Sunday, 30 March 2014

ಗೆಳೆಯನಿಗೊಂದು ಪತ್ರ-೨೧:ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ


ಒಲವಿನ ಗೆಳೆಯಾ,
                             ಯುಗಾದಿಯ ಹಾರ್ದಿಕ ಶುಭಾಷಯಗಳು. ಬೇವು-ಬೆಲ್ಲವನ್ನು ಹಂಚಿದೆಯಾ..?? ಮತ್ತೆ ಮನೆಯಲ್ಲಿ ಒಬ್ಬಟ್ಟು, ಹೋಳಿಗೆ, ಮಂಡಿಗೆ ಎಲ್ಲವನ್ನು ಮಾಡಿದ್ದಾರಾ..?? ನೀನು ಎಲ್ಲವನ್ನು ಎಷ್ಟೆಷ್ಟು ಬಾರಿ ತಿಂದು ಮುಗಿಸಿದೆ..??
                               ಯುಗಾದಿ ಹಿಂದೂ ಪಂಚಾಂಗದ ಪ್ರಪ್ರಥಮ ದಿವಸ. ಅಂದರೆ ವಸಂತನ ಆಗಮನದೊಂದಿಗೆ ಬರುವ ಚೈತ್ರ ಮಾಸದ ಮೊದಲನೆಯ ದಿವಸ. ತಳಿರು ತೋರಣಗಳಿಂದ ಮನೆಯನ್ನಲಂಕರಿಸಿ ಹೊಸ ವರ್ಷವನ್ನು ಸ್ವಾಗತಿಸುವ ಹಬ್ಬ. ಬೇವು ಬೆಲ್ಲಗಳನ್ನು ಹಂಚಿ ಸವಿಯುವ ಸಂಪ್ರದಾಯದ ಹಬ್ಬ. ನಾಳೆ ಬರುವ ಸುಖ ದುಃಖಗಳನ್ನು ಸಮನಾಗಿ ಸ್ವೀಕರಿಸುತ್ತೇನೆಂಬ ವಾಗ್ದಾನ ಗೈಯ್ಯುವ ಹಬ್ಬ. ಎಲ್ಲಕ್ಕಿಂತ ಮುಖ್ಯವಾಗಿ ಕಾಲರಾಯನ ರಾಯಭಾರಿಯಾಗಿ ಪ್ರತಿ ವರ್ಷವೂ ಬರುವುದೇ ಈ ಯುಗಾದಿ.
                           ಕಾಲರಾಯ ನಿರಂತರತೆಯ ಪ್ರತೀಕ. ಆತನ ಓಟಕ್ಕೆ ಯಾರೂ ತಡೆಹಾಕಲಾರರು, ಏನೊಂದೂ ಓಟದ ವೇಗವನ್ನು ತಗ್ಗಿಸಲಾರದು. ನಾವೇನೋ ಯುಗ, ವರುಷ, ಋತು, ಮಾಸ, ಪಕ್ಷ, ವಾರ, ದಿನಗಳೆಂದು ನಮ್ಮ ಅಗತ್ಯಕ್ಕೆಂಬಂತೆ ಕಾಲವನ್ನು ವಿಭಾಗಿಸಿಕೊಂಡಿದ್ದೇವೆಯಷ್ಟೆ. ಬಹುಶಃ, ಇದು  ಕಾಲರಾಯನ ಇರುವಿಕೆಯನ್ನು ಸಾರುವುದರ ಜೊತೆಜೊತೆಗೆ ಆತನ ಓಟದ ಗತಿಯ ಕುರಿತು ನಮಗೆ ಅರಿವು ಮೂಡಿಸಲೆಂದೇ ಇರಬೇಕು. ಕಾಲರಾಯನ ಪಯಣ ಒಂದೊಂದು ಹಂತವನ್ನು ತಲುಪಿದಂತೆಲ್ಲ ಅದನ್ನು ತಿಳಿಸಲು ಆತನ ರಾಯಭಾರಿಯಾಗಿ ಯುಗಾದಿ ನಮ್ಮೆಲ್ಲರ ಮನೆಯಂಗಳಕ್ಕೆ ಬರುತ್ತದೆ. ಆ ದಿನವು ಕಾಲನ ಹೊಸ ಪಯಣಕ್ಕೆ ನಾಂದಿಯೆಂಬಂತೆ ಮತ್ತೆ ಋತು, ಮಾಸ, ಪಕ್ಷಗಳೆಲ್ಲ ಮೊದಲುಗೊಳ್ಳುತ್ತವೆ. ಜೀವನವೂ ಹೀಗೆಯೇ ಅಲ್ಲವೇ..?? ಬಾಲ್ಯ, ಯೌವ್ವನ, ಮಧ್ಯಾವಸ್ಥೆ, ಮುಪ್ಪುಗಳೆಂದು ನಾವು ಭಾಗಿಸಿದರೂ ಬದುಕು ಹರಿಯುತ್ತಲೇ ಇರಬೇಕೆ ಹೊರತು ಯಾವ ಕ್ಷಣದಲ್ಲೂ ನಿಲ್ಲಬಾರದು. ಯುಗಾದಿ ಈ ಸಂದೇಶವನ್ನೂ ಸಹ ಹೊತ್ತು ತರುತ್ತದೆ.
                         ಯುಗಾದಿಯ ಹಬ್ಬದಂದು ಬೇವು ಬೆಲ್ಲ ಹಂಚುವುದರಲ್ಲೂ ಒಂದು ಸದುದ್ದೇಶವಿದೆ, ಆಶಯವಿದೆ. ಜೀವನವೆಂದರೆ ಸಿಹಿ ಕಹಿಗಳ ಸಮ್ಮಿಶ್ರಣ. ಸುಖ ಬಂದಾಗ ಹಿಗ್ಗದೇ ದುಃಖ ಬಂದಾಗ ಕುಗ್ಗದೇ ಎಲ್ಲವನ್ನೂ ಸಮಾನವೆಂಬಂತೆ ಪೂರ್ಣ ಚಿತ್ತದಿಂದ ಸ್ವೀಕರಿಸಬೇಕು ಎಂದು ತಿಳಿಸುವುದೇ ಬೇವು ಬೆಲ್ಲದ ಆಶಯ. ಇನ್ನು ಯುಗಾದಿ ಕೇವಲ ನಮಗೆ ಮಾತ್ರವಲ್ಲ, ಪ್ರಕೃತಿಗೂ ಕೂಡ ಹೊಸ ವರ್ಷದ ಸಂಭ್ರಮ. ಗಿಡಮರಗಳೆಲ್ಲಾ ಚಿಗುರಿ ನಿಂತು ಹಕ್ಕಿಗಳು ಹಾಡುವ ಹೊತ್ತು. ಹಳೆಯ ಬೇಸರ, ದುಗುಡಗಳನ್ನೆಲ್ಲಾ ಮನಸಿನಿಂದ ಹೊರಗೋಡಿಸಿ ಹೊಸ ಸಂತೋಷ, ಉತ್ಸಾಹಗಳೊಂದಿಗೆ ಹೆಜ್ಜೆ ಹಾಕುವ ಸಂಭ್ರಮ, ಸಡಗರ.
                      ಯುಗಾದಿಯೆಂದಾಗ ಥಟ್ಟನೆ ಮನಸಿಗೆ ನೆನಪಾಗುವುದೇ ಬೇಂದ್ರೆ ಅಜ್ಜನ ಕವಿತೆ. ಅದನ್ನು ಕೇಳಿ, ಹಾಡಿ ಆನಂದಿಸದವರುಂಟೆ..??
                              "ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
                                 ಹೊಸ ವರುಷಕೆ ಹೊಸ ವರುಷವ ಹೊಸತು ಹೊಸತು ತರುತಿದೆ"
ಈ ವರುಷದ ಯುಗಾದಿ ಎಲ್ಲರ ಬದುಕಿನಲ್ಲೂ ಶುಭವನ್ನೇ ತರಲಿ.

                          ಪ್ರೀತಿಯಿಂದ

                                                                                                                      ಎಂದೆಂದೂ ನಿನ್ನವಳು,
                                                                                                                           ನಿನ್ನೊಲುಮೆ


ಮತ್ತೆ ಬಂದಿದೆ ಯುಗಾದಿ

                  
ಪ್ರತಿ ವರ್ಷದಂತೆ ಇಂದು ಮತ್ತೆ ಬಂದಿದೆ
ಯುಗಗಳ ನೆನಪಿಸುತ್ತ ಯುಗಾದಿ
ಸಿಹಿ ಕಹಿಗಳ ಸಮ್ಮಿಶ್ರಣದ ಬುತ್ತಿಯೊಂದಿಗೆ
ಕಾಲರಾಯನ ಸಂದೇಶವ ಹೊತ್ತು

ಹಳೆಯ ಕೊಳೆಗಳು ತೊಳೆದು ಹೋಗಲಿ
ಹೊಸ ವರ್ಷದ ಹಸಿ ಸಿಂಚನದಲ್ಲಿ
ಮನಸಿನಲ್ಲಿನ ಬೇವಿನ ಕಹಿಯನ್ನು
ಸಿಹಿಯಾಗಿಸಲಿ ಬೆಲ್ಲದ ಸವಿಯು

ಆದಿಯೆಂಬ ಕಾಲನ ಬಾಲ್ಯವು
ಅಂತ್ಯವೆಂಬ ಮುಪ್ಪನ್ನು ಪಡೆಯುವ ಮುನ್ನ
ಜೀವನವೆಂಬ ಯೌವ್ವನದಲ್ಲಿನ ಸಿಹಿಕಹಿಯನ್ನು
ಸಮಚಿತ್ತದಿಂದ ಸ್ವೀಕರಿಸಿ ನಡೆಯಬೇಕು

ವಸಂತನ ಆಗಮನ ಸಾರುತಿದೆ ಎಲ್ಲರಿಗೂ
ಚಿಗುರಿ ನಿಲ್ಲುವ ಹೊಸ ಆಶಯವನ್ನು
ಕಾಲಚಕ್ರದ ಪರಿಭ್ರಮಣಕ್ಕೆ ನಾಂದಿಯಾಗಿ
ಪಯಣಕ್ಕೆ ಶುಭ ಕೋರುವಂತಿದೆ ಯುಗಾದಿ

ಚಲನೆಯ ಅನಂತತೆಯ ಸಾರುತಲಿ
ಮತ್ತೆ ಬಂದಿದೆ ಈ ವರ್ಷವೂ ಯುಗಾದಿ
ಸೃಷ್ಟಿಕರ್ತನ ಆಟವನರಿತು ತಕ್ಕನಾಗಿ
ಹೆಜ್ಜೆಯಿಡುತ ಸಾಗೋಣ ಬದುಕಿನ ಹಾದಿ


ನಿತ್ಯೋತ್ಸವ
ಕಾಯಲೇಕೆ ನಾನು ಎಲ್ಲರಂತೆ
ದೀಪಾವಳಿ, ದಸರಾ, ಯುಗಾದಿಯೆಂದು
ನೀ ನನ್ನ ಜೊತೆಗಿರಲು
ನಿನ್ನೊಲವ ಹರಿಸುತಿರಲು
ಪ್ರತಿ ಕ್ಷಣವೂ ಹಬ್ಬವೇ ಅಲ್ಲವೇ..??
ಅದಕೊಂದು ದಿನದ ನೆಪ ಬೇಕೆ..??

ನಿನ್ನ ನಾ ಭೇಟಿಯಾಗುವ ಪ್ರತಿ ದಿನವೂ
ನನ್ನ ಜೀವನದ ಹೊಸ ಯುಗಾದಿ
ಕಾಲವೇ ಸಾಕ್ಷಿಯಾಗಿಹುದು ಪ್ರೀತಿಯ ಪಯಣಕೆ
ವಿರಸದ ಬೇವಿನ ಕಹಿಯನ್ನು ಮರೆಸಿ
ಸರಸದ ಬೆಲ್ಲದ ಸಿಹಿಯನು ಉಣಿಸುವ
ಕ್ಷಣ ಹೊತ್ತು ಯುಗಾದಿಯ ಸಂಭ್ರಮವೇ ನನಗೆ

ನಿನ್ನ ಪ್ರೇಮ ಪೂಜೆಯ ಕಾರ್ಯದ
ದಿನಗಳೆಲ್ಲಾ ದಸರೆಯ ವೈಭವದಂತೆ
ಕೇವಲ ನವ, ದಶ, ಸಹಸ್ರ ದಿನಗಳೇಕೆ
ನಮ್ಮ ಪ್ರೀತಿಯ ವಿಜಯಕ್ಕೆ ಸಂಕೇತವಾಗಿ
ಅನುದಿನವೂ ನಡೆಯಲಿ ಮೆರವಣಿಗೆ
ಒಲವಿನ ಅಂಬಾರಿಯಲಿ ನಾವಿಬ್ಬರೂ


ನಿನ್ನ ನೆನಪಿನ ಸೌರಭದಲ್ಲಿ ತೇಲುವಾಗ
ನನ್ನ ತುಟಿಯಂಚಿನಲ್ಲಿ ಮೂಡುವ
ಮುಗುಳು ನಗೆಯ ಹೊತ್ತಿಗಿಂತ
ಬೇರೆ ದೀಪಾವಳಿಯ ಸಡಗರ ಎಲ್ಲಿದೆ..??
ನಿನ್ನ ಸನಿಹ ನೀಡುವ ಬೆಳಕು ಓಡಿಸದೆ
ನನ್ನ ಒಂಟಿಯಾದ ಮನದ ಕತ್ತಲನ್ನು

ನೀ ನನ್ನ ಬದುಕಿನಲ್ಲಿ ಹೆಜ್ಜೆ ಇಟ್ಟು
ಮನಸಿನ ಕಾಲು ಹಾದಿಯಲ್ಲಿ ನಡೆದು
ಹೃದಯದ ಮಂದಿರವನ್ನು ಸೇರಿದಾಗಿನಿಂದ
ನಾ ಕಾಣೆ ಬೇಸರವೆಂಬ ಗುಮ್ಮವ
ನಿನ್ನ ಪ್ರೀತಿಯ ಉದ್ಯಾನದ ಮಡಿಲಲ್ಲಿ
ಎಂದೆಂದೂ ಹರುಷದ ನಿತ್ಯೋತ್ಸವ


Saturday, 29 March 2014

ಗೆಳೆಯನಿಗೊಂದು ಪತ್ರ-೨೦:ಎಂಥಾ ಶೆಕೆ ಮಾರಾಯ್ರೇ..!!


