Tuesday, 25 November 2014

ಕ್ಷಮಿಸುವುದೇ..??ತನ್ನ ಮೌನದಿಂದ ನನ್ನ ಮಾತನ್ನು
ತನ್ನ ಗೈರಿನಿಂದ ನನ್ನ ಹಾಜರಿಯನ್ನು
ತನ್ನದೆಲ್ಲದರಿಂದ ನನ್ನದೆಲ್ಲವನ್ನೂ
ಸದ್ದಿಲ್ಲದೇ ಕದ್ದೊಯ್ದ ಅವ
ನನ್ನೊಬ್ಬಳನ್ನೇ ಬಿಟ್ಟು ಹೋದನೇಕೆ..??

ರೆಪ್ಪೆ ತೆರೆಯುವ ಮುನ್ನವೇ ಕಣ್ಣಿಗೆ
ಕನಸುಗಳ ಬಣ್ಣ ಹಚ್ಚಿ
ಬಯಕೆಗಳಿಗೆ ರೆಕ್ಕೆ ತೊಡಿಸಿದಾತ
ಇದೀಗ ನೆನಪುಗಳ ಗೂಡಿನೊಳಗೆ
ನನ್ನನ್ನು ಬಂಧಿ ಮಾಡಿದನೇಕೆ..??

ಸದಾ ನನಗೆ ತನ್ನ ಸಂಗಾತದ
ಆಣೆ ಪ್ರಮಾಣಗಳನಿತ್ತು ಕೊನೆಯಲ್ಲಿ
ಏಕಾಂತ ಮಾತ್ರವೊಂದನ್ನೇ ಜೊತೆಯಾಗಿಸಿ
ಹಿಂತಿರುಗಿಯೂ ನೋಡದೇ ಹೋದನೇಕೆ..??
ನನ್ನ ನೆನಪೂ ಕಾಡದೇ ಸುಮ್ಮನಿತ್ತೇ..??

ಅವ ಮರಳಿ ಬರುವನೇ ಗೆಳತಿ..??
ನನಗಾಗಿ, ನನ್ನ ಪ್ರೀತಿಗಾಗಿ
ಬಾಡಿ ಹೋದ ಸುಮದಿಂದ ತಿರುಗಿ
ಸಹಜ ಸೌರಭವು ಹೊಮ್ಮುವುದೇ..??
ಚೂರಾದ ಹೃದಯ ಅವನ ಕ್ಷಮಿಸಬಲ್ಲುದೇ..??


ಡೈರಿ - ಪುಟ ೬೬


                                 "ನಾಳೆಯ ಲ್ಯಾಬ್ ಎಕ್ಸಾಮ್ ಕಣೇ. ಇದೊಂದು ಎಕ್ಸ್ ಪೆರಿಮೆಂಟ್ ಹೇಗೆ ಮಾಡೋದು ಅಂತಾನೇ ಗೊತ್ತಿಲ್ಲ. ಅವಳ ಹತ್ತಿರ ಹೇಳಿಸ್ಕೊಂಡು ಬರ್ತೀನಿ" ಅಂತಾ ತನ್ನ ಗೆಳತಿಯ ರೂಮಿಗೆ ಹೋದ ನನ್ನ ರೂಮ್ ಮೇಟ್ ಮಹಾರಾಣಿ ಎರಡು ತಾಸು ಕಳೆದರೂ ವಾಪಸ್ಸು ಬರಲಿಲ್ಲ. ಅವಳಿಲ್ಲದಿದ್ದರೆ ನನ್ನ ಬಾಯಿಗೆ ಬೀಗ ತಾನೇ..?? ‘ಶೆಟ್ಟಿ ಹೋದಲ್ಲೇ ಪಟ್ಟಣ’ ಎಂಬಂತಾಯಿತಲ್ಲ ಇವಳ ಕತೆ ಎಂದುಕೊಳ್ಳುತ್ತಿರುವಾಗಲೇ ಭಡ್ ಎಂದು ಬಾಗಿಲು ದೂಡಿಕೊಂಡು ಒಳಗೆ ಬಂದಳು ಪುಣ್ಯಾತ್ಗಿತ್ತಿ.
                                 "ಇವತ್ತೇ ಲ್ಯಾಬ್ ಎಕ್ಸಾಮ್ ಮುಗಿಸಿ ಬರ್ತೀಯೇನೋ ಅಂದ್ಕೊಂಡೆ ನಾನು. ಅದೊಂದು ಎಕ್ಸ್ ಪೆರಿಮೆಂಟ್ ಅಷ್ಟು ಟಫ್ ಇದ್ಯಾ..??" ನಾನು ಕೇಳಿದೆ. ಅವಳು ಉಸ್ಸಪ್ಪಾ ಎನ್ನುತ್ತಾ ಬೆಡ್ ಮೇಲೆ ಧೊಪ್ಪನೆ ಕುಳಿತಳು.
                                  "ಟಫ್ಫು ಇಲ್ಲಾ, ಗಿಫ್ಫು ಇಲ್ಲಾ. ಆ ಮಾರಾಯ್ತಿಯ ಮುಖವೆಲ್ಲಾ ಚಳಿಗೆ ಡ್ರೈ ಆಗೋಗಿದೆಯಂತೆ. ಅದೇ ಚಿಂತೆಲಿ ಅವಳು ಒಂದು ತಾಸು ತನ್ನ ಗೋಳು ಹೇಳ್ತಾ ಕೂತ್ಕೊಂಡ್ಳು. ಆಮೇಲೆ ಕಾಟಾಚಾರಕ್ಕೆ ಎಕ್ಸ್ ಪೆರಿಮೆಂಟ್ ಹೇಳಿಕೊಟ್ಳು. ನಂಗೆ ಅವಳು ಹೇಳಿದ್ದು ದೇವ್ರಾಣೆ ಅರ್ಥ ಆಗ್ಲಿಲ್ಲ. ಇನ್ನೊಮ್ಮೆ ಯಾರ ಹತ್ರನಾದ್ರೂ ಹೇಳಿಸ್ಕೊಬೇಕು."
                                 ನಂಗೆ ಜೋರಾಗಿ ನಗು ಬಂತು. "ಚಳಿರಾಯನಿಂದಾಗಿ ನಿನಗೆ ಎಕ್ಸ್ ಪೆರಿಮೆಂಟ್ ಹೇಳಿಸಿಕೊಳ್ಳಲಿಕ್ಕೂ ಆಗ್ಲಿಲ್ಲ ಅನ್ನು" ನಗುತ್ತಲೇ ಕೇಳಿದೆ.
                                "ಹೋಗೆ, ನಿಂದೊಂದು ತಮಾಷೆ. ಅಲ್ಲಾ ಕಣೇ, ಈ ಚಳಿರಾಯನಿಗೆ ಹುಡುಗಿಯರ ಮೇಲೆ ಹಳೆಯ ದ್ವೇಷ ಏನಾದ್ರೂ ಇರಬಹುದಾ ಅಂತ ಸಂದೇಹ ನನಗೆ. ಹುಡುಗಿಯರು ಎಷ್ಟೆಲ್ಲಾ ಖರ್ಚು ಮಾಡಿ ಕಷ್ಟ ಪಟ್ಟು ಅಷ್ಟು ವರ್ಷಗಳಿಂದ ಜತನದಿಂದ ಕಾಪಾಡ್ಕೊಂಡು ಬಂದ ಸೌಂದರ್ಯಾನಾ ಇವ ಒಂದೆರಡು ದಿನಗಳಲ್ಲಿಯೇ ಕೆಡಿಸಿಬಿಡುತ್ತಾನಲ್ಲಾ. ಆಮೇಲೆ ವ್ಯಾಸ್ಲೀನ್, ನೇವಿಯಾ, ಬೋರೋಪ್ಲಸ್ ಅದೂ ಇದೂ ಅಂತೆಲ್ಲಾ ಮುಖ, ಮೈ-ಕೈಗಳಿಗೆ ಬಳಿದುಕೊಂಡರೂ ಚಳಿರಾಯನ ಪ್ರತಾಪದ ಮುಂದೆ ಅವು ಕೂಡಾ ಸೋತು ಆತನಿಗೆ ಶರಣಾಗಿ ಬಿಡುತ್ವೆ. ಪಾಪ, ನಮ್ಮ ಹುಡುಗಿಯರು ತಾಸೆರಡು ಹೆಚ್ಚಾಗಿ ಕನ್ನಡಿಯ ಮುಂದೆ ನಿಂತು ಚಳಿರಾಯನಿಗೆ ಶಾಪ ಹಾಕುತ್ತಾ ಪ್ಚ್ ಪ್ಚ್ ಅನ್ನುವುದೊಂದನ್ನು ಬಿಟ್ಟರೆ ಮತ್ತೇನು ತಾನೇ ಮಾಡಬಲ್ಲರು..??"
                               "ದ್ವೇಷದ ಕತೆ ನಂಗೊತ್ತಿಲ್ಲ. ಆದರೆ ನಮ್ಮ  ಹುಡುಗಿಯರೂ ಒಂಥರಾ ಒಣಾ ಅಲ್ವೇನೆ..?? ಚಳಿಗಾಲವಿಡೀ ಕೈ-ಕಾಲುಗಳಿಗೆ ಗ್ಲೌಸ್, ಸಾಕ್ಸ್ ಹಾಕಿಕೊಂಡು ಮೈಗೆ ಶಾರ್ಟ್ ಟಾಪ್, ಚಡ್ಡಿ ತೊಟ್ಟುಕೊಂಡು ಓಡಾಡುತ್ತಾರೆ. ಹೀಗಾದರೆ ಚಳಿರಾಯ ಸುಮ್ಮನೇ ಬಿಟ್ಟಾನೆಯೇ..?? ಅದೂ ಅಲ್ದೇ ಚಳಿಗಾಲದಲ್ಲಿ ಸ್ಕಿನ್ ಡ್ರೈ ಆಗೋದು ಯಾವಾಗ್ಲೂ ಇದ್ದದ್ದೇ. ಮೂರು-ನಾಲ್ಕು ತಿಂಗಳುಗಳಷ್ಟೆ, ಖಾಯಂ ಅಲ್ವಲ್ಲಾ."
                               "ಏನೋ ಕರ್ಮ. ಒಟ್ನಲ್ಲಿ ಇವತ್ತು ಸುಮ್ನೆ ಒಂದು ತಾಸು ವೇಸ್ಟ್ ಮಾಡಿ ನಾನು ಅವಳ ಗೋಳು ಕೇಳೋ ಹಾಗಾಯ್ತು. ಫ್ಯಾನ್ ಹಾಕ್ಕೊಂಡು ಕುಳಿತಿದ್ದೀಯಲ್ಲಾ ಮಾರಾಯ್ತಿ, ಚಳಿ ಆಗ್ತಿಲ್ವಾ ನಿಂಗೆ..??" ಗೊಣಗುತ್ತಾ ಫ್ಯಾನ್ ಆರಿಸಲೆಂದು ಎದ್ದಳು.


Saturday, 8 November 2014

‘ಕನಸು ಕಾಣೆಯಾಗಿದೆ’ - ಹೇಗಿದೆ..?? ಏನಿದೆ..??

                                              
                            ಒಂದು ವರ್ಷದ ಹಿಂದಿನ ಮಾತು. ದಿನಪತ್ರಿಕೆಯೊಂದನ್ನು ತಿರುವು ಹಾಕುತ್ತಿರುವಾಗ ‘ಕನಸು ಕಾಣೆಯಾಗಿದೆ’ ಅನ್ನೋ ಹೊಸ ಕನ್ನಡ ಕಾದಂಬರಿಯೊಂದು ಬಿಡುಗಡೆಯಾಗಿರುವ ಸಂಗತಿ ಕಣ್ಣಿಗೆ ಬಿತ್ತು. ಶೀರ್ಷಿಕೆಯೇ ಬಹಳವಾಗಿ ನನ್ನನ್ನು ಆಕರ್ಷಿಸಿತು. ಎರಡು-ಮೂರು ದಿನಗಳಲ್ಲಿ ಅದೆಷ್ಟು ನನ್ನನ್ನು ಸತಾಯಿಸಿತೆಂದರೆ ಅದೇ ಶೀರ್ಷಿಕೆಯನ್ನಿಟ್ಟುಕೊಂಡು ನಾನೊಂದು ಕವಿತೆಯನ್ನು ಬರೆದಾಗಿತ್ತು. ಇನ್ನು ನನ್ನ ಕೈಲಾಗುವುದಿಲ್ಲವೆಂಬುವ ಸತ್ಯ ಮನದಟ್ಟಾದ ಮೇಲೆ ಸೀದಾ ಕೊಪ್ಪಿಕರ್ ತನಕ ಹೋಗಿ ಸಪ್ನಾ ಬುಕ್ ಹೌಸ್ ನಿಂದ ಪುಸ್ತಕವನ್ನು ಕೊಂಡುತಂದಿದ್ದೆ. ಇಂಟರ್ನಲ್ ಎಕ್ಸಾಮ್ಸ್ ಮುಗಿಯುವುದನ್ನೇ ಕಾದು ಕುಳಿತಿದ್ದು ಒಂದೇ ಸುತ್ತಿನಲ್ಲಿ ಓದಿ ಮುಗಿಸಿದ್ದೆ. ಒಂದ್ಸಲ ನನ್ನೊಳಗೆ ನನ್ನನ್ನು ಇಳಿಸಿ ಮತ್ತೆ ಹೊರಗೆಳೆದುಕೊಂಡು ಬಂದಂತಹ ಅನುಭವ. ಅದರಲ್ಲೂ, "ನೋಡೋ, ಈ ಇಡೀ ಪ್ರಪಂಚ ಕ್ಯೂಬಿಕಲ್ ಗಳಿಂದಲೇ ತುಂಬಿದೆ. ನಾವು ಏನಿದ್ರೂ  ಇಲ್ಲಿ ಒಂದು ಕ್ಯೂಬಿಕಲ್ ನಿಂದ ಇನ್ನೊಂದಕ್ಕೆ ಹೋಗ್ತಾ ಇರ್ತೀವಿ." ಈ ಒಂದೇ ಒಂದು ಸಾಲು ಅದೆಷ್ಟು ಬಾರಿ ಬಿಡದೇ ನನ್ನನ್ನು ಕಾಡಿತ್ತು ಅಂತೀರಿ. ಕುಂತಲ್ಲಿ, ನಿಂತಲ್ಲಿ, ಹೋದಲ್ಲಿ, ಬಂದಲ್ಲಿ ಎಲ್ಲವೂ, ಎಲ್ಲರೂ ಕ್ಯೂಬಿಕಲ್ ಅನ್ನಿಸಲಿಕ್ಕೆ ಶುರುವಾಗಿಬಿಟ್ಟಿತ್ತು. ಜೊತೆಗೆ ನಾನೂ ಕೂಡ ಒಂದು ಕ್ಯೂಬಿಕಲ್ ಆಗಿಹೋದ್ರೆ ಅನ್ನೋ ಸಣ್ಣ ಭಯವೂ ಸ್ವಲ್ಪ ದಿನ ಮನೆಮಾಡಿತ್ತು. ಕೊನೆಯಲ್ಲಿ ಹಾಗೆ ಕ್ಯೂಬಿಕಲ್ ಆಗದೇ ಇರೋಕೆ ಏನು ಮಾಡೋದು ಪ್ರಶ್ನೆಗೆ ಉತ್ತರವೂ ಇದೇ ಪುಸ್ತಕದಲ್ಲಿ ಸಿಕ್ಕಿತೆನ್ನಿ. ಅಂಥಾದ್ದು ಏನಿದೆ ‘ಕನಸು ಕಾಣೆಯಾಗಿದೆ’ಯಲ್ಲಿ..??
                                 ತನ್ನ ಸುತ್ತ, ತನ್ನ ಬದುಕಿನ ಸುತ್ತ ಅರಿವಿದ್ದೋ ಇಲ್ಲದೆಯೋ ಬೇಲಿಗಳನ್ನು ನಿರ್ಮಿಸಿಕೊಂಡು ಬದುಕುವಾಗ, ಅದೊಂದು ದಿನ ಒಮ್ಮಿಂದೊಮ್ಮೆಲೇ ಎಲ್ಲ ಇದ್ದೂ ಏನೂ ಇಲ್ಲದಂಥ ಭಾವ ಅತಿಯಾಗಿ ಕಾಡಲಿಕ್ಕೆ ಶುರುವಾಗಿ, ಕೊನೆಗೆ ಇದ್ಯಾಕೆ ಹೀಗೆ ಕಾಡ್ತಿದೆ ಅಂತ ತಲೆ ಕೆರೆದುಕೊಂಡು ಅದರ ರಹಸ್ಯ ಭೇದಿಸಲು ಹೊರಟಾಗ, ನಮಗೇ ತಿಳಿದಿರದ ನಮ್ಮ ಕುರಿತಾದ ತೀರಾ ಸಾಮಾನ್ಯ ಸಂಗತಿಗಳೂ ಅರಿವಿಗೆ ಬಂದು ಅವೆಲ್ಲವೂ ಅದ್ಭುತವೆನಿಸತೊಡಗುತ್ತವಲ್ಲಾ..?? ಇಲ್ಲಿ ಮಿಥುನ್ ಕತೆಯೂ ಹೀಗೆಯೇ. ತನ್ನ ಯಾಂತ್ರಿಕ ಬದುಕಿನಲ್ಲಿ ತಾನಾರೆಂಬುದೇ ಮರೆತುಹೋಗಿರುವಷ್ಟರ ಮಟ್ಟಿಗೆ ಮುಳುಗಿ ಹೂತು ಹೋಗಿರುವ ಅವನಿಗೆ ಒಂದು ದಿನ ತಿಳಿಯುವ ಕಟು ಸತ್ಯವೇನೆಂದರೆ ತನಗೇ ಕನಸುಗಳೇ ಬೀಳುತ್ತಿಲ್ಲವೆಂಬುದು. ಅರೇ, ತನಗೇಕೆ ಕನಸುಗಳು ಬೀಳುತ್ತಿಲ್ಲ ಎಂದು ಚಿಂತಿತನಾಗುವ ಅವನು ಇಷ್ಟು ದಿನಗಳೂ ಕನಸುಗಳು ಬೀಳುತ್ತಿಲ್ಲವೆಂಬ ವಿಷಯ ತಿಳಿಯದೇ ಹೋಯಿತಲ್ಲ ಎಂದು ಪೇಚಾಡುತ್ತಾನೆ. ತನ್ನ ಕನಸುಗಳನ್ನು ಹುಡುಕಲಿಕ್ಕೆ ಮುಂದಾಗುತ್ತಾನೆ. ಈ ಹುಡುಕಾಟ ತನ್ನಿಂದಲೇ ಬಹುದೂರ ಸಾಗಿದ್ದ ಅವನನ್ನು ಹಂತ ಹಂತವಾಗಿ ಮರಳಿ ತನ್ನೆಡೆಗೇ ಕರೆತರುತ್ತದೆ. ಅವನಿಗೂ ಎಲ್ಲರಂತೆಯೇ ಸಹಜವಾಗಿ ಕನಸುಗಳು ಬೀಳಲು ಪ್ರಾರಂಭವಾಗುತ್ತವೆ.
                                    ಈ ಮಿಥುನ್ ಕೇವಲ ಕಾದಂಬರಿಯೊಂದರ ಪಾತ್ರವಲ್ಲ, ಆದರೆ ಆತ ನಮ್ಮೊಳಗೂ ಎಲ್ಲೋ ಒಂದು ಮೂಲೆಯಲ್ಲಿ ಇದ್ದಾನೆ ಎನ್ನುವ ಸಂಗತಿ ಪುಸ್ತಕದ ಹಾಳೆಗಳನ್ನು ಒಂದೊಂದಾಗಿ ತಿರುವಿದಂತೆಲ್ಲಾ ನಿಚ್ಚಳವಾಗಿ ಗೋಚರಿಸುತ್ತಾ ಹೋಗುತ್ತದೆ. ಪುಸ್ತಕದ ಕೊನೆಯ ಪುಟವನ್ನು ತಲುಪುವ ಹೊತ್ತಿಗೆಲ್ಲಾ "ನನಗೆ ಕೊನೆಯ ಬಾರಿಗೆ ಕನಸು ಬಿದ್ದಿದ್ದು ಯಾವಾಗ..?" ಎಂದು ನಿಮ್ಮನ್ನು ನೀವೇ ಪ್ರಶ್ನಿಸಿಕೊಂಡು ಉತ್ತರ ಹುಡುಕಲು ತೊಡಗದಿದ್ದರೆ ಕೇಳಿ. ಅದೇ ಈ ಕಾದಂಬರಿಯ ಶ್ರೇಷ್ಠತೆಯೆಂದರೆ ಉತ್ಪ್ರೇಕ್ಷೆಯಾಗಲಾರದು. ಸರಳವಾದ ಭಾಷೆ, ಹೊಸತಾದ ನಿರೂಪಣಾ ಶೈಲಿಯಿದ್ದು ಕುತೂಹಲ ಕಾಯ್ದುಕೊಳ್ಳುತ್ತದೆ. ಕೆಲವು ಸಾಲುಗಳು, ಪ್ಯಾರಾಗಳು ಮನಸ್ಸಿನ ಮೇಲೆ ಗಟ್ಟಿಯಾಗಿ ಅಚ್ಚು ಮೂಡಿಸುವಂತಿವೆ. ಅವು ಕಾಡುವ ಪರಿಯನ್ನು ಕಾದಂಬರಿಯನ್ನು ಓದಿಯೇ ಅನುಭವಿಸಬೇಕು. ಜೀವನವೆಂದರೆ ಓಟವೆಂದು ಬಗೆದು ಸದಾ ಓಡುತ್ತಲೇ ಇದ್ದರೂ ಎಲ್ಲಿಯೂ ತಲುಪದೇ ನಿಂತಲ್ಲೇ ಇರುವವರು, ಬದುಕೆಂದರೆ ಅದೊಂದು ಪಯಣವೆಂಬ ಸರಳ ಸತ್ಯವನ್ನರಿತು ಒಂದೊಂದೇ ಹೆಜ್ಜೆಯನಿಟ್ಟು ಆರಾಮದಾಯಕವಾಗಿ ನಡೆದು ಸಾಗುತ್ತಿರುವವರು - ಪ್ರತಿಯೊಬ್ಬರೂ ಓದಲೇಬೇಕಾದಂತಹ ಪುಸ್ತಕವಿದು. ತಡ ಮಾಡಬೇಡಿ, ಕೂಡಲೇ ‘ಕನಸು...’ ಕೊಂಡುತನ್ನಿ.
                                ಹ್ಞಾಂ, ಬಹುಮುಖ್ಯವಾದ ವಿಷಯವೊಂದನ್ನು ಹೇಳಲು ಮರೆತೆ. ಈ ಕೃತಿಯು ೨೦೧೪ನೇ ಸಾಲಿನ ಧಾರವಾಡದ ಪ್ರತಿಷ್ಠಿತ ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಯುವ ಬರಹಗಾರರಿಗೆ ನೀಡುವ ‘ಬೇಂದ್ರೆ ಗ್ರಂಥ ಬಹುಮಾನ ಪುರಸ್ಕಾರ’ಕ್ಕೆ ಪಾತ್ರವಾಗಿದೆ. ಇಂದು ಸಂಜೆ ಐದು ಗಂಟೆಗೆ ಧಾರವಾಡದ ಬೇಂದ್ರೆ ಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವು ಜರುಗಲಿದೆ. ಅಭಿನಂದನೆಗಳು ನಟರಾಜು ಅವರಿಗೆ. ಅಂತೆಯೇ ಒಂದೊಳ್ಳೆ ಕೃತಿಯನ್ನು ಕನ್ನಡ ಓದುಗರ ಕೈಲಿರಿಸಿದ್ದಿಕ್ಕೆ ಧನ್ಯವಾದಗಳೂ ಕೂಡ.


