Wednesday, 6 July 2016

ಎಚ್ಚರ1.
"ಮಾವ ಅದೇನೋ ಮಾತಾಡ್ಬೇಕು ಅಂತಿದ್ರು, ಆ ಮೊಬೈಲ್ ಬದಿಗಿಟ್ಟು ಒಮ್ಮೆ ಹೋಗಿ ಏನಂತ ಅವರನ್ನ ಕೇಳ್ಬಾರ್ದಾ ..??"
ಕ್ಲೈಂಟ್ ಜೊತೆ ಚಾಟಿಂಗ್ ಅಲ್ಲಿ ಬ್ಯುಸಿಯಾಗಿದ್ದ ಆತ ಹೆಂಡತಿಯ ಮಾತಿಗೆ ತಲೆ ಎತ್ತದೇ "ಆಫೀಸಿಗೆ ಹೋಗೋವಾಗ ಮಾತಾಡ್ತೀನಿ ಕಣೇ, ಹೇಳಿದ್ದನ್ನೇ ಹತ್ತ್ ಸಲ ಹೇಳ್ಬೇಡ." ಎಂದು ಗದರಿದ. ಅರ್ಧಗಂಟೆಯ ನಂತರ ಅವಸರದಿಂದ ಆಫೀಸಿಗೆ ಹೊರಟು ನಿಂತ.
ಈ ಮೊದಲು ಅಮ್ಮನೊಂದಿಗೆ ಅಪ್ಪ ಹೇಳಿದ ಮಾತು ಕೇಳಿಸಿಕೊಂಡಿದ್ದ ಏಳು ವರ್ಷದ ಮಗ ತಂದೆ ಗಡಿಬಿಡಿಯಿಂದ ಹೋಗುವುದನ್ನೇ ನೋಡುತ್ತಿದ್ದ.

"ನಿಮ್ಮಪ್ಪ ಏನ್ ಮಾತಾಡ್ತಾರೋ. ನಂಗೇನೂ ಅರ್ಥ ಆಗಲ್ಲ."
ಆಫೀಸ್ ಮೀಟಿಂಗ್ ಗೆ ರೆಡಿಯಾಗುತ್ತಿದ್ದವನ ಕಿವಿಗೆ ಈ ಮಾತು ಬೀಳಲಿಲ್ಲ. ಆತನ ಕಾರು ಸ್ಟಾರ್ಟ್ ಆದ ಶಬ್ದ ಒಳಕೋಣೆಯಲ್ಲಿ ಪಾರ್ಶ್ವವಾಯು ಬಡಿದು ಮಲಗಿದ್ದ ತಂದೆಗೆ ಕೇಳಿಸಿತು.
ಅವಳ 'ಮೊಬೈಲ್ ಬದಿಗಿಟ್ಟು ಅವರನ್ನ ಏನಂತ ಕೇಳ್ಬಾರ್ದಾ' ಎಂಬ ಮಾತು ಮತ್ತೊಮ್ಮೆ ನೆನಪಾಗಿ ಕಾಡಿತು.


2.
ಅಂದು ಹುಟ್ಟಿ ಬೆಳೆದ ಮನೆ, ಆಡಿ ಕಳೆದ ತೋಟಗಳನ್ನು ಬಿಟ್ಟು ಹೋಗಬೇಕೆಂಬ ನೋವೇ ದೊಡ್ಡ ಸಂಗತಿಯಾಗಿ ಕಾಣಿಸಿತ್ತು. ನಾಳೆಯ ದಿನಗಳು ಭದ್ರವಾಗಿರುವಂತಹ ಭವ್ಯ ಅವಕಾಶ ಬಾಗಿಲ ಬಳಿ ಕಾದು ನಿಂತಿದ್ದರೂ, ಅದರತ್ತ ತಿರುಗಿಯೂ ನೋಡದೆ ವಾಪಸ್ಸು ಕಳಿಸಿದ್ದ. ಹೆಂಡತಿ, ಮಗನ ಭವಿಷ್ಯಕ್ಕಿಂತ ತನ್ನ ವರ್ತಮಾನ ಮುಖ್ಯವೆನಿಸಿತ್ತು.

ಇಂದು ಮನೆ ಮೂರು ಮಾಡಾಗಿದೆ, ತೋಟ ಆರು ಹೋಳಾಗಿದೆ. ಅತ್ತ ವಾರದಿಂದ ಮಗ ಮುನಿಸಿಕೊಂಡು ಮನೆ ಬಿಟ್ಟು ಹೋಗಿದ್ದಾನೆ. ಇತ್ತ ಮೂರು ದಿನಗಳಿಂದ ಹೆಂಡತಿ ಬೇಸರಿಸಿಕೊಂಡು ಊಟ ಬಿಟ್ಟು ಕೂತಿದ್ದಾಳೆ. ಭವಿಷ್ಯದ ಬಾಗಿಲು ಬಿರುಕು ಬಿಟ್ಟಿದೆ. ವರ್ತಮಾನ ಇವನನ್ನೇ ನೋಡುತ್ತಾ ವ್ಯಂಗವಾಗಿ ನಗುತ್ತದೆ.


3.
"ಅಮ್ಮಾ, ಒಂದ್ಸಲ ನಾ ಹೇಳಿದ್ದನ್ನ ಪೂರ್ತಿಯಾಗಿ ಕೇಳಿಸ್ಕೊ." ಮಗಳ ಬೇಡಿಕೆ.

"ತಡಿ, ಇದೊಂದು ಸೀರಿಯಲ್ ಮುಗೀಲಿ. ಪಾಪ ಗೌರಿ, ಡೈವೋರ್ಸ್ ಕೊಟ್ಟೆ ಬಿಡ್ತಾಳೆ ಅನ್ಸತ್ತೆ." - ತಾಯಿಯ ಉತ್ತರ.

ಸೀರಿಯಲ್ ಮುಗಿದ ಮೇಲೂ ಕಥಾನಾಯಕಿ ಗೌರಿಯ ಕುರಿತಾದ ಚರ್ಚೆ ಮುಗಿಯಲಿಲ್ಲ. 'ಅಯ್ಯೋ ಪಾಪ', 'ಇನ್ನವಳ ಬದುಕು ಏನಾಗತ್ತೋ', 'ಅವಳಮ್ಮನಿಗಾದ್ರೂ ನಿಜಾನೆಲ್ಲಾ ಹೇಳ್ಬೇಕಿತ್ತು' - ಅಲವತ್ತುಕೊಳ್ಳುತ್ತಲೇ ಆ ದಿನ ಕಳೆಯಿತು.

ಮರುದಿನ ಮಗಳು ವಾಪಸ್ಸು ಗಂಡನ ಮನೆಗೆ ಹೊರಟಳು. "ಹೋಗ್ಬರ್ತೀನಮ್ಮಾ" ಎಂದಷ್ಟೇ ಹೇಳಿದಳು.

ಅದಾಗಿ ಒಂದು ವಾರ ಕಳೆದಿದೆ. ಈಗ ಆ ಮಹಾತಾಯಿ ಸೀರಿಯಲ್ ನೋಡುವುದನ್ನೇ ಬಿಟ್ಟಿದ್ದಾಳೆ. ಟಿವಿ ಕಂಡ ಕೂಡಲೇ ಮಗಳ ಹೆಣವೇ ಕಣ್ಣಮುಂದೆ ಬರುತ್ತದೆ. 'ಪತಿ ವಿಚ್ಛೇದನ ನೀಡಿದನೆಂದು ಮಾನಸಿಕವಾಗಿ ನೊಂದು ಪತ್ನಿಯು ಆತ್ಮಹತ್ಯೆ' ಎಂದು ಸುದ್ದಿವಾಹಿನಿಗಳು ಪದೇ ಪದೇ ತೋರಿಸುವುದನ್ನು ಕಂಡಾಗ ಮಗಳ ಮಾತನ್ನು ತಾನು ಕೇಳಿಸಿಕೊಳ್ಳದೇ ಉಳಿದ ಕ್ರೂರತನದ ನೆನಪಾಗುತ್ತದೆ.


4.
"ನಾನಂತೂ ಓದದೇ ಕೆಟ್ಟೆ. ಹಂಗಾಗಿ ನಿಮ್ಮಪ್ಪನ ಹಂಗಿನಲ್ಲೇ ಬದುಕೋ ಹಾಗಾಯ್ತು. ನೀನು ಓದಿ ಕೆಡಬೇಡ. ಅಳಿಯ ಅದೆಷ್ಟೇ ದುಡಿದು ತಂದ್ರೂ ಪರವಾಗಿಲ್ಲ. ನೀನು ಕೆಲಸಕ್ಕೆ ಹೋಗೋದನ್ನ ಯಾವ್ದೇ ಕಾರಣಕ್ಕೂ ಬಿಡ್ಬೇಡ. ಕಷ್ಟಕಾಲಕ್ಕೆ ಆಪದ್ಧನ ಅಂತಾನಾದ್ರೂ ಹೆಣ್ಣಿನ ಕೈಯ್ಯಲ್ಲಿ ನಾಲ್ಕು ಕಾಸಿರ್ಬೇಕು, ತಿಳ್ಕೋ."

ಅಮ್ಮ ಅದೆಷ್ಟು ಸಲ ಹೇಳಿದ್ದಳು. ನಾನು ಕೇಳಿಸಿಕೊಂಡಂತೆ ನಾಟಕವಾಡಿದ್ದೆ.
ಮತ್ತೊಬ್ಬಳ ತೆಕ್ಕೆಗೆ ಬಿದ್ದಿರುವ ಅವರು ಮನೆಗೆ ಬರುವುದೇ ಅಪರೂಪ. ಅಲ್ಲಿ ಸುರಿದು ಉಳಿದಿದ್ದನ್ನು ಇಲ್ಲಿ ಕೊಟ್ಟು ಹೋಗುತ್ತಾರೆ. ಅದು ಹೊಟ್ಟೆಗೆ ಸಾಕಾದರೆ ಬಟ್ಟೆಗೆ ಸಾಲದು. ಬ್ಯಾಂಕ್ ಕೆಲಸವನ್ನು ಬಿಡದೇ ಇದ್ದಿದ್ದರೆ ..??

"ಅಮ್ಮಾ, ಸ್ಕೂಲ್ ಯುನಿಫಾರಂ ಫೀಸ್ ಗೆ ಹಣ ಕೊಡಮ್ಮಾ.?" ಹಿರಿಯ ಮಗ ಬಂದು ಕೇಳಿದ.

ಅಮ್ಮ ಹೇಳುತ್ತಿದ್ದ ಕಷ್ಟಕಾಲ ಎಂದರೆ ಇದೇನಾ. ??


Thursday, 30 June 2016

ಆಲಪದ್ಮ


"ಮಾತಾಡ್ತೀನಿ ಅನ್ನೋದನ್ನೇ ದೊಡ್ಡ ರೋಗ ಅನ್ನೋ ನಿಮಗೆ ಮಾತನಾಡದೇ ಇರುವವರು ರೋಗಿಗಳಾಗಿ ಕಾಣ್ಸಲ್ವಾ ..??"

ಭಾವನಿಯ ಈ ಪ್ರಶ್ನೆ ಮನದಲ್ಲಿ ಮರಳಿ ಮರಳಿ ಸುಳಿಯಾಗಿ ಸುತ್ತುತ್ತಿತ್ತು. ನಿಜ ತಾನೇ, ಒಬ್ಬೊಬ್ಬರೇ ಮಾತನಾಡುವುದು ಸಮಸ್ಯೆ ಅಂತಾದರೆ, ಒಬ್ಬರೊಂದಿಗೂ ಮಾತನಾಡದೇ ಇರುವುದು ಕೂಡ ಸಮಸ್ಯೆಯೇ ಅಲ್ವೇ ..?? ಮನಃಶ್ಯಾಸ್ತ್ರದಲ್ಲಿ ಪುಸ್ತಕಗಳನ್ನು ಓದಿ ಮೂಡುವ ಸಂದೇಹಗಳಿಗಿಂತಲೂ ವ್ಯಕ್ತಿತ್ವಗಳ ವೈಚಿತ್ರ್ಯವನ್ನು ಕಂಡು ಕಾಡುವ ಕುತೂಹಲಗಳೇ ಹೆಚ್ಚು. ಇಂತಹ ಪ್ರಶ್ನೆಗಳಿಗೆ ಉತ್ತರ ಯಾವ ಮಹಾ ವೈಜ್ಞಾನಿಕ ಗ್ರಂಥದಲ್ಲಿಯೂ ಸಿಗಲಾರದು. ಮಸ್ತಕದಲ್ಲಿ ಅನುಭವಗಳು ಬರೆದಿಟ್ಟ ಪುಸ್ತಕಗಳನ್ನು ತಿರುವಿ ಹಾಕಿದರೆ ದೊರಕಬಹುದಷ್ಟೆ.

"ನನಗೆ ಹುಚ್ಚು ಹಿಡಿದಿಲ್ಲ ಆಂಟಿ. ಹೌದು, ನಾನು ಒಬ್ಳೇ ಮಾತಾಡ್ತೀನಿ, ನಗಾಡ್ತೀನಿ, ರೇಗ್ತೀನಿ, ಅಳ್ತೀನಿ. ಆದರೆ ಅದೇನೂ ಖಾಯಿಲೆಯಲ್ಲ. ಒಂಥರಾ ಚಟ ಅಂದ್ಕೊಳಿ. ಹಾಗೆಲ್ಲಾ ಮಾಡೋದ್ರಿಂದ ನಾನು ಆರಾಮಾಗಿ ಇರ್ತೀನಿ. ನನಗೆ ಜಾಸ್ತಿನೇ ಮಾತನಾಡ್ಬೇಕು, ಹೊಟ್ಟೆ ನೋವು ಬರೋವಷ್ಟು ನಗಾಡ್ಬೇಕು. ಕಣ್ಣು ಕೆಂಪಾಗೋವಷ್ಟು ಅಳಬೇಕು, ಮುಖ ಬಿಗಿದುಕೊಳ್ಳೊವಷ್ಟು ಸಿಟ್ಟು ಮಾಡ್ಕೊಬೇಕು. ನೀವ್ ಬೇಕಾದ್ರೆ ಇದನ್ನ ಖಾಯಿಲೆ ಅಂತನ್ನಿ, ಆದರೆ ಹುಚ್ಚು ಅನ್ಬೇಡಿ. ನೀವು ಟ್ರೀಟ್‌ಮೆಂಟ್ ನೀಡಲೇಬೇಕಾದ ಅದೆಷ್ಟೋ ಅಸಲಿ ಹುಚ್ಚರು ಇದಾರೆ. ಅವರಿಗೆ ಹುಚ್ಚರ ಪಟ್ಟ ಕಟ್ಟಿ ಏನ್ ಮಾಡ್ತಿರೋ ಮಾಡ್ಕೊಳಿ. ನನ್ನ ಪಾಡಿಗೆ ನನ್ನನ್ನು ಬಿಟ್ಬಿಡಿ."

ಸ್ವಲ್ಪ ಹಿಸ್ಟರಿಕ್ ಆಗಿಯೇ ಮಾತನಾಡಿದ್ದಳು ಭಾವನಿ. ಅವಳು ಯಾವುದೋ ಖಾಯಿಲೆಯಿಂದ ಬಳಲುತ್ತಿದ್ದಾಳೆ ಎನ್ನುವಂತೇನೂ ಇರಲಿಲ್ಲ. ಬಟ್, ಅವಳ ಬದುಕಿನಲ್ಲಿ ಕೆಲವು ಸಮಸ್ಯೆಗಳಿರುವುದು ನಿಜವೆಂದು ನನಗೆ ಮನವರಿಕೆಯಾಗಿತ್ತು. ಅದೇನೆಂದು ಬಾಯಿ ಬಿಡಿಸಬೇಕೆನ್ನುವಷ್ಟರಲ್ಲಿ ಕೂಗಾಡಿ ಹೊರಟು ಹೋಗಿದ್ದಳು. ಕೀ ತೋರಿಸಿದರೆ ಸಾಕು, ಈ ಆಂಟಿ ತನ್ನ ಮನದ ಬಾಗಿಲನ್ನು ತೆರೆಯುತ್ತಾರೆ ಎಂದು ಅವಳ ಗಮನಕ್ಕೆ ಬಂದಿರಬೇಕು. ಹುಡುಗಿ ಜಾಣೆ.

                                                         ******

ಕಳೆದ ವಾರ ಪದ್ಮಜಾ ಫೋನ್ ಮಾಡಿದ್ದಳು. ನಾವಿಬ್ಬರೂ ಕಾಲೇಜಿನಲ್ಲಿ ಕ್ಲಾಸ್ ಮೇಟ್ಸ್.

"ಮುಂದಿನ ವಾರ ಮಗಳ ಬರ್ತ್ ಡೇ ಫಂಕ್ಷನ್ ಇದೆ. ನೀನು ಮಿಸ್ ಮಾಡದೇ ಬರಬೇಕು ಕುಮುದಾ. ನಾವಿಬ್ಬರೂ ಭೇಟಿಯಾಗಲಿಕ್ಕೆ ಇದೊಂದು ನೆಪ ಅಂತಾನೇ ಅಂದ್ಕೊ. ಬಟ್ ಡೋಂಟ್ ಮಿಸ್ ಹಾ."

ಆ ವೀಕೆಂಡ್ ನನಗೆ ಬೇರೆ ಯಾವ ಘನಂಧಾರಿ ಕೆಲಸಗಳೂ ಇರಲಿಲ್ಲವಾದ್ದರಿಂದ ಬರ್ತ್ ಡೇ ಫಂಕ್ಷನ್ನಿಗೆ ಹೋಗಿದ್ದೆ. ಅಂದೇ ನಾನು ಮೊದಲು ಭಾವನಿಯನ್ನು ನೋಡಿದ್ದು. ೨೪-೨೫ರ  ವಯಸ್ಸು. ಎಂ. ಬಿ. ಎ. ಮುಗಿಸಿ ಕಂಪನಿಯೊಂದರಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕೆಲಸ. ಸಾಧಾರಣ ಸೌಂದರ್ಯ. ಸ್ವಲ್ಪ ಮೈ ತುಂಬಿಕೊಂಡು ದಪ್ಪ ಕಾಣಿಸ್ತಾಳೆ. ಅಂದು ಅವಳನ್ನು ಕಂಡಾಗ ತೀರಾ ಸಿಂಪಲ್ ಹುಡುಗಿ ಎಂಬ ಅಭಿಪ್ರಾಯ ಗಟ್ಟಿಯಾಗಿತ್ತು. ಆದರೆ ನಂತರದಲ್ಲಿ ಅವಳ ಅಮ್ಮ ನನ್ನೊಡನೆ ಹೇಳಿದ ಮಾತುಗಳು ಬೇರೆಯೇ ಆಗಿದ್ದವು.

"ನಮ್ಮ ಭಾವನಿ ಕಳೆದ ಐದಾರು ತಿಂಗಳುಗಳಿಂದ ವಿಚಿತ್ರವಾಗಿ ಆಡ್ತಿದಾಳೆ. ತನ್ನಷ್ಟಕ್ಕೆ ತಾನೇ ನಗಾಡೋದು, ಒಬ್ಬೊಬ್ಳೇ ಮಾತಾಡೋದು. ನಮ್ಮೆದುರಿಗೆ ಸರಿಯಾಗೇ ಇರ್ತಾಳೆ. ನಾವು ಮನೇಲಿ ಇಲ್ಲದಿದ್ದಾಗ ಹೀಗೆಲ್ಲ ಮಾಡ್ತಾಳಂತೆ. ಕೆಲಸದವ್ಳು ಹೇಳದ್ಲು. ಅವ್ಳೇನಾದ್ರೂ ಸುಳ್ಳು ಹೇಳ್ತಿದಾಳಾ ಅಂತ ನಾನೇ ತುಂಬಾ ಸಲ ಅವಳನ್ನ ಗಮನಿಸ್ದೆ. ಕೆಲಸದ ಹೆಂಗ್ಸು ಹೇಳಿದ್ದು ನಿಜಾನೆ."

