Sunday, 17 November 2013

ಮನಸ್ಸಾಕ್ಷಿ


ಮನಸ್ಸಿಗೆ ಕೈಗನ್ನಡಿಯಿದು
ಬಿಂಬಿಸುವುದು ದಿಟಭಾವವನ್ನು
ನಡೆದರೆ ನೀ ವಿರುದ್ಧವಾಗಿ
ಸುಡುವುದು ಉಮಿಯೊಳಗಿನ ಕೆಂಡದಂತೆ
ದ್ವಂದ್ವದ ಸುಳಿಯಲ್ಲಿ ಸಿಲುಕಿ
ಎತ್ತಲೂ ಕತ್ತಲೆಯೇ ಗೋಚರಿಸಿದಾಗ
ಬಡಿದೆಬ್ಬಿಸುವುದು ಮಲಗಿದ್ದ ವಿವೇಕವನ್ನು
ತೋರುವುದು ಮುನ್ನಡೆಯಬೇಕಾದ ದಿಶೆಯನ್ನು

ಪರರ ಮಾತಿನ ತಾಳಕ್ಕೆ ಕುಣಿಯುತ
ತನ್ನತನವನ್ನು ಮರೆತು ಬದುಕುವರೆಷ್ಟೋ
ಲೋಕವನ್ನು ಮೆಚ್ಚಿಸುವ ಸಲುವಾಗಿ
ಧರಿಸುವರು ಹುಸಿ ಮುಖವಾಡಗಳನ್ನು
ತೊಟ್ಟು ಮೆರೆಯುವರು ಬಣ್ಣಬಣ್ಣದ ವೇಷಗಳನ್ನು
ತಾನೆಂಬುದಕ್ಕೆ ಅಸ್ತಿತ್ವವೇ ಇಲ್ಲ
ಅವರೆಂದೆಂದಿಗೂ ಪರರ ಕೈಗೊಂಬೆ
ಜೀವಿಸುವರು ಹತ್ತರೊಳಗೆ ಹನ್ನೊಂದನೆಯವರಂತೆ

ಮನದ ಆಸೆಗಳ ಅರಿತು
ನೀರುಣಿಸಿ ಪಾಲಿಸಿ ಪೋಷಿಸಿದರೆ
ಅರಳಿ ನಿಂತು ಸುಗಂಧ ಬೀರುವ ಪುಷ್ಪದಂತೆ
ಬದುಕಾಗುವುದು ನಳನಳಿಸುವ ಹೂದೋಟ
ಪರನೆಂಬ ಕೀಟದ ಮುಷ್ಠಿಯಲ್ಲಿ
ಹೊಸಕಿ ಹೋದರೆ ಆ ಮೊಗ್ಗು
ಬಾಡಿಹೋದ ಸುಮವು ಗಿಡದಲ್ಲಿದ್ದೇನು ಫಲ?
ಬದುಕಿಯೂ ಸತ್ತಂತೆ ಪ್ರತಿ ಉಸಿರು

ತನ್ನ ಹೃದಯಸಾಕ್ಷಿಗೆ ಓಗೊಟ್ಟು
ಪ್ರತಿ ಹೆಜ್ಜೆ ಇಡು ಓ ಮನವೇ
ಪರರ ಮಾಯೆಗೆ ಮೋಸಹೋಗದಿರು ನೀ
ನೀನಲ್ಲದೇ ಬೇರಾರು ಅರಿವರು ನಿನ್ನ?
ಅರಿತು ನಡೆವರು ನೀ ಬಯಸಿದಂತೆ
ನಿನ್ನ ಬದುಕಿನ ಕರ್ತೃ ನೀನೇ
ಅಚ್ಚಳಿಯದ ಕುರುಹಾಗಿ ನೆಲೆನಿಂತು
ಸ್ಫೂರ್ತಿ ದೀಪವಾಗುವುದು ನೀ ನಡೆದ ಹಾದಿ

Saturday, 16 November 2013

ಕವಿ ಸಮಯ

            
ಕುಳಿತರೇನು ಬಂತು ತಾಸುಗಳ ತನಕ
ಹಾಳೆಗಳ ಜೊತೆಗೆ ಲೇಖನಿಯ ಸರಸ
ಕೊನೆಯಾಗುವುದು ವಿರಸದಲ್ಲಿಯೇ
ಸುಮ್ಮನೇ ಗೀಚುವುದರ ಹೊರತಾಗಿ
ಬರಲಾರವು ಒಂದೇ ಒಂದು ಸಾಲು

