Monday, 30 December 2013

ಇದೋ ವಿದಾಯ


ಮೂಟೆಗಳ ಕಟ್ಟುತ್ತ ಅಣಿಯಾಗುತಿಹೆ ನೀನು
ತನ್ನ ಪಾತ್ರವನ್ನು ಕೊನೆಗಾಣಿಸಲು
ಹನ್ನೆರಡು ಅಂಕಗಳ ಒಂದು ಪ್ರಸಂಗವನ್ನು ಮುಗಿಸಿ
ಇನ್ನೇನು ಹಾಡುವೆ ಮಂಗಳದ ಪದವನ್ನು

ಹೊಸತೇನು ಇರಲಿಲ್ಲ ನಿನ್ನ ಅಭಿನಯದಲ್ಲಿ
ಹಳೆಯ ರಸಗಳದೇ ಪುನರಾವರ್ತನೆ
ಪಾತ್ರದ ತೀವ್ರತೆಯಲ್ಲೂ ಸ್ವಾರಸ್ಯವಿಲ್ಲ
ಅದೇ ಯಾವತ್ತಿನ ಒಂದೇ ವೇಗದ ಓಟ

ಸೊಗಸೆಂದರೆ ನವರಸಗಳ ನಿರೂಪಣಾ ಶೈಲಿ
ಅದು ನಿನ್ನ ನಿಜವಾದ ತಾಕತ್ತು
ನೀ ಕುಣಿಯುತ್ತ ನಮ್ಮನ್ನು ಕುಣಿಸುತ್ತ
ತೋರಿಸಿದೆ ಕಾಲರಾಯನ ಮಹಿಮೆಯನ್ನು

ನೋಡಲ್ಲಿ, ಎಲ್ಲೆಲ್ಲೂ ಎಲ್ಲರಲ್ಲೂ
ಉತ್ಸಾಹವೇ ಮನೆ ಮಾಡಿ ನಿಂತಂತಿದೆ
ಹೊಸ ಪ್ರಸಂಗಕೆ ಸಜ್ಜಾಗುತ್ತಲೇ
ಹೊಸ ಪಾತ್ರಧಾರಿಯನ್ನು ಸ್ವಾಗತಿಸಲು

ಅಚ್ಚುಕಟ್ಟಾಗಿ ಮುಗಿಸಿಹೆ ನಿನ್ನ ವೇಷವನ್ನು
ಎಂದಾದರೊ ನಿನ್ನ ಕುಣಿತವನ್ನು ಮರೆಯುವುದುಂಟೇ
ಇಪ್ಪತ್ತರ ನಂತರ ಬಂದ ಹದಿಮೂರರ ಬೆಡಗಿಯೆ
ಹೋಗಿ ಬಾ, ನಿನಗಿದೋ ಶುಭ ವಿದಾಯ


