Friday, 31 January 2014

ಗೆಳೆಯನಿಗೊಂದು ಪತ್ರ-೬:ನನ್ನ ತಪ್ಪುಗಳಿಗೆ ಕ್ಷಮೆಯಿರಲಿ


ನನ್ನ ಗೆಳೆಯೆನೇ,
                              ಹೇಗಿರುವೆ ಹುಡುಗಾ..?? ಇನ್ನೂ ನಿನಗೆ ನನ್ನ ಮೇಲೆ ಕೋಪ, ಬೇಸರ ಹೋಗಿಲ್ಲವಾ...?? sorry ಎಂದು ಅವತ್ತೇ ಹೇಳಿದ್ದೀನಲ್ಲ ಕಣೋ. ನಿನಗೆ ನನ್ನ ಬಗ್ಗೆ ಗೊತ್ತಿಲ್ಲವಾ..?? ನಾನು ಯಾವಾಗಲೂ ಸಣ್ಣ ಪುಟ್ಟ ವಿಷಯಗಳಿಗೂ ನಿನ್ನೊಂದಿಗೆ ಜಗಳವಾಡುವ ತಪ್ಪನ್ನು ಪದೇ ಪದೇ ಮಾಡುತ್ತಲೇ ಇರುತ್ತೇನೆ. ಪ್ರತಿಬಾರಿ ನೀನು ಕ್ಷಮಿಸಿದಾಗಲೂ ಇನ್ನೆಂದೂ ಈ ಬಗೆಯ ತಪ್ಪನ್ನು ಮಾಡಬಾರದೆಂದುಕೊಳ್ಳುತ್ತೇನೆ. ಆದರೇನು ಮಾಡಲಿ..?? ನನ್ನ ಮಾತಿಗೆ ನಾನೇ ತಪ್ಪಿ ನಡೆಯುತ್ತೇನೆ. ನಾನು ನಿನ್ನಷ್ಟು ಪ್ರಬುದ್ಧಳಲ್ಲ, ತಿಳುವಳಿಕೆ ಕಮ್ಮಿ. ಅದೂ ಅಲ್ಲದೇ ನನಗಾದರೂ ನಿನ್ನ ಬಿಟ್ಟು ಬೇರೆ ಇನ್ನು ಯಾರಿದ್ದಾರೆ ಜಗಳವಾಡಲಿಕ್ಕೆ..?? ಹಿಂದಿನಂತೆ ಈ ಸಲವೂ ಕ್ಷಮಿಸಲಾರೆಯಾ..?? ಪ್ಲೀಸ್...
                              ಏನಾಯಿತು ಗೊತ್ತಾ..?? ನಿನ್ನೊಡನೆ ಜಗಳವಾಡಿದ ಮರುದಿನವೇ ನನ್ನ ಸ್ನೇಹಿತರೊಂದಿಗೆ ಬಹಳ  ಸಣ್ಣ ವಿಷಯಕ್ಕೆ ಜಗಳವಾಡಿ ಅವರ ನಂಬಿಕೆ, ವಿಶ್ವಾಸಗಳನ್ನು ಕಳೆದುಕೊಂಡಿದ್ದೇನೆ. ಎಷ್ಟು ಬೇಸರವಾಗುತ್ತಿದೆ ಗೊತ್ತೇ..?? ಆಮೇಲೆ ನಾನು ಮಾಡಿದ ಕೆಲಸಕ್ಕೆ ಪಶ್ಚಾತ್ತಾಪಪಟ್ಟುಕೊಂಡು sorry ಎಂದೇನೋ ಹೇಳಿದೆ. ಆದರೆ ಆ sorryಯಿಂದ ಅವರ ಮನಸ್ಸಿಗೆ ನನ್ನಿಂದಾದ ಗಾಯ ಅಷ್ಟು ಸುಲಭವಾಗಿ ವಾಸಿಯಾಗಬಲ್ಲದೇ..?? ಇಲ್ಲ ತಾನೇ...?? ಕುಳಿತು ಯೋಚಿಸಿದಾಗ ನನ್ನ ಬಗ್ಗೆಯೇ ನನಗೆ ನಾಚಿಕೆಯಾಯಿತು. ಕಳೆದ ೩-೪ ದಿನಗಳಿಂದ ಬರೇ ಜಗಳವಾಡುವುದೇ ಕೆಲಸವಾಗಿದೆ ನನಗೆ.
                             ನಾವೆಲ್ಲರೂ ಒಬ್ಬರಲ್ಲ ಇನ್ನೊಬ್ಬರೊಂದಿಗೆ ಒಂದಲ್ಲ ಒಂದು ಕಾರಣಕ್ಕಾಗಿ ಜಗಳವಾಡುತ್ತೇವೆ. ಕೆಲವೊಮ್ಮೆ ಕ್ಷುಲ್ಲಕ ವಿಷಯವಾಗಿರಬಹುದು, ಇನ್ನು ಕೆಲವೊಮ್ಮೆ ಗಂಭೀರವೂ ಆಗಿರಬಹುದು. ಆದರೆ, ಜಗಳವಾಡಿದಾಗ ಮನಸಿಗಾಗುವ ನೋವಿನ ತೀವ್ರತೆ ಒಂದೇ ಬಗೆಯದ್ದು. ಅಂಥವರು ನಮ್ಮ ಬಗ್ಗೆ ಹೀಗೆಲ್ಲಾ ಕಹಿಯಾಗಿ ಮಾತನಾಡಿದರಲ್ಲಾ ಎಂದು ಅದನ್ನು ನಿರೀಕ್ಷಿಸಿರದ ನಮ್ಮ ಮನಸ್ಸು ಬಹಳವೇ ನೊಂದುಕೊಳ್ಳುತ್ತದೆ. ಜೊತೆಗೆ ನಾವೂ ವಿವೇಕವನ್ನು ಮರೆತು ಅವರೊಂದಿಗೆ ಆಡಿದ ಮಾತುಗಳು ನೆನಪಾಗಿ ನಮ್ಮ ಬಗ್ಗೆ ನಮಗಾಗುವ ಬೇಸರ, ನಾಚಿಕೆಯೊಂದಿಗೆ ಇನ್ನೊಬ್ಬರ ಮನಸ್ಸನ್ನು ಘಾಸಿಗೊಳಿಸಿದ ವ್ಯಥೆಯೂ ನಮ್ಮನ್ನು ಹಿಂಡಿ ಹಿಪ್ಪೆಯಾಗಿಸುತ್ತದೆ. ಇಷ್ಟಾದರೂ ನಮ್ಮ ಅಹಂ ಸುಮ್ಮನಿರುತ್ತದೆಯೇ..? ನಾವು ಅವರ ಹತ್ತಿರ ಕ್ಷಮಿಸಿ ಎಂದು ಕೇಳಲು ಅದು ಬಿಡುವುದಿಲ್ಲ. ಅವರೂ ಕೂಡ ಜಗಳದಲ್ಲಿ ಭಾಗಿಯಾಗಿದ್ದಾರೆ, ಅವರೇ ಕೇಳಲಿ ಎಂಬ ಒಣ ಪ್ರತಿಷ್ಠೆ ನಮಗೆ. ಇದರಿಂದಾಗಿಯೇ ಅರ್ಧಕ್ಕರ್ಧ ಸಂಬಂಧಗಳು ಸದ್ದಿಲ್ಲದೇ ಕೊನೆಯಾಗಿ ಹೋಗುತ್ತವೆ. ಒಂದು sorry ಕೇಳುವುದರಿಂದ ನಮಗಾಗುವ ನಷ್ಟವೇನು ಎನ್ನುವುದನ್ನು ಯೋಚಿಸಿ ಅದನ್ನು ಕೇಳದೇ ಹೋದರೆ ಆಗುವ ನಷ್ಟದ ಕುರಿತು ಯಾರೂ ಅರಿತುಕೊಳ್ಳುವುದೇ ಇಲ್ಲ. ಇನ್ನೊಂದು ಸಂಗತಿಯೇನೆಂದರೆ, sorry ಎಂದೇನೋ ಕೇಳಬಹುದು. ಆದರೆ ಕ್ಷಮಿಸುವ ಗುಣವಿದೆಯಲ್ಲ, ಅದು ಬಹಳ ಶ್ರೇಷ್ಠವಾದದ್ದು. ಎಲ್ಲರಲ್ಲೂ ಈ ಗುಣವಿರುವುದಿಲ್ಲ. ಅದು ದೈವದತ್ತವಾಗಿಯೇ ಬಂದಿರಬೇಕಷ್ಟೆ.
                                ನಾನು ತಿಳಿದೋ, ತಿಳಿಯದೆಯೋ ನನ್ನ ಮಾತು, ಕೃತಿಗಳಿಂದ ಬಹಳ ಜನರ ಮನಸ್ಸನ್ನು ನೋಯಿಸಿದ್ದೇನೆ. ಕೆಲವೊಮ್ಮೆ ತಪ್ಪು ನನ್ನದೇ ಎಂದು ಖಚಿತವಾಗಿ ಗೊತ್ತಿದ್ದರೂ ಕ್ಷಮಿಸಿ ಎಂದು ಕನಿಷ್ಠ ಸೌಜನ್ಯಕ್ಕಾಗಿಯಾದರೂ ಹೇಳದೇ ಸೊಕ್ಕಿನಿಂದ ನಡೆದುಕೊಂಡಿದ್ದೇನೆ. ಆದರೂ ಅವರೆಲ್ಲರೂ ನನ್ನನ್ನು ಮನಸಾರೆ ಕ್ಷಮಿಸಿ ಮೊದಲಿನಂತೆ ಪ್ರೀತಿ, ವಿಶ್ವಾಸದಿಂದ ಕಾಣುತ್ತಾರೆ. ನನ್ನಿಂದ ಅವರಿಗಾದ ನೋವನ್ನು ಹೇಗೆ ನುಂಗಿಕೊಂಡಿದ್ದಾರೋ ಏನೋ. ಅದಕ್ಕೆ ನಾನಿಂದು ಈ ಪತ್ರದ ಮೂಲಕ ಎಲ್ಲರಲ್ಲೂ ಕ್ಷಮೆ ಕೇಳಬೇಕೆಂದುಕೊಂಡಿದ್ದೇನೆ. " ನನ್ನೆಲ್ಲ ತಪ್ಪುಗಳಿಗೆ ಕ್ಷಮೆಯಿರಲಿ".
                               ನಿನಗೆ ತಲೆನೋವು ಬಂತಾ...?? ಇರಲಿ, ಹೇಗೂ ನಿನ್ನ ಹತ್ತಿರ ಆಯೋಡಿಕ್ಸ್ ಇದೆಯಲ್ಲ. ಹಚ್ಚಿಕೊಂಡು ಮಲಗಿಬಿಡು. ನನಗಂತೂ ನಿನ್ನ ಹತ್ತಿರ ಇವೆಲ್ಲವನ್ನೂ ಹೇಳಿಕೊಂಡಿದ್ದರಿಂದ ಮನಸ್ಸಿನ ಬೇಗುದಿ ಕಡಿಮೆಯಾಯಿತು. ಇವತ್ತು ಆರಾಮವಾಗಿ ನಿದ್ದೆ ಮಾಡಬಹುದು. ಆಯಿತು ಮಾರಾಯಾ, ನನ್ನ ಕೊರೆತವನ್ನು ಮುಗಿಸುತ್ತೇನೆ.