"ಭಾವನಿ ಹತ್ರಾನೆ ಒಮ್ಮೆ ಈ ಬಗ್ಗೆ ಮಾತಾಡಿ ನೋಡ್ಬೇಕಿತ್ತು."

"ಇನ್ ಡೈರಕ್ಟ್ ಆಗಿ ಕೇಳ್ದೆ. ಅವ್ಳು ಹಾರಿಕೆ ಉತ್ರ ಕೊಟ್ಳು. ನಂಗೆ ಸಣ್ಣಕೆ ಚಿಂತೆ ಹತ್ಕೊಂಡಿದೆ ಕಣೇ. ಇಪ್ಪತ್ತೈದು ವರ್ಷದವ್ಳು ಹೀಗೆಲ್ಲಾ ಆಡ್ತಾಳೆ ಅಂತ ನಾಲ್ಕು ಜನಕ್ಕೆ ಗೊತ್ತಾದ್ರೆ..?? ಇವ್ಳ ಮುಂದಿನ ಜೀವನ ಹೇಗೆ ಸಾಗ್ಬೇಕು ..?? ನಾನು ಯಜಮಾನರ ಹತ್ರಾನೂ ಈ ವಿಷ್ಯ ಹೇಳಿಲ್ಲ. ಏನೂ ಮಾಡೋದಪ್ಪ ಅಂತಾ ಯೋಚಿಸ್ತಾ ಇರೋವಾಗ ನಿನ್ನ ನೆನಪಾಯ್ತು. ನೀನು ಸೈಕಿಯಾಟ್ರಿಸ್ಟ್ ಅಲ್ವಾ ..?? ಅವಳನ್ನ ಹೆಂಗಾದ್ರೂ ಸರಿ ಮಾಡು ಕುಮುದಾ."

ಮೂರ್ನಾಲ್ಕು ದಿನಗಳ ನಂತರ ಅದೊಂದು ಕಾರ್ಯಕ್ರಮಕ್ಕೆ ಭಾವನಿ ಹೊರಟು ನಿಂತಾಗ 'ಕುಮುದಾ ಆಂಟಿಗೂ ಭರತನಾಟ್ಯ ಇಷ್ಟ, ಅವರೊಡನೆ ಹೋಗು' ಎಂದು ಪದ್ಮಜಾ ನನ್ನನ್ನು ಜೊತೆ ಮಾಡಿ ಕಳುಹಿಸಿದ್ದಳು. ಅದರ ಮರುದಿನವೇ ಮತ್ತೊಮ್ಮೆ ಭೇಟಿಯಾಗಿದ್ದ ಭಾವನಿ "ನನ್ನ ಪಾಡಿಗೆ ನನ್ನನ್ನು ಬಿಟ್ಬಿಡಿ" ಎಂದು ಕೂಗಾಡಿ ಹೋಗಿದ್ದು.

                                                          ******

"ನಾನು ಮಾತಾಡ್ತೀನಿ ಅನ್ನೋದನ್ನು ಯಾಕೆ ಅಂತಾ ಕೇಳೋ ಬದ್ಲು ಯಾರ ಜೊತೆ ಅಂತ ಕೇಳಿದ್ರೆ ಚೆನ್ನಾಗಿರ್ತಿತ್ತು."

ಭಾವನಿಯೊಂದಿಗೆ ಇನ್ನೊಮ್ಮೆ ಮಾತನಾಡ್ಬೇಕಲ್ಲ, ಹೇಗೆ ಮಾತನಾಡಿಸೋದು ಎಂದುಕೊಳ್ಳುತ್ತಲೇ ಎರಡು ದಿನ ಕಳೆದಿದ್ದೆ. ನನ್ನನ್ನು ಆಶ್ಚರ್ಯಗೊಳಿಸಲೆಂಬಂತೆ ಅವಳಾಗಿಯೇ ಭೇಟಿಯಾಗಲು ಬಂದಿದ್ದಳು. ತಾನೇ ಮಾತನಾಡಲು ಶುರು ಮಾಡಿದಳು.

"ನನ್ನ ಇಬ್ಬರು ಗೆಳತಿಯರಿದ್ದಾರೆ. ಅವರಿಬ್ಬರೂ ಈಗ ಕಾಲೇಜು ಓದ್ತಿದಾರೆ. ಒಬ್ಬಳು ಬಿ.ಕಾಂ. ಇನ್ನೊಬ್ಬಳು ಬಿ.ಎ. ಪುಣ್ಯವಂತರು ಅವರು. ನನ್ನಂತೆ ಎಂಜಿನಿಯರಿಂಗ್, ಎಂ.ಬಿ.ಎ. ಎಂದು ಓದಿ ಓದಿ ಗುಡ್ಡೆ ಹಾಕುವ ಕರ್ಮವಿಲ್ಲವಲ್ಲ. ಒಬ್ಬಳದು ಈಗಷ್ಟೇ ಜ್ಯೂನಿಯರ್ ಮುಗಿದಿದೆ. ಇನ್ನೊಬ್ಬಳು ಬರುವ ವರ್ಷ ಸೀನಿಯರ್ ಪರೀಕ್ಷೆ ಬರಿತಾಳೆ. ಅವರಿಬ್ಬರೂ ನನ್ನ ಬಳಿ ಆ ದಿನದ ಭರತನಾಟ್ಯ ಕ್ಲಾಸಿನಲ್ಲಿ ಏನೆಲ್ಲಾ ಕಲಿತೆವು ಎಂಬುದಾಗಿ ಮಾತಾಡ್ತಾರೆ. ಅವರಿಗೆ ಏನಾದರೂ ಸಂದೇಹಗಳಿದ್ದರೆ ಕೇಳಿ ಪರಿಹರಿಸಿಕೊಳ್ತಾರೆ. ಅವರ ಭರತನಾಟ್ಯ ಕ್ಲಾಸ್ ಮೇಟ್ಸ್ ಬಗ್ಗೆ ಕಾಮೆಂಟ್ ಮಾಡ್ತಾರೆ, ಜೋಕ್ಸ್ ಮಾಡ್ತಾರೆ. 'ಅವಳಿಗೆ ಹಸ್ತ ಶುದ್ಧಿಯೇ ಬರುವುದಿಲ್ಲ, ಇವಳಿಗೆ ಕಣ್ಣನ್ನು ಅತ್ತ ಇತ್ತ ಮಾಡುವುದು ಹೇಗೆಂದೇ ಗೊತ್ತಿಲ್ಲ, ಆಕೆ ತಲೆಯನ್ನು ಅತಿಯಾಗಿ ಕುಣಿಸುತ್ತಾಳೆ.' ಹೀಗೆಯೇ ಅವರ ಮಾತುಕತೆಗಳು. 'ನೀವು ಎಲ್ಲವನ್ನೂ ಸರಿಯಾಗಿ ಮಾಡ್ತೀರಾ ..??' ಅಂತ ಕೇಳಿದ್ರೆ ಕಿಸಕ್ ಅಂತ ನಕ್ಕು ಬಿಡುತ್ತಾರೆ.

ನನ್ನ ಗುರುಗಳು ಸಹ ನನ್ನನ್ನು ದಿನವೂ ಭೇಟಿಯಾಗ್ತಾರೆ. ಅವರು ಮಾತನ್ನು ಮೊದಲು ಮಾಡುವುದೇ 'ನಿನ್ನಂತಹ ಶಿಷ್ಯೆ ಇನ್ನೊಬ್ಬಳು ಇಂದಿಗೂ ನನಗೆ ದೊರಕಿಲ್ಲ' ಎಂದು. ಗುರುಗಳು ಈಗ ಭರತನಾಟ್ಯದಲ್ಲಿ ಏನೆಲ್ಲಾ ಹೊಸ ಹೊಸ ಎಕ್ಸಪೆರಿಮೆಂಟುಗಳು ನಡೀತಿವೆ, ಮಾಡರ್ನ್ ಮೇನಿಯಾದಲ್ಲೂ ನಮ್ಮ ಕ್ಲಾಸಿಕಲ್ ಡ್ಯಾನ್ಸ್ ಹೇಗೆ ಇಂಪಾರ್ಟಂಟ್ ಆಗಿಯೇ ಇದೆ ಅನ್ನೋದನ್ನೆಲ್ಲ ಹೇಳ್ತಾರೆ. ಮಾತು ಮುಗಿಸುವಾಗ ಎಂದಿನಂತೆ 'ನೀನು ಕಥಕ್ ಕಲಿಯುವ ವಿಷಯ ಎಲ್ಲಿಯ ತನಕ ಬಂತು ..?? ಬೇಗ ಕ್ಲಾಸಿಗೆ ಸೇರಿಕೊ ತಿಳೀತಾ' ಎಂದು ಹೇಳಿ ಟಾಟಾ ಎನ್ನುತ್ತಾರೆ.

ಈ ಮೂವರನ್ನು ಬಿಟ್ರೆ ನಾನು ಬೇರೆ ಯಾರೊಂದಿಗೆ ಮಾತಾಡ್ತೀನಿ ಗೊತ್ತಾ ..?? ನನ್ನ ಪುಟ್ಟ ಪುಟಾಣಿ ಸ್ಟೂಡೆಂಟ್ಸ್ ಜೊತೆ. ಈಗ ಯಾರೊಬ್ಬರೂ ಪುಟಾಣಿಗಳಿಲ್ಲ. ಕೆಲವರೆಲ್ಲ ಹೈಸ್ಕೂಲಿನಲ್ಲಿ ಓದ್ತಿದಾರೆ. ನನಗಂತೂ ಅವರೆಲ್ಲ ಮೊನ್ನೆಯಷ್ಟೇ ನನ್ನ ಕ್ಲಾಸ್ ಸೇರಿದ್ರು ಅನ್ಸತ್ತೆ. ಅವರ ಜೊತೆಗಿದ್ದಷ್ಟು ಹೊತ್ತು ಟೈಮ್ ಹೋಗೋದೇ ಗೊತ್ತಾಗಲ್ಲ. ಆ ಮಕ್ಳದ್ದು ಒಂದೇ ಮಾತು. 'ನೀವು ನೆಕ್ಸ್ಟ್ ಕ್ಲಾಸ್ ಯಾವಾಗ ತಗೋತೀರ ಅಕ್ಕಾ ..?? ಅದೊಂದು ಡ್ಯಾನ್ಸ್ ಅರ್ಧಕ್ಕೇ ನಿಂತು ಹೋಗಿದೆಯಲ್ಲ.' ಛೇ, ನಾನದೆಷ್ಟು ಬ್ಯುಸಿ ಆಗೋಗಿದೀನಿ ನೋಡಿ ಆಂಟಿ. ಅವರಿಗೆ ಕ್ಲಾಸ್ ತಗೊಳ್ಳಕೆ ಟೈಮ್ ಆಗ್ತಾನೇ ಇಲ್ಲ."

                                                                ******

ಅಂದು ಭಾವನಿ ತುಂಬಾ ಹೊತ್ತು ಮಾತನಾಡಿದಳು.

"ಚಿಕ್ಕಂದಿನಿಂದಲೂ ನನ್ನ ಪ್ರಪಂಚ ಕೇವಲ ಭರತನಾಟ್ಯವಾಗಿತ್ತು ಆಂಟಿ. ನನ್ನ ಮಾತು, ನಗು, ಅಳು, ಸಿಟ್ಟು ಎಲ್ಲವೂ ಅದೇ ಆಗಿತ್ತು. ನಾಲ್ಕು ವರ್ಷಗಳ ಹಿಂದಿನವರೆಗೂ ಎಲ್ಲ ಸರಿಯಾಗಿಯೇ ಇತ್ತು. ಐದನೇ ಸೆಮಿಸ್ಟರ್ ಅಲ್ಲಿ ಒಮ್ಮೆ ಇಂಟರ್ನಲ್ ಎಕ್ಸಾಂಗೆ ಮಾರ್ಕ್ಸ್ ಕಡಿಮೆ ಬಿತ್ತು. ಅಮ್ಮ ನನ್ನ ಭರತನಾಟ್ಯದಿಂದಾಗಿಯೇ ಹಾಗಾದದ್ದು ಅಂತ ಬಗೆದ್ರು. ಸಾಕು ಇನ್ಮೇಲಿಂದ ಡ್ಯಾನ್ಸ್ ಗೀನ್ಸ್ ಎಲ್ಲಾನೂ ಅಂತಾ ಬೈದು ನಾನು ಕ್ಲಾಸಿಗೆ ಹೋಗೋದನ್ನು ಬಿಡಿಸಿದ್ರು. ಜ್ಯೂನಿಯರ್ ಮಕ್ಳಿಗೆ ಬೇಸಿಕ್ ಕ್ಲಾಸ್ ಮಾಡೋದನ್ನೂ ಬಿಡಸಿದ್ರು. ಆ ವರ್ಷ ನಾನು ಕಥಕ್ ಕ್ಲಾಸಿಗೆ ಸೇರ್ಕೊಬೇಕು ಅಂತ ಪ್ಲ್ಯಾನ್ ಮಾಡಿದ್ದೆ. ಅದ್ಕೂ ಕಲ್ಲು ಬಿತ್ತು.

ನಾನು ಕ್ಲಾಸಿಗೆ ಹೋಗದೇ ಇದ್ರೂ ಮನೇಲಿ ಪ್ರ್ಯಾಕ್ಟೀಸ್ ಮಾಡಿದ್ರಾಯ್ತು ಅಂತ ಅಂದ್ಕೊಂಡ್ರೆ ಗೆಜ್ಜೆ ಸದ್ದು ಕೇಳಿದ್ರೆ ಅಮ್ಮ ರೇಗಲಿಕ್ಕೆ ಶುರು ಮಾಡಿದ್ರು. "ಕ್ಯಾಂಪಸ್, ಪ್ರೊಜೆಕ್ಟ್ ಅಂತಾ ಕಾನ್ಸಂಟ್ರೇಟ್ ಮಾಡದು ಬಿಟ್ಟು ಏನದು ಗೆಜ್ಜೆ ಕಟ್ಟಿ ಕುಣ್ಯದು..?? ಕೆರಿಯರ್ ಬಗ್ಗೆ ಯೋಚ್ನೆ ಬೇಡ್ವಾ..?" ಅಂತಾ ಬೈದು ಬೈದು ಪ್ರ್ಯಾಕ್ಟೀಸ್ ಮಾಡದನ್ನು ತಪ್ಸಿದ್ರು. ಅವರಿಗೆ ತಾನಂತೂ ಹೆಚ್ಚು ಓದಿಲ್ಲ, ಮಗಳು ತುಂಬಾ ಓದ್ಬೇಕು, ಒಳ್ಳೆ ಮಾರ್ಕ್ಸ್ ತಗೋಬೇಕು, ಸಿಕ್ಕಾಪಟ್ಟೆ ಸ್ಯಾಲರಿ ಇರೋ ಜಾಬ್ ಮಾಡ್ಬೇಕು ಅನ್ನೋ ಆಸೆ. ನಂಗೆ ಭರತನಾಟ್ಯ ಪೂರ್ತಿಯಾಗಿ ಬಿಟ್ಟು ಓದಿನ ಕಡೆ ಮಾತ್ರಾನೆ ಗಮನ ಕೊಡಕೆ ಆಗಲ್ಲ ಅನ್ನೋ ವಾಸ್ತವ ಅಮ್ಮಂಗೆ ಅರ್ಥ ಆಗ್ಲೇ ಇಲ್ಲ. ಸ್ಟಡೀಸ್, ಜಾಬ್ ಅಂತ ನನ್ನ ಮೇಲೆ ಅದೆಷ್ಟು ಪ್ರೆಷರ್, ವರ್ಕ್ ಲೋಡ್ ಬಿತ್ತು ಅಂತಂದ್ರೆ ಡ್ಯಾನ್ಸ್ ಬಗ್ಗೆ ಯೋಚ್ನೆ ಮಾಡಕೂ ಟೈಮ್ ಸಿಗದಷ್ಟು ನಾನು ಬ್ಯುಸಿ ಆದೆ. ಹಾಗೆ ಬ್ಯುಸಿ ಇರೋ ಹಂಗೆ ಅಮ್ಮ ಮಾಡಿದ್ರು.

ಈಗ ಜಾಬ್ ಸಲುವಾಗಿ ಅಮ್ಮ ನನ್ನನ್ನು ಭರತನಾಟ್ಯದಿಂದ ದೂರ ಮಾಡಿದ್ದಲ್ವಾ..?? ಸರಿ, ಜಾಬ್ ಸಿಗೋ ತನಕ ಹೇಗಾದ್ರೂ ಸಹಿಸಿಕೊಂಡ್ರಾಯ್ತು ಅಂತ ನಾನು ಅಷ್ಟೊಂದು ಬೇಸರಿಸದೇ ಅಕಾಡೆಮಿಕ್ಸ್ ಅಲ್ಲಿ ಇನ್ವಾಲ್ವ್ ಆದೆ. ಅಮೇಲೆ ಎಂಜಿನಿಯರಿಂಗ್ ಮುಗೀತು, ನಂತ್ರ ಎಂಬಿಎ ಸಹಾ ಆಯ್ತು, ಒಳ್ಳೆ ಕಂಪನಿಯಲ್ಲಿ ಜಾಬ್ ಸಹಾ ಆಯ್ತು. ಉಫ್, ಇನ್ನಾದ್ರೂ ಗೆಜ್ಜೆ ಕಟ್ಬೋದು ಅಂತ ನಾನಂದ್ಕೊಂಡ್ರೆ ಆಫೀಸ್ ವರ್ಕ್ ಅದಕ್ಕೆ ಅಡ್ಡಿ ಬಂತು. ಅಲ್ಲಿ ಕಂಪ್ಯೂಟರ್ ಮುಂದೆ ಕೂತು ಕೂತು ಆಗೋ ಆಯಾಸದಿಂದ ಡ್ಯಾನ್ಸ್ ಮಾಡಕೆ ಉತ್ಸಾಹ, ಶಕ್ತಿ ಎರಡೂ ಇರ್ತಾ ಇರ್ಲಿಲ್ಲ. ಅಲ್ಲಿಗೆ ನಾನು ಭರತನಾಟ್ಯದ ಪ್ರಪಂಚದಿಂದ ಪೂರ್ತಿಯಾಗಿ ದೂರ ಆಗ್ಬಿಟ್ಟೆ.