Saturday, 1 November 2014

ಡೈರಿ - ಪುಟ ೬೫


                         "ನನ್ನ ಕ್ಲಾಸ್ ಮೇಟ್ಸ್ ತುಂಬಾ ಜನ ಕೇಳ್ತಾ ಇರ್ತಾರೆ. ನಿನ್ನ ರೂಮ್ ಮೇಟ್ ಯಾಕೆ ಇಂಗ್ಲಿಷಿನಲ್ಲಿ ಬರ್ಯೋದಿಲ್ಲಾ ಅಂತ." ನಮ್ಮ ರೂಮ್ ಮೇಟ್ ಮಹಾರಾಣಿ ಹೇಳಿದ್ದನ್ನು ಕೇಳಿ ಬಗ್ಗಿ ನ್ಯೂಸ್ ಪೇಪರ್ ಓದುತ್ತಿದ್ದ ನಾನು ತಲೆ ಎತ್ತಿದೆ.
                          "ಓಹ್, ನಾನ್ಯಾಕೆ ಇಂಗ್ಲಿಷಿನಲ್ಲಿ ಬರೆಯಬೇಕಂತೆ..??" ನಾನು ಪ್ರಶ್ನೆ ಹಾಕಿದೆ.
                          "ಇಂಗ್ಲಿಷಿನಲ್ಲಿ ಬರೆದರೆ ತುಂಬಾ ಜನ ಓದ್ತಾರಲ್ವಾ..?? ಅವ್ರಿಗೆಲ್ಲಾ ಕನ್ನಡ ಅಷ್ಟು ಚೆನ್ನಾಗಿ ಓದ್ಲಿಕ್ಕೆ ಬರಲ್ಲ."
                          "ಅವ್ರೆಲ್ಲರೂ ಕರ್ನಾಟಕದವ್ರೇ ತಾನೇ..?? ಇಲ್ಲೇ ಹುಟ್ಟಿ ಇಲ್ಲೇ ವಾಸ ಮಾಡ್ತಾ ಇರೋರಲ್ವಾ..?? ಮತ್ಯಾಕೆ ಕನ್ನಡ ಚೆನ್ನಾಗಿ ಬರಲ್ಲ..?? ಬರಲ್ಲ ಅಂತಿದ್ರೆ ಕಲೀಲಿ ಬಿಡು. ಅವ್ರ ಸಲುವಾಗಿ ನಾನು ಕನ್ನಡ ಬಿಟ್ಟು ಇಂಗ್ಲಿಷಿನಲ್ಲಿ ಬರೆಯಲಾ..??"
                           "ಹಾಗಲ್ಲ ಮಾರಾಯ್ತಿ. ಇವತ್ತಿನ ದಿನ ಇಂಗ್ಲಿಷನ್ನು ಚೆನ್ನಾಗಿ ಕಲಿಯಲೇಬೇಕಲ್ವಾ..?? ಈಗೇನೋ ಕನ್ನಡನಾಡಿನಲ್ಲೇ ಇದೀವಿ. ಕರ್ನಾಟಕದ ಹೊರಗೆಲ್ಲಾದ್ರೂ ಜೀವನ ಮಾಡ್ಬೇಕಾಗಿ ಬಂದ್ರೆ..?? ಆಗ ಅಲ್ಲಿ ನಿನ್ನ ಬರಹಗಳನ್ನು ಕನ್ನಡದಲ್ಲಿ ಬರದ್ರೆ ಎಷ್ಟು ಜನ ತಾನೇ ಓದ್ತಾರೆ..??"
                            "ಅಮ್ಮಾ ತಾಯಿ ನಾನು ಎಲ್ಲೇ ಇರಲಿ, ಬರ್ಯೋದು ಮಾತ್ರ ಕನ್ನಡದಲ್ಲೇ. ಕನ್ನಡ ಓದ್ಬೇಕು ಅನ್ನೋ ಕನ್ನಡ ಪ್ರೀತಿಯಿರೋ ಮಂದಿ ಓದ್ತಾರೆ ಬಿಡು. ಮಾತೃಭಾಷೆ ಮಾತ್ರವೇ ಭಾವನೆಗಳಿಗೆ, ಯೋಚನೆಗಳಿಗೆ ಸೂಕ್ತ ಭಾಷೆಯಾಗಬಲ್ಲದು. ಇಂಗ್ಲಿಷಿಗೇನಿದ್ರೂ ವ್ಯಾವಹಾರಿಕ ಭಾಷೆಯ ಸ್ಥಾನ ಅಷ್ಟೆ. ಒಂದು ಮಾತಿದೆ ಗೊತ್ತಾ..?? ಮಾತೃಭಾಷೆಯಲ್ಲಿ ಪರಿಣಿತಿ ಇದ್ದರೆ ಬೇರೆ ಯಾವ ಭಾಷೆಗಳನ್ನಾದರೂ ಸುಲಭವಾಗಿ ಕಲಿಯಬಹುದು ಅಂತಾ. ನಂಗೆ ಕನ್ನಡಾನೇ ನೆಟ್ಟಗೆ ಬರಲ್ಲ. ಇಂಗ್ಲಿಷ್ ಅಷ್ಟಕ್ಕಷ್ಟೆ. ಅಂಥಾದ್ರಲ್ಲಿ ಕನ್ನಡ ಬಿಟ್ಟು ಇಂಗ್ಲಿಷಿನಲ್ಲಿ ಬರೀತ ಕೂತ್ರೆ ಆ ಕಡೆ ಇಂಗ್ಲಿಷ್ ಒಲಿಯೋದಿಲ್ಲ, ಈ ಕಡೆ ಕನ್ನಡ ಬೆಳೆಯೋದಿಲ್ಲ. ನಂಗಂತೂ ಕನ್ನಡದಲ್ಲಿ ಅಲ್ಪ ಸ್ವಲ್ಪ ಗೀಚಲಿಕ್ಕೆ ಬರುತ್ತೆ ಅಂತಾ ಭಾಳನೇ ಖುಷಿಯಿದೆ. ನಿನ್ನ ಕ್ಲಾಸ್ ಮೇಟ್ಸ್ ಗೆ ಹೀಗೆ ಹೇಳ್ಬಿಡು."
                            "ಅಯ್ಯೋ ಆಯ್ತು ಕಣೇ. ಅಡ್ಡಬಿದ್ದೆ ನಿಂಗೆ" ಅವಳು ಕೈ ಜೋಡಿಸುತ್ತಾ ನಾಟಕೀಯವಾಗಿ ಹೇಳಿದಳು.


Wednesday, 17 September 2014

ಡೈರಿ ಪುಟ - ೬೪


                              "ಓಯ್, ಎಂತಾ ಮಾರಾಯ್ತಿ..?? ಇಷ್ಟು ಲೇಟ್..?? ಮಧ್ಯಾನ್ಹ ೧ ಗಂಟೆಗೆ ಕ್ಲಾಸ್ ಮುಗಿದಿತ್ತು ಅಲ್ವಾ ನಿಂಗೆ.??" ಆರು ಗಂಟೆಯ ನಂತರ ರೂಮಿನೊಳಗೆ ಬಂದ ಪುಣ್ಯಾತ್ಗಿತ್ತಿಗೆ ಕೇಳಿದೆ.
                              "ಅಯ್ಯೋ, ಇವತ್ತು ಪಾರ್ಟಿ ಇತ್ತು ಕಣೇ." ಅವಳು ಮುಖವನ್ನು ಇಷ್ಟಗಲ ಮಾಡಿಕೊಂಡು ಹೇಳಿದಳು.
                              "ಪಾರ್ಟಿನಾ..?? ಇವತ್ತು ಏನಿತ್ತು ವಿಶೇಷ ಪಾರ್ಟಿ ಮಾಡ್ಲಿಕ್ಕೆ..??" ನಾನು ಆಶ್ಚರ್ಯ ಸೂಚಿಸುತ್ತಾ ಕೇಳಿದೆ.
                              "ನೀನೇ ಹಿಂಗಂದ್ರೆ ಹೆಂಗೆ ಮಾರಾಯ್ತಿ..?? ಇವತ್ತು ಮೋದಿಜೀ ಬರ್ತ್ ಡೇ ಅಲ್ವಾ..?? ಪಾರ್ಟಿ ಮಾಡ್ಲಿಕ್ಕೆ ಇದಕ್ಕಿಂತಾ ದೊಡ್ಡ ಕಾರಣ ಇನ್ನೇನ್ ಬೇಕು..??"
                              "ವಾವ್, ಅದಕ್ಕಾ ನೀವು ಪಾರ್ಟಿ ಮಾಡಿದ್ದು..?? ನಾನು ನಿಮ್ಮ ಫ್ರೆಂಡ್ಸ್ ಸರ್ಕಲ್ ಅಲ್ಲಿ ಯಾರದ್ದಾದ್ರೂ ಬರ್ತ್ ಡೇ ಇತ್ತೇನೋ ಅಂತಾ ಅಂದ್ಕೊಂಡೆ. ಹ್ಞೂಂ, ಮೋದಿಜೀ ಅವರ ಹುಟ್ಟಿದ ಹಬ್ಬ ಆಚರಿಸಿದರೆ ಅದರಲ್ಲಿ ತಪ್ಪೇನಿಲ್ಲ. ಯಾರ್ಯಾರ್ದೋ ಹುಟ್ಟಿದ ಹಬ್ಬವನ್ನು ಆಚರಿಸುತ್ತೇವಪಾ. ಅಂಥದ್ದರಲ್ಲಿ ದೇಶದ ಪ್ರಧಾನ ಸೇವಕರ ಬರ್ತ್ ಡೇ ಆಚರಿಸಿದರೆ ಅದಕ್ಕೂ ಒಂದು ಅರ್ಥವಿದೆ ಬಿಡು. ಒಳ್ಳೆಯ ಕೆಲಸಾನೆ. ಬೈ ದ ವೇ, ಏನ್ ಪಾರ್ಟಿ ಮಾಡಿದ್ರಿ..?? ಎಲ್ಲಿ ಮಾಡಿದ್ರಿ..??"
                              "ಎಲ್ ಎಚ್ ಸಿ ಕ್ಯಾಂಟೀನ್ ಅಲ್ಲಿ. ಎಲ್ಲರೂ ಎರಡೆರಡು ಕಪ್ ಟೀ ಕುಡಿದು ಗಿರ್ಮಿಟ್ ತಿಂದ್ವಿ. ನೋ ಕೋಕ್ಸ್, ನೋ ಕೇಕ್ಸ್. ಆಮೇಲೆ ಇನ್ನು ಐದು ವರ್ಷಗಳಲ್ಲಿ ನಮ್ಮ ದೇಶಕ್ಕೆ ನಮ್ಮ ಕೈಲಾಗುವಂಥದ್ದು ಏನೇನು ಮಾಡ್ಬೋದು ಅಂತಾ ಚರ್ಚೆ ಮಾಡಿದ್ವಿ. ಅಷ್ಟೆ ಮುಗೀತು."
                               "ಪರ್ವಾಗಿಲ್ಲ ಕಣೇ. ಚಿಕ್ಕದಾಗಿ ಚೊಕ್ಕದಾಗಿ ಪಾರ್ಟಿ ಮಾಡಿದೀರಾ. ಟೀ ಪಾರ್ಟಿ ಅಂತಾ ಗೊತ್ತಾದ್ರೆ ಮೋದಿಜೀ ಖುಷಿ ಪಡ್ತಾ ಇದ್ರೇನೋ."
                               "ಹೌದು ಮತ್ತೆ. ಅಂದ ಹಾಗೆ ನಿಂದೇನು ಪಾರ್ಟಿ-ಗೀರ್ಟಿ ಇಲ್ವಾ ಇವತ್ತು..?"
                               "ನೋಡಿಲ್ಲಿ ನನ್ನ ಬಾಯನ್ನು, ನಂದು ಕವಳದ ಪಾರ್ಟಿ. ಕಾಲೇಜಿಂದ ಬರೋವಾಗ ಎರಡು ಪಾನ್ ತಿಂದು ಬಂದೆ. ನಿಂಗೂ ಒಂದು ಪಾನ್ ಇಟ್ಟಿದೀನಿ ತಗೋ."
                               "ಅರೇ ಹೌದಾ, ಕೊಡು ಮತ್ತೆ" ಅವಳು ಪಾನ್ ಗಾಗಿ ಕೈ ಚಾಚಿದಳು.


Tuesday, 16 September 2014

ಡೈರಿ ಪುಟ - ೬೩


                                   "ಓಯ್, ಇವತ್ತು ಉಡುಪಿಯಲ್ಲಿ ಕೃಷ್ಣಾಷ್ಟಮಿ ಅಲ್ವಾ..??" ಕಾಲೇಜಿನಿಂದ ಬಂದು ಬ್ಯಾಗ್ ಬಿಸಾಡುತ್ತಲೇ ರೂಮ್ ಮೇಟ್ ಕೇಳಿದಳು.
                                   "ಹೌದೇ ಮಾರಾಯ್ತಿ, ನಿನ್ನ ತಲೆಗೆ ಹೇಗೆ ಈ ವಿಷಯ ಗೊತ್ತಾಯ್ತು..??" ನಾನು ಪ್ರಶ್ನೆ ಹಾಕಿದೆ.
                                   "ಇವತ್ತು ಬೆಳಿಗ್ಗೆ ಮನೆಗೆ ಫೋನ್ ಮಾಡಿದಾಗ ಅಮ್ಮ ಹೇಳಿದ್ರು. ಟಿವಿಯಲ್ಲಿ ಲೈವ್ ಕೊಡ್ತಾರಂತಲ್ವಾ..? ಅಲ್ಲಾ, ಉಡುಪಿಯಲ್ಲಿ ಯಾಕೆ ಒಂದು ತಿಂಗಳು ತಡವಾಗಿ ಆಚರಿಸ್ತಾರೆ..??"
                                    "ಅಲ್ಲಿ ಕೃಷ್ಣಾಷ್ಟಮಿಯನ್ನು ಸೌರಮಾನ ಪಂಚಾಂಗದ ಆಧಾರದ ಮೇಲೆ ಆಚರಿಸುತ್ತಾರೆ. ಅದರ ಪ್ರಕಾರ ಸಿಂಹ ಮಾಸ, ಕೃಷ್ಣಪಕ್ಷ, ರೋಹಿಣಿ ನಕ್ಷತ್ರ ಮತ್ತು ಅಷ್ಟಮಿ ತಿಥಿ ಎಲ್ಲಾ ಒಟ್ಟಾಗಿ ಬರುವ ದಿನವೇ ಕೃಷ್ಣ ಜನಿಸಿದ್ದು. ಹಾಗಾಗಿ ಜನ್ಮಾಷ್ಟಮಿಗೆ ಅದೇ ಸೂಕ್ತವಾದ ಘಳಿಗೆ. ನಾವೆಲ್ಲಾ ಚಾಂದ್ರಮಾನ ಪಂಚಾಂಗವನ್ನು ಆಧರಿಸಿ ಕೃಷ್ಣಾಷ್ಟಮಿ ಆಚರಿಸೋದು."
                                    "ಓಹೋ, ಹಾಗಾ. ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಅಂದ್ರೆ ತುಂಬಾ ಗ್ರ್ಯಾಂಡ್ ಆಗಿರ್ಬೇಕಲ್ವಾ..??"
                                     "ಹೌದು ಮತ್ತೆ. ಉಡುಪಿಯಲ್ಲಿ ಎರಡು ದಿನಗಳ ಜಾತ್ರೆಯಂತೆ ಕೃಷ್ಣಾಷ್ಟಮಿ ಅಂದ್ರೆ. ಮೊದಲನೇ ದಿನ ಜನ್ಮಾಷ್ಟಮಿ, ಎರಡನೇ ದಿನ ವಿಟ್ಲಪಿಂಡಿ. ನಾನು ಎರಡು ವರ್ಷಗಳು ಅಲ್ಲಿದ್ದಾಗ ನೋಡಿದೀನಲ್ಲಾ. ಮಡಿಕೆ ಒಡೆಯೋದು, ರಥೋತ್ಸವ, ಹುಲಿವೇಷ, ಯಕ್ಷಗಾನ ಪ್ರಸಂಗಗಳು, ಕೃಷ್ಣನಿಗೆ ವಿಶೇಷ ಪೂಜೆ-ಪುನಸ್ಕಾರಗಳು. ಮಠದ ಒಳ-ಹೊರಗಿನ ಆವರಣವನ್ನು ಅದೆಷ್ಟು ಚೆಂದವಾಗಿ ಸಿಂಗರಿಸ್ತಾರೆ ಗೊತ್ತಾ..?? ಅವತ್ತು ನಿನಗೇನಾದರೂ ಕೃಷ್ಣನ ದರ್ಶನ ಭಾಗ್ಯ ಸಿಕ್ಕಿದರೆ ಅದು ನಿಜಕ್ಕೂ ಪುಣ್ಯದ ಸಂಗತಿ. ಅಷ್ಟು ರಷ್ ಇರತ್ತೆ. ಎಷ್ಟೊಂದು ಮುದ್ದಾದ ಬಾಲಗೋಪಾಲರು ಕಾಣಸಿಗುತ್ತಾರೆ. ಅದನ್ನೆಲ್ಲಾ ಕಣ್ಣಾರೆ ನೋಡಿಯೇ ಸಂತಸಪಡಬೇಕು. ನಂಗಂತೂ ಕಳೆದ ವಾರ ಉಳಿದವರು ಕಂಡಂತೆ ನೋಡಿದಾಗಿನಿಂದ ಉಡುಪಿಗೊಮ್ಮೆ ಹೋಗಿ ಬರಬೇಕು ಅನ್ನೋ ಆಸೆ ಜಾಸ್ತಿ ಆಗ್ತಿದೆ. ಇವತ್ತಂತೂ ಪೂರಾ ಜನ್ಮಾಷ್ಟಮಿ ಗುಂಗಿನಲ್ಲೇ ಇದೀನಿ ನಾನು."
                                    "ನೋ ಹಾರ್ಡ್ ಫೀಲಿಂಗ್ಸ್ ಡಾರ್ಲಿಂಗ್. ಇನ್ನೊಂದು ವಾರ ಕಳೆದರೆ ಅಕ್ಟೋಬರ್ ನಲ್ಲಿ ೪-೫ ದಿನಗಳು ರಜಾ ಇವೆಯಲ್ಲ. ಆಗ ಹೋಗಿಬರೋಣ, ನಾನು ಕೂಡಾ ಬರ್ತೀನಿ. ಯಾವಾಗಲೋ ಚಿಕ್ಕಂದಿನಲ್ಲಿ ಉಡುಪಿಗೆ ಹೋಗಿದ್ನಂತೆ ನಾನು. ನಂಗಂತೂ ಏನನ್ನೂ ನೋಡಿದ್ದು ನೆನಪಿಲ್ಲ."
                                    "ಡೀಲ್ ಹಾಗಿದ್ರೆ, ಖಂಡಿತಾ ಹೋಗೋಣ. ಈಗ ನೀನು ಬೇಗ ಫ್ರೆಶ್ ಆಗು. ಮೆಸ್ ನಲ್ಲಿ ಏನು ಮಾಡಿದ್ದಾರೋ ನೋಡೋಣ."


Monday, 15 September 2014

ಕಾಂತಾ..??