ತಲೆಯೊಳಗೆ ಗಿರಕಿ ಹೊಡೆಯುತ್ತ
ಮನಸಿಗೆ ಒದೆಯುವ ಭಾವಗಳ ಚೆಂಡು
ಜಿಗಿದು ಬರಲಾರದು ಈಚೆಗೆ
ಪದವಾಗಿ ಪದ್ಯವಾಗಿ ಗದ್ಯವಾಗಿ
ಕಾಯಿಸುವುದು ಕಾಡಿಸುತ್ತ ಆಡಿಸುತ್ತ

ಕೆಲವೊಮ್ಮೆ ಓಡಿದರೆ ಕೈ ಸರಸರನೆ
ಹುಚ್ಚೆದ್ದು ಬಂದಂತೆ ಬೆರಳುಗಳಲ್ಲಿ ಶಕ್ತಿ
ಕ್ಷಣಮಾತ್ರದಲ್ಲೇ ಪುಟಗಳೆರಡು ಖಾಲಿ
ಒಡ್ಡುಗಳನ್ನು ಒಡೆದು ಹರಿಯುವುದು
ತಡೆಯಿಲ್ಲದಂತೆ ಯೋಚನಾ ಝರಿ

Saturday, 9 November 2013

ನಲ್ಲ ಕೇಳಿಲ್ಲಿ....

ಮನದಲ್ಲಿ ಮೂಡುವ ಹುಚ್ಚು ಬಯಕೆಗಳ
ಚೆಂದದ ತೋರಣವನ್ನು ಕಟ್ಟಿ
ಹೃದಯದರಮನೆಗೆ ಅಲಂಕರಿಸಲೇ?

ಹುಸಿನಿದ್ದೆಯ ಸಿಹಿಕನಸುಗಳ ಕನವರಿಕೆಗೆ
ನಿನ್ನ ಚೇಷ್ಟೆಗಳ ಬಣ್ಣ ಹಚ್ಚಿ
ಮರೆಯಲ್ಲಿ ಪ್ರೇಮದ ಓಕುಳಿಯಾಡಲೇ?

ಚಂಚಲತೆಯ ಕೂಸಿನಂತೆ ಜಿಗಿದಾಡುವ
ಲಹರಿಯ ಕುದುರೆಯನ್ನು ತಂದು
ನಿನ್ನ ಮೋಹದ ಲಾಯದಲ್ಲಿ ಕಟ್ಟಿಹಾಕಲೇ?

ವಿಳಾಸವನ್ನು ಕಳೆದುಕೊಂಡು ಅಲೆಮಾರಿಯಂತೆ
ತನ್ನನ್ನೇ ಹುಡುಕುತಿರುವ ಈ ಉಸಿರಿಗೆ
ನಿನ್ನ ಎದೆಯ ಗೂಡಿನ ದಾರಿ ತಿಳಿಸಲೇ?

Thursday, 7 November 2013

ಪರವಶನಾದೆನು

                  
ಮತ್ತೆ ಮತ್ತೆ ಪರವಶವಾಗುತಿಹುದು
ಹೊತ್ತಿಲ್ಲದೆ ಗೊತ್ತಿಲ್ಲದೆ
ತನ್ನ ಕುರಿತು ತನಗೇ ಪರಿವೆ ಇಲ್ಲದೆ
ಮೋಹದ ಮಾಯೆ ಬೆಂಕಿಯ ಬಿಸಿಗೆ
ಕರಗುತಿಹುದು ಅಂಚು ಅಂಚಾಗಿ ಪ್ರತಿಕ್ಷಣವೂ

ಕನಸುಗಳು ಸೋಕಿದಾಗ ಈ ಕಂಗಳನ್ನು
ನೂರು ಬಣ್ಣಗಳ ಹೊತ್ತು
ರೋಮಾಂಚನದ ಅಲೆಗಳು ಮೈ ಮನಗಳ ಬಡಿದು
ಗಂಭೀರತೆಯ ಪರದೆಯನ್ನು ಸರಿಸಿ
ಹರಿಯುವುದು ಲಜ್ಜೆಯ ಹೊಳೆಯು ತಡೆಯಿಲ್ಲದೆ

ಗೆಲ್ಲಬೇಕೆಂದೂ ಹೊರಟರೂ
ಪುನಃ ಸ್ವಾಗತಿಸುವುದು ಸೋಲಿನ ಮಾಲೆ
ಆದರೂ ಕೊರಳೊಡ್ಡುವಾಗ
ಬೇಸರ, ನಿರಾಸೆ ಭಾವಗಳೆಲ್ಲ ಮಾಯವಾಗಿ
ಸಂತಸ, ಸಾರ್ಥಕತೆಗಳು ಮನೆಮಾಡುವವು ಏಕೋ

Monday, 4 November 2013

ಕಿಟಕಿ ಪರದೆ ಸರಿಸಿ....

                                
               ಎದುರುಗಡೆ ಟೇಬಲ್ ಮೇಲೆ ಸೋನಿ ಲ್ಯಾಪ್ ಟಾಪ್ ಅಗಲವಾಗಿ ಬಾಯಿ ತೆರೆದು ಕುಳಿತಿತ್ತು. ೩೨.೫*೧೯.೫" ಸ್ಕ್ರೀನ್ ನಲ್ಲಿ ಯಾವುದೋ ತೆಲುಗು ಸಾಂಗ್ ಪ್ಲೇ ಅಗ್ತಾ ಇತ್ತು. ಆದರೆ ಅವಳ ದೃಷ್ಟಿ ಕಿಟಕಿಯಿಂದ ಕಾಣುತ್ತಿರುವ ಹೊರಪ್ರಪಂಚದ ಮೇಲಿತ್ತು. ಗಮನವೆಲ್ಲಾ ವಾಹನಗಳ ಓಡಾಟದ ಭರಾಟೆಯಿಂದ ಉಂಟಾಗುತ್ತಿದ್ದ ಕರ್ಕಶ ಶಬ್ದಗಳ ಮೇಲೆ. ತನ್ನ ಮನಸು ಕೂಡ ಕಳೆದ ಹಲವು ತಿಂಗಳುಗಳಿಂದ ಇದೇ ರೀತಿ ಅಶಾಂತತೆಯಿಂದ ತುಂಬಿಹೋಗಿದೆ. ಮನದ ಹೆದ್ದಾರಿಯಲ್ಲಿ ಯಾವಾಗ ನೋಡಿದರೂ ಟ್ರಾಫಿಕ್ ಜಾಮ್. ಒಂದಲ್ಲ ಒಂದು ವಾಹನದಿಂದಾಗಿ ಪ್ರತಿದಿನವೂ ಕರ್ಕಶ ಸೌಂಡುಗಳು ತಪ್ಪಿದ್ದಲ್ಲ. "ಹೇ ಕೃಷ್ಣಾ, ಈ ಟ್ರಾಫಿಕ್ ಜಾಮ್ ನಿಂದ ನನ್ನ ಮನಸನ್ನು ಹೇಗೆ ಮುಕ್ತಗೊಳಿಸಲಿ?", ದೊಡ್ಡದಾಗಿ ಒಮ್ಮೆ ನಿಟ್ಟುಸಿರು ಬಿಟ್ಟಳು.
                 ಅವಳಿಗೆ ಯಾವತ್ತೂ ಬಗೆಹರಿಯದ ಸಂಗತಿ ಒಂದಿದೆ. ‘ನಮ್ಮ ಜೀವನ ನಮ್ಮ ಕೈಯ್ಯಲ್ಲಿ’, ‘Life is what you make it’, ‘ನಾವೇ ನಮ್ಮ ಜೀವನವೆಂಬ ನಾಟಕದ ಸೂತ್ರಧಾರರು’ - ಇಂತಹ ಡೈಲಾಗ್ಸ್ ಗಳನ್ನು ಹೇಳುತ್ತಲೂ ಕೂಡ ನಾವೇಕೆ ಸಂಪೂರ್ಣವಾಗಿ ನಮ್ಮದು ಎನ್ನುವ ಏಕ ಮಾತ್ರ ಆಸ್ತಿಯಾದ ‘Heart’ಗೆ ಅತಿಕ್ರಮಿಸುವ ಹಕ್ಕನ್ನು ಇನ್ನೊಬ್ಬರಿಗೆ ಬಿಟ್ಟುಕೊಡುತ್ತೇವೆ? ತಿಳಿದೂ ಸಹ ಮಾಡುವ ತಪ್ಪು ಇದಲ್ಲವೇ? Heartನ್ನು ಮನಸೋ ಇಚ್ಛೆ ಉಪಯೋಗಿಸಿಕೊಂಡು ಆಮೇಲೆ ತಿಪ್ಪೆಗೆ ಎಸೆದು ಹೋದರೂ ತಿರುಗಿ ಅದೇ ತಪ್ಪನ್ನು ಮಾಡುತ್ತೇವಲ್ಲ... ಈ ಸಮಯದಲ್ಲಿ ಮೆದುಳು ಎನ್ನುವ ಬುದ್ಧಿಜೀವಿ ಏನು ಮಾಡುತ್ತಿರುತ್ತದೆ...?
