ್ನಡದಂಥ ಭಾಷೆ ಮಾತೃಭಾಷೆಯಾಗಿ ದೊರಕಲಿಕ್ಕೆ ಪುಣ್ಯ ಮಾಡಿರ್ಬೇಕು. ಇದನ್ನೆಲ್ಲಾ ಅವರಿಗೆ ತಿಳಿ ಹೇಳೋರು ಯಾರು..?? ಅದರಲ್ಲೂ ದೊಡ್ಡ ಜನ ಎನ್ನಿಸಿಕೊಂಡವರೆ ಕನ್ನಡ ಬೆಳೆಯಲು ಬಿಡುತ್ತಿಲ್ಲ. ಎಷ್ಟೋ ಸಂಖ್ಯೆಯಲ್ಲಿ ಸಾಮಾನ್ಯ ಜನರು ಕನ್ನಡಕ್ಕಾಗಿ ತಮ್ಮ ಕೈಲಾದ ಅಳಿಲು ಸೇವೆ ಮಾಡ್ತಿದಾರೆ. ಹೊರ ನಾಡಿನ ಜನರು ಕನ್ನಡ ಕಲಿಯಲಿಕ್ಕೆ ಇಷ್ಟ ಪಡ್ತಾರೆ. ಹೆಸರಿಗೆ ಕನ್ನಡದವರು ಎನ್ನುವವರೇ ಕನ್ನಡವನ್ನು ದೂರ ಮಾಡ್ತಾ ಇದಾರೆ."
                            "ಬಿಡು, ಉಳಿದವರ ಕತೆ ಏನೇ ಇರಲಿ. ನಾನು ನೀನಂತೂ ಕನ್ನಡದ ದೋಸ್ತಿಯನ್ನು ಬಿಡದಿದ್ದರಾಯಿತು. ನಮ್ಮ ಜೊತೆಯವರೂ ಬಿಡದೇ ಇರುವಂತೆ ಮಾಡಿದರಾಯಿತು. ಈಗ ಒಮ್ಮೆ ಜೋರಾಗಿ ಹೇಳೋಣ ಬಾ. ಸಿರಿಗನ್ನಡಂ ಗೆಲ್ಗೆ" ರೂಮ್ ಮೇಟ್ ಕೈ ಮೇಲೆತ್ತಿ ಜೋರಾಗಿ ಹೇಳಿದಾಗ ನನಗೆ ನಗು ತಡೆಯಲಾಗಲಿಲ್ಲ.


ಡೈರಿ - ಪುಟ ೨೨


                                      ಅಂತೂ ಇಂತೂ ಇಂಟರ್ನಲ್ಸ್ ಮುಗೀತು. ಇನ್ನು ಕನಿಷ್ಠವೆಂದರೂ ೩-೪ ದಿನಗಳ ಮಟ್ಟಿಗೆ ಹಾಯಾಗಿರಬಹುದು ಎಂದು ಕಾಲೇಜಿನಿಂದ ವಾಪಸ್ಸು ಬಂದು ಊಟ ಮುಗಿಸಿದವಳೇ ಕೈಯ್ಯಲ್ಲಿ ಪುಸ್ತಕವೊಂದನ್ನು ಹಿಡಿದು ಕುಳಿತೆ. ಅದು ವ್ಯಾಸರಾಯ ಬಲ್ಲಾಳರ ಹೆಜ್ಜೆ ಕಾದಂಬರಿ. ಮೂರನೇ ಬಾರಿಗೆ ಓದಲು ಪ್ರಾರಂಭಿಸಿದ್ದೆ. ಹತ್ತು ನಿಮಿಷ ಕಳೆಯುವುದರೊಳಗಾಗಿ ಒಮ್ಮೆಲೇ ಯಾರೋ ಧಡಧಡನೇ ಬಾಗಿಲು ಬಡಿಯುತ್ತಿರುವುದು ಗಮನಕ್ಕೆ ಬಂತು. ತೆಗೆದು ನೋಡಿದರೆ ಬೇರೆ ಯಾರೂ ಅಲ್ಲ, ನಮ್ಮ ರೂಮ್ ಮೇಟ್ ರಾಣಿ. ನನ್ನ ಕೈಯ್ಯಲ್ಲಿ ಕಾದಂಬರಿಯನ್ನು ಕಂಡಳೇನೋ. ಒಳಗೆ ಬರುತ್ತಿದ್ದಂತೆಯೇ ಅವಳ ಮಾತು ಬಂತು.
                               "ಓಹ್, ನೀನು ಕಾದಂಬರಿಯಲ್ಲಿ ಮುಳುಗಿ ಹೋಗಿದ್ದೆಯಾ..?? ಕಳೆದ ಐದು ನಿಮಿಷಗಳಿಂದ ಬಾಗಿಲು ಬಡೀತಾ ಇದೀನಿ. ತೆಗೆಯದೇ ಇದ್ದದ್ದು ನೋಡಿ ನಾನಂದುಕೊಂಡೆ ನೀನು ಮಲಗಿರುವೆಯೇನೋ ಎಂದು. ನೋಡಿದರೆ ಅಮ್ಮಾವ್ರು ಕಾದಂಬರಿಯಲ್ಲಿ ಮುಳುಗಿ ಹೋಗಿದ್ದಾರೆ. ಅದೆಷ್ಟು ಪುಸ್ತಕಗಳನ್ನ ಓದ್ತೀಯಾ ಮಾರಾಯ್ತಿ..?? ಬೋರು ಬರುವದಿಲ್ಲವಾ..?? ನನಗಂತೂ ಒಂದು ಕಾದಂಬರಿ ಓದಿ ಮುಗಿಸುವಷ್ಟರಲ್ಲಿ ಸಾಕು ಬೇಕಾಗಿರುತ್ತದೆ. ನಿನಗೆ ಪುಸ್ತಕ ಕೈಯ್ಯಲಿದ್ದರೆ ಸಾಕು. ಪ್ರಪಂಚ ಮರೆತು ಹೋಗುತ್ತದೆ. ಕಳ್ಳನೊಬ್ಬ ಬಂದು ಬೇರೆ ವಸ್ತುಗಳನ್ನು ಕದಿಯುವುದಿರಲಿ, ನಿನ್ನನ್ನೇ ಹೊತ್ತುಕೊಂಡು ಹೋದರೂ ನಿನಗೆ ಅರಿವಾಗುವುದಿಲ್ಲ. ಅಂಥಾ ಪರಿ ಓದುವಂಥದ್ದು ಏನು ಇರತ್ತೆ ಪುಸ್ತಕಗಳಲ್ಲಿ..??"
                           "ಪುಸ್ತಕಗಳಲ್ಲಿ ಏನು ಇರುವುದಿಲ್ಲ ಹೇಳು..?? ಎಲ್ಲವೂ ಇರುತ್ತದೆ. ‘ರವಿ ಕಾಣದ್ದನ್ನು ಕವಿ ಕಂಡ’ ಎಂದು ಸುಮ್ಮನೆ ಗಾದೆ ಮಾಡಿಲ್ಲ. ಪುಸ್ತಕಗಳಲ್ಲಿ ಒಂದು ಸುಂದರ ಮನಸಿದೆ, ಬಣ್ಣ ಬಣ್ಣದ ಕನಸುಗಳಿವೆ, ಅಲ್ಲೊಂದು ಹೊಸ ಪ್ರಪಂಚವಿದೆ, ಹೊಸದೊಂದು ಊರು, ಪಟ್ಟಣಗಳಿವೆ. ನನ್ನಂತೆ ನಿನ್ನಂತೆ ಸಾಮಾನ್ಯ ಜನರಿದ್ದಾರೆ. ಅವರ ಬದುಕಿನ ಕತೆಯಿದೆ. ದಿನ ನಿತ್ಯದ ಬದುಕಿನಲ್ಲಿ ನಮ್ಮ ಕಣ್ಣಿಗೆ ಕಾಣದ ಎಷ್ಟೋ ಸಂಗತಿಗಳು ಪುಸ್ತಕಗಳಲ್ಲಿ ದಾಖಲಾಗಿರುತ್ತವೆ. ಅವು ನಮ್ಮನ್ನು ಅಳಿಸುತ್ತವೆ, ನಗಿಸುತ್ತವೆ. ನಮಗೆ ಸ್ಫೂರ್ತಿ ನೀಡುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಪುಸ್ತಕಗಳು ನಮಗೆ ಉತ್ತಮ ಗೆಳೆಯನಾಗುತ್ತವೆ. ಜೀವನ ಪರ್ಯಂತ ನಮ್ಮ ಜೊತೆಗಿರುತ್ತವೆ. ಇದು ಒಂದು ಸತ್ಯ ಸಾಕಲ್ಲವೇನೇ ಪುಸ್ತಕಗಳನ್ನು ಪ್ರೀತಿಸಲು..?? ನನಗಂತೂ ಪುಸ್ತಕವೆಂದರೆ ಮೊದಲನೆಯ ಗಂಡ ಇದ್ದ ಹಾಗೆ." ನಾನು ನಗುತ್ತಾ ನುಡಿದೆ.
                              "ಅದೂ ನಿಜ ಅನ್ನು. ಮತ್ತೆ ಮೂರು ಗಂಟು ಹಾಕುವವನಿಗೆ ಎರಡನೆಯ ಗಂಡನ ಸ್ಥಾನವಾ..?? ಪಾಪ."
                               "ಮೂರು ಗಂಟಿನ ವಿಷಯ ಸದ್ಯಕ್ಕೆ ಬದಿಗಿರಲಿ. ಇವತ್ತು ವಿಶ್ವ ಪುಸ್ತಕ ದಿನಾಚರಣೆ. ಅದರ ಸಲುವಾಗಿಯಾದರೂ ನೀನು ಒಂದು ಪುಸ್ತಕವನ್ನು ಓದು. ದೇವರು ಒಳ್ಳೆಯದು ಮಾಡುತ್ತಾನೆ."