ಕನಸಿನ ಕಣ್ಣು ಕಾಂತಾ
ಕಣ್ಣಿನ ಕಪ್ಪಿನಲ್ಲಿ ಬಿಳುಪು ಕಾಂತಾ
ಮನಸಿನ ತೆರೆಯ ಮೇಲೆssss
ಬಣ್ಣಗಳಲ್ಲಿ ಭಾವ ಭಂಗಿ ಕಾಂತಾ

ಹೆಜ್ಜೆ ಗುರುತಿನಲ್ಲಿ ನಡೆಯು ಕಾಂತಾ
ಹಾದಿಬದಿಯ ಮರಳಿನ ನೆರಳು ಕಾಂತಾ
ನುಡಿವಾ ನಾಲಿಗೆ ಮೇಲೆssss
ಸೊಟ್ಟಗೆ ಕಾಂತಾ ನೇರಕೆ ಕಾಂತಾ

ಮಾತು ಕಥೆಯಲ್ಲಿ ನಡತೆ ಕಾಂತಾ
ನಿದ್ದೆ ಗದ್ದಲದಲ್ಲಿ ಸದ್ದು ಕಾಂತಾ
ಉಸಿರಿನ ಬಿಸಿ ಗುಳ್ಳೆಯಲಿssss
ಹಸಿವಿನ ಹೊಗೆಯ ಮಂಜು ಕಾಂತಾ

ವಯಸಿನ ಹಸಿಯು ಅಚ್ಚಾಗಿ ಕಾಂತಾ
ಬೆಚ್ಚನೆಯ ಹುಚ್ಚಲ್ಲಿ ಮೆಚ್ಚು ಕಾಂತಾ
ಕಣ್ಮುಚ್ಚಿ ನೋಡಿದಾಗssss
ತಪ್ಪು ಕಾಂತಾ ಒಪ್ಪು ಕಾಂತಾ


ವ್ಯಾಖ್ಯಾನ


ಪದಗಳಿಗೆ ಸ್ಥಾನಗಳಲ್ಲ, ಪಾತ್ರ ಮಾತ್ರವಲ್ಲ
ನವರಸಗಳ ನಟನೆಗಳಿವೆ
ರಾಗ, ತಾಳಗಳ ಹೆಜ್ಜೆಗಳಿವೆ
ಸಂದರ್ಭಕೆ ತಕ್ಕಂತೆ ಸ್ವಂತಕ್ಕೆ ಒಪ್ಪುವಂತೆ
ಒಂದೊಂದು ವಾಕ್ಯಕೂ ತಪ್ಪುವಂತೆಯೇ ಇಲ್ಲ
ವ್ಯಾಖ್ಯಾನದ ಪ್ರಸಂಗವೆಂಬ ವ್ಯಥೆ

ಪಾತ್ರಗಳೆಲ್ಲವೂ ಪಾರತಂತ್ರ್ಯದ ಪುತ್ರರು
ಬಗ್ಗಿಸಿ ಬಗ್ಗಿಸಿ ತಲೆಯೇ ಇಲ್ಲವಾಗಿದೆ
ಇನ್ನೆಲ್ಲಿಯ ಅರ್ಥ..?? ಶಾಸ್ತ್ರದ ಶಸ್ತ್ರಾಸ್ತ್ರ..??
ಬಾಗಿದ ಬೆನ್ನಹಿಂದಿನ ಭಾವಗಳಲ್ಲೂ ಅಭಾವ
ಮುಂದೆ ಮುಖ ತೋರಿಸುವಾಗ ಮುಖವಾಡ
ಕಟ್ಟಿ ಹೊಸೆಯುವರು ಅರ್ಥವಿಲ್ಲದ ಹಾಡೊಂದ

ಅದಾರದೋ ಕಣ್ಣಲ್ಲಿ ತನ್ನ ಬಿಂಬವ ನೋಡಿ
ಮನಸ್ಸಿನ ಅಂಗಳದಲ್ಲಿ ಬಿಡಿಸುವ ಚಿತ್ತಾರ
ಅವರು ಹೇಳಿದಂತೆ ಗೆರೆ ಎಳೆದು
ಇವರ ಮಾತಿನಂತೆ ಬಣ್ಣ ತುಂಬಿ
ಓರೆಕೋರೆಗಳ ಅಂಕು ಡೊಂಕನ್ನು
ಅಳಿಸಿಹಾಕಿ ವ್ಯಾಖ್ಯಾನದ ಕಲೆಯ ಉಳಿಸುವರಲ್ಲ

ಹಸಿವಿಗೂ ಹುಸಿಯೆನ್ನುವ ಹಚ್ಚೆ ಹಾಕಿಸಿ
ರೋಮ ಬಳಿದು ಕುಣಿಯುವ ಹುಲಿವೇಷ
ಒಳಗಿನ ಪೊಳ್ಳಿಗೆ ಪಟ್ಟೆಯನ್ನು ಬಿಗಿದಂತೆ
ಮೌನದಲ್ಲಿ ಪಾಯ ಅಗೆಯುತ್ತಲಿ
ಮಾತುಗಳಲ್ಲಿ ಮನೆ ಕಟ್ಟುತಲಿ
ಹಂಚು ಹಾಕುತ್ತಲೇ ವ್ಯಾಖ್ಯಾನದ ವ್ಯಾಪಾರ


Tuesday, 9 September 2014

ಸಂಚಾರಿ


ಗತಿಯಲ್ಲಿ ಗದ್ದಲವಿಲ್ಲ ಶ್ರುತಿಯಿದೋ ಶಾಂತವಾಗಿಲ್ಲ
ಗೆಜ್ಜೆಗಳ ಹೆಜ್ಜೆಯಲ್ಲಿಲ್ಲ ಲಜ್ಜೆಯ ಲಾಸ್ಯ
ಸವೆದಂತೆ ಈ ಹಾದಿ ಎದುರಿನಲ್ಲಿ ಆ ಬೀದಿ
ಹಳೆಯ ಇಟ್ಟಿಗೆಯ ಗೋಡೆಗೆ ಹದವಾಗಿ
ಹೊಸ ಮಣ್ಣನ್ನು ಮೃದುವಾಗಿ ಮೆತ್ತಿದಂತೆ
ಕಪ್ಪುಬಿಳುಪಿನಲ್ಲಿ ಅಲ್ಲೊಂದು ವರ್ಣಚಿತ್ತಾರದ ಸೊಬಗು

ಭಾವ ಬುದ್ಧಿಗಳೆರಡನ್ನೂ ಬೇಲಿಯಾಚೆಗೆಸೆದು
ಕಣ್ ತೆರೆದು ಕೈ ಬೀಸಿ ಕಾಲು ಹೊಸೆಯುತ್ತಾ
ನಡೆದು ದಾಟಿದಂತೆ ಕಾಲು ದಾರಿಯ ದೂರವನ್ನು
ಹೆದ್ದಾರಿಯ ಬಂಧನವೊಂದು ಅಪ್ಪುತಿಹುದು
ಕಿರಣ ಅರಸುತ ಹೊರಟ ಬಾಲೆಗೆ ಎದುರಾದಂತೆ
ಬೆಂಕಿಯ ಚೆಂಡೊಂದು ಜ್ವಾಲೆಗಳ ಝಳಪಿಸುತ್ತಾ

ಇಕ್ಕೆಲಗಳಲ್ಲಿ ದೊರಕುವ ಇಡುಗಂಟು
ಮುಷ್ಠಿಯನ್ನು ಮಡಿಚಲು ಬಿಡದೇ ಅಂಟಿಕೊಂಡು
ಒಂಟಿತನದ ನಂಟನ್ನೇ ಬಡಿದು ಹೊಡೆದೋಡಿಸಿ
ಒಂದೂವರೆ ಮೈಲಿ ಸಂಗಾತವಾಗಿ ಕೊನೆಗೆ
ಮೌನದಲ್ಲೇ ಮಾಯವಾಗಿ ಮಡಿದು
ಮನಸಿನ ಮೂಲೆಯ ತುಂಬೆಲ್ಲಾ ಏಕೈಕ ಏಕಾಂತ

ಒಂದೊಂದು ತಿರುವಿನಲ್ಲೂ ತೀರದ ಅಚ್ಚರಿ
ಅರಿವಿಗೂ ತಿಳಿವಿಗೂ ಹಿಡಿದಂತೆ ಭೂತಗನ್ನಡಿ
ಮುಂದೆ ಹತ್ತು ಹರದಾರಿ ಸಾಗಿ ಹಿಂತಿರುಗಿ ನೋಡು
ಅದೇ ಮಸುಕು ಮಬ್ಬಿನ ದಟ್ಟವಾದ ಕತ್ತಲ ಗೂಡು
ಇದೆಂಥಹ ಪಯಣ..?? ನಿಲ್ಲದ ಪರಿಭ್ರಮಣ
ತನ್ನೊಳಗೇ ತಾ ದೂರವಾಗಿ ಜಗ ಸುತ್ತುವ ಯಾನ


Monday, 8 September 2014

ಇತಿ ಪರೀಕ್ಷಾ ಅಭ್ಯಾಸೋಧ್ಯಾಯಃ


                            ಕ್ಲಾಸು ಮುಗೀತು. ಯಾರೋ ಇನ್ಯಾರಿಗೋ ಕೇಳ್ತಾ ಇದ್ರು. "ಲೇ, ಮೈನರ್ ಗ ಓದಾಕ್ ಸ್ಟಾರ್ಟ್ ಮಾಡಿ..?? ಫಸ್ಟ್ ಯಾವ್ದ್ ಓದಾತಿ..??" ಅದನ್ನು ಕೇಳ್ದಾಗ ಇವ್ಳಿಗೂ ನೆನಪಾಯ್ತು. ಇನ್ನು ಹತ್ತು ದಿನಗಳಲ್ಲಿ ಇಂಟರ್ನಲ್ಸ್. ಪಾಸ್ ಆಗ್ಲಿಕ್ಕಾದ್ರೂ ಓದ್ಬೇಕಲ್ಲಾ. ಸರಿ, ಹಾಗಾದ್ರೆ ಇವತ್ನಿಂದ ಓದ್ಲಿಕ್ಕೆ ಶುರು ಮಾಡೋದೇ ಅಂತಾ ಮನಸ್ಸಲ್ಲೇ ನಿರ್ಧರಿಸಿದ್ಳು. ಬರೀ ನಿರ್ಧಾರ ಮಾಡ್ಬಿಟ್ರೆ ಆಗೋಯ್ತಾ..?? ಏನಂತ ಓದೋದು..?? ಎಲ್ಲಿಂದಾ ಓದೋದು..?? ಹೌದಲ್ಲಾ, ನೋಟ್ಸ್ ಕಲೆಕ್ಟ್ ಮಾಡ್ಬೇಕು. ಯಾವ್ಯಾವ ಸಬ್ಜೆಕ್ಟುಗಳಿಗೆ ಮೃದು ಕಾಪಿ, ಇನ್ಯಾವ್ಯಾವ್ದಕ್ಕೆಲ್ಲಾ ಕಠೋರ ಕಾಪಿಗಳ ನೋಟ್ಸ್ ಕೊಟ್ಟಿದಾರೋ ಏನೋ. ಬ್ಯಾಗ್ ತುಂಬಿಕೊಳ್ಳುತ್ತಾ ಹೊರಡಲು ಅಣಿಯಾಗುತ್ತಿದ್ದ ಗೆಳತಿಗೆ ಕೇಳಿದ್ಳು, "ಲೇ ಎಲ್ಲಾ ಸಬ್ಜೆಕ್ಟ್ಸ್ ದು ನೋಟ್ಸ್ ಕಥಿ ಏನ..???" "ಒಂದಕ್ಕಂತೂ ಅವತ್ತೇ ಮ್ಯಾಡಮ್ ಹಾರ್ಡ್ ಕಾಪಿ ಕೊಟ್ಟಾರಲಾ, ಇನ್ನೊಂದಕ್ಕೆ ನಾಳೆ ಕೊಡ್ತಾರಂತ. ಮತ್ತೆ ಎರಡಕ್ಕೆ ಟೆಕ್ಟ್ಸ್ ಬುಕ್ ತಗೋಬೇಕಂತ. ಮತ್ತೊಂದಕ್ಕೆ ಪಿಪಿಟಿ ಕೊಡ್ತಾರಂತ. ಇನ್ನೊಂದಕ್ಕೆ ಅಲ್ಲಿ ಲಕ್ಕಿ ಝೆರಾಕ್ಸ್ ಅಲ್ಲಿ ಕೊಟ್ಯಾರಂತ." ವೋಕೆ. ಅಂದ್ರೆ ಈಗ ಲಕ್ಕಿಗೆ ಹೋಗ್ಬೇಕು. ಅವ್ಳಿಗೊಂದು ಅನುಮಾನವಿತ್ತು. ಲೆಕ್ಚರರ್ಸ್ ಕೂಡ ಕೆಲವೊಮ್ಮೆ ಸಿಲೆಬಸ್ ನೋಡ್ಲಿಕ್ಕೆ ಲೆಸನ್ ಪ್ಲಾನ್ ತೆಗಿತಾರೆ. ನಮಗಂತೂ ಕೆಲವೆಲ್ಲಾ ಟಾಪಿಕ್ಸ್ ಗಳು ಎಕ್ಸಾಮ್ ಬರ್ಯೋವಾಗ ನಿರ್ದಿಷ್ಟ ಪ್ರಶ್ನೆಯೊಂದಕ್ಕೆ ಉತ್ರ ಬರ್ದೇ ಇದ್ದಾಗ ಗೊತ್ತಾಗ್ತವೆ, ಇವೂ ಕೂಡ ಸಿಲೆಬಸ್ ನಲ್ಲಿ ಇವೆ ಅಂತಾ. ಆದರೆ ಆ ಲಕ್ಕಿ ಶಾಪ್ ನ ಅಂಕಲ್ ಮಾತ್ರ ಯಾವ್ ಬ್ರ್ಯಾಂಚ್, ಯಾವ್ ಸೆಮಿಸ್ಟರ್ ಅಂತಾ ಹೇಳಿದ್ರೆ ಸಾಕು, ಇಂಥಾ ಸಬ್ಜೆಕ್ಟು, ಇಂಥಾ ಚಾಪ್ಟರ್ರು ಅಂತಾರೆ. ನಮ್ಮ ಅಟೋನೊಮಸ್ ಕಾಲೇಜಿನ ಪೂರಾ ಸಿಲೆಬಸ್ ಅವರ ತಲೆಯಲ್ಲಿ ಇದೆಯೇನೋ. ಆ ದಿನ ಕೊನೆಗೂ ಲಕ್ಕಿಗೆ ಹೋಗಿ ಝೆರಾಕ್ಸ್ ತೆಗೆದುಕೊಂಡು ಬಂದಾಯ್ತು.


                           ಸೋ, ಎರಡು ಸಬ್ಜೆಕ್ಟುಗಳಿಗೆ ನೋಟ್ಸ್ ಸಿಕ್ಕಂಗಾಯ್ತು. ಮತ್ತೆ ಎರಡಕ್ಕೆ ಟೆಕ್ಟ್ಸ್ ಬುಕ್ ತಗೋಳೋದಾ..?? ಅಯ್ಯೋ, ಫೈನಲ್ ಇಯರ್ ಅಲ್ಲೂ ಟೆಕ್ಟ್ಸ್ ಬುಕ್ಕಾ..?? ಒಂದ್ವೇಳೆ ತಗೊಂಡ್ರೂ ಸೆಮಿಸ್ಟರ್ ಮುಗಿದ್ಮೇಲೆ ಅದನ್ನ ಏನ್ ಮಾಡೋದು..?? ಅದೂ ಅಲ್ದೇ ರೂಮಲ್ಲಿ ಬುಕ್ಸ್ ಗಳನ್ನ ಇಟ್ಕೊಳೊವಷ್ಟು ಜಾಗವೂ ಇಲ್ಲ. ಬರೇ ಡ್ರೆಸ್ಸು, ಡಾಲ್ಸು, ನ್ಯೂಸ್ ಪೇಪರ್ ಗಳದ್ದೇ ಜಾತ್ರೆ. ಬೆಟರ್ ಅಂದ್ರೆ ಇಡೀ ಬುಕ್ಕನ್ನೇ ಝೆರಾಕ್ಸ್ ಹೊಡ್ಸೋದು. ಒಂದು ನೂರು ರೂಪಾಯಿಗಳಲ್ಲಿ ಮುಗ್ಯೋ ಕೆಲ್ಸಾ. ಮೊನ್ನೆಯಷ್ಟೆ ಫ್ಲಿಪ್ ಕಾರ್ಟ್ ಅಲ್ಲಿ ನೋಡಿದ್ಳು ಅವ್ಳು. ಒಂದೊಂದು ಬುಕ್ಕಿಗೆ ೪೦೦-೫೦೦ ರೂಪಾಯಿಗಳು. ಹೋಗ್ ಲೇ ಪಾ, ಪರ್ಚೇಸ್ ಮಾಡೋದ್ಕಿಂತಾ ಸುಮ್ನೆ ಝೆರಾಕ್ಸ್ ಕಾಪಿ ತೆಗ್ಸೋದು ಒಳ್ಳೇದು. ಎರಡು ಬುಕ್ಸಿಗೆ ಅಬ್ಬಬ್ಬಾ ಅಂದ್ರೂ ಇನ್ನೂರಾಗತ್ತೆ ಅಷ್ಟೆ. ಈಗ ಆ ಟೆಕ್ಟ್ಸ್ ಬುಕ್ ಯಾರ ಹತ್ರಾ ಇದಾವೋ ಏನೋ..?? ಹಾಸ್ಟೆಲ್ ಅಲ್ಲಿ ಅವ್ಳನ್ನೋ ಇವ್ಳನ್ನೋ ಕೇಳಿ ನೋಡ್ಬೇಕು. ಮರುದಿನ ಅನ್ನೋ ಹೊತ್ತಿಗೆ ಅವೆರ್ಡೂ ಬುಕ್ಸ್ ಸಿಕ್ಕಿ ಝೆರಾಕ್ಸ್ ಕೂಡಾ ಮಾಡ್ಸಿ ಆಯ್ತು. ನಾಳೆ ಕೊಡ್ತಾರಂತೆ ಅಂದ ಮ್ಯಾಡಮ್ ಕೂಡಾ ನೋಟ್ಸ್ ಕೊಟ್ರು. ಸೋ, ಐದು ಸಬ್ಜೆಕ್ಟುಗಳು ರೆಡಿ. ಪಿಪಿಟಿ ಕೂಡ ಮೇಲ್ ಮಾಡಿರ್ತಾರೆ. ಅಂದ್ರೆ ಪರೀಕ್ಷಾ ಅಭ್ಯಾಸಕ್ಕೆ ಪೂರ್ವ ಸಿದ್ಧತೆಯ ಎಲ್ಲಾ ಕೆಲ್ಸಗಳೂ ಮುಗ್ದಂಗಾಯ್ತು. ನಾವು ಕೂತು ಓದೋದೊಂದೇ ಬಾಕಿ ಇರೋದು.


                          ಇನ್ನೂ ಎಂಟು ದಿನಗಳಿವೆ ಮೈನರ್ಸ್ ಗೆ. ಮೂರು ಸಬ್ಜೆಕ್ಟುಗಳ ಕ್ಲಾಸನ್ನಂತೂ ನೆಟ್ಟಗೆ ಕೇಳಿದೀನಿ. ಅಂದ್ರೆ ಅವುಗಳ ಕುರಿತು ನೋ ಟೆನ್ಷನ್. ಮತ್ತೊಂದು ಸಬ್ಜೆಕ್ಟ್ ತುಂಬಾ ಈಜಿಯಂತೆ. ಸೋ, ಅದನ್ನ ಎಕ್ಸಾಮ್ ಹಿಂದಿನ ದಿನ ಓದಿದ್ರೂ ಸಾಕು. ಇನ್ನುಳಿದವೆರಡನ್ನು ನಾಡಿದ್ದು ಶನಿವಾರ ಓದ್ತೀನಿ. ಮತ್ತೆ ಈಗ ಏನ್ ಮಾಡೋದು..?? ನಿನ್ನೆ ಆ ನಾವೆಲ್ ಅರ್ಧ ಓದಿ ಬಿಟ್ಟಿದ್ದೆನಲ್ಲಾ, ಊಟಕ್ಕೆ ಹೋಗೋ ತನಕ ಅದನ್ನ ಓದ್ತಾ ಕೂರೋದು. ಇವತ್ಯಾಕೋ ಸಿಕ್ಕಾಪಟ್ಟೆ ಸುಸ್ತು. ಊಟಾ ಮಾಡಿ ಹಾಗೆ ಸ್ವಲ್ಪ ಪ್ರೊಜೆಕ್ಟ್ ಕೆಲ್ಸಾ ಮುಗ್ಸಿ ಮುಚ್ಚ್ ಹೊಡ್ದು ಮಲ್ಕೋಬೇಕು ಅಂತಾ ಅಂದ್ಕೊಂಡ್ಳು. ನಾಳೆ ಬೇರೆ ಎಂಟಕ್ಕೆ ಕ್ಲಾಸು. ಅಲ್ಲಿಗೆ ಗುರುವಾರ ಮುಗೀತು. ಶುಕ್ರವಾರ ಬೆಳಿಗ್ಗೆ ಏಳೋವಾಗ್ಲೇ ಅದೆಂಥಾ ನೆಗಡಿ ಅಂತೀರಿ. ಯಪ್ಪಾ, ಮೂಗನ್ನು ಸೊರ್ರಂsssssತ ಎಳೆದದ್ದು ಹೆಚ್ಚೋ, ಇಲ್ಲಾ ಆsssssssssಕ್ಷಿ ಅಂತಾ ಸೀನಿದ್ದು ಹೆಚ್ಚೋ ಅಂತಾ ಲೆಕ್ಕ ಹಾಕಿದ್ರೆ ಉತ್ರಾ ಸಿಗ್ತಿರ್ಲಿಲ್ಲಾ. ಆದ್ರೂ ಕ್ಲಾಸ್ ತಪ್ಸೋ ಹಾಗಿಲ್ಲ. ಸರಿ ಅಂತಾ ಹೋಗಿ ಅಲ್ಲಿಯೂ ಸಹ ಕರ್ಚೀಫು ಮೂಗಿಗೆ ಒತ್ತಿಕೊಂಡು ಒಂದು ಸಲ ಆsssssssssಕ್ಷಿ, ಇನ್ನೊಂದು ಸಲ ಕ್ಕೊ ಕ್ಕೊ ಅಂತಾ ಕೂತು ಕ್ಲಾಸು ಕೇಳಿದ್ದಾಯ್ತು. ಅವತ್ತು ಶಿಕ್ಷಕರ ದಿನಾಚರಣೆ ಬೇರೆ. ಡಿಪಾರ್ಟ್ ಮೆಂಟ್ ಇಂದ ಕಾರ್ಯಕ್ರಮ ಇತ್ತು. ಅದನು ಮುಗ್ಸಿ ಬರೋವಷ್ಟ್ರಲ್ಲಿ ನಾಲ್ಕೂವರೆ ದಾಟಿತ್ತು. ಆಗ ತಲೆ ಕೂಡಾ ಕುಣಿಯಲು ಶುರು ಮಾಡ್ತು. ಬರೇ ತಲೆನೋವು, ನೆಗಡಿಗೆ ಡಾಕ್ಟರ್ ಹತ್ತಿರ ಹೋಗೋದಾ..?? ಅಂದ್ಕೊಂಡು ಇವ್ಳು ಅಂದು ರಾತ್ರಿ ಸಿನಾರಿಸ್ಟ್ ನುಂಗಿ ಮಲ್ಕೊಂಡ್ಳು. ನಾಳೆಯಿಂದಾ ಓದ್ಲಿಕ್ಕೆ ಶುರು ಮಾಡ್ಲೇಬೇಕು ಅಂತಾ ಮತ್ತೆ ಮತ್ತೆ ಹೇಳ್ಕೊಂಡ್ಳು.