                                   ಪ್ರೀತಿಯಿಂದ,

                                                                                                                         ಎಂದೆಂದೂ ನಿನ್ನವಳು,
                                                                                                                               ನಿನ್ನೊಲುಮೆ


Thursday, 30 January 2014

ಗೆಳೆಯನಿಗೊಂದು ಪತ್ರ-೫:ನಾನು ಜೀವಂತವಾಗಿದ್ದೇನೆಯೇ..??

                      
ನನ್ನ ಗೆಳೆಯ,
                      ಏನು ಮಾಡುತ್ತಿರುವೆ..?? ಮಲಗಿಕೊಂಡಿರುವೆಯಾ..?? ನಿದ್ರೆ ಬಂದಿದೆಯೇ..?? ಬಂದಿರಲೇಬೇಕು. ಈ ಅಪರಾತ್ರಿಯಲ್ಲಿ ನಾನೇನೋ ನಿಶಾಚರಿಯಂತೆ ಎಚ್ಚರವಾಗಿದ್ದುಕೊಂಡು ಹೀಗೆ ಪತ್ರ ಬರೆಯುತ್ತಿರುವೆನೆಂಬ ಮಾತ್ರಕ್ಕೆ ಬೇರೆಯವರೂ ನಿದ್ದೆ ಮಾಡಿರಬಾರದೆಂಬ ನಿಯಮವಿದೆಯೇ..?? ಇಲ್ಲವಲ್ಲ.
                   ನನಗೆ ನಿದ್ದೆ ಬರುತ್ತಿಲ್ಲ, ನಾನೇನು ಮಾಡಲಿ..?? ಏಕೆ, ನಿದ್ದೆ ಬರುತ್ತಿಲ್ಲವೆಂದು ಕೇಳುವುದಿಲ್ಲವಾ..?? ನೀನು ಕೇಳುವ ತನಕ ಕಾಯುವಷ್ಟು ತಾಳ್ಮೆ ನನಗಿಲ್ಲ. ನಾನೇ ಹೇಳಿಬಿಡುತ್ತೇನೆ ಕೇಳು. ಮುಂಜಾನೆಯಿಂದ ತಲೆ ತಿನ್ನುತ್ತಿರುವ ವಿಚಾರವೊಂದು ನನ್ನ ಕಣ್ಣೆವೆಗಳನ್ನು ಮುಚ್ಚಲು ಬಿಡುತ್ತಿಲ್ಲ. ಅದೇನೆಂದರೆ ಜೀವಿಸುವುದಕ್ಕೂ, ಜೀವಂತವಾಗಿರುವುದಕ್ಕೂ ಇರುವ ಸಂಬಂಧ ಮತ್ತು ವ್ಯತ್ಯಾಸ. ಇದ್ಯಾವ ಬಗೆಯ ತರ್ಕಶಾಸ್ತ್ರದ ಸಿದ್ಧಾಂತ ಎಂದು ಮೂಗು ಮುರಿಯುತ್ತಿರುವೆಯಾ..?? ಇದು ಯಾವ ಬಗೆಯ ಸಿದ್ಧಾಂತವೂ ಅಲ್ಲ, ತರ್ಕವೂ ಅಲ್ಲ. ನನ್ನ ತಲೆಯಲ್ಲಿ ಒಮ್ಮೆಲೇ ಮೂಡಿದ ಒಂದು ವಿಚಾರ ಅಷ್ಟೇ. ಅದರ ಕುರಿತು ಸ್ವಲ್ಪ ಜಾಸ್ತಿಯೇ ಯೋಚಿಸಿದಾಗ ಜೀವನದ ಕುರಿತು ಇನ್ನಷ್ಟು ಹೊಸ ಅರ್ಥಗಳು, ವಿಷಯಗಳು ತಿಳಿದವು. ಅವುಗಳನ್ನೆಲ್ಲ ಈಗ ನಾನು ನಿನ್ನೊಂದಿಗೆ ಹಂಚಿಕೊಳ್ಳಬೇಕು.
                ಜೀವಿಸುವುದು ಮತ್ತು ಜೀವಂತವಾಗಿರುವುದು. ಜೀವಿಸುವುದೆಂದರೆ ಒಂದು ಯಾಂತ್ರಿಕ ಕ್ರಿಯೆ. ಹೇಗೆ ಯಂತ್ರಗಳಿಗೆ ಪವರ್ ಸಪ್ಲೈ ನೀಡಿದಾಗ ಯಾಂತ್ರಿಕವಾಗಿ ತಮ್ಮ ಕೆಲಸವನ್ನು ಮಾಡಿ ಮುಗಿಸುತ್ತವೆಯೋ ಹಾಗೆಯೇ ದೇವರು ಎರಡು ಜೀವಗಳ ಮೂಲಕ ನಮಗೆ ಜನ್ಮವನಿತ್ತು ಇಂತಿಷ್ಟು ವರ್ಷ ಬಾಳಿಬದುಕು, ಇಂಥಿಂಥವನ್ನು ಅನುಭವಿಸು ಎಂದು ಹಣೆಬರಹವನ್ನು ಬರೆದು ನಮ್ಮನ್ನು ಈ ಭೂಮಿಗೆ ಕಳಿಸಿದ್ದಾನೆಂದು ಆತನ ಆಜ್ಞೆಯನ್ನು ಪಾಲಿಸುವವರಂತೆ ಬದುಕಬೇಕು ಎನ್ನುವುದಕ್ಕಾಗಿ  ಬದುಕುವುದು. ಈ ಥರದವರಿಗೂ ನಿರ್ಜೀವ ವಸ್ತುಗಳಿಗೂ ಯಾವ ಬಗೆಯ ವ್ಯತ್ಯಾಸವೂ ಇಲ್ಲ. ಏಕೆಂದರೆ ಎರಡರಲ್ಲೂ ಜೀವಂತಿಕೆಯಿರುವುದಿಲ್ಲ. ವ್ಯಕ್ತಿಯು ಭೌತಿಕವಾಗಿ ಜೀವಂತದಿಂದಿರಬಹುದು. ಆದರೆ ಆತ/ಆಕೆ ಮಾನಸಿಕವಾಗಿ, ಬೌದ್ಧಿಕವಾಗಿ ಜೀವಂತದಿಂದಿರುತ್ತಾನೆ ಎಂದು ಹೇಳಲಾಗದು.
             ಹುಟ್ಟಿದ ನಂತರ ಕನಿಷ್ಠ ಸಾಮಾನ್ಯ ಜ್ಞಾನವನ್ನು ಹೊಂದುವಷ್ಟು ಬುದ್ಧಿ ಬೆಳೆದಾಗಿನಿಂದ ಜೀವನದ ಪ್ರತಿಯೊಂದು ಕ್ಷಣಗಳನ್ನು ಮನಸಾರೆ ಸವಿಯುತ್ತಾ, ನಿಜವಾದ ಅನುಭೂತಿಯನ್ನು ಅನುಭವಿಸುತ್ತಾ, ದಿನದಿನವೂ ಹೊಸತನವನ್ನು ಹುಡುಕುತ್ತಾ, ಆ ಹೊಸತನದಲ್ಲಿ ಮನಸಿನ ಸಂತೋಷವನ್ನು ಕಾಣುತ್ತಾ, ಆಶಾವಾದಿಯಾಗಿ ಪ್ರತಿಯೊಂದು ಹಂತದಲ್ಲೂ ದೊರೆಯುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ತನ್ನ ಜೊತೆಗೆ ಪರರನ್ನೂ ಬೆಳೆಸುತ್ತಾ, ಎಲ್ಲದರಲ್ಲೂ ಒಳ್ಳೆಯದನ್ನೇ ಕಾಣುತ್ತಾ ಸವೆಸುವ ಬದುಕು ಅಪ್ಪಟ ಜೀವಂತವಾದದ್ದು. ಈ ಬದುಕಿಗೆ ಒಂದು ಅರ್ಥವಿದೆ, ಸಾರ್ಥಕ್ಯವಿದೆ. ಇಲ್ಲಿ ಜೀವಿಸುವುದು ಎಂಬುದೊಂದು ಯಾಂತ್ರಿಕತೆಯಲ್ಲ, ಅದು ಜೀವಂತಿಕೆ.
            ಈಗ ನನಗೆ ಕಾಡುತ್ತಿರುವ ಪ್ರಶ್ನೆಯೆಂದರೆ ನಾನು ಜೀವಂತವಾಗಿದ್ದೇನೆಯೇ ಅಥವಾ ಕೇವಲ ಜೀವಿಸುತ್ತಿದ್ದೇನೆಯೇ ಎಂಬುದು.  ನನಗಂತೂ ಯಾವ ಗುಂಪಿನಲ್ಲಿದ್ದೇನೆ ಎನ್ನುವ ಗೊಂದಲವೇ ಬಗೆಹರಿಯುತ್ತಿಲ್ಲ. ನೀನು ಹೇಳಬಲ್ಲೆಯಾ...?? ನೀನಂತೂ ಮೊದಲನೇ ಕೆಟಗರಿಯಲ್ಲಿ ಇರುವವನು.  ನನ್ನ ಕತೆಯೇನು..?? ಏನು, ಸುಮ್ಮನೆ ತಲೆತಿನ್ನಬೇಡ ಚಾದರವನ್ನು ಹೊದ್ದುಕೊಂಡು ಮಲಗಿಕೊ ಎಂದು ಗದರಿಸುತ್ತಿರುವೆಯಾ...?? ಬಯ್ಯಬೇಡ ಮಾರಾಯಾ, ನಿಲ್ಲಿಸುತ್ತೇನೆ ನನ್ನ ಕೊರೆತವನ್ನು. ಚೆನ್ನಾಗಿ ನಿದ್ರೆ ಮಾಡು. ಶುಭರಾತ್ರಿ.
    