ಓಯ್ ಕೋತಿ,
                       ಶುಭಮುಂಜಾನೆ. ಇನ್ನೂ ಎದ್ದಿಲ್ಲವಾ..?? ಗಂಟೆ ಅದಾಗಲೇ ಒಂಭತ್ತು ದಾಟಿಯಾಯಿತು. ಏಳು ಮಾರಾಯಾ. ಇನ್ನೆಷ್ಟು ಹೊತ್ತು ಮಲಗುವಿ..?? ಮಾಡಲು ಬೇಕಾದಷ್ಟು ಕೆಲಸಗಳಿಲ್ಲವೇ..?? ಏಳು ಏಳು.
                        ನಿಮ್ಮ ಹುಬ್ಬಳ್ಳಿಗೆ ಮೆಚ್ಚಬೇಕು ಕಣೋ. ಅದ್ಯಾವ ಪರಿ ಸೆಕೆ ಇಲ್ಲಿ. ನಮ್ಮ ಮಲೆನಾಡಿನಲ್ಲಿ ಇಷ್ಟೊಂದು ಧಗೆ ಇರುವುದಿಲ್ಲ. ಹೆಚ್ಚೆಂದರೆ ಬೆಳಿಗ್ಗೆ ೧೦.೩೦ ಇಂದ ಸಂಜೆ ೫.೦೦ ತನಕ ಬಿಸಿಲು ತನ್ನ ಝಳವನ್ನು ತೋರಿಸುತ್ತದೆ. ಇಲ್ಲಿ ಹಾಗಲ್ಲ, ಬೆಳಿಗ್ಗೆ ೯ ಗಂಟೆಯ ಹೊತ್ತಿಗೇ ಮೈ ಸುಡುವಂತಾಗುತ್ತದೆ. ಇನ್ನು ಸೂರ್ಯ ನೆತ್ತಿಯ ಮೇಲೆ ಇದ್ದಷ್ಟೂ ಹೊತ್ತು ಕೇಳುವುದೇ ಬೇಡ. ಈ ಮೊದಲು ಯಾವತ್ತೂ ಛತ್ರಿಯನ್ನು ಬಿಸಿಲಿಗೆ ಅಡ್ಡ ಹಿಡಿದವಳಲ್ಲ ನಾನು. ಆದರೆ, ಇಲ್ಲಿ ಛತ್ರಿ ಇಲ್ಲವೆಂದಾದರೆ ಒಂದು ಹೆಜ್ಜೆಯನ್ನೂ ಸಹ ಕಿತ್ತು ಹಾಕಲಾಗುವುದಿಲ್ಲ. ಬಿಸಿಲಿನಲ್ಲಿ ನಡೆದು ಬಂದೆವೆಂದರೆ ‘ಕೆಂಪಾದವೋ ಎಲ್ಲ ಕೆಂಪಾದವೋ’ ಎಂದು ಹಾಡುವಂತಾಗುತ್ತದೆ.
                           ಇನ್ನು ನಮ್ಮ ಹಾಸ್ಟೆಲ್ ಫ್ಯಾನುಗಳೋ, ದೇವರಿಗೆ ಪ್ರೀತಿ. ಆಹಾ..!! ಅವು ತಿರುಗುವುದರಿಂದ ಗಾಳಿ ಬರುತ್ತದೋ ಗಾಳಿಯೇ ಬಂದು ಅವುಗಳನ್ನು ತಿರುಗಿಸುತ್ತದೋ, ಅವೇ ಉತ್ತರ ಹೇಳಬೇಕು. ಬಿಸಿಲಿನಲ್ಲಿ ಬಳಲಿ ಬಂದಾಗ ಒಮ್ಮೆ ಮುಖ ತೊಳೆದುಕೊಳ್ಳೋಣ ಎಂದರೆ, ಆಗ ನಲ್ಲಿಯಲ್ಲಿ ಸಿಗುವುದು ಬಿಸಿಯಾದ ನೀರು..!! ಅದೇ ಚಳಿಗಾಲದಲ್ಲಿ ಬೇಕೆಂದರೂ ಈ ಬಿಸಿನೀರು ದೊರೆಯುವುದಿಲ್ಲ. ರಾತ್ರಿಯ ಹೊತ್ತು ಚೆನ್ನಾಗಿ ಗಾಳಿಯಾಡಲೆಂದು ಕಿಟಕಿಗಳನ್ನು ತೆರೆದಿಟ್ಟವೆಂದರೆ, ಅಗೋ ತಮ್ಮ ಸಂಗೀತ ಕಚೇರಿ ನಡೆಸಲು ಮುಕ್ತವಾಗಿ ಆಹ್ವಾನಿಸುತ್ತಿದ್ದಾರೆಂಬಂತೆ ಆಗಮಿಸುತ್ತವೆ ಸೊಳ್ಳೆಗಳ ಮೇಳಗಳು. ಸೆಖೆ ಸಾಥಿಯಾಗಿ ಎಷ್ಟೊಂದು ಗೆಳೆಯರು. ಯಪ್ಪಾ, ಒಂದೇ ಎರಡೇ.


                       ಈ ವರ್ಷ ಮಾರ್ಚ್-ಎಪ್ರಿಲ್ ನಲ್ಲೇ ಅತಿಯಾದ ಸೆಖೆ ಕಾಣಿಸಿಕೊಂಡಿದ್ದು ಇನ್ನು ಮೇ ತಿಂಗಳಿನಲ್ಲಿ ತಾಪ ಎಷ್ಟು ಹೆಚ್ಚಬಹುದೆಂದು ಆತಂಕಗೊಳ್ಳುವಂತಾಗಿದೆ. ಈ ಮಧ್ಯೆ ಅಕಾಲದಲ್ಲಿ ಸುರಿದ ಮಳೆಯಿಂದಾಗಿ ತಾಪ ಇನ್ನೂ ಅಧಿಕಗೊಂಡಿದೆ. ಬಯಲುಸೀಮೆಗಳಲ್ಲಂತೂ ಕೇಳುವುದೇ ಬೇಡ. ಹೈದರಾಬಾದ್-ಕರ್ನಾಟಕ ಪ್ರದೇಶಗಳಲ್ಲಿ ಅಧಿಕ ಉಷ್ಣಾಂಶ(೩೮ ಡಿಗ್ರಿ ಸೆಲ್ಸಿಯಸ್) ದಾಖಲಾಗಿದೆ. ಕರಾವಳಿಯಲ್ಲೂ ಬಿಸಿಲು ಪ್ರಖರವಾಗಿಯೇ ಇದೆ. ಉಡುಪಿ, ಮಂಗಳೂರುಗಳಲ್ಲಿ ಕಳೆದ ವರ್ಷಕ್ಕಿಂತ ಸುಮಾರು ೫.೨ ಡಿಗ್ರಿಯಷ್ಟು ತಾಪಮಾನ ಹೆಚ್ಚಿದೆ. ಬೇಸಿಗೆಯಲ್ಲೂ ಹಸುರಿನ ಚಾದರದಿಂದಾಗಿ ಸದಾ ತಂಪಾಗಿಯೇ ಇರುತ್ತಿದ್ದ ಮಲೆನಾಡು ಸಹ ಇಂದು ಬಿಸಿಯ ಬೀಡಾಗಿದೆ. ಸೂರ್ಯನ ಬಿಸಿಲಿಗೆ ಅಡ್ಡನಿಂತು ನೆರಳಿನ ತಂಪು ನೀಡುತ್ತಿದ್ದ ಮರಗಳಿಗೆ ಕೊಡಲಿ ಏಟು ಬೀಳುತ್ತಿದೆ. ಹಸಿರಿನ ಬದಲು ಕಾಂಕ್ರೀಟು ಕಾಡುಗಳು ಜಾಸ್ತಿಯಾಗುತ್ತಿವೆ. ಪರಿಣಾಮ ಮಲೆನಾಡು ಬೋಳು ಬೋಳಾಗಿ ಬಿಸಿಯಾಗುತ್ತಿದೆ.
" ಭೂ ಮಟ್ಟದಿಂದ ಗಾಳಿ ಬೀಸುತ್ತಿರುವುದರಿಂದ ಅದರಲ್ಲಿ ತೇವಾಂಶ ಇರದ ಕಾರಣ ಅಧಿಕ ಉಷ್ಣಾಂಶ ಕಂಡು ಬಂದಿದೆ. ಬೇಸಿಗೆಯಲ್ಲಿ ಇದು ಸಾಮಾನ್ಯ. ಸಮುದ್ರ ಮಟ್ಟದಿಂದ ಗಾಳಿ ಬೀಸತೊಡಗಿದಂತೆ ಉಷ್ಣಾಂಶ ತಗ್ಗುತ್ತದೆ " ಎನ್ನುವುದು ಹವಾಮಾನ ಇಲಾಖೆಯ ನಿರ್ದೇಶಕರ ಅಂಬೋಣ.
                     ಉಫ್.... ಸೆಖೆಯನ್ನು ತಡೆಯಲಾಗುತ್ತಿಲ್ಲ. ನಾನೀಗ ಎಳನೀರು ಕುಡಿಯಲು ಹೋಗಬೇಕು. ಹಾಗೆ ಒಂದು ಐಸ್ ಕ್ರೀಮ್ ತಿಂದು ಬರುವ ಪ್ಲಾನ್ ಇದೆ. ನಿನಗೆ ಇನ್ನೊಮ್ಮೆ ಸಿಗುತ್ತೇನೆ. ಅಲ್ಲಿಯ ತನಕ ಬಿಸಿಲಿನ ಬಿಸಿಯ ಮಜಾ ಅನುಭವಿಸುತ್ತಿರು. ಬರಲಾ...??

                       ಪ್ರೀತಿಯಿಂದ,

                                                                                                                    ಎಂದೆಂದೂ ನಿನ್ನವಳು,
                                                                                                                            ನಿನ್ನೊಲುಮೆ


ಕಣ್ಣಾಮುಚ್ಚಾಲೆ


ಮನಸಿನ ಮೂಲೆಯಲ್ಲೇಲ್ಲೋ ಕಳ್ಳನಂತೆ
ಬೆಚ್ಚನೆ ಅಡಗಿ ಕುಳಿತಿದ್ದ ಪ್ರೀತಿಯಿಂದು
ಭಾವಗಳ ಜೊತೆಯಾಗಿ ನಡೆಸಿದ ಹುಡುಕಾಟದಲ್ಲಿ
ಯೋಚನೆಯ ಕೈಗೆ ಸಿಕ್ಕುಬಿದ್ದಾಗಿದೆ
ಇನ್ನೇತಕೆ ಬೇಕು ಕಣ್ಣು ಕಟ್ಟಿ ಕಾಡುವ ಪರಿ
ಸ್ಪಷ್ಟತೆಯ ನೋಟವು ತೆರೆದುಕೊಂಡ ಮೇಲೆ

ಕಣ್ಣಳತೆಯ ದೂರದಲ್ಲಿದ್ದರೂ ಸಹ
ಕೇಳಲಿಲ್ಲ ಹೃದಯದ ಬಡಿತಗಳ ತುಡಿತವು
ಕಾಣದಾಯಿತು ಅರಳಿ ನಿಂತ ಒಲವಿನ ಸುಮವು
ಬೀರದಾಯಿತು ತನ್ನಿರುವಿನ ಸೌರಭವ
ಒಡಲಲ್ಲೇ ಮಲಗಿದ್ದ ಕೂಸಿನ ಪಿಸುಮಾತಿಗೆ
ಊರೆಲ್ಲಾ ಅಲೆದಾಡಿ ಹುಡುಕಾಡುವಂತೆ

ಎಷ್ಟು ಬಗೆಬಗೆಯ ಆಟವಾಡಿದರೂ
ಕೊನೆಯಲ್ಲಿ ಅಂಕದ ಪರದೆ ಕಳಚಿತಲ್ಲ
ಆಡಿ ದಣಿದ ನಂತರ ಸಿಕ್ಕ ಜಯದಿಂದ
ಎರಡು ಮನಸಿನ ಭಾವನೆಗಳು
ಅಂತ್ಯದಲ್ಲಿ ಸೋಲೊಪ್ಪಿಕೊಂಡಿಹವು
ಇನ್ನೇಕೆ ಬೇಕು ಸುಮ್ಮನೆ ಕಣ್ಣಾಮುಚ್ಚಾಲೆ


ಭೀತಿ

             
ಸುಪ್ತ ಸೌರಭದ ಆಳದಿಂದೆಲ್ಲೋ
ಎದ್ದು ಬಂತಂತಿದೆ ಅರಳು ಮಲ್ಲಿಗೆ
ಅರಳುತ್ತಲೇ ಮುದುಡಿಹೋಗುವೆನೆಂಬ
ಆ ಅನಿಶ್ಚಿತತೆಯ ತಲ್ಲಣದ ಹಿಂದೆ
ಅದ್ಯಾವ ಮೋಹದ ಕೈವಾಡವೋ..??

ಮೌನದ ಆ ಅಶರೀರವಾಣಿಯಲ್ಲೂ
ಇಣುಕುವುದು ಅಸ್ಪಷ್ಟ ಮಾತುಗಳು
ಕೇಳಿದರೆ ಕ್ಷೀಣವಾಗುವೆವೆಂಬ ಭಯವೋ..??
ಪ್ರೇಮ ಸಲ್ಲಾಪದ ಸಂಭಾಷಣೆಯ
ಆದಿಯಲ್ಲೇಕೆ ಉಪಾಂತ್ಯದ ಆತಂಕ..??