              FB ಓಪನ್ ಮಾಡಿ ಕೂತಾಗಲೆಲ್ಲಾ ಅವಳಿಗೆ ಒಂದು ವಿಷಯ ಮತ್ತೆ ಮತ್ತೆ ನೆನಪಾಗುತ್ತದೆ. ವ್ಯಕ್ತಿಯೊಬ್ಬ ಎಷ್ಟರ ಮಟ್ಟಿಗೆ ಸೋಷಿಯಲ್ ನೆಟ್ ವರ್ಕ್ ಮೇಲೆ ಡಿಪೆಂಡ್ ಆಗಿದ್ದಾನೆಂ(ಳೆಂ)ದರೆ ಎದುರಿಗೆ ಸಿಕ್ಕಿದಾಗ ಅಥವಾ ಕಾಲ್ ಮಾಡಿದಾಗ ಮಾತನಾಡಲು ಸಮಯವಿರುವುದಿಲ್ಲ. ಅದೇ FBಲಿ ಚಾಟ್ ಮಾಡಲು ಅವನಿ(ಳಿ)ಗೆ ಬೇಜಾನ್ ಪುರಸೊತ್ತಿರುತ್ತದೆ. ಜೀವಂತಿಕೆಗಿಂತ ನಿರ್ಜೀವತೆಯತ್ತಲೇ ಮೋಹ ಜಾಸ್ತಿಯಾಗುತ್ತಿದೆ. ಇದನ್ನು ಅವರಿಗೆ ಅರ್ಥ ಮಾಡಿಸುವುದಾದರೂ ಹೇಗೆ? ಯಾಕೆಂದರೆ ಆಮೇಲೆ ಒಂದು ಅಲ್ಟಿಮೇಟ್ ಸ್ಟೇಟ್ ಮೆಂಟ್ ನೀಡಬಾರದಲ್ಲ... ‘ನಿನಗೆ ಜಗತ್ತಿನಲ್ಲಿ ಯಾರೂ ಸರಿಯಾಗಿ ಕಾಣಿಸಲ್ಲ’..
            ನಿಜ, ಜಗತ್ತಿನಲ್ಲಿ ಯಾರೂ ಸರಿಯಲ್ಲ. Nobody/Nothing is perfect. ಈ ನಮ್ಮ ಭೂಮಿಯೇ ಪೂರ್ತಿ ದುಂಡಗಿಲ್ಲ. ಮೇಲ್ಭಾಗದಲ್ಲಿ ಚಪ್ಪಟೆಯಾಗಿದ್ದು ನಡುವೆ ಉಬ್ಬಿದೆ. ಅದೇ ರೀತಿ ಮನುಷ್ಯ ಕೂಡ. ಕೆಲವೊಂದು ಗುಣಗಳು ಚಪ್ಪಟೆಯಾಗಿ ಸೊರಗಿಹೋಗಿದ್ದರೆ, ಇನ್ನು ಕೆಲವು ದೃಢವಾಗಿ ಉಬ್ಬಿಕೊಂಡಿರುತ್ತವೆ. ಇದರ ಅರಿವು ಪ್ರತಿ ಮನುಷ್ಯನಿಗೂ ಇರುತ್ತದೆ. ಆದರೆ ಬೇರೆಯವರು ಹೇಳಿದಾಗ ಮಾತ್ರ ಅರಿವೆಂಬ ಕಿಡಿ ಆರಿಹೋಗಿ ಅವಿವೇಕದ ಬೂದಿ ಆವರಿಸುತ್ತದೆ.
         ಅಲಾರಂ ಗಡಿಯಾರ ಐದು ಬಾರಿಸಿತು. ಅವಳು ಕಿಟಕಿಯಿಂದ ಇತ್ತ ದೃಷ್ಟಿ ಹರಿಸಿದಳು. ಥತ್, ಏನೇನೋ ಯೋಚನೆ ಮಾಡಿಬಿಟ್ಟೆ. ಒಂದಕ್ಕೊಂದಕ್ಕೂ ಸಂಬಂಧವೇ ಇಲ್ಲದಂತೆ ಎತ್ತೆತ್ತಲೋ ತನ್ನ ಆಲೋಚನಾ ಕುದುರೆ ಓಡಿತಲ್ಲ ಎನಿಸಿತು. ಮನಸ್ಸಿಗೆ ಏನೋ ಸ್ವಲ್ಪ ಸಮಾಧಾನವಾಯಿತು. ಇದನ್ನೆಲ್ಲಾ ಯಾರೊಂದಿಗಾದರೂ ಹಂಚಿಕೊಳ್ಳಬೇಕು ಎಂದುಕೊಂಡಳು. ಮರುಕ್ಷಣವೇ ನೆನಪಾಯಿತು, ‘ಜೀವಂತಿಕೆಗಿಂತ ನಿರ್ಜೀವತೆಯತ್ತ ಮೋಹ ಜಾಸ್ತಿ’. ಮುಗುಳ್ನಗುತ್ತಲೇ Blogನಲ್ಲಿ ಹಾಕಿದರಾಯಿತು ಎಂದುಕೊಳ್ಳುತ್ತಾ ಕುರ್ಚಿಯಿಂದ ಮೇಲೆದ್ದಳು. ಲ್ಯಾಪ್ ಟಾಪ್ ನಲ್ಲಿ ಈಗ ಮಲಯಾಳಂ ಸಾಂಗ್ ಪ್ಲೇ ಆಗುತ್ತಿತ್ತು, ‘ಸಂಚಾರಿ ನೀ’.