ಆ ಪ್ರಪಂಚದಿಂದ ದೂರವಾಗಿ ಬದುಕೋಕೆ ಅದೆಷ್ಟು ವರ್ಷ ಟ್ರೈ ಮಾಡ್ದೆ ನಾನು. ಕಳೆದ ಎರಡು ವರ್ಷಗಳಿಂದ ಮೂರು ದಿನಕ್ಕೊಮ್ಮೆಯಾದರೂ ತಲೆನೋವು, ಹೊಟ್ಟೆನೋವು ಇತ್ಯಾದಿಗಳು ಶುರುವಾದವು. ಕೆಲಸದ ಒತ್ತಡದಿಂದ ಹೀಗಾಗ್ತಿದೆ ಅಂತ ಬಗೆದ ಅಮ್ಮ ಡಾಕ್ಟರ್ ಬಳಿ ಕರೆದೊಯ್ದು ಟ್ರೀಟ್‌ಮೆಂಟ್ ಕೊಡಿಸಿದ್ಳು. ಸದಾ ಕಾಲ ಒಂದಲ್ಲ ಒಂದು ಬಗೆಯ ಸಂಘ, ಕ್ಲಬ್ ಅಂತ ಹೊರಗಡೆ ಓಡಾಡ್ತಾನೆ ಇರೋ ಅಮ್ಮಂಗೆ ಮನೇಲಿ ಮಗಳು ಪಡೋ ಕಷ್ಟ ಹೆಂಗೆ ಕಾಣಿಸ್ಬೇಕು ಹೇಳಿ..?? ಟ್ಯಾಬ್ಲೆಟ್ಸ್ ನುಂಗಿದಂತೆಲ್ಲ ನನ್ನ ಕಷ್ಟಗಳು ಹೆಚ್ಚಾದವೇ ಹೊರತು ಸಮಸ್ಯೆಗಳು ದೂರ ಆಗ್ಲಿಲ್ಲ. ಹಾಗಂತ ಭರತನಾಟ್ಯದ ಪ್ರಪಂಚಕ್ಕೆ ವಾಪಸ್ಸು ಹೋಗಲಿಕ್ಕೂ ಆಗಲ್ಲ. ಸೋ, ಈ ಥರ ಒಂದು ಫಿಕ್ಷನಲ್ ವರ್ಲ್ಡ್ ಕ್ರಿಯೆಟ್ ಮಾಡ್ಕೊಂಡೆ. ಆ ದಿನಗಳನ್ನು, ಆ ಸ್ನೇಹಿತರನ್ನು ಮತ್ತೆ ನನ್ನ ಬದುಕಿನೊಳಗೆ ವೆಲ್ ಕಂ ಮಾಡ್ದೆ. ಗೆಜ್ಜೆ ಕಟ್ಟದಿದ್ದರೇನು, ಹೆಜ್ಜೆಯ ಬಗ್ಗೆ ಮಾತನಾಡಬಹುದು ಎಂದು ಸಮಾಧಾನ ಮಾಡ್ಕೊಂಡೆ. ಅವರೊಡನೆ ಮಾತಾಡ್ದೆ, ಮನಸಾರೆ ನಕ್ಕೆ, ಅತ್ತೆ, ಮುನಿಸು ಮಾಡ್ದೆ. ಈಗ ನೋಡಿ, ತಲೆನೋವು ಇಲ್ಲ ಎಂಥದೂ ಇಲ್ಲ. ಎಷ್ಟು ಆರಾಮಾಗಿ ಇದೀನಿ. ಹೀಗೆ ಇದ್ದು ಹತ್ತಿರ ಹತ್ತಿರ ಒಂದು ವರ್ಷಾನೇ ಆಯ್ತು. ಅಮ್ಮನಿಗೆ ಮಾತ್ರ ನಿನ್ನೆ ಮೊನ್ನೆ ಈ ಬಗ್ಗೆ ಗೊತ್ತಾಗಿದೆ. ಅದ್ಕೆ ಏಕ್ ದಂ ತಲೆನೋವು ಶುರುವಾಗಿದೆ ಅವ್ರಿಗೆ. ಇನ್ ಫ್ಯಾಕ್ಟ್ ನೀವು ಅವರಿಗೆ ಟ್ರೀಟ್ ಮೆಂಟ್ ಕೊಡ್ಬೇಕು."

ನನಗೆ ನನ್ನ ಮಗಳ ನೆನಪಾಗಿತ್ತು.
ಈಗಷ್ಟೇ ಹತ್ತನೆಯ ಕ್ಲಾಸಿಗೆ ಕಾಲಿಟ್ಟಿರುವ ಅವಳಿಗೆ ಇದೊಂದು ವರ್ಷ ಸಂಗೀತ ಕ್ಲಾಸನ್ನು ಬಿಟ್ಟು ಬಿಡು ಎಂದು ದಿನಕ್ಕೆರಡು ಬಾರಿ ನಾನು ಸಲಹೆ ನೀಡುವುದು ಕಣ್ಣೆದುರು ಬಂತು.


Monday, 27 June 2016

ಟೈಮ್ ಪಾಸ್ ನೌ : ಬ್ರೆಕ್ಸಿಟ್ ಬಗ್ಗೆ ನೀವೇನಂತೀರಿ..?? - ೨


ಹಲೋ ಎವರಿವನ್, ಗುಡ್ ಮಾರ್ನಿಂಗ್.
ವೆಲ್ ಕಂ ಟು ಯುವರ್ ಫೇವ್ ಚಾನೆಲ್ 'ಟೈಮ್ ಪಾಸ್ ನೌ', ನಾವು ನಿಮಗೆ ತಿಳಿಸುತ್ತೀವಿ ಸುದ್ದಿಯಲ್ಲದ ಸುದ್ದಿಗಳನ್ನು.
ನಿನ್ನೆ ಇಡೀ ದಿನ ಷೇರ್ ಮಾರ್ಕೆಟಿನದೇ ಸುದ್ದಿ. ಅವರು ಇಷ್ಟು ಕಳೆದುಕೊಂಡರಂತೆ, ಇವರಿಗೆ ಇಷ್ಟು ಲಾಸ್ ಆಯಿತಂತೆ. ಊಪ್ಸ್, ಈ ಬ್ರೆಕ್ಸಿಟಿಂದ ಆಗ್ತಿರೋ ಹಾವಳಿಗಳು ಒಂದಲ್ಲ, ಎರಡಲ್ಲ. ಎಲ್ಲಾ ಓಕೆ, ಬ್ರೆಕ್ಸಿಟ್ ಬೇಕಿತ್ತು ಯಾಕೆ ಅನ್ನೋ ಹಾಗಾಗಿದೆ.

ಎನಿವೇಸ್, 'ಟೈಮ್ ಪಾಸ್ ನೌ' ವಾಹಿನಿಯ ಬ್ರೆಕ್ಸಿಟ್ ಸ್ಪೆಷಲ್ ಪ್ರೋಗ್ರಾಂ 'ಬರ್ನಾಲ್ ವಿತ್ ಗರ್ನಲ್'ನ ಎರಡನೆಯ ಸಂಚಿಕೆ ಇನ್ನೇನು ಪ್ರಸಾರವಾಗಲಿದೆ. ನಮ್ಮ ಗರ್ನಲ್ ಸರ್ ಈಸ್ ಓನ್ ದ ವೇ. ನೀವು ಎಲ್ಲೂ ಹೋಗಬೇಡಿ, ಜಸ್ಟ್ ಸ್ಟೇ ಟ್ಯೂನ್ಡ್ ಒಕೆ.

******

ಗರ್ನಲ್ :
ಗುಡ್ ಮಾರ್ನಿಂಗ್ ಗಾಯ್ಸ್.
ವೆಲ್ ಕಂ ಟು ದ ವೆರಿ ಎಕ್ಸಕ್ಲ್ಯೂಸಿವ್ ಪ್ರೋಗ್ರಾಂ 'ಬರ್ನಾಲ್ ವಿತ್ ಗರ್ನಲ್'. ಇಂದಿನ ವಿಶೇಷ 'ಬ್ರೆಕ್ಸಿಟ್ ಬಗ್ಗೆ ನೀವೇನಂತೀರಿ ..??'. ಈಗಾಗಲೇ ಮೊದಲನೆಯ ಸಂಚಿಕೆಯಲ್ಲಿ ನಾವು ಗಣ್ಯಾತಿಗಣ್ಯರನ್ನು ಈ ಕುರಿತು ಮಾತನಾಡಿಸಿ ಅವರ ಅಭಿಪ್ರಾಯವನ್ನೆಲ್ಲ ಕೇಳಿ ತಿಳಿದಿದ್ದೇವೆ. ಇವತ್ತು ಇನ್ನಷ್ಟು ಮಹಾನುಭಾವರನ್ನು ಮಾತನಾಡಿಸೋಣ.

ನಿನ್ನೆ ನಾರ್ತ್ ಇಂಡಿಯಾ ಮಂದಿಗಳನ್ನ ಮಾತಾಡ್ಸಿ ಸುಸ್ತಾಗಿ ಹೋಯ್ತಪ್ಪ. ಇವತ್ತು ಆ ಕಡೆಯವರ ಸಹವಾಸವೇ ಬೇಡ. ನಾವು ಇವತ್ತು ಸೌತ್ ಕಡೆಗೆ ಹೋಗಣ ಕಣ್ರೀ.

ನಮ್ಮ ಕಿರಿಕ್ ಪಾರ್ಟಿ ಶಿವಸೇನೆಯವರು ಬ್ರೆಕ್ಸಿಟ್ ಬಗ್ಗೆ ಏನ್ ಹೇಳ್ತಾರೆ ಅಂತ ಕೇಳಣ. ಉದ್ಧವ್ ಠಾಕ್ರೆ ಸಾಯೇಬ್ರು ಶಾಂತವಾಗಿ ಮಾತನಾಡ್ಲಪ್ಪ.

ಗ : "ಸುಪ್ರಭಾತ್ ಠಾಕ್ರೆ ಸಾಬ್, ಬ್ರಿಟನ್ ಎಕ್ಸಿಟ್ ಬಗ್ಗೆ ನಿಮ್ಮ ಅಭಿಪ್ರಾಯ ಏನು ..??"

ಠಾಕ್ರೆ : "ನಿಮಗೆಲ್ಲಾ ಬರೇ ವಿದೇಶಿ ಸಂಗತಿಗಳೇ ಸುದ್ದಿ ಆಗತ್ವೆ. ಬ್ರೆಕ್ಸಿಟ್ ಬ್ರೆಕ್ಸಿಟ್ ಅಂತಾ ನಾಲ್ಕು ದಿನದಿಂದ ಒಂದೇ ಸಮನೇ ಹೇಳ್ತಾ ಇದೀರಲ್ಲ, ಇಲ್ಲಿ ಬಿಜೆಪಿ ಜೊತೆಗಿನ ಮೈತ್ರಿಯಿಂದ ಶಿವಸೇನೆ ಎಕ್ಸಿಟ್ ಆಗಿದ್ದು ನಿಮಗೆ ಸುದ್ದಿ ಅಲ್ವಾ ..?? ಮಹಾರಾಷ್ಟ್ರದ ದನಿ ನಮ್ಮ ಶಿವಸೇನೆ. ಅಂಥದ್ದರಲ್ಲಿ ನಮ್ಮನ್ನು ಮೂಲೆಗೆ ಸೇರ್ಸಿ ಆ ಬಿಜೆಪಿಯವರು ತಾವೇ ಆಡಳಿತ ಮಾಡ್ತೀವಿ ಅಂತ ಅಹಂಕಾರ ತೋರಸ್ತಾರಲ್ಲ. ಇವರು ಯುರೋಪಿಯನ್ ಯೂನಿಯನ್ ಗಿಂತ ಬೇರೆ ಏನು ..?? ಮೊದಲು ಇವರನ್ನು ಆಮ್ಚೀ ಮಹಾರಾಷ್ಟ್ರದಿಂದ ಎಕ್ಸಿಟ್ ಮಾಡಿಸ್ಬೇಕು. ಮೂಲ ಮರಾಠಿಗರಿಗೆ ಬೆಲೆಯೇ ಇಲ್ಲದಂಗೆ ಆಗಿದೆ ಈಗಿನ ಪರಿಸ್ಥಿತಿ. ನೀವು ಮಾಧ್ಯಮದವರು ಇದರ ಕುರಿತಾಗಿದೆ ಏನೂ ಮಾತನಾಡಲ್ಲ. ಯಾಕೆ, ನಿಮಗೆ ದೇಶದಲ್ಲಿ ಏನಾಗ್ತಿದೆ ಅನ್ನೋದು ಬೇಡ್ವಾ..? ಬರೇ ಫಾರೀನ್ ಸುದ್ದಿಗಳೇ ಸಾಕಾ..?? ಬ್ರೆಕ್ಸಿಟ್ ಅಂತೆ ಬ್ರೆಕ್ಸಿಟ್."

ಗ : "ಕ್ಷಮಿಸಿ ಸಾಬ್, ಶಿವಸೇನೆಯ ಎಕ್ಸಿಟ್ ಬಗ್ಗೆಯೂ ಪ್ರೋಗ್ರಾಂ ಮಾಡ್ತೀವಿ. ಸಾರಿ ಸಾಬ್ ಸಾರಿ."

ಉಫ್.
ಬೆಳಿಗ್ಗೆ ಬೆಳಿಗ್ಗೆ ಸರಿಯಾಗಿ ಬೈಸ್ಕೊಂಡಿದ್ದಾಯ್ತು. ಬಿಜೆಪಿ ಮೇಲಿನ ಸಿಟ್ಟನ್ನೆಲ್ಲ ನನ್ನ ಮೇಲೆ ಕಾರ್ಕೊಂಡ್ರು ಅನ್ಸತ್ತೆ.
ಇಲ್ಲೆ ಪಕ್ಕ ಕರ್ನಾಟಕಕ್ಕೆ ಹೋಗಿ ಬರಣ. ನಿದ್ರಾಪುತ್ರ ಸಿದ್ರಾಮಣ್ಣನವರನ್ನು ಮಾತಾಡ್ಸಣ.

ಗ : "ಸಿದ್ರಾಮಣ್ಣನವರೇ ನಮಸ್ಕಾರ, ಬ್ರಿಟನ್ ಯುರೋಪಿನಿಂದ ಹೊರ ಹೋಗುವುದರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಸರ್..??"

ಸಿದ್ದು : "ಆಆಆಆಆಆಆ ಹಾಹಾಹಾ. ಅಯ್ಯಯ್ಯಪ್ಪಾ. ಹ್ಞಂ, ಯಾರ್ರೀ ಇದು ಬೆಳಿಗ್ಗೆ ಬೆಳಿಗ್ಗೆ ಕಾಲ್ ಮಾಡಿ ನನ್ನ ನಿದ್ದೆ ಹಾಳ್ ಮಾಡಿದ್ದು...?? ಏನ್ರೀ ನಿಮ್ಮ್ ಪ್ರಾಬ್ಲಂ ..??"

ಗ : "ಅದೇ ಸರ್, ಮೊನ್ನೆ ಬ್ರೆಕ್ಸಿಟ್ ಅಂತಾ ಜನಾದೇಶ ಬಂತಲ್ಲ, ಅದರ ಬಗ್ಗೆ ನೀವು ಏನು ಹೇಳೋದಿಕ್ಕೆ ಇಷ್ಟ ಪಡ್ತೀರಿ ...??"

ಸಿದ್ದು : "ಬ್ರೆಕ್ಸಿಟ್ಟು, ಗಿಕ್ಸುಟ್ಟು. ಏನ್ ಹೇಳೋದ್ರೀ ಇದ್ರ ಬಗ್ಗೆ..?? ನೋಡಿ, ಆ ಮೋದಿ ಬ್ರಿಟನ್ ಗೆ ಹೋದಾಗಾ ಅಲ್ಲಿ ಪ್ರಧಾನಿ ಹೆಂಡ್ರು ಸೀರೆ ಉಟ್ಕೊಂಡು ಸ್ವಾಗತಾ ಮಾಡಿದ್ರು. ನಂಗೆ ಅವಾಗ್ಲೆ ಬ್ರಿಟನ್ ಇಂದ ಆರ್.ಎಸ್.ಎಸ್. ಬಂದಿತ್ತು. ಈ ಚಡ್ಡಿಗಳು ಎಲ್ಲೆಲ್ಲಿ ಕಾಲು ಹಾಕ್ತಾರೋ ಅಲ್ಲೆಲ್ಲಾ ಹಿಂಗೆ ಏನಾರ ಯಡವಟ್ಟು ಆಗೇ ಆಯ್ತದೆ. ಇದೇ ಕಾರಣಕ್ಕೆ ನಾವು ಅವರನ್ನ ಕರ್ನಾಟಕದಲ್ಲಿ ವಿರೋಧ ಪಕ್ಷದಲ್ಲಿ ಕೂರ್ಸಿದೀವಿ. ಅವಾ ಬ್ರಿಟನ್ ಪ್ರಧಾನಿ ಕಾಮೆರಾ ಮ್ಯಾನ್ ಗೆ ಇದೆಲ್ಲಾ ಹೆಂಗೆ ಗೊತ್ತಾಯ್ತದೆ ಬಿಡಿ. ಒಟ್ನಲ್ಲಿ ಈ ಮೋದಿ ದೇಶ ಒಡೆಯೋದು ಮಾತ್ರವಲ್ಲ, ಬ್ರಿಟನ್ ಅವರ ತಲೆಯಲ್ಲಿ ಸಹಾ ಕೋಮು ರಾಜಕಾರಣವನ್ನು ತುಂಬಿ, ಕೊನೆಗೆ ಯುರೋಪನ್ನೇ ಒಡೆದು ಬಿಟ್ಟ. ಇಂಥವರನ್ನ ಈ ದೇಶ ಕಂಡ ಮಹಾನ್ ಪ್ರಧಾನಿ ಅಂತಾರೆ ಜನಾ. ಏನ್ ಹೇಳ್ಬೇಕು ಜನ್ರ ದಡ್ಡತನಕ್ಕೆ..??"

ಗ : ನಿಜ ಸರ್ ನೀವು ಹೇಳೋದು. ಮತ್ತೊಂದು ವಿಷಯ ಸರ್. ಕರ್ನಾಟಕದ ಕಾಂಗ್ರೆಸ್ ಅಲ್ಲಿ ಸಹ ಎಕ್ಸಿಟ್ ಕೂಗು ಕೇಳಿ ಬರ್ತಿದೆಯಂತಲ್ಲ. ಇಲ್ಲಿ ಯಾರು ಸರ್, ಕಾಂಗ್ರೆಸನ್ನ ಒಡಿತಾ ಇರೋದು ..??

ಸಿದ್ದು : ಆಆಆಆಆಆ

ಹೋ ಇವರು ಆಕಳಿಕೆ ತೆಗಿತಾ ಕಾಲ್ ಕಟ್ ಮಾಡಿದ್ರು.
ಇವರ ಮಾತು ಕೇಳಿ ಕೇಳಿ ನನಗೂ ಜೊಂಪು ಹತ್ತತಾ ಇದೆ. ಯಾವ್ದಕ್ಕೂ ನಾನೊಂದು ಕಾಫೀ ಕುಡ್ದು ಬರ್ತೀನಿ. ಟಿಲ್ ದೆನ್ ಹ್ಯಾವ್ ಅ ಶಾರ್ಟ್ ಬ್ರೇಕ್. 'ಬರ್ನಾಲ್ ವಿತ್ ಗರ್ನಲ್' ವಿಲ್ ಬೀ ಬ್ಯಾಕ್ ಸೂನ್.ವೆಲ್ ಕಂ ಬ್ಯಾಕ್ ಟು ಎಕ್ಸಕ್ಲ್ಯೂಸಿವ್ ಪ್ರೋಗ್ರಾಂ 'ಬರ್ನಾಲ್ ವಿತ್ ಗರ್ನಲ್'.
ಇಲ್ಲೆ ಕೆಳಗಡೆಗೆ ತಮಿಳುನಾಡಿನಲ್ಲಿ ನಮ್ಮಲ್ಲಿ ಅಮ್ಮ ಇದಾರೆ. ಅವರೇನಂತಾರೆ ಕೇಳಣ ಬನ್ರಪಾ.

ಗ : "ವಣಕ್ಕಂ ಅಮ್ಮಾ, ಬ್ರೆಕ್ಸಿಟ್ ಬಗ್ಗೆ ನೀವೇನಂತೀರಿ ..??"

ಅಮ್ಮ : "ಯನಕ ಬ್ರೆಕ್ಸಿಟ್ ತೆರಿಯಾದ ತಂಬಿ. ಆನಾ, ಶ್ರೀಲಂಕಾದಲ್ಲಿ ತಮಿಳರಿಗೆ ರೊಂಬ ಕಷ್ಟ ಆಗ್ತಿದೆ. ಅವರು ಕೂಡ ಸಿಂಹಳೀಯರಿಂದ ಎಕ್ಸಿಟ್ ಆಗ್ಬೇಕು ಅಂತಾ ದಶಕಗಳಿಂದ ಹೋರಾಟ ಮಾಡ್ತಿದಾರೆ. ನಮ್ಮ ದೇಶದ ಪ್ರಧಾನಿಗಳು ಯಾರೂ ಈ ಬಗ್ಗೆಯೂ ಗಮನ ಕೊಡ್ತಿಲ್ಲ. ಈ ನಿರ್ಲಕ್ಷ್ಯ ಹೀಗೆ ಮುಂದುವರೆದರೆ ಮುಂದೊಂದು ದಿನ ತಮಿಳುನಾಡಿನವರು ಭಾರತದಿಂದ ಎಕ್ಸಿಟ್ ಆಗ್ಬೇಕು ಅಂತಾ ಹೋರಾಟ ಮಾಡೋ ಪರಿಸ್ಥಿತಿ ಬರತ್ತೆ. ನಾ ಮೋದಿಜೀ ಕೂಡ ಪೇಸರಿಪೆ. ಅವ್ರಿಗೆ ಹಾಗೆಲ್ಲಾ ಏನು ಆಗೋದಕ್ಕೆ ಬಿಡೋದಿಲ್ಲ ಅಂತ ಹೇಳಿದಾರೆ. ವೇಯ್ಟ್ ಪಣ್ಣಿ ಪಾಕಣುಂ."