ಡೈರಿ - ಪುಟ ೨೧


                                            "ಅಬ್ಬಬ್ಬಾ, ನನ್ನ ಮೂಗು ಕೊಳೆತು ಹೋಗೋದೊಂದು ಬಾಕಿ ಇತ್ತು ನೋಡು." ಆಕ್ಷಿ ಹೊಡೆಯುತ್ತಲೇ ಹೇಳಿದಳು ನನ್ನ ರೂಮ್ ಮೇಟ್. "ಯಾಕೆ..?? ಏನಾಯ್ತು..??" ಆಕೆಯನ್ನು ಗೋಳುಹೊಯ್ದುಕೊಂಡು ತಮಾಷೆ ಮಾಡುವ ಮೂಡಿನಲ್ಲಿದ್ದರೂ ಪೂರ್ತಿ ವಿಷಯವನ್ನು ತಿಳಿಯುವುದು ಲೇಸೆಂದು ಪ್ರಶ್ನಿಸಿದೆ. "ಎಕ್ಸಾಮ್ ಹಾಲ್ ನಲ್ಲಿ ನನ್ನ ಪಕ್ಕ ಇವತ್ತು ಕೂತಿದ್ದ ಅದ್ಯಾರೋ ಜೂನಿಯರ್ ಹುಡುಗಿ ಸೆಂಟ್ ಬಾಟಲಿನಲ್ಲಿ ಮುಳುಗೆದ್ದು ಬಂದಿದ್ಲು ಅಂತ ಕಾಣ್ಸತ್ತೆ. ಅದೆಷ್ಟು ಸ್ಮೆಲ್ಲು ಮಾರಾಯ್ತಿ. ಮೊದಲೇ ನನಗೆ ಏನೂ ಬರೆಯಲಿಕ್ಕೆ ಬರ್ತಾ ಇರ್ಲಿಲ್ಲ. ಯಪ್ಪಾ, ನನಗೆ ಎಕ್ಸಾಮ್ ಬರೆಯುವುದು ಹೋಗಲಿ, ಒಂದೂ ಕಾಲು ಗಂಟೆ ಅವಳ ಪಕ್ಕ ಕೂರುವುದು ಕಷ್ಟ ಆಯ್ತು." ಎನ್ನುತ್ತಲೇ ಮತ್ತೊಮ್ಮೆ ಸೀನಿದಳು.
                                 "ಹ್ಹ ಹ್ಹಾ ಹ್ಹಾ ಹ್ಹಾ, ಹೋಗಿ ಹೋಗಿ ಅವಳು ನಿನ್ನ ಪಕ್ಕದಲ್ಲೇ ಬಂದು ಕೂರಬೇಕಾ ಮಾರಾಯ್ತಿ..?? ಮೊದಲೇ ನಿನ್ನ ಮೂಗಿಗೂ ಸ್ಮೆಲ್ಲಿಗೂ ಇಂಡಿಯಾ-ಪಾಕ್ ನಂತಹ ದ್ವೇಷ. ಮೋಸ್ಟ್ಲಿ ನೀನು ಇವತ್ತು ಎದ್ದ ಘಳಿಗೆ ಸರಿ ಇರ್ಲಿಲ್ಲಾ ಅಂತ ಕಾಣ್ಸತ್ತೆ. ಹೋಗ್ಲಿ ಬಿಡು. ನಿನ್ನ ಮೂಗಿಗೆ ಒಮ್ಮೆ ಡೆಟಾಲ್ ಹಾಕಿ ಸ್ನಾನ ಮಾಡಿಸು. ಎಲ್ಲಾ ಸರಿ ಹೋಗತ್ತೆ."
                               "ಬೆಕ್ಕಿಗೆ ಆಟ, ಇಲಿಗೆ ಪ್ರಾಣ ಸಂಕಟ ಅಂದ ಹಾಗಾಯ್ತು. ಒಣಾ ತಮಾಷೆ ನಿಂದು. ಅವಳು ಸೆಂಟ್ ಒಂದೇ ಹಾಕಿರ್ಲಿಲ್ಲ. ಒಳ್ಳೆ ಮದುವಣಿಗಿತ್ತಿ ಥರ ರೆಡಿ ಆಗಿದ್ಲು. ಅಲ್ಲಾ ಕಣೇ, ಎಕ್ಸಾಮ್ ಬರೆಯಲಿಕ್ಕೆ ಬರುವಾಗಲೂ ಅಷ್ಟೊಂದು ಅಲಂಕಾರ ಬೇಕಾ ಅಂತಾ. ಅಲ್ಲಿ ಯಾರು ತಾನೇ ನಮ್ಮ ಅಂದ ಚಂದ ನೋಡ್ತಾರೆ. ಹುಡುಗಿಯರಿಗೆ ಅಷ್ಟಾದರೂ ಸಾಮಾನ್ಯ ಜ್ಞಾನ ಬೇಡವಾ..??"
                        " ಎಲ್ಲರಿಗೂ ನಿನ್ನಷ್ಟು ಜ್ಞಾನ ಇಲ್ಲ ಮಾರಾಯ್ತಿ. ಎಲ್ಲರಿಗೂ ಹೇಗೆ ತಾನೇ ಗೊತ್ತಿರಬೇಕು ಎಲ್ಲಿ, ಯಾವಾಗ, ಹೇಗೆ ಇರಬೇಕೆನ್ನುವುದು..?? ಅದೂ ಅಲ್ಲದೇ ಅಂದ ಚೆಂದಗಳಿಗೆ ಇದೇ ವಯಸ್ಸು ತಾನೇ. ಮಾಡಿಕೊಳ್ಳಲಿ ಬಿಡು. ನೀನೇನೋ ಅಷ್ಟು ಸೆಂಟ್ ಹಾಕಿದ್ದನ್ನು ತಡೆದುಕೊಂಡೆಯೆಂದು ನಾಳೆ ಅವಳನ್ನ ಮದುವೆ ಆಗುವ ಗಂಡು ತಡೆದುಕೊಳ್ಳಲಿಲ್ಲವೆಂದರೆ ಅವಳು ಸೆಂಟ್ ಹಾಕುವುದನ್ನೇ ಬಿಟ್ಟಾಳು.  ಇದೇ ಹುಡುಗಿಯರ ಕತೆ ಅಲ್ಲವಾ..?? ಮದುವೆ ಆದಮೇಲೆ ಅರ್ಧಕ್ಕರ್ಧ ವೇಷಗಳಿಗೆ ಕತ್ತರಿ ಬೀಳುತ್ತದೆಂದು ಈಗಲೇ ಎಲ್ಲವನ್ನೂ ಮಾಡೋದು. ಅವಳ ವಿಷ್ಯ ಬಿಡು. ಮೊದಲು ನೀನು ನಿನ್ನ ಸೀನನ್ನು ಸಂಭಾಳಿಸು. ಇಲ್ಲವೆಂದರೆ ಇವತ್ತು ನಿದ್ದೆ ಮಾಡೋದು ಕಷ್ಟವಾದೀತು."


ಇರುವುದೆಲ್ಲವ ಬಿಟ್ಟು (ಭಾಗ -೧)