                                                       ಪ್ರೀತಿಯಿಂದ,

                                                                                                                                ಎಂದೆಂದೂ ನಿನ್ನವಳು,
                                                                                                                                      ನಿನ್ನೊಲುಮೆ

Wednesday, 29 January 2014

ಗೆಳೆಯನಿಗೊಂದು ಪತ್ರ-೪:ವಸುದೈವ ಕುಟುಂಬಕಂ


ಮುದ್ದು ಮಂಕೆಯೇ,
                         ಹೇಗಿರುವೆ...?? ಕಾಲೇಜು ದಿನಗಳು ಹೇಗೆ ಸಾಗುತ್ತಿವೆ..?? ಊಟವಾಯಿತಾ...?? ಏನು ಊಟ ಮಾಡಿದೆ..?? ನಾನು ಎರಡು ಚಪಾತಿ, ಕಾಳು ಪಲ್ಯ, ಅನ್ನ, ಸಾಂಬಾರುಗಳನ್ನು ಊಟ ಮಾಡಿದೆ. ಅದೇ ಮಾಮೂಲು ಹಾಸ್ಟೆಲ್ ಊಟ.
                    ಒಂದು ವಿಷಯವನ್ನು ಕೇಳೂವುದನ್ನೇ ಮರೆತೆ. ರಜಾದಿನಗಳಲ್ಲಿ ಏನೇನು ಮಾಡಿದೆ...?? ಸ್ನೇಹಿತರ ಅಥವಾ ಮನೆಯವರ ಜೊತೆ ಸೇರಿ ಎಲ್ಲಿಗಾದರೂ ಟೂರ್ ಹೋಗಿದ್ದೆಯಾ..?? ಇಲ್ಲಾ, ಯಾವುದಾದರೂ ಕ್ಲಾಸ್ ಅಟೆಂಡ್ ಮಾಡಿದೆಯಾ...?? ಪುಸ್ತಕಗಳನ್ನು ಓದಿದ್ದುಂಟಾ..?? ಯಾವ್ಯಾವ ಫಿಲ್ಮ್ ಗಳನ್ನು ನೋಡಿದೆ..??
                 ನಾನೊಂದು ತೆಲುಗು ಮೂವೀ ನೋಡಿದೆ. ‘ಸೀತಮ್ಮ ವಾಕಿಟ್ಲೊ ಸಿರಿಮಲ್ಲೆ ಚೆಟ್ಟು’ ಎಂದು ಅದರ ಹೆಸರು. ಚಿತ್ರದ ಕೊನೆಯ ಹಂತ ತಲುಪುವಾಗ ಯಾವತ್ತೂ ಇರದ ನನ್ನ ಕೆನ್ನೆಗಳ ಮೇಲೂ ಹನಿಗಳು ಉದುರಿದ್ದವು. ಅಂಥದ್ದೇನಿತ್ತು ಆ ಫಿಲ್ಮ್ ನಲ್ಲಿ ಎಂದು ಕೇಳುತ್ತಿರುವೆಯಾ..?? "ಸಾಮಾನ್ಯರಲ್ಲಿ ಅತಿ ಸಾಮಾನ್ಯರಾಗಿ ಬದುಕುವ ನಮ್ಮಂಥ ಮಧ್ಯಮ ವರ್ಗದವರಿಂದ ದೇಶಕ್ಕಾಗಿ ಮಹತ್ತರವಾದದ್ದೆನ್ನುವ ಕೊಡುಗೆಯನ್ನು ನೀಡಲಾಗದಿರಬಹುದು. ಆದರೆ ನಾವು ಎಲ್ಲರೊಳಗೊಂದಾಗಿ ಜೀವಿಸುವ ಈ ಸಮಾಜಕ್ಕಾಗಿ ಉತ್ತಮರಲ್ಲಿ ಅತ್ಯುತ್ತಮವೆನ್ನುವಂಥ ನಮ್ಮ ಕುಟುಂಬವನ್ನು ನೀಡಬಹುದು" ಎನ್ನುವ ಸರಳ ಸಂದೇಶ ಆ ಚಲನಚಿತ್ರದಲ್ಲಿದೆ. ಸಂದೇಶ ಸಾಧಾರಣವೇ ಆದರೂ ಹೇಳಿರುವ ರೀತಿ ಮನಮುಟ್ಟುವಂಥದು.
             ಗೆಳೆಯಾ, ನಮ್ಮ ದೇಶ, ಸಂಸ್ಕೃತಿ, ಸಮಾಜ ಎಂದು ನಾವೆಲ್ಲಾ ಎಷ್ಟೆಲ್ಲಾ ಮಾತನಾಡುತ್ತೇವೆ. ಆದರೆ ಇವೆಲ್ಲವುಗಳಿಗೂ ಅಡಿಪಾಯವಾದ ನಮ್ಮ ನಮ್ಮ ಕುಟುಂಬಗಳು, ಕೌಟುಂಬಿಕ ಸಂಬಂಧಗಳ ಬಗ್ಗೆ ಮಾತ್ರ ಬಹಳ ನಿರ್ಲಕ್ಷ್ಯ ತೋರುತ್ತೇವೆ. ಹಣ, ಕೀರ್ತಿ, ಅಂತಸ್ತುಗಳೆಂಬ ಕುದುರೆಗಳ ಬೆನ್ನು ಹತ್ತಿ ಓಡುವ ಭರದಲ್ಲಿ ನಾವು ಪ್ರೀತಿ, ಮಮತೆ, ವಿಶ್ವಾಸ, ನಂಬಿಕೆಗಳೆಂಬ ನಿಜವಾದ ಸಂಪತ್ತನ್ನು ಕಳೆದುಕೊಳ್ಳುತ್ತಿದ್ದೇವೆನ್ನುವುದನ್ನು ಅರಿತುಕೊಳ್ಳುತ್ತಿಲ್ಲ. ಯಾವುದೋ ಕ್ಷುಲ್ಲಕ ಕಾರಣಗಳಿಗಾಗಿ, ಕ್ಷಣಿಕ ಸಂತೋಷಗಳಿಗಾಗಿ ಸಂಬಂಧಗಳು ಹಳಸುಗೊಳ್ಳುತ್ತಿವೆ. ರಕ್ತಸಂಬಂಧಗಳಿಂದ ಅಣ್ಣ ತಮ್ಮಂದಿರಾದವರು ದಿನಳಗಾಗುವಷ್ಟರಲ್ಲೇ ದಾಯಾದಿಗಳಾಗುತ್ತಾರೆ, ಒಬ್ಬರ ವಿರುದ್ಧ ಇನ್ನೊಬ್ಬರು ಕತ್ತಿ ಮಸೆಯುತ್ತಾರೆ. ಅಕ್ಕ ತಂಗಿಯರು ಶಾಶ್ವತವಾಗಿ ಅಪರಿಚಿತರಂತೆ ಬಾಳುತ್ತಾರೆ. ವಸುದೈವ ಕುಟುಂಬಕಂ ಎಂಬ ಸಂದೇಶವನ್ನು ಇಡೀ ವಿಶ್ವಕ್ಕೆ ಸಾರಿದ ನಮ್ಮ ನಾಡಿನಲ್ಲೇ ಇಂದು ಕೌಟುಂಬಿಕ ಮೌಲ್ಯಗಳು ಅರ್ಥ ಕಳೆದುಕೊಳ್ಳುತ್ತಿವೆ. ಛೇ, ಎಂಥ ವಿಪರ್ಯಾಸ.
             ವಸುದೈವ ಕುಟುಂಬಕಂ ಎಂದರೆ ಇಡೀ ವಿಶ್ವವೇ ನನ್ನ ಕುಟುಂಬ ಎಂಬ ಭಾವ. ಎಂಥ ಅದ್ಭುತ ಕಲ್ಪನೆಯಲ್ಲವೆ!! ಆದರೆ ಆ ಕಲ್ಪನೆಯ ಬೇರುಗಳಿರುವುದು ಪ್ರತಿಯೊಬ್ಬರ ಕುಟುಂಬದಲ್ಲಿ. ನಾನು, ನನ್ನ ಕುಟುಂಬ, ನನ್ನ ಬಂಧು ಬಾಂಧವರು, ನನ್ನ ಊರು, ನನ್ನ ಪಟ್ಟಣ, ನನ್ನ ಜಿಲ್ಲೆ, ನನ್ನ ರಾಜ್ಯ, ನನ್ನ ದೇಶ, ನಂತರ ಜಗತ್ತು- ನೋಡು, ಇಡೀ ವಿಶ್ವವೇ ಒಂದು ಕುಟುಂಬ ಎನಿಸುವುದಿಲ್ಲವಾ..?? ಒಮ್ಮೆ ಯೋಚಿಸು ಗೆಳೆಯಾ, ಕುಟುಂಬವೆಂಬ ವ್ಯವಸ್ಥೆಗಿಂತ ಸುಂದರವಾದದ್ದು ಬೇರೆ ಯಾವುದಾದರೂ ಇದೆಯಾ ಈ ಪ್ರಪಂಚದಲ್ಲಿ..?? ಅಪ್ಪ, ಅಮ್ಮ, ಅಜ್ಜ, ಅಜ್ಜಿ, ದೊಡ್ಡಮ್ಮ, ದೊಡ್ಡಪ್ಪ, ಚಿಕ್ಕಪ್ಪ, ಚಿಕ್ಕಮ್ಮ, ಅಣ್ಣ, ತಂಗಿ, ಅಕ್ಕ, ತಮ್ಮ- ಎಲ್ಲರೂ ಕೂಡಿ ಸಹಬಾಳ್ವೆ ನಡೆಸುವಾಗ ಸ್ವರ್ಗ ಇಲ್ಲೆ ಇದೆ ಎನಿಸುವುದಿಲ್ಲವಾ..?? ದೇವರು ಸಹ ದೇವಲೋಕ ಬಿಟ್ಟು ಕೆಳಗೆ ಬಂದಾನು. ಇಂಥ ಒಂದು ಕಲ್ಪನೆಯನ್ನು ಮರೆತು ರಕ್ತ ಸಂಬಂಧಗಳೊಂದಿಗೆ ದ್ವೇಷ ಕಾರುವವರು ಮೂರ್ಖರಲ್ಲವಾ..?? ಅವರನ್ನು ನೋಡಿಯೇ ದಾಸರು ಹಾಡಿದ್ದಿರಬೇಕು "ಮಾನವ ಜನ್ಮ ದೊಡ್ಡದು, ಇದನ್ನು ಹಾಳುಮಾಡಬೇಡಿರಿ ಹುಚ್ಚಪ್ಪಗಳಿರಾ" ಎಂದು.
          ಎಷ್ಟೆಲ್ಲ ಕೊರೆಯುತ್ತೀಯೇ ಹುಡುಗಿ ಎನ್ನುತ್ತಿರುವೆಯಾ..?? ನನ್ನ ಲೇಖನಿ ಮೊಂಡಾಗುವವರೆಗೆ, ಯೋಚನೆಗಳು ಬತ್ತಿ ಬರಡಾಗುವವರೆಗೆ ನಾನು ಬರೆಯುವುದು, ಕೊರೆಯುವುದು ಇದ್ದದ್ದೇ. ನೀನು ಸ್ವಲ್ಪ ಪುರಸೊತ್ತು ಮಾಡಿಕೊಂಡು ಒಮ್ಮೆ ಆ ಚಲನಚಿತ್ರವನ್ನು ನೋಡು. ಗಂಟೆ ಮೂರಾಯಿತು. ನಾನೊಂದು ಸಣ್ಣ ನಿದ್ದೆ ತೆಗೆಯುತ್ತೇನೆ ಈಗ. ಬರಲಾ..??