ಒಲವ ಪಯಣದ ಹಾದಿಯಲ್ಲಿ
ಕಳೆದುಹೋಗುವ ಈ ಅವ್ಯಕ್ತ ಶಂಕೆಯ
ಹಿಂದೆ ಕಂಡು ಕಾಣದಂತೆ ಅಡಗಿದೆ
ತನ್ನಿಂದ ತಾನು ದೂರವಾಗುವೆನೆಂಬ
ಹಿತವಾದ ಧನ್ಯತೆಯ ಭಾವ


Friday, 28 March 2014

ಕಣ್ಣಿದ್ದು ಕುರುಡರು


ಜೀವಜಗತ್ತಿನ ಬುದ್ಧಿವಂತ ಸೃಷ್ಟಿ
ಮಾನವನೆಂಬ ಮತಿಯಿಲ್ಲದ ಪ್ರಾಣಿ
ದೇವರು ಕೊಟ್ಟರೇನಂತೆ ವರಗಳ
ಮಂಗನ ಕೈಯ್ಯಲ್ಲಿನ ಮಾಣಿಕ್ಯದಂತೆ
ಇದ್ದ ಗುಣಗಳೆಲ್ಲಾ ನಿಷ್ಪ್ರಯೋಜಕ

ನೋಡಲೆರಡು ಕಣ್ಣಿದ್ದೂ ಆತ ಕುರುಡ
ಕಾಣಿಸದು ಒಳ್ಳೆಯತನವೆಂದೂ
ಕೆಟ್ಟದನ್ನು ಹುಡುಕಿಕೊಂಡು ಹೋಗುವ
ಕಣ್ಣಮುಂದಿರುವ ಸತ್ಯಗಳ ಅರಿಯನು
ಕಣ್ಣುಮುಚ್ಚಿಕೊಂಡೇ ಜಗತ್ತ ನೋಡುವನಾತ

ಕಿವಿಯಿದ್ದರೂ ಆತ ಕೇಳಲಾರ
ಮನ ಅರಳಿಸುವ ಪದಗಳನ್ನು
ಹೃದಯವಿದ್ದರೂ ಆತ ಕಲ್ಲಿನಂತೆ
ಸ್ಪಂದಿಸಲಾರ ಸುಖ - ದುಃಖಗಳಿಗೆ
ತನ್ನ ಸ್ವಾರ್ಥವೇ ಎಲ್ಲಕ್ಕಿಂತ ಮಿಗಿಲು

ಆಡುವ ಮಾತುಗಳೆಲ್ಲವೂ ಅರ್ಥರಹಿತ
ತನ್ನ ತಾ ಸ್ತುತಿಸಲೆಂಬಂತೆ
ಪರರ ಕುರಿತಾದ ನಿಂದೆಯ ಹೊರತು
ಬೇರೆ ಗೊತ್ತಿಲ್ಲ ವಿಚಾರಗಳು ಮಾತಿಗೆ
ಹಾಳು ಹರಟೆಯಲ್ಲೆ ಸುಮ್ಮನೆ ಕಾಲಹರಣ

ಮನುಜ ಜನ್ಮವನ್ನು ಹಾಳುಮಾಡಬೇಡಿರಿ
ದಾಸರ ವಾಣಿಯಿಂದು ಮೂಲೆಗುಂಪು
ತಮ್ಮ ತಾ ಅರಿಯದೇ ಸಾಗುತಿಹರೆಲ್ಲ
ಜೀವನದ ಸಂಜೆಯ ಹೊತ್ತಿಗೆ
ಎಚ್ಚರಗೊಂಡು ಪರಿತಪಿಸುವರು ಕೊನೆಗೆ


ಕಾಡದಿರು ನೆನಪೆ


ಕಾಡದಿರು ನೆನಪೆ ನೀ ನನ್ನನು
ಕಳ್ಳ ನೆಪಗಳ ಕಾರಣವ ನೀಡಿ
ಹಳೆಯ ಕ್ಷಣಗಳ ತಪವ ಗೈಯ್ಯುತ
ಸ್ಮೃತಿಯ ಅಂಗಳಕೆ ಲಗ್ಗೆ ಹಾಕುವೆ ಏಕೆ..??
ನನ್ನ ಸಂಕಟ ನಿನಗೆ ಆಟವೇ..??
ಬೆಳಗುತಿಹ ಮನಸಿನ ಪರದೆಯ ಮೇಲೆ
ಕಾರ್ಮೋಡಗಳ ಕಪ್ಪನ್ನು ಚೆಲ್ಲುವೆಯೇಕೆ..??

ಕಾಡದಿರು ನೆನಪೆ ನೀ ನನ್ನನು
ಸಮಾಧಿಯಾಗಿಹ ಕನಸುಗಳ ಜೀವವನ್ನು
ಭಾವಗಳ ಮಂತ್ರದಿಂದ ಬಡಿದೆಬ್ಬಿಸುವೆಯೇಕೆ..??
ತಂತಿ ಹರಿದ ಮೇಲೆ ನುಡಿಸಲಿ ಹೇಗೆ
ಹೊಸ ಗಾನ ಸ್ವರವ ಹೃದಯದಿಂದ..??
ಅರ್ಥವಿಲ್ಲದ ಪದಗಳ ಹೊತ್ತು ತಂದು
ಕಾವ್ಯ ಬರೆಸುವ ಹಠವೇಕೆ ನಿನಗೆ..??

ಕಾಡದಿರು ನೆನಪೆ ನೀ ನನ್ನನು
ವರ್ತಮಾನದ ಹುಣ್ಣಿಮೆಯಲ್ಲಿ
ಭೂತದ ಅಮಾವಾಸ್ಯೆಯ ಕತ್ತಲನ್ನು ಚೆಲ್ಲುತ
ಅರಳಿ ನಿಂತಿರುವ ನಗುವಿನ ಹೂವನ್ನು
ಕೈಯ್ಯಾರೆ ಬಾಡಿಸುವ ಚಟವೇಕೆ ನಿನಗೆ..??
ನಿನ್ನೊಂದಿಗಿನ ಪಂದ್ಯದಲ್ಲಿ ಸೋತುಹೋಗಿಹೆ
ದೂರ ಹೋಗು ನೀ ಬೇಡ ನನಗೆ


Thursday, 27 March 2014

ಜೋಕಾಲಿ


ಕೂತು ತೂಗುತ್ತಿರುವೆ ನಾ ಅಂದಿನಿಂದ
ನೀ ನನ್ನ ಮನದಂಗಳಕೆ ಬಂದು
ಒಲವಿನ ಹಗ್ಗ ಬಿಗಿದು ಚೆಂದದಿ
ಮೋಹದ ಜೋಕಾಲಿ ಕಟ್ಟಿದಂದಿನಿಂದ
ನೀ ಅತ್ತ ಬರದೇ ಹೋದರೂ
ನಿನ್ನ ಹಾದಿ ಕಾಯುತ್ತಲೇ ನಾ
ಜೀಕುತ್ತಿರುವೆ ಮತ್ತೆ ಮತ್ತೆ

ಈ ಹೊಸ ರಮ್ಯ ಭಾವಕೆ ಏನೆನ್ನಲಿ..??
ಪ್ರತಿ ಬಾರಿ ಮೇಲಕ್ಕೆ ಹೋದಾಗ
ನಿನ್ನ ಒಲುಮೆಯ ಲೋಕದಲ್ಲಿ ತೇಲಿದಂತೆ
ಪುನಃ ಕೆಳಕ್ಕೆ ಇಳಿವಾಗ ನಿನ್ನ
ಮಡಿಲಿಗೆ ಮರಳಿ ಬಂದಂಥ ಆನಂದ
ನಿನ್ನ ಗುಂಗಿನಲ್ಲಿ ಮೈಮರೆತಿಹೆ ನಾ
ಸಾಥಿಯಾಗಿದೆ ಈ ಉಯ್ಯಾಲೆಯ ಪಯಣ

ನನ್ನ ವೇಗಕ್ಕೆ ತಾಳವಾಗಿ ಹಾಡುತಿವೆ ಹಕ್ಕಿಗಳು
ಗಾಳಿಯೂ ನಿನ್ನ ನೆನಪುಗಳ ಸೌರಭವ ಬೀರುತ್ತ
ನಿನ್ನೊಂದಿಗೆ ಕಳೆದ ಕ್ಷಣಗಳು
ಮನದಲ್ಲಿ ಕಚಗುಳಿಯಿಟ್ಟು ನಗುವಾಗ
ನಿನ್ನ ಜೊತೆಗೂಡಿ ಉಯ್ಯಾಲೆಯಲ್ಲಿ ಮತ್ತೊಮ್ಮೆ
ಕೂತು ಜೀಕುವೆ ಬಯಕೆ ಗೆಳೆಯಾ
ಒಬ್ಬಳೇ ಎಷ್ಟೆಂದು ಆಡಲಿ ನಾನು..??


ಆಟ


ಭಾವಗಳ ಕಣ್ಣಾಮುಚ್ಚಾಲೆಯಾಟ
ಪ್ರತಿಯಾಗಿ ತುಡಿಯುವ ಮಿಡಿತಗಳಿಗಾಗಿ
ಆಟವಾಡುತ್ತ ಹುಡುಕಾಡುತ್ತ
ಕಳೆದುಹೋಗುವ ಆ ಸುಖದ ಪರಿ
ಹೊಸ ಭಾವನೆಗಳಿಗೆ ಜೀವ ಬಂದು
ಹೃದಯದ ಕಳ್ಳ ಸಿಕ್ಕಿಬಿದ್ದಾಗ

ಹಾವು ಏಣಿಯ ಆ ಆಟದ ಬಿಂಬ
ಏರಿಳಿತದ ನಡಿಗೆಯ ಹಾದಿಯಲ್ಲಿ
ಇಂದು ಬಲಿಯಾದರೇನಂತೆ ಹಾವಿಗೆ
ದಾಳದ ಮುಖವು ಬದಲಾದಂತೆ
ಏರಬಹುದು ಏಣಿಯನ್ನು ಮತ್ತೆ
ಯಾವುದೂ ಶಾಶ್ವತವಲ್ಲ ಇಲ್ಲಿ

ಗುರಿ ಸಾಧನೆಯ ಗಮ್ಯಕ್ಕಾಗಿ
ಅನವರತ ನಿಲ್ಲದ ಓಟ
ಬರುವ ಅಡೆತಡೆಗಳನ್ನು ನಿವಾರಿಸುತ
ಛಲ, ಭರವಸೆಯ ಹೊತ್ತು
ಸಾಧನೆಯ ದೀಕ್ಷೆ ಪಡೆದುಕೊಂಡಂತೆ
ವೇಗದ ಗತಿಯಲ್ಲಿ ಓಟದ ತಪಸ್ಸು

ಜೀವನವೆಂದರೆ ಆಟದ ಬಯಲು
ನಾವೆಲ್ಲಾ ಕಾಯಿಗಳು ಮಾತ್ರವೇ
ಮೇಲೆ ಕೂತಿರುವವ ಉರುಳಿಸುವ ದಾಳ
ಬದಲಿಸುವುದು ಆಟದ ಗತಿಯನ್ನು
ಅದಕೆ ತಕ್ಕಂತೆ ಹಾಕಬೇಕಿದೆ ನಡೆಯನ್ನು


Wednesday, 26 March 2014

ಬೇಸರ ಬಂದಾಗ...


                      ಬಹಳಷ್ಟು ಜನರಿಗೆ ಒಂದು ಸಂದೇಹವಿದೆ. ಅದು ಕೆಲವರಿಗೆ ಸಮಸ್ಯೆಯೂ ಹೌದು ಬಿಡಿ. ಬೇಸರ ಬಂದಾಗ ಅದರಿಂದ ಹೊರಬರುವುದು ಹೇಗೆ..?? ಬೇಸರಗೊಂಡು ಬಾಡಿಹೋಗುವ ಮನಸ್ಸನ್ನು ಮತ್ತೆ ಅರಳಿಸುವುದು ಹೇಗೆ..?? ಮನಸಿಗಾದ ನೋವು, ದುಃಖ, ಸಿಟ್ಟು, ಹತಾಶೆಗಳನ್ನೆಲ್ಲ ಮರೆತು ಉತ್ಸಾಹ, ನಗು, ಶಾಂತತೆಯನ್ನು ಹೊಂದುವುದಾದರೂ ಹೇಗೆ..??
                      ಇದಕ್ಕೆ ಉತ್ತರವಾಗಿ ಬಹಳಷ್ಟನ್ನು ಹೇಳಬಹುದು. ಮನಸ್ಸು ಮುದುಡಿಕೊಂಡಾಗ ಒಂಟಿಯಾಗಿ ಕೂರದೇ ಸ್ನೇಹಿತರೊಂದಿಗೆ ಬೆರೆಯಬೇಕು, ಖಾಲಿ ಕುಳಿತುಕೊಳ್ಳದೇ ಏನಾದರೊಂದು ಕೆಲಸದಲ್ಲಿ ಮನಸ್ಸನ್ನು ತೊಡಗಿಸಬೇಕು, ಉತ್ತಮ ಹವ್ಯಾಸಗಳಿದ್ದರೆ ಅದರತ್ತ ಮನಸ್ಸನ್ನು ಹರಿಸಬೇಕು, ಯಾವುದಾದರೂ ಒಳ್ಳೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡಬೇಕು, ನಾವು ನಂಬುವ ಆರಾಧಿಸುವ ದೇವರನ್ನು ಸ್ಮರಿಸಬೇಕು - ಇತ್ಯಾದಿ ಇತ್ಯಾದಿ. ಇವೆಲ್ಲವೂ ಉತ್ತಮವಾದವುಗಳೇ. ಆದರೆ ನನ್ನ ಬಳಿ ಇದಕ್ಕಿಂತಲೂ ಉತ್ತಮವಾದ ಒಂದು ಮನಸ್ಸು ಮುದಗೊಳಿಸುವ ಮಾರ್ಗವಿದೆ. ಹೇಳಲಾ..??
                    ಅದೇನೆಂದರೆ ಟೆರೇಸು ಹತ್ತುವುದು. ಇದೆಂಥಾ ಮಶ್ಕಿರಿ ಅನ್ನಿಸಿತಾ..?? ಮಶ್ಕಿರಿ ಅಲ್ಲ ಮಾರಾಯ್ರೆ, ಮಾರ್ಗ. ನಿಜಕ್ಕೂ ಒಮ್ಮೆ ಪ್ರಯತ್ನಿಸಿ ನೋಡಿ. ಬೇಸರವಾದಾಗ ಸುಮ್ಮನೆ ಎದ್ದು ಟೆರೇಸಿನ ಕಡೆ ಸಾಗಿರಿ. ಖಾಲಿ ಖಾಲಿಯಾಗಿರುವ ಮನಸ್ಸು ಹೊತ್ತು ಖಾಲಿಯೇ ತಾನೆಂಬಂತೆ ಗುಮ್ಮನಂತೆ ಮಲಗಿರುವ ಟೆರೇಸು ನೀವು ಕಾಲಿಟ್ಟಾಗ ಎದ್ದು ಕೂರುತ್ತದೆ. ಇವನೇಕೆ/ಇವಳೇಕೆ ಬಂದ ತನ್ನ ಸಾಮ್ರಾಜ್ಯದೊಳಗೆ ಎಂಬ ಗುಮಾನಿ ಅದಕ್ಕೆ. ಅಕಸ್ಮಾತ್ ನೀವೇನಾದರೂ ಭಾನಗಡೆ ಮಾಡಿಕೊಂಡುಬಿಟ್ಟೀರೆ ತಾನು ಅದಕ್ಕೆ ಪರೋಕ್ಷವಾಗಿ ಕಾರಣನಾಗುವೆನಲ್ಲಾ ಎಂಬ ಚಿಂತೆ, ದುಗುಡ ಅದಕ್ಕೆ ಪಾಪ.