ನನ್ನದೆನ್ನುವದೆಲ್ಲವನ್ನೊ ಹೊತ್ತು ಹೊರಟು ಹೋಗು

ಪ್ರಿಯ ೨೦೧೩,
                         ಹೊರಡಲು ಎಲ್ಲ ತಯಾರಿಯೂ ಮುಗಿಯಿತೇ..? ಇನ್ನೇನು ಕೆಲವೇ ಗಂಟೆಗಳು ಬಾಕಿಯಿವೆಯಷ್ಟೇ ನಿನ್ನ ಪ್ರಯಾಣಕ್ಕೆ. ಆಮೇಲೆ ನೀನು ಬೇಕೆಂದರೂ ಸಿಗಲಾರೆ. ಹಾಗಾಗಿ ನಿನ್ನೊಂದಿಗೆ ಹೇಳಬೇಕೆಂದಿರುವುದನ್ನು ಈಗಲೇ ಹೇಳಿಬಿಡುತ್ತೇನೆ.
                      ಎಲ್ಲರ ಹಾಗೆ ನಾನೂ ಕೂಡ ಬಹಳಷ್ಟು ನಿರೀಕ್ಷೆಗಳನ್ನು ಹೊತ್ತುಕೊಂಡೇ ನಿನ್ನನ್ನು ಸ್ವಾಗತಿಸಿದ್ದೆ. ನಿನ್ನ ಅಕ್ಕಳಂತೂ ಸಂತಸಕ್ಕಿಂತ ಹೆಚ್ಚಾಗಿ ನೋವನ್ನೇ ಕೊಟ್ಟವಳು. ನೀನಾದರೂ ಮನದ ಅಂಗಳದಲ್ಲಿ ನಗುವಿನ ಹೂವನ್ನು ಅರಳಿಸಬಹುದೆಂಬ ಭರವಸೆಯೊಂದಿಗೆ ತುಂಬು ಹೃದಯದಿಂದ ನಿನ್ನನ್ನು ಬರಮಾಡಿಕೊಂಡಿದ್ದೆ. ಆದರೆ ನೀನು ನಿನ್ನ ಅಕ್ಕಳಂತೆಯೇ ಮೊದಮೊದಲು ಬಹಳವೇ ಅಳುವಂತೆ ಮಾಡಿದೆ. ನಾನೆಂಥ ದುರದೃಷ್ಟವಂತೆ ಎಂದು ನನ್ನನ್ನೇ ನಾನು ಹಳಿದುಕೊಳ್ಳುವಂತೆ ಮಾಡಿಬಿಟ್ಟೆ ನೀನು. ನೆನೆಸಿಕೊಂಡರೆ ಈಗಲೂ ಕಣ್ಣು ಮಂಜಾಗುತ್ತಿದೆ.
                    ನನಗೆ ಎಲ್ಲವನ್ನೂ, ಎಲ್ಲರನ್ನೂ ಕೊಟ್ಟೆ. ಆದರೆ ಕೊಟ್ಟಷ್ಟೇ ವೇಗವಾಗಿ ಅವನ್ನೆಲ್ಲ ಹಿಂದೆಗೆದುಕೊಂಡುಬಿಟ್ಟೆ. ಯಾಕೆ ಗೆಳತಿ...?? ಅವನ್ನೆಲ್ಲ ಶಾಶ್ವತವಾಗಿ ಹೊಂದುವ ಯೋಗ್ಯತೆ ನನಗಿಲ್ಲವೇ..?? ನೀನಾದರೂ ಏನೆಂದು ಉತ್ತರಿಸಬಲ್ಲೆ. ನಿನ್ನ ತಂದೆ ಕಾಲರಾಯನ ಅಣತಿಯಂತೆ ಬಂದು ಹೋಗುವವಳು ನೀನು. ಎಲ್ಲದರ ಸೂತ್ರವಿರುವುದು ಅವನ ಕೈಯ್ಯಲ್ಲಿ ಅಲ್ಲವೇ..??
              ಇವುಗಳ ಜೊತೆಯಲ್ಲೇ ನೀನು ನನಗೆ ನನ್ನ ಬದುಕಿನಲ್ಲಿ ಹೊಸ ತಿರುವೊಂದನ್ನು ತೋರಿಸಿದೆ. ನನ್ನ ಕುರಿತು ನನಗೇ ಸ್ಪಷ್ಟ ಅರಿವು ಮೂಡಿಸಿದೆ. ಗಮ್ಯದತ್ತ ಸಾಗಲು ನಾನು ನಡೆಯಬೇಕಾದ ಹಾದಿಯನ್ನು ನನಗೆ ಕಾಣಿಸಿದೆ. ಈ ಒಂದು ವಿಷಯಕ್ಕೆ ನಾನು ನಿನಗೆ ಯಾವತ್ತೂ ಆಭಾರಿ. ಸುಖ ದುಃಖಗಳ ಹೊರತಾಗಿಯೂ ಜೀವನದಲ್ಲಿ ಕರ್ತವ್ಯವೆಂಬ ಮಹತ್ವದ ಸಂಗತಿಯೊಂದಿದೆ ಎನ್ನುವುದನ್ನು ನನಗೇ ತಿಳಿಯಪಡಿಸಿದವಳೇ ನೀನು. ನಿನ್ನ ಈ ಮಹದುಪಕಾರವನ್ನು ಹೇಗೆ ಮರೆಯಲಿ..??
                     ಇನ್ನೇನು ನಿನ್ನ ತಂಗಿ ೨೦೧೪ ಬರುತ್ತಾಳೆ. ನಾನೇನು ಬಹಳ ನಿರೀಕ್ಷೆಯಿಟ್ಟುಕೊಂಡಿಲ್ಲ. ನನ್ನದೆನ್ನುವ ಕೆಲಸಗಳು ಸುಗಮವಾಗಿ ಸಾಗಿದರೆ ಸಾಕಷ್ಟೆ, ನಾನು ಸಂತೃಪ್ತೆ. ಆದರೆ ನೀನು ನನಗೆ ಒಂದು ಸಹಾಯ ಮಾಡಬೇಕಿದೆ. ನೀನೀಗ ಹೊರಡುತ್ತೀಯಲ್ಲ, ನಿನ್ನ ಜೊತೆಯಲ್ಲಿ ನನ್ನದೆನ್ನುವ ಸಿಹಿ-ಕಹಿ ನೆನಪುಗಳೆಲ್ಲವನ್ನು ಹೊತ್ತುಕೊಂಡು ಹೋಗು. ಅವೆಲ್ಲವೂ ನನ್ನನ್ನು ಕರ್ತವ್ಯ ವಿಮುಖಳಾಗಿಸುತ್ತಿವೆ. ಅವುಗಳೆಲ್ಲವುಗಳಿಂದ ನಾನು ದೂರವಾಗಿ ಹೊಸ ಹುಡುಗಿಯಾಗಿ ಹೊಸ ಜೀವನವನ್ನು ಶುರುಮಾಡಬೇಕಿದೆ. ಆದ್ದರಿಂದ ಅವೆಲ್ಲವನ್ನು ನೀನು ತೆಗೆದುಕೊಂಡು ಹೋಗು. ನಿನ್ನ ತಂದೆ ಕಾಲರಾಯನ ಕಾಲ ಕೆಳಗೆ ಅವುಗಳ ಸಮಾಧಿ ಮಾಡಿಬಿಡು. ಅವುಗಳು ಯಾವತ್ತೂ ಬೇಕಿಲ್ಲ ನನಗೆ. ನೀನಿತ್ತ ಕರ್ತವ್ಯದ ಕುರಿತಾದ ಅರಿವು ಮಾತ್ರವೇ ನನಗಿರಲಿ.  ಈ ಪುಟ್ಟ ಸಹಾಯವನ್ನು ಮಾಡುತ್ತೀಯಾ ತಾನೇ..??
                        ಹೋಗಿ ಬಾ, ಪ್ರಯಾಣ ಸುಖಕರವಾಗಲಿ.
                                                                                                                                                                         