                  
              "ಹುಡುಗಾ, ಇದು ನನ್ನ ಜೀವನದಲ್ಲಿ ನಿನ್ನ ಪಾತ್ರದ ಕಟ್ಟ ಕಡೆಯ ಅಂಕವೆಂದುಕೊ. ಈ ಒಂದು ಪತ್ರ ಬರೆದು ಹರಿದು ಹಾಕಿದ ಮೇಲೆ ಪುನಃ ನಿನ್ನ ಕುರಿತು ಯೋಚನೆಯನ್ನೂ ಸಹ ನಾನು ಮಾಡಲಾರೆ. ನೀನು ನನ್ನ ಪಾಲಿಗೆ ಸತ್ತು ಹೋದೆಯೆಂದುಕೊಂಡರೆ ತಪ್ಪಾಗುತ್ತದೆ. ಯಾಕೆಂದರೆ ಸತ್ತವರ ಕುರಿತಾಗಿನ ನೆನಪುಗಳು ಕಾಡುತ್ತವೆ. ನನಗೆ ನಿನ್ನ ನೆನಪುಗಳೂ ಸಹ ಬೇಡವಾಗಿವೆ. ನನ್ನ ಜೀವನದಲ್ಲಿ ನೀನು ಪ್ರವೇಶಿಸಲೇ ಇಲ್ಲ ಎಂದುಕೊಳ್ಳುತ್ತಾ ಭೂತವನ್ನೇ ಬದಲಾಯಿಸಿ ಭವಿಷ್ಯದ ಕಡೆ ಹೆಜ್ಜೆ ಹಾಕಬೇಕೆಂದುಕೊಂಡಿದ್ದೇನೆ.
               ಈ ಪತ್ರ ಬರೆಯಲು ಕಾರಣವಿದೆ. ನಿನ್ನಲ್ಲಿ ನಾನು ಕೇಳಬೇಕಾದ ಹಲವು ಪ್ರಶ್ನೆಗಳು ಹಾಗೇ ಬಾಕಿ ಉಳಿದಿವೆ. ನಾನು ನಿನ್ನನ್ನು ಪ್ರೀತಿಸಿದ್ದೆ ತಾನೇ..?? ನಿನಗೆ ಗೊತ್ತಿಲ್ಲವೆಂದರೆ ಮತ್ತೊಮ್ಮೆ ಕೊನೆಯದಾಗಿ ಹೇಳುತ್ತೇನೆ. ನಾನು ನಿನ್ನನ್ನು ಮನಸಾರೆ ಪ್ರೀತಿಸಿದ್ದೆ. ನಿನ್ನೊಂದಿಗೆ ನನ್ನ ಬದುಕು ಸಾಗಲೆಂದು ಬಯಸಿದ್ದೆ. ಹಾಗಂತ ನಿನ್ನ ಬಳಿ ನನ್ನ ಪ್ರೀತಿಯನ್ನು ನಾನು ಹೇಳಿಕೊಂಡಿದ್ದು ಮಾತ್ರವೇ ಹೊರತು ನನ್ನನ್ನು ನೀನು ಪ್ರೀತಿಸಲೇಬೇಕೆಂದು ನಿನ್ನ ಬೆನ್ನು ಬಿದ್ದಿದ್ದೆನಾ..?? ನನ್ನ ಈ ಏಕ ಮುಖ ಪ್ರೀತಿ ನಿನಗೇನಾದರೂ ತೊಂದರೆಯನ್ನುಂಟು ಮಾಡಿತ್ತೇ..?? ನೀನು ನನಗೆಷ್ಟು ನೋವು, ದುಃಖ ನೀಡಿದರೂ ಅದನ್ನೆಲ್ಲ ಬದಿಗೊತ್ತಿ ನಿನಗಾಗಿ ಕಾದು ಕೂತಿದ್ದೆನಲ್ಲವೇ..?? ನೀನೇ ತಾನೇ ಹೇಳಿದ್ದು, "ಮೊದಲು ಓದು ಮುಗಿಲಿ. ಆಮೇಲೆ ಆ ಬಗ್ಗೆ ಯೋಚಿಸೋಣ" ಎಂದು. ಅದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆಗಾಗಿ ಕಾದು ಕುಳಿತಿದ್ದೆ ನಾನು ನನ್ನ ಪಾಡಿಗೆ.
                         ಆದರೆ ನೀನೇನು ಮಾಡಿದೆ..?? ನಿನಗಿಷ್ಟ ಬಂದಷ್ಟು ದಿನ ಚೆನ್ನಾಗಿಯೇ ಇದ್ದು ಆಮೇಲೆ ಬಳಸಿ ಮುಗಿದ ಪೆನ್ನಿನ ರೀಫಿಲಿನಂತೆ ನನ್ನನ್ನು ಕಸದ ಬುಟ್ಟಿಗೆ ಎಸೆದೆಯಲ್ಲಾ. ಏನು ತಪ್ಪು ಮಾಡದಿದ್ದರೂ ನನ್ನ ಹೆಸರು ಕೆಡಿಸಿ ಹಾಕಿದೆಯಲ್ಲಾ. ಹಾಗೆ ಮಾಡಲು ನಿನ್ನಂಥ ಹುಡುಗನಿಗೆ ಮನಸಾದರೂ ಹೇಗೆ ಬಂತೆಂದು ಆಶ್ಚರ್ಯವಾಗುತ್ತದೆ ನನಗೆ. ಬಹುಶಃ ನಾನು ಪ್ರೀತಿಸಿದ್ದ ಹುಡುಗನೇ ಬೇರೆ, ಈಗಿರುವ ನೀನೇ ಬೇರೆ ಎಂದು ತೋರುತ್ತದೆ. ನಿನ್ನ ಮೇಲಿನ ನನ್ನ ಪ್ರೀತಿಗೆ ಪ್ರತಿಯಾಗಿ ನೀನು ನನಗೆ ಕೊಟ್ಟಿದ್ದಾದರೂ ಏನು..?? ನೋವು, ಬೇಸರ, ನಿಲ್ಲದ ಕಣ್ಣೀರು, ಹತಾಶೆ, ಕೊನೆಯಲ್ಲಿ ಅತಿಯಾದ ಅವಮಾನ. ಹೇಗೆ ಸಹಿಸಲಿ ಇವೆಲ್ಲವನ್ನೂ..?? ಎಷ್ಟು ದಿನಗಳ ಕಾಲ ಸಹಿಸಲಿ..?? ಎಲ್ಲದಕ್ಕೂ ಒಂದು ಮಿತಿಯೆಂಬುದಿದೆಯಲ್ಲವೇ..?? ನಿನ್ನ ಆಟಕ್ಕೂ ಇದೆ. ಇದೇಕೆ ಹೀಗೆ ಮಾಡಿದೆ ನೀನು..?? ಯಾವ ಪುರುಷಾರ್ಥಕ್ಕಾಗಿ..??
                      ಕಲ್ಲು ಹೃದಯದವನಾದ ನಿನಗೆ ನಾನು ಜೊತೆಗಿಲ್ಲವೆಂಬುದರ ಅರಿವೂ ಸಹ ಆಗದೇನೋ. ನನಗೆ ಸ್ವಲ್ಪ ಮಟ್ಟಿಗೆ ಎಲ್ಲವನ್ನೂ ಅಳಿಸಿ ಹಾಕಲು ಕಷ್ಟವಾಗುತ್ತದೆ. ಆದರೂ ಹಳೆಯದನ್ನೆಲ್ಲಾ ಸಮಾಧಿ ಮಾಡಿ ಮುಂದೆ ಹೋಗಬೇಕೆಂದಿದ್ದೇನೆ. ಅದಕ್ಕಾಗಿ ಕಾಯುತ್ತ ಕೂರುವಷ್ಟು ಸಮಯವಾಗಲಿ, ತಾಳ್ಮೆಯಾಗಲಿ ನನಗಿಲ್ಲ. ಈ ಕ್ಷಣವೇ ಎಲ್ಲವನ್ನೂ, ಎಲ್ಲರನ್ನೂ ಬಿಟ್ಟು ದೂರದ ಅಪರಿಚಿತ ಜಾಗಕ್ಕೆ ಹೊರಡಲು ಅಣಿಯಾಗಿ ನಿಂತಿದ್ದೇನೆ. ನಿನಗೊಂದು ಕೊನೆಯ ವಿದಾಯ ಹೇಳೋಣವೆನಿಸುತ್ತದೆ. ಒಂದು ಮಾತ್ರ ನೆನಪಿಟ್ಟುಕೊ. ನನ್ನ ಬಾಳಿನಲ್ಲಿ ಆಟವಾಡಿದ ಹಾಗೆ ಬೇರೆ ಯಾವ ಹುಡುಗಿಯ ಜೊತೆಗೂ ಆಟವಾಡಬೇಡ. ಹುಡುಗಿಯ ಕಣ್ಣೀರಿನ ಒಂದೊಂದು ಹನಿಯೂ ಸಾವಿರ ಶಾಪಗಳಿಗೆ ಸಮವೆಂಬುದು ನೆನಪಿರಲಿ. ಶಾಶ್ವತವಾಗಿ ನಿನ್ನಿಂದ ದೂರ ಹೋಗುತ್ತಿದ್ದೇನೆ.
                            ಇದೋ ವಿದಾಯ. "
                       ಹೊರಗಡೆಯಿಂದ ಕಿವಿಗೆ ಅಪ್ಪಳಿಸುತ್ತಿರುವ ಅಳು, ಗೋಳಾಟಗಳ ಸದ್ದು ಇನ್ನೂ ಜಾಸ್ತಿಯಾಗಿದೆಯೆಂದು ಅನಿಸಿತ್ತು ನನಗೆ. ಈಗಂತೂ ಜನರು ಬಹಳವೇ ಬಂದು ಸೇರಿದ್ದರು. ಸಾವಿನ ಮನೆಯ ಸ್ಮಶಾನ ವಾತಾವರಣಕ್ಕಿಂತ ಘೋರ ನರಕ ಬೇರೆ ಇನ್ನೊಂದಿದೆಯೇ..?? ಅಲ್ಲಿ ಹೊರಗಡೆ ಕೂರಲಿಕ್ಕೆ ಹಿಂಸೆಯಾಗಿ ನಾನು ಮಹಡಿಯ ಮೇಲೆ ಹತ್ತಿ ಗುಮ್ಮನಂತೆ ಕುಳಿತಿದ್ದೆ. ಬ್ಯಾಗಿನಿಂದ ಡೈರಿಯನ್ನು ಹೊರಗಡೆ ತೆಗೆದು ಪುಟಗಳನ್ನು ತಿರುಗಿಸುತ್ತಿದ್ದಂತೆ ಕೈಗೆ ಸಿಕ್ಕಿತು ನಾಲ್ಕು ವರ್ಷಗಳ ಹಿಂದೆ ಬರೆದ ಈ ಪತ್ರ. ಏಕೋ ಹರಿದು ಹಾಕಲಾಗದೇ ಹಾಗೆಯೇ ಇಟ್ಟಿದ್ದೆ. ಎಲ್ಲವನ್ನೂ ಅಪ್ಪನ ಹತ್ತಿರ ಹೇಳಿಕೊಳ್ಳುತ್ತಿದ್ದ ನಾನು ಈ ಒಂದು ವಿಷಯವನ್ನು ಏಕೆ ಮುಚ್ಚಿಟ್ಟೆನೆಂಬ ಸಂಗತಿ ನನಗೇ ಗೊತ್ತಿಲ್ಲ. ಅಕಸ್ಮಾತ್ ಒಮ್ಮೆ ಹೇಳಿಕೊಂಡಿದ್ದರೆ..?? ಕತೆಯೇ ಬೇರೆಯದಾಗುತ್ತಿತ್ತೋ ಏನೋ. ಆದರೆ, ಇನ್ನೆಲ್ಲಿ ಹೇಳುವುದು..?? ಅಪ್ಪ ಅಲ್ಲಿ ಹೊರಗಡೆ ಚಿರನಿದ್ರೆಯಲ್ಲಿ ಮಲಗಿರುವವರಲ್ಲಾ.
                                ಒಮ್ಮೆಲೇ ನನ್ನ ಬಗ್ಗೆ ನನಗೇ ಅಸಹ್ಯವೆನಿಸಿತು. ಹೆತ್ತ ಅಪ್ಪ ಹೆಣವಾಗಿ ಮಲಗಿರುವಾಗ ನಾನಿಲ್ಲಿ ಕುಳಿತು ನನ್ನ ಹಳೆಯ ಪ್ರೇಮವನ್ನು ನೆನೆಸಿಕೊಳ್ಳುತ್ತಾ ಇರುವೆನಲ್ಲಾ. ಛೇ, ಮುದ್ದಿನ ಮಗಳು ಮಾಡುವ ಕೆಲಸವೇ ಇದು..?? ಇನ್ನು ಕೆಲವು ಗಂಟೆಗಳಲ್ಲಿ ಎಲ್ಲರಿಗಿಂತ ಜಾಸ್ತಿ ನನ್ನನ್ನು ಎತ್ತಿ ಆಡಿಸಿದ, ತಮ್ಮ ಭುಜದ ಮೇಲೆ ನನ್ನನ್ನು ಕೂರಿಸಿಕೊಂಡು ಊರಿನ ತುಂಬಾ ಪಲ್ಲಕ್ಕಿಯಂತೆ ತಿರುಗಿಸುತ್ತಿದ್ದ, ನನಗೆ ಕೈತುತ್ತು ತಿನ್ನಿಸಿದ್ದ, ನನ್ನ ಕಣ್ಣೀರು ಒರೆಸಿದ್ದ, ಎಲ್ಲಾ ಸಮಯದಲ್ಲೂ ನನ್ನ ಬೆನ್ನುಲುಬಾಗಿ ನಿಂತಿದ್ದ ನನ್ನ ಪ್ರೀತಿಯ ಅಪ್ಪನ ದೇಹ ಬೂದಿಯಾಗಿ ಹೋಗಲಿದೆ. ಅದಷ್ಟು ಹೊತ್ತಾದರೂ ಅಪ್ಪನ ಪಕ್ಕ ಕೂತಿರಬಾರದೇಕೆ ಎಂದೆನಿಸಿತು. ಅಪ್ಪನ ಮುಖ ನೋಡುತ್ತಿದ್ದರೆ ಎಂಥ ಹಿಂಸೆಯೂ ಅನುಭವಕ್ಕೆ ಬರಲಾರದು ಎಂದುಕೊಳ್ಳುತ್ತಾ ಎದ್ದು ಮಹಡಿಯಿಳಿದು ಕೆಳಗೆ ಬಂದೆ. ಗಂಡಸರೆಲ್ಲಾ ಮುಂದಿನ ಕೆಲಸ-ಕಾರ್ಯಗಳಿಗೆ ತಯಾರಿ ನಡೆಸುತ್ತಿದ್ದರು. ಅಂಗಳಕ್ಕೆ ನಾನು ಕಾಲಿಟ್ಟ ಕೂಡಲೇ ಹೆಂಗಸರ ಅಳು ಇನ್ನೂ ಜೋರಾಯಿತು. ನನ್ನ ಕಣ್ಣುಗಳು ಅಮ್ಮನಿಗಾಗಿ ಹುಡುಕಾಡಿದವು. ಅಪ್ಪ ಸತ್ತ ಸುದ್ದಿ ಕೇಳಿದಾಗಿನಿಂದ ದೇವರ ಕೋಣೆ ಹೊಕ್ಕಿದ ಅಮ್ಮ ಅಲ್ಲಿಂದ ಇನ್ನೂ ಹೊರಬಂದಿಲ್ಲವೆಂಬ ನೆನಪಾಯಿತು. ನಾನು ಏನೊಂದು ಮಾತನಾಡದೇ ಶಾಂತವಾಗಿ ನಡೆದು ಅಪ್ಪನ ತಲೆಯ ಪಕ್ಕ ಹೋಗಿ ಕುಳಿತೆ.
                        ಇಲ್ಲ, ನಂಬಲಿಕ್ಕೆ ಆಗುತ್ತಿಲ್ಲ ನನಗೆ. ಅಪ್ಪನ ಮುಖ ನೋಡುತ್ತಿದ್ದರೆ ಅವರು ಹಾಗೆ ಸುಮ್ಮನೆ ವಿಶ್ರಾಂತಿಗಾಗಿ ಲಘು ನಿದ್ದೆಯಲ್ಲಿದ್ದಾರೆನಿಸುತ್ತಿದೆ. ಸ್ವಲ್ಪ ಹೊತ್ತು ಬಿಟ್ಟು ಏಳುತ್ತಾರೆ ಎನ್ನುವಂತಿದೆ ಅವರ ಮುಖ ಭಾವ. ಹೆಣದ ಮುಖದಲ್ಲಿ ಭಾವಗಳನ್ನು ಶೋಧಿಸುತ್ತಿರುವ ನನ್ನ ಕುರಿತು ನನಗೇ ಸಿಟ್ಟು ಬಂತು. ಯಾವಾಗ ಅಪ್ಪನ ಮುಖದ ಭಾವಗಳನ್ನು ಅರಿತುಕೊಳ್ಳಬೇಕಾಗಿತ್ತೋ ಆವಾಗ ಆ ಕೆಲಸ ಮಾಡದೇ ಹೇಡಿಯಂತೆ ದೂರ ಹೊರಟು ಹೋಗಿದ್ದೆನಲ್ಲವೇ..?? ಎಲ್ಲವೂ ಜೀವಕಳೆದುಕೊಂಡಿರುವಾಗ ಈಗ ಯಾವ ಅರ್ಥದ ಜಾಡು ಹಿಡಿದು ಭಾವಗಳಿಗಾಗಿ ಶೋಧ..?? "ಅಪ್ಪಾ, ನೀವೇಕೆ ಹೀಗೆ ನನ್ನ ಬಿಟ್ಟು ಹೋದಿರಿ..?? ಆ ಹಾಳು ಕೆರೆಗೆ ಹಾರುವ ನಿರ್ಧಾರ ಕೈಗೊಂಡಾಗಲೀ, ಹಾರುವ ಮುಂಚೆಯಾಗಲೀ ಒಮ್ಮೆ ಕೂಡ ನಿಮ್ಮ ಮುದ್ದಿನ ಮಗಳ ನೆನಪಾಗಲಿಲ್ಲವೇ..?? ನಿಮ್ಮ ಬದುಕನ್ನು ನೀವೇ ಹೀಗೆ ಕೊನೆಗಾಣಿಸಿಕೊಂಡಿರಿ ಏಕೆ..??" ನನ್ನ ಮನಸ್ಸು ಒಳಗೊಳಗೆ ಮತ್ತೆ ಮತ್ತೆ ಪ್ರಶ್ನಿಸುತ್ತಿತ್ತು.
                          ಥಟ್ಟನೆ ಅದಕ್ಕೆ ಉತ್ತರವಾಗಿ ಇನ್ನೊಂದು ಮನಸ್ಸು ಅಪ್ಪನ ದನಿಯಲ್ಲಿ ಮಾತನಾಡಲಾರಂಭಿಸಿತು. "ನಾಲ್ಕು ವರ್ಷಗಳ ಕೆಳಗೆ ಹಿಂದೆ ಮುಂದೆ ನೋಡದೇ ಕೊನೆಗೆ ನನಗೂ ಒಂದು ಮಾತು ತಿಳಿಸದೇ ಓಡಿ ಹೋದೆಯಲ್ಲ ಮಗಳೇ, ಆಗ ನಿನಗೆ ಈ ಅಪ್ಪನ ನೆನಪಾಗಲಿಲ್ಲವಾ..?? ನಿನ್ನ ನೋವು, ಬೇಸರಗಳಿಗೆ ಸದಾ ಕಿವಿಯಾಗಿದ್ದ ನಿನ್ನ ಹುಟ್ಟಿಸಿದ ಅಪ್ಪನೂ ನಿನಗೆ ಬೇರೆಯವನು ಎಂದೆನಿಸಿದನಾ..?? ನಿನಗಾಗಿ ಏನು ಬೇಕಾದರೂ ಮಾಡಲು ಸಿದ್ಧವಿದ್ದ ಅಪ್ಪನಿಗೂ ಮುಖ ತೋರಿಸದೇ ದೂರ ಹೋದೆಯಲ್ಲ ಮಗಳೇ, ಹಾಗೆ ಹೋಗುವಾಗ ಒಮ್ಮೆಯೂ ನನ್ನ ನೆನಪು ನಿನಗಾಗಲಿಲ್ಲವೇ..??" ಅಂದರೆ, ಅಪ್ಪನ ಸಾವಿಗೆ ನಾನೇ ಪರೋಕ್ಷ ಕಾರಣಳೇ..?? ಯೋಚಿಸಿದಂತೆ ತಲೆ ತಿರುಗತೊಡಗಿತು. ಎದೆಯಲ್ಲಿ ಸಣ್ಣದಾಗಿ ನೋವು ಕಾಣಿಸಿಕೊಂಡಿತು. ಅಲ್ಲಿಯ ತನಕ ಕಲ್ಲು ಬಂಡೆಯಂತೆ ಕೂತಿದ್ದವಳು ಅಯ್ಯೋ ಎಂದು ಚೀರಿಕೊಂಡು ಮರುಕ್ಷಣವೇ ಅಳತೊಡಗಿದೆ. (ಮುಂದುವರೆಯುವುದು)


Sunday, 20 April 2014

ದೃಷ್ಟಿ


ಕಣ್ಣುಗಳಲ್ಲಿ ಅರಳಿ ನಿಂತಿಹ
ಕನಸಿನ ಸುಮಗಳ ಚೆಂದಕೆ
ರೆಪ್ಪೆಗಳು ಬಡಿದು ದೃಷ್ಟಿ ತಾಕಿಸುವವೆನೋ..??
ತುಟಿಗಳಲ್ಲಿ ಹೊಮ್ಮುವ ಮಂದಹಾಸಕ್ಕೂ
ವದನದಲ್ಲಿ ಲಾಸ್ಯವಾಡುವ ಲಜ್ಜೆಗೂ
ತಾಕಿದೆಯೇ ಯಾರದೋ ದೃಷ್ಟಿ..??