                     ವಿಷಯ ಎಲ್ಲೆಲ್ಲೋ ಹೋಯಿತು. ಹಾ, ಟೆರೇಸು ಹತ್ತಿ ಒಮ್ಮೆ ಮೇಲೆ ನೋಡಿ. ನಕ್ಷತ್ರಗಳೆಲ್ಲಾ ಬಣ್ಣ ಬಣ್ಣದ ಮಿರು ಮಿರು ಮಿಂಚುವ ಡ್ರೆಸ್ ಹಾಕಿಕೊಂಡು ಎಷ್ಟು ಚಂದವಾಗಿ ಹೊಳೆಯುತ್ತಿವೆ. ಇನ್ನು ಚಂದಮಾಮ ಇದ್ದರಂತೂ ಕೇಳುವುದೇ ಬೇಡ. ಹಾಲಿನ ಹೊಳೆ ಹರಿದಿದೆಯೇನೋ ಎಂಬಂತೆ ಟೆರೇಸಿನ ಮೇಲೆ ಬೆಳದಿಂಗಳು ಚೆಲ್ಲಿರುತ್ತದೆ. ಇದನ್ನೆಲ್ಲಾ ನೋಡುತ್ತ ನಿಂತಿರುವ ನಿಮ್ಮ ನೆನಪಿನ ಪರದೆಯ ಮೇಲೆ ಬಾಲ್ಯದ ಚಿತ್ರಣ ಮೂಡುತ್ತದೆ. ಅಮ್ಮ ಚಂದಮಾಮನನ್ನು ತೋರಿಸುತ್ತ ಊಟ ಮಾಡಿಸುವ, ಹೆದರಿಸಲು ಆಕಾಶದ ಕತ್ತಲನ್ನು ತೋರಿಸಿ ಗುಮ್ಮ ಬಂದ ಅಗೋ ಎನ್ನುವ ಚಿಕ್ಕಂದಿನ ಕ್ಷಣಗಳೆಲ್ಲಾ ನೆನಪಾಗುತ್ತದೆ. ಮುಖದಲ್ಲೊಂದು ಮುಗುಳು ನಗೆ ತೇಲಿ ಹೋಗುತ್ತದೆ. ಅಂತೆಯೇ ಸಣ್ಣ ಇರುವಾಗ ನಕ್ಷತ್ರಗಳನ್ನು ಎಣಿಸಲು ಹಾತೊರೆಯುತ್ತಿದ್ದ ಪರಿ, ಚಂದಿರನ ಗಾತ್ರ ಹಿಗ್ಗುವುದು ಮತ್ತು ಕುಗ್ಗುವುದನ್ನು ಕಂಡು ಮೂಗಿನ ಮೇಲೆ ಬೆರಳಿಟ್ಟ ಪರಿ, ಉಲ್ಕೆಗಳನ್ನು ಕಂಡು ಅರೇ ನಕ್ಷತ್ರಗಳೂ ಕೂಡ ಓಡುತ್ತವೆಯೆಂದು ಭಾವಿಸಿದ್ದ ಪರಿ - ಎಷ್ಟೆಲ್ಲಾ ಮುಗ್ಧ ಆಲೋಚನೆಗಳು ಅಲ್ಲವಾ..??
                      ಆಕಾಶವನ್ನು ದಿಟ್ಟಿಸುತ್ತ ನಿಂತರೆ ಇನ್ನೊಂದು ಯೋಚನೆ ತಲೆಯಲ್ಲಿ ಸುಳಿಯುತ್ತದೆ. ಈ ವಿಶಾಲ ವಿಶ್ವದಲ್ಲಿ ನಾನೆಷ್ಟು ಸಣ್ಣವನು, ನಾನಿನ್ನು ಬಹಳವೇ ಬೆಳೆಯಬೇಕು, ಅಂದರೆ ನಾನು ಸಾಗುವ ದಾರಿ ಎಂಥದ್ದಾಗಿರಬೇಕು, ನಾನಿಡಬೇಕಾದ ಪ್ರತಿ ಹೆಜ್ಜೆ ಹೇಗಿರಬೇಕು -  ಎಂದೆಲ್ಲಾ ಮನಸು ಅವಲೋಕನಕ್ಕೆ ತೊಡಗುತ್ತದೆ. ಮುಂದೊಂದು ದಿನ ಆಗಸದ ತಾರೆಯಂತೆ ಮೆರೆಯಬೇಕು ಎಂದು ಕನಸು ಕಾಣುತ್ತದೆ. ಇನ್ನು ಒಂದು ಸಂಗತಿಯೆಂದರೆ ಟೆರೇಸಿನ ಮೇಲೆ ಬೀಸುವ ಗಾಳಿ. ಹಿತವಾಗಿ ಬೀಸುವ ತಣ್ಣನೆಯ ಗಾಳಿ ನಿಮ್ಮ ಮನಸಿನಲ್ಲಿನ ಬೇಸರದ ಕಾರ್ಮೋಡಗಳನ್ನು ಕರಗಿಸಿ ಸಂತಸದ ಮಳೆಯನ್ನಾಗಿಸುತ್ತದೆ. ಮನಸ್ಸಿಗೆ ಏಲ್ಲೋ ದೂರದ ಅಂತರಿಕ್ಷದಲ್ಲಿ ತೂಕ ಕಳೆದುಕೊಂಡು ತೇಲಿದ ಅನುಭವವಾಗುತ್ತದೆ.
                     ಇಷ್ಟೆಲ್ಲಾ ಆದ ಮೇಲೂ ನಿಮ್ಮ ಮನಸ್ಸಿನಲ್ಲಿ ಆ ಹಳೆಯ ಬೇಸರ, ದುಃಖ, ನೋವುಗಳು ಉಳಿದಿರಲು ಸಾಧ್ಯವಾ..?? ಊಹೂಂ, ಎಲ್ಲಾ ದೂರ ಓಡಿಹೋಗಿರುತ್ತವೆ. ಬದಲಾಗಿ ಬೆಚ್ಚನೆಯ ಹಿತವಾದ ಶಾಂತಿ ಅಲ್ಲಿ ಮನೆ ಮಾಡಿರುತ್ತದೆ. ಗೊತ್ತಾಯಿತಾ, ಟೆರೇಸಿನ ಮಹತ್ವ. ಇನ್ನು ಅಪ್ಪಿತಪ್ಪಿ ಯಾವಾಗಲಾದರೂ ಬೇಸರಗೊಂಡಿರೆಂದಾದರೆ ತಡಮಾಡದೇ ಟೆರೇಸಿನ ಮೆಟ್ಟಿಲುಗಳನ್ನು ಹತ್ತಿ ಆಯಿತಾ..??


ನಾಳೆ


ಹಿಂದಿನ ಓಟದಲ್ಲಿ ದೊರೆಯದ
ಈ ಕ್ಷಣದ ಹರಿವಿನಲ್ಲಿಲ್ಲದ
ಅದ್ಯಾವ ಗತಿಯು ಅವಿತುಕೊಂಡಿದೆ
ನಾಳೆಗಳ ನಡೆಯ ಹೆಜ್ಜೆಗಳಲ್ಲಿ..??

ಇಂದು ಕಮರುವ ಕನಸು
ಹೊಸ ಚಿಗುರನ್ನು ಪಡೆದು
ನಾಳೆ ಮತ್ತೆ ಅರಳಿ ನಿಲ್ಲುವಂತೆ
ಅದ್ಯಾವ ಕೈ ನೀರೆರೆಯುತ್ತದೋ..??

ಆಗಸದಲ್ಲಿ ಇದ್ದರೇನು ಕರಿಮೋಡವಿಂದು
ಸೂರ್ಯನಾದರೂ ಬರುವ
ಇಲ್ಲ ಮಳೆಯನಾದರೂ ಕಳಿಸುವ
ನಾಳೆ ಕಂಗೊಳಿಸುವುದಿಲ್ಲವೇ ಶುಭ್ರತೆ..??

ಬಿದ್ದರೂ ಮೇಲಕ್ಕೇಳುವ ಹಂಬಲ
ಸೋತರೂ ಗೆಲ್ಲುವೆನೆಂಬ ಛಲ
ನಾಳೆಯಲ್ಲವೇ ಕಾರಣ ಇವಕ್ಕೆಲ್ಲ..??
ಮುನ್ನೋಟದಲ್ಲೇ ಅಡಗಿದೆ ಎಲ್ಲ

ಜೀವನವೆಂದರೆ ನಿನ್ನೆ ಇವತ್ತಲ್ಲ
ಅದು ನಾಳೆಗಳ ಬಾಳು
ಅಂದು ಇಂದಿನ ಜೊತೆ ಮುಂದೆ ಇಲ್ಲವಾದರೆ
ನಿಲ್ಲುವುದಲ್ಲೇ ಪ್ರತಿ ಉಸಿರು


Tuesday, 25 March 2014

ಗೆಳೆಯನಿಗೊಂದು ಪತ್ರ-೧೯:ದೇಶ ಕಾಯುವವರಿಗೇಕಿಲ್ಲ ಮತದಾನದ ಹಕ್ಕು..??

 
ಹುಚ್ಚು ಹುಡುಗಾ,
                            "ನಿಮ್ಮ ಊರಿನಲ್ಲಿ ಚುನಾವಣೆಯ ಹವಾ ಹೇಗಿದೆ..?? ಪ್ರಚಾರದ ಅಬ್ಬರ ಜೋರಾಗಿದೆಯೇ..?? ಅಲ್ಲಿಯ ಮತದಾರರ ಒಲವು ಯಾವ ಪಕ್ಷದ ಕಡೆಗಿದೆ..?? ನೀವು ಯಾವ ಪಕ್ಷಕ್ಕೆ ಓಟು ಹಾಕುವವರು..?? ಬಿಜೆಪಿಯೋ, ಎ ಎ ಪಿಯೋ, ಕಾಂಗ್ರೆಸ್ಸೋ..?? ಇಲ್ಲ, ನಿಮಗೆ ತೃತೀಯ ರಂಗದ ಕಡೆಗೆ ಒಲವೋ..??" ಇಂದು ಯಾರು ಸಿಕ್ಕರೂ ಇಂಥ ಮಾತುಗಳು ಸರ್ವೇ ಸಾಮಾನ್ಯವಾಗಿದೆ ಅಲ್ಲವಾ..?? ದೇಶದಾದ್ಯಂತ ಹದಿನಾರನೇ ಲೋಕಸಭಾ ಚುನಾವಣೆಯ ಕಾವು ಏರಿರುವಾಗ ಹಿರಿ ಕಿರಿಯರೆನ್ನದೆ ಎಲ್ಲರೂ ಅದರ ಗುಂಗಿನಲ್ಲೇ ಇದ್ದಾರೆ. ನನಗಂತೂ ಮೊದಲ ಬಾರಿಗೆ ಮತ ಹಾಕಲಿದ್ದೇನೆ ಎಂಬ ಸಂತಸ. ನಿನಗೆ..??
                                  ಇಂದು ದಿನ ಪತ್ರಿಕೆಯನ್ನು ತಿರುವು ಹಾಕುತ್ತಿದ್ದಾಗ ಒಂದು ಒಳ್ಳೆಯ ಸುದ್ದಿ ಕಣ್ಣಿಗೆ ಬಿತ್ತು. "ಎಲ್ಲ ಸೈನಿಕರಿಗೆ ಮತದಾನದ ಅವಕಾಶ". ಅರೆ, ಇದೇನು..?? ಸೈನಿಕರಿಗೆ ಇಲ್ಲಿಯ ತನಕ ಮತ ಹಾಕುವ ಅವಕಾಶವಿರಲಿಲ್ಲವಾ..?? ಅದು ಹೇಗೆ ಸಾಧ್ಯ..?? - ಎಂಬೆಲ್ಲ ಪ್ರಶ್ನೆಗಳು ತಲೆಯಲ್ಲಿ ಸುತ್ತತೊಡಗಿದವು. ಹೋಗಲಿ, ಮೊದಲು ಸುದ್ದಿಯನ್ನು ಓದೋಣ ಎಂದು ಪತ್ರಿಕೆಯತ್ತ ಮನಸ್ಸನ್ನು ತಿರುಗಿಸಿದೆ. ವಿಷಯವೇನಿತ್ತೆಂದರೆ, ಕರ್ತವ್ಯದಲ್ಲಿರುವ ಸೇನಾ ಸಿಬ್ಬಂದಿಗಳಿಗೆ ಮತದಾನದ ಹಕ್ಕನ್ನು ನಿರಾಕರಿಸುತ್ತಿರುವ ಕೇಂದ್ರ ಚುನಾವಣಾ ಆಯೋಗವನ್ನು ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್ ಸೈನಿಕರು ಕೆಲಸ ನಿರ್ವಹಿಸುತ್ತಿರುವ ಕ್ಷೇತ್ರದಲ್ಲೇ ಅಂಚೆ ಮೂಲಕ ಮತ ಚಲಾಯಿಸಲು ಅವಕಾಶ ನೀಡಬೇಕು ಎಂದು ಆದೇಶ ನೀಡಿದೆ. ನಿಜಕ್ಕೂ ಅಭಿನಂದನಾರ್ಹವಾದ ಆದೇಶ.


                                      ದೇಶದ ಪ್ರತಿಯೊಬ್ಬ ಪ್ರಜೆಗೂ ತನ್ನೆಲ್ಲ ಮೂಲಭೂತ ಹಕ್ಕುಗಳನ್ನು ಹೊಂದುವ ಅವಕಾಶವಿದೆಯೆಂದು ಭಾರತದ ಸಂವಿಧಾನದಲ್ಲೇ ಹೇಳಲಾಗಿದೆ. ಹೀಗಿರುವಾಗ ದೇಶ ರಕ್ಷಣೆಯಂತಹ ಪವಿತ್ರ ಕಾರ್ಯವನ್ನು ತನ್ನ ಮೊದಲ ಕರ್ತವ್ಯವೆಂಬಂತೆ ನಿರ್ವಹಿಸುವ ಸೈನಿಕರಿಂದ ಮತದಾನದ ಹಕ್ಕನ್ನು ಕಸಿದುಕೊಳ್ಳುವುದು ಸಂವಿಧಾನವನ್ನೇ ಧಿಕ್ಕರಿಸಿದಂತಲ್ಲವೇ..?? ಸ್ವಂತ ಬದುಕಿನ ಸುಖ-ಸಂತೋಷಗಳನ್ನು ಬದಿಗೊತ್ತಿ, ನೋವು ದುಃಖಗಳನ್ನು ಲೆಕ್ಕಿಸದೆ ದೇಶಾಭಿಮಾನವನ್ನೇ ಉಸಿರಾಗಿಸಿಕೊಂಡು ತಮ್ಮ ಪ್ರಾಣದ ಹಂಗು ತೊರೆದು ದಿನದ ಇಪ್ಪತ್ನಾಲ್ಕು ಗಂಟೆಯೂ ಮೈಯ್ಯೆಲ್ಲಾ ಕಣ್ಣಾಗಿ ಹೋರಾಟ ನಡೆಸುತ್ತಾ ದೇಶದ ಪ್ರಜೆಗಳ ನೆಮ್ಮದಿಯ ನಿದ್ರೆಗೆ ಕಾರಣವಾಗಿರುವ ವೀರರಿಗೆ ತಮ್ಮನಾಳುವವರನ್ನು ಆಯ್ಕೆ ಮಾಡುವ ಹಕ್ಕಿಲ್ಲವೇ..?? ಭ್ರಷ್ಟರು, ಕಳ್ಳಕಾಕರು, ದರೋಡೆಕೋರರು - ಇಂಥವರಿಗೇ ಮತ ಚಲಾಯಿಸುವ ಅದರ ಜೊತೆಗೆ ಚುನಾವಣೆಗೆ ಸ್ಪರ್ಧಿಸಲೂ ಸಹ ಅವಕಾಶ ನೀಡುವ ಆಯೋಗ ಈ ನಿಲುವು ಖಂಡನೀಯವಲ್ಲವೇ..?? ಯಾವ್ಯಾವುದೋ ಕ್ಷುಲ್ಲಕ ವಿಷಯಗಳಿಗೆಲ್ಲ ಹಕ್ಕು ಚ್ಯುತಿ ಎಂದು ಬೊಬ್ಬೆ ಹಾಕುವ ಬುದ್ಧಿಜೀವಿಗಳು ಈ ವಿಷಯದಲ್ಲಿ ಮೂಲಭೂತ ಹಕ್ಕನ್ನು ಕಸಿದುಕೊಂಡಿರುವುದು ಕಾಣಿಸಲಿಲ್ಲವೇ..?? ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವೆಂದು ಹೆಮ್ಮೆಯಿಂದ ಬೀಗುತ್ತೇವೆ. ಆದರೆ, ಪ್ರಜಾಪ್ರಭುತ್ವ ಹೊಂದಿ ಬರೋಬ್ಬರಿ ೬೩ ವರ್ಷಗಳೇ ಕಳೆದರೂ ದೇಶದ ಸೈನಿಕರಿಗೆ ಮತಚಲಾಯಿಸುವ ಹಕ್ಕು ನೀಡದಿರುವುದು ಎಂಥ ವಿಪರ್ಯಾಸ.
                          ಈಗ ಸುಪ್ರೀಂ ಕೋರ್ಟ್ ಸೈನಿಕರಿಗೆ ಮತದಾನದ ಹಕ್ಕು ನೀಡುವ ಕುರಿತು ಹೊರಡಿಸಿರುವ ಆದೇಶ ನಿಜಕ್ಕೂ ಒಂದು ಉತ್ತಮ ಬೆಳವಣಿಗೆ. ಇನ್ನಾದರೂ ತಮ್ಮ ಇಚ್ಛೆಯ ಅಭ್ಯರ್ಥಿಗೆ ಮತ ಹಾಕುವ ಅವಕಾಶ ದೊರೆಯುತ್ತದೆ. ತಮ್ಮ ಹಕ್ಕನ್ನು ಚಲಾಯಿಸಿದ ತೃಪ್ತಿಯೂ ಸಿಗುತ್ತದೆ. ಅಂದ ಹಾಗೆ, ನಿನ್ನನ್ನು ಕೇಳುವುದನ್ನೇ ಮರೆತೆ. ನಿನ್ನದು ಯಾವ ಪಕ್ಷಕ್ಕೆ ಬೆಂಬಲ..?? ಕಮಲವೋ, ಹಸ್ತವೋ, ತೆನೆಯೋ, ಪೊರಕೆಯೋ..??