                                                                                                                                          ನಿನ್ನ ಗೆಳತಿ,
                                                                                                                                            ಅನಾಮಿಕೆ

Tuesday, 24 December 2013

ಹೊಸವರ್ಷದ ಹೊಸ್ತಿಲಲ್ಲಿಹೊಸ ವರ್ಷದ ಹೊಸ ಮನಸು
ನವ ನಾಳೆಗಳ ಹತ್ತು ಕನಸು
ಹೆಣೆದು ನಲಿವಾಗ ಎಂಥ ಸೊಗಸು
ಹೊಸ ಖುಷಿಯಾಗಿದೆ ಹಳೇ ಮುನಿಸು

ತನುರಂಗದಲ್ಲಿ ನವೋಲ್ಲಾಸದ ರೆಕ್ಕೆ ಬಿಚ್ಚಿ
ಹರ್ಷ ವರ್ಣದಲ್ಲಿ ಬಾನ ರಂಗು ಹೆಚ್ಚಿ
ಮನದಲ್ಲಿ ದೃಢ ಸಂಕಲ್ಪದ ದೀಪ ಹಚ್ಚಿ
ಭರವಸೆಯ ಕಿರಣಗಳ ಬೆಳಕು ಹೆಚ್ಚಿ

ಅರಳಿದ ನಿನ್ನೆಗಳ ಸುಂದರ ಸುಮಗಳಲ್ಲಿ
ಹೊಮ್ಮಲಿ ನಾಳೆಗಳ ಸೌರಭ ಗಂಧದಲ್ಲಿ
ಬಾಳಪಯಣದ ಕಾಲು ಹಾದಿಯಲ್ಲಿ
ಮೂಡಲಿ ಗಮ್ಯವದು ಹೆಜ್ಜೆ ಗುರುತುಗಳಲ್ಲಿ

ನವ ಯುಗದಂತಿರಲಿ ಪ್ರತಿ ಕ್ಷಣವು
ಸದಾ ಲಾಸ್ಯವಾಡುತ್ತಿರಲಿ ಮಂದಹಾಸವು
ಪ್ರತಿಧ್ವನಿಸಲಿ ಎಲ್ಲೆಡೆ ಮಧುರ ಸ್ವರವು
ತರಲಿ ಹೊಸವರ್ಷ ಎಲ್ಲರಿಗೆ ಶುಭವು


Monday, 23 December 2013

ಎಲ್ಲ ಮುಗಿದ ಮೇಲೆ

ಮನದ ಕೊಳದಲ್ಲಿ ಎದ್ದಿಹ
ಅಶಾಂತತೆಯ ಅಲೆಗಳು
ಮತ್ತೆ ಮತ್ತೆ ಬಡಿಯುತ್ತಿವೆ
ಹೃದಯದ ಕಲ್ಲು ಬಂಡೆಯನ್ನು

ಅಬ್ಬರದಿ ನರ್ತಿಸುತ್ತಿವೆ ತಡೆಯಿಲ್ಲದೆ
ಮರ್ಮವೇನಿದು ತಿಳಿಯದಾಗಿದೆ
ಪ್ರವಾಹ ಮುಗಿದ ಮೇಲೆ
ಇದೇನಿದು ಹೊಸ ಚಂಡಮಾರುತ?

ಹೃದಯವನ್ನು ಚೆಂದ ತೊಳೆದು
ಹೊಸ ಚಿತ್ತಾರವ ಮೂಡಿಸುವುದೋ
ಅಥವಾ ಮಾಸಿ ಹೋಗಿರುವ ಕಲಾಕೃತಿಗೆ
ಹೊಸ ಬಣ್ಣ ಬಳಿಯುವುದೋ

ಬಿಡಿಸಲಾಗದ ಒಗಟೇ ಇದು
ಬಿಟ್ಟು ಬಿಡುವುದೇ ಒಳಿತು
ಎಷ್ಟುರವರೆಗೆ ಇರಬಲ್ಲದು ಏರಿಳಿತ
ಗಾಳಿಯ ವೇಗ ಇರುವ ತನಕವಷ್ಟೆ
Saturday, 14 December 2013

ನೆರಳು

ನಾ ಎಲ್ಲಿ ಹೋದರಲ್ಲಿ
ಅಂದು ಇಂದು ಎಂದೆಂದಿಗೂ
ನನ್ನ ಬೆಂಬತ್ತಿ ಹಿಂಬಾಲಿಸುತ್ತಿದೆ
ನನ್ನದೇ ನೆರಳಿಗಿಂತಲೂ ನಿಷ್ಠೆ  ಹೆಚ್ಚೆಂಬಂತೆ
ಸದಾ ಅಪ್ಪಿಕೊಂಡಿರುವುದು ನನ್ನನ್ನು