ಹಗಲಿನ ಎಚ್ಚರದ ಹೊತ್ತಲ್ಲೂ
ರಾತ್ರಿಯ ನಿದ್ರಾಸ್ಥಿತಿಯಲ್ಲೂ ಕೂಡ
ಯಾರೋ ನೆರಳನ್ನೂ ಬಿಡದೇ ಹಿಂಬಾಲಿಸಿದಂತೆ
ಮನದ ಬೀದಿಯಲ್ಲಿ ನಡೆಯುತ್ತಿಹರಲ್ಲ
ಹೃದಯದ ಅರಮನೆಯ ಮೇಲೂ
ಬಿದ್ದಿದೆ ಯಾರದೋ ಕಣ್ಣು ಹಗುರವಾಗಿ

ಯಾರದು..?? ಯಾರ ಮಾಯೆಯಿದು..??
ಯೋಚನೆಗೆ ನಿಲುಕದ ಭಾವಗಳ ಜಾಲವೇ..??
ಹುಡುಕಾಟ ಸುಮ್ಮನೇ ವ್ಯರ್ಥ ಕಾಲಹರಣ
ಕಾದು ಕುಳಿತಿರುವುದೇ ಜಾಣತನ
ದೃಷ್ಟಿ ತಾಕಿಸಿ ಹೋದವ ತಿರುಗಿ ಬರುವನಲ್ಲ
ಇಡಲು ಕಂಡೂ ಕಾಣದಂತೆ ದೃಷ್ಟಿ ಬೊಟ್ಟು


ಡೈರಿ - ಪುಟ ೨೦


                                               "ನೋಡು, ಮಲೇಷ್ಯಾ ಮತ್ತೊಂದು ವಿಮಾನದಲ್ಲೂ ಏನೋ ತೊಂದರೆ ಆಗಿತ್ತಂತೆ. ಅದೂ ಅಲ್ದೆ ಆ ಫ್ಲೈಟ್ ಬೆಂಗಳೂರಿಗೆ ಹೋಗೋದಾಗಿತ್ತಂತೆ. ತಿಂಗಳ ಹಿಂದಷ್ಟೇ ಫ್ಲೈಟ್ ಮಾಯ ಆದ ಘಟನೆ ಇನ್ನು ಮನಸಿಂದ ಅಳಿಸಿ ಹೋಗಿಲ್ಲ. ಈಗ ಮತ್ತೊಂದು ಅನಾಹುತ ಆಗೋದು ಸ್ವಲ್ಪದರಲ್ಲಿಯೇ ತಪ್ಪಿತು. ಮಲೇಷ್ಯಾ ವಿಮಾನಗಳಿಗೂ ತಾಂತ್ರಿಕ ದೋಷ ಅನ್ನೋದಕ್ಕೂ ಏನಾದ್ರೂ ಲವ್ ಆಗಿರ್ಬೋದಾ ಅಂತಾ ಡೌಟ್ ಬರ್ತಿದೆ ಕಣೇ. ಜನ್ಮ ಜನ್ಮಗಳ ಸಂಬಂಧ ಅನ್ನೋ ಥರ ಅವೇ ವಿಮಾನಗಳಿಗೆ ಒಂದಲ್ಲಾ ಒಂದು ಪ್ರಾಬ್ಲಮ್." ನ್ಯೂಸ್ ಪೇಪರ್ ಓದುತ್ತಿದ್ದವಳು ಅಲ್ಲಿ ಪ್ರಕಟವಾದ ಸುದ್ದಿಗೆ ತನ್ನ ಒಗ್ಗರಣೆಯನ್ನೂ ಸೇರಿಸಿ ಹೇಳಿದಳು ನನ್ನ ರೂಮ್ ಮೇಟ್.
                        "ಮಲೇಷ್ಯಾ ವಿಮಾನಗಳೊಂದೇ ಅಲ್ಲ. ತಾಂತ್ರಿಕ ದೋಷ ಅನ್ನೋದು ನಮ್ಮ ದೇಶದ ಸಬ್ ಮರಿನುಗಳನ್ನೂ ಬಿಟ್ಟಿಲ್ಲ. ಮೊದಲೇ ನಮ್ಮ ದೇಶದಲ್ಲಿ ಸಬ್ ಮರಿನ್ ಗಳ ಸಂಖ್ಯೆ ಕಡಿಮೆ. ಇರುವ ಸಬ್ ಮರಿನುಗಳಿಗೂ ತಾಂತ್ರಿಕ ದೋಷದ ಕೃಪಾ ಕಟಾಕ್ಷ."
                              "ನನಗೆ ಒಂದು ಸಂದೇಹ ಏನಂದ್ರೆ, ಈ ಎಲ್ಲಾ ತಾಂತ್ರಿಕ ದೋಷಗಳಿಗೆ ಪರಿಹಾರ ಅನ್ನೋದು ಇದ್ದೇ ಇರತ್ತೆ ತಾನೇ. ಅದನ್ನೆಲ್ಲಾ ಪರಿಹರಿಸೋಕೆ ಆಗಲ್ವಾ..?? ತಾಂತ್ರಿಕ ತಜ್ಞರು, ಅಭಿಯಾಂತ್ರಿಕರು ಎಲ್ಲಾ ಇರೋದು ಇವೇ ಕೆಲಸಗಳನ್ನ ಮಾಡಲಿಕ್ಕೆ ಅಲ್ವಾ..??"
                        "ಆಗದೇ ಏನು..?? ಆದರೆ ಅಂಥಾ ಕೆಲಸಗಳನ್ನು ಮಾಡಲಿಕ್ಕೆ ಯಾರು ತಾನೇ ತಯಾರಿದ್ದಾರೆ..?? ನಮ್ಮ ದೇಶದ ಎಲ್ಲಾ ತಾಂತ್ರಿಕ ತಜ್ಞರು, ಅಭಿಯಾಂತ್ರಿಕರು ವಿದೇಶಕ್ಕೆ ಹಾರಿಹೋಗುತ್ತಾರೆ. ಅಲ್ಲಿನ ದೇಶಗಳಿಗೆ ಸೇವೆ ಸಲ್ಲಿಸುತ್ತ ಕೈ ತುಂಬಾ ಡಾಲರ್ ಎಣಿಸುವುದರಲ್ಲೇ ತೃಪ್ತಿ ಅವರಿಗೆ. ತಮ್ಮ ತಾಂತ್ರಿಕ ನೈಪುಣ್ಯತೆಗಳನ್ನೆಲ್ಲ ಸಾಮಾಜಿಕ ಜಾಲತಾಣಕ್ಕೆ, ಮೊಬೈಲ್, ಕಂಪ್ಯೂಟರುಗಳಿಗೆ ಧಾರೆ ಎರೆಯುತ್ತಾರೆ. ತಂತ್ರಜ್ಞಾನದಿಂದ ಮನುಷ್ಯನ ಕ್ವಾಲಿಟಿ ಆಫ್ ಲೈಫ್ ಇಂಪ್ರೂವ್ ಆಗತ್ತೆ ಅಂತಾರೆ, ಆಗ್ಬೇಕು ನಿಜ. ಆದರೆ, ಇವುಗಳಿಂದ ಮಾನವನ ಬದುಕು ಇನ್ನೂ ಹಳ್ಳ ಹಿಡಿಯುತ್ತಿದೆಯೇ ಹೊರತು ಇಂಪ್ರೂವ್ ಅಂತೂ ಆಗ್ತಿಲ್ಲ. ಮೂಲಭೂತ ಸೌಕರ್ಯಗಳು, ದಿನ ನಿತ್ಯದ ವ್ಯವಹಾರಗಳು, ವೈದ್ಯಕೀಯ ಸೇವೆ, ಭದ್ರತೆ, ಸುರಕ್ಷತೆ - ಇಂತಹ ಇನ್ನೆಷ್ಟೋ ಕಡೆ ತಂತ್ರಜ್ಞಾನದ ಅತ್ಯವಶ್ಯಕತೆಯಿದೆ. ಎಲ್ಲಿ ಅಗತ್ಯ ಇದೆಯೋ ಅಲ್ಲಿ ತಂತ್ರಜ್ಞಾನದ ಬಳಕೆ ಸಮರ್ಪಕವಾಗಿ ಆಗ್ತಾ ಇಲ್ಲ. ಅದಕ್ಕೆ ಹೀಗೆಲ್ಲಾ ತಾಂತ್ರಿಕ ದೋಷಗಳು, ಲೋಪಗಳು ಹುಟ್ಟಿಕೊಳ್ತಾ ಇರತ್ವೆ." ನಾನು ಸಣ್ಣದಾದ ಭಾಷಣವನ್ನೇ ಬಿಗಿದೆ.
                            "ಅದು ನಿಜ ಅನ್ನೂ. ನೆಕ್ಸ್ಟ್ ಜನರೇಷನ್ ಮೊಬೈಲುಗಳೆಲ್ಲಾ ಟಚ್ ಸ್ಕ್ರೀನ್ ಇರೋದಿಲ್ಲ. ಬದಲಾಗಿ ಉಫ್ ಸ್ಕ್ರೀನ್ ಇರ್ಬೋದು. ಟಚ್ ಮಾಡೋ ಬದಲು ಉಫ್ ಅನ್ನೋದು. ಇನ್ನೂ ಸಿಂಪಲ್ ಅಲ್ವಾ..??" ಅವಳ ಒಣಾ ಜೋಕಿಗೆ ಇಬ್ಬರೂ ನಕ್ಕೆವು.