                          ಶನಿವಾರ ಬೇಗನೆ ಎದ್ದು ರೆಡಿ ಆಗಿ ಕಾಲೇಜಿಗೆ ಹೋಗಿ ಲೈಬ್ರರಿಯಲ್ಲಿ ಓದ್ಲಿಕ್ಕೆ ಕೂತಿದ್ದಷ್ಟೆ. ತಲೆನೋವು ಮತ್ತೆ ಕುಣಿತ ಶುರು ಮಾಡ್ತು. ಛೇ, ಅಪರೂಪಕ್ಕೆ ಓದೋಣ ಅಂದ್ಕೊಂಡ್ರೆ ಈ ನೆಗಡಿ ಒಂದು ಕಾಟ ಕೊಡ್ತಿದೆ ಅಂತಾ ಬೈಕೊಂಡು ವಾಪಸ್ಸು ಹಾಸ್ಟೆಲ್ ಗೆ ಬಂದ್ಳು. ಊಟ ಮಾಡಿ ಮಲಗಿ ಎದ್ದಾಗ ಏಳೂವರೆ ದಾಟಿತ್ತು. ತಲೆನೋವು ಕಮ್ಮಿ ಆದ್ರೂ ಮೈ ತುಸು ಬೆಚ್ಚಗಾಗಿತ್ತು. ಜ್ವರ ಏನೂ ಬಂದಾಂಗಿಲ್ಲಾ ಅಂತಾ ಅನ್ನಿಸ್ತು ಅವ್ಳಿಗೆ. ರಾತ್ರಿ ಊಟಾ ಮುಗ್ಸಿ ಓದ್ಲಿಕ್ಕೆ ಕೂತ್ಕೊಂಡ್ಳು. ಎರಡು ಸಬ್ಜೆಕ್ಟ್ಸ್ ದು ನಾಲ್ಕು-ನಾಲ್ಕು ಪುಟಗಳನ್ನು ಓದಿ ಮುಗ್ಸಿದ್ಳು. ಅಂತೂ ಇಂತೂ ಓದ್ಲಿಕ್ಕೆ ಶುರು ಮಾಡ್ದೆ. ನಾಳೆ ಇವೆರಡೂ ಸಬ್ಜೆಕ್ಟ್ಸನ್ನು ಮುಗಿಸ್ಬೇಕು ಅಂತಾ ಸಣ್ಣ ಖುಷಿಯಲ್ಲಿ ನಿದ್ದೆ ಮಾಡಿದ್ಳು. ಆದರೆ ಮರುದಿನ ಅತಿಥಿಗಳ ಸಂಖ್ಯೆ ಜಾಸ್ತಿಯಾಯಿತೇ ಹೊರತು ಕಡಿಮೆಯೇ ಆಗಲಿಲ್ಲ. ನೆಗಡಿ, ಜ್ವರ, ಕೆಮ್ಮು, ಗಂಟಲು ನೋವು - ಎಲ್ಲಾ ಒಟ್ಟಾಗಿ ಬಂದು ಒಕ್ಕರಿಸ್ಕೊಂಡಿದ್ವು. ಹಾಸ್ಪಿಟಲ್ ಗೆ ಹೋಗೋವಷ್ಟು ತ್ರಾಣವೂ ಇರ್ಲಿಲ್ಲ. ಅವತ್ತು ಭಾನುವಾರವಾದ್ದರಿಂದ ಹಾಸ್ಟೆಲ್ ಗೆ ಡಾಕ್ಟರ್ ಬರೋದಿಲ್ಲ. ಥೋ, ಸುಮ್ಮನೇ ಶನಿವಾರ ಹೋಗಿ ಬಿಡ್ಬೇಕಿತ್ತು ಡಾಕ್ಟರ್ ಕಡೆ. ಇನ್ನು ನಾಳೆ ತನಕ ಕಾಯ್ಬೇಕಲ್ಲಾ ಅಂತಾ ಚಡಪಡಿಸಿದ್ಳು. ಅವ್ಳಿಗೆ ಭಯವಾಯ್ತು. ಹಾಸ್ಟೆಲ್ ಅಲ್ಲಿ ಇಬ್ಬರು ಮೂವರಿಗೇನೋ ಚಿಕನ್ ಫಾಕ್ಸ್ ಅಂತೆ. ತನಗೂ ಹಾಗೇನಾದ್ರೂ ಆಗ್ಬಿಟ್ರೆ..?? ಅಯ್ಯೋ, ಓದ್ದೇ ಇದ್ರೂ ಪರ್ವಾಗಿಲ್ಲ, ಎಕ್ಸಾಮ್ ಮಿಸ್ ಆಗ್ಬಾರ್ದಪ್ಪಾ ಅಂತಾ ಕೃಷ್ಣನ್ನ ಬೇಡ್ಕೊಂಡ್ಳು. ಸೋಮವಾರ ಕೊನೆಗೂ ಡಾಕ್ಟರ್ ಹತ್ತಿರ ಚೆಕ್ ಅಪ್ ಮಾಡ್ಸಿ ಟ್ಯಾಬ್ಲೆಟ್ಸ್ ತಕ್ಕೊಂಡು ಬಂದ್ಳು.
                            ಅವ್ಳು ಅಂದ್ಕೊಂಡ್ಳು, "ನಮ್ಮ ಹಣೆಬರಾನೇ ಇಷ್ಟು. ಪರೀಕ್ಷೆಗೆ ಓದು ಅನ್ನೋದು ಎಕ್ಸಾಮ್ ಹಿಂದಿನ ದಿನಾನೇ ಆಗ್ಬೇಕು ಅಂತಾ ಬರ್ದು ಇಟ್ಟಿರ್ಬೇಕು ಆ ಬ್ರಹ್ಮ. ಒಂದು ಸಲನಾದ್ರೂ ಮುಂಚಿಂದಾ ಓದಿದ್ದು ಅಂತಾ ಇದ್ಯಾ..?? ಊಹ್ಞೂಂ, ಬೆಂಕಿ ಬಿದ್ದ ಮೇಲೆನೇ ಬಾವಿ ತೋಡಿ ಕೊನೆಗೆ ಬೆಂಕಿ ಆರಿಸ್ಲಿಕ್ಕೆ ಹೋಗಿ ಹೊಗೆ ಹಾಕ್ಕೊಳೋ ಜಾತಿ ನಮ್ದು. ಈ ವಿಷ್ಯ ಅದೆಷ್ಟು ಬಾರಿ ಹೆನ್ಸ್ ಪ್ರೂವ್ಡ್ ಆಗಿಲ್ಲಾ..?? ಸುಮ್ನೇ ನೋಟ್ಸ್, ಅದೂ ಇದೂ ಅಂತಾ ಪೋಸು ಕೊಡೋದು ಅಷ್ಟೆ. ಕೊನೆಗೆ ನೆಟ್ಟಗೆ ಕೂತು ಓದೋದು ಎಕ್ಸಾಮ್ ಗೆ ಇಪ್ಪತ್ನಾಲ್ಕು ಗಂಟೆಗಳು ಉಳ್ಕೊಂಡಿರೋವಾಗ್ಲೆನೇ. ಇವತ್ತು ಹೊಟ್ಟೆ ತುಂಬಾ ಊಟಾ ಮಾಡಿ ಗುಳಿಗೆ ನುಂಗಿ ಬೇಗ ಮಲ್ಕೊಬೇಕು. ನಾಳೆ ಬೆಳಿಗ್ಗೆ ಅನ್ನೋ ಹೊತ್ಗೆ ಅದೆಷ್ಟೋ ಆರಾಮಾಗಿರತ್ತೆ. ಗಟ್ಟಿ ಕೂತು ಓದ್ಬೇಕು." ಗುಡ್ ನೈಟ್.


Thursday, 4 September 2014

ಗುರುಭ್ಯೋ ನಮಃ


ಅಜ್ಞಾನದ ಕತ್ತಲಿನ ಕೂಪದಿಂದ
ಸುಜ್ಞಾನದ ಬೆಳಕಿನ ಬಾನಿನೆಡೆಗೆ
‘ಶಿ’ಷ್ಟಾಚಾರದ ಮೂರ್ತರೂಪವೇ ತಾನಾಗಿ
‘ಕ್ಷ’ಯ ಭೋಗ, ಅಕ್ಷಯ ತ್ಯಾಗದೊಂದಿಗೆ
‘ಕ’ನ್ನಡಿಯ ಬಿಂಬದಂತೆ ನುಡಿಯುವ, ನಡೆಯುವ
ಉನ್ನತ ವ್ಯಕ್ತಿತ್ವವೇ ಶಿಕ್ಷಕ
ಅದರ ಉತ್ಕೃಷ್ಟ ಸ್ಥಾನವೇ ಗುರು

ನಾಲ್ಕು ಗೋಡೆಗಳ ಬಾಗಿಲ ಹೊರಗೂ
ಗದ್ಯ ಪದ್ಯಗಳ ಪರಿಧಿಯಾಚೆಗೂ
ಭಾವ ಬುದ್ಧಿಗಳ ಬೇಲಿಯನ್ನು ದಾಟಿ
ಎಲ್ಲ ತತ್ವಗಳ ಎಲ್ಲೆಯನ್ನು ಮೀರಿ
ವಿದ್ಯಾರ್ಜನೆಯ ಬಯಸಿ ಬಂದ ಜೀವಕೆ
ತನ್ನ ಜೀವನವನ್ನೇ ಆಹುತಿಯಾಗಿಸುವವ

ನಿನ್ನೆಗಳ ನೆರಳಿನ ಬೆಳಕಿನಲ್ಲಿ
ಉತ್ತಮ ನಾಳೆಗಳಿಗೆ ಅಡಿಪಾಯ ಹಾಕುವ
ಮೂರ್ತಿಗೊಂದು ಆಕೃತಿ ನೀಡುವ ಜನಕ
ಶಿಷ್ಯರ ಯಶಸ್ಸಿನ ತೆರೆಯಲ್ಲಿ ನಿಂತು
ತನ್ನ ಜನ್ಮದ ಸಾರ್ಥಕತೆಯ ಪಡೆವ
ಎಲ್ಲ ಗುರುಗಳ ಪಾದ ಚರಣಕ್ಕೆ ನಮನ
ಶ್ರೀ ಗುರುಭ್ಯೋ ನಮಃ


Wednesday, 3 September 2014

ಡೈರಿ ಪುಟ - ೬೨


                                 "ಹೇಯ್, ನಳಂದಾ ಯುನಿವರ್ಸಿಟಿ ಮತ್ತೆ ಶುರುವಾಗಿದೆಯಂತೆ ಅಲ್ವಾ..??" ಊಟ ಮಾಡುತ್ತಿರುವಾಗ ರೂಮ್ ಮೇಟ್ ಕೇಳಿದಳು.
                                 "ಮೊನ್ನೆಯೇ ರೀಓಪನ್ ಆಯ್ತು. ನಿಂಗೆ ಇವತ್ತು ಬೆಳಗಾಯ್ತು ಅಂತಾ ಕಾಣ್ಸತ್ತೆ." ನಾನು ಹೇಳಿದೆ.
                                 "ಹೌದಮ್ಮಾ, ನಾನೇನು ನಿನ್ನಂತೆ ಇಡೀ ದಿನ ನ್ಯೂಸ್ ಪೇಪರ್ ಓದ್ತಾ ಕೂರ್ತೀನಾ..?? ಅದ್ಕೆ ಲೇಟ್ ಆಗಿ ಸುದ್ದಿ ತಿಳಿಯತ್ತೆ. ಇವತ್ತು ಮಧ್ಯಾನ್ಹ ಲಂಚ್ ಬ್ರೇಕ್ ಹೊತ್ತಲ್ಲಿ ನಮ್ಮ ಗುಂಪಿನಲ್ಲಿ ಆಕ್ಸ್ ಫರ್ಡ್, ಕೇಂಬ್ರಿಡ್ಜ್ ಗಳ ಬಗ್ಗೆ ಮಾತುಕತೆ ನಡೀತಾ ಇತ್ತು. ಆಗ ನಳಂದಾ ವಿಷಯ ಬಂತು."
                                  "ಆಕ್ಸ್ ಫರ್ಡ್, ಕೇಂಬ್ರಿಡ್ಜ್ ಗಳಿಗಿಂತ ಎಷ್ಟೋ ಮೊದಲೇ ನಮ್ಮ ನಳಂದಾ ಯುನಿವರ್ಸಿಟಿ ಸ್ಥಾಪನೆಯಾಗಿತ್ತು. ಅದರ ಕ್ಯಾಂಪಸ್ ಎಷ್ಟು ವಿಶಾಲವಾಗಿತ್ತಂತೆ ಗೊತ್ತಾ..?? ಅಲ್ಲಿ ಅಡ್ಮಿಷನ್ ಸಿಗೋದು ಅಂದ್ರೆ ಅದು ಪುಣ್ಯದ ಸಂಗತಿ ಆಗಿತ್ತಂತೆ. ಶಿಕ್ಷಣದ ಗುಣಮಟ್ಟವೂ ಅಷ್ಟೇ ಉತ್ತಮವಾಗಿತ್ತು. ಧಾರ್ಮಿಕ ತರಗತಿಗಳು ಮಾತ್ರವಲ್ಲ. ಗಣಿತ, ತತ್ವಶಾಸ್ತ್ರ, ಸಾಹಿತ್ಯದ ವಿಷಯಗಳೂ ಬೋಧಿಸಲ್ಪಡುತ್ತಿದ್ದವಂತೆ. ಅಲ್ಲಿನ ವಿದ್ಯಾರ್ಥಿ ಜೀವನವೂ ಸಹ ತುಂಬಾ ಶಿಸ್ತಿನಿಂದ ಕೂಡಿತ್ತಂತೆ. ಎರಡು ವಾರಗಳ ಹಿಂದಷ್ಟೆ ಭೈರಪ್ಪನವರ ಸಾರ್ಥ ಓದಿದ್ದೆನಲ್ಲ, ಇನ್ನು ಪೂರ್ತಿಯಾಗಿ ಅದರ ಗುಂಗು ಹೋಗಿಲ್ಲ. ಮೊನ್ನೆ ಪೇಪರ್ ನಲ್ಲಿ ನಳಂದಾ ಬಗ್ಗೆ ಓದಿದಾಗ ಅವರ ಕಾದಂಬರಿಯಲ್ಲಿನ ನಳಂದವೇ ಕಣ್ಣು ಮುಂದೆ ಬಂತು."
                                  "ಅದು ಆಗ ವರ್ಲ್ಡ್ ಫೇಮಸ್ ಆಗಿತ್ತಂತೆ ಅಲ್ವಾ..?? ಬೇರೆ ಬೇರೆ ದೇಶಗಳಿಂದಲೂ ಸ್ಟೂಡೆಂಟ್ಸ್ ಬರ್ತಿದ್ರಂತೆ."
                                   "ಹೌದು. ಹ್ಯುಯೆನ್ ತ್ಸಾಂಗ್ ನಂಥವರೇ ನಳಂದಾ ಯುನಿವರ್ಸಿಟಿಲಿ ಭರ್ತಿ ಹದಿನೈದು ವರ್ಷಗಳಷ್ಟು ಕಾಲ ವ್ಯಾಸಂಗ ಮಾಡಿದ್ರಂತೆ. ಆಮೇಲೆ ಪರಕೀಯರ ದಾಳಿಗೊಳಗಾಗಿ ಅದರ ವೈಭವಗಳೆಲ್ಲ ನಾಶವಾಗಿ ಕೇವಲ ಕುರುಹುಗಳು ಮಾತ್ರವೇ ಉಳಿದುಕೊಂಡಿದ್ದವು. ಇದೀಗ ಬರೋಬ್ಬರಿ ೮೦೦ ವರ್ಷಗಳ ನಂತರ ಮತ್ತೆ ನಳಂದಾ ಆರಂಭವಾಗಿದೆ. ಇದರ ಪುನರುಜ್ಜೀವನದ ಕನಸನ್ನು ಬಿತ್ತಿ ಅದರ ಅನುಷ್ಠಾನಕ್ಕೆ ಕಾರಣವಾಗಿದ್ದು ಮಾಜಿ ರಾಷ್ಟ್ರಪತಿ ನಮ್ಮ ಪ್ರೀತಿಯ ಕಲಾಂ ಅಜ್ಜ ಅಂತೆ. ನಮ್ಮ ದೇಶದ ಇತರ ಕಾಲೇಜು, ಯುನಿವರ್ಸಿಟಿಗಳಂತೆ ನಳಂದಾ ಕೂಡ ಉದ್ಯೋಗಿಗಳನ್ನು ನಿರ್ಮಾಣ ಮಾಡುವ ಇನ್ನೊಂದು ಕಾರ್ಖಾನೆ ಆಗದೇ, ಅಪ್ಪಟ ಜ್ಞಾನಾರ್ಜನೆಯ ಕೇಂದ್ರವಾಗಲಿ ಎಂಬುದು ಹಾರೈಕೆ. ಆಗಲಾದರೂ ಹೊರ ದೇಶಗಳಿಗೆ ಹಾರುವ ಭಾರತೀಯರ ಸಂಖ್ಯೆ ಕಡಿಮೆಯಾದೀತು."