ಒಮ್ಮೊಮ್ಮೆ ನನ್ನ ಮುಂದೆ ನಡೆದರೆ
ಇನ್ನೊಮ್ಮೆ ನನ್ನ ಹಿಂದೆ ಸಾಗುವುದು
ಮಗದೊಮ್ಮೆ ಹಂತ ಹಂತವಾಗಿ ಆಕ್ರಮಿಸಿ
ಕೊನೆಯಲ್ಲಿ ನನ್ನನ್ನೇ ಮೆಟ್ಟಿ ನಿಲ್ಲುವುದು
ತಾನೇ ನನ್ನನ್ನು ಆಳುತ್ತಿರುವೆನೆಂಬಂತೆ

ಎಷ್ಟು ಸಲ ಹೇಳಿದರೂ ಕೇಳದು
ಕೈ ಹಿಡಿದು ಬೇಡಿಕೊಂಡರೂ ಬಿಡದು
ನಾ ಹೋಗೆಂದಷ್ಟೂ ಹತ್ತಿರ ಬರುವುದು
ನಗು ನಗುತ್ತ ನನ್ನನ್ನು ಅಣಕಿಸುವುದು
ನೀ ಬಿಟ್ಟರೂ ನಾ ಬಿಡೆನೆಂಬಂತೆ ಕಾಡುವುದು

ಅದು ಬಂಧನಗಳ ನೆರಳು
ನನ್ನವರೆನ್ನುವವರೊಂದಿಗೆ ತಿಳಿಯದೇ ಬೆಸೆದಿಹ
ಪ್ರೀತಿ, ಮಮತೆಗಳ ಭಾವುಕತೆಯ ನೆರಳು
ನನಗಾಗಿ ನನ್ನವರು ಎಂದೂ ಇರುವರೆಂಬ
ನಂಬಿಕೆ, ವಿಶ್ವಾಸಗಳ ದೃಢ ನೆರಳು

ಬಿಡಲಾದೀತೇ ಸಂಬಂಧಗಳನ್ನು?
ಬಿಟ್ಟು ಹೋದೀತು ಹೇಗೆ ನನ್ನ ಈ ನೆರಳು?
ಕಡಿದು ಹೋಗಬಹುದು ಬಂಧಗಳು ಹೆಸರಿಗೆ
ಅಳಿಸಲಾಗದು ಮೂಡಿಸುವ ಚಿತ್ತಾರಗಳನ್ನು
ಇನ್ನು ಬಿಟ್ಟು ಹೋದೀತು ಹೇಗೆ ಈ ನೆರಳು?


Friday, 13 December 2013

ಕಣ್ಣಹನಿ

ಓ ಮಳೆಯೇ,
ಒಮ್ಮೆ ಅಬ್ಬರಿಸಿ ಸುರಿದುಬಿಡು ನನಗಾಗಿ
ಒರೆಸು ಬಾ ಈ ಕಣ್ಣಹನಿಗಳನ್ನು
ಹೊರಟುಹೋದ ನನ್ನ ಇನಿಯ
ನಾನಿತ್ತ ಒಲವಿನ ಕಾಣಿಕೆಗೆ ಪ್ರತಿಯಾಗಿ
ಕಣ್ಣಹನಿಗಳ ಉಡುಗೊರೆಯನಿತ್ತು
ಒರೆಸುವ ಕೈಗಳಿಲ್ಲದೇ ಜಾರುತ್ತಿವೆ ಹನಿಗಳು
ಬತ್ತಿಹೋಗದ ಜೀವಸೆಲೆಯಂತೆ
ಕರಗಿಹೋಗಲಿ ನನ್ನ ಬಿಸಿ ಕಣ್ಣೀರು
ನಿನ್ನ ತಂಪಾದ ಹನಿಗಳೊಡನೆ ಸೇರಿ
ಹರಿದು ಸಾಗಲಿ ಹಳ್ಳಕೊಳ್ಳಗಳ ನಡುವೆ
ನದಿ ಸರೋವರಗಳ ಜೊತೆ ಓಡಲಿ
ಕಲ್ಲುಬಂಡೆಗಳ ತೋಯಿಸಿ ಹರಿಯಲಿ
ಹಸಿ ಮಣ್ಣಿನ ಗಂಧವನ್ನು ಹೀರಲಿ
ನೊಂದ ಜೀವಗಳ ಕೊಳೆಯನ್ನು ತೊಳೆಯುತ್ತ
ನೋವಿನ ಕಹಿಯನ್ನು ಹೊತ್ತು ಹರಿಯಲಿ

ಇಳಿದು ಬಾ ನೀ ವರ್ಷಧಾರೆ
ಬೆರಳುಗಳಾಗಿ ನನ್ನ ಕಣ್ಣಹನಿ ಒರೆಸು
ಅಶ್ರುಧಾರೆಯ ಪ್ರವಾಹದಲ್ಲಿ ತೊಯ್ದು
ತೊಪ್ಪೆಯಂತಾಗಿಹ ಹಸಿ ಮನಕ್ಕೆ
ಹೊಸಬಿಂದುಗಳ ಸಿಂಚನವ ನೀಡು ಬಾ
ಗೆಳೆಯನ ನೆನಪುಗಳ ಬಿಸಿಲಲ್ಲಿ ಅಲೆದಾಡಿ
ಬಸವಳಿದಿಹ ಈ ಹೃದಯಕ್ಕೆ
ಸಾಂತ್ವನದ ನೆರಳು ನೀನಾಗು ಬಾ