                      ಪ್ರೀತಿಯಿಂದ,

                                                                                                                   ಎಂದೆಂದೂ ನಿನ್ನವಳು,
                                                                                                                        ನಿನ್ನೊಲುಮೆ


ನೀ ಬರುವ ಹಾದಿ


ಹಗಲು ಇರುಳಾಗಿ ಕತ್ತಲು ಬೆಳಕಾದರೂ
ನನ್ನ ಕಣ್ಣುರೆಪ್ಪೆಗಳು ಮಲಗಿಲ್ಲ
ಆಗಸದ ತಾರೆಗಳು ಮಿನುಗಿ ಸುಸ್ತಾದವು
ನನ್ನ ನೋಟವು ದಣಿದಿಲ್ಲ
ಇಹಪರದ ಪರಿವೆಯಿಲ್ಲ ನನ್ನೊಡೆಯ
ನಿನ್ನ ನಿರೀಕ್ಷೆಯಲ್ಲೇ ಕುಳಿತಿಹೆನಲ್ಲ

ನೀ ಹೇಗೆ ಬರುತಿಹೆ ಗೆಳೆಯ..??
ಆಗಸದಲ್ಲಿ ಮೇಘಗಳೊಂದಿಗೆ ಆಟವಾಡುತ್ತಲೇ..??
ಚಂದಿರನ ಸಿಹಿ ಬೆಳದಿಂಗಳ ಉಣ್ಣುತ್ತಲೇ..??
ನದಿಯಲ್ಲಿ ಕಮಲಗಳ ಮುತ್ತಿಕ್ಕುತ್ತಲೇ..??
ಹಸಿರು ಕಾನನದ ಸೊಬಗ ಸವಿಯುತ್ತಲೇ..??
ಇಲ್ಲ, ನನ್ನ ಕನಸು ಕದಿಯುವ ಕಳ್ಳನಂತೆಯೇ..??

ನೆನಪುಗಳ ತೋರಣ ಕಟ್ಟುವಾಸೆ
ನೀ ಬರುವ ಹಾದಿಗೆ ಶೃಂಗಾರವಾಗಿ
ಮೋಹದ ಹೂವುಗಳ ಕೊಯ್ದು ಅರ್ಪಿಸಲೇ..??
ನಿನ್ನ ಪ್ರೇಮ ಪೂಜೆಗೆ ಇಂದು
ಎತ್ತಲೂ ಬೀರಲಿ ತನ್ನ ಸೌರಭವ ಸದಾ
ನಿನ್ನ ಪಯಣದ ಪ್ರತಿ ಹೆಜ್ಜೆ ಹೆಜ್ಜೆಗೂ

ಬೇಗ ಬಾ ನಲ್ಲ ತಡಮಾಡದೆ
ನಿನಗಾಗಿ ಹಾಕಿದ ರಂಗವಲ್ಲಿ ಮುನಿಸಿಕೊಂಡಿದೆ
ನಿನ್ನ ಸ್ವಾಗತಿಸಲು ಹಾಡುತ್ತಿದ್ದ
ಮಧುರ ಸ್ವರಗಳು ಮನೆ ಸೇರುವ ಹೊತ್ತಾಗಿದೆ
ತೆರೆದಿಟ್ಟ ಮನದ ಬಾಗಿಲು ಕೂಡ
ಸದ್ದು ನಿಲ್ಲಿಸಿ ಸುಮ್ಮನಾಗಿದ

 

Monday, 24 March 2014

ಗೆಳೆಯನಿಗೊಂದು ಪತ್ರ-೧೮:ಯಾರ ಬದುಕು ಕೂಡ ಪರಿಪೂರ್ಣವಲ್ಲ

                                                           
ಪ್ರೀತಿಯ ಗೆಳೆಯಾ,
                                   ಏನು ವಿಶೇಷ..?? ನಿನ್ನೆ ಮ್ಯಾರಥಾನ್ ಓಡಿದೆಯಾ..?? ಎಷ್ಟು ದೂರ ಓಡಿದೆ..?? ಕಾಲು ನೋಯುತ್ತಿಲ್ಲವಾ..?? ನಾನು ಓಡಲೇ ಇಲ್ಲ. ಬೆಳಿಗ್ಗೆ ಬೇಗನೇ ಎಚ್ಚರವೇ ಆಗಲಿಲ್ಲ. ನಗಬೇಡ ನೀನು. ಮತ್ತೆ ಯಾರು ಗೆದ್ದರೆಂದು ಗೊತ್ತಾಯಿತಾ...??
                                 ನಮ್ಮ ಜೀವನವೂ ಒಂದು ಬಗೆಯ ಮ್ಯಾರಥಾನ್ ಅಲ್ಲವಾ..?? ಪ್ರತಿ ದಿನ ಪ್ರತಿ ಕ್ಷಣ ಯಾವುದೋ ಒಂದು ನಿರ್ದಿಷ್ಟ ಗುರಿಯನ್ನು ತಲುಪಲು ಓಡುತ್ತಲೇ ಇರುತ್ತೇವೆ. ಬಹಳಷ್ಟು ಮಂದಿ ಗಮ್ಯ ಯಾವುದೆಂದು ತಿಳಿಯದೇ ಓಡುತ್ತಿರುತ್ತಾರೆಂದರೆ ತಪ್ಪಾಗಲಾರದು. ಸೋಜಿಗವೆಂದರೆ ನಮ್ಮೆಲ್ಲರ ಓಟಗಳು ಎಂದಿಗೂ ಮುಗಿಯುವುದೇ ಇಲ್ಲ. ಕೊನೆ ಉಸಿರುವವರೆಗೂ ದಾಪುಗಾಲಿಕ್ಕುತ್ತ ಓಡುತ್ತಲೇ ಇರುತ್ತೇವೆ. ಇದೇಕೆ ಹೀಗೆ..??
                             ಪ್ರಪಂಚದಲ್ಲಿ ಎಲ್ಲರೂ ಪರಿಪೂರ್ಣ ಜೀವನ ಹೊಂದಲು ಬಯಸುತ್ತಾರೆ. ಪರಿಪೂರ್ಣತೆ ಎಂದರೇನು ಎಂಬುದು ಮಾತ್ರ ಇಂದಿಗೂ ಬಗೆಹರಿಯದ ಸತ್ಯ. ಒಬ್ಬರಿಗೆ ತುಂಬು ಸಾಂಸಾರಿಕ ಜೀವನದಿಂದ ಬದುಕು ಪರಿಪೂರ್ಣ ಎನಿಸುತ್ತದೆ, ಅದೇ ಇನ್ನೊಬ್ಬರಿಗೆ ಸದಾ ಪ್ರಗತಿಶೀಲವಾದ ತನ್ನ ವೃತ್ತಿಜೀವನವೇ ಬದುಕಿಗೆ ಪರಿಪೂರ್ಣತೆಯನ್ನು ತಂದುಕೊಡಬಲ್ಲದು. ಇನ್ನೂ ಕೆಲವರು ಆಧ್ಯಾತ್ಮ ಜೀವನವೇ ನಿಜವಾದ ಪರಿಪೂರ್ಣ ಜೀವನ ಎನ್ನುತ್ತಾರೆ. ಹೀಗಾಗಿ ಪರಿಪೂರ್ಣತೆ ಎನ್ನುವುದರ ವ್ಯಾಖ್ಯಾನ ವ್ಯಕ್ತಿಯಿಂದ ವ್ಯಕ್ತಿಗೆ, ದೇಶದಿಂದ ದೇಶಕ್ಕೆ, ಕಾಲದಿಂದ ಕಾಲಕ್ಕೆ ಬದಲಾಗುತ್ತಲೇ ಹೋಗುತ್ತದೆ.


                             ಆದರೆ, ತಮಗೆ ಬೇಕಾದಂತೆ ಹೇಗೆಲ್ಲಾ ಅರ್ಥೈಸಿದರೂ ಪರಿಪೂರ್ಣತೆ ಎನ್ನುವುದನ್ನು ಸಾಧಿಸಲು ಮಾತ್ರ ಇಂದಿಗೂ ಯಾರಿಂದಲೂ ಸಾಧ್ಯವಾಗಿಲ್ಲ. ಅಕಸ್ಮಾತ್ ಯಾರಾದರೂ ಒಬ್ಬ ವ್ಯಕ್ತಿ ತನ್ನ ಬದುಕಿನಲ್ಲಿ ಪರಿಪೂರ್ಣತೆಯನ್ನು ಸಾಧಿಸಿದನೆಂದರೆ, ಆತನ ಜೀವನದಲ್ಲಿ ಭವಿಷ್ಯವೇ ಇರುವುದಿಲ್ಲ. ಪರಿಪೂರ್ಣತೆಯ ಗುರಿಮುಟ್ಟಿದ ನಂತರ ಉಳಿಯುವುದಾದರೂ ಏನು..?? ಶೂನ್ಯವೇ ಹೊರತು ಮತ್ತೇನಿಲ್ಲ. ನಮ್ಮೆಲ್ಲರ ಬದುಕು ಒಂದು ವೃತ್ತವೆಂದು ಭಾವಿಸಿಕೊಂಡರೆ ಈ ಪರಿಪೂರ್ಣತೆ ಪರಿಧಿಯಂತೆ. ಆ ಪರಿಧಿಯಲ್ಲೇ ಓಡುತ್ತಾ ಬದುಕು ಸಾಗಿಸುವ ನಾವು ಅಲ್ಲೇ ಸುತ್ತುತ್ತಾ ಇರುತ್ತೇವೆಯೇ ಹೊರತು ಪರಿಧಿಯ ಆಚೆಗೇನಿದೆ ಎಂದು ನೋಡುವುದೇ ಇಲ್ಲ. ನಿಜವಾದ ಸ್ವಾರಸ್ಯ ಇರುವುದೇ ಇಲ್ಲಿ. ದೇವರು ಬಹಳ ಜಾಣ ನೋಡು, ನಮಗೆಲ್ಲರಿಗೂ ಪರಿಧಿಯಲ್ಲಿ ಓಡುವ ಶಕ್ತಿಯನ್ನು ಮಾತ್ರ ನೀಡಿದ್ದಾನೆ. ಅದರಾಚೆಗಿನ ಪ್ರಪಂಚದತ್ತ ಕಣ್ಣು ಹಾಯಿಸುವಷ್ಟು ವಿವೇಕವನ್ನು ಕೊಟ್ಟಿಲ್ಲ. ಇದರಿಂದಾಗಿಯೇ ಯಾವತ್ತೂ ಸಹ ಏನನ್ನೋ ಕಳೆದುಕೊಂಡವರಂತೆ ಇರುತ್ತೇವೆ. ಮನಶ್ಶಾಂತಿಯೆನ್ನುವುದನ್ನು ನಾವೇ ನಮ್ಮ ಕೈಯಾರೆ ದೂರ ಓಡಿಸುತ್ತೇವೆ. ತಮಾಷೆಯ ವಿಷಯವೆಂದರೆ ನಾವೊಬ್ಬರೇ ಅಲ್ಲ, ಜಗತ್ತಿನಲ್ಲಿ ಎಲ್ಲರೂ ಹೀಗೆ ಪರಿಧಿಯಲ್ಲೇ ಪರಿಭ್ರಮಣ ಹಾಕುತ್ತಿರುತ್ತಾರೆ. ತಮ್ಮ ತಮ್ಮ ಪರಿಧಿಯ ಆಚೆ ನೋಡದ ಕಾರಣ ಈ ಸತ್ಯದ ಅರಿವಾಗುವುದಿಲ್ಲ.
                           ನಿನಗೆ ಬೇಸರ ಬಂದಿತಾ ಹುಡುಗಾ..?? ನನ್ನ ತಲೆಯಲ್ಲಿ ಮತ್ತೆ ಮತ್ತೆ ಬೆನ್ನು ಬಿಡದ ಬೇತಾಳನಂತೆ ಗಿರಕಿ ಹೊಡೆಯುತ್ತಿದ್ದ ವಿಚಾರವನ್ನು ನಿನ್ನೊಂದಿಗೆ ಹಂಚಿಕೊಳ್ಳುವ ಮನಸ್ಸಾಯಿತು. ಓದಲು ಮನಸ್ಸಿಲ್ಲದಿದ್ದರೆ ಓದಬೇಡ, ಒತ್ತಾಯವಿಲ್ಲ. ಗಂಟೆ ಆಗಲೇ ಹನ್ನೊಂದಾಯಿತು. ಆಕಳಿಕೆ ಜೋರಾಗುತ್ತಿದೆ. ನಾನಿನ್ನು ಮಲಗಿಕೊಳ್ಳುತ್ತೇನೆ. ನೀನೂ ಸಹ ಬೇಗ ಮಲಗಿಕೊ ಆಯಿತಾ..?? ಶುಭರಾತ್ರಿ.
                         