ಡೈರಿ ಪುಟ - ೬೧


                                      ಬಾಗಿಲ ಚಿಲಕವನ್ನು ನಾಲ್ಕು ಬಾರಿ ಜೋರಾಗಿ ಬಡಿದ ನಂತರ ಬಾಗಿಲು ತೆರೆದಳು ನನ್ನ ರೂಮ್ ಮೇಟ್. "ಅದೆಂಥಾ ಅರ್ಜೆಂಟ್ ಮಾರಾಯ್ತಿ ನಿನಗೆ..?? ಆ ಥರ ಬಾಗಿಲು ಬಡಿದೆಯಲ್ಲ. ಮತ್ತೆ ಯಾಕಿಷ್ಟು ಲೇಟ್..?? ಕ್ಲಾಸ್ ಮೂರು ಮುಕ್ಕಾಲಿಗೆ ಮುಗದಿತ್ತಲ್ವಾ..??" ಅವಳು ಪ್ರಶ್ನಿಸಿದಳು.
                                     "ತಡಿಯೇ ಪುಣ್ಯಾತ್ಗಿತ್ತಿ. ಸುಸ್ತಾಗಿ ಹೋಯ್ತು." ಎನ್ನುತ್ತಾ ನಾನು ಬ್ಯಾಗ್ ಅನ್ನು ಧೊಪ್ಪನೆ ಕುರ್ಚಿಯ ಮೇಲೆ ಇಟ್ಟು ಪಕ್ಕದಲ್ಲೇ ಇದ್ದ ಮಂಚದ ಮೇಲೆ ಉಸ್ಸಪ್ಪಾ ಎನ್ನುತ್ತಾ ಬಿದ್ದುಕೊಂಡೆ. "ಫ್ಯಾನ್ ಆನ್ ಮಾಡೇ, ಸೆಖೆಲಿ ಜೀವ ಹೋಗ್ತಿದೆ."
                                      "ಅಂದ್ರೆ ಇಷ್ಟೊಂದು ಸುಸ್ತಾಗೋವಂಥದ್ದೇನು ಕೆಲಸ ಮಾಡಿದೆ..?? ಅಂಥಾ ವಿಶೇಷ ಏನಿತ್ತು ಇವತ್ತು..??" ಫ್ಯಾನ್ ಆನ್ ಮಾಡಿ ಕುರ್ಚಿಯ ಮೇಲೆ ಕುಳಿತುಕೊಳ್ಳುತ್ತಾ ಕೇಳಿದಳು.
                                      "ಅಯ್ಯೋ, ಕ್ಲಾಸ್ ಮೂರು ಮುಕ್ಕಾಲಿಗೇ ಮುಗೀತು ಕಣೇ. ಆಮೇಲೆ ಇಂಟರ್ ನೆಟ್ ನಲ್ಲಿ ಸ್ವಲ್ಪ ಓದ್ಲಿಕ್ಕೆ, ಡೌನ್ ಲೋಡ್ ಮಾಡಲಿಕ್ಕೆ ಇತ್ತು. ಅದಕ್ಕೆ ಐದೂವರೆಯ ತನಕ ಕಾಲೇಜಿನಲ್ಲೇ ಇದ್ದೆ. ಆಮೇಲೆ ಒಂದು ಟೆಕ್ಟ್ಸ್ ಬುಕ್ ಝೆರಾಕ್ಸ್ ಮಾಡಿಸ್ಲಿಕ್ಕೆ ಕ್ರಾಸ್ ಗೆ ಹೋದೆ. ಅಲ್ಲಿ ಹೆವಿ ರಷ್. ಒಂದೂವರೆ ತಾಸು ಅಲ್ಲೇ ಕಳೀತು ನೋಡು. ಇವತ್ತಿಡೀ ದಿನ ಲ್ಯಾಪ್ ಟಾಪ್ ಹೊತ್ತಿ ತಿರುಗಾಡಿದ್ದರಿಂದ ಫುಲ್ ಸುಸ್ತಾಯ್ತು ಅಷ್ಟೆ."
                                     "ಅಂದ್ರೆ ಅಲ್ಲಿ ಝೆರಾಕ್ಸ್ ಶಾಪ್ ಅಲ್ಲಿ ಸುಮ್ಮನೇ ಟೈಮ್ ವೇಸ್ಟ್ ಆಯ್ತಲ್ಲಾ. ಬುಕ್ ಕೊಟ್ಟು ಬಂದು ನಾಳೆ ಬೆಳಿಗ್ಗೆ ಒಳ್ಗಡೆ ಝೆರಾಕ್ಸ್ ಮಾಡಿಡಿ ಅಂದಿದ್ರೆ ಆಗ್ತಿರ್ಲಿಲ್ವಾ..??"
                                     "ಆ ಬುಕ್ ನಾಳೆನೇ ಕ್ಲಾಸ್ ಮೇಟ್ ಗೆ ವಾಪಸ್ಸು ಕೊಡ್ಬೇಕಿತ್ತು. ಅದಕ್ಕೆ ಅಲ್ಲೇ ಕುಳಿತೆ. ಹ್ಞಾಂ, ನಾನೇನು ಅಲ್ಲಿ ಸುಮ್ಮನೆ ಟೈಮ್ ವೇಸ್ಟ್ ಮಾಡ್ಲಿಲ್ಲ. ಬುಕ್ ಓದ್ತಾ ಕುಂತಿದ್ದೆ."
                                      "ಯಪ್ಪಾ ಶಿವನೇ, ಅಲ್ಲೂ ಓದ್ತಾ ಕೂತ್ಕೊಂಡ್ಯಾ..?? ಅಂಗಡಿಯವನು ಏನೆಂದುಕೊಂಡನೋ ಏನೋ."
                                      "ಹ್ಞೂಂ ಮತ್ತೆ. ಯಾರು ಏನಾದರೂ ಅಂದುಕೊಳ್ಳಲಿ ಮಾರಾಯ್ತಿ. ನಾನೇನು ಕೆಟ್ಟ ಕೆಲಸ ಮಾಡ್ತಿಲ್ವಲ್ಲಾ..?? ಹಾಗೆಂದ ಮೇಲೆ ಮುಗೀತು, ನನ್ನ ಕೆಲಸ ಮುಗಿಸಬೇಕು ಅನ್ನೋದೊಂದೇ ತಲೆಯಲ್ಲಿ ಇರತ್ತೆ. ಮೊದಲೇ ನನಗೆ ಇತ್ತಿತ್ಲಾಗೆ ನನ್ನ ಕೆಲಸಗಳನ್ನೆಲ್ಲಾ ಮಾಡಿ ಮುಗಿಸೋಕೆ ದಿನದ ಇಪ್ಪತ್ನಾಲ್ಕು ಗಂಟೆಗಳು ಸಾಕಾಗ್ತಿಲ್ಲ. ನನಗೆ ಸಂಬಂಧವಲ್ಲದ ಸಂಗತಿಗಳಲ್ಲಿ ತಲೆ ಹಾಕದೇ, ಬೇಡದ ವಿಷಯಗಳ ಕುರಿತು ತಲೆ ಕೆಡಿಸಿಕೊಳ್ಳದೇ, ಕೇವಲ ನಾನು ಮತ್ತು ನನ್ನ ಕೆಲಸ - ಇದಿಷ್ಟರ ಕಡೆಗೆ ಮಾತ್ರವೇ ಗಮನ ಹರಿಸಿದರೂ ದಿನವೂ ಒಂದಲ್ಲ ಒಂದು ಕೆಲಸ ಪೆಂಡಿಂಗ್ ಆಗುತ್ತಿದೆ. ಫಾರ್ ದ ಫಸ್ಟ್ ಟೈಮ್ ಇನ್ ಲೈಫ್ ಸಮಯ ಯಾಕೋ ಜೋರಾಗಿ ಓಡ್ತಿದೆ ಅನ್ನಿಸ್ತಿದೆ. ಇದು ಒಳ್ಳೆ ಲಕ್ಷಣ ಅಂತೀಯಾ..?? ಟೈಮ್ ಸಾಲ್ತಿಲ್ಲಾ ಅನ್ನೋ ಬೇಸರದ ನಡುವೆಯೂ ನನಗೇನೋ ಒಂಥರಾ ಖುಷಿ ಆಗ್ತಿದೆ"
                                        "ನನಗೆ ಪ್ರಪಂಚದ ಭವಿಷ್ಯದ ಕುರಿತು ಹೆದರಿಕೆ ಮತ್ತೆ ಚಿಂತೆ ಆಗ್ತಿದೆ. ಪ್ರಳಯ ಗಿಳಯ ಏನೂ ಆಗದೇ ಇದ್ರೆ ಸಾಕಪ್ಪಾ ಶಿವನೇ."
                                        "ಸುಮ್ನಿರೇ, ನಿಂದೊಂದು ಒಣಾ ಜೋಕು." ನಾನು ಹುಸಿ ಮುನಿಸು ತೋರಿಸಿದೆ.
                                        "ಹ್ಹಾ ಹ್ಹಾ. ಟೈಮ್ ಆಂಡ್ ವರ್ಕ್ ಬಗ್ಗೆ ಇಷ್ಟೊಂದು ಸೀರಿಯಸ್ ನೆಸ್ ಬಂದಿದೆ ಅಂದ್ರೆ ಒಂದಲ್ಲಾ ಒಂದು ದಿನ ಯು ವಿಲ್ ಶ್ಯೂರ್ಲಿ ಬಿಕಮ್ ಉದ್ಧಾರ್ಡ್. ಈಗ ಏಳು, ಅಟೆಂಡನ್ಸ್ ಟೈಮ್ ಆಯ್ತು." ಅವಳು ಎದ್ದು ನಿಲ್ಲುತ್ತಾ ಹೇಳಿದಳು.


Monday, 1 September 2014

ಮುಸುಕು (ಭಾಗ - ೨)                                     ಮನಸ್ಸು ಆರೇಳು ವರ್ಷಗಳ ಹಿಂದಕ್ಕೋಡಿತು. ಮನೆಯಲ್ಲಿ ಅಣ್ಣನ ಎಂದರೆ ದೊಡ್ಡಪ್ಪನ ಮಗನ ಮದುವೆ ನಿಶ್ಚಯವಾಗಿತ್ತು. ಆಗಷ್ಟೇ ನನಗೆ ಎಂಜಿನಿಯರಿಂಗ್ ಪ್ರಥಮ ವರ್ಷ ಮುಗಿದು ಸೆಮಿಸ್ಟರ್ ರಜಾದಿನಗಳು ಶುರುವಾಗಿದ್ದವು. ಹಾಗಾಗಿ ನಿಶ್ಚಿತಾರ್ಥದಿಂದ ಪ್ರಾರಂಭವಾಗಿ ಮದುವೆಯ ತನಕದ ಎಲ್ಲ ಕಾರ್ಯಕ್ರಮಗಳನ್ನೂ, ಸಿದ್ಧತೆಗಳನ್ನೂ ತೀರಾ ಹತ್ತಿರದಿಂದ ನೋಡಿದ್ದೆ, ಅವೆಲ್ಲವುಗಳಲ್ಲಿ ಖುದ್ದು ಭಾಗವಹಿಸಿದ್ದೆ. ಮನೆಯಲ್ಲಿ, ಮನೆಯ ಜನರಲ್ಲಿ ಎದ್ದು ಕಾಣುವ ಸಂಭ್ರಮ, ಸಡಗರ, ಶ್ರದ್ಧೆ, ಆಸ್ಥೆಗಳನ್ನು ನೋಡಿ ಪುಳಕಿತನಾಗಿ ಮದುವೆಯೆಂದರೆ ಬಹಳ ಪವಿತ್ರವಾದ ಕಾರ್ಯವೆಂಬ ಬೆಚ್ಚಗಿನ ಭಾವನೆ ಮನದಲ್ಲಿ ಮನೆ ಮಾಡಿತ್ತು. ಅದರಿಂದಾಗಿಯೇ ಏನೋ ಎಂಬಂತೆ ಆ ಎರಡು ತಿಂಗಳುಗಳಲ್ಲಿ ಎಂದೂ ಇಲ್ಲದ ಉತ್ಸಾಹ ನನ್ನಲ್ಲಿ ಮೂಡಿತ್ತು. ಅದನ್ನು ಗಮನಿಸಿದ ದೊಡ್ಡಮ್ಮ "ನೋಡೇ, ತನ್ನದೇ ಮದುವೆ ಎನ್ನುವಂತೆ ಓಡಾಡುತ್ತಿದ್ದಾನೆ ನಿನ್ನ ಮಗ" ಎಂದು ಅಮ್ಮನೊಡನೆ ಹಾಸ್ಯ ಮಾಡಿದ್ದಳು ಕೂಡಾ. ಅಂದು ಅವರ ಮಾತುಗಳನ್ನು ಕೇಳಿ ನನ್ನ ಒರಟು ಮುಖದಲ್ಲೂ ಮೃದುವಾದ ಕೆಂಪು ಕಾಣಿಸಿತ್ತು. ಅದೇಕೆ ಎಂದು ನನಗೆ ಅಂದು ಅರ್ಥವಾಗಿರಲಿಲ್ಲ. ಆದರೆ ಆಗಿನ ಬೆಚ್ಚಗಿನ ಭಾವ ಈಗ ಇಲ್ಲ. ಪೂರ್ತಿ ತಣ್ಣಗಾಗಿ ಕೊರಡಾಗಿ ಹೋಗಿದೆ.
                                 ಸ್ನಾನ ಮುಗಿಸಿ ಬಂದವನೇ ಸೀದಾ ದೇವರ ಫೋಟೋದ ಮುಂದೆ ಅಡ್ಡಬಿದ್ದೆ. ಜನಿವಾರವೇನೋ ನೆಪಮಾತ್ರಕ್ಕೆ ಮೈಯ್ಯಲ್ಲಿತ್ತು. "ಗಜಾನನಂ ಭೂತ ಗಣಾದಿ ಸೇವಿತಂ" ಒಂದನ್ನು ಬಿಟ್ಟು ಬೇರೆ ಯಾವ ಮಂತ್ರಗಳೂ ನೆನಪಿರಲಿಲ್ಲ. ಪ್ರತಿ ಬಾರಿ ಊರಿಗೆ ಹೋದಾಗಲೂ ಅಮ್ಮ ಮರೆಯದೇ ಕಟ್ಟಿಕೊಡುತ್ತಿದ್ದ ದೇವಸ್ಥಾನದ ಕುಂಕುಮ ಪ್ರಸಾದವನ್ನು ಹಣೆಗೆ ಒತ್ತಿಕೊಳ್ಳುವ ರೂಢಿಯೂ ಅದ್ಯಾವಾಗಿನಿಂದ ತಪ್ಪಿ ಹೋಗಿದೆಯೆಂದು ನೆನಪಾಗುತ್ತಿಲ್ಲ. ಫೋಟೋದ ಹಿಂದೆ ಅಡಗಿ ಕುಳಿತಿದ್ದ ಪುಟ್ಟ ಹಲ್ಲಿಯೊಂದು ನನ್ನನ್ನೇ ಅಣಕಿಸುವಂತೆ ದಿಟ್ಟಿಸುತ್ತಿತ್ತು. ಅದನ್ನು ಅಲ್ಲಿಂದ ಓಡಿಸಿ ಬೆಡ್ ರೂಮಿಗೆ ಬಂದು ಕಬೋರ್ಡ್ ತೆಗೆದು ಕೈಗೆ ಸಿಕ್ಕ ಶರ್ಟ್ ಸಿಕ್ಕಿಸಿ ಜೀನ್ಸ್ ಮೇಲಕ್ಕೇರಿಸಿಕೊಂಡು ಮನೆಯಿಂದ ಹೊರಬಿದ್ದು ಮುಂದಿನ ಬಾಗಿಲಿಗೆ ಬೀಗ ಜಡಿದ ನಂತರ ಎಲ್ಲಿಗೆ ಹೋಗುವುದು ಎಂಬ ಯೋಚನೆ. ಹಿಂದಿನ ರಾತ್ರಿಯ ತೀರ್ಥ ಪ್ರಸಾದಗಳ ಪ್ರಭಾವ ಇನ್ನೂ ಇಳಿದಿರದ ಕಾರಣ ಹೊಟ್ಟೆ ತುಂಬಿಸುವ ಕೆಲಸ ಸದ್ಯಕ್ಕಂತೂ ಅಗತ್ಯವೆನಿಸಲಿಲ್ಲ. ಪೋರ್ಟಿಕೋದಲ್ಲಿ ಮಲಗಿದ್ದ ಬೆಂಝ್ ಅನ್ನು ಎಬ್ಬಿಸಿ ಸವಾರಿ ಹೊರಡಿಸುವ ಮನಸ್ಸಾಗಲಿಲ್ಲ. ಹೀಗೆಯೇ ಸುಮ್ಮನೆ ನಡೆದು ಹೋಗುತ್ತಿರೋಣವೆಂಬ ಲಹರಿ ಬಂದು ಅಂತೆಯೇ ಸಾಗಿ ಗೇಟು ದಾಟಿದೆ. ಹಾಗೆಯೇ ನೂರು ಹೆಜ್ಜೆ ನಡೆದು ಬರುವಷ್ಟರಲ್ಲಿ ಸಣ್ಣದೊಂದು ಟೀ ಸ್ಟಾಲ್ ಕಣ್ಣಿಗೆ ಬಿತ್ತು. ಅಂಗಡಿಯ ಓನರ್ ಇರಬೇಕು ಆ ಹೆಂಗಸು. ತನ್ನ ಸುಮಾರು ಹದಿನಾರು-ಹದಿನೇಳು ವರ್ಷದ ಮಗನಿಗೆ ಬೈಯ್ಯುತ್ತಿದ್ದಳು. ಆ ಮಹರಾಯ ಅದ್ಯಾವ ತಪ್ಪು ಕೆಲಸ ಮಾಡಿದ್ದನೋ ಏನೋ. "ಬರಬರುತ್ತಾ ರಾಯರ ಕುದುರೆ ಕತ್ತೆಯಾಯ್ತಂತೆ. ನಿನ್ನ ಕಥೆನೂ ಹಂಗೆ ಆಯ್ತು, ಬೇವರ್ಸಿ ನನ್ನ ಮಗನೇ". ಆಕೆಯ ಬೈಗುಳ ಕೇಳಿದ ಮರುಕ್ಷಣವೇ ನನಗೆ ದೀಪಿಕಾ ನೆನಪಾದಳು. ಅವಳು ನನಗೆ ಯಾವಾಗ ಬೈಯ್ಯುವುದಿದ್ದರೂ ಅದೊಂದೇ ಗಾದೆಯನ್ನು ಹೇಳುತ್ತಿದ್ದಳು. ಹಿಂದೆ ಮುಂದೆ ಬೇರೆ ಏನೂ ಬೈಗುಳವಾಗಲೀ, ಗದರಿಕೆಯಾಗಲೀ, ಬುದ್ಧಿಮಾತುಗಳನ್ನಾಗಲೀ ಹೇಳುತ್ತಾ ತಾಸುಗಳವರೆಗೆ ಕೊರೆಯುತ್ತಿರಲಿಲ್ಲ. ನನ್ನ ತುಟಿಯಂಚಿನಲ್ಲಿ ಮುಗುಳ್ನಗೆ ಅರಳಿತು. ಹಾಗೆಯೇ ದೀಪಿಕಾಳ ಮೇಲೆ ಕೋಪವೂ ಬಂತು. ಅವಳು ನನ್ನೊಡನೆ ಮಾತನಾಡಿ ಅದೆಷ್ಟು ದಿವಸಗಳಾದವು. ಹಿಂದಿನ ಶುಕ್ರವಾರ ಬೆಳಿಗ್ಗೆ ಗುಡ್ ಮಾರ್ನಿಂಗ್ ಅಂದಿದ್ದೇ ಕೊನೆ. ಆ ನಂತರ ಹ್ಞೂಂ ಇಲ್ಲ, ಹ್ಞಾಂ ಇಲ್ಲ. ಇವಳೊಬ್ಬಳೇ ಏನು ಅಮೆರಿಕಾಗೆ ಎಂ. ಡಿ. ಓದಲಿಕ್ಕೆ ಹೋಗಿದ್ದು..?? ಹುಡ್ಗೀರ ಫ್ರ್ಂಡ್ ಶಿಪ್ ಎಂದರೆ ಹೀಗೆ. ಭೌತಿಕವಾಗಿ ದೂರ ಇದ್ದಾರೆಂದರೆ ಮನಸ್ಸಿಂದಾನೂ ದೂರ ಆಗಿ ಬಿಡ್ತಾರೆ. ನಾನೇ ಒಂದು ವ್ಯಾಟ್ಸ್ ಆಪ್ ಮೆಸೇಜು ಹಾಕಲೇ..?? "ಮನು ಇನ್ನೂ ಬದುಕಿಯೇ ಇದ್ದಾನೆ ಕಣೇ" ಅಂತ. ಬೇಡ, ಅವಳಾಗಿಯೇ ಮಾತನಾಡಿಸುವವರೆಗೂ ನಾನು ಕೂಡ ಬಾಯಿ ತೆರೆಯುವುದಿಲ್ಲ ಎಂದು ನಿರ್ಧರಿಸಿ ಸುಮ್ಮನಾದೆ.
                                   ದೀಪಿಕಾ!! ಚಡ್ಡಿ ಕೆಳಗೆ ಜಾರಿದರೆ ಸರಿಯಾಗಿ ಮೇಲಕ್ಕೇರಿಸಿಕೊಳ್ಳಲೂ ಬಾರದಿದ್ದ ವಯಸ್ಸಿನಿಂದಲೇ ನಾವಿಬ್ಬರೂ ಸ್ನೇಹಿತರು, ಸಮವಯಸ್ಕರೂ ಹೌದು. ನನಗೆ ಒಡ ಹುಟ್ಟಿದವರ್ಯಾರೂ ಇಲ್ಲ, ಆಕೆಗೆ ಅಣ್ಣನೊಬ್ಬ ಇದ್ದರೂ ಇಬ್ಬರಿಗೂ ವಯಸ್ಸಿನ ಅಂತರ ಬಹಳ. ಹಾಗಾಗಿ ಅಕ್ಕಪಕ್ಕದ ಮನೆಯವರಾಗಿದ್ದ ನಮ್ಮಿಬ್ಬರಿಗೂ ಗಾಢವಾದ ಸ್ನೇಹವಿತ್ತು. ಹತ್ತನೇ ತರಗತಿಯ ಕೊನೆಯ ದಿನಗಳಲ್ಲಿ ಎಂದು ನೆನಪು. ಸಹಪಾಠಿ ದರ್ಶನ್ ಒಮ್ಮೆ ಕೇಳಿದ್ದ, "ಅಲ್ವೋ, ಅವಳು ಅದ್ ಹ್ಯಾಗೆ ನಿಂಜೊತೆ ಅಷ್ಟು ಸಲುಗೆಯಿಂದಿದ್ದಾಳೋ ಮಾರಾಯಾ..?? ನಾನೂ ಕೂಡಾ ಚಿಕ್ಕಂದಿನಿಂದಲೇ ಅವಳೊಟ್ಟಿಗೆ ಓದ್ದೋನು. ಎಲ್ಲಾ ಪ್ರೊಜೆಕ್ಟ್ಸ್, ಗ್ರೂಪ್ ಆಕ್ಟಿವಿಟೀಸ್ ಅಲ್ಲಿ ಪಾರ್ಟ್ನರ್ ಬೇರೆ. ಆದರೂ ನನ್ನ ಜೊತೆಗಾಗ್ಲಿ, ಬೇರೆ ಯಾವ್ದಾದ್ರೂ ಹುಡುಗನ ಜೊತೆಗಾಗ್ಲಿ ಎಷ್ಟು ಬೇಕೋ ಅಷ್ಟೆ ಮಾತು, ಸಲುಗೆ ಅನ್ನೋವಷ್ಟೆಲ್ಲಾ ಇಲ್ವೇ ಇಲ್ಲ." "ಶಾಲೆಯಲ್ಲಿ ಮಾತ್ರ ಅಲ್ಲ ಕಣೋ, ನಾವಿಬ್ಬರೂ ಚೈಲ್ಡ್ ಹುಡ್ ಫ್ರೆಂಡ್ಸ್" ನನ್ನ ಉತ್ತರ ಕೇಳಿ ಆತ ತಲೆಯಲ್ಲಾಡಿಸುತ್ತಾ ಹೇಳಿದ್ದ, "ಅದೇನೆ ಇದ್ರೂನು ಅವಳು ಬಹಳ ಹಚ್ಚಿಕೊಂಡಿರೋದು ನಿನ್ನ ಮಾತ್ರ ನೋಡು. ಯುಶೂವಲಿ, ಹೈ ಸ್ಕೂಲ್ ನಲ್ಲಿ ಚೈಲ್ಡ್ ಹುಡ್ ಫ್ರೆಂಡ್ಸ್ ಆಗಿರೋ ಹುಡ್ಗೀರೆಲ್ಲಾ ಸ್ವಲ್ಪ ಸಲಿಗೆ ಕಮ್ಮಿ ಮಾಡ್ತಾರಪಾ. ದೀಪಿಕಾ ನಿಂಜೊತೆ ಹಾಗಿಲ್ವಲ್ಲಾ" ಅಂದು ಅವನೇನು ಹೇಳುತ್ತಿದ್ದಾನೆ ಅನ್ನೋದು ನನಗೆ ದೇವರಾಣೆ ಅರ್ಥ ಆಗಿರಲಿಲ್ಲ. ಅವಳು ನನ್ನ ಜೊತೆ ಮಾತ್ರ ಕ್ಲೋಸ್ ಆಗಿರೋದನ್ನ ಕಂಡು ಹೊಟ್ಟೆ ಉರಿಯಿಂದ ಏನೇನೋ ಹೇಳಿದಾನೆ ಮಗಾ ಅಂತ ತೀರ್ಮಾನಿಸಿದ್ದೆ. ಆದರೆ ನನಗೇಕೋ ಒಳಗೊಳಗೆ ಖುಷಿಯಾಗಿತ್ತು. ಒಂದೆರಡು ವಾರಗಳ ನಂತರ ಅಚಾನಕ್ ಆಗಿ ದರ್ಶನ್ ಹೇಳಿದ್ದ ಮಾತುಗಳು ನೆನಪಾಗಿ ದೀಪಿಕಾ ಏಕೆ ನನ್ನ ಜೊತೆ ಅಷ್ಟು ಸಲಿಗೆಯಿಂದಿದ್ದಾಳೆ ಎಂದು ಆಶ್ಚರ್ಯವಾಗಿತ್ತು. ಎಷ್ಟು ಯೋಚಿಸಿದರೂ ಉತ್ತರ ಹೊಳೆದಿರಲಿಲ್ಲ. ಇದರ ಕುರಿತು ಅವಳನ್ನೇ ಕೇಳುವ ಮನಸ್ಸೂ, ಧೈರ್ಯವೂ ಇರಲಿಲ್ಲ. ಅಂತೆಯೇ ನನಗೂ ಬೇರೆ ಯಾವ ಹುಡುಗಿಯೊಂದಿಗೂ ಸಲಿಗೆಯಿರಲಿಲ್ಲವೆಂಬ ನೆನಪಾಯಿತು. ಈಗಲೂ ಇಲ್ಲವಲ್ಲ. ಒಮ್ಮೆ ತಲೆ ಕೊಡವಿಕೊಂಡೆ. ಎಲ್ಲಿಂದಲೋ ದೋಸೆಯ ಮಸಾಲೆ ಪರಿಮಳ. ಕತ್ತನ್ನು ಮುನ್ನೂರಾ ಅರವತ್ತು ಡಿಗ್ರಿಯಲ್ಲಿ ಅತ್ತ, ಇತ್ತ, ಸುತ್ತಲೆಲ್ಲಾ ಹೊರಳಿಸಿ ನೋಡಿದರೂ ಎಲ್ಲಿಯೂ ದೋಸೆ ಮಾಡುತ್ತಿರುವವರಾಗಲೀ, ತಿನ್ನುತ್ತಿರುವವರಾಗಲೀ ಕಾಣಿಸಲಿಲ್ಲ. ನನಗೂ ದೋಸೆ ತಿನ್ನಬೇಕೆಂಬ ಬಲವಾದ ಆಸೆ ಕಾಣಿಸಿಕೊಂಡಿತು. ಆದರೆ ಇಲ್ಲೆಲ್ಲೂ ದೋಸೆ ಸಿಗುವುದಿಲ್ಲ. ಅದರ ಸಲುವಾಗಿ ಇನ್ನೆಷ್ಟು ದೂರವನ್ನು ಸವೆಸಬೇಕಾದೀತೋ ಎನಿಸಿದರೂ ದೋಸೆಯ ಆಸೆ ಮಾತ್ರ ಕೊಂಚವೂ ಕಡಿಮೆಯಾಗಲಿಲ್ಲ. ದೇವರು ನಾಲಿಗೆ ಕೊಟ್ಟಿದ್ದು ದಂಡಕ್ಕೆ ಏನು ಎಂದುಕೊಂಡು ಒಂದೆರಡು ಅಂಗಡಿಗಳಲ್ಲಿ ವಿಚಾರಿಸಿದಾಗ ತಿಳಿಯಿತು, ಇನ್ನೂರು ಮೀಟರ್ ಅಂತರದಲ್ಲಿಯೇ ಇದೆ ಹೋಟೆಲ್. ಸರಿ ಎನ್ನುತ್ತಾ ಹಾದಿ ಹಿಡಿದು ಹೊರಟೆ.
                                          ಹೋಟೆಲ್ ಎದುರು ಬಂದು ನಿಂತುಕೊಂಡಾಗ ಮಾತ್ರ ತಲೆ ಕೆರೆದುಕೊಳ್ಳುವಂತಾಯಿತು. ಉಡುಪಿ ಹೋಟೆಲ್!!! ನಾನು, ದೀಪು ಬರೋಬ್ಬರಿ ನಾಲ್ಕು ವರ್ಷಗಳ ಕಾಲ ಇಲ್ಲಿಯ ದೋಸೆಗಳ ರುಚಿ ಸವಿದಿದ್ದೆವು. ಈ ಹೋಟೆಲ್ ಇಲ್ಲಿ, ನನ್ನ ಮನೆಗೆ ಇಷ್ಟು ಹತ್ತಿರದಲ್ಲಿ ಇತ್ತೇ..?? ಅಂಗಡಿಯವರು ದಾರಿ ತಿಳಿಸಿದ ಮೇಲಾದರೂ ನಾನು ಹೆಜ್ಜೆ ಹಾಕುತ್ತಿರುವುದು ಇಲ್ಲಿಗೆನೇ ಎಂಬ ಸತ್ಯ ಹೊಳೆಯದೇ ಹೋಗಿದ್ದು ಹೇಗೆ..?? ಕಳೆದೆರಡು ವರ್ಷಗಳಿಂದ ಫೈವ್ ಸ್ಟಾರ್, ಸೆವೆನ್ ಸ್ಟಾರ್ ಗಳನ್ನು ಬಿಟ್ಟು ಬೇರೆ ಹೋಟೆಲ್ ಗಳತ್ತ ನಾನು ಕಾರು ಓಡಿಸಿದ್ದೇ ಇಲ್ಲ. ದೀಪುಗೆ ಸಣ್ಣ ಹೋಟೆಲ್ ಗಳಿಗೆ ಹೋಗುವುದೇ ಇಷ್ಟವಾಗುತ್ತಿತ್ತು. "ಹಸಿವು ಅಂತಾ ತಿನ್ಲಿಕ್ಕ್ ಹೋದ್ರೆ ಹಸಿವಾರೋ ತನಕಾ ಕಾಯಿಸಿ ಕೂರಿಸ್ತಾರೆ" ಎನ್ನುತ್ತಾ ಸ್ಟಾರ್ ಹೋಟೆಲ್ ಗಳ ಕುರಿತಾದ ತನ್ನ ಅಸಮಾಧಾನವನ್ನು ಹೊರಹಾಕುತ್ತಿದ್ದಳು. ಅವಳು ಅಮೆರಿಕಾಗೆ ಹಾರಿ ಹೋದಂದಿನಿಂದ ನಾನು ಇತ್ತ ಕಡೆ ಬಂದೇ ಇಲ್ಲ. ಇವತ್ತು ನಡೆದುಕೊಂಡು ಬಂದಿದ್ದರಿಂದ ಮತ್ತೆ ಈ ಹೋಟೆಲ್ ಗೆ ಬರುವಂತಾಯಿತು. ಕಾರಿನ ಗ್ಲಾಸ್ ಏರಿಸಿಕೊಂಡು ನೂರಿಪ್ಪತ್ತು ಕಿಲೋ ಮೀಟರ್ ವೇಗದಲ್ಲಿ ಸಾಗುವಾಗ ದೋಸೆಯ ವಾಸನೆ ಮೂಗಿಗೆ ಬಡಿಯುತ್ತಿತ್ತೇ..?? ಆದರೂ ಇಷ್ಟು ಬೇಗನೇ ನನಗೆ ಅದು ಹೇಗೆ ಈ ಜಾಗ ಅಪರಿಚಿತವಾಗಿ ಹೋಯಿತು ಎಂದುಕೊಳ್ಳುತ್ತಿರುವಾಗ ಬಂದಿತು ನನ್ನ ನೆಚ್ಚಿನ ಈರುಳ್ಳಿ ದೋಸೆ. ಹಸಿಮೆಣಸಿನ ಕಾಯಿಯ ಚಟ್ನಿಯನ್ನು ದೊಸೆ ಚೂರಿಗೆ ಹಚ್ಚಿಕೊಂಡು ಬಾಯೊಳಗಿಟ್ಟು ನಾಲಿಗೆಗೆ ಖಾರದ ಬಿಸಿ ತಾಗುವಷ್ಟರಲ್ಲಿ ನೆನಪಾಯಿತು. (ಮುಂದುವರೆಯುವುದು)