ಡೈರಿ - ಪುಟ ೧೯                                 "ಈ ಇಂಟರ್ನಲ್ಸ್ ಯಾಕಾದ್ರೂ ಬರತ್ತೋ..?? ಮೊದಲಿಂದಾನೇ ಓದ್ಬೇಕು ಅಂತೆಲ್ಲ ಪ್ಲಾನ್ ಮಾಡ್ಕೊಳೋದು ಸುಮ್ನೆ. ಆವಾಗ ಬುಕ್ ಹಿಡಿಯೋಕೆ ನಮಗೆ ಮನಸು ಎಲ್ಲಿಂದ ಬರತ್ತೇ..?? ನಮ್ಮ ಲೆಕ್ಚರರ್ಸ್ ಮೊದಲು ಸಿಲೆಬಸ್ ಮುಗಿಸಲಿ ಅಂತ ಅವರ ನೆಪ ಮಾಡಿಕೊಂಡು ಕಾಯುತ್ತಾ ಕೂರುತ್ತೇವೆ. ಅವರೋ, ಎಕ್ಸಾಮ್ ಗೆ ಒಂದು ದಿನ ಬಾಕಿ ಇದೆ ಎನ್ನುವಾಗ ಹಾಗೂ ಹೀಗೂ ಮುಗಿಸಿದ ಶಾಸ್ತ್ರ ಮಾಡ್ತಾರೆ. ಆಮೇಲೆ ನಮ್ಮ ಓದು ಶುರು ಆಗತ್ತೆ. ನೆಟ್ಟಗೆ ಯಾವ್ಯಾವ ಟಾಪಿಕ್ ಇದೆ ಅಂತಾನೇ ಗೊತ್ತಿರಲ್ಲ. ಆಗ ಈ ಲೆಸ್ಸೆನ್ ಪ್ಲಾನ್ ನೋಡಿ ಅದನ್ನ ತಿಳ್ಕೊಂಡು ಓದು ಶುರು ಮಾಡೋ ಹೊತ್ತಿಗೆನೇ ಗಂಟೆ ಕಳೆದಿರತ್ತೆ. ಇನ್ನು ಓದೋದು ಮುಗಿಯೋದು ಅನ್ನೋದು ಇದೆಯಾ..?? ಸೆಮಿಸ್ಟರ್ ಮುಗಿದ್ರೂ ಮುಗಿಯಲ್ಲ. ಕೊನೆಗೆ ರಿಸಲ್ಟ್ ಹಣೆಬರಹ ಯಾವಾಗ್ಲೂ ಒಂದೇ ಥರದ್ದು. ಪ್ರತಿ ಇಂಟರ್ನಲ್ಸ್ ಕತೆನೂ ಹೀಗೆನೇ. ಈ ಎಲ್ಲಾ ವಿಷ್ಯಗಳು ಕಾಲೇಜವ್ರಿಗೇನೂ ಗೊತ್ತಿರಲ್ವಾ..?? ಗೊತ್ತಿದ್ದು ಗೊತ್ತಿದ್ದು ಯಾಕೆ ಇಡ್ತಾರೋ.." ಓದಾಗದೇ ಇರೋ ಟೆನ್ಷನ್ ಅಲ್ಲಿ ಏನೇನೋ ಬಡಬಡಿಸಿದಳು ನನ್ನ ರೂಮ್ ಮೇಟ್.
                             "ಇದು ಒಂಥರಾ ಟಿ-ಟ್ವೆಂಟಿ ಮ್ಯಾಚು ಕಣೇ. ತಲಾ ಎರಡು ಮ್ಯಾಚು ೨೦ ಅಂಕಗಳಿಗೆ. ಎರಡೂ ಮ್ಯಾಚುಗಳೂ ಫಿಕ್ಸ್ ಆಗಿರತ್ತೆ. ಅವ್ರು ಮಾತ್ರ ಬಾಲ್ ನಾ ಯದ್ವಾ ತದ್ವಾ ಒಗಿಬೋದು. ಅದೇ ನಾವು ಸಿಕ್ಸ್ ಹೊಡೆದ್ರೂ ೨ ರನ್ ಮಾತ್ರಾನೇ ಸಿಗೋದು. ಥರ್ಡ್ ಅಂಪೈರ್ ಅನ್ನೋ ಸಿಸ್ಟಮ್ ಇಲ್ವೇ ಇಲ್ಲಾ. ಹಾಗಾಗಿ ಒಂದು ವೇಳೆ ತೀರ್ಪು ತಪ್ಪಾಗಿದ್ರು ಅಪೀಲ್ ಮಾಡೋ ಹಾಗಿಲ್ಲ. ಏನೇ ಆದ್ರೂ ಮ್ಯಾಚ್ ವಿನ್ನರ್, ಸಿರೀಸ್ ವಿನ್ನರ್ ಎಲ್ರೂ ಅವರೇ. ನಮಗೆ ಚಿಪ್ಪೊಂದೇ ಸಿಗೋದು. ಇನ್ನು ಉಳಿದ ೧೦ ಮಾರ್ಕ್ಸ್ ಪೆನಾಲ್ಟಿ ಶೂಟ್ ಔಟ್. ನಮಗೇ ಝಾಡ್ಸಿ ಒದಿತಾರೆ. ಅಲ್ಲಿಗೆ ನಾವು ಔಟ್. ಮ್ಯಾಚು ದಿ ಎಂಡ್" ನಾನು ಏನೋ ದೊಡ್ಡ ತರ್ಕ ಹಾಕಿ ಹೇಳಿದೆ.
                          " ಕರೆಕ್ಟ್. ಮತ್ತೊಂದು ಎನಪ್ಪಾ ಅಂದ್ರೆ, ಎಕ್ಸಾಮ್ ಟೈಮ್ ನಲ್ಲಿ ಫಿಲ್ಮ್ಸ್ ನೋಡೋಕೆ, ಬುಕ್ಸ್ ಓದೋಕೆ, ಹರಟೆ ಹೊಡೆಯೋಕೆ ಫುಲ್ ಮೂಡ್ ಬರತ್ತೆ ನೋಡು. ಹಾಳಾದದ್ದು ಉಳಿದ ಟೈಮಿನಲ್ಲಿ ಇದೆಲ್ಲದಕ್ಕೂ ಇಂಟರೆಸ್ಟೂ ಬರಲ್ಲ."
                        "ನನಗಂತೂ ಎಕ್ಸಾಮ್ ಹೊತ್ತಿನಲ್ಲೇ ಇದ್ದದ್ದು ಬಿದ್ದದ್ದೆಲ್ಲಾ ಬರೀಲಿಕ್ಕೆ ಮಸ್ತ್ ಮೂಡ್ ಬರತ್ತೆ. ಈಗ ಬರ್ದಿದ್ದು ಸಾಕು ಮಾರಾಯ್ತಿ. ಸ್ವಲ್ಪ ಆದ್ರೂ ಓದ್ಬೇಕು" ಎನ್ನುತ್ತಾ ನಾನು ಬುಕ್ ಎತ್ತಿಕೊಂಡೆ.


Saturday, 19 April 2014

ನಾನೇ ಏಕೆ..??


ನಗ್ನ ಸತ್ಯಗಳ ಬೆತ್ತಲೆ ಪ್ರಪಂಚವು
ನನಗೆ ಮಾತ್ರವೇ ತೋರುತ್ತಿರುವುದೇಕೆ..??
ಬದುಕೆಂಬ ನಾಟಕಕಕ್ಕೆ ವಿಧಿಯೇ ಸೂತ್ರದಾರನಾದರೆ
ಆ ವಿಧಿಗೆ ನಾನೊಬ್ಬಳೇ ದೊರೆಯಬೇಕೆ...??
ಪ್ರತಿ ಅಂಕಕೂ ಮೂಕ ಪ್ರೇಕ್ಷಕಳಾಗಿ

ಭ್ರಮೆಯ ಹಾದಿಯಲ್ಲಿ ಸುಂದರ ತಿರುವುಗಳನ್ನು
ಸವೆಸುತ್ತಾ ಮಿಥ್ಯದಲ್ಲೇ ಬದುಕುವವರಿಗೆ
ನಾ ಕಂಡ ನಗ್ನ ಸತ್ಯಗಳು ತೋರಬಹುದೇ..??
ನಾನೇ ಹೇಳಿದರೂ ಅರಿಯಬಲ್ಲರೇ..??
ನನಗೆ ಅರಗಿಸಿಕೊಳ್ಳಲಾಗದ ವಿಷವನ್ನು
ಯಾರಾದರೂ ಜೀರ್ಣಿಸಿಕೊಳ್ಳಬಲ್ಲರೇ..??

ಹೇ ಕೃಷ್ಣ, ನನ್ನನ್ನೇಕೆ ಆಯ್ದುಕೊಂಡಿಹೆ ನೀ..??
ಬೇರೆ ಯಾರೂ ದೊರೆಯಲಿಲ್ಲವೇ..??
ಇನ್ನೆಷ್ಟು ದಿನಗಳ ಕಾಲ ವಾಸ್ತವದ ಕಹಿಯನ್ನು
ಉಣಿಸಹೊರಟಿರುವೆ ನನಗೆ ಹೇಳು..??
ನಿನ್ನ ಆಟದಲ್ಲಿ ನನ್ನನ್ನೇಕೆ ಬಲಿಪಶುವಾಗಿಸಿಹೆ..??

ವಾಸ್ತವದಲ್ಲಿಯೂ ಬೆಳಕನ್ನು ಕಾಣುವ ಭಾಗ್ಯ
ಕೊನೆಯವರೆಗೂ ನನ್ನ ಪಾಲಿಗೆ ಮರೀಚಿಕೆಯೇ..??
ನನಗಿಲ್ಲ ನಗ್ನ ಸತ್ಯಗಳ ಜೊತೆ
ಏಗುತ್ತ ಬಾಳುವ ಸ್ಥೈರ್ಯವೂ, ಶಕ್ತಿಯೂ
ಬಿಡುಗಡೆಯ ಭರವಸೆಯೂ ಇಲ್ಲವಾಗಿದೆ


ಡೈರಿ - ಪುಟ ೧೮


                                         "ಮಾರಾಯ್ತಿ, ನೀನು ಹೇಳೊದಲ್ವಾ ನಂಗೆ..?? ಇಲ್ಲಿ ಕರೆಂಟ್, ವಾಟರ್ ಏನೂ ಇಲ್ಲಾ ಅಂತಾ. ನಾನು ಆರಾಮಾಗಿ ಇನ್ನೂ ಎರಡು ದಿನ ಮನೆಯಲ್ಲಿದ್ದು ಬರ್ತಿದ್ದೆ. ಅಮ್ಮ ಸ್ನಾನ ಮಾಡೆ ಎಂದು ಎಬ್ಬಿಸಿದ್ರೂ ಸಹ ಬೆಳಂಬೆಳಿಗ್ಗೆ ಯಾರು ಸ್ನಾನ ಮಾಡ್ತಾರೆ ಅಂತ ಸೋಮಾರಿಯಾಗಿ ಹಾಗೆ ಹೊರಟು ಬಂದೆ. ಇಲ್ಲಿ ನೋಡಿದರೆ ಸ್ನಾನಕ್ಕೂ ನೀರಿಲ್ಲ. ಬಸ್ಸಿನಲ್ಲಿ ಬೇರೆ ಹೆವಿ ರಷ್ ಇತ್ತು. ಈಗ ಮೈಯ್ಯೆಲ್ಲಾ ಬೆವರಿ ಹೋಗಿದೆ ಕಣೇ. ಹಾಗೆ ಬಿಟ್ರೆ ಕಿರಿಕಿರಿಯಾಗತ್ತೆ. ಥೋ.." ಆಗ ತಾನೇ ಮತದಾನ ಮುಗಿಸಿ ವಾಪಸ್ಸು ಬಂದ ನನ್ನ ರೂಮ್ ಮೇಟ್ ಹಾಸ್ಟೆಲ್ ನಲ್ಲಾಗಿರುವ ಸ್ಥಿತಿಯನ್ನು ನೋಡಿ ಅಲವತ್ತುಕೊಳ್ಳುತ್ತಿದ್ದಳು. ನನಗಂತೂ ಇದು ಖುಷಿಯ ವಿಚಾರವೇ ಆಗಿತ್ತು. ನಿನ್ನೆಯಿಂದ ನಾನೊಬ್ಬಳೇ ಒದ್ದಾಡ್ತಾ ಇದ್ದೆ. ಇವತ್ತು ನನಗೊಂದು ಕಂಪೆನಿ ಸಿಕ್ಕಿತಲ್ಲಾ ಅನ್ನೋ ಸಮಾಧಾನ.
                                "ನಾನು ನಿನ್ನೆಯಿಂದ ಹೀಗೇ ಅಲವತ್ತುಕೊಳ್ತಾ ಇದೀನಿ. ಸ್ನಾನಕ್ಕೆ ಬಿಡು, ಬ್ರಶ್ ಮಾಡ್ಲಿಕ್ಕೂ ನೀರು ಇರ್ಲಿಲ್ಲ. ಅಂತೂ ಮಧ್ಯಾನ್ಹದ ಹೊತ್ತಿಗೆ ಕಾಮನ್ ಬಾತ್ ರೂಮ್ ಗಳಲ್ಲಿ ನೀರು ಬಂದಿದ್ರಿಂದ ನಾನು ಸ್ನಾನ ಮಾಡೋ ಹಾಗಾಯ್ತು. ಈಗಂತೂ ಕುಡಿಯಲಿಕ್ಕೂ ನೀರಿಲ್ಲಾ ಅಂತೆ. ಹೊರಗಡೆಯಿಂದ ತರಿಸಿಯೂ ಇಲ್ಲವಂತೆ. ಪ್ರತಿವರ್ಷ ಹಾಸ್ಟೆಲ್ ಚಾರ್ಜನ್ನ ಎರಡೂವರೆ ಸಾವಿರ ಜಾಸ್ತಿ ಇಸ್ಕೊತಾಳಲ್ಲಾ ಆ ವಾರ್ಡನ್, ಅವಳಿಗೆ ನೀರು ಸರಿಯಾಗಿ ಕೊಡ್ಬೇಕು ಅಂತಾ ಗೊತ್ತಾಗಲ್ವಾ..?? ಅದು ಈ ಬೇಸಿಗೆಗಾಲದಲ್ಲಿ ದಿನಕ್ಕೆ ೩ ಸಲ ಸ್ನಾನ ಮಾಡಿದ್ರೂ ಸಾಕಾಗಲ್ಲ. ನೈಟ್ ೧೨.೩೦ ಆಗ್ತಿದ್ದ ಹಾಗೇ ಜನರೇಟರ್ ಸಹ ಆಫ್ ಮಾಡಿಬಿಡ್ತಾರೆ. ಆಮೇಲೆ ಓದಕ್ಕೂ ಆಗಲ್ಲ. ಯಾವಾಗ್ಲೂ ಇಂಟರ್ನಲ್ಸ್ ಟೈಮಿನಲ್ಲೇ ಹೀಗಾಗತ್ತೆ ನೋಡು." ನನಗಂತೂ ಇಂಟರ್ನಲ್ಸ್ ಗೆ ಏನೂ ಓದಾಗದೇ ಇರುವ ಚಿಂತೆ ಕಾಡುತ್ತಿತ್ತು.
                           "ಈ ಬಯಲು ಸೀಮೆಗೊಂದು ನಮಸ್ಕಾರ ಮಾರಾಯ್ತಿ. ಇನ್ನೂ ಒಂದು ವರ್ಷ ಸಹಿಸಿಕೊಳ್ಳಬೇಕು. ದೇವುಡಾ ಕಾಪಾಡು" ಆಕೆ ಹೀಗೆನ್ನುತ್ತಿದ್ದಂತೆಯೇ ಹೊರಗಡೆ ಯಾರೋ ‘ಹೇ ಕರೆಂಟ್ ಬಂತು’ ಎಂದು ಕೂಗುವುದು ಕೇಳಿಸಿತು. ದೇವರೇ, ಇಂಟರ್ನಲ್ಸ್ ಮುಗಿಯೋ ತನಕ ಕರೆಂಟ್ ಹೋಗದೇ ಇರಲಿ ಎಂದು ನಾನು ಮನಸಲ್ಲೇ ಬೇಡಿಕೊಂಡೆ.


