Friday, 28 February 2014

ಬಚ್ಚಿಡಲಿ ಹೇಗೆ..??

             

ಮುಂಜಾನೆಯ ಮಂಜಿನ ತಂಪಲ್ಲಿ
ನಿನ್ನ ಎದೆಯೊಳಗೆ ಹುದುಗುವ ಆಸೆ
ಬೆಚ್ಚನೆಯ ನಿನ್ನುಸಿರು ನನ್ನ ಸೋಕಲು
ನಾ ಕರಗುವೆ ಮಂಜಿನ ಹನಿಯಾಗಿ
ನಲ್ಲ, ನಿನ್ನ ಮುದ್ದು ಮುಖವ ತೋಯಿಸಲೇ..??
ನನ್ನ ಸಿಹಿಮುತ್ತುಗಳಿಂದ ಹಿತವಾಗಿ

ನೀ ಹೊಳೆವೆ ನನ್ನ ಮನದಾಗಸದಲ್ಲಿ
ಸೂರ್ಯನಂತೆ ಕಂಗೊಳಿಸುವೆ
ನನಗಾದರೆ ಅಷ್ಟಕ್ಕೇ ತೃಪ್ತಿಯಿಲ್ಲ
ನಾ ಧರಿಸುವೆ ನಿನ್ನನು ಹಣೆಯ ಮೇಲೆಯೇ
ಗೆಳೆಯ, ನಿನ್ನ ವಿಶಾಲ ಹೃದಯಕ್ಕೆ
ಜಾಗ ಸಾಕೇ ಈ ಪುಟ್ಟ ಹಣೆಯಲ್ಲಿ..??

ಹಗಲಿಡೀ ಆಟವಾಡಿಸಿದ್ದು ಸಾಲದೇ..??
ರಾತ್ರೆ ಮತ್ತೆ ಕನಸಲ್ಲಿ ಕಾಡುವೆ ನೀ ಚೋರನೆ
ಬಿದಿಗೆ ಚಂದಿರನಂತೆ ಇಣುಕಿ ನೋಡುವೆಯೇಕೆ
ಬರಬಾರದೇ ಹೃದಯದ ಅಂಗಳಕೆ
ನಿಶೆಯ ಸೆರಗುನಲ್ಲಿ ಆಟವಾಡೋಣ ಬಾ
ಪ್ರೇಮದ ಕಣ್ಣಾಮುಚ್ಚಾಲೆಯನ್ನು

ನನ್ನ ಮನವಾಗಿದೆ ನಿನ್ನ ಮೋಹದ ವಶವು
ಬಚ್ಚಿಡಲಿ ಹೇಗೆ ಭಾವಗಳ ಬಣ್ಣವನ್ನು..??
ನನ್ನೊಳಗೆ ಮಾತಾಡದ ಹೊಸ ಮೌನ
ಕ್ಷಣಕ್ಷಣವೂ ಅಲ್ಲಿ ನಿನ್ನದೇ ಧ್ಯಾನ
ಹುಚ್ಚು ಹುಡುಗಾ, ನಿನಗೆ ಉತ್ತರ ಗೊತ್ತೇ..??
ನನ್ನೊಲವಿನ ಪ್ರವಾಹಕ್ಕೆ ತಡೆ ಹಾಕುವ ಬಗೆ


ಬೆನ್ನುತಟ್ಟುಇನ್ನೆಷ್ಟು ಕಾಲ ಕಾಯುವೆ ನೀ ಹುಡುಗಿ..??
ಇಷ್ಟು ದಿನ ಬರದವರು
ಇನ್ನೆಂದು ಬರುವರು ಗೆಳತಿ
ಸಾಕಿನ್ನು ಕಾದದ್ದು ಮೇಲೇಳು
ಹೆಜ್ಜೆ ಹಾಕು ನೀನೇ ನಿನ್ನ ಬೆನ್ನ ತಟ್ಟುತ್ತ

ಬೇರೆಯವರ ಹಂಗೇಕೆ ನಿನಗೆ..??
ನಿನ್ನೊಂದಿಗೆ ನೀನಿರಲು ಸದಾ
ಇನ್ನೆಲ್ಲಿಯ ಒಂಟಿತನ ನಿನ್ನ ಬದುಕಲ್ಲಿ
ಗಾಳಿ ಮಳೆಗಳ ಸ್ನೇಹವಿಲ್ಲವೇ
ಬಿಸಿಲಿನೊಂದಿಗೆ ನೆರಳಿನ ಪ್ರೇಮವೂ ಇದೆ

ಕ್ಷಣ ಯೋಚಿಸಲು ಸಮಯವೆಲ್ಲಿದೆ..??
ಸವೆದಷ್ಟೂ ಮುಗಿಯದ ಗಮ್ಯದ ಹಾದಿ
ಕಣ್ಣು ಮುಚ್ಚಲು ಬಿಡದ ಕನಸುಗಳಿವೆ
ಜೊತೆಯಾಗಿವೆ ರಾಗ ಭಾವಗಳು
ನಂಬಲೇ ನೀ ಒಂಟಿಯೆಂದರೆ

ಎಲ್ಲರೂ ಸಹಯಾತ್ರಿಗಳು ಇಲ್ಲಿ
ನಿನಗಾಗಿ ನಾನೆಂದು ಯಾರಿಲ್ಲ
ಸ್ವಾವಲಂಬಿಯಾಗಿ ಸಾಗು ನೀನು
ಇನ್ನೊಬ್ಬರು ಬೆನ್ನುತಟ್ಟಲೆಂದು ಬಯಸದೇ
ನಿನಗೆ ನೀನೇ ಆಗಬೇಕು ಸ್ಫೂರ್ತಿ


Thursday, 27 February 2014

ಟೆರೇಸುಅದೇ ಮೆಟ್ಟಿಲುಗಳ ಮೇಲೆ
ಅದೇ ನನ್ನ ಹೆಜ್ಜೆಗಳು
ಆದರೆ ಇಂದು ಅಂದಿನ ವೇಗವಿಲ್ಲ
ಭಾರವಾಗಿಹ ಮನದೊಂದಿಗೆ
ನಿಧಾನವಾಗಿಹವು ನನ್ನ ನಡೆಗಳು
ಇಂದೇಕೋ ಮತ್ತೆ ಮತ್ತೆ ಕರೆಯುತ್ತಿದೆ
ನನ್ನ ಮಡಿಲಲ್ಲಿ ಬಂದು ಕುಳಿತುಕೊ
ಮನಸ್ಸಿಲ್ಲದಿದ್ದರೂ ಹೋಗುವ ಮನಸ್ಸು
ಎಳೆಯುತಿದೆ ನನ್ನನ್ನು ಆ ಟೆರೇಸಿನತ್ತ

ಟೇರೇಸೆಂದರೆ ನನ್ನದೇ ಸಾಮ್ರಾಜ್ಯ
ನಾನಲ್ಲಿ ಅನಭಿಷಕ್ತ ರಾಣಿ
ಏಕಾಂತದಲ್ಲೂ ಕೊನೆಯಿಲ್ಲದ ಸಂತಸ
ಮಾಸದ ನಗು, ಉತ್ಸಾಹ, ಉಲ್ಲಾಸ
ಅದೊಂದು ದಿನ ನೀ ಬಂದೆ
ಟೆರೇಸಿನ ಮೇಲೆ ಸಾವಿರ ಸೂರ್ಯನ ಬೆಳಕು
ನಿನ್ನ ಮೋಹದ ಆಳ್ವಿಕೆಯಲ್ಲಿ ನಾ ನಲಿದೆ
ಒಲವಿನ ಅಸ್ತ್ರಕ್ಕೆ ನಾ ಸೋತುಹೋದೆ

ಕಪ್ಪು ಮೋಡ ಮುಸುಕಿದಾಗಲೇ
ಹೃದಯದ ಕಣ್ಣು ತೆರೆದಿತ್ತು
ನೀ ಆಳಲು ಬಂದ ರಾಜನಲ್ಲ
ದೋಚಿಕೊಂಡು ಹೋಗುವ ದಂಡೆಕೋರ
ಛಿದ್ರವಾಯಿತು ಟೆರೇಸಿನ ಅರಮನೆ
ನಿನ್ನೊಂದಿಗೆ ಮಾಯ ಸಕಲ ವೈಭವವೂ
ಉಳಿದದ್ದು ನಾನೊಬ್ಬಳೇ, ಏಕಾಂತವೂ ಇಲ್ಲ
ನೀ ಬಿಟ್ಟು ಹೋದ ಒಂಟಿತನವಿದೆ

ಟೆರೇಸಿನಲ್ಲಿ ಸದಾ ಅಮಾವಾಸ್ಯೆ
ನಕ್ಷತ್ರಗಳ ಮಿಣುಕು ಬೆಳಕಿನ ಅಣುಕು
ಪಾಳು ಬಿದ್ದಿದೆ ಎಲ್ಲವೂ ಅಲ್ಲಿ
ಹುಚ್ಚು ಮನಕೆ ಹಾಳು ಬಯಕೆ
ರಚ್ಚೆ ಹಿಡಿಯುವುದಲ್ಲ ಬೇಡವೆಂದರೂ
ಒಮ್ಮೆ ಅತ್ತ ಹೋಗೋಣವೆಂದು
ನಾ ಹೇಗೆ ಸಂತೈಸಲಿ ಅದನ್ನು
ರಾಜನಿಲ್ಲದ ಒಂಟಿ ಮಹಲು ಅದೆಂದು


ಹನಿಗವನ-೫೧.
ಮತ್ತೆ ಅದೇ ಯೋಚನೆ
ಕಾಡುತಿದೆ ಬಿಟ್ಟು ಬಿಡದೇ
ಕೊಡಲೇನು ರಾಜಿನಾಮೆ..??
ಈ ಯಾಂತ್ರಿಕ ಬದುಕಿಗೆ
ಯಾವ ಸಂದರ್ಶನವೂ ಇಲ್ಲದೆ
ಹೊಸ ಕೆಲಸವೊಂದು ಸಿಕ್ಕಿರಲು
ನಿನ್ನನ್ನು ಮನಸಾರೆ ಪ್ರೀತಿಸುವ
ಆ ಪವಿತ್ರ ಕಾರ್ಯದಲ್ಲಿ

೨.
ಒಡಲಾಳದಲ್ಲಿ ಉದಯಿಸಿ
ಪ್ರತಿ ಉಸಿರನ್ನು ಬಿಸಿಯಾಗಿಸಿ
ತನ್ನ ತಾನೇ ಕಳೆದುಕೊಂಡು
ನಿನ್ನ ಹೃದಯ ಬಡಿತದಲ್ಲಿ
ಹೊಸ ಮಿಡಿತವಾಗಿ ಬೆರೆತು
ಅನಂತದಲ್ಲಿ ಒಂದಾಗುವ
ಈ ಸುಂದರ ಸ್ವಪ್ನಕೆ
ಪ್ರೀತಿಯೆಂದು ಹೆಸರಿಡಲೇ..??

೩.
ಮನದ ಪುಟದಲ್ಲಿ ಗೀಚಿರುವೆ
ಕನಸಲ್ಲಿ ಮೂಡಿದ ಭಾವವನ್ನು
ಪೋಸ್ಟ್ ಮಾಡಲೇ ಅದನ್ನು
ನಿನ್ನ ಹೃದಯದ ಅರಮನೆಗೆ
ನೀಡುವೆಯಾ ನೀನು
ನನ್ನ ಮೋಹದ ಟಪಾಲಿಗೆ
ನಿನ್ನ ಪ್ರೇಮದ ಮೊಹರನ್ನು


Wednesday, 26 February 2014

ಗೆಳೆಯನಿಗೊಂದು ಪತ್ರ-೧೬:ನಗುವು ಸಹಜ ಧರ್ಮ; ನಗಿಸುವುದು ಪರಧರ್ಮ


ನಲ್ಮೆಯ ನಲ್ಲನೇ,
                       ಹೇಗಿರುವೆ..?? ಬಹಳ ದಿನದಿಂದ ನೀನು ನಾಪತ್ತೆಯಾಗಿ ಹೋಗಿರುವಂತಿದೆ. ಊರಲ್ಲಿಯೇ ಇರುವೆಯೋ ಅಥವಾ ಯಾವುದಾದರೂ ಕೆಲಸದ ನಿಮಿತ್ತ ಪರ ಊರಿಗೆ ಪ್ರಯಾಣ ಬೆಳೆಸಿರುವೆಯೋ..?? ಆರೋಗ್ಯವಾಗಿದ್ದೀಯಾ ತಾನೇ..??
                             ಇವತ್ತು ಬೆಳಂಬೆಳಿಗ್ಗೆ ಸ್ನೇಹಿತೆಯೊಬ್ಬಳಿಂದ ಎಂತಹ ಉತ್ತಮ ವಿಚಾರವುಳ್ಳ ಸಂದೇಶ ಬಂದಿತ್ತು ಗೊತ್ತಾ..?? "ಎಲ್ಲರೂ ಹೇಳುತ್ತಾರೆ, Good Morning, Have A Nice Day ಎಂದು. ಆದರೆ, ನಾನಿವತ್ತು ಬೇರೆಯದನ್ನೇ ಕೇಳುತ್ತೇನೆ. Did you laugh today so far..?? If not, do that first. Keep Smiling. ಶುಭಮುಂಜಾನೆ..:)" ಬಹಳ ಅರ್ಥಪೂರ್ಣವಾಗಿದೆ ಅಲ್ವಾ.??
                            ನಾವೆಲ್ಲಾ ಬೆಳಿಗ್ಗೆ ಹಾಸಿಗೆಯಿಂದ ಏಳುತ್ತಿದ್ದಾಗಲೇ ಹುಬ್ಬು ಗಂಟಿಕ್ಕಿಕೊಂಡು "ಯಪ್ಪಾ, ಬೆಳಗಾಗಿ ಹೋಯಿತೇ..??" ಎಂದು ತಲೆ ಮೇಲೆ ಆಕಾಶವೇ ಕಳಚಿ ಬಿದ್ದಿದೆಯೆಂಬಂತೆ ವರ್ತಿಸುತ್ತೇವೆ. ಅಂದು ಮಾಡಬೇಕಾಗಿರುವ ಕೆಲಸಗಳ ಕುರಿತು ನಿರಾಸಕ್ತಿ ಮೂಡಿಸಿಕೊಳ್ಳುತ್ತೇವೆ. ಕತ್ತಲೆ ಕಳೆದು ಬೆಳಕು ಹರಿಯಿತೆಂದು ಕೊಂಚವೂ ಉಲ್ಲಾಸ, ಉತ್ಸಾಹದ ಲಕ್ಷಣಗಳು ನಮ್ಮಲ್ಲಿ ಕಾಣಿಸುವುದಿಲ್ಲ. ಎದ್ದ ತಕ್ಷಣ ಹಗುರವಾಗಿ ನಕ್ಕು ಮುಂದಿನ ಕೆಲಸಗಳಿಗೆ ನಾಂದಿ ಹಾಡುವಷ್ಟು ಸಣ್ಣ ಕೆಲಸವನ್ನು ನಾವು ಮಾಡುವುದಿಲ್ಲ. ಇನ್ನು ದಿನ ಪೂರ್ತಿ ಸಂತಸದಿಂದಿರಬೇಕೆಂದರೆ ಹೇಗೆ ತಾನೇ ಸಾಧ್ಯವಾಗಬಲ್ಲದು..??
                           ಯಾರ ಬಳಿಯಾದರೂ ಬೆಳಿಗ್ಗೆ ಏಳುವಾಗ ನಗುತ್ತಾ ಎದ್ದಿರಾ ಎಂದು ಕೇಳಿದರೆ ಅವರೇನು ಉತ್ತರಿಸುತ್ತಾರೆ ಗೊತ್ತೇ..?? "ಬೆಳಂಬೆಳಿಗ್ಗೆ ಮಾಡಲಿಕ್ಕೆ ಬೇರೇನು ಕೆಲಸವಿಲ್ಲವೇನ್ರಿ..?? ಯಾವ ಕಾರಣಕ್ಕಾಗಿ ನಗುತ್ತ ಏಳುವುದು..?? ಮೊದಲೇ ಮಾಡಬೇಕಾಗಿರುವ ಕೆಲಸಗಳಿಗೆ ಸಮಯವಿರುವುದಿಲ್ಲ. ಇನ್ನು ನಗಲಿಕ್ಕೆ ಸಮಯವನ್ನು ಎಲ್ಲಿಂದ ತರೋಣ..?? ಇರುವ ಚಿಂತೆಗಳ ಕುರಿತು ಯೋಚಿಸಲು ಕೂಡ ಪುರುಸೊತ್ತಿಲ್ಲ. ಇನ್ನು ಇವತ್ತು ನಕ್ಕೆವಾ ಇಲ್ಲವಾ ಎಂದು ಯಾವಾಗ ಆಲೋಚಿಸೋಣ..??"