Thursday, 28 August 2014

ಮುಸುಕು (ಭಾಗ ೧)


                                 ಮತ್ತೊಮ್ಮೆ ಅಲಾರಾಂ ಹೊಡೆದುಕೊಂಡಿತು. ಇದು ಐದನೇ ಬಾರಿ. ಸ್ನೂಜ್ ಬಟನ್ ಒತ್ತಿದೆನಾದರೂ ತಿರುಗಿ ಮುಸುಕೆಳೆದು ಮಗ್ಗಲು ಹೊರಳಿಸುವ ಮನಸ್ಸಾಗದೇ ಎದ್ದು ಕುಳಿತೆ. ಮೊಬೈಲ್ ಕೈಗೆತ್ತಿಕೊಂಡರೆ ಏಳು ಮಿಸ್ಡ್ ಕಾಲ್ ಗಳೆಂದು ನೋಟಿಫಿಕೇಷನ್ ಕುಣಿಯುತ್ತಿತ್ತು. ಯಾರದೆಂದು ಗೊತ್ತಾಗಿ ಸುಮ್ಮನೇ ಮೊಬೈಲ್ ಅನ್ನು ದಿಂಬಿನ ಕಡೆ ಎಸೆದೆ. ಅಷ್ಟು ಮಿಸ್ಡ್ ಕಾಲ್ ಗಳಿದ್ದರೂ ಬೆಳ್ಳಂಬೆಳಿಗ್ಗೆ ಸುಮ್ಮನೇ ಮನಸ್ಸು ಕೆಡುವುದು ಬೇಡವೆಂದು ನಾನಾಗಿಯೇ ಕಾಲ್ ಮಾಡುವ ಆಲೋಚನೆಯನ್ನು ತಡೆಹಿಡಿದೆ. ಗಡಿಯಾರ ೧೦.೧೦ ಎಂದು ತೋರಿಸುತ್ತಿತ್ತು. ಐದು ನಿಮಿಷ ಹಾಗೆಯೇ ಕುಳಿತೆ. "ಕ್ಯೂಂ ಕೀ ತುಮ್ ಹೀ ಹೋ, ಅಬ್ ತುಮ್ ಹೀ ಹೋ" ಎನ್ನುತ್ತಾ ಅಲಾರಾಂ ಹಾಡಲು ಪ್ರಾರಂಭಿಸಿತು. ಬೇರೆ ಯಾವುದೂ ಹಾಡು ಸಿಕ್ಕಲಿಲ್ಲವೇ ಎಂಬ ಅಸಮಾಧಾನದೊಂದಿಗೆ ನನ್ನ ಮೇಲೆಯೇ ನನಗೆ ಸಿಟ್ಟು ಬಂದು ಥತ್ ಎನ್ನುತ್ತಾ ಎಕ್ಸ್ ಪೀರಿಯಾವನ್ನು ಹಾಸಿಗೆಯ ಮೇಲೆ ಕುಟ್ಟಿದೆ. ಒಮ್ಮೆಲೇ ವಿನಾಕಾರಣ ಮನಸ್ಸಿನಲ್ಲಿ ವ್ಯಸನ ತುಂಬಿಕೊಂಡಿತು. ಇನ್ನೊಂದು ನಿಮಿಷ ಹೀಗೆಯೇ ಕುಳಿತಿದ್ದರೆ ಹುಚ್ಚು ಹಿಡಿಯುವುದು ಗ್ಯಾರಂಟಿ ಎಂದೆನಿಸಿ ಭಯವಾಗಿ ಥಟ್ಟನೆ ಎದ್ದು ಟೂತ್ ಪೇಸ್ಟ್. ಬ್ರಶ್ ಗಳನ್ನು ಹಿಡಿದು ಬಾತ್ ರೂಮಿನತ್ತ ನಡೆದೆ.
                               ಸಿಂಕ್ ನತ್ತ ಬಗ್ಗಿ ನಲ್ಲಿಯ ನೀರನ್ನು ಮೂರು ಬಾರಿ ಮುಖಕ್ಕೆ ಹೊಯ್ದುಕೊಳ್ಳುತ್ತಿದ್ದಂತೆ ಅಮ್ಮ ನೆನಪಾದಳು. ಈಗೀಗ ಅವಳ ನೆನಪಾದಾಗಲೆಲ್ಲಾ ಒಂದು ಬಗೆಯ ಕಿರಿಕಿರಿ ಉಂಟಾಗುತ್ತದೆ. ಮೊದಲು ಸ್ವತಃ ನಾನೇ ದಿನಕ್ಕೆ ೩-೪ ಬಾರಿ ಕಾಲ್ ಮಾಡಿ ಅವಳೊಂದಿಗೆ ಮಾತನಾಡುತ್ತಿದ್ದೆ. ಈಗ ಅವಳಾಗಿಯೇ ಕರೆ ಮಾಡಿದರೂ ಎತ್ತುವ ಮನಸ್ಸಾಗದೇ ಆಮೇಲೆ ಏನಾದರೊಂದು ನೆಪ ಹೇಳುವಂತಾಗುತ್ತದೆ. ನಿನ್ನೆ ರಾತ್ರಿ ಮಲಗುವ ಮುನ್ನವಷ್ಟೆ ಮಾತನಾಡಿದ್ದೇನೆ. ಇಂದು ಬೆಳಿಗ್ಗೆ ನಾನು ಏಳುವ ಮುನ್ನವೇ ಮತ್ತೆ ಏಳು ಬಾರಿ ಕರೆ. ಪ್ರತಿ ಬಾರಿಯೂ ಅದೇ ಹಾಡು, ಅದೇ ಅಲಾಪ. ಛೇ, ಹೆತ್ತ ತಾಯಿಯ ಕುರಿತಾಗಿ ಹೀಗೆಲ್ಲಾ ಬೇಸರಿಸಿಕೊಳ್ಳಬಾರದೆಂದು ಅದೆಷ್ಟು ಬಾರಿ ಅಂದುಕೊಂಡರೂ ಹಾಗೆ ನಡೆದುಕೊಳ್ಳುವುದು ಸಾಧ್ಯವಾಗುತ್ತಿಲ್ಲ. "ಹೇಗಿದ್ದೀಯಾ..?? ಕೆಲಸ ಹೇಗೆ ಸಾಗಿದೆ..?? ಊಟವಾಯಿತಾ..?? " ಎಂಬ ಯಾವತ್ತೂ ಕ್ಷೇಮ ಸಮಾಚಾರಗಳ ನಂತರ ಶುರುವಾಗುತ್ತದೆ ಪದ್ಯ. "ಮನು, ಇನ್ನೂ ಎಷ್ಟು ದಿನಾಂತ ಹೀಗೆ ಒಂಟಿಯಾಗಿರ್ತೀಯಾ..?? ಈಗಂತೂ ಲೈಫ್ ಅಲ್ಲಿ ಫುಲ್ ಸೆಟಲ್ ಆಗಿದೀಯಾ. ನಿನ್ನ ಓರಗೆಯವರಿಗೆಲ್ಲಾ ಕಳೆದ ವರ್ಷವೇ ಮದುವೆಯಾಯಿತು. ನೀನು ಮಾತ್ರ ಎಲ್ಲಿಯವರೆಗೆ ಹೀಗೆ ಹೊಟೆಲ್ ಊಟ ತಿಂತೀಯಾ..?? ಜಾಬ್ ಮಾಡಲಿಕ್ಕೆ ಶುರುವಾದಾಗಿನಿಂದ ಇಳಿತಾನೇ ಇದೀಯಾ. ಹೆಂಡತಿಯ ಕೈ ಅಡುಗೆ ಇದ್ದಿದ್ದರೆ ಹೀಗಾಗ್ತಿತ್ತಾ..??.." ಮುಂದುವರೆಯುತ್ತಲೇ ಇರುತ್ತದೆ ಅದು. ಒಂದೆರಡು ಬಾರಿ ತಾಳಲಾರದೇ ಅರ್ಧದಲ್ಲಿಯೇ ಫೋನ್ ಕಟ್ ಮಾಡಿದ್ದೂ ಇದೆ. ಅಲ್ಲಾ, ಈ ತಾಯಂದಿರಿಗೆ ಮಕ್ಕಳು ಯಾವಾಗ ದಪ್ಪಗಾದ ಹಾಗೆ ಕಾಣುತ್ತಾರೆ..?? ಮನೆಯಲ್ಲಿದ್ದರೂ ಒಂದೇ, ಹೊರಗಡೆಯಿದ್ದರೂ ಒಂದೇ. ಇನ್ನು ಅವಳ ಹೆಂಡತಿಯ ಕೈ ಅಡುಗೆ ಎಂಬ ಮಾತನ್ನು ನೆನೆಸಿಕೊಂಡರೆ ನಗು ಬರುತ್ತದೆ. "ಅಮ್ಮಾ, ಅದೆಲ್ಲಾ ನಿನ್ನ ಕಾಲಕ್ಕಾಯಿತು. ಈಗ ಕಾಫಿ ಮಾಡುವುದು ಬಿಡು, ನೆಟ್ಟಗೆ ಕಾಫಿ ಲೋಟವನ್ನು ತೊಳೆಯುವ ಕೆಲಸ ಕೂಡ ಮುಕ್ಕಾಲು ಮಂದಿ ಹುಡುಗಿಯರಿಗೆ ಬರುವುದಿಲ್ಲ" ಎಂದು ಹೇಳಬೇಕೆನಿಸುತ್ತದೆ.
                                    ಮುಖ ಮಾರ್ಜನ ಮುಗಿಸಿ ಡ್ರಾಯಿಂಗ್ ರೂಮಿಗೆ ಬಂದೆ. ದಿನಪತ್ರಿಕೆಗಳಲ್ಲಿ ಏನಿದೆಯೆಂದು ನೋಡಲು ಕೈಗೆತ್ತಿಕೊಂಡರೆ ಅದ್ಯಾವುದೋ ಅತ್ಯಾಚಾರ ಪ್ರಕರಣದ ಕುರಿತು ದೊಡ್ಡದಾದ ಕೆಂಪು ಅಕ್ಷರಗಳ ತಲೆಬರಹ ಕಣ್ಣಿಗೆ ರಾಚಿಸಿತು. ಇವತ್ತಿನ ದಿನ ಅತ್ಯಾಚಾರವೆನ್ನುವುದು ಮಾಮೂಲಿ ಸುದ್ದಿಯಾಗಿ ಬಿಟ್ಟಿದೆ, ಅವನ್ಯಾರೋ ಕಾಲು ಜಾರಿ ಬಿದ್ದನಂತೆ ಎನ್ನುವಷ್ಟು ಸಹಜವಾಗಿ ಅಲ್ಲೆಲ್ಲೋ ಅತ್ಯಾಚಾರವಾಗಿದೆಯಂತೆ ಅಂತಾ ಹೇಳುವುದನ್ನು ಕೇಳಿದ್ದೇನೆ. ಆಚಾರವಿಲ್ಲದ ಮನಸ್ಸುಗಳಿಂದಾಗುವ ಅನಾಚಾರವೇ ಅತ್ಯಾಚಾರವಲ್ಲವೇ..?? ತಲೆಬರಹದ ಕೆಂಪು ಬಣ್ಣ ನನ್ನ ಬದುಕಿನ ಆಚಾರ-ಅನಾಚಾರಗಳನ್ನು ಬಿಂಬಿಸುತ್ತಿರುವಂತೆ ಭಾಸವಾಗಿ ಕೂಡಲೇ ದೃಷ್ಟಿ ಹೊರಳಿಸಿ ಪೇಪರ್ ಅನ್ನು ಟೇಬಲ್ ಮೇಲೆ ಎಸೆದು ಸೋಫಾದ ಮೇಲೆ ಅಡ್ಡಾಗಿ ರಿಮೋಟ್ ಒತ್ತಿ ಟಿವಿ ಆನ್ ಮಾಡಿದೆ. ಯಾವುದೋ ಹಿಂದಿ ಮ್ಯೂಸಿಕ್ ಚಾನೆಲ್ ಹೊತ್ತಿಕೊಂಡಿತು. ‘ಧೂಮ್ ಮಚಾಲೆ ಧೂಮ್ ಮಚಾಲೆ ಧೂಮ್’ ಎನ್ನುತ್ತಾ ಹಳದಿ ಬಣ್ಣದ ತಿಳಿಯಾದ ತುಂಡು ಅಂಗಿ ತೊಟ್ಟು ಕತ್ರೀನಾ ಕುಣಿಯುತ್ತಿದ್ದಳು. ನನಗೆ ಮೊನ್ನೆ ಮೊನ್ನೆಯಷ್ಟೆ ಸ್ನೇಹಿತ ಚಂದುವಿನ ಜೊತೆ ಕ್ಲಬ್ ಗೆ ಹೋಗಿದ್ದ ಸಂಗತಿ ನೆನಪಾಯಿತು. ಅಂದೇಕೋ ನನಗೆ ಕ್ಲಬ್ಬಿನ ಆವರಣ ಬಹಳವೇ ಕತ್ತಲಾಗಿ ಕಾಣಿಸುತ್ತಿತ್ತು. ಮೇಲೊಂದು ಕೆಳಗೊಂದು ಮಾತ್ರವೇ ಧರಿಸಿದ್ದ ಯುವತಿಯೊಬ್ಬಳು ಅವು ಕೂಡ ಕಳಚಿ ಹೋಗಲೆಂಬಂತೆ ಮೈ ಕುಲುಕಿಸುತ್ತಾ ನರ್ತಿಸುತ್ತಿದ್ದಳು. ನರ್ತನವಾ ಅದು..?? ಅವಳ ಮುಖ ಎಷ್ಟು ಲಕ್ಷಣವಾಗಿದೆ ಎಂದೆನಿಸಿದರೂ ಮರು ಕ್ಷಣವೇ ತೀರಾ ಅಸಹ್ಯ ಭಾವನೆ ಉಂಟಾಗಿತ್ತು. ಆ ಭಾವನೆ ಅರೆ ನಗ್ನವಾಗಿ ಕುಣಿಯುತ್ತಿದ್ದ ಆಕೆಯ ಕುರಿತಾಗಿ ಮೂಡಿದ್ದೋ ಅಥವಾ ಅದನ್ನು ಗುಡಿಯ ಪೂಜಾರಿಯ ನೃತ್ಯವೆಂಬಂತೆ ನೋಡುತ್ತಾ ನಿಂತಿದ್ದ ನನ್ನ ಮೇಲೆ ಉಂಟಾದದ್ದೋ ಅಥವಾ ಬೇಡ ಬೇಡವೆಂದರೂ ಕೇಳದೇ ಬಲವಂತವಾಗಿ ಎಳೆದು ಕರೆತಂದು ಎರಡು ಪೆಗ್ ಕುಡಿಸಿದ್ದ ಚಂದುವಿನ ಮೇಲೋ ಎಂಬುದು ಬಗೆಹರಿದಿರಲಿಲ್ಲ. ತಲೆ ಕೊಡವಿಕೊಂಡು ಟಿವಿ ಆಫ್ ಮಾಡಿದ ಕೂಡಲೇ ಸ್ನಾನ ಮಾಡುವುದೋ ಬೇಡವೋ ಎಂಬ ಜಿಜ್ಞಾಸೆ ಮೂಡಿತು. ಆಫೀಸಿಲ್ಲವಾದ್ದರಿಂದ ಸ್ನಾನ ಮಾಡದಿದ್ದರೂ ನಡೆಯುತ್ತದೆ ಎಂಬ ಸತ್ಯ ಹೊಳೆಯಿತು. ಆದರೂ ತಲೆಯ ಮೇಲೆ ನಾಲ್ಕು ಚೊಂಬು ನೀರು ಸುರಿದುಕೊಳ್ಳುವುದರಿಂದ ಆಗುವ ನಷ್ಟವೇನೂ ಇಲ್ಲ ಎಂದು ವಾಸ್ತವವನ್ನು ಸಮರ್ಥಿಸಿಕೊಳ್ಳುತ್ತಾ ಹೆಗಲ ಮೇಲೆ ಟವೆಲ್ ಹೊದೆದುಕೊಂಡಂತೆ ನಾನದೆಷ್ಟು ಸಲ ಬಾರ್, ಲಬ್, ಪಬ್ ಗಳಿಗೆ ಹೋಗಿಲ್ಲ. ಆದರೂ ಅಂದು ಮಾತ್ರ ಯಾಕೆ ಹಾಗನಿಸಿತು ಎಂಬ ಪ್ರಶ್ನೆ ಮಿಂಚಿ ಮಾಯವಾಯಿತು.
                                           ಬಿಸಿ ಬಿಸಿ ನೀರಿನಿಂದ ಬೆನ್ನು, ಎದೆ ಒದ್ದೆಯಾಗುತ್ತುರುವಂತೆಯೇ ಮತ್ತೆ ಅಮ್ಮನ ಚಿತ್ರ ಕಾಣಿಸಿಕೊಂಡಿತು. ಪಾಪ, ತಾಯಿಯಾಗಿ ಅವಳ ಕರ್ತವ್ಯವನ್ನು ಅವಳು ಮಾಡುತ್ತಿದ್ದಾಳೆ. ವಯಸ್ಸಿಗೆ ಬಂದ ಮಗ ಮದುವೆ ಮಾಡಿಕೊಂಡು ಸಂಸಾರಸ್ಥನಾಗಲಿ ಎಂದು ಯಾವ ತಾಯಿ ತಾನೇ ಆಸೆ ಪಡುವುದಿಲ್ಲ..?? ಅದಕ್ಕಾಗಿ ನಾನು ಅವಳ ಮೇಲೆ ಮುನಿಸು ತೋರಿಸಿದರೆ ಅದು ನನ್ನ ಸಣ್ಣತನವಾಗುತ್ತದೆಯೆನ್ನಿಸಿತು. ಕಳೆದ ಒಂದು ವರ್ಷದಿಂದ ಅವಳು ಮದುವೆಯ ಪ್ರಸ್ತಾಪವನ್ನು ಎತ್ತುತ್ತಿದ್ದಾಳೆ. ಇತ್ತೀಚೆಗೆ ಅದು ಜಾಸ್ತಿಯೇ ಹೆಚ್ಚಾಗಿದೆ. ಅವಳೆಂದಂತೆ ನನ್ನ ಸ್ನೇಹಿತರೆಲ್ಲರಿಗೂ ಹಿಂದಿನ ವರ್ಷದಲ್ಲೇ ಕಂಕಣ ಬಲ ಕೂಡಿ ಬಂದು ಅವರೆಲ್ಲ ಗ್ರಹಸ್ಥಾಶ್ರಮಕ್ಕೆ ಕಾಲಿಟ್ಟು ನೂರು ಹೆಜ್ಜೆ ನಡೆದೂ ಆಯಿತು. ಇನ್ನೆರಡು ವರ್ಷಗಳಲ್ಲಿ ಅವರ ವಂಶದ ಕುಡಿಗಳು ಹತ್ತು ಹೆಜ್ಜೆ ನಡೆಯುತ್ತಾರಷ್ಟೆ. ಆದರೂ ನನಗೇಕೋ ಮದುವೆಯಾಗುವ ಮನಸ್ಸು ಬಂದಿಲ್ಲ. ಮದುವೆಯ ಕುರಿತಾಗಿ ಒಳ್ಳೆಯ ಭಾವನೆಗಳಾಗಲೀ, ಅಭಿಪ್ರಾಯವಾಗಲೀ ಇಲ್ಲ. ಅದೇಕೆ ಹೀಗೆ ನಾನು..?? ಬಹಳಷ್ಟು ಸಲ ನನಗೆ ನಾನೇ ಕೇಳಿಕೊಂಡರೂ ಇಲ್ಲಿಯ ತನಕ ಉತ್ತರ ಸಿಕ್ಕಿಲ್ಲ. (ಮುಂದುವರೆಯುವುದು)