Friday, 18 April 2014

ಡೈರಿ - ಪುಟ ೧೭

                                                         
                                         "ಥೋ, ಈ ಹಾಳು ಕರೆಂಟಿಗೊಂದು ಹೊತ್ತಿಲ್ಲ ಗೊತ್ತಿಲ್ಲ. ಬೇಕಾದಾಗಲೇ ಹೊರಟು ಹೋಗುತ್ತದೆ. ಒಮ್ಮೆ ಹೋಯಿತೋ ತಿರುಗಿ ಬರುವುದು ಹಲವು ಗಂಟೆಗಳ ನಂತರವೇ. ಅಲ್ಲಿಯ ತನಕ ಮಾಡಲು ಕೆಲಸವಿಲ್ಲದೇ ಖಾಲಿ ಕೈಯ್ಯಲ್ಲಿ ಕೂರಬೇಕಾಗುತ್ತದೆ." ನಾನು ಸ್ವಗತದಲ್ಲೇ ಕರೆಂಟನ್ನು ಶಪಿಸುತ್ತಾ ಕುಳಿತಿದ್ದೆ. ಆಗ ತಾನೇ ನಿದ್ರೆ ಮುಗಿಸಿ ಎಚ್ಚೆತ್ತುಕೊಂಡಿದ್ದೆ. ಎರಡು ತಾಸುಗಳಿಂದ ಫ್ಯಾನಿಲ್ಲದೇ ಮೈಯ್ಯೆಲ್ಲಾ ಬೆವರಿನಲ್ಲಿ ತೋಯ್ದು ಹೋಗಿತ್ತು. ನಿದ್ದೆ ಮುಗಿಸಿ ಓದೋಣವೆಂದುಕೊಂಡರೆ ಈ ಕಡೆ ಲ್ಯಾಪ್ ಟಾಪ್ ಗೂ ಚಾರ್ಜ್ ಇಲ್ಲ. ಹೋಗಲಿ, ಮಾತನಾಡುತ್ತಾ ಕೂರೋಣವೆಂದರೆ ನಮ್ಮ ರೂಮ್ ಮೇಟ್ ರಾಣಿಯವರು ವೋಟ್ ಹಾಕಲು ಹೋದವರು ಇನ್ನೂ ವಾಪಸ್ಸು ಬಂದಿಲ್ಲ. ಇನ್ನೇನು ಮಾಡುವುದು ಹಾಗಾದರೆ..?? ಹಾಗೆಯೇ ಹಾಸಿಗೆಯಲ್ಲಿ ಬಿದ್ದು ಹೊರಳಾಡುವುದಕ್ಕೇ ಮನಸ್ಸು ಕೂಡ ಸಮ್ಮತಿಸಿತು.
                                ಥಟ್ಟನೆ ಇವತ್ತಿನ ವಿಜಯವಾಣಿಯನ್ನು ಇನ್ನೂ ಓದಿಲ್ಲವೆಂದು ನೆನಪಾಯಿತು. ಮಲಗಿಕೊಂಡೇ ಅದನ್ನು ಕೈಗೆತ್ತಿಕೊಂಡೆ. ನಿನ್ನೆ ಯಾವ್ಯಾವ ರಾಜ್ಯಗಳಲ್ಲಿ ಎಷ್ಟೆಷ್ಟು ಮತದಾನವಾಯಿತು ಎಂದು ನೋಡುವ ಕುತೂಹಲ ಮೂಡಿ ಆ ನ್ಯೂಸ್ ನತ್ತ ಕಣ್ಣು ಹಾಯಿಸಿದೆ. ಎಲ್ಲಾ ಕಡೆಗಳಲ್ಲೂ ಕಳೆದ ಬಾರಿಯ ಲೋಕಸಭಾ ಚುನಾವಣೆಗಿಂತ ಹೆಚ್ಚೇ ಪ್ರತಿಶತ ಮತ ಚಲಾವಣೆಯಾಗಿದೆ. ವೆರಿ ಗುಡ್ ಎಂದುಕೊಂಡೆ ಮನದಲ್ಲಿ. ಹಾಗೆಯೇ ಜಮ್ಮು ಕಾಶ್ಮೀರದಲ್ಲಿ ಎಷ್ಟಾಗಿದೆ ಎಂದು ನೋಡಿದರೆ ಅಬ್ಬಾ, ಕಳೆದ ವರ್ಷಕ್ಕಿಂತ ಬರೋಬ್ಬರಿ ಇಪ್ಪತ್ತೈದು ಪ್ರತಿಶತ ಹೆಚ್ಚು. ಇದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ಉಗ್ರರ ಬಾಂಬುಗಳ ಸದ್ದಿಗೆ, ಗುಂಡಿನ ಚಕಮಕಿಗೆ ಕಾಶ್ಮೀರದ ಜನರು ಸರಿಯಾಗಿ ಉತ್ತರಿಸಿದ್ದಾರೆ ಅನಿಸಿತು. ಪ್ರಜಾಪ್ರಭುತ್ವಕ್ಕೆ ಧಕ್ಕೆಯುಂಟು ಮಾಡಿ ದೇಶದ ಶಾಂತಿ, ಏಕತೆಗೆ ಭಂಗ ತರಲೆತ್ನಿಸುವವರಿಗೆ ಇದಕ್ಕಿಂತ ಚೆನ್ನಾಗಿ ಉತ್ತರಿಸಬಹುದೇ..??
                              ಇನ್ನೂ ಒಂದು ಸಂಗತಿಯೆಂದರೆ ಕೆಲವು ಕಡೆಗಳಲ್ಲಿ ತಮಗೆ ಬೇಕಾದ ಸೌಲಭ್ಯಗಳನ್ನು ಜನಪ್ರತಿನಿಧಿಗಳು ಪೂರೈಸಿಲ್ಲವೆಂಬ ಕಾರಣಕ್ಕಾಗಿ ಮತದಾನಕ್ಕೆ ಬಹಿಷ್ಕಾರ ಹಾಕಿದ್ದಾರಂತೆ. ಕೆಲವು ಕಡೆಗಳಲ್ಲಿ ಮನವೊಲಿಸಿದ ನಂತರ ಸ್ವಲ್ಪ ಜನ ಮತ ಹಾಕಿದರೆ, ಇನ್ನು ಕೆಲವು ಕಡೆ ಊರಿಗೆ ಊರೇ ಮತಹಾಕದೇ ಉಳಿದರಂತೆ. ಇಡೀ ನ್ಯೂಸ್ ಪೇಪರ್ ನಲ್ಲಿ ಇವತ್ತು ನಿನ್ನೆಯ ಚುನಾವಣೆಯದ್ದೇ ಸುದ್ದಿ. ಅದಕ್ಕೆ ಎಲ್ಲಾ ಪುಟಗಳೂ ‘ಮತ’ಮಯ.

Thursday, 17 April 2014

ಡೈರಿ - ಪುಟ ೧೬


                              "ಫಸ್ಟ್ ಟೈಮ್ ವೋಟ್ ಮಾಡ್ತಾ ಇರೋದಾ..??" ಬೂತ್ ನಲ್ಲಿದ್ದ ಮೇಡಮ್ ಒಬ್ಬರು ನನ್ನನ್ನು ಕೇಳಿದ್ರು. ಬಹುಶಃ ನನ್ನ ಮುಖ ನೋಡಿಯೇ ಅವ್ರಿಗೆ ಗೊತ್ತಾಯ್ತೇನೋ. ಅಷ್ಟು ಸಂತಸ, ಉತ್ಸಾಹ, ಉದ್ವೇಗ, ಹೆಮ್ಮೆ - ಇನ್ನು ಯಾವ್ಯಾವೋ ಹಾವ-ಭಾವಗಳೆಲ್ಲಾ ಅಲ್ಲಿ ಜೊತೆಯಾಗಿ ಲಾಸ್ಯವಾಡ್ತಾ ಇದ್ವು. ಇವಿಎಮ್ ನಲ್ಲಿ ಬಟನ್ ಒತ್ತುವಾಗಲಂತೂ ನಾನು ಹಕ್ಕಿಯಂತೆ ಹಾರಾಡ್ತಾ ಇದ್ದೆ ಅನ್ನಿಸ್ತಿತ್ತು. ವೋಟ್ ಹಾಕಿ ಹಾಗೆ ನಮ್ಮ ಕಾರ್ಯಕ್ಷೇತ್ರ ಹುಬ್ಬಳ್ಳಿ ಕಡೆ ಹೊರಟು ನಿಂತೆ. ಯಲ್ಲಾಪುರದ ಕಡೆ ಬಸ್ಸಿಗಾಗಿ ಮುಕ್ಕಾಲು ಗಂಟೆ ಕಾದು ಕೂರುವಂತಾಯಿತು. ಆಮೇಲೆ ಅಂತೂ ಯಲ್ಲಾಪುರ-ಶಿರಸಿ-ಯಲ್ಲಾಪುರ ಬಸ್ಸು ಬಂತು. ಅದು ಎಲ್ಲಾ ಕಡೆ ನಿಂತು ನಿಂತು ಸಾಗುತ್ತಿತ್ತು. ಬಸ್ಸಿನ ವೇಗಕ್ಕೆ ಹೊಂದಿಕೊಳ್ಳುತ್ತಾ ಹೋಗುತ್ತಿರುವಾಗ ನನಗಂತೂ ಬೇರೆ ಏನು ಮಾಡಲು ತೋಚದೇ ಬಸ್ಸಿನಲ್ಲಿ ಇದ್ದವರ ಎಡಗೈ ಹೆಬ್ಬರಳನ್ನು ಪರೀಕ್ಷಿಸುವುದೇ ಕೆಲಸವಾಯಿತು. ಯಾರ್ಯಾರೆಲ್ಲಾ ವೋಟ್ ಹಾಕಿದಾರೆ ಎಂದು. ಅಕಸ್ಮಾತ್ ನಾನು ವೋಟ್ ಹಾಕದೆ ಇದ್ದಿದ್ರೆ ಬೇರೆಯವರ ಬಗ್ಗೆ ತಲೆ ಕೆಡಿಸಿಕೊಳ್ಳುವ ಪ್ರಮೇಯವೇ ಇರ್ತಾ ಇರ್ಲಿಲ್ಲ. ಈಗ ನಾನಂತೂ ಹಾಕಾಯ್ತು, ಇನ್ನೂ ಯಾರ್ಯಾರು ಹಾಕಿದಾರೆ ಅಂತ ತಿಳ್ಕೊಬೇಕಲ್ಲಾ.
                                           ಮಂಚಿಕೇರಿ ಬಂದ ಕೂಡಲೇ ಸೈಡಿಗೆ ನಿಂತಿತು. ಅರೇ, ಬಸ್ಸೇನಾದರೂ ಕೆಟ್ಟು ನಿಂತಿತೇ ಎಂದು ಎಲ್ಲರೂ ಎದ್ದು ನಿಂತರು. ಆಗ ಕಂಡಕ್ಟರ್ ಹೇಳಿದ್ರು, "ಡ್ರೈವರ್ ವೋಟ್ ಹಾಕಿ ಬರ್ತಾರಂತೆ, ಐದು ನಿಮಿಷ ಕಾಯಿರಿ." ನಾನು ಮನಸಲ್ಲೇ ವಾಹ್ ಎಂದುಕೊಂಡೆ. ಡ್ರೈವರ್ ಬಗ್ಗೆ ಮೆಚ್ಚುಗೆ ಮೂಡಿತು. ಎಷ್ಟೋ ಜನ ಮತದಾನದ ದಿನದ ಸರ್ಕಾರಿ ರಜೆಯನ್ನ ಮಜಾ ಮಾಡಲು ವ್ಯಯ ಮಾಡುತ್ತಾರೆ. ಬಹಳಷ್ಟು ಮಂದಿ ಸುಮ್ಮನೆ ಮನೆಯಲ್ಲೇ ಇರುತ್ತಾರೆ. ನಾವೊಬ್ರು ವೋಟ್ ಹಾಕ್ದೇ ಇದ್ರೆ ಏನು ನಷ್ಟ ಇಲ್ಲ ಬಿಡಿ, ಯಾರೇ ಬಂದ್ರು ದೇಶ ಆಗ್ಲಿ, ನಾವಾಗ್ಲಿ ಉದ್ಧಾರ ಆಗೋದು ಅಷ್ಟರಲ್ಲೇ ಇದೆ ಎನ್ನುತ್ತಾ ಒಣಾ ನಿರ್ಲಿಪ್ತತೆಯನ್ನು ತೋರುತ್ತಾ ಕರ್ತವ್ಯವಂಚಿತರಾಗುತ್ತಾರೆ. ಆದರೆ ಕರ್ತವ್ಯನಿರತನಾಗಿದ್ರೂ ಕೂಡ ಈ ಡ್ರೈವರ್ ತನ್ನ ಹಕ್ಕು ಚಲಾಯಿಸುವುದನ್ನು ಮರೆಯಲಿಲ್ಲವಲ್ಲ ಎಂದುಕೊಳ್ಳುತ್ತಾ ಭೇಷ್ ಎಂದಿತು ಮನಸು. ಎಲ್ಲಾರೂ ಹೀಗೇ ಯೋಚಿಸಿದ್ರೆ ಎಷ್ಟು ಚೆನ್ನಾಗಿರ್ತಿತ್ತು ಅಲ್ವಾ..??
                                    ನಂಗಂತೂ ಈಗ ಬರೇ ಎಡಗೈ ಹೆಬ್ಬರಳನ್ನು ನೋಡೋದೇ ಕೆಲ್ಸ ಆಗ್ಬಿಟ್ಟಿದೆ. ನೀಲಿ ಶಾಯಿಯನ್ನು ನೋಡಿದಷ್ಟು ಖುಷಿ. ಬೂತ್ ಅಲ್ಲಿ ಪರ್ಮಿಶನ್ ಕೊಟ್ಟಿದ್ರೆ ನಾನು ಮತ ಹಾಕ್ತ ಇರೋದನ್ನ ಫೋಟೋ ತೆಗಿಸ್ಕೊಂಡು ಬರ್ತಿದ್ದೆ. ಅದು ಆಗ್ಲಿಲ್ಲ ಬಿಡಿ. ನಂಗೆ ಈಗ ಏನು ನೆನಪಾಗ್ತಾ ಇದೆ ಗೊತ್ತಾ..?? ಕನ್ನಡ ಶಾಲೆಯಲ್ಲಿ ಒಂದು ಪದ್ಯವನ್ನು ಹೇಳಿಕೊಟ್ಟಿದ್ರು ನಮ್ಮ ಅಕ್ಕೋರು, "ಹೆಬ್ಬರಳಣ್ಣ ಹೆಬ್ಬರಳಣ್ಣ, ಎಲ್ಲಿದ್ದೀಯಣ್ಣ..??". ಈಗ ಅದಕ್ಕೆ ನಾನೊಂದು ಸಾಲನ್ನು ಸೇರಿಸುತ್ತೇನೆ. "ಮತ ಹಾಕಲು ಹೋಗಿದ್ದೆ ತಮ್ಮಾ..". ಹ್ಹೆ ಹ್ಹೆ ಹ್ಹೆ.