                               ಅಲ್ಲಾ ಸ್ವಾಮಿ, ನಗಲು ಕಾರಣಬೇಕೆ..?? ಮೈಮನಗಳನ್ನು ಅರಳಿಸಿ ನರನರಗಳಲ್ಲಿ ಆಹ್ಲಾದಕತೆಯನ್ನು ದಯಪಾಲಿಸಿ ಪ್ರತಿಕ್ಷಣವೂ ಉತ್ಸಾಹದ ಚಿಲುಮೆಯಾಗಿರುವಂತೆ ಎಲ್ಲರಿಗೂ ಮುಕ್ತವಾದ ವರ ನೀಡುವ ನಗುವನ್ನು ನಗಲು ಅದರ ಮಹತ್ವಕ್ಕಿಂತ ಹೆಚ್ಚಿನ ಕಾರಣಬೇಕೆ..?? ಮುಕ್ತವಾಗಿ ನಗುವುದರಿಂದ ಆಯಸ್ಸು ಜಾಸ್ತಿಯಾಗುತ್ತದೆ ಎಂದು ವೈಜ್ಞಾನಿಕವಾಗಿಯೂ ಕೂಡ ಸಾಬೀತಾಗಿದೆ. ಆದರೂ ನಮಗೆ ನಗುವುದಕ್ಕಿಂತ ಹುಬ್ಬು ಗಂಟಿಕ್ಕಿಕೊಂಡಿರುವುದರಲ್ಲೇ ಬಹಳ ತೃಪ್ತಿ ದೊರೆಯುತ್ತದೆ. ಇನ್ನು ನಗುವುದಕ್ಕೇನು ಬಹಳ ಸಮಯ ಬೇಕೆ..?? ಮನಸಿನೊಳಗಿನ ಖುಷಿಯನ್ನು ನಿಧಾನವಾಗಿ ಹೊರದೂಡಿ ತುಟಿಗಳ ಮೇಲೆ ಕುಣಿಯುವಂತೆ ಮಾಡಲು ಎಷ್ಟು ಹೊತ್ತು ಬೇಕು..?? ಹೆಚ್ಚೆಂದರೆ ಕೆಲವು ಸೆಕೆಂಡುಗಳಷ್ಟೇ. ಇಷ್ಟು ಮಾಡಲು ಆಲೋಚಿಸುವ ಪ್ರಮೇಯವುಂಟೇ..??
                           ಇಂದಿನ ವೇಗದ ಜೀವನ ನಮ್ಮನ್ನು ಎಷ್ಟು ಬ್ಯುಸಿಯಾಗಿಸಿದೆಯೆಂದರೆ ನಮಗೆ ಸಣ್ಣ ಸಣ್ಣ ವಿಷಯಗಳ ಮಹತ್ವವನ್ನು ತಿಳಿದೂ ಕೂಡ ಅವುಗಳನ್ನು ಆಚರಣೆಗೆ ತರುವ ವ್ಯವಧಾನ ನಮಲ್ಲಿ ಇಲ್ಲ. ಯಾವ್ಯಾವುದೋ ಕೆಲಸಗಳಿಗೆ, ವಿಷಯಗಳಿಗೆ ಮಹತ್ವ ನೀಡುತ್ತೇವೆ. ಆದರೆ ನಮ್ಮದೇ ಒಳಿತಿರುವ ಸಣ್ಣ ಸಣ್ಣ ವಿಷಯಗಳನ್ನು ನಾವು ನಿರ್ಲ್ಯಕ್ಷಿಸುತ್ತೇವೆ. ಎಲ್ಲರ ಬದುಕನ್ನು ಚಂದಗಾಣಿಸುವವು ಇವೇ ಸಣ್ಣ ಪುಟ್ಟ ಸಂಗತಿಗಳೇ ಹೊರತು ಬೇರೆ ಯಾವ ದೊಡ್ಡ ದೊಡ್ಡ ಪ್ರತಿಷ್ಠೆಯ ವಿಷಯಗಳಲ್ಲ. ಇವೆಲ್ಲವೂ ನಮಗೆ ಅರ್ಥವಾಗುತ್ತಲೇ ಇಲ್ಲ. ಬದುಕಿನಲ್ಲಿ ಏನು ಮಾಡಿದರೂ ಅದು ನಮ್ಮ ಸುಖಕ್ಕೆಂದೇ ಎನ್ನುತ್ತೇವೆ. ಅಷ್ಟೆಲ್ಲಾ ಮಾಡುವ ಭರದಲ್ಲಿ ಒಮ್ಮೆ ನಗಲು ಆಗುವುದಿಲ್ಲವೆಂದರೆ ಆ ಸುಖಕ್ಕೆ ಅರ್ಥವಿದೆಯೇ..?? ಡಿ.ವಿ.ಜಿ.ಯವರೇನು ಸುಮ್ಮನೇ ಹೇಳಿದ್ದಾರೆಯೇ..??
                                   "ನಗುವು ಸಹಜದ ಧರ್ಮ; ನಗಿಸುವುದು ಪರಧರ್ಮ|
                                     ನಗುವ ಕೇಳುತ ನಗುವುದತಿಶಯದ ಧರ್ಮ||
                                     ನಗುವ ನಗಿಸುವ ನಗಿಸಿ ನಗುತ ಬಾಳುವ ವರವ|
                                     ಮಿಗೆ ನೀನು ಬೇಡಿಕೊಳೊ - ಮಂಕುತಿಮ್ಮ||  "
                         ಅಂದಹಾಗೆ, ನೀನು ಇವತ್ತು ಬೆಳಿಗ್ಗೆ ಎದ್ದ ತಕ್ಷಣ ಒಮ್ಮೆಯಾದರೂ ನಕ್ಕಿದ್ದೀಯಾ..?? ನನಗಂತೂ ಹಲ್ಲುಜ್ಜಲಿಕ್ಕೆಂದು ಕನ್ನಡಿ ಮುಂದೆ ಹೋಗಿ ನಿಂತು ನನ್ನ ಮುಖ ನೋಡಿದ ಕೂಡಲೇ ನಗು ಬಂದು ಬಿಟ್ಟಿತು. ಆಗ ನಗದಿದ್ದರೂ ಪರವಾಗಿಲ್ಲ. ಈ ನನ್ನ ಪತ್ರ ಓದಿದ ಕೂಡಲೇ ಒಮ್ಮೆ ನಕ್ಕು ಬಿಡು. ಓಕೆ ತಾನೇ.??

                             ಪ್ರೀತಿಯಿಂದ,

                                                                                                                   ಎಂದೆಂದೂ ನಿನ್ನವಳು,
                                                                                                                         ನಿನ್ನೊಲುಮೆ


ಗುಲಾಬಿ ಅಳುತಿದೆಬಣ್ಣ ಮಾಸಿದೆ ಹಿಂದಿನ ಹೊಳಪಿಲ್ಲ
ಪರಿಮಳ ಬೀರದೇ ಯುಗಗಳೇ ಕಳೆದುವಲ್ಲ
ಮೂಲೆಯಲ್ಲಿ ಮುದುಡಿ ಕುಳಿತಿದೆ
ಮೌನರಾಗದಲ್ಲಿ ಅಳುತ್ತಲೇ
ನನ್ನಲ್ಲಿ ನೀನೇ ಅರಳಿಸಿ ಬಿಟ್ಟು ಹೋದ
ಆ ಪುಟ್ಟ ಕೆಂಪು ಗುಲಾಬಿ

ಬಾಡಿ ಹೋಗಿದೆ ಅದರತ್ತ ನೋಡುವವರಿಲ್ಲದೆ
ಮೈ ಸವರುವ ಕೈಗಳಿಲ್ಲದೆ
ದಳಗಳೆಲ್ಲಾ ಒಂದೊಂದಾಗಿ ಉದುರುತ್ತಿವೆ
ಆದರೇಕೋ ನಿಂತಿಲ್ಲ ಅದರ ಕಣ್ಣೀರು
ಹರಿಯುತ್ತಲೇ ಇದೆ ತಡೆಯಿಲ್ಲದೇ
ನಿನ್ನ ಸೋಕುವ ಯೋಚನೆಯೋ ಏನೋ

ತಡೆಯಲಿ ಹೇಗೆ ನಾನದರ ಅಳುವನ್ನು
ಒರೆಸಿದಷ್ಟೂ ಒತ್ತರಿಸಿ ಬರುವುದಲ್ಲ
ಹಾಗೇ ಹೋಗಬಾರದಿತ್ತೆ ನೀ ಸುಮ್ಮನೆ
ನನಗೇಕೆ ಇತ್ತೇ ಈ ಗುಲಾಬಿಯನ್ನು
ಮರಳಿ ಬರಲಾರೆ ನೀನೆಂದೂ
ಶಾಶ್ವತವೇ ಈ ಅಳು ಹಾಗಾದರೆ..??


Monday, 24 February 2014

ಗೆಳೆಯನಿಗೊಂದು ಪತ್ರ-೧೫:ದೀಪವೂ ನಿನ್ನದೆ, ಗಾಳಿಯೂ ನಿನ್ನದೆ..ನನ್ನೊಲವಿನ ಗೆಳೆಯಾ,
                                     ಹೇಗಿರುವೆ..?? ವಿಷಯ ತಿಳಿಯಿತಲ್ಲವೇ..?? ನಮ್ಮ ಜೂನಿಯರ್ ಹುಡುಗನೊಬ್ಬ ಹೋಗಿಬಿಟ್ಟ ಕಣೋ. ಬೆಳಿಗ್ಗೆಯಷ್ಟೇ ಕಾಲೇಜಿನಲ್ಲಿ ನಡೆದ ಪೈಂಟಿಂಗ್ ಸ್ಪರ್ಧೆಯಲ್ಲಿ ನಗುನಗುತ್ತಾ ಓಡಾಡುತ್ತಿದ್ದ ಹುಡುಗ ಅದೇ ದಿನ ಅರ್ಧರಾತ್ರಿಯ ಹೊತ್ತಿನಲ್ಲಿ ನಮ್ಮನ್ನೆಲ್ಲ ಬಿಟ್ಟು ಹೋದನೆಂದರೆ ಯಾರಿಗೆ ತಾನೇ ಈ ಕಹಿ ಸತ್ಯವನ್ನು ಅರಗಿಸಿಕೊಳ್ಳಲಾಗುತ್ತದೆ..??
                                 ಪಾರ್ಟಿಯೊಂದರಿಂದ ಬರುತ್ತಿದ್ದ ಆತ ಪೂರಾ ನಶೆಯಲ್ಲಿದ್ದನಂತೆ. ಬೈಕನ್ನು ಸಹ ಬಹಳ ವೇಗವಾಗಿ ಓಡಿಸುತ್ತಿದ್ದನಂತೆ. ನಾಯಿಯೊಂದು ಅಡ್ಡ ಬಂದಿದ್ದರಿಂದ ಅದರ ಜೀವ ಉಳಿಸುವ ಸಲುವಾಗಿ ಬ್ರೇಕನ್ನು ಹಾಕಿದಾಗ ಅದು ಕೆಲಸ ಮಾಡದೇ ಬೈಕ್ ಸ್ಕಿಡ್ ಆಗಿದೆ. ಅದೂ ಅಲ್ಲದೇ ಆತ ಹೆಲ್ಮೆಟ್ ಸಹ ಧರಿಸಿರಲಿಲ್ಲವಂತೆ. ಇದೂ ಆತ ತನ್ನ ಜೀವವನ್ನೇ ದಂಡ ತರುವಂತೆ ಮಾಡಿದೆ. ಈಗ ತಪ್ಪು ಆತನದೇ ಎಂದು ದೂರುವುದರಲ್ಲಿ ಯಾವ ಅರ್ಥವಿದೆ..?? ಮೋಜು-ಮಸ್ತಿಗಳ ಗುಂಗಿನಲ್ಲಿ ತಮ್ಮ ಜೀವವನ್ನೇ ರಿಸ್ಕ್ ಗೆ ಒಡ್ಡುವುದು ಮೂರ್ಖತನವಲ್ಲವೇ..??


                                ೨೦ ವರ್ಷಗಳಷ್ಟೇ, ಇನ್ನೇನು ಮೊಗ್ಗಾಗಿದ್ದ ಹೂವು ಅರಳಿ ತನ್ನ ಪರಿಮಳವನ್ನು ಎಲ್ಲೆಡೆ ಬೀರುವ ಕಾಲ. ಆದರೆ, ‘ಸ್ಪಂದನ್’ ಎಂಬ ಹೂವು ಅರಳುವ ಮೊದಲೇ ಕಮರಿಹೋದದ್ದು ನಿಜಕ್ಕೂ ಬೇಸರ ತರಿಸುತ್ತಿದೆ. ಇತ್ತೀಚೆಗೆ ಇಂಥ ಘಟನೆಗಳು ಹೆಚ್ಚುತ್ತ ಸಾಗಿವೆ. ಬೇಕಾದಷ್ಟು ಎಚ್ಚರಿಕೆಯ ಮಾತುಗಳು ಕಿವಿಗೆ ಬಿದ್ದಿದ್ದರೂ ಬೈಕ್ ಹತ್ತಿ ಕುಳಿತ ನಂತರ ಅವೆಲ್ಲವೂ ಮರೆತುಹೋಗುವಂತಾಗಿದೆ. ಅಷ್ಟಕ್ಕೂ ಅಪಾಯಗಳ ಅರಿವು ಸ್ವತಃ ತಿಳಿದಿರಬೇಕಾದ ವಯಸ್ಸಲ್ಲವೇ..?? ನಮ್ಮ ಬದುಕನ್ನು ರೂಪಿಸಿಕೊಳ್ಳುವವರು ನಾವೇ ಅಲ್ಲವೇ..?? ಹಾಗಿರುವಾಗ ಅದನ್ನು ಅಪಾಯದ ಕೈಗೆ ಅಪಾತ್ರ ದಾನ ಮಾಡುವ ಮೊದಲು ಸ್ವಲ್ಪವಾದರೂ ಯೋಚಿಸುವುದು ಬೇಡವೇ..?? ಕನಿಷ್ಠ ಪಕ್ಷ ಹೆತ್ತವರ ಕುರಿತಾದರೂ ನೆನಪು ಮಾಡಿಕೊಂಡು ನಮ್ಮ ಹುಡುಗಾಟಗಳಿಗೆ ಬೇಲಿ ಹಾಕಿಕೊಳ್ಳಬೇಕು.
                            ಇವತ್ತು ಅವನ ಸ್ನೇಹಿತರು ಅಳುವುದನ್ನು ನೋಡಲಾಗುತ್ತಿರಲಿಲ್ಲ. ಎಲ್ಲರ ಕಣ್ಣುಗಳೂ ಕೆಂಪು ಉಂಡೆಗಳಂತಾಗಿದ್ದವು. ಇನ್ನು ಅವನ ಹೆತ್ತವರ ಸಂಕಟವನ್ನು ಯಾರು ತಾನೇ ಅರ್ಥಮಾಡಿಕೊಳ್ಳಬಲ್ಲರು. ಮಗನ ಭವಿಷ್ಯದ ಕುರಿತು ಏನೆಲ್ಲ ಕನಸು ಕಂಡಿದ್ದರೋ ಏನೋ. ಜವಾಬ್ದಾರಿಯನ್ನು ಹೊರಬೇಕಾದ ಹೆಗಲೇ ಮುರಿದು ಹೋದಾಗ ಅವರ ಗೋಳನ್ನು ಹೇಳುವುದೆಂತು..?? ಛೇ, ನೆನೆದರೆ ಕಣ್ಣು ಮಂಜಾಗುತ್ತದೆ. ಇದ್ದ ಒಬ್ಬ ಮಗನೂ ಹೀಗೆ ಹರೆಯದಲ್ಲಿ ಹೋಗಿಬಿಟ್ಟರೆ ಇನ್ನುಳಿದ ತಮ್ಮ ಜೀವನವನ್ನು ಅವರು ನೆಮ್ಮದಿಯಿಂದ ಕಳೆಯಲಾದೀತೇ..?? ನಗು ಎನ್ನುವುದು ಶಾಶ್ವತವಾಗಿ ಮಾಯವಾದಂತೆ ಅಲ್ಲವೇ..?? ಅಯ್ಯೋ ಹುಡುಗಾ, ಇದನ್ನೆಲ್ಲಾ ಸ್ವಲ್ಪವಾದರೂ ನೀನು ಯೋಚಿಸಬಾರದಿತ್ತೇ.
                           ಅವನ ಸಾವಿನ ಸುದ್ದಿ ಕೇಳಿದಾಗಿನಿಂದ ನನ್ನ ಮನದಲ್ಲಿ ಮತ್ತೆ ಮತ್ತೆ ಕೆ. ಎಸ್. ನ. ಅವರ ಈ ಹಾಡು ಕೇಳಿಬರುತ್ತಿದೆ.
                                   " ದೀಪವೂ ನಿನ್ನದೆ, ಗಾಳಿಯೂ ನಿನ್ನದೆ
                                     ಆರದಿರಲಿ ಬೆಳಕು
                                     ಕಡಲೂ ನಿನ್ನದೆ, ಹಡಗೂ ನಿನ್ನದೆ
                                     ಮುಳುಗದಿರಲಿ ಬದುಕು.."

                           ಪ್ರೀತಿಯಿಂದ,

                                                                                                                         ಎಂದೆಂದೂ ನಿನ್ನವಳು,
                                                                                                                               ನಿನ್ನೊಲುಮೆ


Sunday, 23 February 2014

ಮತ್ತೆ ಹುಟ್ಟಿ ಬಾ ಗೆಳೆಯಈ ದಿನದ ಬೆಳಗಿನಲ್ಲಿ ಬೆಳಕಿಲ್ಲ
ಹಕ್ಕಿಗಳ ಕಲರವವಿಲ್ಲ, ಹೂವುಗಳ ಪರಿಮಳವಿಲ್ಲ
ನೀನಿಲ್ಲದ ಪ್ರಕೃತಿಯಲ್ಲೂ ‘ಸ್ಪಂದನ’ವಿಲ್ಲ
ನಿಲ್ಲದ ಹಸಿ ಕಣ್ಣೀರಿನ ಯಾನ
ಎದೆಯಾಳದಲ್ಲಿ ಶೃತಿಯಿಲ್ಲದ ಗಾನ
ಎತ್ತಲೂ ಅಳುತಿದೆ ಸ್ಮಶಾನ ಮೌನ

ನಿನಗೆ ಮನಸ್ಸಾದರೂ ಬಂತು ಹೇಗೆ
ನಮ್ಮನ್ನೆಲ್ಲ ಬಿಟ್ಟು ಹೋಗಲು ಹಾಗೆ
ನಾವಿಲ್ಲಿ ಜೀವಛ್ಚವವಾಗಿರುವೆವು ಹೀಗೆ
ನಿನ್ನ ನಗು ನಮ್ಮನ್ನು ಅಳಿಸುತಿದೆ
ನಿನ್ನ ಮಾತು ನಮ್ಮನ್ನೆಲ್ಲ ಮೂಕವಾಗಿಸಿದೆ
ಈ ಪುಟ್ಟ ಹೃದಯವು ಬಡಿತವನು ನಿಲ್ಲಿಸಿದೆ

ನೀ ಹೋದರೇನು ನಮ್ಮಿಂದ ದೂರ
ನಿನ್ನ ನೆನಪುಗಳು ಆಗಸಕ್ಕಿಂತಲೂ ಎತ್ತರ
ಭಾಸವಾಗುತಿದೆ ನೀನಿರುವೆ ಇಲ್ಲೇ ಹತ್ತಿರ
ಗೆಳೆಯಾ, ಮೇಲಿಂದಲೇ ನಗುತಿರು ನಮಗಾಗಿ
ನೀ ಮತ್ತೆ ಹುಟ್ಟಿ ಬಾ ಮಗುವಾಗಿ
ನಮ್ಮೆಲ್ಲರ ಮನಸಿನ ಹೊಸ ಕನಸುಗಳಾಗಿ


Saturday, 22 February 2014

ಮಳೆ ಬರಲೇಬೇಕು                                               ಢಣ್ ಢಣ್ ಢಣ್ ಢಣ್ ಢಣ್ ಎಂದು ಗೋಡೆಯ ಮೇಲಿನ ಅಜಂತಾ ಗಡಿಯಾರ ಐದು ಸಲ ಬಾರಿಸಿತು. ಕಳೆದೆರಡು ತಾಸಿನಿಂದ ಮಲಗೇ ಇದ್ದರೂ ಆಚೆ ಈಚೆ ಹೊರಳಾಡಿದ್ದು ಬಿಟ್ಟರೆ ನಿದ್ರೆಯ ನೆರಳೂ ಹತ್ತಿರ ಸುಳಿದಿರಲಿಲ್ಲ. ಇನ್ನೂ ಎಷ್ಟು ಹೊತ್ತೆಂದು ಮಲಗಿಕೊಂಡೇ ಇರುವುದು ಎಂದು ಅನಿಸುತ್ತಿರುವಾಗಲೇ ಅಮ್ಮ ಕೂಗಿದರು. "ಪುಟ್ಟೀ, ಎಚ್ಚರಗೊಂಡೆಯಾ...?? ಎದ್ದು ಬಾ, ಮುಖ ತೊಳೆದುಕೊ. ಬಿಸಿ ಬಿಸಿಯಾದ ಬೋಂಡಾ ಇದೆ. ತಿನ್ನುವಿಯಂತೆ.." ಪಾಪ, ಅಮ್ಮ ನನಗೆ ನಿದ್ರೆ ಬಂದಿತ್ತೆಂದೇ ತಿಳಿದುಕೊಂಡು ಇಷ್ಟು ಹೊತ್ತು ಎಬ್ಬಿಸದೇ ಸುಮ್ಮನಿದ್ದರು. ಇವರು ಬೋಂಡಾ ಮಾಡುವವರಿದ್ದಾರೆಂದು ಮೊದಲೇ ಗೊತ್ತಿದ್ದಿದ್ದರೆ ಇಲ್ಲಿ ಸುಮ್ಮನೆ ಹಾಸಿಗೆ ಮೇಲೆ ಬಿದ್ದುಕೊಂಡು ಕಾಲಹರಣ ಮಾಡುವ ಬದಲು ಅವರಿಗೊಂದಿಷ್ಟು ಸಹಾಯವನ್ನಾದರೂ ಮಾಡಬಹುದಿತ್ತು.
                             ಬಚ್ಚಲುಮನೆಯಲ್ಲಿ ಮುಖ ತೊಳೆಯುವಾಗಲೂ ಮತ್ತೆ ಅದೇ ಹಾಳು ಯೋಚನೆ ತಲೆಯನ್ನು ಆವರಿಸಿತು. ಏನಾಗಿ ಹೋಗಿದೆ ನನ್ನ ಬದುಕು..?? ಏನಾಗಿದೆ..?? ಊಹೂಂ, ಇದಕ್ಕೆ ಉತ್ತರ ದೊರೆಯುವ ಕಾಲ ಇನ್ಯಾವಾಗ ಬರುವುದೋ. ಕಳೆದೊಂದು ತಿಂಗಳಿನಿಂದ ಅಶಾಂತಿಯ ಭೂತ ನನ್ನನ್ನು ಅಪ್ಪಿ ಹಿಡಿದಿದೆ. ಯಾವುದರಲ್ಲೂ ಆಸಕ್ತಿಯಿಲ್ಲ, ಏನು ಮಾಡಿದರೂ ಅದರಿಂದ ಮನಸ್ಸು ಮುದಗೊಳ್ಳುವುದಿಲ್ಲ. ಮೊದಮೊದಲು ಕೆಲಸದ ಒತ್ತಡದಿಂದ ಹೀಗಾಗುತ್ತಿರಬಹುದು ಎಂದುಕೊಂಡರೂ ಕೆಲಸ ಇಲ್ಲದ ದಿನಗಳಲ್ಲೂ ಶಾಂತಿ ದೊರೆಯುತ್ತಿಲ್ಲ ಎಂದು ಅರಿವಾಯಿತು. ಶಬ್ದವೇ ಇಲ್ಲದ ನಿರ್ವಾತದಲ್ಲಿ ಕುಳಿತರೂ ನನ್ನ ಮನಸ್ಸಿನೊಳಗೆ ಮಾತ್ರ ಗದ್ದಲವೇ ಗದ್ದಲ. ಪೀಸ್ ಆಫ್ ಮೈಂಡ್ ಎನ್ನುವುದು ನನ್ನನ್ನು ಶಾಶ್ವತವಾಗಿ ಬಿಟ್ಟು ಹೋಗಿದೆ ಎನ್ನುವಂತಾಗಿದೆ ನನ್ನ ಸ್ಥಿತಿ. ಆರಾಮವಾಗಿ ಸಾಗುತ್ತಿದ್ದ ಜೀವನದ ಹಾದಿಯಲ್ಲಿ ಒಮ್ಮೆಲೇ ಟ್ರಾಫಿಕ್ ಜಾಮ್ ಆದಂತೆ. ಇದು ಒಮ್ಮೆಲೇ ಆದದ್ದೋ ಅಥವಾ ಎಂದೋ ಶುರುವಾಗಿ ಈಗ ನನ್ನ ಅರಿವಿಗೆ ಬಂತೋ, ಅದು ಸಹ ತಿಳಿಯುತ್ತಿಲ್ಲ.
                        ಅನುಕ್ಷಣವೂ ಏರಿಳಿತದಲ್ಲಿಯೇ ಇರುತ್ತಿದ್ದ ನನ್ನ ಮನಸ್ಸನ್ನು ತಹಬದಿಗೆ ತರಲು ಇರುವ ದಾರಿಯಾದರೂ ಯಾವುದು ಎಂದು ನನಗೆ ಬಹಳ ದಿನಗಳವರೆಗೆ ತಿಳಿಯದೇ ಹೋದಾಗ ೨೩ ವರ್ಷಗಳು ತುಂಬಿದ್ದು ಸುಮ್ಮನೆ ಹೆಸರಿಗಷ್ಟೇ, ನನ್ನ ಬುದ್ಧಿ ಮಾತ್ರ ಇಷ್ಟೂ ಬಲಿತಿಲ್ಲ ಎನಿಸಿಬಿಟ್ಟಿತ್ತು. ಯಾರೊಂದಿಗಾದರೂ ನನ್ನ ಯೋಚನೆಗಳನ್ನು, ಭಾವನೆಗಳನ್ನು ಹಂಚಿಕೊಂಡರೆ ಸ್ವಲ್ಪ ರಿಲಾಕ್ಸ್ ಆಗಬಹುದೇನೋ ಎಂದು ಒಮ್ಮೆ ಅನಿಸಿದರೂ ಮರುಕ್ಷಣವೇ ಎಲ್ಲರ ಜೊತೆ ಎಲ್ಲವನ್ನೂ ಹಂಚಿಕೊಂಡಿದ್ದರಿಂದಲೇ ಈ ಅಶಾಂತಿಯ ಅಲೆ ಎದ್ದಿತಲ್ಲವೇ ಎಂಬ ಯೋಚನೆ ಬಂದು ಸುಮ್ಮನೆ ಉಳಿದುಬಿಟ್ಟೆ. ಆದರೂ ರಭಸದಿ ಹರಿಯುವ ನೀರಿನ ಪ್ರವಾಹಕ್ಕೆ ಅಣೆಕಟ್ಟನ್ನು ಕಟ್ಟಬಹುದಾದರೂ ಅದು ಎಷ್ಟು ದಿನ ತಡೆಯಬಲ್ಲುದು..?? ಕೊನೆಗೊಮ್ಮೆ ಒಡಹುಟ್ಟಿದ ಅಣ್ಣನಲ್ಲಿ ಎಲ್ಲವನ್ನೂ ತೋಡಿಕೊಂಡೆ. ಆತ ಹೆಚ್ಚು ಮಾತನಾಡುವವನಲ್ಲ. ನನ್ನ ಕತೆಯನ್ನು ಪೂರ್ತಿಯಾಗಿ ಕೇಳಿ ಆತ ಹೇಳಿದ್ದು ಇಷ್ಟೇ ಮಾತು. "ನೀನು ಎಲ್ಲಿ ಹುಟ್ಟಿದೆಯೋ, ಎಲ್ಲಿ ಬೆಳೆದೆಯೋ ಅಲ್ಲಿಗೆ ಒಮ್ಮೆ ಹೋಗಿ ಬಾ. ಅಲ್ಲಿನ ಪ್ರತಿಯೊಂದು ಜೀವಕ್ಕೂ, ನಿರ್ಜೀವ ವಸ್ತುಗಳಿಗೂ ನಿನ್ನ ಪರಿಚಯ ಚೆನ್ನಾಗಿ ಇರುವುದು. ಅದಕ್ಕಿಂತ ಹೆಚ್ಚಾಗಿ ನಿನ್ನನ್ನು ನೀನು ಇನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಅದಕ್ಕಿಂತ ಪ್ರಶಸ್ತವಾದ ಸ್ಥಳ ಬೇರೊಂದಿಲ್ಲ. ನಿನ್ನ ಎಲ್ಲ ಪ್ರಶ್ನೆಗಳಿಗೆ ಉತ್ತರ ಖಂಡಿತ ದೊರೆತು ಗೊಂದಲಗಳು ಬಗೆಹರಿಯುವವು. ಹೋಗಿ ಬಾ.." ಗೊತ್ತಾಯಿತಲ್ಲ, ಆತ ನನ್ನನ್ನು ಎಲ್ಲಿಗೆ ಹೋಗೆಂದನೆಂದು..?? ನನ್ನ ಊರಿಗೆ.


                                           ನಾನು ಪಿಯುಸಿಯಿಂದಲೂ ಹಾಸ್ಟೆಲುಗಳಲ್ಲಿ ಇದ್ದು ಓದಿದವಳು. ಮೊದಲೊಂದು ವರ್ಷ ಮನೆ ಬಿಟ್ಟು ಇರುವುದು ಕಷ್ಟವಾದರೂ ಆಮೇಲೆ ನಾನು ಮನೆಗಿಂತ ನನ್ನ ಕಾಲೇಜು, ಅಲ್ಲಿನ ಪ್ರಪಂಚ, ಅಲ್ಲಿನ ಜನರನ್ನೇ ಅತಿಯಾಗಿ ಹಚ್ಚಿಕೊಂಡೆ. ಪಿಯುಸಿಯಿಂದ ಕಳೆದ ವರ್ಷದ ತನಕ ನಾನು ಎಲ್ಲೆಲ್ಲಿ ಇದ್ದೆನೋ ಆ ಊರುಗಳೆಲ್ಲಾ ನನ್ನದೇ ಎನ್ನುವಂತಾಗಿದ್ದವು. ವರ್ಷಕ್ಕೆ ೩-೪ ಬಾರಿಯಷ್ಟೆ ನಾನು ಮನೆಯ ಹಾದಿ ಹಿಡಿಯುತ್ತಿದ್ದೆ. ಹಬ್ಬ-ಹರಿದಿನಗಳಿಗೂ ಹೋಗುತ್ತಿದ್ದುದು ಕಡಿಮೆಯಾಗಿತ್ತು. ಕೆಲಸಕ್ಕೆ ಸೇರಿದ ಮೇಲಂತೂ ರಜೆ ದೊರಕುತ್ತಿದ್ದುದೇ ಇಲ್ಲ. ರಜೆ ದೊರಕಿದರೂ ಬೇರೆ ಊರುಗಳಿಗೆ ಪ್ರವಾಸ ಹೊರಟು ಬಿಡುತ್ತಿದ್ದೆ. ಈಗ ಒಂದು ವಾರಗಳ ರಜೆ ಪಡೆದು ಮೊನ್ನೆ ರಾತ್ರಿ ಇದ್ದಕ್ಕಿದ್ದಂತೆ ಮನೆಗೆ ಬಂದಿಳಿದಾಗ ಅಪ್ಪ ಮೊದಲು ಕೇಳಿದ್ದು ನಾನು ನಿರೀಕ್ಷಿಸಿದ್ದ ಮಾತನ್ನೇ. "ಇದೇನು ಇಷ್ಟು ಸಡನ್ನಾಗಿ ಬಂದದ್ದು..??"
                                    ಬಿಸಿ ಬಿಸಿ ಪಕೋಡ ನನ್ನ ಯೋಚನೆಗಳಿಗೆ ಬ್ರೇಕ್ ಹಾಕಿತು. ಅಮ್ಮ ಅದೂ ಇದೂ ಎನ್ನುತ್ತಾ ಊರಿನ ವೃತ್ತಾಂತಗಳನ್ನೆಲ್ಲ ಹೇಳುತ್ತಿದ್ದರು. ಊರಿನ ಸುದ್ದಿಗಳೇ ಹಾಗೆ. ಹೇಳಿದಷ್ಟೂ ಬೆಳೆಯುತ್ತಲೇ ಹೋಗುತ್ತವೆಯೇ ಹೊರತು ಮುಗಿದವು ಎಂಬುದಿಲ್ಲ. " ಇಡೀ ದಿನ ಮನೆಯಲ್ಲೇ ಕೂತುಕೊಂಡರೆ ತಲೆಗೆ ಮಂಕು ಹಿಡಿಯುವುದಿಲ್ಲವೇ ಪುಟ್ಟೀ..?? ಅದರಲ್ಲೂ ನೀನು ಉದ್ಯೋಗಸ್ಥೆ ಬೇರೆ. ಪ್ರತಿದಿನ ಓಡಾಡುವ ದಿನಚರಿ ರೂಢಿಯಾಗಿರುತ್ತದೆ. ಇಲ್ಲಿಗೆ ಬಂದಾಗಿನಿಂದ ಯಾರಿಂದಿಗೂ ಸರಿಯಾಗಿ ಮಾತನಾಡಿಲ್ಲ, ಎಲ್ಲಿಗೂ ಹೋಗಿಲ್ಲ. ಬೇರೆಯವರ ಮನೆಗೆ ಹೋಗೆಂದೇನು ನಾನು ಹೇಳುವುದಿಲ್ಲ. ಊರ ಹೊರಗಿನ ಪಾರ್ಕ್ ಗಾದರೂ ಹೋಗಿಬರಬಾರದೇ..?? ಸಂಜೆಯ ಗಾಳಿ ಮನಸ್ಸಿಗೆ ಹಿತ ನೀಡುತ್ತದೆ." ಅಮ್ಮ ಮಾತು ಮುಗಿಸಿದರು.
                                       ಮೈ ಮೇಲೊಂದು ಶಾಲು ಹೊದ್ದು ಪಾರ್ಕ್ ನತ್ತ ಹೆಜ್ಜೆ ಹಾಕುತ್ತಿದ್ದಂತೆಯೇ ಊರಿನ ಹಿರಿ-ಕಿರಿಯರೆಲ್ಲಾ ಒಬ್ಬೊಬ್ಬರೇ ಸಿಗಲಾರಂಭಿಸಿದರು. ಕೆಲವರು ಮುಗುಳ್ನಕ್ಕು ಕ್ಷೇಮ ಕುಶಲ ವಿಚಾರಿಸಿದರೆ, ಇನ್ನು ಕೆಲವರು ನನ್ನಿಂದ ಸಣ್ಣ ಕತೆಯನ್ನೇ ಕೇಳಿ ಮುಂದೆ ಸಾಗಿದರು. ಪಾರ್ಕಿನಲ್ಲಿ ಊರಿನ ಪುಟ್ಟ ಪುಟ್ಟ ಮಕ್ಕಳೆಲ್ಲಾ ಆಟವಾಡಲು ಜಮಾಯಿಸಿದ್ದರು. ನಾನೊಂದು ಮೂಲೆಯಲ್ಲಿದ್ದ ಕಲ್ಲು ಬೆಂಚಿನ ಮೇಲೆ ಕುಳಿತುಕೊಂಡು ಅವರ ಆಟಗಳನ್ನೇ ನೋಡತೊಡಗಿದೆ. ನನ್ನ ಜೀವನವೂ ಒಂದು ಆಟದ ಮೈದಾನವಾಗಿ ಹೋಗಿದೆಯೆಂದು ಅನಿಸಲು ಶುರುವಾಯಿತು. ಯಾರ್ಯಾರೋ ಬಂದು ತಮಗೆ ಬೇಕಾದ ಆಟವಾಡಿ ಧೂಳೆಬ್ಬಿಸಿ ಹೋಗಿಬಿಟ್ಟಿದ್ದಾರೆ. ಅವರು ಹೊರಟುಹೋದರೂ ಆ ಧೂಳು ಮಾತ್ರ ಇನ್ನೂ ಏಳುವುದು ನಿಂತಿಲ್ಲ. ಅದನ್ನು ನಿಲ್ಲಿಸುವ ಬಗೆಯೇ ತೋಚುತ್ತಿಲ್ಲ. ಮರುಕ್ಷಣವೇ ಬೇರೆ ಯೋಚನೆ ಬಂತು. ಇಲ್ಲ, ಅವರೇನು ಧೂಳು ಎಬ್ಬಿಸಿಲ್ಲ. ಏನೇನೋ ಯೋಚಿಸುತ್ತ ಇಲ್ಲದ್ದನ್ನು ಕಲ್ಪಿಸಿಕೊಳ್ಳುತ್ತಾ ನಾನೇ ಧೂಳು ಏಳುವಂತೆ ಮಾಡಿಕೊಂಡಿದ್ದೇನೆ. ಏನೋ ಒಂದು ಸರಿಯಾಗಿ ಅರ್ಥವಾಗುತ್ತಿಲ್ಲ.


                                      ಒಮ್ಮಿಂದೊಮ್ಮೆಲೆ ಗಾಳಿ ಜೋರಾಗಿ ಬೀಸತೊಡಗಿತು. ಒಂದೆರಡು ಕ್ಷಣಗಳಲ್ಲೇ ಪಟ್ ಪಟ್ ಎನ್ನುತ್ತಾ ನೀರಿನ ದೊಡ್ಡ ದೊಡ್ಡ ಹನಿಗಳು ಒಂದೊಂದಾಗಿ ಬೀಳತೊಡಗಿದುವು. ಯಾರೊಬ್ಬರ ಹತ್ತಿರವೂ ಛತ್ರಿ ಇರಲಿಲ್ಲ. ಬೆಳಗಿನಿಂದ ಮೋಡ ಕವಿದ ವಾತಾವರಣವಿದ್ದರೂ ಬೇಸಿಗೆಯ ಆ ದಿನಗಳಲ್ಲಿ ಇಷ್ಟು ಅನಿರೀಕ್ಷಿತವಾಗಿ ಮಳೆ ಬರಬಹುದೆಂದು ಯಾರು ತಾನೇ ಊಹಿಸಿದ್ದರು..?? ಮಕ್ಕಳಿಗೆ ಮಾತ್ರ ಮಳೆಯ ಆಗಮನ ಕಿಂಚಿತ್ತೂ ಅಡ್ಡಿಯಾಗಿರಲಿಲ್ಲ. ಅವರೆಲ್ಲಾ ತಮ್ಮ ತಮ್ಮ ಆಟಗಳಲ್ಲಿ ತಲ್ಲೀನರಾಗಿ ಮೈಮರೆತಿದ್ದರು. ನನ್ನನ್ನು ಹಿಡಿದು ಅಲ್ಲಿದ್ದ ೪-೫ ಮಂದಿ ದೊಡ್ಡವರೆಲ್ಲಾ ಮರಗಳ ಕೆಳಗೆ ನಿಂತುಕೊಂಡು ಮಳೆ ನಿಲ್ಲುವ ಕ್ಷಣಕ್ಕಾಗಿಯೇ ಕಾಯುತ್ತಿದ್ದೆವು. ಆದರೆ ಮಕ್ಕಳಿಗೆ ಮಾತ್ರ ಬಿಸಿಲು, ಧೂಳು, ಮಳೆ - ಇವ್ಯಾವುದಕ್ಕೂ ವ್ಯತ್ಯಾಸವೇ ಇದ್ದಂತಿರಲಿಲ್ಲ. ನನಗೆ ಒಂದು ಕ್ಷಣ ಈ ಮಕ್ಕಳಿಗೆ ಸ್ವಲ್ಪವಾದರೂ ಬುದ್ಧಿಬೇಡವೇ ಎಂದು ಅನಿಸಿದರೂ ಆಮೇಲೆ ಹೊಸದಾದ ಸತ್ಯವೊಂದು ಹೊಳೆದಂತೆ ತಲೆಯಲ್ಲಿ ಮಿಂಚು ಮೂಡಿತು. ನಾನೂ ಕೂಡ ಚಿಕ್ಕಂದಿನಲ್ಲಿ ಹೀಗೆಯೇ ಇದ್ದೆನಲ್ಲವೇ..?? ಯಾವುದೇ ಚಿಂತೆಗಳಿಲ್ಲದೇ ಮನಸ್ಸು ಹಗುರವಾಗಿರುತ್ತಿತ್ತು. ಆದರೆ ಈಗೇಕೆ ಹೀಗೆ ಭಾರವಾಗಿದೆ..?? ೨೩ ವರ್ಷಗಳು ತುಂಬಿತೆಂದೇ..??
                                  ಬಾಲ್ಯದಲ್ಲಿ ನಾವೆಲ್ಲರೂ ಎಂತಹ ಸಮಸ್ಯೆ ಎದುರಾದರೂ ಅದನ್ನು ಒಂದು ಸಮಸ್ಯೆಯೇ ಅಲ್ಲವೆಂಬಂತೆ ಎಷ್ಟು ಸುಲಭವಾಗಿ ಬಗೆಹರಿಸಿಕೊಳ್ಳುತ್ತೇವೆ. ಬಂದಷ್ಟೇ ವೇಗವಾಗಿ ಸಮಸ್ಯೆ ನಮ್ಮನ್ನು ಬಿಟ್ಟು ಓಡಿಹೋಗುತ್ತದೆ. ನಿಷ್ಕಲ್ಮಶವಾದ ಮನಸ್ಸು ಸಮಸ್ಯೆ ಎನ್ನುವ ಪದವನ್ನೇ ಅರಿತಿರುವುದಿಲ್ಲ. ಅದು ಒಂದು ಬಗೆಯ ಹೊಸ ಆಟ ಎಂದಷ್ಟೇ ಭಾವಿಸುತ್ತದೆ. ಆದರೆ ಈಗ..?? ದೊಡ್ಡವರಾಗುತ್ತಿದ್ದಂತೆ ಬುದ್ಧಿ ಬೆಳೆಯತೊಡಗಿ ತಿಳುವಳಿಕೆ ಜಾಸ್ತಿಯಾಗುತ್ತಿದ್ದಂತೆ ನಮಗೆ ಆಟಗಳೆಲ್ಲಾ ಮರೆತು ಹೋಗಿರುತ್ತವೆ. ಸಣ್ಣ ಸಣ್ಣ ವಿಷಯಗಳೂ ದೊಡ್ಡದಾಗಿ ಕಾಣಿಸತೊಡಗುತ್ತವೆ. ಬಿಸಿಲು, ಮಳೆ, ಚಳಿ, ಗಾಳಿ - ಇವೆಲ್ಲವೂ ಒಂದೇ ಹೂವಿನ ತರತರಹದ ಬಣ್ಣಗಳೆಂದು ಅರಿತುಕೊಳ್ಳದೇ ಬೇರೆ ಬೇರೆ ಎಂದು ವ್ಯತ್ಯಾಸಕ್ಕೆ ತೊಡಗುತ್ತೇವೆ. ಧೂಳೆದ್ದ ಮೇಲೆ ಅದನ್ನು ಆರಿಸಲು ಮಳೆ ಬರಲೇಬೇಕು, ಬಂದೇ ಬರುತ್ತದೆ. ಜೀವನವೂ ಹಾಗೆಯೇ ಅಲ್ಲವೇ..??                                 ಮಳೆ ನಿಧಾನವಾಗಿ ಕಡಿಮೆಯಾಗತೊಡಗಿತು. ಮಳೆಯಲ್ಲಿ ಮಿಂದಿದ್ದ ಕಾರಣವೋ ಏನೋ ಮಕ್ಕಳೆಲ್ಲ ಇನ್ನಷ್ಟು ಉತ್ಸಾಹದಿಂದ ಆಟವನ್ನು ಮುಂದುವರೆಸಿದ್ದರು. ಊರಿನ ಮಳೆಯನ್ನು ನಾ ನೋಡದೇ ಅದೆಷ್ಟು ವರ್ಷಗಳಾಗಿದ್ದವೋ..!! ಎಲ್ಲ ಕಡೆ ವಾತಾವರಣ ತಂಪಾಗಿತ್ತು, ನನ್ನ ಮನವೂ ಕೂಡ. ನನ್ನ ಮನದಲ್ಲಿ ಎದ್ದ ಧೂಳನ್ನು ಆರಿಸಿಲೆಂದೇ ಈ ಮಳೆ ಬಂದಿರಬೇಕು ಎಂದೆನಿಸಿತು. ಬಿದ್ದ ಮಳೆಯಲ್ಲಿ ತಾನು ಕರಗಿ ಮಣ್ಣು ಹೊಮ್ಮಿಸುತ್ತಿದ್ದ ಸೌರಭ ಮನಸ್ಸನ್ನು ತಟ್ಟಿತ್ತು. ಅದೇಕೋ ಮಳೆ ಪೂರ್ತಿಯಾಗಿ ನಿಲ್ಲುವ ತನಕ ಕಾಯುವುದು ಬೇಡವೆನಿಸಿತು. ಜಿಟಿ ಜಿಟಿ ಮಳೆಯನ್ನು ಒಮ್ಮೆ ನೆನೆಯೋಣವೆನಿಸಿತು. ತಡಮಾಡದೇ ಮನೆಯ ದಿಕ್ಕಿನತ್ತ ಹೆಜ್ಜೆ ಹಾಕಿದೆ. ಮೋಡಗಳ ಮರೆಯಿಂದ ಆಗ ತಾನೇ ಹೊರಬಂದ ರವಿ ನನಗೆ ಟಾಟಾ ಹೇಳುತ್ತ ನಗುತ್ತಿದ್ದ.


ಗರಿಬಿಚ್ಚಿ ಹಾರಿದಾಗಮೈಮನಸುಗಳೆರಡು ಜಡವಾಗಿ
ನನ್ನಲ್ಲೇ ನಾನು ಹೂತುಹೋಗಿದ್ದಾಗ
ರವಿಕಿರಣ ನನ್ನನ್ನು ಎಬ್ಬಿಸಿತು
ಹೊಸಗಾಳಿ ನನ್ನನ್ನು ಬಳಿ ಕರೆಯಿತು
ಅದೊಂದು ದಿನ ಮೂಡಿತೊಮ್ಮೆಲೆ
ಗರಿಬಿಚ್ಚಿ ಆಗಸದಲ್ಲಿ ಹಾರುವ ಬಯಕೆ

ನಾ ಹೆಜ್ಜೆ ಇಟ್ಟೆ ಮೊದಲ ಬಾರಿ
ಹೊಸ ಜಗತ್ತಿನ  ಹಾದಿಯಲ್ಲಿ
ರೆಕ್ಕೆ ಬಡಿದು ಹಾರತೊಡಗಿದೆ
ಪ್ರಕೃತಿಯ ರಾಗಕ್ಕೆ ತಾಳ ಹಾಕುತ್ತ
ನನ್ನನೇ ನಾ ಮರೆತೆ, ಹೆಚ್ಚು ಅರಿತೆ
ಹಾರುತ್ತ ಸಾಗಿದಂತೆ ಹೊಸ ಜನ್ಮ ಪಡೆದೆ

ಈ ಬದುಕೆಷ್ಟು ಸುಂದರ
ಅದನರಿಯದೇ ನಡೆಯುವೆವು ನಾವೆಲ್ಲ
ಬಂಧಿಸಿಹ ಬೇಲಿಗಳ ಕಿತ್ತೆಸೆದು
ರೆಕ್ಕೆ ಬಡಿದು ಹೊರ ಹಾರಬೇಕು
ಜೀವನದ ಅನುಭೂತಿಯ ಸವಿಯಲು
ಮತ್ತೆ ಮತ್ತೆ ಹಾರಬೇಕು ಎತ್ತರೆತ್ತರಕೆFriday, 21 February 2014

ಅಲೆಗಳುಮಾತಿಲ್ಲದೇ ಮೂಕವಾಗಿಹ
ಮೌನ ಮನದ ಶರಧಿಯಲ್ಲೂ
ನಿಲ್ಲುತಿಲ್ಲವೇಕೋ ಅಲೆಗಳ ನರ್ತನ
ಬೀಸುವ ಗಾಳಿಯೂ ಇಲ್ಲ
ಪೂರ್ಣ ಚಂದಿರನ ತಂಪೂ ಇಲ್ಲ
ಆದರೇಕೆ ಈ ಬಗೆಯ ಸಮುದ್ರ ಮಥನ

ಮೃದು ಹೃದಯಕೆ ಕರುಣೆಯಿಲ್ಲದೆ
ರೊಚ್ಚಿಗೆದ್ದಂತೆ ಬಡಿಯುವ ಅಲೆಗಳಿಗೆ
ಎಷ್ಟು ಸಲ ತಿಳಿಹೇಳಲಿ ನಾನು
ನಿಮ್ಮನ್ನು ತಾಳಿಕೊಳ್ಳುವಷ್ಟು
ನನಗಿಲ್ಲ ದೃಢತೆ ಮತ್ತು ಶಕ್ತಿ
ಇದನರಿಯುವ ತಾಳ್ಮೆ ನಿಮಗಿಲ್ಲವೇನು

ನಾವು ಬಡಿಯುವುದು ನಿನ್ನ ಒಳಿತಿಗೆನೇ
ನಿನ್ನ ಮನಸಿನ ಕಲ್ಮಶವನ್ನು
ತೊಳೆದು ಶುಭ್ರವಾಗಿಸುವೆವು
ನಿನಗಾಗಬಹುದು ನೋವು ಇಂದು
ಶಾಂತಚಿತ್ತದಿಂದ ಕಾಯುತಿರು
ಮುಂದೆ ಅರಳುವುದು ಸಂತಸದ ಹೂವು


Thursday, 20 February 2014

ಗೆಳೆಯನಿಗೊಂದು ಪತ್ರ-೧೪:ಕೊಡುವ ಅರ್ಹತೆಯುಳ್ಳವರಿಗೆ ಮಾತ್ರ ಇದೆ ಅಪೇಕ್ಷಿಸುವ ಹಕ್ಕುಜಾಣರ ಜಾಣನೇ,
                                ಹೇಗಿರುವೆ..?? ನಿನ್ನೊಂದಿಗೆ ಮಾತನಾಡದೆ ಬಹಳ ದಿನಗಳು ಕಳೆದವಲ್ಲವೇ..?? ನನ್ನ ಯೋಚನೆ, ಭಾವನೆಗಳನ್ನೆಲ್ಲ ಕವಿತೆಗಳಾಗಿಯೇ ಹರಿಯಬಿಟ್ಟೆನೆ ಹೊರತು ಯಾಕೋ ಗೊತ್ತಿಲ್ಲ ನಿನ್ನೊಂದಿಗೆ ಪತ್ರಗಳ ಮೂಲಕ ಹಂಚಿಕೊಳ್ಳಬೇಕು ಎಂದೆನಿಸಲಿಲ್ಲ. ನಿನ್ನ ಬಗ್ಗೆ ಸ್ವಲ್ಪ ಬೇಜಾರು, ಸಿಟ್ಟು ಬಂದಿತ್ತು. ನೀನಾಗಿಯೇ ಒಮ್ಮೆಯೂ ನನ್ನನ್ನು ಮಾತನಾಡಿಸುವುದಿಲ್ಲ, ನಾನೇ ಮಾತನಾಡಿಸಬೇಕು ಎಂದು. ನೀನೇನು ಹೇಳುತ್ತಿಯಾ ಎಂದು ಗೊತ್ತು ನನಗೆ. ನಾವು ಏನನ್ನೇ ಬೇರೆಯವರಿಂದ ಅಪೇಕ್ಷಿಸುವುದಾದರೂ ಮೊದಲು ನಾವು ಅದನ್ನು ಬೇರೆಯವರಿಗೆ ನೀಡುವಂತಿರಬೇಕು ಎನ್ನುತ್ತೀಯಾ.
                               ನೀನು ಹೇಳುವುದು ಸರಿಯೆ. ನಾವು ಯಾವಾಗಲೂ ಎಲ್ಲವನ್ನೂ ಬೇರೆಯವರಿಂದ ನಿರೀಕ್ಷೆ ಮಾಡುತ್ತೇವೆ. ನಮ್ಮನ್ನು ಎಲ್ಲರೂ ಪ್ರೀತಿಸಬೇಕು, ಗೌರವಿಸಬೇಕು, ನಮ್ಮನ್ನು ಮೆಚ್ಚಿ ಹೊಗಳಬೇಕು, ನಮ್ಮೊಂದಿಗೆ ಕಾಲ ಕಳೆಯಬೇಕು, ನಾವು ಕಷ್ಟದಲ್ಲಿದ್ದಾಗ ನಮ್ಮ ಸಹಾಯಕ್ಕೆ ಬರಬೇಕು, ನಮ್ಮನ್ನು ಅರ್ಥ ಮಾಡಿಕೊಳ್ಳಬೇಕು - ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ನಮಗೆ ಕೇವಲ ಬೇರೆಯವರಿಂದ ಏನು ಸಿಗುತ್ತದೆ ಎಂಬ ಯೋಚನೆಯಷ್ಟೇ. ಒಮ್ಮೆಯೂ ನಾವು ಬೇರೆಯವರಿಗೆ ಏನು ಕೊಟ್ಟಿದ್ದೇವೆ ಎಂದು ಆಲೋಚಿಸುವುದಿಲ್ಲ. ನಾವು ಎಲ್ಲರನ್ನೂ ಪ್ರೀತಿಸುತ್ತೇವೆಯೇ...?? ನಮ್ಮ ಸಮಯವನ್ನು ಬೇರೆಯವರಿಗೆಂದು ಎಂದಾದರೂ ಕಳೆದದ್ದಿದೆಯೇ...?? ಬೇರೆಯವರನ್ನು ಗೌರವಿಸಲು ನಮಗೆ ಗೊತ್ತೇ...?? ನಾವು ಒಮ್ಮೆಯಾದರೂ ಬೇರೆಯವರು ಅತ್ತಾಗ ಅವರ ಕಣ್ಣೀರನ್ನು ಒರೆಸಿದ್ದೆದೆಯೇ..?? ನಾವು ಯಾರ ಮನಸನ್ನಾದರೂ ಅರ್ಥ ಮಾಡಿಕೊಳ್ಳಲು ಒಮ್ಮೆಯಾದರೂ ಪ್ರಯತ್ನಪಟ್ಟಿದ್ದೇವೆಯೇ..?? ಇಲ್ಲ, ನಮಗೇ ಯಾವುದನ್ನಾದರೂ ಪಡೆದು ಗೊತ್ತೇ ಹೊರತು ನೀಡಿ ಗೊತ್ತಿಲ್ಲ.
                              ಬೇರೆಯವರಿಗೆ ನಮ್ಮಿಂದೇನಾದರೂ ನೀಡುವುದರಲ್ಲಿ ನಿಜವಾದ ಸಂತಸವಿದೆ. ಆ ಸಂತಸ ಚಿಕ್ಕದು ಎನಿಸಿದರೂ ಅದರಿಂದ ದೊರೆಯುವ ಆತ್ಮತೃಪ್ತಿ ನಿಜಕ್ಕೂ ಅಮಿತವಾದದ್ದು. ಪಡೆದುಕೊಳ್ಳುವುದರಲ್ಲಿ ದೊರೆಯುವುದಿಲ್ಲ ಇಂಥ ಅನುಭೂತಿ. ಕೆಲವರು ಮಾತ್ರವೇ ಈ ಸತ್ಯವನ್ನು ಅರಿತುಕೊಂಡು ತಮ್ಮ ಇಡೀ ಬದುಕನ್ನೇ ಪರರಿಗೆ ನೀಡುವುದಕ್ಕಾಗಿಯೇ ಮೀಸಲಿಡುತ್ತಾರೆ. ಉಳಿದ ಬಹಳಷ್ಟು ಮಂದಿ ಪಡೆದುಕೊಳ್ಳುವುದರಲ್ಲೇ ಬದುಕನ್ನು ವ್ಯರ್ಥಗೊಳಿಸುತ್ತಾರೆ. ಅಷ್ಟಕ್ಕೂ ಕೊಡುವ ಅರ್ಹತೆ ಇರುವವರಿಗೆ ಮಾತ್ರ ಇದೆಯಲ್ಲವೇ ಪಡೆದುಕೊಳ್ಳುವ ಹಕ್ಕು...??
                                      ಅಂದ ಹಾಗೆ, ನೀನು ಯಾವ ಗುಂಪಿಗೆ ಸೇರುತ್ತೀಯಾ..?? ನನ್ನೊಂದಿಗೇನೋ ಇದರ ಕುರಿತು ಭಾಷಣ ಬಿಗಿಯುತ್ತೀ, ಆದರೆ ನಿನ್ನ ಹೆಜ್ಜೆ ಯಾವ ಹಾದಿಯಲ್ಲಿದೆ..?? ಉತ್ತರಕ್ಕೇನೂ ಆತುರವಿಲ್ಲ, ನಿಧಾನವಾಗಿ ಬರಲಿ.
                