ಗುಪ್ತಗಾಮಿನಿ


ನಿನ್ನೆ ಮೊನ್ನೆಯಷ್ಟೆ ಅದೆಂಥ ಹರಿವು
ಇಂದು ಕೇವಲ ಹೆಜ್ಜೆ ಗುರುತುಗಳು
ಉಸಿರಿತ್ತೆನ್ನುವ ನೆನಪನ್ನು ಹಸಿಯಾಗಿಡಲು
ಸೆಲೆಗೂ ನೆಲೆಗೂ ತಾವೇ ರಾಯಭಾರಿಯಾಗಿ
ದೂರ ನಿಂತು ಕಣ್ಣು ಹಾಯಿಸುವವನಿಗೆ
ಸುಂದರ ಅಶರೀರ ಶವದ ಕುರುಹಾಗಿ

ಒಡಲು ತೋಡಾಗಿ ತುಂಬಿ ಉಕ್ಕಿದಾಗ
ಹಿಗ್ಗದೇ ತನ್ನೊಳಗೆ ಹೂತು ಹೋಗುತ್ತಲಿ
ಎದೆ ಬರಿದಾಗಿ ಹಸಿರೆಲ್ಲ ಬಸಿದು ತೀರಿದರೆ
ತಾ ಹರಿದು ತನ್ನವರ ತೋಯಿಸುತ್ತಿದ್ದಳು
ಹೀಗೇಕೆ ಮಾಯವಾದಳೋ..?? ಎತ್ತ ಹೋದಳೋ..??
ಸಂಕುಚಿತತೆಗೆ ಸಾಕ್ಷಿಯಾದಳೇ ವಿಶಾಲಾಕ್ಷಿ..??

ಆಕೆ ಬತ್ತಿಲ್ಲ, ಹರಿಯುತ್ತಿದ್ದಾಳೆ
ಸಹಜವಾಗಿ ಶಾಂತವಾಗಿ ಸುಪ್ತವಾಗಿ
ಮನಸ್ಸಿನ ಮಡಿಲ ನೆರಿಗೆಯೊಳಗೆ
ಅಬ್ಬರವಿಲ್ಲದೇ ಉಬ್ಬರ ರಹಿತಳಾಗಿ
ಹರಿವಿದ್ದರೂ ನಿಶ್ಚಲವಾಗಿ ನಿಂತಂತೆ
ಬರಡಾಗಿದ್ದರೂ ಭಾವವು ಒಸರುವಂತೆ


Monday, 25 August 2014

ಡೈರಿ ಪುಟ - ೬೦


                                   "ಆಗಿನಿಂದ ನೋಡ್ತಿದೀನಿ. ಲ್ಯಾಪ್ ಟಾಪ್ ನಲ್ಲಿ ಅರ್ಧ ಹೂತು ಹೋಗಿದೀಯೋ ಹೇಗೆ..?? ಎಂತಾ ಇದೆ ಅಂಥದ್ದು ಇಂಟರ್ ನೆಟ್ ನಲ್ಲಿ." ರೂಮ್ ಮೇಟ್ ಕೇಳಿದಳು.
                                   "ವೇಟ್, ಟೂ ಮಿನಿಟ್ಸ್." ಎಂದಷ್ಟೆ ಉತ್ತರಿಸಿ ನನ್ನ ಕೆಲಸದಲ್ಲಿ ಮಗ್ನಳಾದೆ. ಐದು ನಿಮಿಷಗಳ ನಂತರ ಅವಳತ್ತ ಮುಖ ತಿರುಗಿಸಿ ಹೇಳಿದೆ, "ಇಂಟರ್ ನೆಟ್ ಏನಿಲ್ಲಾ ಹೇಳು..?? ಭೈರಪ್ಪನವರ ಬಗ್ಗೆ ಒಂದು ಆರ್ಟಿಕಲ್ ಬಂದಿತ್ತು ದಿ ಟೈಮ್ಸ್ ಆಫ್ ಇಂಡಿಯಾ ದಲ್ಲಿ. ಅದನ್ನ ಓದ್ತಾ ಇದ್ದೆ."
                                    "ಓಹೋ, ಹಂಗಾದ್ರೆ ಕೆಮ್ಮಂಗಿಲ್ಲ ಬಿಡು. ಆರ್ಟಿಕಲ್ ಅಲ್ಲಿ ಎಂತಾ ಇತ್ತೆ ಮಾರಾಯ್ತಿ.??"
                                    "ಅದನ್ನು ನೀನೇ ಓದಿ ತಿಳಿದುಕೊ. ಇಲ್ಲಿ ನೋಡು, ಯಾರೋ ಒಂದು ಲೈನ್ ಹಾಕಿದಾರೆ ತಮ್ಮ ಫೇಸ್ ಬುಕ್ ವಾಲ್ ಮೇಲೆ. ‘ಲೈಫ್ ಈಸ್ ಸೋ ಮಚ್ ಬ್ರೈಟರ್ ವೆನ್ ವಿ ಫೋಕಸ್ ಆನ್ ವಾಟ್ ಟ್ರ್ಯೂಲಿ ಮ್ಯಾಟರ್ಸ್’. ಎಷ್ಟು ಅರ್ಥಪೂರ್ಣವಾಗಿದೆ ಅಲ್ವಾ..??"
                                    "ವಾಹ್, ಯಾರು ಹಾಕಿದ್ದು..?? ಅವರ ಸ್ವಂತದ್ದೋ ಇಲ್ಲಾ ಬೇರೆಯವರಿಂದ ಕಾಪಿ ಮಾಡಿದ್ದೋ. ವಾಟೆವರ್, ಯಾರು ಹೇಳಿದ್ರೋ ರಿಯಾಲಿಟಿ ಹೇಳಿದಾರೆ ಅಲ್ವಾ..??"
                                     "ಹ್ಞೂಂ ಕಣೇ. ನಿಜವಾಗಿಯೂ ನಾವೆಲ್ಲಾ ತೊಂಭತ್ತು ಪ್ರತಿಶತಃ ಸಲ ಬೇಡದ ವಿಷಯಗಳ ಕುರಿತಾಗಿಯೇ ಅನಾವಶ್ಯಕ ದುಃಖ, ಬೇಸರ, ಸಿಟ್ಟು ಮಾಡಿಕೊಂಡು ಆಮೇಲೆ ಜೀವನವೆಂದರೆ ಜಿಗುಪ್ಸೆ ಎಂಬಂತೆ ವರ್ತಿಸುತ್ತೇವೆ. ಎಷ್ಟೆಲ್ಲಾ ಸಮಯವನ್ನು ಹಾಳು ಮಾಡುತ್ತೇವೆ. ಆ ಒಂದು ನಿರ್ದಿಷ್ಟ ಸಂಗತಿಗೆ ನಿಜಕ್ಕೂ ಅಷ್ಟೊಂದು ಮಹತ್ವ ಕೊಡುವ ಅಗತ್ಯ ಇದೆಯೇ ಎಂದು ನಾವು ಕ್ಷಣಮಾತ್ರವೂ ಯೋಚಿಸುವುದಿಲ್ಲ. ಆಸಕ್ತಿಗಿಂತ ಹೆಚ್ಚಾಗಿ ಆಕರ್ಷಣೆಯೆಂಬ ಬಿಸಿಲುಗುದುರೆಯ ಮೇಲೆ ಸವಾರಿ ಮಾಡುತ್ತಿರುತ್ತೇವೆ. ಬದಲಾಗಿ ಕೊಂಚ ವಿವೇಚನೆಯಿಂದ ತಲೆ ಓಡಿಸಿದರೆ ನಮ್ಮ ಕಣ್ಣು, ಕಿವಿ, ಮೆದುಳು, ಮನಸ್ಸು ಎಲ್ಲವೂ ನೆಟ್ಟಗೆ ನಮಗೆ ಸಂಬಂಧಿಸಿದ ವಿಷಯಗಳತ್ತ ಮಾತ್ರವೇ ಗಮನ ಹರಿಸುತ್ತವೆ. ಉಳಿದವುಗಳನ್ನೆಲ್ಲಾ ಸುಮ್ಮನೇ ಮೂಲೆಗೆಸೆಯುತ್ತವೆ. ಹಾಗಾದರೆ ನೋಡು, ಪ್ರತಿ ದಿನ ಪ್ರತಿ ಕ್ಷಣ ಉತ್ಸಾಹ, ಸಂತಸ, ಶಾಂತತೆಯೇ ಮೂಡಿ ಜೀವನವೆಂದರೆ ಇಷ್ಟೊಂದು ಸುಂದರವಾಗಿರುತ್ತದಾ..?? ಎಂದು ನಂಬಲಿಕ್ಕಾಗದೇ ಉದ್ಗಾರವೆತ್ತುವಂತಾಗುತ್ತದೆ. ಅಂಥ ಅನುಭೂತಿ ದೊರೆಯುತ್ತದೆ. ಅದು ಹೇಳಲಿಕ್ಕೆ ಬರುವಂಥದ್ದಲ್ಲ. ಸ್ವತಃ ಅನುಭವಿಸಿ ತೀರಬೇಕು."
                                     "ಅದಕ್ಕೆ ಹೇಳುವುದಲ್ಲವಾ, ಬೀ ಕ್ಲಿಯರ್ ಎಬೌಟ್ ಯುವರ್ ಸೆಲ್ಫ್ ಅಂತಾ."
                                      "ಯೆಸ್. ಜಗತ್ತು ಎಷ್ಟು ಸುಂದರವಾಗಿದೆ ಅಂತ ನೋಡಿ ತಿಳಿಯಲಿಕ್ಕೆ ಚೆಂದ ತಾಣಗಳಿಗೆ ಭೇಟಿ ಕೊಟ್ಟರೆ ಸಾಲುವುದಿಲ್ಲ. ಜೊತೆಯಲ್ಲಿ ನಮ್ಮೊಳಗಿನ ಪ್ರಪಂಚಕ್ಕೂ ಭೇಟಿ ನೀಡಬೇಕು. ಆಗ ಅರಿವು ಮೂಡುತ್ತದೆ, ‘ಹೌ ಮಚ್ ಬ್ಯೂಟಿಫುಲ್ ದಿಸ್ ಲೈಫ಼್ ಈಸ್ ಆಂಡ್ ಹೌ ಮಚ್ ಬ್ಯೂಟಿಫುಲ್ ಯು ಆರ್ ಇನ್ ದಟ್’.


Sunday, 24 August 2014

ಡೈರಿ ಪುಟ - ೫೯


                                 "ಪ್ರೊ. ಕೃಷ್ಣೇಗೌಡರ ಇವತ್ತಿನ ಅಂಕಣ ಎಷ್ಟು ಚೆನ್ನಾಗಿದೆ ಅಲ್ವಾ..??" ರೂಮ್ ಮೇಟ್ ನನ್ನನ್ನು ಕೇಳಿದಳು.
                                 "ವಾಟ್ ಅ ಸರ್ಪ್ರೈಸ್..!! ನೀನು ಓದಿದೆಯಾ..?? ಆದರೂ ಇವತ್ತು ಜೋರು ಮಳೆ ಬರಲೇ ಇಲ್ವಲ್ಲಾ ಮಾರಾಯ್ತಿ." ನಾನು ಬೇಕಂತಲೇ ಕೆಣಕುತ್ತಾ ಹೇಳಿದೆ.
                                 "ಸಾಕು, ಸುಮ್ನಿರೇ. ನಿನ್ನ ಒಣಾ ಜೋಕಿಗೆ ಬಂದ ಮಳೆಯೂ ಆರಿ ಹೋಯಿತಷ್ಟೆ. ನಾನು ಹೇಳುವುದನ್ನು ಸುಮ್ಮನೇ ಕೇಳು. ಅವರ ಬರಹದ ಶೀರ್ಷಿಕೆ ಎಷ್ಟು ಅರ್ಥಪೂರ್ಣವಾಗಿತ್ತಲ್ವಾ..?? ‘ಒಂದೇ ಮಾತನ್ನ ಸಾವಿರ ಸಾರಿ ಆಡಿದರೆ ಆ ಮಾತುಗಳೂ ಸವೆದು ಹೋಗ್ತವೆ’."
                                  "ಹೌದು, ಅವರು ಕ್ಲೀಷೆಗಳ ಕುರಿತಾಗಿ ಹಾಗೆ ಮಾತನ್ನು ಹೇಳಿದ್ರು. ನನಗೆ ಶೀರ್ಷಿಕೆ ಓದಿ ಬೇರೆಯದೇ ವಿಷಯ ತಲೆಗೆ ಬಂತು. ನಾವೆಲ್ಲಾ ಎಷ್ಟೊಂದು ಮಂದಿಗೆ ಎಷ್ಟೊಂದು ಬಾರಿ ಹೀಗೆ ಮಾತುಗಳಲ್ಲೇ ಮನೆ ಕಟ್ಟಿದ್ದೇವೆ ಅಲ್ವಾ..?? ಕೇವಲ ಮಾತುಗಳ ಮೂಲಕ ಎಷ್ಟೊಂದು ಭರವಸೆ, ಕನಸು, ನಂಬಿಕೆಗಳನ್ನು ಅವರ ಮನಸಿನ ಅಂಗಳದಲ್ಲಿ ನೆಟ್ಟಿದ್ದೇವೆ. ಆಮೇಲೆ ಅದು ಚಿಗುರೊಡೆಯುವಷ್ಟರಲ್ಲಿ ನಮಗೆ ಅವರ್ಯಾರೆಂದು ನೆನಪೇ ಇರುವುದಿಲ್ಲ. ಆ ಚಿಗುರು ಕೇವಲ ಭ್ರಮೆಯೆಂದು ಅರಿವಾಗಿ ಅವರಿಗೂ ನಮ್ಮ ಮೇಲೆ ವಿಶ್ವಾಸ ಹೋಗಿರುತ್ತದೆ. ಮಾತುಗಳಿಗೆ ಅರ್ಥವಿಲ್ಲವೆನಿಸಿರುತ್ತದೆ. ಹಾಗೆ ಸಾವಿರ ಬಾರಿ ನುಡಿಯುವ ಬದಲಾಗಿ ಒಂದು ಬಾರಿ ಹೇಳಿದಂತೆ ನಡೆದುಕೊಂಡಿದ್ದರೆ ಸಾವಿರ ಮಾತುಗಳಿಗೆ ನೂರು ಕಾಸಿನಷ್ಟಾದರೂ ಕಿಮ್ಮತ್ತು ಇರುತ್ತಿತ್ತು. ಇತ್ತೀಚೆಗೆ ಸಾಮಾನ್ಯ ಜನರ ಮಾತುಗಳೂ ಸಹ ರಾಜಕಾರಣಿಗಳ ಪೊಳ್ಳು ಭರವಸೆಯೆನಿಸುವ ಮಟ್ಟಿಗೆ ಅರ್ಥ ಕಳೆದುಕೊಂಡು ಬಿಟ್ಟಿವೆ."
                                   "ಪುಣ್ಯ ಮನುಷ್ಯನಿಗೆ ಒಂದೇ ಬಾಯಿ. ಇಲ್ಲದಿದ್ದರೆ ಅದೆಷ್ಟು ಮರುಳು ಮಾತುಗಳು ಮರಳಾಗಿ ಹೋಗುತ್ತಿದ್ದವೋ."
                                   "ಮಾತು ಕಡಿಮೆ, ಕೆಲಸ ಜಾಸ್ತಿ ಎಂದೇ ಅಲ್ಲವೇ ಎರಡು ಕೈಗಳಿರುವುದು..??"