Thursday, 12 December 2013

ಮುಖವಾಡ

             
ಅಲ್ಲಿ ಇಲ್ಲಿ ಎಲ್ಲೆಂದರಲ್ಲಿ ಎತ್ತಲೂ
ಅಂದು ಇಂದು ಯಾವಾಗಲೂ
ಜಗತ್ತು ಮಲಗಿದೆ ರಂಗಮಂಚವಾಗಿ
ಬಣ್ಣ ತಳೆದು ನಿಂತಿದ್ದಾರೆ ಜನರೆಲ್ಲರೂ
ಅವನು ಮಾತ್ರವಲ್ಲ, ಅವಳೂ ಸಹ
ಎಲ್ಲರ ಜೊತೆ ಸೇರಿ ಅವರೂ ಸಹ

ಹತ್ತರೊಳಗೆ ಹನ್ನೊಂದನೆಯವರಾಗಿ
ಸಾವಿರದಲ್ಲಿ ನೂರಾ ಒಂದನೆಯವರಾಗಿ
ಕುಣಿಯುತ್ತಿದ್ದಾರೆ ಇನ್ನೊಬ್ಬರನ್ನೂ ಕುಣಿಸುತ್ತ
ಅಂಕಕ್ಕೆ ತಕ್ಕಂತೆ ನಟಿಸುತ್ತಿದ್ದಾರೆ
ಪರದೆ ಎಳೆದ ನಂತರವೂ ನಿಲ್ಲುವುದಿಲ್ಲ
ಸಾಗುತ್ತಿರುತ್ತದೆ ನಟನೆಯ ಜಾತ್ರೆ

ದೇಶ ಕಾಲಗಳ ಚಿಂತೆಯಿಲ್ಲ
ಸುತ್ತಮುತ್ತಲೇಕೆ ಎತ್ತಲಿನ ಪರಿವೆಯೂ ಇಲ್ಲ
ಪಾತ್ರದ ಕುರಿತಷ್ಟೇ ಕಾಳಜಿ
ತಮ್ಮ ಬಗ್ಗೆಯೂ ಇಲ್ಲ ಆದರ
ಪರ ಎನ್ನುವುದಂತೂ ಬೆಲೆ ಇಲ್ಲದ ವಸ್ತು
ಅಹಂನ ಹೊರತಾಗಿ ಬೇರೇನು ಗೊತ್ತು?

ನಾಟಕೀಯತೆಯ ಬಣ್ಣಗಳ ಹೊಳಪಲ್ಲಿ
ಮಾಯವಾಗಿದೆ ಭಾವುಕತೆಯ ಚಿತ್ತಾರ
ತೋರಿಕೆಯ ಮುಖವಾಡವ ತೊಟ್ಟು
ಮರೆಮಾಚುವರು ಮನದ ಸತ್ಯವನ್ನು
ಬೇಕಿಲ್ಲ ಸ್ವ ಎನ್ನುವ ತನ್ನತನ
ತಾಳಕ್ಕೆ ಕುಣಿಯುವುದೇ ಒಂದು ದೊಡ್ಡತನ

Monday, 9 December 2013

ನನ್ನನ್ನು ಮರೆತಿರುವಿರಾ....? ಮರೆಯಬಲ್ಲಿರಾ...?

               
               ಛೇ, ಮತ್ತೆ ಬೇಜಾರು.. ಕೆನ್ನೆಯ ಮೇಲೆ ನೀರಿನ ಹನಿಗಳು ಇಳಿಯುತ್ತಿಲ್ಲವಷ್ಟೇ. ಆದರೆ ಹೃದಯದ ತಟದಲ್ಲಿ ದುಃಖದ ಸರೋವರ ಅಬ್ಬರದಿಂದ ಹರಿಯುತ್ತಿದೆ. ಕಾರಣ...??
              ನನ್ನ ಹಳೆಯ ಸ್ನೇಹಿತರು.
              ನನ್ನ ಸ್ನೇಹಿತರು ಎಂದೆಂದಿಗೂ ನನ್ನ ಸ್ನೇಹಿತರೇ. ಹಳೆಯ ಎಂಬ ವಿಶೇಷಣ ನೀಡಿದ್ದರ ಅರ್ಥ ಅವರ್‍ಯಾರೂ ಇಂದು ನನ್ನೊಟ್ಟಿಗಿಲ್ಲ. ನನ್ನ ಬಿಟ್ಟು ದೂರ ಬಹು ದೂರ ಹೋಗಿದ್ದಾರೆ. ಅದು ಕೇವಲ ಮಾನಸಿಕವಾಗಿ.
            ಅವರು ಒಂದಲ್ಲ ಒಂದು ಬಗೆಯಲ್ಲಿ ಪ್ರತಿ ನಿತ್ಯವೂ ನನ್ನ ಪ್ರಪಂಚದಲ್ಲಿ ಹಾದುಹೋಗುತ್ತಾರೆ. ಕೆಲವೊಮ್ಮೆ ಅಪರಿಚಿತರಂತೆ ಎದುರು ಬದುರಾಗಿ, ಕೆಲವೊಮ್ಮೆ ಯಾರದೋ ಫೇಸ್ ಬುಕ್ ಸ್ಟೇಟಸ್ ಮೇಲೆ ಹಾಕಿದ ಕಮೆಂಟುಗಳ ರೂಪದಲ್ಲಿ, ಮತ್ತೆ ಕೆಲವೊಮ್ಮೆ ಯಾರದೋ ಮಾತುಗಳಲ್ಲಿ ಪಾತ್ರವಾಗಿ - ಹೀಗೆ ಹತ್ತು ಹಲವು ವಿಧಗಳಲ್ಲಿ ನನ್ನ ಪ್ರಪಂಚದಲ್ಲಿ ಹತ್ತು ಹಲವು ಸಲ ಹೆಜ್ಜೆ ಹಾಕುತ್ತ ಸಾಗುತ್ತಾರೆ, ಇದೆಲ್ಲ ಬಹಿರಂಗವಾಗಿ. ಆದರೆ, ನನ್ನ ಅಂತರಂಗದಲ್ಲಿ....??
           ಹೊತ್ತಿಲ್ಲದ ಹೊತ್ತಲ್ಲಿ, ನನಗೇ ತಿಳಿಯದಂತೆ ಬರುತ್ತಾರೆ. ಬರುವುದರೊಂದಿಗೆ ಹಳೆನೆನಪುಗಳ ಬುತ್ತಿಯನ್ನೂ ಹೊತ್ತು ತರುತ್ತಾರೆ. ಬುತ್ತಿಯನ್ನು ನನ್ನ ಕೈಯಿಂದಲೇ ಬಿಚ್ಚಿಸಿ, ಎಲ್ಲವನ್ನೂ ಕಲಸು ಮೇಲೋಗರಗೊಳಿಸಿ ಕೈತುತ್ತು ತಿನ್ನಿಸಿ, ತಾವೇನು ಮಾಡಿಯೇ ಇಲ್ಲವೆಂಬಂತೆ ಹಾಯಾಗಿ ಹೊರಟು ಹೋಗುತ್ತಾರೆ. ತಿಂದ ತುತ್ತು ಜೀರ್ಣವಾಗದೇ ನನ್ನನ್ನು ಸತಾಯಿಸುವ ಕಷ್ಟವನ್ನು ಯಾರಿಗೆ ಹೇಳಲಿ...??