ಎಲ್ಲಿಯ ಬ್ರಿಟನ್, ಎಲ್ಲಿಯ ಶ್ರೀಲಂಕಾ. ನಾ ಏನೋ ಕೇಳಿದ್ರೆ ಇವರೇನೋ ಹೇಳ್ತಾರೆ.

ದೇಶದಲ್ಲಿ ಇರೋ ದೊಡ್ಡ ಜನಗಳದ್ದು ಮಾತು ಕೇಳಿ ಬೇಜಾರ್ ಬಂತಪಾ. ಏನೇನೋ ಹೇಳ್ತಾರೆ, ಥತ್. ಹೇಯ್, ಹೌ ಎಬೌಟ್ ವಿಜಯ ಮಲ್ಯ..?? ಅವರು ಲಂಡನ್ ಅಲ್ಲೇ ಇದಾರೆ. ಬ್ರೆಕ್ಸಿಟ್ ಬಗ್ಗೆ ಅವರಿಗಿಂತ ಚೆನ್ನಾಗಿ ಬೇರೆ ಯಾರು ತಾನೇ ಹೇಳ್ತಾರೆ..?? ನಡೀರಿ, ಮದ್ಯದ ದೊರೆ, ಸಾಲದ ಹೊರೆ ವನ್ ಆ್ಯಂಡ್ ಓನ್ಲೀ ಮಲ್ಯರನ್ನ ಮಾತನಾಡಿಸಣ.

ಗ : "ಮಲ್ಯ ಸರ್, ವಾಟ್ ಡು ಯು ಸೇ ಎಬೌಟ್ ಬ್ರೆಕ್ಸಿಟ್ ..?? ಆಲ್ಸೋ ನೀವೀಗ ಲಂಡನ್ ಅಲ್ಲೇ ವಾಸವಾಗಿದ್ದೀರಿ. ವಾಟ್ ಎಕ್ಸಾಟ್ಲೀ ಈಸ್ ದ ಸಿಚುಯೇಷನ್ ದೇರ್ ..??"

ಮಲ್ಯ : "ಕಮಾನ್ ಮ್ಯಾನ್, ಬ್ರೆಕ್ಸಿಟ್ ಆದ್ರೇನು ಬ್ರೆಮೇನ್ ಆದ್ರೇನು..?? ನಥಿಂಗ್ ಬೊದರ್ಸ್ ಮಲ್ಯ ಯು ನೋ. ಕೋಟಿಗಟ್ಟಲೆ ಸಾಲ ಮಾಡಿದ್ರ ಬಗ್ಗೆಯೇ ತಲೆಕೆಡ್ಸಿಕೊಳ್ದೇ ಇಂಡಿಯಾದಿಂದ ಎಸ್ಕೇಪ್ ಆಗಿದೀನಿ. ಹೂ ಕೇರ್ಸ್ ಎಬೌಟ್ ಬ್ರೆಕ್ಸಿಟ್..?? ಸಾರಿ ಮ್ಯಾನ್, ಕೆರ್ರಿಬಿಯನ್ ಪ್ರೀಮಿಯರ್ ಲೀಗ್ ಇದೆ. ಬೈ ಬೈ."

(ತೆರೆಯ ಮೇಲೆ ಕಿಂಗ್ ಫಿಶರ್ ಜಾಹೀರಾತು ಪ್ರಸಾರವಾಗತೊಡಗಿತು.)


Saturday, 25 June 2016

ಟೈಮ್ ಪಾಸ್ ನೌ: ಬ್ರೆಕ್ಸಿಟ್ ಬಗ್ಗೆ ನೀವೇನಂತೀರಿ..?? - ೧ಬ್ರೆಕ್ಸಿಟ್ ಬ್ರೆಕ್ಸಿಟ್ ಬ್ರೆಕ್ಸಿಟ್

ಈ ಪದದ ಅರ್ಥ ಗೊತ್ತಿಲ್ಲದವರೂ ಮೊನ್ನೆಯಿಂದ ಇದರ ಕುರಿತೇ ಮಾತನಾಡುತ್ತಿದ್ದಾರೆ. ಕೆಲವರು ಬ್ರೆಕ್ಸಿಟ್ ಅನ್ನುವ ಬದಲಾಗಿ ಬಿಸ್ಕಿಟ್ ಎಂದು ನಾಲಿಗೆ ಕಚ್ಚಿಕೊಂಡಿದ್ದಾರಂತೆ. ಹೋಗಲಿ ಬಿಡಿ, ಅವರವರ ನಾಲಿಗೆಯಷ್ಟೆ. "ಬ್ರಿಟನ್ ಯಾವುದ್ರಿಂದನೋ ಹೊರಗೆ ಬಂತಂತೆ. ಅದ್ಕೆ ರೂಪಾಯಿ ಬೆಲೆ ಕುಸಿತಂತೆ. ಅದೇನೋ ಶೇರ್ ಮಾರ್ಕೆಟ್ ಪೂರಾ ಮಗುಚಿ ಬೀಳ್ತಾ ಇದೆಯಂತೆ. ಏನು ಕತೆಯೋ ಏನೋ." - ದಿಸ್ ಇಸ್ ದ ಜನರಲ್ ಪಬ್ಲಿಕ್ ಟಾಕ್ ಓವರ್ ಬ್ರೆಕ್ಸಿಟ್.

ಸಾಮಾನ್ಯರ ಮಾತುಕತೆಗಳು ಹೀಗಾದರೆ ನಮ್ಮ ದೇಶದ ಮಹಾನುಭಾವರುಗಳು ಬ್ರೆಕ್ಸಿಟ್ ಕುರಿತಾಗಿ ಏನೆಲ್ಲಾ ಟೀಕೆ ಟಿಪ್ಪಣಿ ಮಾಡಿರಬಹುದು ...?? ಇದೇ ಇವತ್ತಿನ 'ಟೈಮ್ ಪಾಸ್ ನೌ' ವಿಶೇಷ. ನಮ್ಮ ವಾಹಿನಿಯ ಖ್ಯಾತ ನಿರೂಪಕರಾದ ಗರ್ನಲ್ ಬಾಯ್ ಸ್ವಾಮಿ ಅವರು ಈ 'ಬರ್ನಾಲ್ ವಿತ್ ಗರ್ನಲ್' ಪ್ರೋಗ್ರಾಮ್ ಅನ್ನು ನಡೆಸಿಕೊಡಲಿದ್ದಾರೆ. ಇನ್ನೇನು ಕಾರ್ಯಕ್ರಮ ಶುರುವಾಗಲಿದೆ. ಅಲ್ಲಿಯವರೆಗೆ ಪುಟ್ಟದೊಂದು ವಿರಾಮ.

******

ಗರ್ನಲ್-
ವೆಲ್ ಕಂ ಟು ದ ವೆರಿ ಸ್ಪೆಷಲ್ ಪ್ರೋಗ್ರಾಂ, 'ಬರ್ನಾಲ್ ವಿತ್ ಗರ್ನಲ್'.
ಬ್ರೆಕ್ಸಿಟ್ ಬಗ್ಗೆ ದೊಡ್ಡ ದೊಡ್ಡವರೆಲ್ಲಾ ಏನಂತ ಹೇಳ್ತಾರೆ ನೋಡಣ.
ಸದ್ಯಕ್ಕೆ ಇಂಡಿಯಾದಲ್ಲಿ ಹಾಟ್ ಬೀಟ್ ಆಗಿರೋದು ಸ್ವಾಮಿ ಅವರು. ನೋ ನೋ, ಯಾವ್ದೇ ಮಠದ ಸ್ವಾಮಿ ಅಲ್ಲಾರೀ. ಅದೇ ನಮ್ಮ ಸುಬ್ಬು ಸ್ವಾಮಿಯವರು. ಮೊತ್ತ ಮೊದಲನೆಯದಾಗಿ ಈ ಹಾರ್ವರ್ಡ್ ಪಂಡಿತರನ್ನೇ ಮಾತನಾಡ್ಸಿಬಿಡಣ. ನೌ ಆ ಯ್ಯಾಮ್ ಕಾಲಿಂಗ್ ಸುಬ್ಬು ಸ್ವಾಮಿ. ಇಟ್ಸ್ ರಿಂಗಿಂಗ್ ಯಾರ್.

ಗ: "ಹಲೋ ಸರ್, ನಿನ್ನೆಯ ಬ್ರೆಕ್ಸಿಟ್ ವಿಷಯವಾಗಿ ನೀವೇನು ಹೇಳ್ತೀರಿ ..??"

ಸ್ವಾಮಿ : "ವಾಟ್ ಈಸ್ ದಿಸ್ ನಾನ್ ಸೆನ್ಸ್ ಐ ಸೇ. ನಿಮಗೆಲ್ಲಾ ನಿನ್ನೆ ತಾನೇ ಬ್ರೆಕ್ಸಿಟ್ ಪದದ ಪರಿಚಯವಾಗಿದ್ದು. ನನಗೆ ಹೀಗಾಗತ್ತೆ ಅಂತ ಮೊದಲೇ ಗೊತ್ತಿತ್ತು. ಅದ್ಕೆ ರಾಜನರನ್ನು ಸೆಕೆಂಡ್ ಟರ್ಮಿಗೆ ಗವರ್ನರ್ ಮಾಡ್ಬೇಡಿ ಅಂತಾ ಶಂಖ ಹೊಡ್ಕೊಂಡಿದ್ದು. ಆ ಅಮೆರಿಕನ್ ಮನ್ಷನ್ನ ಈ ಮೊದಲೇ ಕೆಳಗಿಳಿಸಿದ್ರೆ ನಮ್ಮ್ ಶೇರ್ ಮಾರ್ಕೆಟ್ ಇಷ್ಟೆಲ್ಲಾ ಬೀಳ್ತಾನೇ ಇರ್ಲಿಲ್ಲಾ ಯು ನೋ..?? ಈಗ ಈ ಹೊಡೆತಾನ ತಡ್ಕೊಬೇಕು ಅಂತಂದ್ರೆ ಆದಷ್ಟು ಬೇಗ್ನೆ ಈ ಅರವಿಂದ್ ಸುಬ್ರಮಣಿಯನ್, ಶಕ್ತಿಕಾಂತ್ ದಾಸ್ ಅವ್ರನ್ನೆಲ್ಲಾ ಮನೆಗೆ ಕಳಿಸ್ಬೇಕು. ಬ್ರೆಕ್ಸಿಟ್ ವಿಷಯದಲ್ಲಿ ಭಾರತದ ಸ್ಟ್ಯಾಂಡ್ ಹೆಂಗಿರ್ಬೇಕು ಅಂತ ಐ ನೋ ವೆರಿ ವೆಲ್."

ಗ: "ಯು ಆರ್ ಸೋ ಗ್ರೇಟ್ ಸರ್. ಬಟ್ ಸ್ವಾಮಿಯವರೇ, ಅವರನೆಲ್ಲಾ ಮನೆಗೆ ಕಳಿಸ್ಬೇಕು ಅಂತಾದ್ರೆ ಆ ಜಾಗದಲ್ಲಿ ಬೇರೆ ಇನ್ಯಾರನ್ನು ಕೂರಿಸ್ಬೇಕು ..??"
.
.
.
.
ಹಲೋ ಹಲೋ. ಹಿ ಕಟ್ ದ ಕಾಲ್. ಓಹ್ ಗಾಡ್.
ಹೋಗ್ಲಿ ಬಿಡಿ, ಬ್ಯುಸಿ ಇರ್ಬೇಕು ಸಾಯೇಬ್ರು.
ನೆಕ್ಸ್ಟ್ ಯಾರಿಗೆ ಕಾಲ್ ಮಾಡಣ ...?? ನಮ್ಮ್ ಆಮ್ ಆದ್ಮಿ ಸಿಯೆಮ್ಮು ಅವ್ರೇನಂತಾರೆ ಕೇಳನ ನಡಿರಿ.
.
.
.
.
ಇವರ್ಯಾಕೋ ಕಾಲ್ ಎತ್ತತಾನೇ ಇಲ್ಲ. ಮಳೆಗಾಲ ಬಂದಿದ್ದಕ್ಕೆ ಮತ್ತೆ ಕಫ್ ಪ್ರಾಬ್ಲಂ ಆಗಿ ಮಫ್ಲರ್ ಕಟ್ಕೊಂಡು ಕೂತಿದಾರೋ ಏನೋ. ನೋ ಪ್ರಾಬ್ಲಂ, ವಿ ವಿಲ್ ಟ್ವೀಟ್ ಹಿಮ್.

ಗ: "@ArvindKejriwal Hello Sir, this is Garnal from the channel 'Timepass Now'. What is your opinion about Brexit..??"

Kejri : "@GarnalSwami Is that a new movie.? When did that hit they screens.? I haven't yet watched. I will soon get back to you on this."

ಗ: "@ArvindKejriwal No sir, I am talking about Britain's edit from the European Union."
.
.
.
.
.
.
.
ಇದೇನ್ರೀ ಇದು ..?? ಐದು ನಿಮ್ಷ ಕಳದ್ರೂ ಕೇಜ್ರಿ ಸರ್ ರಿಪ್ಲೈ ಮಾಡಿಲ್ವಲ್ಲಾ. ಪುಣ್ಯಾತ್ಮ ಸಿನೆಮಾ ಅಂದ್ಕೊಂಡು ಮಲ್ಟಿಪ್ಲೆಕ್ಸ್ ಕಡೆಗೆ ಹೊರಟು ಹೋದ್ನಾ ಏನ್ ಕತೆ ..?? ಬಿಡಿ, ಆತ ಆರಾಮಾಗಿ ರಿಪ್ಲೈ ಮಾಡ್ಲಿ. ಅಷ್ಟ್ರಲ್ಲಿ ನಾವು ದೇಶದ ಸಮಸ್ತ ಯುವಜನತೆಯ ಆಶಾಕಿರಣ, ೪೬ರ ಯುವಕ ರಾಹುಲ್ ಗಾಂಧಿಯವರನ್ನ ಮಾತಾಡ್ಸಣ. ಈಗೊಂದು ಇಂಟರ್ ನ್ಯಾಷನಲ್ ಕಾಲ್ ಮಾಡೇಬಿಡಣ.
.
.
.
.
.
.
.
ರಾಗಾ : "ಗುಡ್ ನೈಟ್, ಹೂ ಈಸ್ ದಿಸ್ ..??"

ಗ : (ಗುಡ್ ನೈಟಾ ..?? ಕರ್ಮಕಾಂಡ.) "ಸರ್ ನಾನು ಗರ್ನಲ್ ಮಾತಾಡ್ತಾ ಇರೋದು ಟೈಮ್ ಪಾಸ್ ನೌ ಇಂದ. ನಿನ್ನೆ ಬ್ರಿಟನ್ ಯುರೋಪಿಯನ್ ಒಕ್ಕೂಟದಿಂದ ಹೊರ ಬರುವ ನಿರ್ಧಾರ ಮಾಡಿದೆಯಲ್ಲ. ಇದರ ಬಗ್ಗೆ ನೀವೇನು ಹೇಳೋದಕ್ಕೆ ಇಷ್ಟಾ ಪಡ್ತೀರಿ ..??"

ರಾಗಾ : "ವಾಟ್, ಬ್ರಿಟನ್ ಯುರೋಪಿನ ಒಳಗಡೆ ಇತ್ತಾ ..?? ಯಾವಾಗ ಯಾಕೆ ಒಳಗಡೆ ಹೋಗಿತ್ತು ..?? ನಂಗೆ ವಿಷ್ಯಾನೇ ಗೊತ್ತಿಲ್ಲ. ಅದೇನಂದ್ರೆ, ನಿನ್ನೆ ಇಡೀ ದಿನ ಛೋಟಾ ಭೀಮ್ ನೋಡ್ತಿದ್ದೆ ಕಣ್ರೀ. ಇರಿ, ನಮ್ಮ ಮಮ್ಮಿನ ಕೇಳ್ಬುಟ್ಟು ನಾನೇ ಆಮೇಲೆ ನಿಮಗೆ ಕಾಲ್ ಮಾಡ್ತೀನಿ. ಠೀಕ್ ಹೈ ನ ಜೀ. ಬಾಯ್."

ಇವ ಯಾವನ್ರೀ ಇವ..?? ಹೊರಗಡೆ ಬಂದಿದ್ದರ ವಿಷ್ಯ ಕೇಳಿದ್ರೆ ಒಳಗಡೆ ಯಾವಾಗ ಹೋಗಿತ್ತು ಅಂತಾನಲ್ಲ. ಕರ್ಮ ಕರ್ಮ. ನಂಗೆ ತಲೆನೋವು ಸ್ಟಾರ್ಟ್ ಆಯ್ತು. ಯಾವ್ದಕ್ಕೂ ಒಂದು ಕಪ್ ಕಾಫೀ ಕುಡ್ದು ಬರ್ತೀನಿ. ಅಲ್ಲಿಯವರೆಗೆ ಟೇಕ್ ಅ ಸ್ಮಾಲ್ ಬ್ರೇಕ್. 'ಬರ್ನಾಲ್ ವಿತ್ ಗರ್ನಲ್' ವಿಲ್ ಬಿ ಬ್ಯಾಕ್ ಸೂನ್.


ವೆಲ್ ಕಂ ಬ್ಯಾಕ್ ಟು ದ ವೆರಿ ಸ್ಪೆಷಲ್ ಪ್ರೋಗ್ರಾಂ 'ಬರ್ನಾಲ್ ವಿತ್ ಗರ್ನಲ್.'

ನೆಕ್ಸ್ಟ್ ಯಾರ ಅಭಿಪ್ರಾಯ ಕೇಳಣ...?? ನಡೀರಿ, ಇತ್ತ ಬಿಹಾರ್ ಕಡೆ ಹೋಗಣ. ನಿತೀಶ್ ಸರ್ ಮಾತನಾಡಿಸ್ದೇ ತುಂಬ ದಿನಗಳಾಯ್ತು. ನಂಬರ್ ಇದೆ ಅಂದ್ಕೋತೀನಿ.

ಗ: "ಹಲೋ ನಿತೀಶ್ ಸರ್, ಹೇಗಿದ್ದೀರಿ ..?? ನಿನ್ನೆಯ ಬ್ರೆಕ್ಸಿಟ್ ವಿದ್ಯಮಾನದ ಕುರಿತಾಗಿ ನಿಮ್ಮ ಅಭಿಪ್ರಾಯ ಹೇಳ್ತೀರಾ ಸರ್..??"

ನಿತೀಶ್ : "ಅಯ್ಯೋ ಬಿಡ್ರಿ, ಬ್ರಿಟನ್ ಗೆ ಈಗ ಬ್ರೆಕ್ಸಿಟ್. ನಾವು ಮೂರು ವರ್ಷಗಳ ಹಿಂದೆನೇ ಬಿಜೆಪಿಯಿಂದ ಎಕ್ಸಿಟ್ ಆಗ್ಲಿಲ್ವಾ..?? ಈ ಎನ್.ಡಿ.ಎ. ಕೂಡಾ ಯುರೋಪಿಯನ್ ಯೂನಿಯನ್ ಥರಾನೇ. ತಾನು ಹೇಳಿದ್ದೇ ನಡೀಬೇಕು, ತನಗೆ ಬೇಕಾದವ್ರೇ ಕೂರ್ಬೇಕು. ನಾವು ಕೂಡಾ ಬ್ರಿಟನ್ ಹಾಗೆ ಯೋಚ್ನೆ ಮಾಡಿದ ಸಾಕಪ್ಪ ಇವರ ಸಹವಾಸ ಅಂತಾ ಹೊರ್ಗಡೆ ಬಂದಿದ್ದು. ನಾವು ಹೊರ್ಗಡೆ ಬಂದ್ಮೇಲಾದ್ರೂ ಅವರು ಸುಮ್ಮನಾದ್ರಾ ..?? ಕಳೆದ ಎಲೆಕ್ಷನ್‌ನಲ್ಲಿ ಬಿಹಾರಕ್ಕೆ ಬಂದು ನಮ್ಮನ್ನೇ ಇಲ್ಲಿಂದ ಹೊರ್ಗಡೆ ಹಾಕಕೆ ನೋಡಿದಾ ಅಂವಾ ಮೋದಿ. ನಮ್ಮ ಜನ ಸರಿಯಾಗಿ ಪಾಠ ಕಲ್ಸಿದ್ರು ಅವಂಗೆ. ಈಗ ನೋಡಿ, ಬಿಹಾರ್ ಬಗ್ಗೆ ಒಂದೂ ಮಾತಾಡಲ್ಲ ಅಂವಾ. ಮೈ ಕ್ಯಾ ಬೋಲ್ತಾ ಹೈ, ಬ್ರಿಟನ್ ಕೂಡ ಯುರೋಪಿಗೆ ಇದೇ ಥರಾ ಪಾಠ ಕಲಿಸ್ಬೇಕು."