Tuesday, 15 April 2014

ಸೃಷ್ಟಿ

                         
ಅನಾದಿ-ಅನಂತರ ಮಡಿಲಲ್ಲೊಂದು
ಅನಾಮಿಕ ಕೂಸಿನ ಹುಟ್ಟು
ವಿಶ್ವವೆಂಬ ನಾಮಕರಣವು
ನಾಂದಿ ಹಾಡಿತು ಹೊಸ ಪರ್ವಕೆ
ಜೀವವಿಲ್ಲದ ಗೋಲಗ್ರಹಗಳು
ಸುತ್ತ ತಿರುಗುವ ಉಪಕಾಯಗಳು
ಇವಕ್ಕೆಲ್ಲ ರಾಜನಾತ ಸೂರ್ಯ
ಗುರುತ್ವ ಬಲದ ರಾಜ್ಯದಲ್ಲಿ
ಭುವಿಯೊಂದು ತೂಗುವ ತೊಟ್ಟಿಲು
ಜೀವಸೆಲೆಯ ಜೋಗುಳ ಹಾಡಿಲು
ಜೀವನವೆಂಬ ಪಯಣಕ್ಕೆ
ಮೊದಲ ಹೆಜ್ಜೆ ಎತ್ತಿಟ್ಟಂತೆ

ಎಂಥ ಸುಂದರ ಪಯಣದ ಹಾದಿ
ನೇಸರನ ಬೆಳಕಿನ ಚಾದರವು
ನಿದ್ರಾದೇವಿಯನ್ನು ಎಬ್ಬಿಸಿ
ಹಕ್ಕಿಗಳ ಕಲರವದ ದಿವ್ಯತೆ
ದೇವಿ ಸರಸ್ವತಿಯ ಆಹ್ವಾನಿಸಿದಂತೆ
ಹರಿದ್ವರ್ಣದ ಸಹಜ ಸೊಬಗು
ಉಸಿರುಸಿರನ್ನು ಹಸಿರಾಗಿಸಿ
ನಿಶೆಯ ಕತ್ತಲ ಸೆರಗಿಗೆ
ಬೆಳದಿಂಗಳ ಹಾಲನ್ನು ಚೆಲ್ಲಿ
ಆಕಾಶರಾಯನ ರಂಗಮಂಚದಲ್ಲಿ
ತಾರೆಗಳೆಲ್ಲ ಲಾಸ್ಯವಾಡುವ ಪರಿ
ಬೇರೆ ಯಾವ ಸ್ವರ್ಗ ಸಾಟಿ

ಯಾವ ಕವಿಯ ಕಲ್ಪನೆಯೋ
ಚಿತ್ರಕಾರನ ಕುಂಚದ ಕಲೆಯೋ
ಯಾರು ಇದರ ವಿಶ್ವಕರ್ಮ
ತಾನೇ ಎಲ್ಲವನ್ನೂ ಚಿತ್ರಿಸಿ
ಕಾಲದ ಓಟಕ್ಕೆ ತಕ್ಕಂತೆ
ತಿದ್ದಿ ತೀಡಿ ಚೆಂದಗಾಣಿಸುತ್ತ
ಪ್ರತಿ ಪಯಣದಲ್ಲೂ ಅಚ್ಚರಿಗಳ
ನೆಂಟನನ್ನು ಕಳುಹಿಸುತ್ತ
ತಾನೂ ಜೊತೆಯಲ್ಲಿ ಸಾಗುತ್ತ
ಅನಂತತೆಯನ್ನು ಏಕತೆಯಲ್ಲಿ
ಏಕತೆಯಿಂದ ಅನಂತನೆಡೆಗೆ
ಇದಲ್ಲವೇ ಆತನ ಅದ್ಭುತ ಸೃಷ್ಟಿ


ಡೈರಿ - ಪುಟ ೧೫

                                  
                                "ಹೋ, ನಾಳೆ ಮನೆಗೆ ಹೋಗೋದು." ನಾನಂತೂ ಫುಲ್ ಖುಷಿಯಿಂದ ಕುಣಿದಾಡುತ್ತಿದ್ದೆ. ಒಂದೆರಡು ದಿನಗಳ ಮಟ್ಟಿಗೆ ಈ ನಮ್ಮ ಡಿಪಾರ್ಟ್ ಮೆಂಟಿನವರ ಕಿರಿಕಿರಿಯಿರುವುದಿಲ್ಲ ಎಂಬುದೊಂದು ಸಣ್ಣ ಸಮಾಧಾನ. ಜೊತೆಗೆ ಮನೆಗೆ ಹೋಗುವುದೆಂದರೆ ಯಾರಿಗೆ ತಾನೇ ಸಂತಸವಾಗುವುದಿಲ್ಲ..?? ಅದರಲ್ಲೂ ಶಿರಸಿಯಂತಹ ಮಲೆನಾಡಿನ ತಪ್ಪಲಿನಲ್ಲಿ ತವರು ಮನೆಯಿದ್ದರೆ ಕೇಳಬೇಕೆ...?? ಇದೊಂದೇ ಕಾರಣ ಸಾಕು, ಶಿರಸಿಯ ಹೆಸರು ಕಿವಿಗೆ ಬಿದ್ದಾಕ್ಷಣ ಮುಗುಳುನಗೆ ಮೂಡಲು, ಎಲ್ಲಿದ್ದರೂ ನಾವು ಶಿರಸಿಯ ಜನರೆಂದು ಕಾಲರ್ ಜಗ್ಗಿಕೊಂಡು ಓಡಾಡಲು.
                             "ಮೊನ್ನೆ ತಾನೇ ಜಾತ್ರೆಗೆ ಹೋಗಿ ಬಂದಾಗಿದೆ. ನೀನು ಹಾರಾಡ್ತಾ ಇರೋದನ್ನ ನೋಡಿದ್ರೆ ಮನೆಗೆ ಹೋಗದೆ ವರ್ಷಗಳು ಕಳೆದವೇನೋ ಅಂದುಕೊಳ್ಳಬೇಕು. ನೀನೋಬ್ನೆನಾ ಹೋಗ್ತಾ ಇರೋದು..?? ನಾನೂ ಸಹ ಹೋಗ್ತಿದೀನಿ." ರೂಮ್ ಮೇಟ್ ಹುಬ್ಬುಗಳನ್ನು ಕೊಂಕಿಸುತ್ತಾ ಹೇಳಿದಳು. ನಾನು ಸುಮ್ಮನಿರುತ್ತೇನೆಯೇ..?? ಶುರು ಹಚ್ಚಿದೆ. "ಶಿರಸಿಗೆ ಹೋಗೋದು ಅಂದ್ರೆನೇ ಒಂಥರಾ ಅತಿಯಾದ ಖುಷಿ ಕಣೇ. ಖುಷಿಯಾಗಲ್ಲ ಅಂದ್ರೆ ಅವರು ಮನುಷ್ಯರೇ ಅಲ್ಲ. ನಮ್ಮ ಶಿರಸಿನಾ ಹೊರಗಡೆಯವ್ರೆ ಅದೆಷ್ಟು ಇಷ್ಟಪಡ್ತಾರೆ. ಹಾಗಿರೋವಾಗ ನಾವು, ಅಲ್ಲಿಯೇ ಹುಟ್ಟಿ ಬೆಳೆದವರು ಸ್ವಲ್ಪ ಹೆಚ್ಚೆನ್ನುವಷ್ಟೆ ಸಂತಸಪಡಬೇಕು ಅಲ್ವಾ..?? ಖುಶಿಯಾಗಲಿಕ್ಕೂ ಕಾರಣವಿದೆ ಕಣೇ. ನೋಡು, ನಮ್ಮ ಶಿರಸಿ, ಅಲ್ಲಿಯ ಜನ ಎಲ್ಲರೂ ಎಷ್ಟು ಕೂಲ್ ಇರ್ತಾರೆ. ಹಾಗೆಯೇ ನಾವು ಮೃದು ಸ್ವಭಾವದವರು. ಹಾಗಂತ ಸಮಯ ಬಂದರೆ ಅಷ್ಟೆ ಕಠಿಣರೂ ಆಗ್ತೇವೆ. ಇನ್ನು ಅಲ್ಲಿಯ ಪ್ರಕೃತಿಯ ಸೊಬಗನ್ನು ಹೇಳಬೇಕೆ..?? ಅದರಲ್ಲಂತೂ ನಮ್ಮ ಶಿರಸಿಯ ಮಳೆಗಾಲವನ್ನು ನೆನೆದರೆ ಎಂಥ ರೋಮಾಂಚನವಾಗುತ್ತದೆ. ತಿನ್ನಲಿಕ್ಕೆ ದೊರೆಯದ ಹಣ್ಣು-ಹಂಪಲುಗಳು, ನೋಡಲಿಕ್ಕೆ ಇರದ ಸ್ಥಳಗಳು ಇವೆಯೇ ನಮ್ಮಲ್ಲಿ..?? ಅದರಲ್ಲೂ ನಮ್ಮ ಅಮ್ಮಂದಿರು ಅದ್ಯಾವ್ಯಾವ ಬಗೆಯ ತಿಂಡಿಗಳನ್ನೆಲ್ಲಾ ಮಾಡ್ತಾರೋ. ಅಪ್ಪೆಹುಳಿ, ತಂಬುಳಿ, ಹಷಿ, ಕಡುಬು, ಪತ್ರೊಡೆ, ಭೂತ ಗೊಜ್ಜು - ಇವೆಲ್ಲಾ ಶಿರಸಿ ಬಿಟ್ಟು ಬೇರೆ  ಎಲ್ಲಾದರೂ ಸಿಗಲಿಕ್ಕುಂಟಾ..?? ಮತ್ತೆ ನಮ್ಮ ಮಾರಿಯಮ್ಮನ ಜಾತ್ರೆಯಂತೂ ಫುಲ್ ಫೇಮಸ್. ನಮ್ಮ ಶಿರಸಿಯಲ್ಲೂ ಹುಟ್ಟಲಿಕ್ಕೂ ಪುಣ್ಯ ಮಾಡಿರಬೇಕು ಕಣೇ."
                              "ಅಮ್ಮಾ ತಾಯಿ, ನಾನೂ ಸಹ ಶಿರಸಿಯವಳೇ ಅನ್ನೋದನ್ನ ನೀನು ಮರೆತುಬಿಟ್ಯೋ ಹೇಗೆ..?? ಈಗ ಮೊದಲು ಬ್ಯಾಗ್ ಪ್ಯಾಕ್ ಮಾಡಿ ಮುಗಿಸು. ಒಳ್ಳೆ ಕಾಶಿಗೆ ಹೊರಟವರಷ್ಟು ಲಗೇಜ್ ಇದೆಯಪ್ಪಾ ನಿಂದು." ತಾನು ಪ್ಯಾಕಿಂಗ್ ಕೆಲಸ ಮಾಡುತ್ತಾ ನನ್ನ ಮಾತಿಗೆ ತಡೆ ಹಾಕಿದಳವಳು.