             ನನ್ನ ಸ್ನೇಹಿತರ್‍ಯಾರೂ ನನ್ನ ಬದುಕಿನಲ್ಲಿ ಸುಮ್ಮನೇ ಹಾಗೆ ಬಂದು ಹೀಗೆ ಹೋದವರಲ್ಲ. ಅವರೆಲ್ಲರ ಜೊತೆ ನಾನು ಸಂತಸದಿಂದ ಕಳೆದ ಕ್ಷಣಗಳು, ಬೇಸರವನ್ನು ತೋಡಿಕೊಂಡ ದಿನಗಳು, ಕಾರಣವಿಲ್ಲದೇ ಜಗಳವಾಡಿದ ಹೊತ್ತುಗಳು - ಎಲ್ಲವೂ ಹಸಿ ಸಿಮೆಂಟಿನ ಮೇಲಿನ ಹೆಜ್ಜೆ ಗುರುತಿನಂತೆ ನನ್ನ ಮನದಲ್ಲಿ ಶಾಶ್ವತವಾಗಿ ಅಚ್ಚೊತ್ತಿ ನಿಂತಿವೆ. ಎಂದಿಗೂ ಮಾಸಲಾರವವು. ಯಾಕೆಂದರೆ, ನನ್ನ ಸ್ನೇಹಿತರೆಲ್ಲರೂ ನನಗೆ ಸಿರಿಸಂಪತ್ತುಗಳಂತಿದ್ದರು. ಕೆಲವರು ಮುತ್ತುಗಳಾದರೆ, ಇನ್ನು ಕೆಲವರು ರತ್ನಗಳು. ಕೆಲವರು ಹವಳಗಳಾದರೆ, ಇನ್ನು ಕೆಲವರು ಚಿನ್ನಕ್ಕೆ ಸಮಾನ. ಇವರನ್ನೆಲ್ಲ ಮರೆಯಲಿಕ್ಕಾದೀತೇ...???
           ಇಲ್ಲ, ಅದು ಆಗುವಂಥದಲ್ಲ.
           ಬೇಸರದ ವಿಷಯ ಅವರು ಬಿಟ್ಟು ಹೋದದ್ದಲ್ಲ. ‘ಕಾರಣ ಹೇಳದೇ’ ಬಿಟ್ಟು ಹೋದದ್ದು. ಹೌದು, ಹೃದಯದ ಗೂಡಲ್ಲಿ ನೆನಪುಗಳ ಬೂದಿಯಲ್ಲೆಲ್ಲೋ ಅಡಗಿ ಕುಳಿತು ನನ್ನನ್ನು ಪ್ರತಿಕ್ಷಣವೂ ಸುಡುವ ಕಿಡಿ ಇದೇ, "ಕಾರಣವೇನಿರಬಹುದು....??" ಊಹೂಂ, ಈ ಕಿಡಿ ತಣಿದುಹೋಗುವ ಬದಲು ಉರಿ ಜಾಸ್ತಿಯಾಗಿ ನನ್ನನ್ನು ಸುಡುತ್ತಲೇ ಇದೆ. ಒಳಗಿಂದೊಳಗೆ ದಿನದಿಂದ ದಿನಕ್ಕೆ ನಾನೇ ಬೂದಿಯಾಗುತ್ತಿದ್ದೇನೆ ಎನ್ನುವುದು ಮಾತ್ರ ಸುಳ್ಳಲ್ಲ.
        ನನ್ನ ಹಳೆಯ ಸ್ನೇಹಿತರಿಗೆ ನನ್ನಲ್ಲಿ ಕೇವಲ ಎರಡೇ ಎರಡು ಪ್ರಶ್ನೆಗಳಿವೆ.
       ನೀವು ನನ್ನನ್ನು ಮರೆತಿರುವಿರಾ...?? ಇಲ್ಲವೆಂದರೆ ಮರೆಯಬಲ್ಲಿರಾ...??