ಗ: "ಲೇಕಿನ್ ಸರ್, ಬ್ರಿಟನ್ ಗೆ ಈಗ ಬಹಳ ತೊಂದರೆಯಾಗಿದೆಯಂತಲ್ಲ. ಬಿಹಾರದಲ್ಲೂ ಜನರ ಸ್ಥಿತಿ, ಗತಿ ಸಾಕಷ್ಟು ಕೆಟ್ಟಿದೆಯಂತೆ. ಹೌದಾ ಸರ್..??"

ಕೀ ಕೀ ಕೀ.

ಇವರೂ ಫೋನ್ ಕಟ್ ಮಾಡಿದ್ರಾ ..?? ಥತ್. ಶ್ರೀಸಾಮಾನ್ಯ ಕೇಜ್ರಿಯವರು ಇನ್ನೂ ರಿಪ್ಲೈ ಮಾಡಿಲ್ಲಪಾ. ಎಲ್ಲಿ ನಾಪತ್ತೆ ಆದ್ರೋ ಏನೋ. ಈಗ ಯಾರಿಗೆ ಫೋನ್ ಮಾಡಣ ..?? ಇಲ್ಲೇ ಪಕ್ಕ ಬಂಗಾಳದಲ್ಲಿ ನಮ್ಮ ದೀದಿ ಇದಾರಲ್ಲ.

ಗ: "ನಮಷ್ಕಾರ್ ಬೆಹೆನ್ ಜೀ, ಬ್ರೆಕ್ಸಿಟ್ ಬಗ್ಗೆ ನೀವೇನಂತೀರಿ ..??"

ದೀದಿ: "ಸರ್, ನಾನು ಮಮತಾ ಅವರ ಸೆಕ್ರೆಟರಿ ಮಾತಾಡ್ತಾ ಇದೀನಿ. ಮೇಡಂ ಬ್ಯುಸಿ ಇದಾರೆ. ಅದೇ ನಮ್ಮ ಕ್ವಿಜ್ ಚಾಂಪಿಯನ್ ನೀಲ್ ಸಾಹೇಬ್ರು ತೀರ್ಕೊಂಡ್ರಲ್ಲ. ಅವರ ಮನೆಯವರನ್ನ ಮೀಟ್ ಆಗಿ ಧೈರ್ಯ. ಹೇಳಕೆ ಬಂದಿದಾರೆ. ಇನ್ನೆರಡು ದಿನ ಬಿಟ್ಟು ಕಾಲ್ ಮಾಡ್ತೀರಾ ಪ್ಲೀಸ್."

ಎರಡು ನಿಮಿಷಗಳ ಮೌನ. ಇನ್ನೆರಡು ದಿನಗಳ ನಂತ್ರ ಕಾಲ್ ಮಾಡಿ ಏನಂತ ಕೇಳದು. ಮೊಬೈಲ್ ವೈಬ್ರೇಟ್ ಆಗ್ತಿದೆ.

ಓಹ್ ನಮ್ಮ ಕ್ರೇಜಿ ರಿಪ್ಲೈ ಮಾಡಿದಾರ್ರೀ. ಏನಂತ ಮಾಡಿದರಪಾ ..??

Kreji: "@GarnalSwami I appreciate UK's decision to leave EU. Aam Aadmi Party is thinking about about having a referendum for Delhi Exit if centre doesn't provide us the full statehood. (1/2)"

Kreji: "@GarnalSwami If they doesn't give full statehood to Delhi, Modi ji should resign. Modi Exit is the only solution to the development of Aam Bharath. (2/2)"ನಂಗೆ ತಲೆನೋವು ಜಾಸ್ತಿ ಆಗ್ತಿದೆ ಕಣ್ರೀ. ಇನ್ನು ಮತ್ಯಾರನ್ನೂ ಮಾತಾಡ್ಸಕಾಗಲ್ಲ. ಡೋಂಟ್ ಬೀ ಡಿಸ್ ಅಪಾಯಿಂಟೆಡ್. ನಾಳೆಯ ಎಪಿಸೋಡ್ ನಲ್ಲಿ ಇನ್ನಷ್ಟು ಜನರನ್ನು ಮಾತನಾಡಿಸೋಣ.

ಸೋ, ಇವತ್ತಿನ 'ಬರ್ನಾಲ್ ವಿತ್ ಗರ್ನಲ್' ಇಲ್ಲಿಗೆ ಮುಕ್ತಾಯವಾಗ್ತಿದೆ. ನಾಳೆಯ ಸಂಚಿಕೆಯಲ್ಲಿ ಮತ್ತೆ ಭೇಟಿಯಾಗೋಣ.
ಟಿಲ್ ದೆನ್ ನೋಡ್ತಾ ಇರಿ, ಟೈಮ್ ಪಾಸ್ ನೌ. ಗುಡ್ ನೈಟ್, ಸ್ಲೀಪ್ ಟೈಟ್.

Friday, 24 June 2016

ಇರುವೆಯ ಕಷ್ಟ....."ಹುಟ್ಟಿದ್ರೆ ಶ್ರೀಮಂತರಾಗಿಯೇ ಹುಟ್ಬೇಕು. ಅಪ್ಪಿ ತಪ್ಪಿ ಬಡ ಕುಟುಂಬದಲ್ಲಿ ಹುಟ್ಬಾರ್ದು."

ಬೇರೆ ಯಾವ ಹೊತ್ತಿಗೆ ಹೀಗನಿಸದಿದ್ದರೂ ಓದಿನ ವಿಷಯದಲ್ಲಿ ಯೋಚನೆ, ಚಿಂತನೆ ಬಂದಾಗಲೆಲ್ಲ ಹೀಗೆಯೇ ಅನಿಸಿ ನಿಟ್ಟುಸಿರು ಬಿಡುವಂತಾಗುತ್ತದೆ. ಬಂಗಲೆ ಬೇಡ, ಕಾರು ಬೇಡ, ರೇಶಿಮೆ ಬೇಡ, ಮೃಷ್ಟಾನ್ನವೂ ಬೇಡ. ಹಸಿವಾದಾಗ ತುತ್ತು ಅನ್ನ-ಸಾರು, ಮಲಗಲು ಒಂದು ಕೋಣೆ, ಮೈ ಮುಚ್ಚಲು ಹರಕು ಮುರುಕಲ್ಲದ ಬಟ್ಟೆ, ಓದಲು ಪುಸ್ತಕಗಳು - ಇಷ್ಟೇ ಸಾಕು. ಊಹ್ಞೂಂ, ಇವುಗಳೂ ಕೂಡ ನಮ್ಮಂಥವರ ಕೈಗೆ ಎಟುಕಲಾರವು. ಬಟ್ಟೆ ದೊರಕಿದರೆ ತಟ್ಟೆ ಖಾಲಿ ಉಳಿಯುವಂತಾಗುತ್ತದೆ.

ದೇವರು ನಿಜಕ್ಕೂ ಇರುವುದು ಹೌದೇ ಅಂತ ಅನಿಸದಿರುವುದು ಹೇಗೆ ..??

"ಸಾಕು ಮಗಾ ಓದಿದ್ದು, ಇನ್ನೂ ಓದಿ ಓದಿ ಏನ್ ಸಾಧನೆ ಮಾಡ್ಬೇಕಾಗಿದೆ ನೀನು..?? ನಿನ್ನನ್ನು ಕಷ್ಟಪಟ್ಟು ಓದ್ಸಿದ್ದು ನೀನು ನೌಕರಿ ಮಾಡ್ಲಿ ಅಂತ ಅಲ್ವೆನೋ ..?? ಇನ್ನೂ ಓದ್ತೀನಿ ಅಂತೀಯಲ್ಲ, ಅದಕೆ ದುಡ್ಡೆಲ್ಲಿಂದಾ ತರೋದು ..?? ಇದೆಲ್ಲಾ ತಾಪತ್ರಯಗಳು ಬೇಕಾ..?? ಹೇಗಿದ್ರೂ ನಿಂಗೆ ಬ್ಯಾಂಕ್ ಅಲ್ಲಿ ನೌಕರಿ ಸಿಗತ್ತೆ. ಅದನ್ನ ಮಾಡ್ಕೊಂಡು ಆರಾಮಾಗಿ ಇರಬಾರ್ದಾ ..??"

ಪಾಪ, ಅಪ್ಪ-ಅಮ್ಮ ಹೀಗಲ್ಲದೇ ಬೇರೆ ಏನು ಹೇಳಿಯಾರು..? ಅವರಿಗೆ ಹೊಟ್ಟೆಯ ಹಸಿವಿನ ಬಗ್ಗೆ ಮಾತ್ರವೇ ಗೊತ್ತು. ನನ್ನ ತಲೆ ಹೊಟ್ಟೆಗಿಂತಲೂ ಹೆಚ್ಚು ಹಸಿದು ಬಸಿಯುವುದು ಅವರಿಗೆ ಅರ್ಥವಾಗುವುದಿಲ್ಲ. ಸರಸ್ವತಿ ಮತ್ತು ಲಕ್ಷ್ಮೀ ಇಬ್ಬರೂ ಇದ್ದರೆ ಇವೆಲ್ಲಾ ಸಮಸ್ಯೆಗಳೇ ಇರುವುದಿಲ್ಲ. ಎಷ್ಟಾದರೂ ಪಡೆದುಕೊಂಡು ಬಂದಿರಬೇಕು ಎನ್ನುವ ಮಾತು ಸುಳ್ಳಲ್ಲ.

ಈಗೇನು ಮಾಡುವುದು ..?? ಬ್ಯಾಂಕ್ ಸೇರುವುದಾ..?? ಅಥವಾ ಎಂ.ಬಿ.ಎ.ಗೆ ಸೇರಲಾ ..?? ಥತ್, ಏನೊಂದೂ ಬಗೆ ಹರಿಯುತ್ತಿಲ್ಲ. ಒಮ್ಮೆ ಕನ್ನಡ ಸರ್ ಭೇಟಿಯಾಗಿ ಬರುವುದು ಒಳಿತು. ಇಂತಹ ಗೊಂದಲವನ್ನು ಬಗೆಹರಿಸಿಕೊಳ್ಳಲು ಅವರ ಸಹಾಯ ಕೇಳುವುದೇ ಸೈ. ಈಗ ನೆನಪಾಯ್ತು, ಲೈಬ್ರರಿಯ ಪುಸ್ತಕಗಳನ್ನೂ ವಾಪಸ್ಸು ಮಾಡಿಲ್ಲ ನಾನು. ಕಾಲೇಜಿಗೆ ಹೋಗಿ ಬರೋಣ. ಮನೆಯಲ್ಲಿ ಕೂತು ಕೂತು ತಲೆ ಇನ್ನಷ್ಟು ಮಂಕಾಗಿದೆ.

                                                          ******

"ಸರಸ್ವತೀ ಮತ್ತು ಲಕ್ಷ್ಮೀ ಇಬ್ಬರೂ ಒಟ್ಟಿಗೆ ಇರ್ಬಾರ್ದು. ಒಂದೋ ಆಕೆಯಿರಬೇಕು, ಇಲ್ಲಾ ಈಕೆಯಿರಬೇಕು."

"ಅಲ್ಲಾ ನೀನ್ಯಾಕೆ ವಿದೇಶಕ್ಕೆಲ್ಲ ಹೋಗಿ ಓದ್ಬೇಕು ..?? ಏನ್ ಕಡಿಮೆಯಾಗಿದೆ ನಿನಗೆ ಈಗ..?? ನೂರಾರು ಎಕರೆ ಆಸ್ತಿ ಇರೋದು ಸಾಕಾಗಲ್ವಾ ..?? ಹೆಚ್ಚು ಹೆಚ್ಚಿ ಓದಿ ಸಂಪಾದನೆ ಮಾಡೋ ಅಗತ್ಯವಾದ್ರೂ ಎಲ್ಲಿದೆ..?? ಹೆಸರಿಗೆ ಡಿಗ್ರಿ ಒಂದು ಇರಲಿ ಅನ್ನೋ ಒಂದೇ ಒಂದು ಕಾರಣಕ್ಕೆ ಓದ್ಸಿದ್ದು ನಿನ್ನ. ಓದೋಕೆ ಅಂತ ವಿದೇಶಕ್ಕೆ ಹೋದ್ರೆ ಇಲ್ಲಿ ಆಸ್ತಿ ನೋಡ್ಕೊಳ್ಳೋರು ಯಾರು ..??"

ಯಾಕಾದರೂ ನಾನು ಶ್ರೀಮಂತ ಮನೆತನದಲ್ಲಿ, ಅದು ಕೂಡ ಒಬ್ಬನೇ ಮಗನಾಗಿ ಹುಟ್ಟಿದೆನೋ ಅಂತ ಅದೆಷ್ಟು ಬಾರಿ ಅಂದುಕೊಂಡಿಲ್ಲ. ಇಷ್ಟೊಂದು ಆಸ್ತಿ ಮಾಡಿದ್ದಾದರೂ ಯಾಕೆ ಅಂತ ಅದೆಷ್ಟು ಬಾರಿ ಪ್ರಶ್ನಿಸಿಕೊಂಡಿದ್ದೇನೆ. ನಾನೊಂದು ಬಡ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಬೇಕಿತ್ತು. ಕಾಂಚಾಣದ ಝಣಝಣ ಇಲ್ಲದಿದ್ದ ಕಡೆ ಅ ಆ ಇ ಈಗೆ ಹೆಚ್ಚು ಗೌರವವಿರುತ್ತದೆ. ಇವರಿಗೆ ಆಸ್ತಿಯಲ್ಲಿ ಮಾತ್ರ ಶ್ರೀಮಂತಿಕೆ ಬೇಕು. ವಿದ್ಯೆಯಲ್ಲಿ ಬೇಡವೇ ಬೇಡ. ನನಗೋ ಆಸ್ತಿಯ ಬಗ್ಗೆ ಮೋಹವೂ ಇಲ್ಲ, ಸ್ನೇಹವೂ ಇಲ್ಲ. ನನ್ನ ಗೆಳೆತನ, ನಂಟುತನವೇನಿದ್ದರೂ ಓದಿನ ಜೊತೆಗೆ. ಇದು ಯಾರೊಬ್ಬರಿಗೂ ಅರ್ಥವಾಗುವುದಿಲ್ಲ. ಅಪ್ಪ-ಅಮ್ಮ ಇಬ್ಬರದೂ ಒಂದೇ ಮಾತು, ಮುಂದೆ ಓದುವುದು ಬೇಡಲೇ ಬೇಡ ಎಂದು. ಮನೆಗೆ ಬಂದವರೂ ಸಹ ಇದೇ ಮಾತನ್ನು ಹೇಳುತ್ತಿದ್ದಾರೆ. "ಮುಂದೆ ಓದುವುದೇತಕ್ಕೆ ..?? ಮನೆಯ ವ್ಯವಹಾರದಲ್ಲಿ ತೊಡಗಿಸಿಕೊಂಡು ಬಿಡು." ನನಗಂತೂ ಈ ಮಾತನ್ನು ಕೇಳಿ ಕೇಳಿ ತಲೆ ಚಿಟ್ಟು ಹಿಡಿದು ಹೋಗಿದೆ. ಏನು ಮಾಡಬೇಕೆಂದು ತೋಚುತ್ತಲೇ ಇಲ್ಲ.

ಅಯ್ಯೋ ಆಗಲೇ ಗಂಟೆ ಹತ್ತಾಗಿ ಹೋಯಿತೇ ..?? ಕಾಲೇಜಿಗೆ ಒಮ್ಮೆ ಹೋಗಿ ಬರಬೇಕು. ಒಂದಿಷ್ಟು ಸರ್ಟಿಫಿಕೇಟುಗಳಿಗೆ ಸೈನ್ ಮಾಡಿಸಿಕೊಂಡು ಬರುವ ಕೆಲಸವೊಂದಿದೆಯಲ್ಲ.

                                                          ******

ಕಾಲೇಜಿನ ದೊಡ್ಡ ಗಡಿಯಾರ ಹನ್ನೊಂದು ಬಾರಿ ಢಣ್ ಢಣ್ ಎಂದಿತು. ಲೈಬ್ರರಿಯಲ್ಲಿ ಜೋರು ರಷ್. ಎಲ್ಲಾ ವಿದ್ಯಾರ್ಥಿಗಳು ಕಾಲೇಜಿನ ಕೊನೆಯ ದಿನದಂದೇ ಪುಸ್ತಕಗಳನ್ನು ವಾಪಸ್ಸು ಮಾಡಲು ಬಂದಿದ್ದಾರೆ.

ಯಾರೋ ಬಂದು ಕ್ಯೂದಲ್ಲಿ ನಿಂತಿದ್ದ ವಿಶ್ವನ ಭುಜ ತಟ್ಟಿದರು.
"ಎಕ್ಸಕ್ಯೂಸ್ ಮೀ, ಒಂದ್ಸಲ ಪೆನ್ ಕೊಡ್ತೀರಾ ..?? ಫಾರ್ಮ್ ಫಿಲ್ ಮಾಡ್ಬೇಕಿತ್ತು."

ಪೆನ್ ಇಸಿದುಕೊಂಡು ಥ್ಯಾಂಕ್ಸ್ ಎಂದು ಆತ ನೋ ಡ್ಯೂ ಸರ್ಟಿಫಿಕೇಟ್ ತುಂಬತೊಡಗಿದ.
ನೇಮ್ : ವಿಕಾಸ್
ಕೋರ್ಸ್ : ಬಿ.ಎಸ್ಸಿ.
ಐಡಿ ನಂಬರ್ :......

ಎರಡು ನಿಮಿಷಗಳ ನಂತರ ಪೆನ್ ವಾಪಸ್ಸು ಕೊಡುತ್ತಾ ಮತ್ತೊಮ್ಮೆ ಥ್ಯಾಂಕ್ ಯೂ ಎಂದ. "ಮೆನ್ಷನ್ ನಾಟ್" ಎಂದ ವಿಶ್ವನೂ ಮುಗುಳ್ನಕ್ಕ.

"ಬುಕ್ ರಿಟರ್ನಾ..??"
"ಹ್ಞಾಂ, ನಿಮ್ದು ನೋ ಡ್ಯೂ ಸರ್ಟಿಫಿಕೇಟಾ..??"
"ಯೆಸ್. ಯಾವ್ ಸ್ಟ್ರೀಮ್ ಮತ್ತೆ ಇಯರ್ ..??"
"ಬಿ.ಕಾಂ. ಫೈನಲ್. ನೀವು ..??"
"ಓಹ್ ನಮ್ದೇ ಬ್ಯಾಚ್. ನಂದು ಬಿ.ಎಸ್ಸಿ."

ಇನ್ನೊಂದಿಷ್ಟು ನೀವು, ನಿಮ್ಮದು, ಅದು, ಇದು ಮಾತುಕತೆಗಳನ್ನು ಮುಗಿಸಿ "ಲೆಕ್ಚರರ್ ಒಬ್ಬರನ್ನು ಮೀಟ್ ಮಾಡ್ಬೇಕು. ಸೀ ಯೂ." ಎಂದು ವಿಕಾಸ್ ಅಲ್ಲಿಂದ ಹೊರಟ. ವಿಶ್ವ ತನ್ನ ಸರದಿಗಾಗಿ ಕಾಯುವುದನ್ನು ಮುಂದುವರೆಸಿದ.