                         ಪ್ರೀತಿಯಿಂದ,

                                                                                                                   ಎಂದೆಂದೂ ನಿನ್ನವಳು,
                                                                                                                          ನಿನ್ನೊಲುಮೆ


ಶಂಕೆ


ಬೀಳುತಿಹೆನೆ ನಾ ನನಗೇ ತಿಳಿಯದೇ
ನಿನ್ನ ಮೋಹದ ಬಾವಿಯಲ್ಲಿ
ಒಲವೆಂಬ ಜಲ ಸವಿಯ ಹೊರಟವಳಿಗೆ
ಇಂದೇಕೆ ಅತಿಯಾಗಿ ಕಾಡುತ್ತಿದೆ
ಪ್ರೀತಿಯ ಮಳೆಯಲ್ಲೇ ನೆನೆವ ಬಯಕೆ

ನಿನ್ನ ಮಾಯೆಯ ಆ ಪಾಶ
ಕಟ್ಟಿ ಹಾಕಿದೆ ಮನದ ಭಾವಗಳ ಕುದುರೆಯನ್ನು
ಸದಾ ಪರಿಭ್ರಮಿಸುತ್ತಲೇ ಇರುವುದು
ನಿನ್ನ ನೆನಪುಗಳ ಲಾಯದಲ್ಲಿ
ಹುಚ್ಚು ಕನಸುಗಳ ಸವಿಯನ್ನು ಮೆಲ್ಲುತ್ತ

ಹೃದಯ ಬಡಿತವು ಕೇಳುತಲೇ ಇಲ್ಲ
ನಿನ್ನ ಹೆಸರನ್ನೇ ಜಪಿಸುತ್ತಿಹುದಲ್ಲ
ಯೋಚನೆಗಳ ಪರದೆಯಲ್ಲಿ ನಿನ್ನದೇ ಬಿಂಬ
ಅಚ್ಚಳಿಯದೇ ಹಚ್ಚ ಹಸುರಿನಂತೆ
ತನ್ನ ಸೌರಭವ ಬೀರುವುದಲ್ಲ

ನನ್ನಲ್ಲಿ ನಾನೇ ಇಲ್ಲವಾಗಿಹೆನೇ..??
ಸಿಹಿಯಾದ ಶಂಕೆಯೊಂದು ಉಸಿರಲ್ಲಿ
ನೀ ಯಾವಾಗ ಆಸೀನನಾದೆ..??
ಕಳ್ಳನಂತೆ ನನ್ನ ಎದೆಯ ಪೀಠದಲ್ಲಿ
ಗೆಳೆಯಾ, ಪ್ರೀತಿಸಿಯೇ ಬಿಡಲೇ ನಿನ್ನ..??


Sunday, 23 March 2014

ಲೆಕ್ಕಾಚಾರ


ಮನಬಯಸಿದಂತೆ ಬದುಕಿದ್ದರೂ
ಅದ ಜೀವಿಸುವ ಪರಿ ಮುಕ್ತವಲ್ಲ
ಸೂತ್ರಗಳಿಲ್ಲದ ಹಾದಿಯಿದ್ದರೂ
ಹೆಜ್ಜೆ ಹೆಜ್ಜೆಗೆ ಮುನ್ನ ನಡೆವುದು
ಲೆಕ್ಕಾಚಾರದ ಘನ ವಿಚಾರ

ಕೂಡಿಸುವುದೆಲ್ಲ ಸ್ವಹಿತದ ಬೊಕ್ಕಸ
ಕಳೆದುಕೊಂಡರೆ ಕೇವಲ ಮೌಲ್ಯಗಳನ್ನು
ಗುಣಿಸುತ್ತ ಚಾಚುವ ಸ್ನೇಹಹಸ್ತದಲ್ಲೂ
ಅಡಗಿದೆ ಕಂಡೂ ಕಾಣದಂತೆ
ಭಾಗಿಸುವ ಮನದ ಕಳ್ಳ ಆಚಾರ

ಗಣಿತವನ್ನೇ ಜೀವನವನ್ನಾಗಿಸಿದರೆ
ಉಳಿದ ವಿಜ್ಞಾನಗಳಿಗೆ ಜಾಗವೆಲ್ಲಿ..??
ಪಯಣವೇನೋ ಸಾಗಬಹುದು
ಎಲ್ಲವೂ ಮುಗಿದಮೇಲೆ ಕೊನೆಯಲ್ಲಿ
ಶೇಷವಾಗಿ ಶೂನ್ಯತೆಯೊಂದೇಗೆಳೆಯನಿಗೊಂದು ಪತ್ರ-೧೭: ಒಂದು ನಿಮಿಷದ ಸಿಟ್ಟು ಅರವತ್ತು ನಿಮಿಷದ ಆನಂದವನ್ನು ಹಾಳು ಮಾಡುತ್ತದೆನಲ್ಮೆಯ ನಲ್ಲನೇ,
                            ಹೇಗಿರುವೆ..?? ನಿನ್ನನ್ನು ಮಾತನಾಡಿಸದೇ ಬಹಳ ದಿನಗಳು ಕಳೆದುವಲ್ಲವೇ..?? ನಾನೇನು ಕೆಲಸಗಳಲ್ಲಿ ಮುಳುಗಿಹೋಗಿರಲಿಲ್ಲ. ಕ್ಷುಲ್ಲಕ ವಿಷಯಗಳಿಗೆ ಮನಸ್ಸು ಕೆಡಿಸಿಕೊಂಡು ಕೂತಿದ್ದೆ. ಎಲ್ಲದರಲ್ಲೂ ಆಸಕ್ತಿ ಕಳೆದುಕೊಂಡು ಯಾವ ಕೆಲಸವನ್ನೂ ಸರಿಯಾಗಿ ಮಾಡದೇ ಮಂಕು ಬಡಿದ ಮಂಕು ತಿಮ್ಮಳಂತೆ ದಿನ ಕಳೆದೆ. ನೀನು ಈಗ ಬಯ್ಯಬೇಡ ಮಾರಾಯಾ. ಸಿಟ್ಟು, ಮುನಿಸು, ಬೇಸರಗಳೆಲ್ಲ ಮುಗಿದು ಮನಸ್ಸು ಈಗ ಪ್ರಶಾಂತವಾಗಿದೆ.
                      ಕಳೆದ ೧೪ ದಿನಗಳು ನಾನು ಇದ್ದ ಬಗೆಯನ್ನು ಈಗ ಒಮ್ಮೆ ನೆನೆಸಿಕೊಂಡರೆ ನಿಜಕ್ಕೂ ತಮಾಷೆಯೆನಿಸುತ್ತದೆ. ಹುರುಳೇ ಇಲ್ಲದ ವಿಷಯಗಳಿಗಾಗಿ ಅರ್ಥವೇ ಇಲ್ಲದ ವಿಚಾರ ಮಾಡುತ್ತಾ ವ್ಯರ್ಥಗೈದೆನಲ್ಲ. ಎಷ್ಟು ಕೆಲಸಗಳು ಬಾಕಿ ಉಳಿದುಕೊಂಡಿವೆ. ಅವುಗಳೆಲ್ಲಾ ನನ್ನನ್ನು ನೋಡಿ ಅಣಕಿಸುವಂತೆ ನಗುವಾಗ ನನ್ನ ಬಗ್ಗೆ ನನಗೆ ಪಶ್ಚಾತಾಪವಾಗುತ್ತದೆ. ಹದಿನಾಲ್ಕು ದಿನಗಳೆಂದರೆ ಕಡಿಮೆಯೇ..?? ೩೩೬ ಗಂಟೆಗಳು, ೨೦,೧೬೦ ನಿಮಿಷಗಳು, ೧,೨೦೯,೬೦೦ ಸೆಕೆಂಡುಗಳು..!! ಏನೆಲ್ಲಾ ಮಾಡಬಹುದಿತ್ತು ಇಷ್ಟೊಂದು ದೀರ್ಘ ಸಮಯದಲ್ಲಿ..!! ಸುಮ್ಮನೆ ಹಾಳುಗೈದೆನಲ್ಲಾ.
                    ನಮ್ಮೆಲ್ಲರ ಕತೆಯೂ ಹೀಗೆಯೇ. ಟೈಮ್ ಮ್ಯಾನೇಜ್ ಮೆಂಟ್ ಬಗ್ಗೆ ಕೈಗೆ ಸಿಕ್ಕ ಪುಸ್ತಕಗಳನ್ನು ಓದುತ್ತೇವೆ. ಗಂಟೆಗಟ್ಟಲೇ ಸೆಮಿನಾರ್ ಗಳನ್ನು ಕೇಳುತ್ತೇವೆ. ಬೇರೆಯವರ ಜೊತೆ ಬೇಕಾದರೆ ನಾವೇ ತಾಸುಗಟ್ಟಲೇ ಸಮಯದ ಮಹತ್ವದ ಕುರಿತು ಭಾಷಣ ಬಿಗಿಯುತ್ತೇವೆ. ಆದರೆ, ನಮ್ಮ ನಮ್ಮ ಸ್ವಂತ ವಿಷಯಗಳಿಗೆ ಬಂದಾಗ ನಾವು ಅದನ್ನೆಲ್ಲಾ ಪಾಲಿಸುವುದಿಲ್ಲ. ಬೇರೆ ಯಾವ್ಯಾವುದೋ ಕೆಲಸಗಳಿಗೆ ಸಮಯ ಹಾಳು ಮಾಡುವುದಕ್ಕಿಂತ ಮನಸ್ಸು ಕೆಡಿಸಿಕೊಂಡು ಸಮಯವನ್ನೂ ಕೆಡಿಸುವುದಿದೆಯಲ್ಲ, ಇದು ಬಹಳವೇ ಕೀಳು ಮಟ್ಟದ್ದು. ಸಣ್ಣ ಸಣ್ಣ ವಿಷಯಗಳನ್ನು ದೊಡ್ಡದು ಮಾಡಿಕೊಂಡು ಏನೋ ಆಗಬಾರದ್ದು ಆಗಿದೆಯೆಂಬಂತೆ ತಲೆ ಮೇಲೆ ಕೈಹೊತ್ತು ಕೂರುತ್ತೇವಲ್ಲ, ಇದಕ್ಕಿಂತಲೂ ಅವಿವೇಕತನ ಇನ್ನೇನಿದೆ..?? ಯಾರದೋ ಮಾತುಗಳಿಗೆ ಇಲ್ಲದ ಮಹತ್ವ ಕೊಡುವ ನಾವು ನಮ್ಮ ಬಗ್ಗೆಯೇ ಅಪನಂಬಿಕೆ ತಾಳುತ್ತೇವೆ. ಅಯ್ಯೋ ಹೀಗಾಯಿತಲ್ಲ, ಮುಂದೇನು ಎಂದೆಲ್ಲಾ ಅಸ್ತಿತ್ವವೇ ಇಲ್ಲದ ಸಂಗತಿಗಳನ್ನೆಲ್ಲಾ ಯೋಚಿಸತೊಡಗುತ್ತೇವೆ. ಇದರಿಂದ ನಷ್ಟ ನಮಗೇ ಅಲ್ಲವೇ..?? ನಮ್ಮನ್ನಾಡಿಕೊಳ್ಳುವವರು ಆಡಿಕೊಳ್ಳುತ್ತಲೇ ಇರುತ್ತಾರೆ.                           ನಿನಗೆ ನೆನಪಿದೆಯಾ ಗೆಳೆಯಾ..?? ಚಿಕ್ಕಂದಿನಲ್ಲಿ ಕೆ ಎಸ್ ಆರ್ ಟಿ ಸಿ ಯ ಬಸ್ಸುಗಳಲ್ಲಿ ಕುಳಿತಾಗಲೆಲ್ಲಾ ಒಂದು ವಾಕ್ಯ ತಪ್ಪದೇ ಓದಲು ಸಿಗುತ್ತಿತ್ತು. "ಒಂದು ನಿಮಿಷದ ಸಿಟ್ಟು ಅರವತ್ತು ನಿಮಿಷದ ಆನಂದವನ್ನು ಹಾಳು ಮಾಡುತ್ತದೆ." ಆಗ ಇದರ ತಲೆಬುಡ ಅರ್ಥವಾಗುತ್ತಿರಲಿಲ್ಲ. ಈಗ ಸ್ವತಃ ಅನುಭವಿಸಿದ ಮೇಲೆ ಅದರ ಉದ್ದ, ಅಗಲ, ಆಳಗಳ ಕುರಿತೆಲ್ಲಾ ಅರಿವಾಗಿದೆ. ನಾವು ಸುಮ್ಮನೆ ಯಾರ ಮೇಲೋ ಮುನಿಸಿಕೊಂಡರೆ, ಯಾವ ವಿಷಯಕ್ಕೋ ಬೇಸರಿಸಿಕೊಂಡರೆ, ಯಾರನ್ನೋ ದ್ವೇಷಿಸಿದರೆ ಅದರ ಪರಿಣಾಮ ನೇರವಾಗಿ ನಮ್ಮ ಮೇಲೆಯೇ ಆಗುತ್ತದೆ. ಇದರಿಂದ ನಮ್ಮದೇ ಭವಿಷ್ಯದ ಕ್ಷಣಗಳನ್ನು ನಾವೇ ಕೈಯ್ಯಾರೆ ಹಾಳುಗೈದಂತೆ. ಚಿಕ್ಕಂದಿನ ವಿಷಯ ಬಿಡಿ, ದೊಡ್ಡವರಾದ ಮೇಲೂ ಎಷ್ಟು ಸಲ ನಾವು ಹೀಗೆ ಮನಸ್ಸು ಬಾಡಿಸಿಕೊಂಡು ಕುಳಿತಿಲ್ಲ..?? ಅಂದರೆ ಬುದ್ಧಿ ಬೆಳೆದರೂ ನಮ್ಮಲ್ಲಿ ಈ ವಿಚಾರದ ಕುರಿತು ಇನ್ನು ಅರಿವು ಮೂಡಿಲ್ಲ ಅಂದಾಯಿತು. ಇದಕ್ಕೆ ಇನ್ನು ಎಷ್ಟು ಕಾಲ ಬೇಕು..??
                          ಮತ್ತೆ, ನಿನ್ನ ಮನಸ್ಸು ಸರಿಯಾಗಿದೆ ತಾನೇ..?? ಅರಳಿಕೊಂಡೇ ಇದೆಯಲ್ಲ..?? ಅಷ್ಟಿದ್ದರೆ ಸಾಕು, ಚಿಂತೆಯಿಲ್ಲ. ಬಾಕಿ ಉಳಿದುಕೊಂಡ ಕೆಲಸಗಳನ್ನು ಮುಗಿಸಬೇಕಿದೆ. ಇನ್ನೊಮ್ಮೆ ಮಾತನಾಡೋಣ. ಬರಲೇ..??