ಹರಾಜು

               
ಹರಾಜಿಗಿದೆ ನನ್ನ ಹೃದಯ
ಬಿಕರಿಯಾಗಲಿ ಕಾಳಸಂತೆಯಲ್ಲಿ
ಸಿಗದಿದ್ದರೂ ಪರವಾಗಿಲ್ಲ ಇನಾಮು
ಮಾರಾಟವಾಗಿ ಹೋಗಲಿ ಚಿಂತೆಯಿಲ್ಲ

ಒಂದೇ ಕಡೆ ನಿಂತು ಹಾಕುವಂತಿಲ್ಲ ಹರಾಜು
ಓಡಾಡಬೇಕು ಪ್ರತಿ ಬೀದಿಗಳಲ್ಲಿ
ಬೀದಿಯ ಗಲ್ಲಿಗಳಲ್ಲಿ ಮೂಲೆಗಳಲ್ಲಿ
ಸಾರಬೇಕು ಎಲ್ಲ ಕಡೆ ಹರಾಜಿನ ಕತೆಯನ್ನು

ಚೂರು ಚೂರಾಗಿಹ ಹೃದಯವು ನನ್ನದು
ಅದನ್ನೆಲ್ಲ ಮರಳಿ ಸರಿಯಾಗಿ ಜೋಡಿಸಬಹುದು
ಅದಕ್ಕೇನು ಬೇಕಿಲ್ಲ ಬಹಳ ಪ್ರಯತ್ನ
ಪ್ರೀತಿಯ ಸೆಲೆ ಬೇಕು, ಸೆಲೆಯ ನೆಲೆ ಬೇಕು

ಖರೀದಿಸುವವನಿಗಿದೆ ಒಂದು ಶರತ್ತು
ಆತ ಅದನ್ನು ಮತ್ತೆ ಮಾರುವಂತಿಲ್ಲ
ಕಾಪಾಡಬೇಕು ಮುಚ್ಚಟೆಯಿಂದ ಆತ
ಕೊನೆ ಉಸಿರಿರುವವರೆಗೂ ಪ್ರತಿ ಕ್ಷಣವೂ


Thursday, 5 December 2013

ಹನಿಗವನ 1

1.
ಮೊನ್ನೆ ಮೊನ್ನೆಯಷ್ಟೇ
ಮೊಗ್ಗಾಗಿ ಅರಳಿದ್ದ
ಒಲುಮೆಯ ಹೂವು
ಇಂದು ಬಾಡಿಹೋಗಿದೆ
ಆದರೆ ಬಣ್ಣ ಮಾಸಿಲ್ಲ

2.
ಕಣ್ಣಲ್ಲಿ ಕನಸಿತ್ತು
ಉಸಿರಲ್ಲಿ ಹೆಸರಿತ್ತು
ನಿನ್ನ ಆಗಮನವಿಲ್ಲದೆ
ಈ ಹೃದಯ ಮಾತ್ರ
ಖಾಲಿ ಖಾಲಿಯಾಗಿತ್ತು

3.
ನೀಲಾಕಾಶದ ಮಧ್ಯದಲ್ಲಿ
ಪೂರ್ಣಚಂದಿರ ನಗುತ್ತಿದ್ದ
ನನ್ನ ಬಾಳ ಆಗಸದಲ್ಲಿ
ಬಿದಿಗೆಯ ಚಂದ್ರನೂ
ಮೂಡಲಿಲ್ಲ

4.
 ವಿರಹದ ಬೇಸಿಗೆಯಲ್ಲಿ
ಬೆಂದು ಬಸವಳಿದವಳಿಗೆ
ಕೊನೆಗೂ ದೊರಕಲಿಲ್ಲ
ತಂಪನ್ನೀಯುವ
ನಿನ್ನ ಪ್ರೇಮಸಿಂಚನ