                                                           ******

"ಏನ್ ಸರ್ ..?? ಊಟದ ಹೊತ್ತಲ್ಲೂ ಏನೋ ಗಂಭೀರವಾಗಿ ಯೋಚ್ನೆ ಮಾಡ್ತಾ ಇದೀರಲ್ಲ."

ಸಹೋದ್ಯೋಗಿಯ ಮಾತಿಗೆ ಪ್ರತಿಕ್ರಿಯೆಯಾಗಿ ಶ್ರೀನಿವಾಸ್ ಸರ್ ಮುಗುಳ್ನಕ್ಕರಷ್ಟೆ.
ಅವರ ತಲೆಯಲ್ಲಿ ಬೇರೆಯದೇ ಸಂಗತಿ ಸುಳಿ ಸುಳಿಯಾಗಿ ಸುತ್ತುತ್ತಿತ್ತು.

ಒಬ್ಬನಿಗೆ ದುಡ್ಡು ಸಾಕಷ್ಟು ಇಲ್ಲದಿರುವುದು ಸಮಸ್ಯೆ. ಇನ್ನೊಬ್ಬನಿಗೆ ದುಡ್ಡು ಬೇಕಾದಷ್ಟು ಇರುವುದು ಸಮಸ್ಯೆ. ಒಂದೇ ನಾಣ್ಯದ ಎರಡು ಮುಖಗಳು ಎಂಬಂತಿವೆ ಇವರಿಬ್ಬರ ಸಮಸ್ಯೆಗಳು. ಆತನಿಗೆ ನಾಣ್ಯದ ಈ ಮುಖ ಪರಿಹಾರ. ಈತನಿಗೆ ನಾಣ್ಯದ ಆ ಮುಖ ಪರಿಹಾರ. ಇಲ್ಲಿ ಇರುವುದು ಒಂದೇ ನಾಣ್ಯ. ಯಾರು ಯಾವಾಗ ಹೇಗೆ ಈ ನಾಣ್ಯವನ್ನು ಚಲಾಯಿಸಿ ತಮಗೆ ಬೇಕಾದ ಪರಿಹಾರವನ್ನು ಕಂಡುಕೊಳ್ಳುತ್ತಾರೆ ಎನ್ನುವುದು ಅವರ ವಿವೇಕ, ವಿವೇಚನೆಗೆ ಬಿಟ್ಟಿದ್ದು.

ತಾನಿತ್ತ ಸಲಹೆ ಸೂಚನೆಗಳನ್ನು ಮತ್ತೊಮ್ಮೆ ಪರಾಮರ್ಶಿಸಿದ ಕನ್ನಡ ಲೆಕ್ಚರರ್, ತಾನು ಅವರಿಬ್ಬರಿಗೂ ಅನುಚಿತವಾದದ್ದನ್ನು ಹೇಳಲಿಲ್ಲವೆಂದು ಸಮಾಧಾನಗೊಂಡರು. ಸರಸ್ವತೀ ಮತ್ತು ಲಕ್ಷ್ಮೀ - ಇಬ್ಬರು ಅಕ್ಕತಂಗಿಯರು ವ್ಯಕ್ತಿಯ ಜೀವನದಲ್ಲಿ ಹೇಗೆಲ್ಲಾ ಆಟವಾಡುತ್ತಾರೆ ಎಂದುಕೊಳ್ಳುತ್ತಾ ಊಟವನ್ನು ಮುಂದುವರೆಸಿದರು.

Tuesday, 7 June 2016

ಬ್ಲ್ಯಾಕ್ ಫ್ರೇಮ್


"ಏ ರಾಮು, ಎಷ್ಟ್ ಸಲ ಹೇಳ್ಬೇಕೋ ನಿಂಗೆ. ಯಾವತ್ತೂ ಸ್ಪೆಕ್ಟ್ಸ್ ಹಾಕ್ಕೊಂಡೇ ಇರ್ಬೇಕು, ಮಲಗೋ ಹೊತ್ತು ಬಿಟ್ಟು ಉಳಿದ ಟೈಮ್ ಅಲ್ಲಿ ಬರಿಗಣ್ಣಲ್ಲಿ ಇರ್ಬಾರ್ದು. ದಿನಕ್ಕೆ ಒಂದು ನೂರು ಸಲ ಹೇಳ್ತಾನೆ ಇರೋದಾಯ್ತು. ಒಂದ್ಸಲ ಹೇಳದ್ರೆ ತಿಳ್ಕೊಬೇಕು. ನೀನೇನು ಪಾಪುನಾ...??"

"ಬೆಳಿಗ್ಗೆ ಬೆಳಿಗ್ಗೆ ಯಾಕೆ ಬೈತಿದೀಯಾ ಅವಂಗೆ ..??" ಕೈಯಲ್ಲಿ ಬ್ರಷ್ ಹಿಡಿದುಕೊಂಡು ಆಕಳಿಸುತ್ತಾ ಜಗುಲಿಗೆ ಬಂದ ವಿನಯ್ ಹೆಂಡತಿಗೆ ಕೇಳಿದ.

ಸುಧಾ ಗಂಡನತ್ತ ನೋಡದೇ ಮಾತು ಮುಂದುವರೆಸಿದಳು, "ಮೊನ್ನೆ ಅವನ ಕ್ಲಾಸ್ ಟೀಚರ್ ಮೀಟ್ ಮಾಡಕೆ ಹೋಗಿದ್ನಲ್ಲ, ಅವರೇನಂದ್ರು ಗೊತ್ತಾ ..?? 'ರಾಮು ಯಾಕೆ ಹೀಗ್ ಮಾಡ್ತಾನೆ ಗೊತ್ತಿಲ್ಲ. ಕ್ಲಾಸ್ ನಡೆಯೋವಾಗ ಕನ್ನಡಕ ಹಾಕ್ಕೊಳಲ್ಲ. ಬೇಕಂತಲೇ ತೆಗೆದು ಬ್ಯಾಗ್ ಒಳಗಡೆ ಹಾಕಿಡ್ತಾನೆ. ಆಮೇಲೆ ಬೋರ್ಡ್ ಮೇಲೆ ಬರೆದದ್ದು ಸರಿಯಾಗಿ ಕಾಣ್ಸಲ್ಲ, ನೋಟ್ ಬುಕ್ ಅಲ್ಲಿ ತಪ್ಪು ತಪ್ಪಾಗಿ ಬರೆದುಕೊಳ್ತಾನೆ. ಪಾಠ ಓದೋವಾಗ ತಪ್ಪು ತಪ್ಪು ಓದ್ತಾನೆ. ಕನ್ನಡಕ ಹಾಕ್ಕೊ ಅಂತಂದ್ರೆ ಆ ಕ್ಷಣಕ್ಕೆ ಹಾಕ್ಕೊಳ್ತಾನೆ. ಐದೇ ನಿಮಿಷಗಳು, ಮತ್ತೆ ತೆಗೆದು ಒಳಗಿಡ್ತಾನೆ. ನಾನು ಗದರಿಸಿ ಹೇಳಿದರೂ ಹೀಗೇ ಆಡ್ತಾನೆ.' ನೀವೇ ಹೇಳ್ರಿ. ಇವನು ಬೇಕಂತಲೇ ಹೀಗಾಡೋದಲ್ವಾ ..?? ಈ ಮೊದಲು ನಾನೂ ಸಹ ಇವ ಹಾಕ್ಕೊಳ್ಳೋದನ್ನ ಮರೆತು ಬಿಡ್ತಾನೆ ಅಂದ್ಕೊಳ್ತಿದ್ದೆ. ಊಹ್ಞೂಂ, ಬೇಕಂತಲೇ ಮಾಡೋ ಶನಿ ಅದು. ಕನ್ನಡಕ ಹಾಕ್ಕೊಂಡ್ರೆ ಇವನ ಕಣ್ಣೇ ಅಲ್ವಾ ಸರಿ ಆಗೋದು. ಇನ್ನೇನು ನಮಗೆ ಲಾಟರಿ ಹೊಡೆಯತ್ತಾ ..?? ಹೇಳಿದ್ದೇ ಅರ್ಥ ಆಗಲ್ಲ ನಿಮ್ಮ ಮಗಂಗೆ. ಇನ್ನೊಂದ್ಸಲ ಹೀಗೆ ಆಟ ಆಡು. ಇದೆ ನಿಂಗೆ ನನ್ನ ಕೈಯಲ್ಲಿ." ತುಸು ಸಿಡುಕಿನಿಂದ ಮಗನ ತಲೆಯ ಮೇಲೆ ಮೊಟಕಿ ಒಳಗೆ ಹೋದಳಾಕೆ.

"ಪುಟ್ಟಾ, ಯಾಕೆ ಹೀಂಗ್ ಮಾಡ್ತೀಯೋ ಮರಿ..??" ಮಗನ ಬೆನ್ನು ನೇವರಿಸುತ್ತಾ ಶಾಂತವಾಗಿ ಕೇಳಿದ ತಂದೆ.

ಕನ್ನಡಕದ ಧೂಳು ಒರೆಸುತ್ತಿದ್ದ ಹುಡುಗ ರಾಮಕೃಷ್ಣ ಒಮ್ಮೆ ತಲೆ ಎತ್ತಿ ನಿರ್ಭಾವುಕನಾಗಿ ತಂದೆಯತ್ತ ನೋಡಿದ. ಏನೊಂದೂ ಮಾತನಾಡದೇ ಪುನಃ ತಲೆತಗ್ಗಿಸಿ ಧೂಳು ಒರೆಸುವುದನ್ನು ಮುಂದುವರೆಸಿದ.

                                                                        ******

ಧಪ್ ಧಪ್ ಧಪ್ ಧಪ್.
ತೆಗೆಯದೇ ತುಂಬಾ ದಿನಗಳಾಗಿದ್ದಕ್ಕೆ ಧೂಳು ಮೆತ್ತಿಕೊಂಡಿದೆ ಇದಕ್ಕೆ.
ಪುಣ್ಯಕ್ಕೆ ಶಾಯಿ ಇನ್ನೂ ಖಾಲಿಯಾಗಿಲ್ಲ.

"ಆಗ ನಂಗೆ ಏಳು ಅಥವಾ ಎಂಟು ವರ್ಷಗಳಿರಬಹುದು. ಅಮ್ಮ ಅದೆಷ್ಟು ಬೈತಿದ್ದಳು ನಂಗೆ. ಮೊದಲೆಲ್ಲ ಅಪ್ಪ ನನ್ನ ಪರವಾಗಿ ನಿಲ್ತಿದ್ದ. ಆದರೆ ಕೊನೆಯ ಕೊನೆಗೆ ಅವನೂ ಬೈಯ್ಯಲು ಶುರು ಮಾಡಿದ. ಸುಮಾರು ಎರಡು ವರ್ಷಗಳ ಕಾಲ ಹೀಗೆ ಬೈಸಿಕೊಂಡಿದ್ದೇನೆಂಬ ನೆನಪು. ಶಾಲೆಯಲ್ಲಿ ಟೀಚರುಗಳು ಎಷ್ಟು ಸಲ ಬೈದಿದ್ದರೆಂದು ಲೆಕ್ಕ ಇಟ್ಟವರಾರು ..??

ನನಗೆ ಮಂದ ದೃಷ್ಟಿಯ ಸಮಸ್ಯೆಯಿತ್ತು. ಲಾಂಗ್ ಸೈಟೆಡ್ ನೆಸ್ ಅಂತಾರಲಾ, ಆ ಪ್ರಾಬ್ಲಮ್ ಇತ್ತು. ಕೆಲವು ವರ್ಷಗಳ ಮಟ್ಟಿಗೆ ಸದಾ ಕಾಲ ಸ್ಪೆಕ್ಟ್ಸ್ ಧರಿಸಿದ್ರೆ ದೃಷ್ಟಿ ತಕ್ಕ ಮಟ್ಟಿಗೆ ಸ್ಪಷ್ಟವಾದೀತು ಎಂಬುದಾಗಿ ಡಾಕ್ಟರ್ ಅಂಕಲ್ ಹೇಳಿದ್ದರು. ಹಾಗಾಗಿ ಅಮ್ಮ ಒಂದು ರೂಲ್ಸ್ ಮಾಡಿಬಿಟ್ಟಿದ್ದಳು. ಯಾವತ್ತಿಗೂ ಸ್ಪೆಕ್ಟ್ಸ್ ಇಲ್ಲದೇ ಇರತಕ್ಕದ್ದಲ್ಲ ಎಂಬುದಾಗಿ.

ನನಗೇಕೋ ಆ ಸ್ಪೆಕ್ಟ್ಸ್ ಹಾಕಿದ್ರೆ ಎಲ್ಲವೂ ಇನ್ನಷ್ಟು ಮಸುಕು ಮಸುಕಾಗಿ ಕಾಣಿಸುತ್ತಿತ್ತು. ಮೊದಲು ಕನ್ನಡಕದ ಗಾಜಿಗೆ ಧೂಳು ಮೆತ್ತಿಕೊಳ್ಳುವುದರಿಂದ ಹಾಗಾಗುತ್ತದೆಯೇನೋ ಎಂದುಕೊಂಡೆ. ಪದೇ ಪದೇ ಕನ್ನಡಕವನ್ನು ಒರೆಸಿಕೊಳ್ಳುವ ಚಟ ಅಂಟಿತು. ಊಹ್ಞೂಂ, ಇದು ಗಾಜಿನ ಸಮಸ್ಯೆಯೇ ಅಲ್ಲ. ಆನಂತರದಿಂದ ಕನ್ನಡಕ ಧರಿಸುವುದನ್ನೇ ಕಡಿಮೆ ಮಾಡತೊಡಗಿದೆ. ಅಮ್ಮ, ಅಪ್ಪ, ಟೀಚರ್ ಗದರಿದಾಗ ಅವರ ಎದುರಲ್ಲಿ ಹಾಕಿಕೊಳ್ಳುವುದು. ಮರುಕ್ಷಣವೇ ತೆಗೆದಿಟ್ಟು ಬಿಡುವುದು.

ಎರಡು ವರ್ಷಗಳು ಹೀಗೆ ನಾಟಕವಾಡಿದ್ದೆ. ಆಮೇಲೆ ಯಾಕೋ ಗೊತ್ತಿಲ್ಲ. ಒಮ್ಮೆಲೇ ಕನ್ನಡಕ ಹಾಕಿಕೊಂಡು ಇರೋಣ ಎನ್ನಿಸಿತು, ಹಾಕಿಕೊಳ್ಳತೊಡಗಿದೆ. ಗದರಿ ಸುಸ್ತಾಗುತ್ತಿದ್ದವರೆಲ್ಲಾ ಸಮಾಧಾನ ಪಟ್ಟರು. ಆಗ ಮೊದಲಿನಂತೆ ಮಸುಕಾಗಿ ಕಾಣುವ ಕಿರಿಕಿರಿ ತಲೆದೋರಲಿಲ್ಲವೆನಿಸುತ್ತದೆ."

                                                                      ******

"ಡಾಕ್ಟರ್ ಹೇಳಿಲ್ವಾ ಪಪ್ಪಾ..?? ಈ ವಯಸ್ಸಿಗೆ ನಿಮ್ಮ ವಿಷನ್ ಪೆರಫೆಕ್ಟ್ ಆಗಿಯೇ ಇದೆ, ಸ್ಪೆಕ್ಟ್ಸ್ ಏನೂ ಬೇಡಾ ಅಂತ. ಆದರೂ ಯಾಕೆ ಆ ಬ್ಲ್ಯಾಕ್ ಕಲರ್ ಆ್ಯಂಡ್ ಫ್ರೇಮ್ ಸ್ಪೆಕ್ಟ್ಸ್ ಹಾಕ್ಕೊಳ್ತೀರಿ ಅಂತ..?? ಅದನ್ನು ಹಾಕ್ಕೊಂಡೇ ವಿಷನ್ ಏನಾದ್ರೂ ಹೆಚ್ಚು ಕಮ್ಮಿ ಆದ್ರೆ..?? ಈ ವಯಸ್ಸಿಗೆ ಅದೆಲ್ಲಾ ಬೇಕಾ ಪಪ್ಪಾ ..??" ಶಶಾಂಕ ಅಪ್ಪನ ಮನವರಿಕೆ ಮಾಡುವ ಧಾಟಿಯಲ್ಲಿ ಮೆಲ್ಲಗೆ ಹೇಳುತ್ತಿದ್ದ.

ಅವನಿಗೆ ನಿಜಕ್ಕೂ ವಿಚಿತ್ರವೆನಿಸಿತ್ತು. ದೃಷ್ಟಿ ಸರಿಯಿಲ್ಲದವರು ಧರಿಸಬೇಕೆಂದರೆ ಸರಿ. ಈ ಇಳಿ ವಯಸ್ಸಿನಲ್ಲೂ ಇಷ್ಟು ಚೆನ್ನಾಗಿ ಕಣ್ಣು ಕಾಣಿಸೋ ನಮ್ಮಪ್ಪ ವಿನಾಕಾರಣ ಸ್ಪೆಕ್ಟ್ಸ್ ಹಾಕ್ಬೇಕು ಅಂತ ಬಯಸೋದು ಅಂದ್ರೆ ಏನರ್ಥ ..?? ಇವರಿಗೇನಾದರೂ ಭ್ರಮೆ, ಅರಳು-ಮರುಳು ಅನ್ನೋದೆಲ್ಲ ಶುರುವಾಗಿದೆಯಾ ಹೇಗೆ ..??

ಮೊದಲು ಮನೆಯಿಂದ ಹೊರಗಡೆ ಹೋಗುವಾಗಲೆಲ್ಲ ಹಾಕ್ಕೊಳ್ತಿದ್ರು. ಧೂಳು ಇರತ್ತಲ್ವಾ, ಹಾಕ್ಕೊಂಡ್ರೇನೇ ಒಳ್ಳೇದು ಅಂತಾ ಅನ್ಬೋದು. ಈಗ ಮನೆಯ ಒಳಗಡೆ ಇರೋವಾಗಲೂ ಹಾಕ್ಕೊಳೋ ಚಟ. ಕಳೆದೆರಡು ತಿಂಗಳುಗಳಿಂದ ಶುರುವಾಗಿದೆ ಇದು. ಜೊತೆಗೆ ಬ್ಲ್ಯಾಕ್ ಕಲರ್ ದು ಮತ್ತೆ ಫ್ರೇಮಿನದೇ ಬೇಕು. ಹಠ ಹಿಡಿದು ಪುಟ್ಟನನ್ನು ಶಾಪ್ ಗೆ ಕರೆದೊಯ್ದು ಖರೀದಿ ಮಾಡ್ಕೊಂಡು ಬಂದಿದಾರೆ. ಈ ವಯಸ್ಸಾದವರಿಗಾದರೂ ಅದೇನೆಲ್ಲಾ ಹೊಸ ಚಟ, ಹಠ ಅಂಟಿಕೊಳ್ಳತ್ವೆ.

                                                                           ******

"ಊಹ್ಞೂಂ, ನಂಗೆ ಈ ದೃಷ್ಟಿ ಚೆನ್ನಾಗಿ ಇರೋದು ಬೇಕಿಲ್ಲ. ಕಣ್ಣುಗಳು ಮಂಜಾಗಿ ಎದುರಿನದೆಲ್ಲಾ ಮಸುಕಾಗಿ ಕಾಣಿಸಿದ್ದರೆ ಎಷ್ಟು ಹಾಯಾಗಿರ್ತಿತ್ತು. ಈ ಬಯಕೆಯೇ ಕನ್ನಡಕ ಹಾಕಿಕೊಳ್ಳೋ ಚಟಕ್ಕೆ ನನ್ನನ್ನು ದೂಡಿದ್ದು. ಗಾಜು ಬಿಳಿಯದು ಇದ್ದರೆ ಎಲ್ಲವೂ ಬಣ್ಣ ಬಣ್ಣವಾಗಿಯೇ ಕಾಣಿಸುತ್ತವೆ. ಬೇಡ, ಈ ಬಣ್ಣ ಬಣ್ಣದ ಲೋಕವನ್ನು ನನ್ನಿಂದ ನೋಡಲಿಕ್ಕಾಗುವುದಿಲ್ಲ. ಹಾಗಾಗಿಯೇ ಪುಟ್ಟನನ್ನು ಕರೆದೊಯ್ದು ಕಪ್ಪು ಗಾಜಿನ ಕನ್ನಡಕವನ್ನು ತೆಗೆದುಕೊಂಡು ಬಂದೆ. ಕಪ್ಪು ಫ್ರೇಮ್ ಇದ್ದಿದ್ದು ಮತ್ತೂ ಇಷ್ಟವಾಯಿತು. ಅದನ್ನೇ ಖರೀದಿಸಿದೆ.