ಕಪ್ಪು-ಬಿಳುಪು


ಮತ್ತದೇ ಏಕಾಂತದ ಸ್ನೇಹ
ಕೊಂಚ ದೂರ ಜೊತೆಯಾಗಿ
ಹೆಜ್ಜೆ ಹಾಕುತ್ತ ಸಾಗಿದೆ ಪಯಣ
ಮೌನವೇ ಮಾತಾಗುವ
ಭಾವಗಳೇ ಕತೆಯಾಗುವ
ರಂಗು ರಂಗಿನ ಚಿತ್ರಣ

ಮನದ ಅದೇ ಬೀದಿಯಲ್ಲಿ
ಹಳೇ ನೆನಪುಗಳ ರಥದಲ್ಲಿ
ಹೊಸ ಕನಸುಗಳ ಸವಾರಿ
ಅತ್ತ ಕಡೆ ಗಾಢ ಕಪ್ಪು
ಇತ್ತ ಕಡೆ ತಿಳಿ ಬಿಳುಪು
ಯಾರು ಇದಕ್ಕೆಲ್ಲ ರೂವಾರಿ

ಮುಂಜಾನೆ ತಿಳಿಬಿಸಿಲು
ಅಪರಾಹ್ನ ಮೋಡದ ಮಬ್ಬು
ಸಂಧ್ಯೆಗೆ ವರ್ಷಧಾರೆಯ ಸಿಂಚನ
ಲಹರಿಯ ಗತಿಗೆ ತಕ್ಕಂತೆ
ಮಿಡಿಯುವ ಹೃದಯದಲ್ಲಿ
ಯಾವುದೀ ತಿಳಿಯದ ಕಂಪನ

ಕತ್ತಲ ಕರಿ ಕಪ್ಪಿನಲ್ಲಿ
ಕಾಣದಂತೆ ಕಳೆದುಹೋಗುವಾಗ
ಮೂಡಿದಂತಿದೆ ಬೆಳ್ಳಿಯ ಬೆಳಕು
ಅರಿವಾದಾಗ ಈ ಸತ್ಯ
ಏಕಾಂತದ ಸಾಂಗತ್ಯದಲ್ಲಿ
ಬಿಚ್ಚಿಕೊಂಡಿದೆ ಆನಂದದ ಸರಕು


Monday, 14 April 2014

ಗೆಳೆಯನಿಗೊಂದು ಪತ್ರ-೨೪:ಎಲ್ಲರೂ ತಪ್ಪದೇ ಮತದಾನ ಮಾಡಿ ನಿಮ್ಮ ಹಕ್ಕು ಚಲಾಯಿಸಿ


ಮುದ್ದಿನ ಮೊದ್ದೇ,
                             ಇನ್ನು ಎರಡೇ ದಿನಗಳು ಬಾಕಿಯಿವೆ. ನಾಡಿದ್ದೇ ಚುನಾವಣೆ. ನನಗಂತೂ ಜೋರು ಖುಷಿಯಾಗ್ತಿದೆ ನೋಡು. ಯಾಕೆಂದರೆ ಈ ಬಾರಿಯ ಚುನಾವಣೆಯ ಕುರಿತು ನಿರೀಕ್ಷೆಗಳು ಬೆಟ್ಟದಷ್ಟಿವೆ. ದೇಶದಲ್ಲಿ ಬದಲಾವಣೆಯ ಗಾಳಿ ಬೀಸಬಹುದೆಂಬ ಆಶಯ ಎಲ್ಲರ ಮನದಲ್ಲಿ ಮನೆ ಮಾಡಿದೆ. ಅದಕ್ಕೆ ಮುನ್ನುಡಿಯೇನೋ ಎಂಬಂತೆ ಈಗಾಗಲೇ ಚುನಾವಣೆ ನಡೆದಿರುವ ಎಲ್ಲ ಕ್ಷೇತ್ರಗಳಲ್ಲಿ ದಾಖಲೆಯ ಮತದಾನವಾಗಿದೆ. ನನಗೆ ಇದೆಲ್ಲದಕ್ಕಿಂತಲೂ ಹೆಚ್ಚಾಗಿ ಮೊದಲ ಬಾರಿಗೆ ಮತ ಹಾಕುವ ಸಂಭ್ರಮ. ಇದಕ್ಕಿಂತಾ ದೊಡ್ಡ ಕಾರಣ ಬೇಕಾ..??
                               ಒಂದು ವಿಷಯದ ಬಗ್ಗೆ ಯೋಚಿಸಿದರೆ ಬಹಳ ಬೇಸರವಾಗುತ್ತದೆ. ಮತದಾನ ಪ್ರತಿಯೊಬ್ಬ ವಯಸ್ಕರ ಹಕ್ಕು ಎನ್ನುವುದು ತಿಳಿದಿದ್ದರೂ ಸಹ ಅದನ್ನು ಚಲಾಯಿಸದೇ ಇರುವವರೇ ಬಹಳ ಮಂದಿ. ಎಲ್ಲ ಬಗೆಯ ಅನುಕೂಲತೆಗಳಿದ್ದರೂ, ಸರ್ಕಾರ ಹಲವು ಸವಲತ್ತುಗಳನ್ನು ಮಾಡಿಕೊಟ್ಟಿದ್ದರೂ ಮತಗಟ್ಟೆಯವರೆಗೆ ಹೋಗದೇ ಮನೆಯಲ್ಲೇ ಇಡೀ ದಿನವನ್ನು ಕಳೆಯುವವರ ಸಂಖ್ಯೆಯೇ ಹೆಚ್ಚು. ನನ್ನ ಮತವೊಂದರಿಂದಲೇ ಏನು ಬದಲಾವಣೆಯಾಗದು ಎಂಬಂಥ ಉದಾಸೀನ ಹಲವರಿಗೆ. ಉತ್ತಮ ಅಭ್ಯರ್ಥಿ ಯಾರೂ ಇಲ್ಲ ಎಂದು ಆದರ್ಶದ ಮಾತನಾಡುವವರು ಕೆಲವರು. ಇನ್ನೂ ಕೆಲವರು ಇರುತ್ತಾರೆ. ಅವರಿಗೆ ಮತದಾನದ ಮಹತ್ವವೇ ಗೊತ್ತಿರುವುದಿಲ್ಲ. ಇದೆಲ್ಲದರ ಜೊತೆಗೆ ಈ ಸಲ ಎಪ್ರಿಲ್ ೧೭ರಂದು ಚುನಾವಣೆ. ಅವತ್ತು ಹೇಗಿದ್ದರೂ ಸರ್ಕಾರಿ ರಜಾದಿನ. ಮರುದಿನವೇ ಗುಡ್ ಫ್ರೈಡೆ. ಹಾಗೆಯೇ ಮುಂದಿನ ಒಂದು ದಿನ ರಜಾ ಹಾಕಿಬಿಟ್ಟರೆ ಆರಾಮಾಗಿ ನಾಲ್ಕು ದಿನಗಳ ಕಾಲ ಹಾಲಿಡೇ ಮಜಾ ಅನುಭವಿಸಬಹುದು ಎನ್ನುತ್ತಾ ಬಹಳ ಜನ ಪ್ರವಾಸ ಹೋಗುವ ಸಿದ್ಧತೆಯನ್ನು ಈ ಮೊದಲೇ ಮಾಡಿಕೊಂಡಿರುತ್ತಾರೆ. ಅಯ್ಯೋ ಈಗ ಟಿಕೆಟ್ ಕ್ಯಾನ್ಸಲ್ ಮಾಡಿಸಲಿಕ್ಕಾಗುವುದಿಲ್ಲ ಎಂದು ತಮ್ಮ ಅಸಹಾಯಕತೆಯನ್ನೇ ನೆಪವಾಗಿ ಒಡ್ಡುತ್ತಾರೆ.


                              ಈ ಸಲವಂತೂ ಮತದಾರರನ್ನು ಸೆಳೆಯಲು ಸ್ವತಃ ಚುನಾವಣಾ ಆಯೋಗವೇ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಜೊತೆಗೆ ಅಭ್ಯರ್ಥಿಯನ್ನು ತಿರಸ್ಕರಿಸಿ ಮತ ಹಾಕುವ ಹೊಸದೊಂದು ಆಯ್ಕೆಯನ್ನೂ ಜಾರಿಗೆ ತಂದಿದೆ. ಮತದಾನ ಎಲ್ಲರದೂ ಸಮಾನ ಹಕ್ಕು. ಅದನ್ನು ಚಲಾಯಿಸಿದವರಿಗೆ ಮಾತ್ರವೇ ದೇಶದ ಬಗ್ಗೆ, ರಾಜಕೀಯದ ಬಗ್ಗೆ, ವ್ಯವಸ್ಥೆಯ ಬಗ್ಗೆ ಮಾತನಾಡುವ ಹಕ್ಕೂ ಇರುತ್ತದಲ್ಲದೇ ಸರ್ಕಾರದ ಯೋಜನೆಗಳನ್ನು ಅನುಭವಿಸುವ ಯೋಗ್ಯತೆಯಿರುತ್ತದೆ. ಅದು ಬಿಟ್ಟು ‘ ಈ ದೇಶ ಯಾವಾಗಲೂ ಹೀಗೆ ಇರುತ್ತದೆಯೇ ಹೊರತು ಎಂದಿಗೂ ಉದ್ಧಾರವಾಗುವ ಮಾತೇ ಇಲ್ಲ.’ ಎಂದು ಟೀಕಿಸಿದರೆ ಆ ಮಾತಿಗೆ ಅರ್ಥವಿಲ್ಲವಷ್ಟೆ. ಉದ್ಧಾರಮಾಡಲಿ ಎಂದೇ ಅದರ ಮೊದಲ ಹೆಜ್ಜೆಯಾಗಿ ನಮ್ಮ ಸಂವಿಧಾನ ನಮಗೆ ನೀಡಿರುವ ಒಳ್ಳೆಯ ಅವಕಾಶವೇ ಈ ಮತದಾನದ ಹಕ್ಕು. ಎಲ್ಲರೂ ತಮ್ಮ ತಮ್ಮ ಹಕ್ಕು ಚಲಾಯಿಸಿ ಉತ್ತಮ ನಾಯಕರನ್ನು ದೇಶವನ್ನಾಳಲು ಆರಿಸಿ ಕಳುಹಿಸಿ ಆ ಮೂಲಕ ದೇಶವನ್ನು ಉದ್ಧಾರ ಮಾಡಲಿ ಎಂದೇ ನಿಯಮಿತವಾಗಿ ಚುನಾವಣೆಯನ್ನು ನಡೆಸುವುದಲ್ಲವೇ...?? ಇಂಥ ಅವಕಾಶವನ್ನು ಉಪಯೋಗಿಸದೇ ಇರುವುದು ನಮ್ಮದೇ ಮೂರ್ಖತನವಲ್ಲವೇ...??
                                     ನಾನಂತೂ ಹಿಂದಿನ ದಿನವೇ ಮನೆಗೆ ಹೋಗುತ್ತಿದ್ದೇನೆ. ನನ್ನ ಗೆಳೆಯ-ಗೆಳತಿಯರಿಗೂ ಮುದ್ದಾಂ ಮತಹಾಕಿರೆಂದು ಹೇಳೀದ್ದೇನೆ. ನೀನೂ ಮತ ಹಾಕಲು ಹೋಗುತ್ತೀಯಲ್ಲ..?? ಹೋಗುತ್ತೀಯ ಬಿಡು. ಗಂಟೆ ಎರಡರ ಹತ್ತಿರವಾಯಿತು. ಮತ ಹಾಕಿ ಬಂದ ನಂತರ ಮತ್ತೆ ಸಿಗುತ್ತೇನೆ. ಶುಭರಾತ್ರಿ.

                             ಪ್ರೀತಿಯಿಂದ,

                                                                                                                  ಎಂದೆಂದೂ ನಿನ್ನವಳು,
                                                                                                                         ನಿನ್ನೊಲುಮೆ