                                ಪ್ರೀತಿಯಿಂದ,

                                                                                                                         ಎಂದೆಂದೂ ನಿನ್ನವಳು,
                                                                                                                                ನಿನ್ನೊಲುಮೆ


Saturday, 22 March 2014

ಒಮ್ಮೆ ನೆನಪು ಮಾಡಿಕೊಂಡು ಎರಡು ಹನಿ ಕಣ್ಣೀರನ್ನು ಹರಿಯಬಿಡಿ


                                     ಅಂದು ಬೆಳಿಗ್ಗೆ ಲಾಹೋರ್ ಸೆಂಟ್ರಲ್ ಜೈಲಿನ ಜೈಲರ್ ಸಾಹೇಬನಿಗೆ ಅನಿರೀಕ್ಷಿತವಾಗಿ ಮೇಲಿನ ಅಧಿಕಾರಿಯಿಂದ ಕರೆ ಬರುತ್ತದೆ. ಭಗತ್ ಸಿಂಗ್, ಸುಖ್ ದೇವ್, ರಾಜಗುರು - ಈ ಮೂವರನ್ನು ನಾಳೆಯ ಬದಲು ಆ ದಿನ ಸಂಜೆಯೇ ಗಲ್ಲಿಗೇರಿಸಬೇಕೆಂದು ಅಧಿಕಾರಿ ಆಜ್ಞ್ನೆ ನೀಡುತ್ತಾರೆ. ವಿಷಯ ತಿಳಿದ ಈ ಮೂವರು ಕ್ರಾಂತಿಕಾರಿಗಳು ಕೊಂಚವೂ ಬೇಸರಿಸದೇ ಎತ್ತರದ ದನಿಯಲ್ಲಿ ‘ಮೇರಾ ರಂಗ್ ದೇ ಬಸಂತಿ ಚೋಲಾ ಮಾಯೇ ರಂಗ್ ದೇ’ ಎಂದು ಹಾಡುತ್ತಾ ಗಲ್ಲು ಕಂಬದತ್ತ ಸಾಗುತ್ತಾರೆ. ನೇಣಿಗೇರಿಸುವ ಮೊದಲು ನಿಮ್ಮ ಕೊನೆಯ ಆಸೆಯೇನು ಎಂದು ಕೇಳಿದಾಗ ಮೂವರೂ ನಾವು ಒಬ್ಬರನ್ನೊಬ್ಬರು ತಬ್ಬಿಕೊಳ್ಳಬೇಕೆಂದು ಹೇಳುತ್ತಾರೆ. ನಂತರ ಜೋರಾಗಿ ಮೂರು ಬಾರಿ ‘ಇನ್ ಕ್ವಿಲಾಬ್ ಜಿಂದಾಬಾದ್’ ಎನ್ನುತ್ತಾ ಘೋಷಣೆ ಕೂಗುತ್ತಾರೆ. ಜೀವವನ್ನು ತೆಗೆಯಲು ಕಾಯುತ್ತಿದ್ದ ನೇಣುಹಗ್ಗಕ್ಕೆ ನಗುನಗುತ್ತಾ ಮುತ್ತನ್ನಿಡುತ್ತಾ ತಮ್ಮ ಜೀವನಕ್ಕೆ ಅಂತ್ಯ ಹಾಡುತ್ತಾರೆ. ಸಾವು ಎದುರಿಗೇ ನಿಂತಿದ್ದರೂ ಅವರ ಕಣ್ಣುಗಳಲ್ಲಿದ್ದ ತೇಜಸ್ಸನ್ನು ನೋಡಿ ಬ್ರಿಟಿಷ್ ಅಧಿಕಾರಿಗಳೇ ಬೆಚ್ಚುತ್ತಾರೆ. ಅಲ್ಲಿಯೂ ಬ್ರಿಟಿಷ್ ಸರ್ಕಾರ ತನ್ನ ಧೂರ್ತತನವನ್ನು ಬಿಡುವುದಿಲ್ಲ. ಪೂರ್ವನಿಗದಿತ ದಿನಕ್ಕಿಂತ ಒಂದು ದಿನ ಮುಂಚೆಯೇ ಗಲ್ಲಿಗೇರಿಸಿದ್ದೇ ಅಲ್ಲದೇ, ಮೂವರ ಹೆಣಗಳನ್ನು ಕುಟುಂಬಕ್ಕೆ ನೀಡದೇ ಗುಟ್ಟಾಗಿ ಸಟ್ಲೆಜ್ ನದಿ ತೀರಕ್ಕೆ ಸಾಗಿಸಿ ಕಾಟಾಚಾರಕ್ಕೆಂಬಂತೆ ಬೆಂಕಿ ಹಚ್ಚುತ್ತಾರೆ.
                      ಭಗತ್ ಸಿಂಗ್ ನ ಜೀವನದ ಒಂದೊಂದು ಘಟನೆಗಳೂ ಕೂಡ ಸ್ಫೂರ್ತಿದಾಯಕವಾದುವು. ಚಿಕ್ಕಂದಿನಲ್ಲಿ ಒಮ್ಮೆ ತಂದೆಯ ಜೊತೆ ಗದ್ದೆಯಲ್ಲಿ ಸಾಗುತ್ತಿದ್ದಾಗ ಪೈರು ಹೇಗೆ ಬೆಳೆಯುತ್ತದೆ ಎಂದು ಹುಡುಗ ಭಗತ್ ಗೆ ಕುತೂಹಲ ಮೂಡಿತು. ತಂದೆಯ ಹತ್ತಿರ ಕೇಳಿದಾಗ ನಾವು ಬೀಜವನ್ನು ಭೂಮಿಯಲ್ಲಿ ಉತ್ತಿ ಅದನ್ನು ಸರಿಯಾಗಿ ಪಾಲಿಸಿ ಪೋಷಿಸಿದರೆ ಅದು ಉತ್ತಮವಾಗಿ ಬೆಳೆದು ಫಲವನ್ನು ಕೊಡುತ್ತದೆ ಎಂದು ತಿಳಿಸಿ ಹೇಳುತ್ತಾರೆ. ಮರುದಿನವೇ ಪುಟ್ಟ ಭಗತ್ ಗದ್ದೆಯಲ್ಲಿ ನೆಲ ಅಗೆಯುತ್ತಿದ್ದ. ಪಕ್ಕದಲ್ಲೇ ಕೆಲವು ಬಂದೂಕುಗಳಿದ್ದವು. ಇವನೇನು ಮಾಡುತ್ತಿದ್ದಾನೆ ಎಂದು ತಲೆ ಬುಡ ಅರ್ಥವಾಗದ ತಂದೆ ಅವನನ್ನೇ ಪ್ರಶ್ನಿಸಿದಾಗ ಆತ ಏನು ಹೇಳಿದ ಗೊತ್ತೇ..?? "ಬಂದೂಕುಗಳನ್ನು ನೆಡುತ್ತಿದ್ದೇನೆ ಅಪ್ಪಾ, ಮುಂದೆ ಇವು ಬೆಳೆದು ನಿಂತಾಗ ಹೆಚ್ಚು ಹೆಚ್ಚು ಬಂದೂಕುಗಳ ಫಸಲು ದೊರೆಯುತ್ತದೆಯಲ್ಲವೆ. ಬ್ರಿಟಿಷರ ವಿರುದ್ಧ ಹೋರಾಡಲು ಬೇಕಲ್ಲ."
                           ಮುಂದೆ ಕಾಲೇಜಿನಲ್ಲಿ ಭಗತ್ ಗೆ ಸುಖದೇವ್ ನ ಪರಿಚಯವಾಗಿ ಇಬ್ಬರೂ ಉತ್ತಮ ಸ್ನೇಹಿತರಾಗುತ್ತಾರೆ. ಉಪಾಧ್ಯಾಯರೊಬ್ಬರ ಸಲಹೆಯಂತೆ ಹಿಂದೂಸ್ಥಾನ್ ರಿಪಬ್ಲಿಕನ್ ಅಸೋಸಿಯೇಷನ್ ಸೇರುತ್ತಾರೆ. ಅಲ್ಲಿ ಕ್ರಾಂತಿಕಾರಿಗಳ ನಾಯಕ ಚಂದ್ರಶೇಖರ್ ಆಜಾದ್ ರ ಪರಿಚಯವಾಗುತ್ತದೆ. ಇನ್ನು ಹತ್ತು ಹಲವು ಕ್ರಾಂತಿಕಾರಿಗಳ ಸ್ನೇಹ ದೊರೆಯುತ್ತದೆ. ತದನಂತರ ಸೈಮನ್ ಆಯೋಗ ಭಾರತಕ್ಕೆ ಬಂದಾಗ ಅದನ್ನು ವಿರೋಧಿಸುವ ಹೋರಾಟದಲ್ಲಿ ಬ್ರಿಟಿಷ್ ಪೋಲಿಸರ ಹಲ್ಲೆಗೆ ಬಲಿಯಾಗಿ ಲಾಲಾ ಲಜಪತ್ ರಾಯ್ ಸಾವನ್ನಪ್ಪುತ್ತಾರೆ. ಇದು ಕ್ರಾಂತಿಕಾರಿಗಳನ್ನು ಕೆರಳಿಸುತ್ತದೆ. ಪ್ರತಿಕಾರವಾಗಿ ಭಗತ್ ಸಿಂಗ್ ಹಾಗೂ ಸುಖ್ ದೇವ್ ಬ್ರಿಟಿಷ್ ಅಧಿಕಾರಿ ಸ್ಕಾಟ್ ನನ್ನೇ ಹತ್ಯೆಗೈಯ್ಯುತ್ತಾರೆ. ಕೊನೆಗೆ ಅಸೆಂಬ್ಲಿಯಲ್ಲಿ ಬಾಂಬ್ ಎಸೆದು ಆ ಮೂಲಕ ಇಡೀ ರಾಷ್ಟ್ರಕ್ಕೆ ತಮ್ಮ ಕ್ರಾಂತಿಕಾರಿ ತತ್ವಗಳನ್ನು ಸಾರುತ್ತಾರೆ. ಈ ಎರಡೂ ಘಟನೆಗಳ ವಿಚಾರಣೆ ನಡೆದು ಕೊನೆಯಲ್ಲಿ ಭಗತ್ ಸಿಂಗ್, ಸುಖ್ ದೇವ್ ಹಾಗೂ ರಾಜಗುರುಗೆ ಗಲ್ಲು ಶಿಕ್ಷೆಯಾಗುತ್ತದೆ.                             ಇಪ್ಪತ್ಮೂರು ವರ್ಷಗಳಷ್ಟೆ, ಇದು ಸಾಯುವ ವಯಸ್ಸಾ..?? ಈ ವಯಸ್ಸಿನಲ್ಲಿ ನಾವಂತೂ ಇನ್ನು ಹುಡುಗಾಟಿಕೆಯನ್ನೇ ಬಿಟ್ಟಿಲ್ಲ. ನಮ್ಮ ಕರ್ತವ್ಯಗಳನ್ನು ಅರಿತುಕೊಂಡಿಲ್ಲ, ಜವಾಬ್ದಾರಿ ಹೊರುವ ಮಾತಂತೂ ಬಹಳವೇ ದೊಡ್ಡದಾಯಿತಲ್ಲವೇ..?? ಆದರೆ ಆ ಮೂವರು ಮಹಾನ್ ಕ್ರಾಂತಿಕಾರಿಗಳು ಭಾರತದ ಸ್ವಾತಂತ್ರ್ಯ ಹೋರಾಟವೆಂಬ ಪವಿತ್ರ ಯಜ್ಞದಲ್ಲಿ ತಮ್ಮ ಪ್ರಾಣವನ್ನೇ ಆಹುತಿಯನ್ನಾಗಿಸಿದ್ದರು. ಸ್ವಂತ ಆಸೆ, ಕನಸು, ಸುಖ-ದುಃಖಗಳನ್ನೆಲ್ಲಾ ಬದಿಗೊತ್ತಿ ದೇಶ ಸೇವೆಯೇ ಜೀವನದ ಮಂತ್ರವೆಂಬಂತೆ ಜೀವಿಸಿದ್ದರು. ನಿಜಕ್ಕೂ ಎಲ್ಲರಿಗೂ ಅದರ್ಶಪ್ರಾಯವಾಗಬೇಕಾದ ವ್ಯಕ್ತಿತ್ವ. ಆದರೆ, ನಮಗ್ಯಾರಿಗೂ ಇವರೆಲ್ಲರ ಹಾದಿಯಲ್ಲಿ ಹೆಜ್ಜೆ ಹಾಕುವುದು ಬಿಡಿ, ಕನಿಷ್ಠ ಪಕ್ಷ ನೆನಪು ಮಾಡಿಕೊಳ್ಳುವಷ್ಟೂ ಪುರಸೊತ್ತಿಲ್ಲ. ಸ್ವಾತಂತ್ರ್ಯ ಬಂದಾಯಿತು, ಇನ್ನು ಇವರೆಲ್ಲರ ನೆನಪು ಮಾಡಿಕೊಂಡು ನಮಗೇನು ಆಗಬೇಕಾಗಿದೆ ಅಲ್ಲವೇ..?? ಫೇಸ್ ಬುಕ್, ವಾಟ್ಸ್ ಆಪ್, ಶಾಪಿಂಗ್ -  ಅದೂ ಇದೂ ಎಂದು ಬೇಕಾದಷ್ಟು ಕೆಲಸಗಳಿವೆ ನಮಗೆ. ದೇಶ, ದೇಶಭಕ್ತರು ಎನ್ನುವ ಅರ್ಥವಿಲ್ಲದ ವಿಷಯಗಳೆಲ್ಲಾ ಏಕೆ ಬೇಕು..?? ನಾವು ಚೆನ್ನಾಗಿದ್ದರೆ ಸಾಕಲ್ಲವೇ..??
                           ಇರಲಿ ಬಿಡಿ, ಇಂದು ಆ ಮೂವರು ಕ್ರಾಂತಿಕಾರರನ್ನು ಗಲ್ಲಿಗೇರಿಸಿದ ದಿನ(ಮಾರ್ಚ್ ೨೩, ೧೯೩೧). ಯಾರ್ಯಾರೋ ಸತ್ತ ದಿನಗಳನ್ನೆಲ್ಲಾ ನೆನಪಿಟ್ಟುಕೊಂಡು ಶ್ರದ್ಧಾಂಜಲಿ ಸಲ್ಲಿಸುತ್ತೇವೆ. ಅವರನ್ನು ಹಾಡಿ ಹೊಗಳುತ್ತೇವೆ. ಅಂಥದ್ದರಲ್ಲಿ ಇಡೀ ಬ್ರಿಟಿಷ್ ಸಾಮ್ರಾಜ್ಯವನ್ನೇ ನಡುಗಿಸಿದ್ದ ಈ ಮಹಾನ್ ಕ್ರಾಂತಿಕಾರಿಗಳನ್ನು ಮರೆತೆವೆಂದರೆ ಆ ದೇವನೂ ಕ್ಷಮಿಸಲಾರ.  ಅವರೆಲ್ಲಾ ಸತ್ತಾಗಲಂತೂ ಕಣ್ಣೀರು ಹಾಕುವ ಭಾಗ್ಯ ನಮಗೆ ದೊರಕಲಿಲ್ಲ. ಇವತ್ತು ಕೇವಲ ಒಂದೇ ಒಂದು ಕ್ಷಣ ಆ ಮಹಾನ್ ಚೈತನ್ಯಗಳನ್ನು ನೆನಪು ಮಾಡಿಕೊಂಡು ಎರಡು ಹನಿಗಳನ್ನು ಕಣ್ಣಿಂದ ಇಳಿಯಬಿಡೋಣ. ತಾಯಿ ಭಾರತಿಯಾದರೂ ಸಂತಸ ಪಟ್ಟಾಳು.

ನಿಗೂಢ


ಹುಟ್ಟಿನ ಮೂಲ ತಿಳಿಯೆ
ಸಾವಿನ ತುದಿಯ ನಾನರಿಯೆ
ನಡೆಯುತಿಹ ಪಯಣದ ಉದ್ದಗಲ
ನಿಲುಕದಾಗಿದೆ ಹೆಜ್ಜೆಗಳಿಗೆ
ಅದ್ಯಾವ ಪರಿಯ ಆಳವೋ
ಇಣುಕಿದಷ್ಟು ಇನ್ನೂ ಅಗೋಚರ

ಪ್ರತಿ ಹಗಲೂ ಹೊಸ ರಹಸ್ಯ
ಪ್ರತಿ ಇರುಳೂ ಮುಗಿದ ಸ್ವಾರಸ್ಯ
ಬಣ್ಣಗಳ ಓಕುಳಿಯಲ್ಲೂ ಅಡಗಿದೆ
ಕಪ್ಪು ಬಿಳುಪಿನ ಅಂಧಕಾರ
ತಿಳಿನೀರಿನ ಸ್ವಚ್ಛತೆಯ ಒಳಗೂ
ಕದಡಿದ ಅಲೆಗಳ ಆಕಾರ

ನಿಂತ ನೀರಾದರೆ ಕೊಳೆಯುವ ಭೀತಿ
ಹರಿವಾದರೆ ಅಲೆಮಾರಿಯಾಗುವ ಫಜೀತಿ
ಸಾಗಬೇಕಿದೋ ಅವನಿಚ್ಛೆಯಂತೆ
ಆದರೆ ಸಾಗಬೇಕಿರುವುದು ನಾವೇ
ಅರಿಯುವ ಹಾದಿಯಲ್ಲಿ ಸಾಗಿದಷ್ಟೂ
ಅರಿತವೆಲ್ಲವೂ ಅರಿವಾಗದ ನಿಗೂಢ


ದೇಶ ಕಾಯುವವರಿಗೇ ಇಲ್ಲವಾಗಿದೆ ರಕ್ಷಣೆ


                          ಕಳೆದ ಸುಮಾರು ಮೂರು ವರ್ಷಗಳಿಂದ ಉಗ್ರರ ಭಯೋತ್ಪದನೆಯಷ್ಟೇ ತೀವ್ರವಾಗಿ ಭಾರತ ದೇಶದ ಆಂತರಿಕ ಭದ್ರತೆಗೆ ಭಂಗ ತರುತ್ತಿರುವುದು ನಕ್ಸಲ್ ವಾದ. ಪದೇ ಪದೇ ದಾಳಿ ನಡೆಸುತ್ತ ದೇಶವಾಸಿಗಳ ತಲೆನೋವಿಗೆ ಕಾರಣವಾಗಿರುವ ನಕ್ಸಲೀಯರನ್ನು ಮಟ್ಟ ಹಾಕಲು ಸರ್ಕಾರ ಇಲ್ಲಿಯವರೆಗೂ ಸಫಲವಾಗಿಲ್ಲ. ನಕ್ಸಲರ ವಿರುದ್ಧ ಹೋರಾಡಲು ಕೇಂದ್ರ ಮೀಸಲು ಪಡೆ(ಸಿಆರ್ ಪಿಎಫ್)ಯನ್ನು ಸರ್ಕಾರ ನೇಮಿಸಿದೆಯಾದರೂ ಅದು ಕೇವಲ ಹೆಸರಿಗಷ್ಟೆ ಎಂಬಂತಾಗಿದೆ. ಸಾವಿರಾರು ಮಂದಿ ಯೋಧರಿದ್ದರೂ ಅವರ ಅಗತ್ಯಗಳನ್ನು ಕೇಳುವವರೇ ಇಲ್ಲವಾಗಿದ್ದು ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಧೋರಣೆಗೆ ಇದು ಸಾಕ್ಷಿಯಾಗಿದೆ.
                         ದೇಶದ ನಕ್ಸಲ್ ಪೀಡಿತ ರಾಜ್ಯಗಳ ಆಯಕಟ್ಟಿನ ಪ್ರದೇಶಗಳಲ್ಲಿ ಪ್ರಸ್ತುತ ಸುಮಾರು ೮೫,೦೦೦ದಿಂದ ೯೦,೦೦೦ದಷ್ಟು ಸಿಆರ್ ಪಿಎಫ್ ಯೋಧರು ಪ್ರಾಣದ ಹಂಗು ತೊರೆದು ಕಾರ್ಯಾಚರಣೆ ನಡೆಸುತ್ತಿದ್ದಾರೆ. ನಕ್ಸಲ್ ವಿರುದ್ಧ ಹೋರಾಡುವ ವೇಳೆ ಹೆಚ್ಚಿನ ಸಂದರ್ಭಗಳಲ್ಲಿ ಯೋಧರ ತಲೆಗೆ ಗುಂಡು ತಗುಲಿ ಸಾವನ್ನಪ್ಪುವುದು ಸಾಮಾನ್ಯ ಸಂಗತಿ. ಹೀಗಾಗಿ ಯೋಧರಿಗೆ ಬುಲೆಟ್ ಪ್ರೂಫ್ ಹೆಲ್ಮೆಟ್ ಅತೀ ಅವಶ್ಯಕವಾಗಿರುತ್ತದೆ. ಈ ಪೈಕಿ ಸುಮಾರು ೫೦ ಸಾವಿರದಷ್ಟು ಯೋಧರಿಗೆ ಬುಲೆಟ್ ಪ್ರೂಫ್ ನೀಡುವ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದ್ದರೂ ಪೂರೈಕೆಯಾಗಿರುವುದು ಕೇವಲ ೮೦೦ ಹೆಲ್ಮೆಟ್ ಗಳಷ್ಟೇ.!!
                             ದೇಶದ ನಾಯಕರ ರಕ್ಷಣೆಯ ಭಾರ ಹೊತ್ತಿರುವ ಯೋಧರ ರಕ್ಷಣೆಯ ಹೊಣೆ ಸರ್ಕಾರದ್ದಲ್ಲವೇ..?? ದೇಶದ್ರೋಹಿಗಳಿಗೆ ರಾಜಾತಿಥ್ಯ ನೀಡುವ ಸರ್ಕಾರಕ್ಕೆ ಯೋಧರಿಗೆ ಹೆಲ್ಮೆಟ್ ಒದಗಿಸುವಷ್ಟು ಆರ್ಥಿಕ ಶಕ್ತಿಯಿಲ್ಲವೇ..?? ಪಾಕಿಸ್ತಾನಿ ಉಗ್ರ ಕಸಬ್ ನ ವಿಚಾರಣೆಯ ಹಾಗೂ ಆತ ಜೈಲಿನಲ್ಲಿದ್ದ ನಾಲ್ಕು ವರ್ಷಗಳ ಅವಧಿಯಲ್ಲಿ ಆತನಿಗಾಗಿ ಒಟ್ಟೂ ೬೦೦ ಕೋಟಿಗಿಂತಲೂ ಹೆಚ್ಚು ರೂಪಾಯಿಗಳನ್ನು ಖರ್ಚು ಮಾಡಿತ್ತು. ದೇಶ ಕಾಯುವ ಯೋಧರಿಗಿಂತ ದೇಶ ನಾಶಗೊಳಿಸಲು ಬಂದ ಉಗ್ರ ದೊಡ್ಡವನೇ..?? ಪ್ರಮುಖ ವ್ಯಕ್ತಿಯೊಬ್ಬನ ಜೀವಕ್ಕೆ ಅಪಾಯವಿದೆ ಎಂದಾದಲ್ಲಿ ಆತ ಯಾರೇ ಆಗಿರಲಿ, ಅಂಥವರಿಗೆ ಝಡ್ ಕೆಟಗರಿಯ ಭದ್ರತೆಯನ್ನು ಒದಗಿಸುವ ಸರ್ಕಾರ ಜೀವ ಕಾಯುವವರ ಜೀವದ ಬಗ್ಗೆಯೇಕೆ ಇಷ್ಟು ನಿರ್ಲಕ್ಷ್ಯ..??
                      ದೇಶದ ಮಿಲಿಟರಿ ಪಡೆಯಲ್ಲೂ ಶಸ್ತ್ರಾಸ್ತಗಳ ಸಹಿತ ಸೈನಿಕರಿಗೆ ಅಗತ್ಯವಾದ ವಸ್ತುಗಳ ಕೊರತೆಯಿರುವುದು ತಿಳಿದ ವಿಷಯವೇ. ಇವೇ ಕಾರಣಗಳಿಂದಾಗಿ ನಮ್ಮ ಸೇನೆಯಲ್ಲಿ ಸಮರ್ಥ ಸೈನಿಕರಿದ್ದರೂ ಕೆಲವೊಮ್ಮೆ ಶತ್ರುಗಳದ್ದೇ ಕೈ ಮೇಲಾಗುತ್ತದೆ. ೧೯೬೨ ರಲ್ಲಿ ನಡೆದ ಭಾರತ-ಚೀನಾ ಯುದ್ಧದಲ್ಲಿ ಭಾರತಕ್ಕೆ ಮುಖಭಂಗವಾಗಲು ಕಾರಣ ಇದೇ. ಅಂದು ಇದ್ದ ಪರಿಸ್ಥಿತಿಯೇ ೫೦ ವರ್ಷಗಳ ನಂತರವೂ ಮುಂದುವರೆದಿದೆಯೆಂದರೆ ನಿಜಕ್ಕೂ ನಾಚಿಕೆಗೇಡು. ನಕ್ಸಲರ ಸಂಖ್ಯಾಬಲದ ಎದುರು ಯೋಧರ ಸಂಖ್ಯೆ ಮೊದಲೇ ಕಡಿಮೆ. ಇನ್ನು ಹೋರಾಟಕ್ಕೆ ಅವಶ್ಯಕವಾದ ಸಾಮಗ್ರಿಗಳನ್ನೂ ಸಹ ಪೂರೈಸದೇ ಇದ್ದರೆ ಶತ್ರುಗಳನ್ನು ಮಟ್ಟ ಹಾಕುವ ಮಾತೆಲ್ಲಿಯದು..?? ರಾಜಕಾರಣಿಗಳಿಗೆ ಧಿಕ್ಕಾರವಿರಲಿ.


ಪಕ್ಷಾಂತರ


ಅಂದು ಇಂದು ಮುಂದೂ
ಜಿಗಿಯುವ ಕೆಲಸ ತಪ್ಪದೆಂದೂ
ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಇಲ್ಲಿಗೆ
ಈ ಕ್ಷಣ ‘ಕೈ’ ಎತ್ತಿ ಹಿಡಿದರೆ
ಮರುಕ್ಷಣವೇ ‘ಕೈ’ ಇಳಿಸಿ
‘ಕಮಲ’ ಮುಡಿಯುವ ತವಕ

‘ಕಮಲ’ ಮುಡಿದರೂ ಇಲ್ಲ ತಂಪು
ಸಿಗದಿದ್ದರೆ ಟಿಕೇಟಿನ ಕಂಪು
ಭಾರವಾದರೂ ಪರವಾಗಿಲ್ಲ ಆಗ
ಹೊರಲೇಬೇಕು ‘ತೆನೆ’ಯನ್ನು
ಹೇಗಿದ್ದರೂ ಜೆಡಿಎಸ್ ಕುಳಿತಿರುವುದಲ್ಲ
ತನ್ನತ್ತ ಬರುವವರಿಗಾಗಿ ಕಾಯುತ್ತ

ಎತ್ತಲೂ ಜಾಗವಿಲ್ಲದಿದ್ದರೆ ಚಿಂತೆಯಿಲ್ಲ
ಯಾರೂ ಖಾಲಿ ಕೂರುವ ಪ್ರಶ್ನೆಯಿಲ್ಲ
ಕೈಗೆ ‘ಪೊರಕೆ’ ಕೊಡಲು
ನಿಂತಿರುವವರಲ್ಲ ನಮ್ಮ ಆಪ್ ನವರು
ಸ್ವಚ್ಛಗೊಳಿಸುತ್ತಲೇ ಬದಲಾಯಿಸಬೇಕು
ದೇಶವನ್ನು ಸಮಾಜವನ್ನು

ತತ್ವ ಸಿದ್ಧಾಂತಗಳೆಲ್ಲ ಎತ್ತ ಹೋದವು..??
ಅಗೋ, ಸ್ವಹಿತಾಸಕ್ತಿಯ ಬಿರುಗಾಳಿಗೆ
ಸಿಕ್ಕು ತರೆಗೆಲೆಗಳಂತೆ ಹಾರುತಿವೆ
ದೇಶಾಭಿಮಾನವಂತೂ ಕೇಳದ ಪದ
ಕಾಂಚಾಣದ ತಾಳಕ್ಕೆ ಕುಣಿಯುವವರು
ತಾವೂ ಕುಣಿಸುವವರು ಮತದಾರರನ್ನು

ಅದು ನಮ್ಮನೆ, ಇಲ್ಲಿರುವುದು ಸುಮ್ಮನೆ
ಈಗ ಮತ್ತೆ ಮರಳಿದ್ದು ತವರುಮನೆ
ಹೋದಲ್ಲೆಲ್ಲಾ ಹಾಕಬೇಕು ಮಣೆ
ಇಲ್ಲದಿದ್ದರೆ ಮರುದಿನವೇ ಅಲ್ಲಿಂದ ಕಾಣೆ
ಇದು ನಮ್ಮ ಪ್ರಜಾಪ್ರತಿನಿಧಿಗಳ ಪ್ರಸಂಗ
ಪ್ರತಿ ಚುನಾವಣೆಯ ಅವಿಭಾಜ್ಯ ಅಂಗ