ಡಾಕ್ಟರ್ ಹೇಳುತ್ತಾರೆ ಎಲ್ಲವನ್ನೂ. ಅಲ್ಲ, ಏನು ಮಾಡಲಿ ಈ ಸ್ಪಷ್ಟವಾದ ದೃಷ್ಟಿಯನ್ನು ಇಟ್ಟುಕೊಂಡು ..?? ಎಪ್ಪತ್ತೈದು ಕಳೆಯಿತಲ್ಲ ನನಗೆ. ಇಷ್ಟು ವರ್ಷಗಳ ಬದುಕಿನಲ್ಲಿ ಏನೇನೆಲ್ಲಾ ನೋಡಿಯಾಯಿತು, ಮಾಡಿಯಾಯಿತು. ಈಗ ಮತ್ತೇನೂ ತಾನೇ ನೋಡುವುದು ಬಾಕಿ ಇದೆಯೆಂದು ದೃಷ್ಟಿ ಸ್ಪಷ್ಟವಾಗಿರಬೇಕು. ಆ ದೇವರಿಗೆ ನನ್ನ ಕಣ್ಣನ್ನು ಮಂಜಾಗಿಸಲು ಮನಸ್ಸಿರದಿದ್ದರೆ ಪರವಾಗಿಲ್ಲ. ಈ ಬಣ್ಣ ಬಣ್ಣದ ಪ್ರಪಂಚವನ್ನು ದಿಟ್ಟಿಸುವ ಕರ್ಮವನ್ನು ನಾನೇ ಹೇಗಾದರೂ ತಪ್ಪಿಸಿಕೊಳ್ಳುತ್ತೇನೆ.

ಅವಳು ಹೊರಟುಹೋಗಿ ಎರಡು ತಿಂಗಳುಗಳ ಹಿಂದಷ್ಟೇ ಒಂದು ವರ್ಷವಾಯಿತು. ಅವಳಿಗೆ ಅರವತ್ತು ತುಂಬುತ್ತಿದ್ದಂತೆ ದೃಷ್ಟಿ ಸ್ವಲ್ಪವೇ ಮಂಜಾಗಿತ್ತು. ತೀರಾ ಏನೂ ಕಾಣಿಸದಷ್ಟು ಕಣ್ಣು ಹಾಳಾಗಿರಲಿಲ್ಲ. ಈ ಒಂದು ವರುಷ ಒಂದು ಯುಗದಂತೆ ಕಳೆಯಿತು. ನನ್ನ ಬದುಕಿನ ಕಣ್ಣಿಗೆ ದೃಷ್ಟಿಯಾಗಿದ್ದವಳು. ಈಗೀಗ ಅವಳ ಗೈರು ನನಗೆ ಅತೀವ ಬೇಸರ, ಕಿರಿಕಿರಿಯನ್ನು ಉಂಟು ಮಾಡುತ್ತಿದೆ. ಏನನ್ನು ನೋಡಲಿಕ್ಕೂ ಬೇಸರ. ಹಾಳಾದ ಕಣ್ಣು ಚಿಕ್ಕಂದಿನಲ್ಲಿ ಸಮಸ್ಯೆ ಹೊಂದಿದ್ದು ಈಗ ಆರೋಗ್ಯವಾಗಿದೆ. ಯಾರಿಗೆ ಬೇಕು ಅಂತ..??"

ಗಡಿಯಾರ ಹತ್ತು ಹೊಡೆಯುತ್ತಿದೆ.
ಬರೆದಿದ್ದು ಸಾಕು, ಮಲಗುವ.
ದೀಪ ಉರಿಯುತ್ತಿರುವುದು ಕಂಡರೆ ಸೊಸೆ ಕೂಗು ಹಾಕುತ್ತಾಳೆ.


Sunday, 5 June 2016

ಅಪ್ಪೆ ಮಾವು


"ಮೊನ್ನೆ ಮೊನ್ನೆಯಷ್ಟೇ ವಾಪಸ್ಸು ಹೋಗಿದ್ದು. ಈಗ ಮತ್ತೆ ಬಂದಿದ್ದು ಯಾಕಂತೆ ..??" ಸವಿತಕ್ಕ ಗಂಡನ ಬಳಿ ಕೇಳುತ್ತಿದ್ದರು.

"ಮಗ ಅಲ್ವೆನೇ ಬಂದಿದ್ದು..?? ಯಾಕಪ್ಪ ಮತ್ತೆ ಮನೆಗೆ ಬಂದೆ ಅಂತ ಕೇಳಕಾಗತ್ತಾ ..?? ಬೆಳಿಗ್ಗೆ ಬೆಳಿಗ್ಗೆ ಬಂದಿದಾನೆ, ರಾತ್ರಿಯಿಡೀ ನಿದ್ದೆಯಿಲ್ದೆ ಸುಸ್ತಾಗಿರತ್ತೆ. ರೆಸ್ಟ್ ಮಾಡಿ ಆರಾಮಾದ್ಮೇಲೆ ಅವನೇ ಹೇಳ್ತಾನೆ ಬಿಡು." ಕೇಶವ ಹೆಬ್ಬಾರರು ಉತ್ತರಿಸಿದರು.

ಸವಿತಕ್ಕನಿಗೆ ಸಮಾಧಾನವಾದೀತೇ ..?? ಮಧ್ಯಾಹ್ನದ ಊಟ ಮುಗಿದ ಬಳಿಕ ಪಾತ್ರೆಗಳನ್ನು ಸೇರಿಸುತ್ತಿದ್ದ ಸೊಸೆಯ ಬಳಿ ಕೇಳಿಯೇ ಬಿಟ್ಟರು. "ರಾಧಾ, ಆಕಾಶಂಗೆ ಆಫೀಸಿನಲ್ಲಿ ರಜಾ ಇದೆಯಾ..??"
"ಹ್ಞಾಂ ಅತ್ತೆ, ಬೋನಸ್ ಹಾಲಿಡೇಸ್ ಹಾಗೆ ಉಳ್ಕೊಂಡಿತ್ತಂತೆ." ರಾಧಿಕಾಗೆ ಏನೂ ಪ್ರತಿಕ್ರಿಯಿಸಬೇಕೆಂದು ತಿಳಿಯದೇ ತಕ್ಷಣಕ್ಕೆ ಹೊಳೆದಿದ್ದನ್ನು ಹೇಳಿದಳು.

ಖರೇ ಹೇಳಬೇಕೆಂದರೆ, ಅವಳಿಗೇ ಗಂಡನ ಈ ಧಿಡೀರ್ ಪ್ರಯಾಣದ ತಲೆಬುಡ ಅರ್ಥವಾಗಿರಲಿಲ್ಲ. ಪುಟ್ಟಿಯ ಸಮ್ಮರ್ ಹಾಲಿಡೇಸ್ ಎಂದು ಮೇ ತಿಂಗಳ ಕೊನೆಯ ವಾರದಲ್ಲಿ ಊರಿಗೆ ಬಂದವರು ಕಳೆದ ವಾರವಷ್ಟೇ ಬೆಂಗಳೂರಿಗೆ ಮರಳಿದ್ದರು. ಈಗ ಜೂನ್ ಎರಡನೆಯ ವಾರ. ಹತ್ತೇ ದಿನಗಳಲ್ಲಿ ಮತ್ತೆ ಊರಿಗೆ ಮರಳುವಂತಹ ಅನಿವಾರ್ಯ ಕೆಲಸವೇನಿದೆಯೆಂದು ರಾಧಿಕಾಗೆ ತಿಳಿದಿರಲಿಲ್ಲ. ಅವತ್ತು ಶುಕ್ರವಾರ ಸಂಜೆ ಎಂದಿಗಿಂತ ಬಹಳ ಮುಂಚೆಯೇ ಆಕಾಶ್ ಆಫೀಸಿನಿಂದ ಮರಳಿದ್ದ. ಮನೆಯೊಳಗಡೆ ಕಾಲಿಟ್ಟ ಮರುಕ್ಷಣವೇ ಹೇಳಿದ, "ಈಗ ನೈಟ್ ಬಸ್ ಗೆ ಊರಿಗೆ ಹೋಗ್ಬೇಕು. ಬೇಗ ಲಗೇಜ್ ಪ್ಯಾಕ್ ಮಾಡಿ ರೆಡಿ ಆಗು. ಜಾಸ್ತಿ ಟೈಮ್ ಇಲ್ಲ, ಲೇಟ್ ಮಾಡ್ಬೇಡ." ರಾಧಿಕಾಳ ಯಾಕೆ, ಏನು ಎಂಬ ಪ್ರಶ್ನೆಗಳಿಗೆ ಆತ ಹಾರಿಕೆಯ ಉತ್ತರವನ್ನು ಕೊಟ್ಟನಷ್ಟೆ. ಪುಟ್ಟಿಯ ಶಾಲೆ ತಪ್ಪುವುದರಿಂದ ನಾವಿಬ್ಬರೂ ಬರುವುದಿಲ್ಲ, ನೀವು ಹೋಗಿ ಬನ್ನಿ ಎಂದರೆ "ಇಲ್ಲ, ಮೂವರೂ ಹೋಗೋಣ." ಎಂಬ ಹಠ. ಊರಲ್ಲಿ ಏನಾದರೂ ಹೆಚ್ಚು ಕಡಿಮೆ ಆಗಿದೆಯೋ ಹೇಗೆ ಎಂದು ಸ್ವಲ್ಪ ತಲೆಬಿಸಿಯಲ್ಲೇ ಹೊರಟು ಬಂದರೆ, ಇಲ್ಲಿ ಏನೊಂದೂ ಆಗಿಲ್ಲ. ಎಲ್ಲವೂ ಸರಿಯಾಗಿದೆ. ಮಾತ್ರವಲ್ಲ, ಸ್ವತಃ ಅತ್ತೆ-ಮಾವನಿಗೂ ಮಗ ಬರುವ ಸಂಗತಿ ತಿಳಿದಿರಲಿಲ್ಲ. ಯಾಕೆ ಹೀಗೆ ಹೊರಟು ಬಂದದ್ದು ಎಂದು ಅವರಿಗೂ ಬಗೆಹರಿದಿಲ್ಲ.

                                                            ********

"ಇದು ನೋಡು ರಾಧು, ನಾವು ಚಿಕ್ಕೋರಿದ್ದಾಗ ಅದೆಷ್ಟು ಹಣ್ಣು ಬಿಡ್ತಿತ್ತು ಗೊತ್ತಾ ..?? ಇಡೀ ನಮ್ಮ ಬೆಂಗಳೂರಿಗೆ ರಸಾಯನ ಮಾಡಿ ಬಡಿಸುವಷ್ಟು." ತೋಟದ ಆಚೆ ದಿಂಬದಲ್ಲಿರುವ ಈಸಾಡಿ ಮಾವಿನ ಮರದತ್ತ ಕೈ ತೋರಿಸುತ್ತಾ ಹೆಂಡತಿಗೆ ಹೇಳುತ್ತಿದ್ದ ಆಕಾಶ್. "ಈಗ ನೆಟ್ಟಗೆ ನೂರು ಕಾಯಿಗಳು ಬರಲ್ಲ ಈ ಮರಕ್ಕೆ. ಏನೋ ರೋಗ ಬಂದವರ ಹಾಗೆ ಬಾಡಿ ಹೋಗಿದೆ ಅಲ್ವಾ..?? ಪಾಪ, ಈಗ ಈ ಮರಗಳ ಹತ್ರ ಹಣ್ಣು ಹೆಕ್ಕಲು ಬರುವ ಮಕ್ಳಾದ್ರೂ ಯಾರಿದಾರೆ..?? ಹಾಗಾಗಿ ಮರಕ್ಕೂ ತಾನು ಹಣ್ಣು ಬಿಡೋದೆಲ್ಲಾ ವೇಸ್ಟು ಅಂತಾ ಅನಿಸಿರಬೇಕು. ಅಲ್ಲೇ ಬಲಗಡೆ ಒಂದು ಅಪ್ಪೆ ಹಣ್ಣಿನ ಮರ ಇದೆ. ಅದಂತೂ ಕಾಯಿ ಬಿಡದೇ ಮೂರು ವರ್ಷಗಳೇ ಆಯ್ತಂತೆ. ನಮಗೆಲ್ಲಾ ಫೇವರೇಟ್ ಆಗಿತ್ತು ಆ ಅಪ್ಪೆ ಹಣ್ಣು." ಆತ ಮಾತನಾಡುತ್ತಲೇ ಇದ್ದ.

ರಾಧಿಕಾಗೆ ಇನ್ನಷ್ಟು ಗೊಂದಲ. ಇವತ್ತಿನ ತನಕ ಕಾಡು, ಮರ, ಹಣ್ಣು, ಹೂವು ಅಂತೆಲ್ಲಾ ಎರಡು ಸಾಲುಗಳನ್ನು ಸಹ ತನ್ನ ಗಂಡ ಮಾತನಾಡಿದ್ದಿಲ್ಲ. ಆಫೀಸು, ಮನೆ, ಕ್ರಿಕೆಟ್, ಸಿನೆಮಾ - ಇದಿಷ್ಟರ ಕುರಿತೇ ಆಸಕ್ತಿ, ಮಾತು, ಹರಟೆ. ಪಾರ್ಕ್ ಹೋದಾಗ ಅಪ್ಪಿತಪ್ಪಿ ಮರ, ಗಿಡ, ಹೂವುಗಳತ್ತ ಕಣ್ಣು ಹಾಯಿಸದವ ಈಗ ಒಮ್ಮಿಂದೊಮ್ಮೆಗೇ ಈಸಾಡಿ ಮಾವು, ಅಪ್ಪೆ ಮಿಡಿ ಅಂತೆಲ್ಲಾ ವಿವರಣೆ, ವಿಶ್ಲೇಷಣೆ ಕೊಡುತ್ತಿರುವುದಕ್ಕೆ ಕಾರಣ ಏನಿರಬಹುದು ..?? ತಲೆ ನೋವು ಬರಬಹುದೆನ್ನಿಸಿತು ಅವಳಿಗೆ. ಯೋಚನೆಯನ್ನು ಬಿಟ್ಟು ಗಂಡನ ಮಾತಿಗೆ ಹ್ಞೂಂಗುಟ್ಟತೊಡಗಿದಳು.

ಮರುದಿನ ಬೆಳಿಗ್ಗೆ ಆಕಾಶ್ ಸೊಪ್ಪಿನ ಬೆಟ್ಟವನ್ನು ನೋಡಲು ಹೊರಟ. ಮಧ್ಯಾಹ್ನದ ಊಟದ ವೇಳೆಗೂ ವಾಪಸ್ಸು ಬರಲಿಲ್ಲ. ಸಂಜೆ ಕತ್ತಲಾದ ಮೇಲೆ ಮರಳಿ ಬಂದ. ಒಂದು ಪ್ಲಾಸ್ಟಿಕ್ ಕವರ್ ತುಂಬಾ ನೇರಳೆ ಹಣ್ಣು ತಂದಿದ್ದ. "ಅಮ್ಮಾ, ಅಲ್ಲಿ ಬೆಟ್ಟದ ತುದಿಯಲ್ಲಿರೋ ಹಲಸಿನ ಮರಕ್ಕೆ ಎರಡು ಕಾಯಿಗಳಿವೆ. ಹಿಂದಿನ ವರುಷ ಒಂದೂ ಕಾಯಿ ಇರಲಿಲ್ಲವಂತೆ. ಆಳು ಹೇಳಿದ. ಪರವಾಗಿಲ್ಲ ಈ ಸಲ ಕಾಯಿ ಬಂದಿದೆ."

ಮಗನ ಮಾತು ಕೇಶವ ಹೆಬ್ಬಾರರಿಗೆ ಅಚ್ಚರಿ ಮೂಡಿಸಿತಾದರೂ ಏನೂ ಪ್ರತಿಕ್ರಿಯಿಸಲಿಲ್ಲ. ಪೇಟೆಯ ಯಾಂತ್ರಿಕ ಜನ-ಜೀವನದಿಂದ ತಲೆಚಿಟ್ಟು ಹಿಡಿದು ಬದಲಾವಣೆಗಾಗಿ ಆತ ಧಿಡೀರ್ ಎಂದು ಊರಿಗೆ ಬಂದಿರುವುದಷ್ಟೆ ಎಂದು ನಿರ್ಧರಿಸಿದರು. ಮಾತ್ರವಲ್ಲ, ಹೆಂಡತಿಯ ಬಳಿಯೂ ಹೀಗೆಂದು ಹೇಳಿದರು.

                                                                ********

"ನೋಡೋ ಆಕಾಶ್, ಈ ಸಿಟಿಯಲ್ಲಿರೋ ಮಾವಿನ ಮರಗಳೆಲ್ಲ ಅದೆಷ್ಟು ಚೆನ್ನಾಗಿ ಕಾಯಿ ಬಿಟ್ಟಿವೆ. ಬೆಂಗಳೂರಿನ ಈ ಧೂಳು, ಬಿಸಿಲು ಕೂಡ ಅವುಗಳನ್ನು ಬಾಡಿಸಿಲ್ಲ. ಅದೇ ನಮ್ಮನೆ ತೋಟದಲ್ಲಿರೋ ಮಾವಿನ ಮರಕ್ಕೆ ಎರಡು ವರ್ಷಗಳಿಂದ ಹತ್ತೋ ಇಪ್ಪತ್ತೋ ಕಾಯಿಗಳು ಬರತ್ವೆ. ಈ ಸಲವಂತೂ ಒಂದು ಕಾಯಿಯೂ ಇಲ್ಲ. ನಂಗನ್ಸತ್ತೆ ಕಣೋ, ಗಿಡಮರಗಳು ಸೊಂಪಾಗಿ ಬೆಳೆದು ಫಲ ಕೊಡ್ಬೇಕು ಅಂತಂದ್ರೆ ಬರೇ ನೀರು, ಗೊಬ್ಬರ ಅಷ್ಟೆ ಅಲ್ಲ. ಮನುಷ್ಯರ ಮಾತು, ನಗು, ಅಳು, ನೋಟ, ಸ್ಪರ್ಶ ಎಲ್ಲಾನೂ ಬೇಕು. ಹಳ್ಳಿಗಳೆಲ್ಲಾ ಖಾಲಿ ಖಾಲಿ ಆಗ್ತಿರೋವಾಗ ಅಲ್ಲಿನ ಮರಗಳು ಮೊದಲಿನಂತೆ ಹಣ್ಣು ಬಿಡಲಿಕ್ಕೆ ಹೇಗೆ ಸಾಧ್ಯ ಹೇಳು."