Wednesday, 4 December 2013

ಮಾತು ಮರೆತು ಮೌನದ ಹಾದಿಯಲ್ಲಿ

                                   "ಉಸ್ಸಪ್ಪಾ, ಇನ್ನು ನನ್ನಿಂದ ಸಾಧ್ಯವಿಲ್ಲ", ಹೀಗೆಂದು ಕೊನೆಯ ಬಾರಿ ಹೇಳಿ ಮನಸ್ಸು ಕಲ್ಲಿನಂತೆ ಕೂತುಬಿಟ್ಟಿದೆ. ಇನ್ನು ಮುಂದೆ ನಾನು ಮೌನಕ್ಕೆ ಶರಣಾಗುತ್ತೇನೆ ಎಂದು ಅಘೋಷಿತ ನಿರ್ಧಾರ ಕೈಗೊಂಡಿದೆ. ಮಾತು ಮಾತು ಎನ್ನುತ್ತಾ ಜಗತ್ತಿನೊಂದಿಗೆ ಮಾತನಾಡೇ ಆಯಸ್ಸು ಕಳೆಯುವಂತಹ ಇಂದಿನ ದಿನಗಳಲ್ಲಿ ಒಮ್ಮೆಲೇ ಈ ಮಾತಿನಿಂದಾಗುವ ಪ್ರಯೋಜನವೇನು ಎಂಬ ಯೋಚನೆಯ ಹುಳು ತಲೆಯನ್ನು ಕೊರೆಯತೊಡಗಿ ಈಗ ಅಲ್ಲೊಂದು ಪುಟ್ಟದಾದ ಗುಂಡಿಯೇ ಸೃಷ್ಟಿಯಾಗಿದ್ದು, ಅದನ್ನು ಮುಚ್ಚುವ ಪ್ರಯತ್ನವಾಗಿ ಮೌನಕ್ಕೆ ಮೊರೆಯಿಟ್ಟಿದೆ ಮನಸ್ಸು.
       ತಂತ್ರಜ್ಞಾನದ ಯುಗದಲ್ಲಿಂದು ನಾವಿದ್ದೇವೆ. ಉಡುಗೆ-ತೊಡುಗೆ, ಹಾವ-ಭಾವ, ಜೀವನ ಶೈಲಿ ಎಲ್ಲವೂ ಆಧುನಿಕಮಯವಾಗಿದೆ. ಆದರೆ ನಮ್ಮ ಮಾತುಗಳು....??? ಅದರಲ್ಲಿ ಇಣುಕಿ ನೋಡಿದರೆ ಕಾಣುವ ವಿಚಾರಗಳು.....??? - ಎಲ್ಲವೂ ಕೆಳದರ್ಜೆಯವೇ. ಸ್ವಾರ್ಥ, ಪರನಿಂದೆ, ಹಗೆತನ, ಕಪಟತನ, ವಂಚನೆ - ಇವೆ ಮುಂತಾದ ಕೀಳು ಭಾವನೆಗಳು ಎಲ್ಲರ ಮಾತುಗಳೊಂದಿಗೆ ಬೆಸೆದುಕೊಂಡಿವೆ. ‘ನುಡಿದರೆ ಮುತ್ತಿನ ಹಾರದಂತಿರಬೇಕು’ ಎನ್ನುವುದನ್ನು ಬಿಡಿ ಮನಸ್ಸಿಗೆ ಮುದ ನೀಡುವ ಮಾತುಗಳಿಗೂ ಸಹ ಬರ ಬಂದಿದೆ. ಪ್ರೀತಿ, ವಿಶ್ವಾಸ, ನಂಬಿಕೆ, ಸ್ನೇಹ, ಗೌರವ, ಪ್ರಾಮಾಣಿಕತೆ, ಮಾನವಪ್ರೇಮ - ಇವೆಲ್ಲ ಕೇವಲ ಕಲ್ಪನೆಯ ಲೋಕದಲ್ಲಿಯಾದರೂ ಸಿಗಬಹುದೇನೋ. ಆದರೆ ನಿಜ ಜಗತ್ತಿನಲ್ಲಿ ಸದ್ಯದ ಮಟ್ಟಿಗೆ ಅನುಭವಕ್ಕೆ ಸಿಗುವುದು ಕಷ್ಟಸಾಧ್ಯ. ಇದರ ಕುರಿತು ನೆನೆದು ಮನಸ್ಸು ವಿಷಾದಗೊಳ್ಳುತ್ತದೆ.
       ಹಾಗಂತ ನೂರಕ್ಕೆ ನೂರು ಪ್ರತಿಶತಃ ಎಲ್ಲರ ಮನಸ್ಸೇನೂ ಹಳಸಿ ಹೋಗಿಲ್ಲ. ಉತ್ತಮ ವಿಚಾರಗಳ ವಿಶಾಲ ಮನಸ್ಸುಗಳೂ ಖಂಡಿತ ಇವೆ. ಆದರೆ ಎಲ್ಲೋ ತೆರೆಯ ಮೇಲಿನ ಪರದೆಯ ಹಿಂದೆ ಸದ್ದಿಲ್ಲದೇ ಅಡಗಿ ಕುಳಿತಿವೆ.
      ಆ ಒಂದು ದಿಶೆಯತ್ತ ಹೆಜ್ಜೆ ಹಾಕುತ್ತಲೇ ಮನಸ್ಸು ಮೌನವನ್ನು ಅಪ್ಪಿಕೊಂಡಿದೆ. ತನ್ನ ಅಂತರಂಗದ ಆಳಕ್ಕಿಳಿದು ತನ್ನ ತಾ ಸರಿಯಾಗಿ ಅರಿತುಕೊಳ್ಳುತ್ತಲೇ ತನ್ನ ಈ ಮೌನವನ್ನು ಮಾತಾಗಿಸಬಲ್ಲ ಮನಸುಗಳನ್ನು ಮೌನವಾಗೇ ಹುಡುಕಹೊರಟಿದೆ. ಸಫಲತೆ ದೊರಯಬಲ್ಲುದೇ...?? ಪ್ರಯತ್ನಿಸಿ ನೋಡಲೇನು...?