ಕನವರಿಕೆ

                     
ಉಸಿರ ಏರಿಳಿತಗಳಲ್ಲಿ ಭಾವಗಳು ಮಿಳಿತಗೊಂಡು
ನಿಟ್ಟುಸಿರಿನಲ್ಲಿ ನೀ ಪಿಸುಗುಟ್ಟಿದಂತೆ
ಕಣ್ಣ ಬಿಂಬಗಳಲ್ಲಿ ನೂರು ಬಣ್ಣಗಳು ಸೇರಿ
ನೋಟಗಳಲ್ಲಿ ನಿನ್ನದೇ ಊಹಾ ಪ್ರತಿಬಿಂಬ
ಮೌನವೋ ಧ್ಯಾನವೋ ಅಥವಾ ಇನ್ನೊಂದೋ
ಪ್ರತಿಕ್ಷಣವು ಕಾಡುತಿಹುದು ನಿಜವೇ

ಹುಚ್ಚು ಕನಸುಗಳು ಹತ್ತು ರೂಪ ತಳೆದು
ನಿದ್ದೆಗಣ್ಣಿನ ಕೊಳದಲ್ಲಿ ಈಜಾಡುವಾಗ
ಬಯಕೆಗಳು ಗರಿಬಿಚ್ಚಿ ಸ್ವೇಚ್ಛೆಯಿಂದ
ಮನದ ಗುಪ್ತ ಆಗಸದಲ್ಲಿ ಸುಪ್ತವಾಗಿ ಹಾರಾಡುವಾಗ
ಸುಳಿಯುತಿಹುದು ಮತ್ತೆ ಮತ್ತೆ ಬಿಡದೇ
ನಿನ್ನದೇ ಹೆಸರು ಮೊದಲ ಬಾರಿ ಕೇಳಿದಂತೆ

ತನ್ನ ತಾ ಮುಟ್ಟಿದರೂ ಪುಳಕಗೊಳ್ಳುವಂತೆ
ಆ ನಿನ್ನ ಕಲ್ಪಿತ ಸ್ಪರ್ಶದ ಉತ್ಕರ್ಷ
ಆವರಿಸಿದಂತೆ ಪ್ರಭಾವಳಿಯು
ಮೈಮನಗಳ ಕಣಕಣಗಳನ್ನೂ ಉದ್ದೀಪ್ತಗೊಳಿಸಿ
ನಿನ್ನ ಕುರಿತ ಯೋಚನೆಯ ಕೋಗಿಲೆಯು
ಅನವರತ ಹಾಡುತ್ತಲೇ ಇದೆ ಸ್ವಪ್ನ ರಾಗದ ಧಾಟಿಯಲ್ಲಿ