ಹೊತ್ತು ಹೋಗದೆಂದು ಹರಟೆ ಹೊಡೆಯುತ್ತಿದ್ದಾಗ ಗೆಳೆಯ ಸಾಗರ್ ಈ ಮಾತುಗಳನ್ನು ಹೇಳಿ ವಾರವೇ ಕಳೆದುಹೋಗಿತ್ತು. ಸ್ವತಃ ಆತನಿಗೆ ಇವೆಲ್ಲ ಮರೆತು ಹೋಗಿರಬೇಕು. ಅದ್ಯಾಕೋ ಏನೋ, ಆಕಾಶ್ ಗೆ ಗೆಳೆಯನ ಮಾತುಗಳು ಪದೇ ಪದೇ ನೆನಪಾಗತೊಡಗಿದವು. ಬೆಳಿಗ್ಗೆ ವಾಕ್ ಹೋಗುವಾಗ, ನಂತರ ಆಫೀಸಿಗೆ ಕಾರು ಓಡಿಸುವಾಗ, ತನ್ನ ಕ್ಯಾಬಿನ್ ಕಿಟಕಿಯಿಂದ ಕಾಣಿಸುವ ಪಾರ್ಕಿನತ್ತ ಕಣ್ಣು ಹೊರಳಿದಾಗ, ಸಂಜೆ ಕ್ಯಾಂಟೀನಿನಲ್ಲಿ ಗ್ರೀನ್ ಟೀ ಹೀರುವಾಗ, ರಾತ್ರೆ ಮನೆಯತ್ತ ಕಾರು ಓಡಿಸುವಾಗ, ಊಟದ ನಂತರ ಅಲ್ಫಾನ್ಸೋ ಹಣ್ಣುಗಳ ಹೋಳುಗಳನ್ನು ಚಪ್ಪರಿಸುವಾಗ - ಸಾಗರ್ ಹೇಳಿದ್ದರಲ್ಲಿ ಸತ್ಯವಿಲ್ಲದೇ ಇಲ್ಲ. ಪಕ್ಕದ ಮನೆಯಲ್ಲಿ ಸುಂದರಶ್ರೀ ಮರವಿದೆ. ಪ್ರತಿವರ್ಷವೂ ಸೊಂಪಾಗಿ ಹಣ್ಣು ಬಿಡುವುದನ್ನು ತಾನು ಕಳೆದ ಮೂರ್ನಾಲ್ಕು ವರ್ಷಗಳಿಂದ ನೋಡುತ್ತಿದ್ದೇನೆ. ನಮ್ಮ ಮನೆಯಲ್ಲಿಯೂ ಒಂದು ಜಾತಿ ಮಾವಿನ ಮರವಿತ್ತಲ್ಲ. ಈಸಾಡಿಯೋ, ಗಿಡುಗನ ಮನೆಯೋ ಅಥವಾ ಸುಂದರಶ್ರೀಯೋ..?? ಥತ್, ನೆನಪಾಗುತ್ತಲೇ ಇಲ್ಲ. ಆ ಮರ ಈಗಲೂ ಕಾಯಿ ಬಿಡ್ತಾ ಇದೆಯಾ ..?? ಅಥವಾ ಸಾಗರನ ತೋಟದ ಮರದಂತೆಯೇ ಪೂರಾ ಬಾಡಿ ಹೋಗಿದೆಯಾ..?? ನಾನ್ಯಾವತ್ತೂ ಅಮ್ಮ ಅಥವಾ ಅಪ್ಪನ ಬಳಿ ಇವೆಲ್ಲದರ ಕುರಿತು ಕೇಳುವುದೇ ಇಲ್ಲ.

ಚಿಕ್ಕಂದಿನಲ್ಲಿ ಬೇಸಿಗೆ ಬಂತೆಂದರೆ ಸಾಕು, ಇಡೀ ದಿನ ಮರಗಳ ಬುಡದಲ್ಲಿಯೇ ಇರುತ್ತಿದ್ದೆನಂತೆ. ಅಮ್ಮ ಯಾವಾಗಲಾದರೂ ಹೇಳುತ್ತಾ ಇರುತ್ತಾರೆ. ನೇರಳೆ, ಚಳ್ಳೆ, ಗೇರು, ಮಾವು, ಕೌಳಿ - ಹೀಗೆ ಒಂದರ ನಂತರ ಮತ್ತೊಂದು. ದಿನಕ್ಕೆ ಎರಡೆರಡು ಬಾರಿ ಎಲ್ಲ ಮರಗಳನ್ನೂ ಮಾತನಾಡಿಸಿಕೊಂಡು ಬರುತ್ತಿದ್ದೆನಂತೆ. "ಕೆಲವೊಮ್ಮೆ ಮಧ್ಯಾಹ್ನದ ಊಟಕ್ಕೂ ಬಾರದೇ ಅಲೆದಾಡುತ್ತಿದ್ದೆ. ಪಿಯುಸಿಯಲ್ಲಿ ರಿಸಲ್ಟ್ ಬಂದ ದಿನವೂ ಕಾಡಿನ ಸುತ್ತಾಟವನ್ನು ತಪ್ಪಿಸಿರಲಿಲ್ಲ. ಬೆಂಗಳೂರಿಗೆ ಹೋಗಿ ಎಂಜಿನಿಯರಿಂಗ್ ಸೇರಿದ ಮೇಲಿನಿಂದ ನೀನು ಕಾಡು ಸುತ್ತಲಿಕ್ಕೆ ಹೋಗಿಲ್ಲ." ಅಮ್ಮ ಯಾವಾಗಲೋ ಒಮ್ಮೆ ಹೇಳಿದ್ದರು.

ಅವತ್ತು ವಿಶ್ವ ಪರಿಸರ ದಿನ. ಎಲ್ಲ ಕಡೆಯೂ ಗಿಡನೆಡುವ, ಪರಿಸರದ ಕುರಿತು ಜಾಗೃತಿ ಮೂಡಿಸುವ, ಮಾನವನ ಕುರಿತಾಗಿ ಒಂದಿಷ್ಟು ಬೈಯ್ಯುವ ಕಾರ್ಯಕ್ರಮಗಳು. ತೋಟದ ಮಾವಿನ ಮರದ ನೆನಪು ಮತ್ತೆ ಮತ್ತೆ ಆಕಾಶನನ್ನು ಕಾಡತೊಡಗಿತು. ಮಧ್ಯಾಹ್ನದ ಲಂಚ್ ಹೊತ್ತಿಗೆ ಮ್ಯಾಂಗೋ ಜ್ಯೂಸ್ ಕುಡಿದಿದ್ದೇ ನೆನಪು ನೆತ್ತಿಗೇರಿತು. ಒಂದು ಬಾರಿ ಊರಿಗೆ ಹೋಗಿ ಆ ಮರವನ್ನು ನೋಡಿಯೇ ತೀರುವುದೆಂದು ನಿರ್ಧರಿಸಿ ಹೊರಟು ಬಂದುಬಿಟ್ಟ.

                                                            ********

ಹಲಸಿನ ಮರದಲ್ಲಿ ಕಾಯಿಗಳನ್ನು ಕಂಡ ಆಕಾಶನಿಗೆ ಅದೇನೋ ಒಂದು ಬಗೆಯ ಸಂತಸ. ಈ ಮರವಿನ್ನೂ ಬಾಡಿ ಹೋಗಿಲ್ಲವಲ್ಲ. ಇದು ಬಾಡಿ ಹೋಗದಂತೆ ಏನಾದರೂ ಮಾಡಬೇಕು. ಜೊತೆಗೆ ಆ ಮಾವಿನ ಮರಗಳೆಲ್ಲ ಮತ್ತೆ ಚಿಗುರುವಂತೆ ಮಾಡಬೇಕು. ಮುಂದಿನ ವರ್ಷ ಸ್ವಲ್ಪವಾದರೂ ಕಾಯಿ ಬಿಡುವಂತಾಗಬೇಕು. ಹಾಗಾಗಲು ಏನು ಮಾಡುವುದು..?? ಗೊತ್ತಿಲ್ಲ.

ರಾತ್ರಿ ಊಟದ ಸಮಯದಲ್ಲಿ ಅಪ್ಪನನ್ನು ಕೇಳಿದ ಆಕಾಶ್. "ಗದ್ದೆಯ ಮೇಲಿನ ಬೆಟ್ಟದಲ್ಲಿ ನೇರಳೆ ಮರವೊಂದಿತ್ತಲ್ಲ. ಈಗ ಅದು ಹಣ್ಣು ಬಿಟ್ಟಿದೆಯಾ..??"

"ಆ ಮರವನ್ನು ಕಡಿದು ಒಂದು ವರ್ಷದ ಮೇಲಾಯ್ತಲ್ಲ." ಅಪ್ಪ ಶಾಂತವಾಗಿ ಉತ್ತರಿಸಿದರು.

"ಯಾಕೆ...?? ಏನಾಗಿತ್ತು ಆ ಮರಕ್ಕೆ ..?? ಕಡಿದು ಹಾಕಿದ್ದೇಕೆ..??" ಆಕಾಶ್ ಗಾಬರಿಯಿಂದ ಕೇಳಿದ.

ಸವಿತಕ್ಕ ಬಾಯಿ ತೆಗೆದರು.
"ಆಗೋದೇನು. ಅದು ಹಣ್ಣು ಬಿಡುವುದನ್ನು ಬಿಟ್ಟು ಅದೆಷ್ಟೋ ವರ್ಷಗಳು ಕಳೆದವು. ಮೊದಲಾಗಿದ್ರೆ ನೀವು ಹುಡುಗರು ಅದರ ನೆರಳಲ್ಲೇ ದಿನ ಕಳೀತಾ ಇದ್ರಿ. ಈಗ ಯಾರು ಅದರತ್ತ ಕಾಲು ಹಾಕುವವರು ..?? ಎರಡು ವರ್ಷಗಳ ಹಿಂದೆ ಗೆದ್ದಲು ರೋಗ ಅಂಟಿಕೊಂಡ್ತು ಅದ್ಕೆ. ಹಾಗಾಗಿ ಕಡಿದು ಹಾಕಿದ್ರು. ಸ್ವಲ್ಪ ಉಪ್ಪಿನಕಾಯಿ ಹಾಕಲಾ ..??"

ಆಕಾಶನಿಗೆ ಏನು ಹೇಳಲೂ ತೋಚಲಿಲ್ಲ.
ಒಂದು ಚಮಚ ಉಪ್ಪಿನಕಾಯಿಯನ್ನು ಮಗನಿಗೆ ಹಾಕಿ ಸವಿತಕ್ಕ ಮುಂದುವರೆಸಿದರು.
"ತೋಟದ ಪಕ್ಕದ ಬೆಟ್ಟದಲ್ಲಿ ನಮ್ಮದೊಂದು ಅಪ್ಪೆ ಮಾವಿನ ಮರವಿದೆಯಲ್ಲ. ಅದಕ್ಕೂ ಒಂದು ಬಗೆಯ ರೋಗ ಬಂದಿದೆ. ಈ ಮಳೆಗಾಲ ಮುಗಿದ ನಂತರ ಕಡಿಸಿಬಿಡಿ ಒಡಿಯಾ ಅಂತ ಆಳು ಹೇಳ್ತಿದ್ದ."

ಬಾಯಿಯಲ್ಲಿದ್ದ ಅಪ್ಪೆ ಮಿಡಿ ಕಹಿ ಕಹಿಯೆನಿಸಿತೊಡಗಿತು ಆಕಾಶನಿಗೆ.


ಡಿಯರ್ ಡೈರಿ: ಡೇ - ೨


"ಈ ಮರೆವಿನ ಖಾಯಿಲೆ ಇದ್ರೆ ಅದೆಷ್ಟು ಕಷ್ಟ ಅಲ್ವಾ ..??"

ಕಿಟಕಿಯಲ್ಲಿ ಹೊರಗಡೆ ದೃಷ್ಟಿ ನೆಟ್ಟು ಕುಳಿತಿದ್ದ ನಿಯತಿ ನನ್ನ ಮಾತು ಕೇಳಿ ಇತ್ತ ತಿರುಗಿದಳು.

"ನೀನು ಈ ಮಾತು ಹೇಳ್ತಿದೀಯಾ ..?? ಒಂದೇ ಒಂದು ಸಲ ನನ್ನ ತಲೆ ಪೂರಾ ಫಾರ್ಮಾಟ್ ಆಗೋಗಿದ್ರೆ ಅದೆಷ್ಟು ಚೆನ್ನಾಗಿರದು ಅಂತ ದಿನಕ್ಕೆ ಹತ್ತು ಬಾರಿ 'ಮೇಕ್ ಎ ವಿಷ್' ಮಾಡೋ ನಿಂಗೆ ಈಗ್ಯಾಕೆ ಹೀಗನ್ನಿಸ್ತಿದೆ ..?? ಓಹ್, ಗೋಧಿ ಬಣ್ಣದ ಹ್ಯಾಂಗೋವರ್ ಇನ್ನೂ ಹೋಗಿಲ್ಲಾ ಅಂತಾಯ್ತು." ನಿಯತಿ ಹುಬ್ಬು ಮೇಲೇರಿಸಿದಳು.

"ಗೋಧಿ ಬಣ್ಣದ ಹ್ಯಾಂಗೋವರ್ ಹೋಗಿಲ್ಲಾ ಅನ್ನೋದು ನಿಜವೇ. ಬಟ್, ಅದು ಮ್ಯಾಟರ್ ಅಲ್ಲಾ ಮಾರಾಯ್ತಿ."

"ಸರಿ, ನಿನ್ನ ಪ್ರಕಾರ ಮರೆವಿನ ರೋಗ ಇದ್ರೆ ಕಷ್ಟ ಅಲ್ವಾ ..?? ವೈ..?? ಅವಾಗ್ಲೇ ಮನುಷ್ಯ ಆರಾಮಾಗಿ ಇರ್ಬೋದಲ್ಲ. ನಿನ್ನೆ ಏನಾಗಿತ್ತು ಅನ್ನೋದೆಲ್ಲಾ ಮರೆತು ತಲೆಬಿಸಿಯಿಲ್ಲದೆ ಇವತ್ತಿನ ಈ ಕ್ಷಣದಲ್ಲಿ ಬದುಕಬಹುದು. ನಾಳೆಯ ಕನಸುಗಳನ್ನು ನಿನ್ನೆಗಳ ನೆನಪುಗಳ ನೆರಳಿಲ್ಲದೇ ಹಣೆಯಬಹುದು. ಇದೇ ಬೆಸ್ಟ್ ಅಲ್ವಾ ..??"

"ಹೇಳೋಕೆ ಮಾತ್ರ ಬೆಸ್ಟ್. ನಿನ್ನೆದೆಲ್ಲಾ ಮರೆತು ಹೋದ್ರೆ ಇವತ್ತು ಮತ್ತು ನಾಳೆಗಳನ್ನು ಇನ್ನಷ್ಟು ಚೆಂದವಾಗಿ ರೂಪಿಸಬಹುದು ಅನ್ನೋದು ಸತ್ಯವೇ. ಆದರೆ, ಮನುಷ್ಯನ ಸ್ವಭಾವ ಹಾಗಲ್ಲ ಎನ್ನುವ ವಾಸ್ತವವೂ ದಿಟವೇ ಅಲ್ವಾ ..?? ಮನುಷ್ಯ ಕನಸುಗಳ ಬೆಳಕಿಗಿಂತಲೂ ನೆನಪುಗಳ ನೆರಳಿನಲ್ಲಿ ಹೆಜ್ಜೆ ಹಾಕಲು ಇಷ್ಟ ಪಡುತ್ತಾನೆ. ಕನಸುಗಳು ಕಳೆದುಹೋದರೆ ಇನ್ನಷ್ಟು ಹೊಸ ಕನಸುಗಳನ್ನು ಹೆಣೆಯಬಹುದು. ನೆನಪುಗಳು ಹಾಗಲ್ಲವಲ್ಲ. ಅವು ಕನ್ನಡಿಯಂತೆ. ಒಮ್ಮೆ ಅಳಿಸಿಹೋದರೆ, ಮತ್ತೆ ಮೊದಲಿನಂತೆ ಬರೆಯುವುದಕ್ಕಾಗುವುದಿಲ್ಲ."

"ಹ್ಞೂಂ, ನಿಜ. ಇನ್ ಫಾಕ್ಟ್, ಎಲ್ಲಾ ಮರೆತು ಕುಳಿತಿರುವ ವ್ಯಕ್ತಿಗಿಂತಲೂ ಆತನ ಮನೆಯವರು, ಸ್ನೇಹಿತರು, ಆತ್ಮೀಯ ವರ್ಗದವರಿಗೆ ಕಷ್ಟ ಇನ್ನೂ ಜಾಸ್ತಿ. ಹಳೆಯದರಿಂದ ದಿನೇ ದಿನೇ ದೂರವಾಗುತ್ತಿರುವ ಅವರನ್ನು ಮತ್ತೆ ಮತ್ತೆ ಮರಳಿ ಕರೆತರುವ ಕಾರ್ಯ ಸಣ್ಣದಲ್ಲ. ಅದೆಷ್ಟು ತಾಳ್ಮೆ, ಶ್ರಮ, ಮಮತೆಗಳೆಲ್ಲ ಇರಬೇಕು. ಅದೂ ಅಲ್ಲದೇ ಇಷ್ಟೆಲ್ಲಾ ಮಾಡಿಯೂ ಅವರಿಗೆ ಎಲ್ಲವೂ ನೆನಪಾಗಿಯೇ ತೀರುತ್ತವೆ ಎಂಬುದಕ್ಕೆ ಗ್ಯಾರಂಟಿಯಿಲ್ಲ."

"ನಿನ್ನೆ ಗೋಧಿ ಬಣ್ಣದ ಕ್ಲೈಮಾಕ್ಸ್ ನೋಡೋವಾಗ ಎಲ್ಲಿ ವೆಂಕೋಬ ರಾವ್ ಮಗನನ್ನು ಗುರುತು ಹಿಡಿಯದೇ ಉಳಿತಾರೋ ಅಂತ ಅನ್ಸಿತ್ತು."

ನಿಯತಿ ಪ್ರತಿಕ್ರಿಯಿಸಲಿಲ್ಲ. ಮುಗುಳ್ನಗುತ್ತಾ ಕಿಟಕಿಯತ್ತ ಮುಖ ಮಾಡಿದಳು.


Wednesday, 1 June 2016

ಡಿಯರ್ ಡೈರಿ: ಡೇ - ೧


"ಹ್ಯಾಪೀ ನ್ಯೂ ಇಯರ್"

’ಇದ್ಯಾರಪ್ಪಾ ಇದು..?? ಅನ್ ನೌನ್ ನಂಬರು. ನಾನು ಹೆಲೋ ಅನ್ನೋದಕ್ಕಿಂತಾ ಮೊದಲೇ ಮಾತಾಡ್ತಾರೆ, ಅದೂ ಕೂಡ ನ್ಯೂ ಇಯರ್ ವಿಷ್. ಯಾರಿಗಪ್ಪಾ ಇವತ್ತು ಹೊಸ ವರ್ಷ..??’ ನಾನು ತಲೆಕೆರೆದುಕೊಳ್ಳುತ್ತಲೇ "ಹೆಲೋ, ಮೇ ಐ ನೋ ಹೂ ಈಸ್ ದಿಸ್ ಪ್ಲೀಸ್..??" ಎಂದೆ.

"ಯೇ ಕೋತಿ, ನಿಂಗೆ ನನ್ನ ಧ್ವನಿ ಕೂಡಾ ಮರೆತು ಹೋಗಿದೆನಾ..?? ಹ್ಞೂಂ, ಇನ್ನೇನ್ ಮತ್ತೆ. ಹತ್ತತ್ರ ಒಂದು ವರ್ಷಾನೇ ಆಗ್ತಾ ಬಂತು. ಒಂದ್ಸಲಾನೂ ನನ್ನ ನೆನಪಾಗಿಲ್ಲ. ನಾನು ಮಾರಾಯ್ತಿ, ನಿಯತಿ."

‘ಅಯ್ಯಯ್ಯೋ, ಇವಳಾ.?’ ಎಂದುಕೊಂಡೆ ಮನಸಲ್ಲಿ. ಕಾರಣ ಇಲ್ಲದೇ ನಾನಾಗೇ ಇವಳಿಂದ ದೂರ ಇದ್ದೆ. ಈಗ ಒಂದಿಷ್ಟು ಪೂಜೆ, ಮಂಗಳಾರತಿ, ಅರ್ಚನೆಗಳು ಗ್ಯಾರಂಟಿ ಅನ್ನೋದು ಪಕ್ಕಾ ಆಗಿ ಏನು ಮಾತನಾಡೋದು ಅಂತಾ ತಿಳಿದೇ ಸುಮ್ಮನೇ ಉಳಿದೆ. ಅಷ್ಟರಲ್ಲಿ ಅವಳೇ ಮಾತು ಮುಂದುವರೆಸಿದಳು.
"ಯಾಕೆ, ಏನು, ಹೇಗೆ ಅಂತೆಲ್ಲಾ ಹಳೆಯದರ ಬಗ್ಗೆ ನಾನೇನು ