Sunday, 9 February 2014

ಗೆಳೆಯನಿಗೊಂದು ಪತ್ರ-೯:‘ಮದುವೆ’ ಎಂಬ ಮೂರಕ್ಷರದ ಬಂಧ

        
ಮುದ್ದಿನ ಮೊದ್ದೇ,
                                  ಹೇಗಿರುವೆ..?? ನಿನ್ನನ್ನು ಮಾತನಾಡಿಸದೇ ಬಹಳ ದಿನಗಳಾದುವಲ್ಲ. ಏನು ಮಾಡಲಿ ಹುಡುಗಾ..?? ದೈಹಿಕ ಆರೋಗ್ಯ ಕೆಟ್ಟಿತ್ತು. ಜೊತೆಗೆ ಮನಸ್ಸೂ ಕೂಡ ಸತ್ತು ಮಲಗಿತ್ತು. ಬರೆಯಬೇಕೆಂದರೆ ಸಾಥ್ ನೀಡಲು ಮೆದುಳು ಮತ್ತು ಮನಸ್ಸು ಇಬ್ಬರೂ ಒಪ್ಪದೇ ನಾನು ಲೇಖನಿಯನ್ನು ಮೂಲೆಯಲ್ಲಿ ಇಟ್ಟು ಕೂರಬೇಕಾಯಿತು. ಈಗ ಮತ್ತೆ ಎಲ್ಲವೂ ಸರಿಯಾಗಿದೆ. ಮೂಲೆಯಲ್ಲಿದ್ದ ಲೇಖನಿ ನನ್ನ ಕೈ ಸೇರಿದೆ.
                                    ಮೊನ್ನೆ ಮನೆಗೆ ಹೋದಾಗ ಏನಾದರೂ ಓದಲು ಸಿಗುತ್ತದಾ ಎಂದು ಟಿಪಾಯಿ ಮೇಲಿನ ದಿನಪತ್ರಿಕೆ, ನಿಯತಕಾಲಿಕಗಳ ರಾಶಿಯನ್ನು ತಡಕಾಡುತ್ತಿದ್ದಾಗ ಸುಂದರವಾದ ವಿವಾಹ ಮಹೋತ್ಸವದ ಆಮಂತ್ರಣ ಪತ್ರಿಕೆಯೊಂದು ಕಣ್ಣಿಗೆ ಬಿತ್ತು. ಸರಳವಾಗಿದ್ದರೂ ಬಹಳ ಸುಂದರವಾಗಿತ್ತು. ಅದನ್ನು ಓದಿ ಬದಿಗಿಟ್ಟರೂ ನನ್ನ ತಲೆಯಲ್ಲಿ ಮದುವೆ ಎಂಬ ಹುಳು ಅದಾಗಲೇ ತೂತು ಕೊರೆಯಲು ಶುರು ಮಾಡಿತ್ತು. ನನ್ನ ತಲೆಯಲ್ಲಿ ಹುಳು ಕೊರೆದಾಗಲೆಲ್ಲ ನಾನು ನಿನ್ನ ತಲೆ ಕೊರೆಯಬೇಡವೇ..?? ಅದಕ್ಕೆ ಈ ಪತ್ರವನ್ನೀಗ ಬರೆಯುತ್ತಿರುವುದು.
                                     ಮದುವೆ ಎಂಬ ಪದ ಕೇಳಿದರೆ ಸಾಕು. ಎಲ್ಲರಲ್ಲೂ ಒಂದೊಂದು ಭಾವ. ಕೆಲವರಿಗೆ ಉದ್ವೇಗ, ಕೆಲವರಿಗೆ ಸಂತಸ. ಕೆಲವರಿಗೆ ಆತಂಕ, ಇನ್ನು ಕೆಲವರಿಗೆ ವಿರಕ್ತ. ಜೀವನದ ಅತಿ ಪ್ರಮುಖ ಘಟ್ಟವಾದ ಮದುವೆಯೆಂದರೆ ಏನು ಸಾಮಾನ್ಯದ ಮಾತೇ..?? ಬದುಕೆಂಬ ನಾಟಕದಲ್ಲಿ ಮೂರಕ್ಷರದ ಈ ದೃಶ್ಯ ಇರುವುದು ಕೆಲವೇ ಕ್ಷಣಗಳು ಮಾತ್ರವಾದರೂ ಅದರ ಪ್ರಾಮುಖ್ಯತೆ ಎಷ್ಟೆಂದು ಹೇಳಲಾಗುವುದಿಲ್ಲ. ಇಷ್ಟು ವರ್ಷ ತಾನು, ತನ್ನದು ಎಂದು ಬದುಕಿದ ವ್ಯಕ್ತಿ ಇನ್ನು ಮುಂದೆ ತನಗಾಗಿಯೇ, ತನ್ನನ್ನು ನಂಬಿಯೇ ಬದುಕುವ ಜೀವವೊಂದರ ಸಲುವಾಗಿ ಉಳಿದ ಬಾಳನ್ನು ಬಾಳಬೇಕು. ಅದು ಒಮ್ಮಿಂದೊಮ್ಮೆಲೆ ಸಾಧ್ಯವಾಗುವಂತಹುದೇ..?? ಬರುವ ಜೀವನ ಸಂಗಾತಿ ಹೇಗಿರುತ್ತಾನೋ(ಳೋ)....?? ಅವನೊಂ(ಳೊಂ)ದಿಗೆ ಹೊಂದಾಣಿಕೆ ಸಾಧ್ಯವೇ...?? ನಾವಿಬ್ಬರು ಪರಸ್ಪರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಬಲ್ಲೆವಾ...?? - ಹೀಗೆ ಒಂದಲ್ಲ ಎರಡಲ್ಲ. ನೂರಾರು ಪ್ರಶ್ನೆಗಳು.
                                     ಮದುವೆ ಎನ್ನುವ ಬಂಧ ನಿಲ್ಲುವುದೇ ಪರಸ್ಪರ ನಂಬಿಕೆ, ಸ್ನೇಹ, ಪ್ರೀತಿ, ವಿಶ್ವಾಸಗಳ ಆಳದಲ್ಲಿ. ಮದುವೆಯೆಂದರೆ ಮನಸುಗಳ ಬೆಸುಗೆ. ಎರಡು ದೇಹ, ಒಂದೇ ಜೀವ ಎನ್ನುವ ಅದ್ಭುತ ಸಿದ್ಧಾಂತ. "ಮಾಂಗಲ್ಯಂ ತಂತು ನಾನೇನ, ಮಮ ಜೀವನ ಹೇತುನ...." ಎಂಬ ಶ್ಲೋಕದ ಅರ್ಥವೂ ಅದೇ ಅಲ್ಲವೇ..?? "ಈ ಮಂಗಲಮಯವಾದ ದಾರವನ್ನು ನನ್ನ ಜೀವನ ಸಂಗಾತಿಯಾಗುವ ನಿನಗೆ ಕಟ್ಟುತ್ತಿದ್ದೇನೆ. ಹೇ ಶುಭಗೆ, ಕಂಠದಲ್ಲಿ ಕಟ್ಟಿದ ಈ ಮಂಗಲಮಯವಾದ ದಾರ ನನ್ನ ನಿನ್ನ ಜೀವನವನ್ನು ನೂರು ವರ್ಷಗಳ ಕಾಲ ಜೊತೆಯಾಗಿರಿಸಲಿ...." ಎನ್ನುತ್ತಾ ತಾಳಿಯ ಮೂರು ಗಂಟನ್ನು ಬಿಗಿಯುವುದು ಧಾರ್ಮಿಕ ಪದ್ಧತಿಯಾದರೂ ಅಲ್ಲಿ ನಿಜವಾದ ಅರ್ಥದಲ್ಲಿ ಮನಸ್ಸುಗಳ ನಡುವೆ ನೂರು ಗಂಟುಗಳು ಬಿದ್ದಿರಬೇಕು. ಅಂತಹ ವಿವಾಹ ಯುಗಯುಗಗಳವರೆಗೂ ಶಾಶ್ವತವಾಗಿದ್ದೀತು.


                                     ಇತ್ತೀಚಿನ ದಿನಗಳಲ್ಲಿ ಮದುವೆ ಎನ್ನುವುದು ಒಂದು ಬಗೆಯ ವ್ಯಾಪಾರವಾಗಿಬಿಟ್ಟಿದೆಯೆನ್ನುವುದು ವಿಷಾದದ ಸಂಗತಿ. ಮೌಲ್ಯಯುತವಾದ, ಭಾವನಾತ್ಮಕ ಹಿನ್ನೆಲೆಯಿರಬೇಕಾದ ಮದುವೆ ಇಂದು ಹಣ, ಪ್ರತಿಷ್ಠೆ, ಅಂತಸ್ತುಗಳ ಆಟದ ಕಣವಾಗಿ ಹೋಗಿದೆ. ಇನ್ನು ಕೆಲವು ವಿವಾಹಗಳಂತೂ ಆಡಂಬರದ ಅಬ್ಬರದಲ್ಲಿ ಕಳೆದೇ ಹೋಗುತ್ತವೆ. ಮದುವೆಯ ಮೂಲ ಅರ್ಥವೇ ಮಾಯವಾಗುತ್ತಿದೆ. ಹೀಗಾಗಿ ಸಂಬಂಧಗಳೂ ಸಹ ಬಹು ಬೇಗ ಕೊನೆಗೊಳ್ಳುತ್ತಿವೆ.
                                ಇಂದು ವಿಶ್ವ ವಿವಾಹ ದಿನ. ಅದರ ನೆಪದಲ್ಲಿ ನಿನ್ನೊಂದಿಗೆ ಇವನ್ನೆಲ್ಲಾ ಹಂಚಿಕೊಳ್ಳಬೇಕೆನ್ನಿಸಿತು. ಸ್ವಲ್ಪ ತಲೆ ತಿಂದೆನಷ್ಟೆ. ಕೊನೆಯಲ್ಲಿ ಒಂದೇ ಒಂದು ಪ್ರಶ್ನೆಯಿದೆ. ನಿನಗೆ ನಿನ್ನ ಮದುವೆ ಹೇಗಾದರೆ ಚೆನ್ನ..?? ನಿಧಾನವಾಗಿ ಯೋಚಿಸಿ ಉತ್ತರವನ್ನು ಹೇಳು.

                                    ಪ್ರೀತಿಯಿಂದ,

                                                                                                                      ಎಂದೆಂದೂ ನಿನ್ನವಳು,
                                                                                                                           ನಿನ್ನೊಲುಮೆ


No comments:

Post a Comment