Wednesday, 29 January 2014

ಗೆಳೆಯನಿಗೊಂದು ಪತ್ರ-೪:ವಸುದೈವ ಕುಟುಂಬಕಂ


ಮುದ್ದು ಮಂಕೆಯೇ,
                         ಹೇಗಿರುವೆ...?? ಕಾಲೇಜು ದಿನಗಳು ಹೇಗೆ ಸಾಗುತ್ತಿವೆ..?? ಊಟವಾಯಿತಾ...?? ಏನು ಊಟ ಮಾಡಿದೆ..?? ನಾನು ಎರಡು ಚಪಾತಿ, ಕಾಳು ಪಲ್ಯ, ಅನ್ನ, ಸಾಂಬಾರುಗಳನ್ನು ಊಟ ಮಾಡಿದೆ. ಅದೇ ಮಾಮೂಲು ಹಾಸ್ಟೆಲ್ ಊಟ.
                    ಒಂದು ವಿಷಯವನ್ನು ಕೇಳೂವುದನ್ನೇ ಮರೆತೆ. ರಜಾದಿನಗಳಲ್ಲಿ ಏನೇನು ಮಾಡಿದೆ...?? ಸ್ನೇಹಿತರ ಅಥವಾ ಮನೆಯವರ ಜೊತೆ ಸೇರಿ ಎಲ್ಲಿಗಾದರೂ ಟೂರ್ ಹೋಗಿದ್ದೆಯಾ..?? ಇಲ್ಲಾ, ಯಾವುದಾದರೂ ಕ್ಲಾಸ್ ಅಟೆಂಡ್ ಮಾಡಿದೆಯಾ...?? ಪುಸ್ತಕಗಳನ್ನು ಓದಿದ್ದುಂಟಾ..?? ಯಾವ್ಯಾವ ಫಿಲ್ಮ್ ಗಳನ್ನು ನೋಡಿದೆ..??
                 ನಾನೊಂದು ತೆಲುಗು ಮೂವೀ ನೋಡಿದೆ. ‘ಸೀತಮ್ಮ ವಾಕಿಟ್ಲೊ ಸಿರಿಮಲ್ಲೆ ಚೆಟ್ಟು’ ಎಂದು ಅದರ ಹೆಸರು. ಚಿತ್ರದ ಕೊನೆಯ ಹಂತ ತಲುಪುವಾಗ ಯಾವತ್ತೂ ಇರದ ನನ್ನ ಕೆನ್ನೆಗಳ ಮೇಲೂ ಹನಿಗಳು ಉದುರಿದ್ದವು. ಅಂಥದ್ದೇನಿತ್ತು ಆ ಫಿಲ್ಮ್ ನಲ್ಲಿ ಎಂದು ಕೇಳುತ್ತಿರುವೆಯಾ..?? "ಸಾಮಾನ್ಯರಲ್ಲಿ ಅತಿ ಸಾಮಾನ್ಯರಾಗಿ ಬದುಕುವ ನಮ್ಮಂಥ ಮಧ್ಯಮ ವರ್ಗದವರಿಂದ ದೇಶಕ್ಕಾಗಿ ಮಹತ್ತರವಾದದ್ದೆನ್ನುವ ಕೊಡುಗೆಯನ್ನು ನೀಡಲಾಗದಿರಬಹುದು. ಆದರೆ ನಾವು ಎಲ್ಲರೊಳಗೊಂದಾಗಿ ಜೀವಿಸುವ ಈ ಸಮಾಜಕ್ಕಾಗಿ ಉತ್ತಮರಲ್ಲಿ ಅತ್ಯುತ್ತಮವೆನ್ನುವಂಥ ನಮ್ಮ ಕುಟುಂಬವನ್ನು ನೀಡಬಹುದು" ಎನ್ನುವ ಸರಳ ಸಂದೇಶ ಆ ಚಲನಚಿತ್ರದಲ್ಲಿದೆ. ಸಂದೇಶ ಸಾಧಾರಣವೇ ಆದರೂ ಹೇಳಿರುವ ರೀತಿ ಮನಮುಟ್ಟುವಂಥದು.
             ಗೆಳೆಯಾ, ನಮ್ಮ ದೇಶ, ಸಂಸ್ಕೃತಿ, ಸಮಾಜ ಎಂದು ನಾವೆಲ್ಲಾ ಎಷ್ಟೆಲ್ಲಾ ಮಾತನಾಡುತ್ತೇವೆ. ಆದರೆ ಇವೆಲ್ಲವುಗಳಿಗೂ ಅಡಿಪಾಯವಾದ ನಮ್ಮ ನಮ್ಮ ಕುಟುಂಬಗಳು, ಕೌಟುಂಬಿಕ ಸಂಬಂಧಗಳ ಬಗ್ಗೆ ಮಾತ್ರ ಬಹಳ ನಿರ್ಲಕ್ಷ್ಯ ತೋರುತ್ತೇವೆ. ಹಣ, ಕೀರ್ತಿ, ಅಂತಸ್ತುಗಳೆಂಬ ಕುದುರೆಗಳ ಬೆನ್ನು ಹತ್ತಿ ಓಡುವ ಭರದಲ್ಲಿ ನಾವು ಪ್ರೀತಿ, ಮಮತೆ, ವಿಶ್ವಾಸ, ನಂಬಿಕೆಗಳೆಂಬ ನಿಜವಾದ ಸಂಪತ್ತನ್ನು ಕಳೆದುಕೊಳ್ಳುತ್ತಿದ್ದೇವೆನ್ನುವುದನ್ನು ಅರಿತುಕೊಳ್ಳುತ್ತಿಲ್ಲ. ಯಾವುದೋ ಕ್ಷುಲ್ಲಕ ಕಾರಣಗಳಿಗಾಗಿ, ಕ್ಷಣಿಕ ಸಂತೋಷಗಳಿಗಾಗಿ ಸಂಬಂಧಗಳು ಹಳಸುಗೊಳ್ಳುತ್ತಿವೆ. ರಕ್ತಸಂಬಂಧಗಳಿಂದ ಅಣ್ಣ ತಮ್ಮಂದಿರಾದವರು ದಿನಳಗಾಗುವಷ್ಟರಲ್ಲೇ ದಾಯಾದಿಗಳಾಗುತ್ತಾರೆ, ಒಬ್ಬರ ವಿರುದ್ಧ ಇನ್ನೊಬ್ಬರು ಕತ್ತಿ ಮಸೆಯುತ್ತಾರೆ. ಅಕ್ಕ ತಂಗಿಯರು ಶಾಶ್ವತವಾಗಿ ಅಪರಿಚಿತರಂತೆ ಬಾಳುತ್ತಾರೆ. ವಸುದೈವ ಕುಟುಂಬಕಂ ಎಂಬ ಸಂದೇಶವನ್ನು ಇಡೀ ವಿಶ್ವಕ್ಕೆ ಸಾರಿದ ನಮ್ಮ ನಾಡಿನಲ್ಲೇ ಇಂದು ಕೌಟುಂಬಿಕ ಮೌಲ್ಯಗಳು ಅರ್ಥ ಕಳೆದುಕೊಳ್ಳುತ್ತಿವೆ. ಛೇ, ಎಂಥ ವಿಪರ್ಯಾಸ.
             ವಸುದೈವ ಕುಟುಂಬಕಂ ಎಂದರೆ ಇಡೀ ವಿಶ್ವವೇ ನನ್ನ ಕುಟುಂಬ ಎಂಬ ಭಾವ. ಎಂಥ ಅದ್ಭುತ ಕಲ್ಪನೆಯಲ್ಲವೆ!! ಆದರೆ ಆ ಕಲ್ಪನೆಯ ಬೇರುಗಳಿರುವುದು ಪ್ರತಿಯೊಬ್ಬರ ಕುಟುಂಬದಲ್ಲಿ. ನಾನು, ನನ್ನ ಕುಟುಂಬ, ನನ್ನ ಬಂಧು ಬಾಂಧವರು, ನನ್ನ ಊರು, ನನ್ನ ಪಟ್ಟಣ, ನನ್ನ ಜಿಲ್ಲೆ, ನನ್ನ ರಾಜ್ಯ, ನನ್ನ ದೇಶ, ನಂತರ ಜಗತ್ತು- ನೋಡು, ಇಡೀ ವಿಶ್ವವೇ ಒಂದು ಕುಟುಂಬ ಎನಿಸುವುದಿಲ್ಲವಾ..?? ಒಮ್ಮೆ ಯೋಚಿಸು ಗೆಳೆಯಾ, ಕುಟುಂಬವೆಂಬ ವ್ಯವಸ್ಥೆಗಿಂತ ಸುಂದರವಾದದ್ದು ಬೇರೆ ಯಾವುದಾದರೂ ಇದೆಯಾ ಈ ಪ್ರಪಂಚದಲ್ಲಿ..?? ಅಪ್ಪ, ಅಮ್ಮ, ಅಜ್ಜ, ಅಜ್ಜಿ, ದೊಡ್ಡಮ್ಮ, ದೊಡ್ಡಪ್ಪ, ಚಿಕ್ಕಪ್ಪ, ಚಿಕ್ಕಮ್ಮ, ಅಣ್ಣ, ತಂಗಿ, ಅಕ್ಕ, ತಮ್ಮ- ಎಲ್ಲರೂ ಕೂಡಿ ಸಹಬಾಳ್ವೆ ನಡೆಸುವಾಗ ಸ್ವರ್ಗ ಇಲ್ಲೆ ಇದೆ ಎನಿಸುವುದಿಲ್ಲವಾ..?? ದೇವರು ಸಹ ದೇವಲೋಕ ಬಿಟ್ಟು ಕೆಳಗೆ ಬಂದಾನು. ಇಂಥ ಒಂದು ಕಲ್ಪನೆಯನ್ನು ಮರೆತು ರಕ್ತ ಸಂಬಂಧಗಳೊಂದಿಗೆ ದ್ವೇಷ ಕಾರುವವರು ಮೂರ್ಖರಲ್ಲವಾ..?? ಅವರನ್ನು ನೋಡಿಯೇ ದಾಸರು ಹಾಡಿದ್ದಿರಬೇಕು "ಮಾನವ ಜನ್ಮ ದೊಡ್ಡದು, ಇದನ್ನು ಹಾಳುಮಾಡಬೇಡಿರಿ ಹುಚ್ಚಪ್ಪಗಳಿರಾ" ಎಂದು.
          ಎಷ್ಟೆಲ್ಲ ಕೊರೆಯುತ್ತೀಯೇ ಹುಡುಗಿ ಎನ್ನುತ್ತಿರುವೆಯಾ..?? ನನ್ನ ಲೇಖನಿ ಮೊಂಡಾಗುವವರೆಗೆ, ಯೋಚನೆಗಳು ಬತ್ತಿ ಬರಡಾಗುವವರೆಗೆ ನಾನು ಬರೆಯುವುದು, ಕೊರೆಯುವುದು ಇದ್ದದ್ದೇ. ನೀನು ಸ್ವಲ್ಪ ಪುರಸೊತ್ತು ಮಾಡಿಕೊಂಡು ಒಮ್ಮೆ ಆ ಚಲನಚಿತ್ರವನ್ನು ನೋಡು. ಗಂಟೆ ಮೂರಾಯಿತು. ನಾನೊಂದು ಸಣ್ಣ ನಿದ್ದೆ ತೆಗೆಯುತ್ತೇನೆ ಈಗ. ಬರಲಾ..??

                                                       ಪ್ರೀತಿಯಿಂದ,

                                                                                                                             ಎಂದೆಂದೂ ನಿನ್ನವಳು,
                                                                                                                                 ನಿನ್ನೊಲುಮೆ


No comments:

Post a Comment