Thursday, 30 January 2014

ಗೆಳೆಯನಿಗೊಂದು ಪತ್ರ-೫:ನಾನು ಜೀವಂತವಾಗಿದ್ದೇನೆಯೇ..??

                      
ನನ್ನ ಗೆಳೆಯ,
                      ಏನು ಮಾಡುತ್ತಿರುವೆ..?? ಮಲಗಿಕೊಂಡಿರುವೆಯಾ..?? ನಿದ್ರೆ ಬಂದಿದೆಯೇ..?? ಬಂದಿರಲೇಬೇಕು. ಈ ಅಪರಾತ್ರಿಯಲ್ಲಿ ನಾನೇನೋ ನಿಶಾಚರಿಯಂತೆ ಎಚ್ಚರವಾಗಿದ್ದುಕೊಂಡು ಹೀಗೆ ಪತ್ರ ಬರೆಯುತ್ತಿರುವೆನೆಂಬ ಮಾತ್ರಕ್ಕೆ ಬೇರೆಯವರೂ ನಿದ್ದೆ ಮಾಡಿರಬಾರದೆಂಬ ನಿಯಮವಿದೆಯೇ..?? ಇಲ್ಲವಲ್ಲ.
                   ನನಗೆ ನಿದ್ದೆ ಬರುತ್ತಿಲ್ಲ, ನಾನೇನು ಮಾಡಲಿ..?? ಏಕೆ, ನಿದ್ದೆ ಬರುತ್ತಿಲ್ಲವೆಂದು ಕೇಳುವುದಿಲ್ಲವಾ..?? ನೀನು ಕೇಳುವ ತನಕ ಕಾಯುವಷ್ಟು ತಾಳ್ಮೆ ನನಗಿಲ್ಲ. ನಾನೇ ಹೇಳಿಬಿಡುತ್ತೇನೆ ಕೇಳು. ಮುಂಜಾನೆಯಿಂದ ತಲೆ ತಿನ್ನುತ್ತಿರುವ ವಿಚಾರವೊಂದು ನನ್ನ ಕಣ್ಣೆವೆಗಳನ್ನು ಮುಚ್ಚಲು ಬಿಡುತ್ತಿಲ್ಲ. ಅದೇನೆಂದರೆ ಜೀವಿಸುವುದಕ್ಕೂ, ಜೀವಂತವಾಗಿರುವುದಕ್ಕೂ ಇರುವ ಸಂಬಂಧ ಮತ್ತು ವ್ಯತ್ಯಾಸ. ಇದ್ಯಾವ ಬಗೆಯ ತರ್ಕಶಾಸ್ತ್ರದ ಸಿದ್ಧಾಂತ ಎಂದು ಮೂಗು ಮುರಿಯುತ್ತಿರುವೆಯಾ..?? ಇದು ಯಾವ ಬಗೆಯ ಸಿದ್ಧಾಂತವೂ ಅಲ್ಲ, ತರ್ಕವೂ ಅಲ್ಲ. ನನ್ನ ತಲೆಯಲ್ಲಿ ಒಮ್ಮೆಲೇ ಮೂಡಿದ ಒಂದು ವಿಚಾರ ಅಷ್ಟೇ. ಅದರ ಕುರಿತು ಸ್ವಲ್ಪ ಜಾಸ್ತಿಯೇ ಯೋಚಿಸಿದಾಗ ಜೀವನದ ಕುರಿತು ಇನ್ನಷ್ಟು ಹೊಸ ಅರ್ಥಗಳು, ವಿಷಯಗಳು ತಿಳಿದವು. ಅವುಗಳನ್ನೆಲ್ಲ ಈಗ ನಾನು ನಿನ್ನೊಂದಿಗೆ ಹಂಚಿಕೊಳ್ಳಬೇಕು.
                ಜೀವಿಸುವುದು ಮತ್ತು ಜೀವಂತವಾಗಿರುವುದು. ಜೀವಿಸುವುದೆಂದರೆ ಒಂದು ಯಾಂತ್ರಿಕ ಕ್ರಿಯೆ. ಹೇಗೆ ಯಂತ್ರಗಳಿಗೆ ಪವರ್ ಸಪ್ಲೈ ನೀಡಿದಾಗ ಯಾಂತ್ರಿಕವಾಗಿ ತಮ್ಮ ಕೆಲಸವನ್ನು ಮಾಡಿ ಮುಗಿಸುತ್ತವೆಯೋ ಹಾಗೆಯೇ ದೇವರು ಎರಡು ಜೀವಗಳ ಮೂಲಕ ನಮಗೆ ಜನ್ಮವನಿತ್ತು ಇಂತಿಷ್ಟು ವರ್ಷ ಬಾಳಿಬದುಕು, ಇಂಥಿಂಥವನ್ನು ಅನುಭವಿಸು ಎಂದು ಹಣೆಬರಹವನ್ನು ಬರೆದು ನಮ್ಮನ್ನು ಈ ಭೂಮಿಗೆ ಕಳಿಸಿದ್ದಾನೆಂದು ಆತನ ಆಜ್ಞೆಯನ್ನು ಪಾಲಿಸುವವರಂತೆ ಬದುಕಬೇಕು ಎನ್ನುವುದಕ್ಕಾಗಿ  ಬದುಕುವುದು. ಈ ಥರದವರಿಗೂ ನಿರ್ಜೀವ ವಸ್ತುಗಳಿಗೂ ಯಾವ ಬಗೆಯ ವ್ಯತ್ಯಾಸವೂ ಇಲ್ಲ. ಏಕೆಂದರೆ ಎರಡರಲ್ಲೂ ಜೀವಂತಿಕೆಯಿರುವುದಿಲ್ಲ. ವ್ಯಕ್ತಿಯು ಭೌತಿಕವಾಗಿ ಜೀವಂತದಿಂದಿರಬಹುದು. ಆದರೆ ಆತ/ಆಕೆ ಮಾನಸಿಕವಾಗಿ, ಬೌದ್ಧಿಕವಾಗಿ ಜೀವಂತದಿಂದಿರುತ್ತಾನೆ ಎಂದು ಹೇಳಲಾಗದು.
             ಹುಟ್ಟಿದ ನಂತರ ಕನಿಷ್ಠ ಸಾಮಾನ್ಯ ಜ್ಞಾನವನ್ನು ಹೊಂದುವಷ್ಟು ಬುದ್ಧಿ ಬೆಳೆದಾಗಿನಿಂದ ಜೀವನದ ಪ್ರತಿಯೊಂದು ಕ್ಷಣಗಳನ್ನು ಮನಸಾರೆ ಸವಿಯುತ್ತಾ, ನಿಜವಾದ ಅನುಭೂತಿಯನ್ನು ಅನುಭವಿಸುತ್ತಾ, ದಿನದಿನವೂ ಹೊಸತನವನ್ನು ಹುಡುಕುತ್ತಾ, ಆ ಹೊಸತನದಲ್ಲಿ ಮನಸಿನ ಸಂತೋಷವನ್ನು ಕಾಣುತ್ತಾ, ಆಶಾವಾದಿಯಾಗಿ ಪ್ರತಿಯೊಂದು ಹಂತದಲ್ಲೂ ದೊರೆಯುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ತನ್ನ ಜೊತೆಗೆ ಪರರನ್ನೂ ಬೆಳೆಸುತ್ತಾ, ಎಲ್ಲದರಲ್ಲೂ ಒಳ್ಳೆಯದನ್ನೇ ಕಾಣುತ್ತಾ ಸವೆಸುವ ಬದುಕು ಅಪ್ಪಟ ಜೀವಂತವಾದದ್ದು. ಈ ಬದುಕಿಗೆ ಒಂದು ಅರ್ಥವಿದೆ, ಸಾರ್ಥಕ್ಯವಿದೆ. ಇಲ್ಲಿ ಜೀವಿಸುವುದು ಎಂಬುದೊಂದು ಯಾಂತ್ರಿಕತೆಯಲ್ಲ, ಅದು ಜೀವಂತಿಕೆ.
            ಈಗ ನನಗೆ ಕಾಡುತ್ತಿರುವ ಪ್ರಶ್ನೆಯೆಂದರೆ ನಾನು ಜೀವಂತವಾಗಿದ್ದೇನೆಯೇ ಅಥವಾ ಕೇವಲ ಜೀವಿಸುತ್ತಿದ್ದೇನೆಯೇ ಎಂಬುದು.  ನನಗಂತೂ ಯಾವ ಗುಂಪಿನಲ್ಲಿದ್ದೇನೆ ಎನ್ನುವ ಗೊಂದಲವೇ ಬಗೆಹರಿಯುತ್ತಿಲ್ಲ. ನೀನು ಹೇಳಬಲ್ಲೆಯಾ...?? ನೀನಂತೂ ಮೊದಲನೇ ಕೆಟಗರಿಯಲ್ಲಿ ಇರುವವನು.  ನನ್ನ ಕತೆಯೇನು..?? ಏನು, ಸುಮ್ಮನೆ ತಲೆತಿನ್ನಬೇಡ ಚಾದರವನ್ನು ಹೊದ್ದುಕೊಂಡು ಮಲಗಿಕೊ ಎಂದು ಗದರಿಸುತ್ತಿರುವೆಯಾ...?? ಬಯ್ಯಬೇಡ ಮಾರಾಯಾ, ನಿಲ್ಲಿಸುತ್ತೇನೆ ನನ್ನ ಕೊರೆತವನ್ನು. ಚೆನ್ನಾಗಿ ನಿದ್ರೆ ಮಾಡು. ಶುಭರಾತ್ರಿ.
    
                                                       ಪ್ರೀತಿಯಿಂದ,

                                                                                                                                ಎಂದೆಂದೂ ನಿನ್ನವಳು,
                                                                                                                                      ನಿನ್ನೊಲುಮೆ

No comments:

Post a Comment