                         ಪ್ರೀತಿಯಿಂದ,

                                                                                                                        ಎಂದೆಂದೂ ನಿನ್ನವಳು,
                                                                                                                               ನಿನ್ನೊಲುಮೆ


ಬತ್ತಳಿಕೆನಾ ಸಾಗುವೆ ಮುನ್ನುಗ್ಗಿ ಎಂದೆಂದೂ
ಜೀವನವೆಂಬ ರಣದ ಹಾದಿಯಲ್ಲಿನ
ಹೋರಾಟದಲ್ಲಿ ನನಗೆ ಜೊತೆಯಾಗಿದೆ
ನನ್ನದಾದ ಈ ಹೊಸ ಬತ್ತಳಿಕೆ

ಎಂತಹ ಶತ್ರುಗಳೇ ಎದುರಾಗಲಿ
ಹಿಮ್ಮೆಟ್ಟದೇ ಕಾದಾಡುವೆ ನಾನು
ಹೆದರಲೇಕೆ ನಾನು ಇನ್ನು
ನನಗಿಲ್ಲ ಸೋತುಹೋಗುವ ಭೀತಿ

ಯಾವುದೀ ಹೊಸ ಬತ್ತಳಿಕೆ
ಹಳೆಯ ಅಸ್ತ್ರಗಳನ್ನು ಹೊತ್ತುಕೊಂಡಿದೆ
ಇದೇನು ಅದ್ಭುತವಾದುದಲ್ಲ ಗೆಳತಿ
ಪ್ರತಿಯೊಬ್ಬರ ಬಳಿಯೂ ಇದೆ

ದ್ವೇಷ, ವೈಷಮ್ಯಗಳಿಗೆ ಎದುರಾಗಿ
ಪ್ರೀತಿ, ಸ್ನೇಹಗಳ ಅಸ್ತ್ರವಿದೆ
ನನ್ನನ್ನು ತುಳಿದು ಸಾಗುವವರಿಗೆಂದೇ
ಆತ್ಮವಿಶ್ವಾಸದ ಶಸ್ತ್ರವಿದೆ

ಎಲ್ಲ ಕರಿನೆರಳಿನ ಕೊನೆಯಲ್ಲೂ
ಬಿಳಿ ಬೆಳಕಿನ ಆರಂಭವಿದೆ
ಕರಿನೆರಳನ್ನು ಹೊಡೆದೋಡಿಸಲು
ಎಲ್ಲರ ಬಳಿಯೂ ಈ ಬತ್ತಳಿಕೆಯಿದೆ


Wednesday, 19 February 2014

ಸ್ವ(೦ತ)ಇಲ್ಲಿ ಎಲ್ಲವೂ ‘ಸ್ವ’ಮಯ
ಪರ ಎಂಬುದರ ನೆರಳಿಗೂ ಜಾಗವಿಲ್ಲ
ಅದೊಮ್ಮೆ ಬಿದ್ದರೂ ಆ ನೆರಳು
‘ನಾನು’ ಅದನ್ನು ದೂರ ಓಡಿಸುವುದು
‘ನನ್ನ’ ಎಂಬುವ ಅಂಧಕಾರ
ಆರಿಸಿದೆ ಚಿಂತನೆಯ ಬೆಳಕನ್ನು
ತನ್ನಲ್ಲೇ ಮುಳುಗಿಹೋಗಿರುವ ಮನುಜನಿಗೆ
ಇಲ್ಲ ಇದನರಿತುಕೊಳ್ಳುವ ವ್ಯವಧಾನ

‘ಸ್ವ’ಹಿತಾ ಲೋಕದ ಅರಮನೆಯಲ್ಲಿ
‘ತಾನು’ ರಾಜ, ‘ತನ್ನದು’ ರಾಣಿ
ಉಳಿದುದೆಲ್ಲಾ ಸೇವಕರ ಸಮಾನ
ರಾಜ ರಾಣಿಯರ ಸೇವೆಗೆ ಮೀಸಲು
ವಿವೇಕದ ಕಣ್ಣು ತೆರೆಯದಿದ್ದವರಿಗೆ
ಅರ್ಥವಾಗಬಲ್ಲದು ಹೇಗೆ..??
ಸ್ವಹಿತದ ಸಾರ್ಥಕ್ಯ ಇರುವುದೇ
ಪರಹಿತದಲ್ಲಿ ಸಿಗುವ ಆತ್ಮತೃಪ್ತಿಯಲ್ಲಿ


Tuesday, 18 February 2014

ಹಸಿವುಸಾಮಾನ್ಯರಲ್ಲಿ ಸಾಮಾನ್ಯರಂತೆ
ಬಡವಿಯಾಗಿರಬಹುದು ನಾನು
ಆದರೆ ಇಹುದು ನನಗೂ ಹಸಿವು
ಸಿರಿವಂತಿಕೆಯ ಕೂಸು ಅದು
ಅದಕಿಲ್ಲ ಎಂದೆಂದೂ ಬಡತನದ ನಂಟು

ನಿಲ್ಲಲು ಬಿಡದೇ ಓಡಿಸುವುದು
ಜಗತ್ತಿನಲ್ಲಿ ನಡೆಯುವ ಹಸಿವು
ಕಣ್ಣುಮುಚ್ಚಲು ಬಿಡದೇ ಕಾಡುವುದು
ಕಾಣುವ ಕನಸುಗಳ ಬೆಂಬತ್ತುವ ಹಸಿವು
ಹಸಿವಿಲ್ಲದಿದ್ದಾಗಲೂ ಬಿಡದು ಈ ಹಸಿವು

ದಿನಗಳೆಲ್ಲಾ ಸಾಗುವವು ಹಸಿವಿನ ಜೊತೆಗೆ
ಅದ ತಣಿಸುವ ಬಗೆಯ ಹುಡುಕಾಟದಲ್ಲಿ
ಎಷ್ಟು ಸಲ ಯತ್ನಿಸಿದರೂ ಆರದು
ಒಡಲೊಳಗಿನ ಹಸಿವಿನ ಬೆಂಕಿ
ಅದಾರಿದರೆ ಉಳಿಯದು ಉಸಿರಿನ ಗಾಳಿ


ಹನಿಗವನ - ೪


೧.
ಪ್ರೀತಿಯಲ್ಲಿ ಬಿದ್ದ ಮೇಲೆ
ನಾ ಅದರ ಬೆಂಬತ್ತಲಿಲ್ಲ
ಅದೇ ನನ್ನ ಬೆನ್ನತ್ತಿ ಕಾಡುತ್ತಿತ್ತು
ಈಗ ಅದೇ ನನ್ನ ಬಿಟ್ಟು ಹೋಗಿದೆ
ನನ್ನದಾಗುತ್ತಿತ್ತೇನೋ ಆ ಪ್ರೀತಿ
ನಾ ಅದರ ಬೆಂಬತ್ತಿ ಹೋಗಿದ್ದರೆ

೨.
ನಾ ಅಳುತ್ತಿದ್ದೆ
ಕಣ್ಣೀರು ಒರೆಸುವವರಿಲ್ಲದೆ
ಆದರೆ ಅರಿವು ಮೂಡಿತು
ನನ್ನ ಕಣ್ಣೀರು ಮೂಡಿತು
ಬೇರೆಯವರ ಕಣ್ಣೀರನ್ನು
ನಾನೂ ಸಹ ಒರೆಸಲಿಲ್ಲವೆಂದು

೩.
ಇಂದು ಕಾಣುತ್ತಿವೆ
ಎತ್ತ ನೋಡಿದರತ್ತ ಎತ್ತರೆತ್ತರದ
ಗಗನಚುಂಬಿ ಕಟ್ಟಡಗಳು
ಅದರಲ್ಲಿಹ ದೊಡ್ಡ ಜನರು
ಆದರೆ ಅವರ ಮನಸುಗಳು
ಮಾತ್ರ ಅಳತೆಗೆ ಸಿಗದಷ್ಟು ಚಿಕ್ಕವು


Sunday, 16 February 2014

ಕತ್ತಲೆಯಲ್ಲಿ ಕಾಣದಿರು

                   

ನೀ ಇನ್ನೆಂದು ಬರದಿರು ನಲ್ಲ
ನಾ ನಡೆಯುತಿಹ ಕತ್ತಲೆಯ ಹಾದಿಯಲ್ಲಿ
ಬೆಳಕಿನ ಮಿಂಚಿನ ಕಿರಣವಾಗಿ
ಕಲ್ಲು, ಮುಳ್ಳುಗಳ ನೋವಾದರೂ ಚಿಂತೆಯಿಲ್ಲ
ಸಹಿಸಲಾರೆ ನಿನ್ನ ಬೆಳಕಿನ ಜ್ವಾಲೆಯನ್ನು

ಕತ್ತಲೆಯ ಹಾದಿಯೇನು ಕಠಿಣವಾಗಿಲ್ಲ
ಜೊತೆಗಿವೆ ಪಯಣಿಸಲು ಅವಕಾಶಗಳು
ಅನುಭವಗಳ ಬುತ್ತಿಯ ಬಿಚ್ಚಿ
ನಾ ತಣಿಸಿಕೊಳ್ಳುವೆ ನನ್ನ ಹಸಿವು
ನೀ ಸಿಗಬೇಡ ಮತ್ತೆ ಇಲ್ಲಿ
ಬೇಕಿಲ್ಲ ಆ ದಾಹದ ಹಸಿವು ನನಗೆ

ನೀ ಬಂದರೆ ನಿಲ್ಲುವುದು ನನ್ನ ಹೆಜ್ಜೆ
ನಿನ್ನ ದೀಪದ ಕೋರೈಸುವ ಬೆಳಕು
ಕುರುಡಾಗಿಸುವುದು ನನ್ನ ಎಂದೆಂದಿಗೂ
ಮುಂದಿನ ಪಯಣದ ಹಾದಿ ತಪ್ಪಲು
ನಾ ಕಳೆದುಹೋಗುವೆ ಕತ್ತಲಲ್ಲಿ

ನೀ ನನ್ನೊಂದಿಗೆ ನಿಲ್ಲುವವನಲ್ಲ
ಗಾಳಿ ಬಂದರೆ ಆರಿ ಹೋಗುವ ಬೆಳಕು ನಿನ್ನದು
ಮತ್ತೆ ಬಂದು ಪುನಃ ನೀ ಆರಿದರೆ
ನಾನಾಗುವೆ ಉರಿದುಹೋದ ಬೂದಿ
ಸುಡಬೇಡ ನನ್ನ ನೀನು
ಕತ್ತಲೆಯಲ್ಲಿ ಬಾರದಿರು ಎಂದೆಂದೂ

    

ಕೂದಲುಕರಿಮೋಡದ ಮಧ್ಯದಲ್ಲೊಂದು ಬೆಳ್ಳಿಗೆರೆ
ದಿನೇ ದಿನೇ ದಟ್ಟವಾಗುವ ಪರಿಯೇನು
ನೀ ಬೇಡವೆಂದರೂ ನಾ ಕಾಣುವೆ
ನಿನ್ನ ತಲೆಯ ಮೇಲೆಯೇ ನಾ ಕುಣಿಯುವೆ
ನನ್ನ ಕ್ಷಣ ಕ್ಷಣವೂ ಅಣಕಿಸುತ
ತಾಂಡವವನ್ನೇ ಗೈಯ್ಯುತಿದೆ ಆ ಬಿಳಿ ಕೂದಲು

ಎಷ್ಟು ಬಾಚಿದರೂ ಅಡಗಿಕೊಳ್ಳದೇ
ಮತ್ತೆ ಮೇಲೆದ್ದು ಕೂರುವುದು ಬೇಕೆಂದೆ
"ನೀನೆಷ್ಟು ಮೆರೆದರೇನು ಬಂತು ಗೆಳತಿ
ನಾ ಬಂದ ಮೇಲೆ ಸಲ್ಲ ನಿನ್ನಾಟವೆಲ್ಲ"
 ಸೌಂದರ್ಯಕೂ ಇದೆ ಸಾವಿನ ನೆಂಟತನ
ಅದ ತಿಳಿಯದ ಮನುಜನದು ಮೂರ್ಖತನ

ಕೃತಕವಾಗಿ ಹೆಚ್ಚಿಸಿಕೊಂಡರೇನು ಅಂದಚೆಂದ
ಏರಿದ ವಯಸ್ಸು ಮತ್ತೆ ಇಳಿಯದಲ್ಲ
ಹಸಿರಾದ ಎಲೆ ಹಳದಿಯಾಗಲೇಬೇಕು
ಈ ವಾಸ್ತವದ ವಿರುದ್ಧ ಎಲ್ಲರ ಹೋರಾಟ
ಅರಿಯಲಾರೆವು ನಾವು ಇತಿಮಿತಿಗಳ
ಬಿಳಿ ಕೂದಲು ಬಿದ್ದ ಮೇಲೂ ಕೂಡ


Saturday, 15 February 2014

ಮೌನವೇ ಮಾತಾದಾಗಕೇಳುವ ಶ್ರೋತ್ರಿಯಿದ್ದರೂ ಹಾಡುವವರಿಲ್ಲ
ಪದಗಳು ಸಾವಿರ ಇದ್ದರೂ ಸ್ವರಗಳ ಅಭಾವ
ಎಲ್ಲಇದ್ದರೂ ಸಹ ಇಲ್ಲ ಏನೇನೂ
ಇಲ್ಲೇ ಇದ್ದರೂ ಎಲ್ಲೋ ಕಳೆದುಹೋದಂತೆ
ಜನಜಂಗುಳಿಯಲ್ಲೂ ಮುಗಿಯದ ಏಕಾಂತ

ಹೊರಬಾರದೇ ಉಳಿದ ಮಾತುಗಳೆಷ್ಟೋ
ಜೀವ ತಳೆಯದೇ ಅಳಿದ ಕನಸುಗಳೂ
ಮೌನದಲ್ಲೇ ನಡೆದ ಸಂಭಾಷಣೆಯಲ್ಲಿ
ಮೌನವಾಗಿಯೇ ಸತ್ತವು ಭಾವಗಳೆಲ್ಲ
ಇನ್ನೆಲ್ಲಿಯ ಮಾತಿನ ಭರಾಟೆ ಈ ಮನದೊಳು

ಮಾತಿಲ್ಲದ ಮೌನಕ್ಕೂ ಇದೆ ಅರ್ಥ
ಮಾತುಗಳನ್ನು ಹುಡುಕುವುದೇ ಅನರ್ಥ
ಸಾಗುತಿರಬೇಕು ಸುಮ್ಮನೆ ನಮ್ಮ ಚಿತ್ತ
ಅನುಭವಿಸಿದರೆ ಮೌನವೂ ಸ್ವರ್ಗ ಸಮಾನ
ಇಲ್ಲದಿದ್ದರೆ ಅದು ಒಂದು ಗಾಢ ಸ್ಮಶಾನ


ಗೆಳೆಯನಿಗೊಂದು ಪತ್ರ-೧೩:ನಿಜಕ್ಕೂ ಅವರು ‘ಭಾರತ’ದ ಹೆಮ್ಮೆಯ ‘ರತ್ನ’ರೆ

                          
ಹುಚ್ಚು ಹುಡುಗಾ,
                            ಹೇಗಿರುವೆ...?? ಇವತ್ತೆಲ್ಲಾ ಏನೇನು ಮಾಡಿದೆ..?? ಬಿ. ಟಿ. ಆಡಿಟೋರಿಯಮ್ ಅಲ್ಲಿ ಸಮಾರಂಭಕ್ಕೆ ಹೋಗಿದ್ದೆಯಾ..?? ಹೋಗಿಯೇ ಇರುತ್ತಿ. ಅಕಸ್ಮಾತ್ ಹೋಗಿಲ್ಲವೆಂದರೆ ಅದು ನಿನಗಾದ ಅತಿ ದೊಡ್ಡ ನಷ್ಟವೇ ಸರಿ. ಬಯಸಿದರೂ ಸಿಗದ ಅಪರೂಪದ ಅವಕಾಶ ಅದು ಭಾರತ ರತ್ನ ಪುರಸ್ಕೃತರನ್ನು ನೋಡುವುದೆಂದರೆ. ಎಂಥಹ ಕ್ಷಣವಾಗಿತ್ತದು!!
                      ಇವತ್ತು ದೇಶದ ಹೆಮ್ಮೆಯ ವಿಜ್ಞಾನಿ, ಕನ್ನಡಿಗ, ಭಾರತ ರತ್ನ ಪ್ರೊ. ಸಿ. ಎನ್. ಆರ್. ರಾವ್ ಅವರನ್ನು ಕಣ್ತುಂಬ ನೋಡುವ ಭಾಗ್ಯ ಲಭಿಸಿತ್ತು. ಕರ್ನಾಟಕದ ಪ್ರತಿಷ್ಠಿತ ತಾಂತ್ರಿಕ ಶಿಕ್ಷಣದ ಕಾಲೇಜುಗಳಲ್ಲೊಂದಾದ ಹುಬ್ಬಳ್ಳಿಯ ಬಿ. ವಿ. ಬಿ. ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೆಂಟರ್ ಫಾರ್ ಟೆಕ್ನಾಲಜಿ ಎಂಟರ್ ಪ್ರೀನರ್ ಶಿಪ್ ನ ಹೊಸ ಕಟ್ಟಡ ಶಂಕು ಸ್ಥಾಪನೆ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಬಂದಿದ್ದ ಅವರು ನಿಜವಾಗಿಯೂ ಭಾರತದ ರತ್ನವೇ ಸರಿ. ಅವರ ಮಾತುಗಳನ್ನು ಕೇಳುವ ಅದೃಷ್ಟಶಾಲಿಗಳು ನಾವಾದುದಕ್ಕೆ ನಿಜಕ್ಕೂ ನಮ್ಮ ಬಗ್ಗೆ ನಮಗೇ ಹೆಮ್ಮೆಯೆನಿಸುತ್ತಿದೆ.


                            ರಾವ್ ಅವರು ಬಹಳ ಹೊತ್ತು ಮಾತನಾಡಲಿಲ್ಲ. ಆದರೆ ಆಡಿದ ಮಾತುಗಳೆಲ್ಲ ಕೇಳುಗರ ಮನದಲ್ಲಿ ಬಹುಕಾಲ ಅಚ್ಚಳಿಯದೇ ಇರುವಂತೆ ಮಾತನಾಡಿದರು. ಹಿರಿಯರು ಎಚ್ಚೆತ್ತುಕೊಳ್ಳುವಂತೆ ನುಡಿದರೆ, ಕಿರಿಯರ ಕಣ್ಣುಗಳಲ್ಲಿ ಕನಸುಗಳು ಮೂಡುವಂತೆ ಮೋಡಿ ಮಾಡಿದರು. ಎಂಬತ್ತರ ವಯಸ್ಸಿನಲ್ಲೂ ಅದೆಂಥ ಉತ್ಸಾಹ, ಇಪ್ಪತ್ತರ ಹರೆಯದವರನ್ನು ನಾಚಿಸುವಂತೆ. " ಹೊಸ ಹೊಸ ಆವಿಷ್ಕಾರಗೈಯ್ಯುವ ವಿಶ್ವದ ೧೪೫ ರಾಷ್ಟ್ರಗಳಲ್ಲಿ ಭಾರತಕ್ಕೆ ೬೬ನೇ ಸ್ಥಾನ ಸಿಕ್ಕಿದೆ. ಇದು ಅತ್ಯಂತ ವಿಷಾದಕರ ಸಂಗತಿ. ಇಲ್ಲಿ ವಯಕ್ತಿಕವಾಗಿ ಅದ್ಭುತವಾದ ಆವಿಷ್ಕಾರಗಳನ್ನು ಮಾಡಿದವರಿದ್ದಾರೆ. ಆದರೆ, ವಿಶ್ವರಂಗದಲ್ಲಿ ಭಾರತದ ಸಾಧನೆ ಸೊನ್ನೆ. ಭಾರತವು ಸ್ವಾತಂತ್ರ್ಯಗಳಿಸಿದ ಇಸವಿಯಲ್ಲೇ ಸ್ವತಂತ್ರ ರಾಷ್ಟ್ರವಾದ ಕೊರಿಯಾ ಇಂದು ಇಡೀ ಜಗತ್ತೇ ನಿಬ್ಬೆರಗಾಗುವಂತೆ ಬೆಳೆದಿದೆ. ಭಾರತದ ನಿಜವಾದ ಸಂಪತ್ತೆಂದರೆ ಇಂದಿನ ಯುವಶಕ್ತಿ. ಇನ್ನು ೪೦ ವರ್ಷಗಳವರೆಗೆ ಭಾರತ ಯುವಕನಾಗಿಯೇ ಇರಲಿದೆ. ಇನ್ನು ನಾಲ್ಕು ದಶಕಗಳಲ್ಲಿ ಭಾರತವನ್ನು ಸೂಪರ್ ಪವರ್ ಆಗಿ ಮಾಡುವ ತಾಕತ್ತು ನಮ್ಮ ಯುವಜನಾಂಗಕ್ಕೆ ಇದೆ. ಆದರೆ, ಇಂದಿನ ಯುವ ಜನಾಂಗ ಮಾತ್ರ ತಮ್ಮ ಶಕ್ತಿ, ಸಾಮರ್ಥ್ಯಗಳನ್ನು ಸರಿಯಾಗಿ ಅರಿತುಕೊಳ್ಳದೇ ತಪ್ಪು ಹಾದಿಯಲ್ಲಿ ಹೆಜ್ಜೆ ಹಾಕುತ್ತಿದೆ. ಇದರಿಂದಾಗಿಯೇ ನಿಜವಾದ ಭಾರತ ಇಂದು ಕಳೆದುಹೋಗುತ್ತಿದೆ. ಅದರೊಂದಿಗೆ ಇಂದಿನ ಶಿಕ್ಷಕರ ಕರ್ತವ್ಯ ಕೇವಲ ಪುಸ್ತಕದಲ್ಲಿರುವುದನ್ನು ಬೋಧಿಸುವುದಷ್ಟೆ ಅಲ್ಲ. ಅದರ ಹೊರತಾದ ಶಿಕ್ಷಣವನ್ನು ನೀಡುವುದಾಗಿದೆ. ತೈವಾನ್ ಅಂತಹ ಪುಟ್ಟ ರಾಷ್ಟ್ರ ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರಗಳಲ್ಲಿ ಅದೆಷ್ಟು ಮಹತ್ತರವಾದ ಆವಿಷ್ಕಾರಗಳನ್ನು ಜಗತ್ತಿಗೆ ನೀಡಿದೆ. ಹಾಗಾದರೆ, ಭಾರತಕ್ಕೆ ಯಾಕೆ ಇದು ಸಾಧ್ಯವಿಲ್ಲ..?? " ನಿಜಕ್ಕೂ ಸ್ಫೂರ್ತಿದಾಯಕ ಮಾತುಗಳು.
                              ಅವರ ಮಾತುಗಳನ್ನು ಕೇಳುತ್ತಿದ್ದರೆ ನನ್ನ ಮನಸಿನಲ್ಲಿ ಹೊಸತಾದ ಯೋಚನೆಯ ಸುಳಿ ಏಳತೊಡಗಿತು. ಇಂಥಹ ವ್ಯಕ್ತಿಯನ್ನು ಶಿಕ್ಷಕರಾಗಿ ಪಡೆದವರು ಧನ್ಯರಲ್ಲವೇ..?? ಈಗಿನ ದಿನಗಳಲ್ಲಿ ಎಲ್ಲಿದ್ದಾರೆ ಅಂಥಹ ಶಿಕ್ಷಕರು..?? ಅಪರೂಪಕ್ಕೆ ಒಬ್ಬರು ಸಿಗುತ್ತಾರಷ್ಟೆ. ಇಂದು ಕನಸು ಕಾಣುವ ವಿದ್ಯಾರ್ಥಿಗಳ ಕೊರತೆ ಎಷ್ಟಿದೆಯೋ ಅದರ ದುಪ್ಪಟ್ಟು ಕೊರತೆ ಕನಸು ಕಾಣುವಂತೆ ಪ್ರೇರೆಪಿಸುವ ದೂರದೃಷ್ಟಿಯುಳ್ಳ ಶಿಕ್ಷಕರದ್ದಿದೆ. ಸರಿಯಾಗಿ ಮಾರ್ಗದರ್ಶನ ನೀಡುವ ಶಿಕ್ಷಕರ ಕೊರತೆ ಇಂದು ಪ್ರತಿಯೊಂದು ಕ್ಷೇತ್ರದಲ್ಲಿ ಪ್ರತಿಯೊಂದು ಹಂತದಲ್ಲಿ ಸಮಸ್ಯೆಯಾಗಿ ಎದ್ದು ನಿಂತಿದೆ. ಇದರಿಂದಾಗಿಯೇ ಬಹುತೇಕ ಪ್ರತಿಭೆಗಳು ಅರಳುವ ಮುನ್ನವೇ ಮುದುಡಿ ಹೋಗುತ್ತಿವೆ. ರಾವ್, ಕಲಾಮ್ ರಂತಹ ಆದರ್ಶಪ್ರಾಯರಾದ ಶಿಕ್ಷಕರು ದೊರೆತರೆ ಎಂಥ ವಿದ್ಯಾರ್ಥಿಯೇ ಆದರೂ ತಾನು ಅರಳಿ ನಿಲ್ಲುವುದರೊಂದಿಗೆ ದೇಶದ ಸೌರಭವನ್ನು ವಿಶ್ವದೆಲ್ಲೆಡೆ ಬೀರಬಲ್ಲನು. ನೀನೇನು ಹೇಳುತ್ತೀಯಾ...??

                                ಪ್ರೀತಿಯಿಂದ,

                                                                                                                         ಎಂದೆಂದೂ ನಿನ್ನವಳು,
                                                                                                                               ನಿನ್ನೊಲುಮೆ


Thursday, 13 February 2014

ಗೆಳೆಯನಿಗೊಂದು ಪತ್ರ-೧೨:ಭಾವನೆಗಳೊಂದಿಗೆ ಬೇಡ ಸರಸ


ಮನದ ಮನೋಜನೇ,
                             ಹೇಗೆ ಸಾಗಿವೆ ನಿನ್ನ ದಿನಗಳು..?? ಈ ಆರನೇ ಸೆಮಿಸ್ಟರ್ ಹೇಗಿದೆ...?? ಕಳೆದ ಸೆಮಿಸ್ಟರ್ ನಲ್ಲಿ ಬಹಳವೇ ವಿಷಯಗಳಿದ್ದವು ನಿಮಗೆ ಅಲ್ಲವಾ..?? ಈಗ ಹೇಗೆ..??
                           ನಿನ್ನೊಂದಿಗೆ ಒಂದು ವಿಷಯವನ್ನು ಹೇಳಿಕೊಳ್ಳುವ ಮನಸ್ಸಾಗುತ್ತಿದೆ. ಇವತ್ತು ಓದಿ ತಿಳಿದ ಒಂದು ಘಟನೆಯಿಂದ ಮನಸ್ಸು ಬಹಳವೇ ಮುದುಡಿಹೋಗಿದೆ. ೬-೭ ಮಂದಿ ಹುಡುಗ-ಹುಡುಗಿಯರು ಒಬ್ಬ ಮುಗ್ಧ ಹುಡುಗನ ಭಾವನೆಗಳೊಂದಿಗೆ ತಮಾಷೆಗಾಗಿ ಆಡಿದ ಆಟ ಇಂದು ಅವನ ಪ್ರಾಣವನ್ನೇ ಬಲಿತೆಗೆದುಕೊಂಡಿದೆ. ಇವರ ಆಟವನ್ನು ಸಹಿಸಲಾರದೇ ನೊಂದ ಆ ಹುಡುಗ ನಿದ್ರೆ ಮಾತ್ರೆಗಳನ್ನು ನುಂಗಿ ಚಿರನಿದ್ರೆಗೆ ಜಾರಿದ್ದಾನೆ. ಛೇ, ಇದೇನಾಗಿ ಹೋಯಿತು..??
                             ಘಟನೆ ಸಣ್ಣದೋ, ದೊಡ್ಡದೋ. ನಾವೂ ಸಹ ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಸ್ನೇಹಿತರೊಂದಿಗೆ, ಹಿತೈಷಿಗಳೊಂದಿಗೆ, ಕೆಲವೊಮ್ಮೆ ಅಪರಿಚಿತರೊಂದಿಗೂ ಸಹ ಮನಸ್ಸಿಗೆ ಬೇಸರವಾಗುವಂತೆ ನಡೆದುಕೊಂಡಿರುತ್ತೇವೆ. ಇನ್ನು ಕೆಲವು ಸಲ ಬೇಕೆಂದೇ ಅವರನ್ನು ಮಾನಸಿಕವಾಗಿ ಗೋಳುಹೊಯ್ದುಕೊಳ್ಳುವುದೂ ಇದೆ. ನಮ್ಮಿಂದಾಗಿ ಅವರೆಷ್ಟು ಮನಸ್ಸಿನಲ್ಲಿಯೇ ಕಣ್ಣೀರು ಹರಿಸಬಹುದೆಂಬ ಆಲೋಚನೆಯನ್ನೇ ನಾವು ಮಾಡುವುದಿಲ್ಲ. ನಮಗೆಲ್ಲರಿಗೂ ಆಟಕ್ಕೆ, ಮನೋರಂಜನೆಗೆ ಎಷ್ಟೆಲ್ಲ ವಿಷಯಗಳಿವೆ. ಆದರೂ ನಾವೇಕೆ ಬೇರೆಯವರ ಭಾವನೆಗಳೊಂದಿಗೆ ಚೆಲ್ಲಾಟವಾಡುತ್ತೇವೆ..?? ಅವರೂ ಸಹ ನಮ್ಮಂತೆಯೇ ಭಾವಜೀವಿಗಳು ಎನ್ನುವುದನ್ನು ನಾವೇಕೆ ಅರಿತುಕೊಳ್ಳುವುದಿಲ್ಲ..?? ಬೇರೆ ಯಾರಾದರೂ ಹೀಗೆ ನಮ್ಮ ಭಾವನೆಗಳೊಂದಿಗೆ ಆಟವಾಡಿದರೆ ನಾವು ಸಹಿಸಿಕೊಳ್ಳುವೆವೇ..??


                           ಮನುಷ್ಯನ ಮನಸ್ಸು ಬಹಳ ಸೂಕ್ಷ್ಮ. ಯಾವಾಗ ಅದು ಹೇಗೆ ಸ್ಪಂದಿಸುವುದೋ ಮೊದಲೇ ಅರಿಯಲಾಗದು. ಅದರಲ್ಲೂ ಹರೆಯದ ಮನಸ್ಸೆಂದರೆ ಹಸಿ ಮಣ್ಣಿನಂತೆ. ಪ್ರತಿಯೊಂದು ವಸ್ತುವು ಅದರ ಮೇಲೆ ತನ್ನದೇ ಬಿಂಬವನ್ನು ಮೂಡಿಸಬಹುದು. ಧನಾತ್ಮಕ ಅಂಶಗಳಾದರೆ ಅತಿ ಸುಂದರ ಮೂರ್ತಿಯ ನಿರ್ಮಾಣಕ್ಕೆ ನಾಂದಿ ಹಾಡಿದರೆ, ಋಣಾತ್ಮಕ ವಿಷಯಗಳು ಮಣ್ಣಿನ ಮುದ್ದೆಯನ್ನು ಇನ್ನಷ್ಟು ಕಲಸುಮೇಲೊಗರಗೊಳಿಸಿ ಬದುಕು ನೆಲಸಮವಾಗುವಂತೆ ಮಾಡುತ್ತವೆ. ದೇವರು ಮನುಷ್ಯನಿಗೆ ಎಷ್ಟೇ ಬುದ್ಧಿವಂತಿಕೆಯನ್ನು ಕರುಣಿಸಿದ್ದರೂ ಇನ್ನೊಬ್ಬರ ಮನಸ್ಸನ್ನು ಅರಿತುಕೊಳ್ಳುವ ಸಾಮರ್ಥ್ಯವನ್ನು ದಯಪಾಲಿಸಿಲ್ಲ. ಹಾಗೆಯೇ ಇನ್ನೊಬ್ಬರ ಮನಸ್ಸಿನ ಮೇಲೆ ದಬ್ಬಾಳಿಕೆ ನಡೆಸುವ ಹಕ್ಕು ನಮಗ್ಯಾರಿಗೂ ಇಲ್ಲ. ನಾವೆಲ್ಲಾ ಇದನ್ನು ಅರಿತುಕೊಳ್ಳುವುದು ಇನ್ಯಾವ ಕಾಲಕ್ಕೆ..??
                                  ಆ ಹುಡುಗನ ಬಗ್ಗೆ ನೆನೆದರೆ ಬಹಳ ವ್ಯಥೆಯೆನಿಸುತ್ತದೆ. ಅವನು ಹೇಡಿ ಎಂದು ನಮಗೆಲ್ಲಾ ಅನಿಸಬಹುದು. ಆದರೆ ಇವರೆಷ್ಟು ಕಾಡಿಸಿದ್ದರೋ, ಅವನೆಷ್ಟು ನೋವನ್ನು ಅನುಭವಿಸಿದ್ದನೋ, ಅವನ ಮನಸ್ಸ್ಥಿತಿ ಹೇಗಿತ್ತೋ - ಯೋಚಿಸಿದರೆ ಮತ್ತಷ್ಟು ಮನಸ್ಸು ಬಾಡುತ್ತದೆ. ಅವನ ಆತ್ಮವಾದರೂ ಶಾಂತಿಯಿಂದರಲಿ ಎನ್ನುವುದು ಕ್ಲೀಷೆಯಾಗುತ್ತದೆ. ಆದರೆ ಈಗ ಹೇಳಲು ಅದೊಂದೇ ಉಳಿದಿದೆ ತಾನೇ. ಮಾತೇಕೋ ಬೇಡವೆನಿಸುತ್ತಿದೆ. ನಾನು ಮೌನತಾಳುತ್ತೇನೆ. ಬರಲೇ..??

                                  ಪ್ರೀತಿಯಿಂದ,

                                                                                                                     ಎಂದೆಂದೂ ನಿನ್ನವಳು,
                                                                                                                           ನಿನ್ನೊಲುಮೆ

Tuesday, 11 February 2014

ಗೆಳೆಯನಿಗೊಂದು ಪತ್ರ-೧೧:ಇಂದಿನ ತಂತ್ರಜ್ಞಾನ ನಮ್ಮೊಳಗಿನ ‘ಮನುಷ್ಯ’ನನ್ನು ಕೊಲ್ಲುತ್ತಿದೆಯೇ?


ನನ್ನೊಲವ ಇನಿಯನೇ,
                                      ಹೇಗಿರುವೆ..?? ನನಗಂತೂ ಯಾಕಾದರೂ ಈ ತಾಂತ್ರಿಕ ಶಿಕ್ಷಣವನ್ನು ಆಯ್ದುಕೊಂಡೆನೋ ಎನ್ನುವಷ್ಟರ ಮಟ್ಟಿಗೆ ತಲೆಚಿಟ್ಟು ಹಿಡಿದುಹೋಗಿದೆ.  ಈ ನಮ್ಮ ಕ್ಯಾಂಪಸ್ ನಲ್ಲಿನ ಬಹಳಷ್ಟು ಮಂದಿ ಶಿಕ್ಷಕರು, ವಿದ್ಯಾರ್ಥಿವೃಂದದವರು ತಾಂತ್ರಿಕತೆಯ ರಾಯಭಾರಿಗಳಂತೆ ಪೋಸು ಕೊಡುವುದನ್ನು ನೋಡಿದಾಗ ಜೀವವಿಲ್ಲದ ಕಂಪ್ಯೂಟರ್, ಸೆಲ್ ಫೋನುಗಳಲ್ಲಾದರೂ ಜೀವಂತಿಕೆಯನ್ನು ಹುಡುಕಬಹುದು, ಆದರೆ ಇವರಲ್ಲಿ ಮನುಷ್ಯನೆಂಬ ಪ್ರಾಣಿ ಇನ್ನೂ ಜೀವಂತವಾಗಿದ್ದಾನೆಯೇ ಎಂಬ ಸಂದೇಹ ಮೂಡುತ್ತದೆ. ಏಕೆ ಹೀಗಾಡುತ್ತಿದ್ದಾರೆ ಇವರೆಲ್ಲ...??
                                    ಏನಾಗಿದೆ ಗೆಳೆಯ..?? ತಂತ್ರಜ್ಞಾನಮಯವಾದ ೨೧ನೇ ಶತಮಾನದಲ್ಲಿ ಬದುಕುತ್ತಿದ್ದೇವೆ ಎಂದು ಹೆಮ್ಮೆಯಿಂದ ಬೀಗುವ ನಾವೆಲ್ಲಾ ಯಾವ ಹಾದಿಯಲ್ಲಿ ಸಾಗುತ್ತಿದ್ದೇವೆಯೆನ್ನುವುದರ ಕಿಂಚಿತ್ತಾದರೂ ಅರಿವು ನಮಗಿದೆಯೇ..?? ಹೀಗೇ ಸಾಗಿದರೆ ಮುಂದೊಂದು ದಿನ ಮನುಷ್ಯ ಜೀವಕ್ಕೆ ತನ್ನದೇ ಆದ ಸ್ವಂತ ಅಸ್ತಿತ್ವವೆನ್ನುವುದು ಇರುತ್ತದೆಯೇ..?? ನಾವೇ ನಿರ್ಮಿಸಿದ ಈ ಎಲ್ಲ ಕಂಪ್ಯೂಟರ್, ಸೆಲ್ ಫೋನ್, ಟ್ಯಾಬ್ಲೆಟ್, ಐಪ್ಯಾಡ್ ಗಳನ್ನು ನಾವೇ ನಿರ್ದೇಶಿಸಬೇಕೆ ಹೊರತು ಇಂದೇನಾಗುತ್ತಿದೆ..?? ಅವೇ ನಮ್ಮ ದಿನನಿತ್ಯದ ಚಟುವಟಿಕೆಗಳನ್ನು, ಜೊತೆಯಲ್ಲಿ ನಮ್ಮ ಭಾವನೆಗಳನ್ನೂ ಸಹ ನಿಯಂತ್ರಿಸುವ ಹಂತಕ್ಕೆ ತಲುಪಿದ್ದು ಬಿಟ್ಟರೆ ನಮ್ಮನ್ನೇ ನುಂಗಿ ನೀರು ಕುಡಿಯುತ್ತವೇನೋ ಎಂಬಂತಾಗಿದೆ.


                                      ಇನ್ನೂ ಆಧುನಿಕ ತಂತ್ರಜ್ಞಾನವನ್ನೇ ಅಳವಡಿಸಿಕೊಂಡಿರುವ ಇಂದಿನ ಶಿಕ್ಷಣ ಕ್ರಮವೂ ನಮ್ಮೆಲ್ಲರ ಬೌದ್ಧಿಕ ಮಟ್ಟವು ಕುಸಿಯುವಂತೆ ಮಾಡಿದೆ ಎಂದರೆ ತಪ್ಪಾಗಲಾರದು. ಕಲಿಯುವ ಪ್ರತಿಯೊಂದು ಹೆಜ್ಜೆಯಲ್ಲೂ ಯಂತ್ರಗಳ ದಾಸರಾಗಿರುವ ನಾವು ಯೋಚಿಸುವ ಶಕ್ತಿಯನ್ನೇ ಕಳೆದುಕೊಂಡಿದ್ದೇವೆ. ಒಂದು ಸಮಸ್ಯೆಯನ್ನು ಯಂತ್ರಗಳ ಸಹಾಯದಿಂದ ಹೇಗೆ ಬಗೆಹರಿಸಿಕೊಳ್ಳಬಹುದೆಂದು ಅವುಗಳಿಗೆ ಪ್ರೊಗ್ರಾಮ್ ಬರೆಯುವುದರ ಕುರಿತು ನಾವು ಯೋಚಿಸುತ್ತೆವೆಯೇ ಹೊರತು ನಮ್ಮ ಸ್ವಂತ ಬುದ್ಧಿಶಕ್ತಿಯನ್ನು ಉಪಯೋಗಿಸುವ ಗೋಜಿಗೆ ಹೋಗುವುದೇ ಇಲ್ಲ. ದೇವರ ಅತಿ ಬುದ್ಧಿವಂತ ಸೃಷ್ಟಿಯಾದ ಮಾನವ ಇಂದು ಆತನೇ ಸೃಷ್ಟಿಸಿರುವ ಯಂತ್ರಗಳ ದಾಸ್ಯಕ್ಕೆ ಒಳಗಾಗಿರುವುದು ನಿಜಕ್ಕೂ ನಾಚಿಕೆಗೇಡು.


                               ಇವತ್ತು ತಂತ್ರಜ್ಞಾನದ ಅದ್ಭುತ ಆವಿಷ್ಕಾರಗಳಿಂದಾಗಿ ನಮ್ಮ ಬದುಕೆಂಬ ಪ್ರಪಂಚ ವಿಸ್ತಾರಗೊಂಡಿದೆ. ಆದರೆ ನಮ್ಮೆಲ್ಲರ ಮನಸ್ಸುಗಳು ದಿನದಿಂದ ದಿನಕ್ಕೆ ಸಂಕುಚಿತಗೊಳ್ಳುತ್ತಿವೆ. ಫೇಸ್ ಬುಕ್, ಟ್ವಿಟರ್, ವಾಟ್ಸ್ ಆಪ್ ಗಳಲ್ಲಿ ಯಾರ್‍ಯಾರದೋ ಪೋಸ್ಟ್ ಓದಿ ಭಾವುಕರಾಗುವ ನಾವು ನಮ್ಮ ಪಕ್ಕದಲ್ಲೇ ಕುಳಿತಿರುವ ವ್ಯಕ್ತಿ ನರಳುತ್ತಿದ್ದರೂ ಕಲ್ಲು ಬಂಡೆಯಂತೆ ವರ್ತಿಸುತ್ತೇವೆ. ಹಣ, ಕೀರ್ತಿಗಳ ಬೆನ್ನು ಹತ್ತಿ ಓಡುವ ಭರದಲ್ಲಿ ಪ್ರೀತಿ, ಸ್ನೇಹ, ವಿಶ್ವಾಸಗಳ ಸಂಪತ್ತನ್ನು ನಾವೇ ಕೈಯ್ಯಾರೆ ಕಳೆದುಕೊಳ್ಳುತ್ತಿದ್ದೇವೆ. ಜೀವಂತಿಕೆಯ ಸುಂದರ ಪ್ರಪಂಚದಿಂದ ನಿಧಾನವಾಗಿ ದೂರವಾಗುತ್ತಾ ನಿರ್ಜೀವತೆಯ ಲೋಕದಲ್ಲೇ ಹುದುಗಿಕೊಂಡು ನಮ್ಮ ಸುತ್ತಲೂ ನಾವೇ ಒಂದು ಕೋಟೆ ನಿರ್ಮಿಸಿಕೊಂಡು ವಾಸಿಸುವುದರ ಜೊತೆಗೆ ನಾವು ಜೀವಂತ ಇರುವಾಗಲೇ ನಿರ್ಜೀವ ವಸ್ತುಗಳಾಗುತ್ತಿದ್ದೇವೆ. ಯೋಚಿಸಿದರೆ ಬಹಳ ವ್ಯಥೆಯೆನಿಸುತ್ತದೆ.


                                      ವಿಜ್ಞಾನ ಮತ್ತು ತಂತ್ರಜ್ಞಾನಗಳು ನಮ್ಮ ಉತ್ತಮ ನಾಳೆಗಳಿಗೆ ನಾಂದಿ ಹಾಡುವಂತಿರಬೇಕೆ ಹೊರತು ಅವುಗಳ ಹಿನ್ನೆಲೆಯಲ್ಲಿ ನಾವು ಶೋಕರಾಗ ಹಾಡುವಂತಾಗಬಾರದು. ಅಜ್ಞಾನದ ಕತ್ತಲೆಯನ್ನು ತೊಲಗಿಸಿ ಬೆಳಕು ಬೀರುವವೇ ನಿಜವಾದ ವಿಜ್ಞಾನ ಮತ್ತು ತಂತ್ರಜ್ಞಾನ. ಈ ಸರಳ ಸತ್ಯವನ್ನು ನಾವೆಲ್ಲ ಅರಿತು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಯಾವಾಗ ಗೆಳೆಯ..?? ಇಂದೇಕೋ ಮಾತನಾಡುವ ಮನಸ್ಸಿಲ್ಲ. ಇನ್ನೊಮ್ಮೆ ಸಿಗುತ್ತೇನೆ. ದಯವಿಟ್ಟು ಬೇಸರಪಟ್ಟುಕೊಳ್ಳಬೇಡ. ಬರಲೇ..??

                                       ಪ್ರೀತಿಯಿಂದ,

                                                                                                                 ಎಂದೆಂದೂ ನಿನ್ನವಳು,
                                                                                                                       ನಿನ್ನೊಲುಮೆ