ಕೈ ತೋರಿಸುತ್ತಾ ಬಾಯಿ ತೆರೆಯುವ ಮೊದಲು...


                                             ಇದು ಸುಮಾರು ಎರಡು ವರ್ಷಗಳ ಹಿಂದೆ ನಡೆದ ಘಟನೆ.
                                             ಆಗ ಜೂನ್ ಅಥವಾ ಜುಲೈ ತಿಂಗಳು. ನನಗೆ ಎರಡನೇ ಸೆಮಿಸ್ಟರ್ ಮುಗಿದು ರಜಾದಿನಗಳು ಪ್ರಾರಂಭವಾಗಿದ್ದವು. ಹಾಗಾಗಿ ನನ್ನ ಕಾರುಬಾರೆಲ್ಲಾ ಮನೆಯಲ್ಲಿ ನಡೆದಿತ್ತು. ಒಂದು ದಿನ ಸಂಜೆ ಸುಮಾರು ಐದು- ಐದೂವರೆ ಹೊತ್ತಿಗೆ ಅಮ್ಮ ಮತ್ತು ಚಿಕ್ಕಮ್ಮ ಹೊರಗಡೆ ಮೆಟ್ಟಿಲ ಮೇಲೆ ಕುಳಿತು ಟಿಪಿಕಲ್ ಹೆಂಗಸರ ಹರಟೆ ಕಾರ್ಯಕ್ರಮವನ್ನು ನಡೆಸಿದ್ದರು. ದೂರದ ಸೋನಿಯಮ್ಮನಿಂದ ಹಿಡಿದು ಊರಿನ ಗಂಗಮ್ಮನ ವರೆಗೆ ಎಲ್ಲರೂ ಅವರಿಬ್ಬರ ನಾಲಿಗೆಯ ಮೇಲೆ ಕ್ಯಾಟ್ ವಾಕ್ ಮಾಡಿ ಹೋಗುತ್ತಿದ್ದರು. ನಾನು ಒಳಗೆ ಜಗಲಿಯಲ್ಲಿ ಕುಳಿತು ಕನ್ನಡದ ಕಾದಂಬರಿಯನ್ನು ಓದುತ್ತಿದ್ದೆ. ಹಾಗೆ ಇವರ ಸಂಭಾಷಣೆಯ ತುಣುಕುಗಳನ್ನು ಆಲಿಸುತ್ತಲೂ ಇದ್ದೆ. ಆಗ ಕೇಳಿಸಿತು,
                                            "ಇವತ್ತಿನ ಪೇಪರ್ ನೋಡ್ದ್ಯನೇ..?? ಅದ್ಯಾವ್ದೋ ಕೂಸು ಕಾಲೇಜಿಗೆ ಹೋಪದು ಓಡಿ ಹೋಜಡಾ. ಇವತ್ತಿನ ಲೋಕಧ್ವನಿಲಿ ಇತ್ತಪಾ."
                                             "ಹೌದೇ ಅತ್ಗೆ, ನೋಡಿದ್ದಿ. ದಿನಾ ಬಿಟ್ಟು ದಿನಾ ಒಬ್ರಲ್ಲಾ ಒಬ್ರು ಓಡಿ ಹೋಗ್ತ್ವಪಾ."
                                             "ಮಳ್ಳು ಕೂಸ್ಗ. ಮನೆ, ಮಠ ಎಲ್ಲಾ ಬಿಟ್ಟಿಕ್ಕಿ ಯಾವನ್ದೋ ಜೊತೆ ಓಡಿ ಹೋಪಲ್ಲೆ ಹೆಂಗಾದ್ರೂ ಮನ್ಸು ಬತ್ತೆನ. ದೊಡ್ಡಾದ್ರು ಬುದ್ಧಿ ಮಾತ್ರ ಬೆಳದಿರ್ತಿಲ್ಲೆ."
                                             "ಅಯ್ಯೋ ಅತ್ಗೆ, ಅಪ್ಪಾ ಅಮ್ಮಾ ಹಂಗೆ ಸಂಸ್ಕಾರ ಕೊಟ್ರೆ ಎಲ್ಲಾ ಕೂಸ್ಗನೂ ಸಮಾನೇ ಇರ್ತ."
                                           ನಮ್ಮ ಶಿರಸಿಯ ಸ್ಥಳೀಯ ದಿನಪತ್ರಿಕೆಯೊಂದರಲ್ಲಿ ಹುಡುಗಿಯೊಬ್ಬಳು ಕಾಣೆಯಾಗಿದ್ದಾಳೆ ಎಂದಷ್ಟೆ ಪ್ರಕಟವಾಗಿದ್ದು. ಅದಕ್ಕೆ ಕುರಿತಾಗಿಯೇ ಅವರು ಮಾತನಾಡುತ್ತಿದ್ದುದು. ಇವತ್ತಿಗೆ ಮುಗಿಯುವುದಿಲ್ಲವೇನೋ ಎನ್ನುವಂತೆ ಅವರ ಆರೋಪಗಳು, ಸಮರ್ಥನೆಗಳು, ಸ್ಪಷ್ಟೀಕರಣಗಳು ನಡೆದೇ ಇದ್ದವು. ಸ್ವಲ್ಪ ಹೊತ್ತಿನ ನಂತರ ಸುಮ್ಮನೇ ಕುಳಿತು ಅವರನ್ನು ಆಲಿಸುತ್ತಿದ್ದ ನನಗೆ ತಡೆದುಕೊಳ್ಳಲಾಗಲಿಲ್ಲ. ಹೇಳಿಯೇ ಬಿಟ್ಟೆ.
                                            "ಅಯ್ಯೋ ಮಾರಾಯ್ರೇ, ಇಬ್ಬರೂ ಅದೆಷ್ಟು ಕಾಮೆಂಟ್ ಮಾಡ್ತಾ ಇದೀರಿ. ಆ ಕೂಸು ಯಾರೋ ಏನೋ. ಯಾಕೆ ಓಡಿ ಹೋದಳೋ ಏನೋ. ಅದೆಂಥದು ಗೊತ್ತಿಲ್ಲದಿದ್ದರೂ ಕಣ್ಣಾರೆ ನೋಡಿದ್ದೇವೆಯೆಂಬಂತೆ ಮಾತನಾಡ್ತಾ ಇದೀರಲ್ಲಾ. ನಿಮಗಿಬ್ಬರಿಗೂ ಕೂಡ ಒಂದೊಂದು ಹೆಣ್ಣು ಮಕ್ಕಳಿದಾರೆ ಅನ್ನೋದು ಮರೆತು ಹೋಯ್ತಾ ಹೇಗೆ..??"
                                           ನನ್ನ ಮಾತು ಕೇಳಿ ಅಮ್ಮನಿಗೆ ತುಸು ಸಿಟ್ಟು ಬಂತು. "ನಿಂಗೆ ತಿಳಿತಿಲ್ಲೆ, ಸುಮ್ನೆ ನಿನ್ನ ಪಾಡಿಗೆ ನೀನು ಕಾದಂಬರಿ ಓದ್ಕ್ಯಾ ಹೋಗು" ಎಂದು ಗದರಿದಳು. ನಾನು ನನ್ನ ಪಾತ್ರವು ಮುಗಿಯೆಂಬಂತೆ ಅಲ್ಲಿಂದ ಎದ್ದು ಅಡುಗೆ ಮನೆಗೆ ಹೋಗಿ ಓದುತ್ತಾ ಕುಳಿತೆ.


                                       ನಿನ್ನೆ ಯಾರೋ ನನಗೆ ಫೇಸ್ ಬುಕ್ ನಲ್ಲಿ ಇನ್ ಬಾಕ್ಸ್ ಗೆ ಮೆಸೇಜ್ ಮಾಡಿ ಕೇಳಿದ್ದೇನೆಂದರೆ,
                                     "ಎಲ್ಲಾ ವಿಷಯಗಳ ಕುರಿತು ನಾಲ್ಕು ಸಾಲಾದರೂ ನಿಮ್ಮ ಟೈಮ್ ಲೈನ್ ಅಥವಾ ಬ್ಲಾಗಿನಲ್ಲಿ ಬರೆಯುವ ನೀವು ಯಾಕೆ ಅನಂತಮೂರ್ತಿಗಳ ಕುರಿತಾಗಿ ಏನನ್ನೂ ಬರೆಯಲಿಲ್ಲಾ ಮೇಡಮ್..??" ನನಗೆ ಈ ಪ್ರಶ್ನೆಗೆ ಉತ್ತರ ಹೇಳುವ ಅಗತ್ಯವಾಗಲಿ, ಅರ್ಥವಾಗಲಿ ಕಾಣದೇ ಸುಮ್ಮನಾದೆ.
                                        ಸ್ವಾಮಿ, ನಾನೇನು ಬರೆಯಬೇಕೆಂದು ನೀವು ನಿರೀಕ್ಷಿಸುತ್ತೀದ್ದಿರಿ..?? ಅಷ್ಟಕ್ಕೂ ಬರೆಯಲೇಬೇಕೆಂಬ ಕಾಯಿದೆ ಏನಾದರೂ ಇದೆಯೇ..?? ನನ್ನ ಅಜ್ಜನ ವಯಸ್ಸಿನ ಅವರು ತೀರಿಕೊಂಡ ಸುದ್ದಿ ತಿಳಿದಾಗ ಸಾಹಿತ್ಯ ಲೋಕದ ಹಿರಿಯ ತಲೆಯೊಂದು ತನ್ನ ಯಾತ್ರೆ ಮುಗಿಸಿತೆಂದು ತಿಳಿದು ಒಂದು ಕ್ಷಣ ಮನಸ್ಸು ನಿಶ್ಚಲವಾಯಿತು. ತದನಂತರ ಕಿಡ್ನಿ ಖಾಯಿಲೆಯಿಂದ ಬಳಲುತ್ತಿದ್ದ ಅವರು ಇನ್ನಷ್ಟು ಒದ್ದಾಡದೇ ತೀರಿಕೊಂಡಿದ್ದು ಒಳ್ಳೆಯದೇ ಆಯಿತೆಂಬ ಅಭಿಪ್ರಾಯ ಮೂಡಿತು. ಸತ್ತ ವ್ಯಕ್ತಿಯೊಬ್ಬರ ಬಗ್ಗೆ ಮಾತನಾಡುವುದು, ಬರೆಯುವುದು, ಅವರನ್ನು ಹೊಗಳುವುದು ಅಥವಾ ತೆಗಳುವುದು ನನಗೆ ಸರಿ ಕಾಣಿಸುವುದಿಲ್ಲ. ಅದು ಕೇವಲ ತೋರಿಕೆಯ, ಆಡಂಬರದ ಭಾವ ಮಾತ್ರವೇ. ವ್ಯಕ್ತಿಯೊಬ್ಬರ ಕುರಿತು ನಿಜವಾದ, ಪ್ರಾಮಾಣಿಕವಾದ ಪ್ರೀತಿ, ಗೌರವ, ಅಭಿಮಾನ, ಬೇಸರ, ವಿರೋಧಗಳಿದ್ದರೆ ಅವನ್ನೆಲ್ಲಾ ಅವರು ಜೀವಂತ ಇರುವಾಗಲೇ ವ್ಯಕ್ತಪಡಿಸಬೇಕೆ ವಿನಃ ಅವರ ಉಸಿರು ನಿಂತ ಮೇಲಲ್ಲ. ಆದರೆ, ಜನ ಹಾಗಲ್ಲ. ವ್ಯಕ್ತಿಯೊಬ್ಬರು ಇನ್ನಿಲ್ಲವಾದರೆಂದು ತಿಳಿದಾಗಲೇ ಅವರು ಇಷ್ಟು ದಿನ ಬದುಕಿಯೇ ಇದ್ದರೆಂಬ ಸತ್ಯ ತಲೆಗೆ ಹೊಳೆದು ತಾವು ಅವರ ಕುರಿತು ನಾಲ್ಕು ಮಾತನ್ನು ಹೇಳದಿದ್ದರೆ, ಬರೆಯದಿದ್ದರೆ ಅವರ ಆತ್ಮಕ್ಕೆ ಶಾಂತಿ ಸಿಗುವುದಿಲ್ಲವೆಂಬಂತೆ ನಾಲಿಗೆ ಹರಿಯಬಿಡುತ್ತಾರೆ. ಅಷ್ಟೆಲ್ಲಾ ಮಾಡಿದ ಮೇಲೆ ಕೊನೆಯಲ್ಲಿ "ರೆಸ್ಟ್ ಇನ್ ಪೀಸ್", "ಅವರ ಆತ್ಮಕ್ಕೆ ಶಾಂತಿ ಸಿಗಲಿ", "ಭಗವಂತ ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ಕೊಡಲಿ" ಎಂದೆಲ್ಲಾ ಬರೆದು ಶರಾ ಹಾಕುವುದು ತೀರಾ ಹಾಸ್ಯಾಸ್ಪದ ಎನಿಸುವುದಿಲ್ಲವೇ..??
                                    ಒಂದು ಮಾತು ಹೇಳಲಿಕ್ಕಿದೆ. ಅನಂತ ಮೂರ್ತಿಗಳು ತೀರಿಕೊಂಡಿದ್ದಕ್ಕೆ ಒಂದಿಷ್ಟು ಮಂದಿ ಪಟಾಕಿ ಹೊಡೆದರಂತೆ, ಸಿಹಿ ಹಂಚಿದರಂತೆ ಎನ್ನುವುದನ್ನು ಕೇಳಿ ಎಂಥಾ ವಿಕೃತ ಮನಸ್ಥಿತಿಯವರು ಎಂದು ಎಲ್ಲರೂ ಅವರನ್ನು ಜರೆದಿದ್ದಾಯಿತು. ಇನ್ನು ಕೆಲವು ಮಂದಿ ಮೂರ್ತಿಗಳು ಹಾಗಿದ್ದರು, ಹೀಗಿದ್ದರು ಎಂದೆಲ್ಲಾ ಪ್ರೀತಿ, ಅಭಿಮಾನ, ಗೌರವಗಳನ್ನು ಸಂತಾಪಸೂಚಕ ಮಾತುಗಳಲ್ಲಿ, ಕಂಬನಿ ತುಂಬಿದ ಭಾವಗಳಲ್ಲಿ ಬರೆದುಕೊಂಡು ಫೇಸ್ ಬುಕ್ ನಲ್ಲಿ ಸ್ಟೇಟಸ್ ಹಾಕಿಕೊಂಡರು. ಕೆಲವರು ಅವರ್ಯಾರೋ ಹಾಕಿದ್ದಾರೆ, ಹೀಗಾಗಿ ನಾನು ಹಾಕದಿದ್ದರೆ ಅಪಚಾರವಾದೀತು ಎಂದು ಏನೋ ಒಂದನ್ನು ಗೀಚಿದರು ಕೂಡ. ಇವನ್ನೆಲ್ಲಾ ನೋಡಿ ನನಗೆ ಅನ್ನಿಸಿದ್ದೇನೆಂದರೆ ಎಷ್ಟು ಜನರಿಗೆ ನಿಜವಾಗಿಯೂ ಬಿಸಿ ಕಣ್ಣೀರು ಬಂತು, ಮತ್ತೆ ಎಷ್ಟು ಜನರದ್ದು ಮೊಸಳೆ ಕಣ್ಣೀರು ಎಂದು. ಎಲ್ಲರೂ ಅಂತ ಅಲ್ಲ, ಈಗ ತಾವು ಅನಂತ ಮೂರ್ತಿಯವರ ಕಟ್ಟಾ ಅಭಿಮಾನಿಗಳೆಂದು ಪೋಸು ಕೊಡುತ್ತಿರುವವರಲ್ಲಿ ಹಲವಾರು ಮಂದಿ ಮೊದಲು ಅವರನ್ನು ಹಿಗ್ಗಾ ಮುಗ್ಗಾ ಟೀಕಿಸಿರಲಿಲ್ಲವೇ..?? ಆಗ ಅವರ ಸೃಜನಶೀಲತೆ, ವೈಚಾರಿಕ ಚಿಂತನೆ ಅರ್ಥವಾಗಿರಲಿಲ್ಲವೇ..?? ಅವರು ಇನ್ನಿಲ್ಲ ಎಂದ ಕೂಡಲೇ ಎಲ್ಲವೂ ಜ್ಞಾನೋದಯವಾಯಿತೇ..?? ಪಟಾಕಿ ಹೊಡೆದು ಸಂಭ್ರಮಿಸಿದವರಿಗೂ ಇವರಿಗೂ ಬಹಳ ವ್ಯತ್ಯಾಸವಿದೆಯೇ..?? ಜನ ಅವರ ಸಾವಿನ ಸುದ್ದಿಯನ್ನು ಮುಂದಿಟ್ಟುಕೊಂಡು ತಾವು ಭಾಳ ಸಾಚಾ ವ್ಯಕ್ತಿಗಳು ಎನ್ನುವಂತೆ ಕುಣಿದಾಡುತ್ತಿದ್ದಾರಲ್ಲಾ, ಇವರೆದ್ದು ಅದೆಂಥ ಸಂಸ್ಕೃತಿ..??

                                      *****************************************

                                     "ನೀನು ಬೇರೆಯವರ ಕಡೆ ಬೆರಳು ತೋರಿಸುತ್ತಿರುವಾಗ ಉಳಿದ ನಾಲ್ಕು ಬೆರಳುಗಳು ನಿನ್ನತ್ತಲೇ ಮುಖ ಮಾಡಿರುತ್ತವೆ ಎನ್ನುವುದನ್ನು ಮರೆಯಬೇಡ." ಇದೊಂದು ಹಿರಿಯರ ಅನುಭವದ ಮಾತು. ಹೌದಲ್ಲ, ನಾವು ಯಾರತ್ತಲೋ ಕೈ ತೋರಿಸಿ ಮಾತನಾಡುವಾಗ ನಮ್ಮ ಕುರಿತಾಗಿಯೂ ಯಾವುದೋ ಮೂಲೆಯಲ್ಲಿ ಯಾರೋ ಒಬ್ಬರು ಕೈ ತೋರಿಸುತ್ತಿರಬಹುದಲ್ಲ. ನಾವೂ ಮನುಷ್ಯರೇ ತಾನೇ..?? ಟೀಕೆ, ಟಿಪ್ಪಣಿಗಳು ದೇವರನ್ನೇ ಬಿಟ್ಟಿಲ್ಲವೆಂದಾದರೆ ನಾವು ಹೇಗೆ ಅದಕ್ಕೆ ಹೊರತಾಗುತ್ತೇವೆ..?? ನಾಲಿಗೆಗೆ ಮೂಳೆಯಿಲ್ಲವೆಂದು ಬೇಕಾಬಿಟ್ಟಿ ತಿರುಗಿಸಿದರೆ ಕೊನೆಗೆ ಎಲ್ಲರ ಎದುರು ನಮ್ಮ ವ್ಯಕ್ತಿತ್ವದ ಬೆನ್ನು ಮೂಳೆ ಮುರಿದು ತಲೆತಗ್ಗಿಸಿ ಕುಬ್ಜರಾಗಬೇಕಾಗುತ್ತದೆಯಷ್ಟೆ. ಈ ಸತ್ಯ ನಮಗೇಕೆ ಅರ್ಥವೇ ಆಗುವುದಿಲ್ಲ..?? ನಮ್ಮ ವೈಯಕ್ತಿಕ ವಿಷಯಗಳ ಕುರಿತಾಗಿ ಕಣ್ಣು ಹಾಯಿಸಲು ಕೂಡ ಸಮಯವಿಲ್ಲದಷ್ಟು ಬ್ಯುಸಿ ಇರುವಾಗ ಬೇರೆಯವರ ಕುರಿತು ಮಾತನಾಡಲು ಅದೆಲ್ಲಿಂದ ಸಮಯ ದೊರಕುತ್ತದೆ..??
                                    ಅಷ್ಟಕ್ಕೂ ನಮಗೆ ನಮ್ಮ ವ್ಯಕ್ತಿತ್ವ, ನಿಲುವು, ಸಿದ್ಧಾಂತಗಳ ಕುರಿತು ನಯಾ ಪೈಸೆ ಅರಿವು ಇಲ್ಲದಿರುವಾಗ ಬೇರೆಯವರ ಸಿದ್ಧಾಂತ, ನಿಲುವುಗಳ ಮೇಲೆ ಟೀಕೆ, ಟಿಪ್ಪಣಿ, ಪರ-ವಿರೋಧ ವ್ಯಕ್ತಪಡಿಸಲು ನೈತಿಕ ಹಕ್ಕು ಎಂಬುದೊಂದು ಇದೆಯೇ..?? ಇದು ಅಜ್ಞಾನದ, ಮೌಢ್ಯದ ಪರಮಾವಧಿಯಲ್ಲವೇ..?? ಎಡ, ಬಲ, ಅತ್ತ, ಇತ್ತ ಎಂದು ಏನೇನೆಲ್ಲಾ ಗುಂಪುಗಳೊಂದಿಗೆ ಎಲ್ಲರನ್ನೂ ಗುರುತಿಸುತ್ತೇವೆ, ವ್ಯಾಖ್ಯಾನಿಸುತ್ತೇವೆ. ಆ ಮೂಲಕ ನಾವು ಬಹಳ ಸಾತ್ವಿಕರು ಎಂದು ನಟಿಸುತ್ತೇವೆ. ಹಾಗೆ ಮಾಡಲು ನಾವು ಯಾರು..?? ಮೊದಲು ನಾವು ನೆಟ್ಟಗೆ ಮನುಷ್ಯರೇ ಅಲ್ಲವೇ ಎಂಬುದನ್ನು ಪರೀಕ್ಷಿಸಿಕೊಳ್ಳಬೇಕಲ್ಲವೇ..?? ಮೊದಲು ನಾವು ಮಾನವರಾಗಬೇಕಲ್ಲವೇ..?? ತದನಂತರ ಪರರ ಕಡೆ ನೋಟ ಹರಿಸಿದರಾಯಿತು. ಏನಂತೀರಿ..??