                                                       ಪ್ರೀತಿಯಿಂದ,

                                                                                                                             ಎಂದೆಂದೂ ನಿನ್ನವಳು,
                                                                                                                                 ನಿನ್ನೊಲುಮೆ


ಎಂದು ಕಾಣುವನೋ ಪೂರ್ಣ ಚಂದಿರ


                               
               ಪುನಃ ಮೊನ್ನೆ ಅದೇ ಕತೆಯಾಯಿತಲ್ಲ. ಎಂದಿನಂತೆ ಮೊನ್ನೆಯೂ ಸಹ ನಾನು ಕಾದು ಕುಳಿತದ್ದಷ್ಟೇ ಬಂತು. ಆತ ಮಾತ್ರ ಕಾಣಸಿಗಲಿಲ್ಲ. ಒಂದು, ಎರಡು ದಿನಗಳಾದರೆ ಪರವಾಗಿಲ್ಲ. ಸತತ ಎರಡು ವರ್ಷಗಳಿಂದ ಪ್ರತಿ ದಿನವೂ ಇದೇ ಪುನರಾವರ್ತನೆಯಾದರೆ ಏನಾಗಬೇಡ...?? ಆತನದ್ದೂ ಸಹ ಅತಿಯಾಯಿತು ಎಷ್ಟೆಂದು ನನ್ನನ್ನು ಕಾಡಿಸುವುದು...?? ಮನಸಿನ ಭಾವಗಳೆಲ್ಲ ಬತ್ತಿಹೋಗಿ ಬೇಸರದ ಮೋಡಗಳಾಗಿ ಆಮೇಲೆ ಕಣ್ಣೀರಿನ ಮಳೆ ಸುರಿದಿರುವುದು ಅದೆಷ್ಟು ಬಾರಿಯೋ. ಆದರೆ ಆತನಿಗೆ ಮಾತ್ರ ಇದಾವುದರ ಪರಿವೆಯೂ ಇಲ್ಲ.
                ಆತ ಬರುವುದೇ ಇಲ್ಲವೆಂದಿಲ್ಲ, ಬರುತ್ತಾನೆ. ಇನ್ನೇನು ನನ್ನ ಹತ್ತಿರ ಬಂದೇ ಬಿಟ್ಟ ಎನ್ನುವಷ್ಟರಲ್ಲಿ ಒಮ್ಮೆಲೇ ಮಾಯವಾಗಿ ಬಿಡುತ್ತಾನೆ. ಇದೊಂದು ಮಾತ್ರ ನನಗೆ ಅರ್ಥವಾಗುವುದಿಲ್ಲ. ಬರುತ್ತೇನೆ ಎಂದು ಅರ್ಧ ದಾರಿಗೆ ಮಾತ್ರವೇ ಬಂದು ಮಾಯವಾಗುವ ಆಟವೇಕೆಂದು. ಅವನೇನೋ ಹೀಗೆ ಬಂದು ಹಾಗೆ ಹೋಗಿಬಿಡುತ್ತಾನೆ ಬೀಸುವ ಗಾಳಿಯಂತೆ. ಆದರೆ ಆತ ನನ್ನ ಮನದ ಸಾಗರದಲ್ಲಿ ಎಬ್ಬಿಸುವ ನಿರಾಸೆಯ ಅಲೆಗಳ ಅಬ್ಬರದ ತೀವ್ರತೆ ನನಗೆ ಮಾತ್ರವೇ ಗೊತ್ತು.
             ಇಷ್ಟಕ್ಕೂ ಆತ ಯಾರೆಂದುಕೊಂಡಿರಿ..?? ಗೆಳೆಯನೆಂದೆ..?? ಇನಿಯನೆಂದೆ...?? ಊಹ್ಞೂಂ, ಆತ ಬೇರೆ ಯಾರು ಅಲ್ಲ. ನಿಶೆಯ ಕತ್ತಲ ಹೊದ್ದಿಕೆಯನ್ನು ದಿನದಿನವೂ ಮೆಲ್ಲನೆ ಸರಿಸುತ್ತ ತನ್ನ ಬಿರಿದ ನಗೆಯ ಮೂಲಕ ಬೆಳಕು ಚೆಲ್ಲುವಾತ. ಹೌದು ಅವನೇ, ಎಲ್ಲರ ಮನೆಯಂಗಳದಲ್ಲಿ ಮನದಂಗಳದಲ್ಲಿ ಬೆಳದಿಂಗಳ ಮೂಡಿಸುವ ಚೆಂದದ ಚಂದಿರ. ಅವನೇಕೆ ನನ್ನನ್ನು ಕಾಡುತ್ತಾನೆ ಎಂಬ ಸಂದೇಹ ಮೂಡುತ್ತಿರಬೇಕಲ್ಲವೇ..?? ಇದಕ್ಕೆ ಉತ್ತರ ನನಗೂ ಗೊತ್ತಿಲ್ಲ, ಅವನನ್ನೇ ಕೇಳಬೇಕು. ಆದರೆ ಆತ ಕಾಡುವುದಂತೂ ಸ್ಪಷ್ಟ ಸತ್ಯ.
            ಬರುತ್ತೇನೆಂದು ಮಾತು ನೀಡುತ್ತಾನೆ. ನಾನು ಅವನಿಗಾಗಿ ದಿನವೆಲ್ಲ ಕಣ್ಣೆಯಲ್ಲಿ ಎಣ್ಣೆ ಬಿಟ್ಟುಕೊಂಡಂತೆ ಕಾದು ಕುಳಿತರೆ ತಾನು ಬರುವುದೇ ಇಲ್ಲ. ನಾನು ಬೇಸರಗೊಂಡು ಮುಂದಿನ ಎರಡು-ಮೂರು ದಿನ ಅವನಿಗಾಗಿ ಎದುರು ನೋಡದೇ ಕುಳಿತಿದ್ದರೆ ನನಗೆ ಸುಳಿವನ್ನೂ ನೀಡದೇ ಸದ್ದಿಲ್ಲದೆ ಬಂದು ಹೋಗಿಬಿಡುತ್ತಾನೆ. ಅದು ತಿಳಿದಾಗ ನನಗೆಷ್ಟು ಬೇಸರವಾಗುತ್ತದೆ ಗೊತ್ತೇ..?? ಕೆಲವೊಮ್ಮೆ ಮೋಡಗಳ ಮರೆಯಲ್ಲಿ ಅಡಗಿ ಕುಳಿತು ನನ್ನನ್ನು ಆಟವಾಡಿಸುತ್ತಾನೆ. ಇನ್ನು ಕೆಲವು ಸಲ ಇನ್ನೇನು ಕಂಡೇ ಬಿಟ್ಟ ಎನ್ನುವಷ್ಟರಲ್ಲೇ ಮತ್ತೆ ಮಾಯವಾಗಿಬಿಡುತ್ತಾನೆ. ಬೆಕ್ಕಿಗೆ ಆಟ, ಇಲಿಗೆ ಪ್ರಾಣ ಸಂಕಟ ಎನ್ನುವಂತಾಗಿದೆ ನನ್ನ ಪರಿಸ್ಥಿತಿ.
              ಏಕೆ ಚಂದಿರ..?? ನಿನಗೇಕೆ ನನ್ನೊಂದಿಗೆ ಆಡುವ ಚಪಲ..?? ಕಾಣಸಿಗುವುದಿಲ್ಲವೆಂದರೆ ನನ್ನಿಂದ ಶಾಶ್ವತವಾಗಿ ಮರೆಯಾಗಿ ಹೋಗು. ಇಲ್ಲ, ನೀನು ಹಾಗೆ ಮಾಡುವುದಿಲ್ಲ. ಮರೆಯಲ್ಲೇ ಅವಿತುಕೊಂಡು ಕಣ್ಣಾಮುಚ್ಚಾಲೆಯಾಡುತ್ತಲೇ ನನ್ನನ್ನು ಕಾಡುತ್ತೀ. ಏಕೆ ಹೀಗೆ...?? ನನ್ನ ಮುಖಾರವಿಂದದಲ್ಲಿ ಬೇಸರ, ಸಿಟ್ಟು, ನಿರಾಶೆಗಳ ಛಾಯೆಯನ್ನು ಕಂಡರೆ ನಿನಗೆ ನಿಜಕ್ಕೂ ಸಂತಸವಾಗುತ್ತದೆಯೇ..?? ನೀ ಬಂದು ನಿನ್ನ ಬೆಳದಿಂಗಳ ಬೆಳಕಿನಿಂದ ಆ ಛಾಯೆಯ ಕತ್ತಲನ್ನು ಹೊಡೆದೋಡಿಸಲಾರೆಯಾ..??
             ಇನ್ನೂ ಏನೆಂದು ಹೇಳಲಿ ನಾನು...?? ನಿನಗಾಗಿ ನಾನು ಬೇಕಾದರೆ ಯುಗಯುಗಗಳವರೆಗೆ ಕಾದು ಕುಳಿತೇನು. ಆದರೆ ನೀನು ಮಾತ್ರ ಹೀಗೆ ಕಾಡಿಸುವ ಆಟವಾಡಬೇಡ. ಬರುವುದಾದರೆ ಪೂರ್ಣ ಚಂದಿರನಾಗಿ ಬಾ. ಇಲ್ಲವೆಂದರೆ ನನ್ನಿಂದ ಸಂಪೂರ್ಣವಾಗಿ ದೂರ ಹೋಗಿಬಿಡು.


ಗೆಳೆಯನಿಗೊಂದು ಪತ್ರ-೩:ನನಗಿದು ಇಪ್ಪತ್ತೆರಡನೆಯ ಹೊಸ ವರ್ಷ


ಹೇಗಿದ್ದೀಯಾ ಹುಡುಗಾ..?
                               ಹೊಸ ವರ್ಷದ ಶುಭಾಶಯಗಳೊಂದಿಗೆ ಸಿಹಿಮುತ್ತುಗಳ ಉಡುಗೊರೆಯನಿತ್ತು ನೀನೆಲ್ಲಿ ಕಳೆದು ಹೋಗಿದ್ದೆ ಎಂದು ಕೇಳುತ್ತಿರುವೆಯಾ..?? ನಿನ್ನನ್ನು ಮರೆತುಬಿಟ್ಟೆನೆಂದು ಬೇಸರಪಟ್ಟುಕೊಂಡೆಯಾ..?? ಇಲ್ಲ ಗೆಳೆಯ, ನಿನ್ನ ಹತ್ತಿರ ಹೇಳಿಕೊಳ್ಳುವ ವಿಷಯಗಳಿದ್ದರೂ ಬರೆಯಬೇಕು ಎಂದುಕೊಂಡರೂ ಬೇರೆ ಹತ್ತು ಹಲವು ಕೆಲಸಗಳಲ್ಲಿ ಮುಳುಗಿ ಹೋಗಿದ್ದರಿಂದ ನಿನ್ನನ್ನು ಮಾತನಾಡಿಸಲಾಗಲಿಲ್ಲ ಅಷ್ಟೇ. ಅದಕ್ಕೇನು, ಈಗ ಮಾತನಾಡೋಣ. ಮತ್ತೆ ಕಾಲೇಜು ಪ್ರಾರಂಭವಾಯಿತಲ್ಲ, ಹೇಗಿದೆ ಈ ಸೆಮಿಸ್ಟರ್..?? ಸಬ್ಜೆಕ್ಟುಗಳೆಲ್ಲಾ ಹೇಗಿವೆ..?? ಇಂಟರೆಸ್ಟಿಂಗ್ ಇವೆಯಾ..?? ಬಿಡು, ನಿನ್ನ ಕಣ್ಣಿಗೆ ಯಾವ ವಿಷಯವೂ ಕೂಡಾ ಬೋರಿಂಗ್ ಅನಿಸುವುದಿಲ್ಲ.
                     ನೋಡುನೋಡುತ್ತಲೇ ವರ್ಷದ ಮೊದಲ ತಿಂಗಳ ತುದಿಗೆ ಬಂದು ನಿಂತಿದ್ದೇವೆ. ಈಗ ಹೊಸ ವರ್ಷ ಎನ್ನುವ ಮಾತು ಹಳೆಯದಾಗಿ ಹೋಗಿದೆ. ಆದರೆ ನನ್ನ ಪಾಲಿಗೆ ಮತ್ತೊಂದು ಹೊಸ ವರ್ಷ ಶುರುವಾಗಿದೆ. ಅರ್ಥವಾಗಲಿಲ್ಲವೇ..?? ಮೊನ್ನೆ ಮೊನ್ನೆಯಷ್ಟೇ ನಾನು ಹುಟ್ಟಿದ ದಿನ ಬಂದು ಹೋಯಿತು. ನಿನಗೆ ಹೇಗೆ ತಾನೆ ನೆನಪಿರುತ್ತದೆ ಹೇಳು..?? ನಿನ್ನ ಶುಭಾಶಯ ಬಾರದಿದ್ದಾಗ ಅದನ್ನು ನಿರೀಕ್ಷಿಸಿರದ ನನಗೆ ಆಶ್ಚರ್ಯವಾಗಲೀ ಬೇಸರವಾಗಲೀ ಆಗಲಿಲ್ಲ. ನೀನು ಕಾಲ್ ಅಥವಾ ಮೆಸೇಜ್ ಮಾಡಿ ವಿಷ್ ಮಾಡಿದಿದ್ದರೆ ನನಗೆ ಹೃದಯಾಘಾತವಾಗುತ್ತಿತ್ತೇನೋ.
           ಆ ವಿಷಯ ಒತ್ತಟ್ಟಿಗಿರಲಿ. ನನ್ನ ಹುಟ್ಟಿದ ಹಬ್ಬದ ದಿನದಿಂದ ನನ್ನ ಬದುಕಿನ ೨೨ನೇ ಹೊಸ ವರ್ಷ ಪ್ರಾರಂಭವಾಗಿದೆ. ೨೧ ವರ್ಷಗಳು ಕಣ್ಣು ರೆಪ್ಪೆ ಮುಚ್ಚಿ ತೆಗೆಯುವಷ್ಟರಲ್ಲಿ ಮುಗಿದುಹೋದಂತೆ ಭಾಸವಾಗುತ್ತಿದೆ. ಬೆನ್ನ ಮೇಲೆ ಬ್ಯಾಗ್ ಹೊತ್ತುಕೊಂಡು ಯೂನಿಫಾರ್ಮ್ ಹಾಕಿಕೊಂಡು ಪುಟ್ಟ ಪುಟ್ಟ ಹೆಜ್ಜೆಗಳನಿಟ್ಟುಕೊಂಡು ೧ನೇ ತರಗತಿಗೆ ಹೋಗಿ ಕೂರುತಿದ್ದ ದಿನಗಳು ಇನ್ನೂ ಕಣ್ಣಮುಂದೆ ನಲಿಯುವಾಗ ಇಷ್ಟು ಬೇಗ ನನಗೆ ೨೧ ತುಂಬಿತಾ ಎಂದು ಅಚ್ಚರಿಪಡುವಂತಾಗುತ್ತದೆ. ನಿನಗೆ ಒಂದು ವಿಷಯ ಹೇಳಲಾ...?? ಹುಟ್ಟಿದ ದಿನವೆಂದರೆ ಎಲ್ಲರಿಗೂ ಸಂತೋಷ, ಸಂಭ್ರಮ. ನನಗೂ ಸಂತಸವಾಗುತ್ತದೆ, ಇಲ್ಲವೆಂದಲ್ಲ. ಆದರೆ ಅದಕ್ಕಿಂತ ಹೆಚ್ಚಾಗಿ ಬೇಸರವಾಗುತ್ತದೆ. ಯಾಕೆಂದು ಕೇಳುವೆಯಾ..?? ವರ್ಷ ವರ್ಷವೂ ಹುಟ್ಟಿದ ದಿನ ಬಂದಾಗ ಆಯಸ್ಸಿನಲ್ಲಿ ಒಂದು ವರ್ಷ ಕಡಿಮೆಯಾಯಿತಲ್ಲ ಎಂದು ಬೇಸರವಾಗುತ್ತದೆ. ಕಳೆದ ಒಂದು ವರ್ಷದಲ್ಲಿ ನಾನು ಏನೇನೆಲ್ಲ ಮಾಡಿದೆ ಎಂದು ಭಾಗಕಾರ ಗುಣಾಕಾರದ ಗಣಿತ ಮಾಡಿ ಕೂಡಿಸಿದ್ದೆಷ್ಟು, ಕಳೆದುಕೊಂಡದ್ದೆಷ್ಟು ಎಂದು ಲೆಕ್ಕ ಹಾಕುವಂತಾಗುತ್ತದೆ. ಅದರ ಫಲಿತಾಂಶದ ಮೇಲೆ ಈ ಹೊಸ ವರ್ಷದಲ್ಲಿ ಏನೇನು ಮಾಡಬೇಕು, ಏನೇನೆಲ್ಲ ಮಾಡಬಾರದು ಎಂದು ನಿರ್ಧರಿಸುವಂತಾಗುತ್ತದೆ. ಇವೆಲ್ಲ ಯೋಚನೆಗಳು ಹುಟ್ಟಿದ ದಿನವೇ ಬರುತ್ತವಲ್ಲದೇ ಉಳಿದಾವ ದಿನಗಳೂ ನನ್ನ ಹತ್ತಿರವೂ ಸುಳಿಯುವುದಿಲ್ಲ. ಹಾಗಾಗಿ ಹುಟ್ಟಿದ ದಿನವೆಂದರೆ ನನ್ನನ್ನು ನಾನೇ ವಿಮರ್ಶಿಸಿಕೊಳ್ಳುವ, ನನ್ನ ಒಳಹೊಕ್ಕು ಅವಲೋಕಿಸುವ ದಿನ. ಆ ಮಟ್ಟಿಗೆ ನನಗೆ ಅತ್ಯಂತ ವಿಶೇಷವಾದ ದಿನ.
             ಈ ೨೨ನೇ ವರ್ಷಕ್ಕೆ ನಾನೇನು ಬಹಳ ದೊಡ್ಡ ಅಜೆಂಡಾ ಹಾಕಿಕೊಂಡಿಲ್ಲ. ಒಂದು ಕ್ಷಣವೂ ಕೂಡ ಮೂಡ್ ಆಫ್ ಮಾಡಿಕೊಳ್ಳದೇ, ಮನಸ್ಸನ್ನು ಸದಾ ಶಾಂತಿ, ಸಂತಸದಿಂದ ಇಟ್ಟುಕೊಂಡು, ನಾನು ನಗುತ್ತಾ ಬೇರೆಯವರನ್ನೂ ನಗಿಸುತ್ತಾ, ನನ್ನದೆಂಬುವ ಕೆಲಸಗಳನ್ನು ಪೂರ್ಣ ಮನಸ್ಸಿನಿಂದ ಮಾಡುವುದಷ್ಟೇ ನನ್ನ ಈ ವರ್ಷದ ಗುರಿ. ಅಂದಹಾಗೆ ಒಂದು ವಿಷಯ ಹೇಳುವುದನ್ನು ಮರೆತೆ. ನಾಲ್ಕು ವರ್ಷಗಳ ನಂತರ ನಾನು ನನ್ನ ಹುಟ್ಟಿದ ದಿನವನ್ನು ನನ್ನ ಮನೆಯವರೊಡನೆ ಕಳೆದೆ. ನಿಜಕ್ಕೂ ಆ ದಿನ ಸಂತಸಮಯವಾಗಿತ್ತು.
            ಓಹ್, ಆಗಲೇ ಎಂಟು ಗಂಟೆಯಾಯಿತು. ಇನ್ನು ತಿಂಡಿ ತಿಂದು ಒಂಭತ್ತು ಗಂಟೆಯ ಕ್ಲಾಸ್ ಗೆ ರೆಡಿ ಆಗಬೇಕು ನಾನು. ಬರಲಾ, ಇನ್ನೊಮ್ಮೆ ಮಾತನಾಡೋಣ. ಶುಭ ಮುಂಜಾನೆ.

                                     ಪ್ರೀತಿಯಿಂದ,
 
                                                                                                                   ಎಂದೆಂದೂ ನಿನ್ನವಳು,
                                                                                                                        ನಿನ್ನೊಲುಮೆTuesday, 28 January 2014

ಸಮಾಧಿಅದೊಂದು ದಿನ ನನ್ನೆದುರು ನಿಂತಿತ್ತು
ಅನಿರೀಕ್ಷಿತವಾಗಿ ಅತಿ ನಾಟಕೀಯವಾಗಿ
ನನ್ನನ್ನು ಅಳಿಸುವಂತೆ ಅಣಕಿಸುವಂತೆ
ನಿನ್ನ ಮೋಹದ ನೆರಳನ್ನು ಹೊದ್ದು
ಸಾವು ಬಡಿದಿತ್ತು ನನ್ನೆದೆಯ ಬಾಗಿಲನ್ನು
ವಿರಹವೆಂಬ ಹೊಸ ರೂಪವ ಧರಿಸಿ

ನೀನು ನನ್ನಿಂದ ಅಗಲಿದ ಕ್ಷಣದಿಂದ
ಹೊಂಚು ಹಾಕಿ ಕಾಯುತಿತ್ತು ಸಮಯಕಾಗಿ
ಇದೀಗ ಬಂದಿದೆ ಕರೆಯದ ಅತಿಥಿಯಂತೆ
ನಿನ್ನ ಮೇಲಿನ ನನ್ನ ಪ್ರೀತಿಯನ್ನು ಕೊಂಡೊಯ್ಯಲು
ನನ್ನ ಹೃದಯದ ಪ್ರೇಮ ಮಂದಿರದಿಂದ
ದೂರದ ಪರಲೋಕದ ಅರಮನೆಗೆ

ನಾ ಕೇಳಿದೆನದಕೆ ನೀ ಯಾರೆಂದು
"ನನ್ನ ಪ್ರೀತಿಯ ನನ್ನಿಂದ ಹೊತ್ತೊಯ್ಯಲು,
ಇತ್ತು ಕಳಿಸಿದವರಾರು ನಿನಗೆ ಆಜ್ಞೆಯನ್ನು"
ಬೆರಳು ತೋರಿಸಿತು ಅದು ನನ್ನತ್ತಲೇ
ನೀನಿಲ್ಲದೇ ಬರಡಾಗಿರುವ ನನ್ನ ಮನದಂಗಳದತ್ತ
ಬೆಳಕಿಲ್ಲದೆ ಕತ್ತಲಾಗಿರುವ ಭಾವರಂಗದತ್ತ

ನೀನಿಲ್ಲದಿದ್ದರೇನು ನನ್ನ ಜೊತೆಯಲ್ಲಿ?
ನನ್ನ ಪ್ರೀತಿಯು ಯಾವತ್ತೂ ನನ್ನದೇ ಸ್ವತ್ತು
ಅದರ ಮೇಲಿದೆ ಕೇವಲ ನನ್ನ ಹಕ್ಕು
ನಿನ್ನ ಅಗಲಿಕೆ ಕಸಿಯಬಹುದು ನಗುವನ್ನು
ಆದರೆ ನನ್ನ ಪ್ರೀತಿಯನ್ನಲ್ಲ
ಇಂದು ಮುಂದು ಎಂದೂ ಅದು ನನ್ನದೇ

ನಿನ್ನ ವಿರಹವೆಂಬ ಈ ಸಾವು
ಕೊಲ್ಲಬಹುದು ನನ್ನನ್ನು ನನ್ನ ನೆನಪುಗಳನ್ನು
ನಿನ್ನೊಂದಿಗೆ ಕಳೆದ ಮಧುರ ಕ್ಷಣಗಳನ್ನು
ಆದರೆ ಸೋಕಲಾರದು ನನ್ನ ಪ್ರೀತಿಯ
ಮಾಡಬಹುದು ನನ್ನನ್ನು ಹುಡಿ ಬೂದಿ
ಕಟ್ಟಲಾರದೆಂದು ನನ್ನ ಪ್ರೀತಿಯ ಸಮಾಧಿ


ಬಸಿರು

            
ಭಾವಗಳು ರಾಗಗಳ ರೂಪತಾಳಿ
ರಾಗಗಳ ರೂಪಕ್ಕೆ ಧ್ವನಿಗಳ ಬಣ್ಣ ಹಚ್ಚಿ
ಜೊತೆಯಲ್ಲಿ ಪದಗಳ ಕುಂಚ ಕೈಯಡಿಸಿದಾಗ
ಮಾತುಗಳ ಚಿತ್ರ ಮೂಡಿ
ಬೆಚ್ಚಗೆ ಅಡಗಿ ಕೂರುವುದು
ಮನದ ಒಡಲಾಳದ ಗರ್ಭದಲ್ಲಿ

ಹೊತ್ತು ತಿರುಗಿದಷ್ಟೂ ಬಳಲಿಕೆ
ತೆಪ್ಪಗೆ ಕುಳಿತರೂ ತಪ್ಪದು ನೋವು
ತಾ ಹೊರಗೆ ಬರುವನೆಂದು
ಒಳಗಿನಿಂದ ಒದೆಯುವಾಗ ಯೋಚನೆಗಳ ಕಂದ
ತಡೆಯಲಿ ಹೇಗೆ ಬರವಣಿಗೆಯ ಹೆರಿಗೆಯ
ಗರ್ಭಪಾತವಾಗಬಾರದಲ್ಲ ಕೊನೆಗೆ

ಒಳಗಿದ್ದಷ್ಟೂ ಚಡಪಡಿಕೆ, ತೊಳಲಾಟ
ಹೊರಹಾಕಿದ ಮರುಕ್ಷಣವೇ ನಿಟ್ಟುಸಿರ ಬಿಸಿಯು
ಅವ್ಯಕ್ತ ಸಂತೃಪ್ತಿಯು ಮಗುವು ನಕ್ಕಾಗ
ತಾಯಿಯ ಗರ್ಭವದು ಬರಹಗಾರ್ತಿಯ ಮನಸು
ಲೇಖನಿಯಲ್ಲಿ ಇಳಿಸದೇ ಹೋದರೆ
ಕಟ್ಟುವುದು ಯೋಚನೆಗಳ ಬಸಿರು


Monday, 27 January 2014

ಅನ್ವೇಷಣ


ಯಾವುದೀ ಹೊಸ ಅಲೆ
ಎದ್ದಿಹುದು ಈಗ ತಾನೇ ನವಜಾತ ಶಿಶುವಿನಂತೆ
ಆದರೂ ಆಗಲೇ ತೊದಲು ನುಡಿಯುವಂತಿದೆ
ಅಸ್ಪಷ್ಟ ರಾಗಗಳಷ್ಟೇ, ಮಾತುಗಳಿಲ್ಲ
ಬಣ್ಣ ತಳೆಯಲು ಹೊರಟಿದೆ ಆಕಾರವಿಲ್ಲದೆ
ಮನೆಕಟ್ಟಲು ಹೊರಡುವುದೋ ಏನೋ
ಭದ್ರವಾದ ಅಡಿಪಾಯದ ಬಗ್ಗೆ ಚಿಂತಿಸದೆ

ಸುರುಳಿ ಸುರುಳಿಯಾಗಿ ಸುತ್ತುತ್ತ ಮೇಲೇಳುತಿಹುದು
ಯೋಚನೆಯ ಗಾಳಿ ಸೋಕುವಷ್ಟರಲ್ಲೇ
ಮಿಂಚಿನಂತೆ ಮಾಯವಾಗಿ ಮರುಳಾಗಿಸುವುದು
ಮತ್ತೆ ಮೇಲೇಳುತ್ತ ಮುಳುಗಿಸುವುದು ನನ್ನನ್ನೇ
ಅನಿರ್ದಿಷ್ಟವೆಂಬ ಬಯಕೆಗಳ ಸರಪಳಿಯಲ್ಲಿ
ಅನಿಶ್ಚಿತವಾದ ಭಾವಗಳ ಮಡುವಿನ ಆಳಕ್ಕೆ

ದಾರ ಹರಿದು ಹೋದರೂ ಹೋಗಿಲ್ಲ
ಪಟವ ಹಾರಿಸುವ ಕನಸು
ಆಗಸದೆತ್ತರಕೆ ಹಾರಿ ದೂರ ಸಾಗುವ
ಹುಚ್ಚು ಆಸೆಯಲ್ಲಿ ಮರೆತಿದೆ ಮನಸು
ತನ್ನ ಸುತ್ತಲೂ ಬಿಗಿದಿಹ ನೂರಾರು ಪಾಶಗಳನ್ನು
ಒಂದೊಂದು ಪಾಶದಲ್ಲಿರುವ ಸಾವಿರಾರು ಎಳೆಗಳನ್ನು


ಸ್ವಾರ್ಥಿ ನಾನುತುದಿಮೊದಲಿಲ್ಲದ ಈ ಭಾವದ ಪ್ರವಾಹಕೆ
ಮೋಹವೆಂಬ ಹೆಸರಿಟ್ಟು ತೇಲಿ ಬಿಟ್ಟು
ನಾನೂ ಜೊತೆಯಾಗಿ ತೇಲಿ ನೋಡಿದೆನಲ್ಲ
ನಾ ತೇಲಿದರೂ ತಾ ತೇಲಲೊಲ್ಲದು
ಕಟ್ಟಿಹಾಕಬೇಕೆನ್ನುವುದು ಪ್ರೀತಿಯೆಂಬ ಬೇಲಿಯಲ್ಲಿ
ನನ್ನೊಳಗಿನ ನಿನ್ನೊಲವಿನ ಸ್ವಾರ್ಥ

ಇದಾವ ಪರಿಯ ಹೊಸ ಸ್ವಾರ್ಥವೋ ನಾ ಕಾಣೆ
ನಿನ್ನ ಪ್ರೀತಿಯ ಪರವಶತೆಯಲ್ಲಿ
ತಾನು ನಕ್ಕು ನನ್ನನ್ನು ಅಳಿಸುವುದು
ತಾನು ಅರಳುತ್ತಲೇ ನನ್ನನ್ನು ಮುದುಡಿಸುವುದು
ನಾನು ನಿಂತಲ್ಲೇ ಇದ್ದರೂ ತಾನು ಮಾತ್ರ ಚಲಿಸುವುದು
ಕೆಲವೊಮ್ಮೆ ನನ್ನ ಜೊತೆಯಾಗಿ ಹೆಜ್ಜೆ ಹಾಕುತ್ತ
ನಿನ್ನ ವಿರಹದ ನೆರಳಾಗಿ ಪ್ರೇಮದ ಬಿಂಬವಾಗಿ

ನಿನ್ನ ಪ್ರೀತಿಯ ಬೆಳಕಿನಲ್ಲಿ ನನ್ನನ್ನು ಕುರುಡಾಗಿಸಿ
ನಿನ್ನೊಲವಿನ ರಾಗದಲ್ಲಿ ನನ್ನನ್ನು ಕಿವುಡಾಗಿಸಿ
ನಿನ್ನ ಗುಂಗಿನ ಮಾಯೆಯಲ್ಲಿ ನನ್ನನ್ನು ಮರೆಸುತ
ನೂಕಿದೆ ನನ್ನನ್ನು ಗೊಂದಲದ ಗೂಡಿಗೆ
ಇಹ ಜಗತ್ತಿನ ಪರರ ಪಾಲಿಗೆ ನಾ ನಿರ್ಜೀವವಾಗಿಹೆನೆ?
ಅಥವಾ ನಿನ್ನ ಮೇಲಿನ ಸ್ವಾರ್ಥದಲ್ಲಿ ಮುಳುಗಿ
ಸಕಲ ಜಗತ್ತೇ ನನಗೆ ನಿರ್ಜೀವವೆನಿಸುತಿದೆಯೇ?

ಒಂದು ಕ್ಷಣವೂ ನನ್ನ ಬಿಟ್ಟು ಅಗಲದು
ಸದಾ ನೀ ನನ್ನ ಕಣ್ಣುಗಳನ್ನೇ ನೋಡಬೇಕೆಂಬ
ಸದಾ ನೀ ನನ್ನ ಮಾತನ್ನೇ ಕೇಳಬೇಕೆಂಬ
ಸದಾ ನೀ ನನ್ನನ್ನೇ ಮುದ್ದಿಸಬೇಕೆಂಬ
ಸದಾ ನನ್ನ ಜೊತೆಯಲ್ಲಿರಬೇಕೆಂಬ ಸ್ವಾರ್ಥ
ಅಂಟು ರೋಗದಂತೆ ನಿನ್ನ ಮೇಲಿನ ಸ್ವಾರ್ಥ
ನಾ ಅದನ್ನ ಬಿಟ್ಟರೂ ತಾ ಬಿಡದು

ಇದ್ಯಾವ ಜನ್ಮದ ನಂಟೋ ಏನೋ ತಿಳಿಯೆ
ನನಗೂ, ನಿನಗೂ ಈ ಸ್ವಾರ್ಥಕೂ
ಪ್ರತ್ಯಕ್ಷವಲ್ಲದಿದ್ದರೂ ಪರೋಕ್ಷವಾದ ಬಂಧನ
ಇರಬಹುದು ಹೀಗೆ ಎಂದೆಂದೂ ಕೊನೆಯಾಗದೇ
ಮುಂದೊಂದು ದಿನ ಹಾಗೊಮ್ಮೆ ಆಗುವ ತನಕ
ಪ್ರೀತಿಯೂ ಮೋಹದಂತೆ ತೇಲಲು ಶುರುವಾದರೆ


Friday, 24 January 2014

ಮಾತಿಗೆ ಮುನ್ನ..ಮಾತೆಂದರೆ ಕೇವಲ ಪದಪುಂಜಗಳಲ್ಲ
ಭಾವಗಳೇ ಕಲ್ಪನೆ ಮಾತುಗಳೇ ಆಕಾರವು
ತಿಳಿನೀರ ಕೊಳದಲ್ಲಿ ಮೀನು ಈಜಾಡುವಂತೆ
ಆಗಸದ ಬಾನಲ್ಲಿ ಹಕ್ಕಿ ಗರಿಗೆದರಿ ಹಾರುವಂತೆ
ಭಾವಗಳ ನರ್ತನಕ್ಕೆ ಮಾತೇ ವೇದಿಕೆಯು

ಬರಲಾರದು ನಿಜಮಾತುಗಳು ಹೊರಗೆ
ಹೃದಯದೊಳಗೆ ಭಾವಗಳು ಮೂಡದೇ
ಹಾಳುಹರಟೆಯಲ್ಲೂ ಇರುವವು ಮಾತುಗಳು
ಹಸಿರಿಲ್ಲದ ಪ್ರಕೃತಿಯಂತೆ ಕೃತಕವಾದವು
ಬಣ್ಣ ವೇಷ ಧರಿಸಿ ಕುಣಿಯುವ ವೇಷಗಾರನಂತೆ

ಮಾತುಗಳಾಗುವವು ನವಬಂಧನಕೆ ಬೆಸುಗೆ
ಸ್ನೇಹ, ಪ್ರೀತಿಯ ಬಂಧಕೆ ಮಾತೇ ಬುನಾದಿಯು
ಮಾತು ಮರೆತರೆ ಅರ್ಥವಿಲ್ಲ ಬಂಧಗಳಿಗೆ
ಮಾತುಗಳೆಂದರೆ ನಮ್ಮ ವ್ಯಕ್ತಿತ್ವಕೆ ಕನ್ನಡಿಯು
ಮನಸಿನ ನಿಜಬಿಂಬವು ಮೂಡುವುದು ಮಾತುಗಳಲ್ಲಿ

ಬೇರೆಯವರೊಂದಿಗೆ ಮಾತಿಗೆ ಮುನ್ನ
ಮರೆಯದೇ ನೆನಪಿರಲಿ ನಮಗೆ ಸದಾ
ಮಾತುಗಳಾಗದಿರಲಿ ಗಾಳಿಗೆ ಹಾರುವ ತರಗೆಲೆಗಳಂತೆ
ಕೊಟ್ಟ ಮಾತು ಇಟ್ಟ ನಂಬಿಕೆಗೆ ಸಾಕ್ಷಿ
ಉಳಿಸಿಕೊಳ್ಳುವುದು ಆಡಿದವನ ಧರ್ಮThursday, 16 January 2014

ಹೊಸ ಚಿಗುರು ಹಳೆ ಬೇರುಮತ್ತೆ ಕೇಳಿದೆ ಹೃದಯದ ಮಂದಿರದಲ್ಲಿ
ಅದೇ ಹಾಡು ಹೊಸ ರಾಗ ತಾಳದ ಜೊತೆ
ಹೊಸ ವರ್ಷದ ಶುಭಾರಂಭವಾಗಿ
ಹಳೆಯ ಬೇರಿನಲ್ಲಿ ಹೊಸ ಕುಡಿಯ ಚಿಗುರು

ಹಳೆಯ ಕನಸುಗಳು ಹೊಸ ರೂಪ ತಾಳಿ
ನಲಿದಾಡುತಿವೆ ಮನದ ಅಂಗಳದಲ್ಲಿ
ಬೆಚ್ಚಗೆ ಮಲಗಿದ್ದ ಉಲ್ಲಾಸದ ಹಕ್ಕಿಯು
ಗರಿಗೆದರಿ ನಿಂತಿದೆ ಇಂದು ಮೈಕೊಡವಿ

ಇದ್ಯಾವ ಹೊಸ ಮಾಯೆಯೋ ನನ್ನೊಳಗೆ
ಹಳೆ ನೆನಪುಗಳ ಹೊಸ ಛಾಯೆ
ಕ್ಷಣಕ್ಷಣವೂ ಬದಲಾಗುತಿದೆ ಭಾವನೆಗಳ ಬಣ್ಣ
ಕ್ಷಣಿಕವೋ ಎಂಬಂತಿದೆ ಈ ಮೌನ

ಎಂದೋ ಬಾಡಿಹೋಗಿದ್ದ ಕಾಂತಿಯ ಕುಸುಮ
ಅರಳಿದೆ ಮತ್ತೆ ವದನದ ತೋಟದಲ್ಲಿ
ಕಗ್ಗತ್ತಲ ಮೋಡಗಳು ಜೊತೆಯಾಗಿ ಈಗ
ಹರ್ಷದ ವರ್ಷವನ್ನು ಸುರಿಸುವ ಸಮಯ

ಇದು ಎಲ್ಲಿಯವರೆಗಿನ ಲಹರಿಯೋ ನಾನರಿಯೆ
ಹಿತವೆನಿಸಿದೆ ಈ ಚಿತ್ತಕೆ ಅದು ನಿಜವೇ
ಆಶಾದೀಪವಾಗಿ ಹೊತ್ತಿಕೊಂಡಿರುವ ಕಿಡಿಯು
ಸಂತಸದ ಕಿರಣಗಳಾಗಿ ಬೀರಲಿ ತನ್ನ ಪ್ರಭೆಯ


Wednesday, 8 January 2014

ಗೆಳೆಯನಿಗೊಂದು ಪತ್ರ-೨: ಹೊಸವರ್ಷದ ಶುಭಾಶಯಗಳು


ಓಯ್,
                      ಹೊಸವರ್ಷದ ಶುಭಾಶಯಗಳು ಕಣೋ. ಏನು, ಸೆಲೆಬ್ರೇಷನ್ಸ್ ಜೋರಾಗಿಯೇ ನಡೆದಿರಬೇಕಲ್ವಾ..?? ನಾನಂತೂ ೫ ವರ್ಷಗಳ ನಂತರ ಮನೆಯಲ್ಲಿ ಹೊಸ ವರ್ಷವನ್ನು ಆಚರಿಸುತ್ತಿದ್ದೇನೆ. ನಿಜಕ್ಕೂ ಬಹಳವೇ ಖುಶಿಯಾಗುತ್ತಿದೆ ಗೊತ್ತಾ..??
                       ನಾನು ನಿನಗೆ ಒಂದು ವಿಷಯವನ್ನು ಹೇಳಬೇಕು. ನಾನು ಹೊಸವರ್ಷದಲ್ಲಿ ಒಂದು ಹೊಸ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಅದೇನೆಂದರೆ ನಾನು ಇನ್ನು ಮುಂದೆ ಸಿಟ್ಟು, ಬೇಸರಗಳಿಗೆ ನನ್ನ ಮನಸಲ್ಲಿ ಸ್ಥಾನ ನೀಡುವುದಿಲ್ಲವೆಂದು. ನಿನಗೆ ಸಿಟ್ಟು ಬರದೇ ಇನ್ಯಾರಿಗೆ ಬರಬೇಕು ಹುಡುಗಿ ಎಂದು ಕೇಳುತ್ತಿದ್ದೀಯಾ...?? ಹೌದು, ನಾನು ಸ್ವಲ್ಪ ಮುಂಗೋಪಿಯೇ. ಆದರೆ ಇನ್ನು ಮುಂದೆ ಯಾರ ಮೇಲೂ ಯಾವ ವಿಷಯದ ಸಲುವಾಗಿಯೂ ಕೋಪ ಮಾಡಿಕೊಳ್ಳಬರದೆಂದು ತೀರ್ಮಾನ ತೆಗೆದುಕೊಂಡಿದ್ದೇನೆ. ಅದರಲ್ಲಂತೂ ನಿನ್ನ ಜೊತೆ ಜಗಳವನ್ನೇ ಆಡುವುದಿಲ್ಲ, ಬೇಸರವನ್ನೂ ಮಾಡಿಕೊಳ್ಳುವುದಿಲ್ಲ. ಯಾಕೆ ಗೊತ್ತೆ..?? ೨೦೧೩ ನಲ್ಲಿ ನಿನ್ನೊಂದಿಗೆ ಕಳೆದ ಕ್ಷಣಗಳನ್ನು ನೆನಪು ಮಾಡಿಕೊಂಡರೆ ಬರೀ ಜಗಳಗಳೇ ಕಣ್ಣುಮುಂದೆ ಬರುತ್ತವೆ. ನಿನ್ನ ಜೊತೆ ಸಾವಧಾನದಿಂದ ಮಾತನಾಡಿದ ಕ್ಷಣಗಳೂ ಕಡಿಮೆಯೇ. ಮತ್ತೆ ೨೦೧೪ ಸಹ ಹೀಗೆ ಜಗಳ, ಬೇಸರಗಳಲ್ಲಿ ಕಳೆದು ಹೋಗಬಾರದಲ್ಲವಾ..?? ನೀನೊಬ್ಬನೇ ಅಲ್ಲ, ಎಲ್ಲರ ಜೊತೆಗೂ ಹೊಸವರ್ಷದ ಪ್ರತಿ ಕ್ಷಣವೂ ಸಂತಸದಿಂದ ಕಳೆದು ಹೋಗುವಂತಾಗಲಿ ಎಂದು ಈ ನಿರ್ಧಾರ.
                     ಇನ್ನೊಂದು ವಿಷಯವಿದೆ. ಇಷ್ಟು ದಿನವಂತೂ ಸುಮ್ಮನೇ ಕಾಲಹರಣ ಮಾಡಿದ್ದಾಯಿತು. ಇನ್ನಾದರೂ ಸ್ವಲ್ಪ ಗಂಭೀರವಾಗಿ ಕೆಲವು ವಿಷಯಗಳತ್ತ ಗಮನ ಹರಿಸೋಣ ಎಂದು ದೃಢ ಸಂಕಲ್ಪ ಮಾಡಿದ್ದೇನೆ. ನನ್ನ ಓದು, ಹವ್ಯಾಸಗಳನ್ನು ಸ್ವಲ್ಪ ಗಂಭೀರವಾಗಿ ತೆಗೆದುಕೊಂಡರೆ ನನಗೆ ಬಹಳ ಉಪಯೋಗವಾಗಬಲ್ಲವೆಂಬ ಅರಿವು ಮೂಡಿದೆ. ಈಗಲಾದರೂ ಬುದ್ಧಿ ಬಂತೆ ಎಂದು ಹಂಗಿಸಬೇಡ. ಅಂತು ಇಂತು ನಿನಗೂ ಬುದ್ಧಿ ಬಂತು ಎಂದು ಸಂತಸಪಡು. ಏನು ಮಾಡಲಿ...? ನಾನು ನಿನ್ನಷ್ಟು ಜಾಣಳಲ್ಲ. ಎಲ್ಲವೂ ತಡವಾಗಿಯೇ ಅರ್ಥವಾಗುವುದು.
                 ನೋಡು, ರೂಮಿನಲ್ಲಿ ಲೈಟ್ ಆಫ್ ಮಾಡಿ ಪುಟ್ಟದಾದ ಕ್ಯಾಂಡಲ್ ಒಂದನ್ನು ಮಾತ್ರವೇ ಹಚ್ಚಿಕೊಂಡು ಕುಳಿತಿದ್ದೇನೆ. ಅದನ್ನು ನೋಡುತ್ತ ಕುಳಿತಿದ್ದರೆ ಮನಸ್ಸಿಗೆ ಏನೋ ಒಂದು ಬಗೆಯ ಸಂತಸವಾಗುತ್ತದೆ. ಹೊಸವರ್ಷವೂ ಸಹ ಮಂದದ ಬೆಳಕಾಗಿದ್ದರೂ ಪರವಾಗಿಲ್ಲ, ಕಿಚ್ಚಿನಂತೆ ಸುಡದಿರಲಿ ಎಂದು ಬಯಸುತ್ತೇನೆ. ಮತ್ತೇನು ಅನಿಸುತ್ತಿದೆ ಗೊತ್ತೆ ಗೆಳೆಯಾ..?? ಕ್ಯಾಂಡಲ್ ಹೇಗೆ ತನ್ನನ್ನು ತಾನು ಸುಡುತ್ತ ಸುತ್ತಲಿನ ಪ್ರಪಂಚಕ್ಕೆ ಬೆಳಕು ನೀಡುತ್ತದೆ. ಅದರ ೫ ಪ್ರತಿಶತದಷ್ಟಾದರೂ ನನ್ನ ಕೆಲಸಗಳು ಪರರಿಗೆ ಉಪಕಾರಿಯಾಗಲಿ ಎನ್ನುವ ಆಸೆ ನನಗೆ. ಹೊಸವರ್ಷದಲ್ಲಿ ಈ ಕನಸನ್ನು ನನಸು ಮಾಡಬೇಕು.  ಆಲ್ ದ ಬೆಸ್ಟ್ ಹೇಳುವುದಿಲ್ಲವಾ..??
                ಗಂಟೆ ಆಗಲೇ ಎರಡಾಯಿತು. ಇನ್ನು ಮಲಗಬೇಕು. ಛೇ, ಮರೆತೆಬಿಟ್ಟೆ. ಹೊಸವರ್ಷದ ಉಡುಗೊರೆ ಬೇಡವಾ ನಿನಗೆ..?? ಏನು ಕೊಡಲಿ..?? ನೀನು ಹೇಳುವುದು ಬೇಡ, ನಾನೇ ಕೊಡುತ್ತೇನೆ. ಏನು ಗೊತ್ತೆ..?? ನನ್ನ ಸಿಹಿಮುತ್ತುಗಳು. ಯಾಕೆ..?? ನಿರಾಶೆಯಾಯಿತೆ...?? ಬೇರೇನನ್ನು ನಿರೀಕ್ಷಿಸಿದ್ದೆ..?? ನಿನ್ನ ಈ ಬಡ ಹುಡುಗಿಯ ಹತ್ತಿರ ಬೇರೇನು ದೊರಕದೆಂದು ಗೊತ್ತಿಲ್ಲವೇನು ನಿನಗೆ..??
              ನೀನು ಕೂಡ ಬೇಗನೇ ಮಲಗಿಕೊ. ಸಿಹಿಮುತ್ತುಗಳೊಂದಿಗೆ ಶುಭರಾತ್ರಿ.
             
                                                              ಪ್ರೀತಿಯಿಂದ,

                                                                                                                              ಎಂದೆಂದೂ  ನಿನ್ನವಳು,                                            
                                                                                                                                      ನಿನ್ನೊಲುಮೆ

ಗೆಳೆಯನಿಗೊಂದು ಪತ್ರ-೧: ನಾನೇಕೆ ಬರೆಯುತ್ತೇನೆ..??


ಹಾಯ್,
             ಹೇಗಿದ್ದೀಯಾ..?? ಪರೀಕ್ಷೆಗಳೆಲ್ಲ ಹೇಗಾದವು..?? ನೀನು ಚೆನ್ನಾಗಿಯೇ ಮಾಡಿರುತ್ತೀಯಾ ಎನ್ನುವುದು ನನಗೆ ಗೊತ್ತಿರುವ ವಿಷಯವೇ. ಆದರೂ ಸುಮ್ಮನೆ ಕೇಳಿದೆನಷ್ಟೆ. ಮತ್ತೆ, ರಜಾದಿನಗಳೆಲ್ಲ ಹೇಗೆ ಸಾಗುತ್ತಿವೆ..?? ಸ್ನೇಹಿತರೊಂದಿಗೆ ಸೇರಿ ಬಹಳ ಮಜಾ ಮಾಡುತ್ತಿರಬೇಕಲ್ಲವೇ..??
          ಇದೇನು ಮೆಸೇಜ್ ಮಾಡಿ ತಲೆ ತಿನ್ನುವುದು ಸಾಲದೆಂದು ಈಗ ಪತ್ರದ ಮೂಲಕವೂ ತಲೆ ಬಿಸಿ ಮಾಡಲು ಹೊರಟಿದ್ದೀಯಾ ಎಂದು ಕೇಳುವೆಯಾ...?? ನೀನೇನು ಚಿಂತಿಸಬೇಡ. ನಿನಗೆ ಇನ್ನು ಮುಂದೆ ಯಾವ ರೀತಿಯ ತಲೆಬಿಸಿ ಮಾಡಬಾರದೆಂದೇ ನಾನೀಗ ಹೊಸದಾಗಿ ಈ ಪತ್ರ ಬರೆಯಲು ಹೊರಟಿರುವುದು. ಏನು ಮಾಡಲಿ ಗೆಳೆಯಾ...?? ನಿನ್ನ ಹತ್ತಿರ ಎಷ್ಟೋ ವಿಷಯಗಳನ್ನು ಹೇಳಬೇಕೆನಿಸುತ್ತದೆ. ಆದರೆ ನೀನು ಮಾತ್ರ ಕೇಳಲೊಲ್ಲೆ. ಮೌನ ಧರಿಸಿ ಕೂತುಬಿಟ್ಟಿದ್ದೀಯೆ. ಹಾಗಂತ ನಾನು ಸುಮ್ಮನೆ ಕೂರಲೇ..?? ಬೇರೆಯವರ ಹತ್ತಿರ ಹೇಳಿಕೊ ಎಂದು ನೀನು ಹೇಳಬಹುದು. ಯಾರ ಹತ್ತಿರ ಹೇಳಿಕೊಂಡರೂ ನಿನ್ನ ಹತ್ತಿರ ಹೇಳಿದ ಹಾಗಾಗುವುದೇ...?? ಇನ್ನು ಹೇಳದೇ ಮನಸಿನಲ್ಲಿಯೇ ಹೇಗೆ ಬಚ್ಚಿಡಲಿ...?? ನನ್ನ ಮೈಮನಗಳ ತುಂಬೆಲ್ಲಾ ನಿನ್ನ ಮೇಲಿನ ಪ್ರೀತಿಯೇ ತುಂಬಿಕೊಂಡಿದೆ. ಇನ್ನು ಇವುಗಳನ್ನು ಬಚ್ಚಿಡಲು ಜಾಗವಾದರೂ ಎಲ್ಲಿದೆ..??
         ನೀನೇನು ಭಯಪಡಬೇಡ. ಈ ಪತ್ರಗಳನ್ನು ನೀನು ಓದಬೇಕಿಲ್ಲ. ಮರಳಿ ಉತ್ತರಿಸಬೇಕಾದ ಅಗತ್ಯವಂತೂ ಇಲ್ಲವೇ ಇಲ್ಲ. ನನಗೆ ನಿನ್ನ ಹತ್ತಿರ ಹೇಳಬೇಕೆನಿಸಿದ ವಿಷಯಗಳನ್ನು ನಾನು ಈ ಪತ್ರಗಳಲ್ಲಿ ಬರೆದು ಸುಮ್ಮನೆ ನನ್ನ ‘ಮನಸಿನ ಪುಟಗಳಲ್ಲಿ’ ಅಚ್ಚು ಹಾಕಿಸುತ್ತೇನಷ್ಟೆ. ಮೊನ್ನೆ ಮೊನ್ನೆಯಷ್ಟೇ ನಮ್ಮನ್ನೆಲ್ಲಾ ಅಗಲಿದ ರಾಷ್ಟ್ರಕವಿ ಜಿ. ಎಸ್. ಎಸ್. ಹಾಡಿದ್ದಾರಲ್ಲಾ, "ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ..." ಎಂದು. ಹಾಗೆಯೇ ನೀನು ಓದಬೇಕೆನ್ನುವ ಉದ್ದೇಶದಿಂದ ನಾನು ಬರೆಯುವುದಿಲ್ಲ. ಬಾಯಿಮಾತಿನ ಮೂಲಕ ಹೇಳಲಾಗದ ವಿಷಯಗಳನ್ನು ಕೈಯ್ಯಲ್ಲಿನ ಲೇಖನಿಯ ಮೂಲಕವಾದರೂ ಬರೆದು ಹೇಳಿದರೆ ಮನಸ್ಸಿಗೆ ಏನೋ ಒಂದು ಬಗೆಯ ನೆಮ್ಮದಿ.
       ಆಯಿತು, ಇವತ್ತಿಗೆ ಹೇಳಬೇಕೆಂದುಕೊಂಡದ್ದು ಮುಗಿಯಿತು. ನಾನು ಮತ್ತೆ ಯಾವಾಗಲಾದರೂ ಸಿಗುತ್ತೇನೆ. ಕೊರೆಯುತ್ತೇನೆ ಎಂದರೆ ಸರಿಯಾದೀತೇನೋ ಅಲ್ಲವಾ..??

                                ಪ್ರೀತಿಯಿಂದ,
                                                                                                                            ಎಂದೆಂದೂ ನಿನ್ನವಳು,
                                                                                                                                    ನಿನ್ನೊಲುಮೆ


ಅಲೆಮಾರಿ


ಮತ್ತೆ ಹೊರಟಿದೆ ಈ ಮನಸು
ಹಳೆಯ ಬಿಡಾರವ ಬಿಟ್ಟು
ಬೇರೊಂದು ಹೊಸ ಡೇರೆಯ ಹುಡುಕುತ್ತ
ತನ್ನ ಅಲೆಮಾರಿ ವೇಷವ ತೊಟ್ಟು

ಎಲ್ಲೆಲ್ಲಿ ಅಲೆಯಿತೋ ಹೇಳುವುದಕ್ಕಿಲ್ಲ
ಎಷ್ಟು ಊರುಗಳ ಸುತ್ತಿ ಬಂದಿತೋ
ಯಾರ್‍ಯಾರ ಮನೆಯ ಮುಂದೆ ನಿಂತು
ಎಷ್ಟು ಹೃದಯದ ಕದ ತಟ್ಟಿತೋ

ಬೆಚ್ಚಗೆ ಹೋಗಿ ಕೂರುವುದು ತಾನಾಗಿಯೇ
ಪರರ ಎದೆಯ ಮಂದಿರದಲ್ಲಿ ಅಚ್ಚಿನಂತೆ
ಮುಚ್ಚಟೆಯ ಹೊದಿಕೆ ಬೀಳುವ ಹೊತ್ತಿಗೆ
ಓಡಿ ಹೊರಬರುವುದು ಕಳ್ಳನಂತೆ

ಸಾಗುತ್ತಲೇ ಇದೆ ಈ  ಪಯಣ
ತುದಿ ಮೊದಲುಗಳ ಪರಿವೆಯಿಲ್ಲ
ಶಾಶ್ವತ ನೆಲೆ ಕಾಣದೇ ಅಲೆದಾಡುತಿಹುದು
ಕಳೆದುಹೋದರೂ ಕೇಳುವವರಿಲ್ಲ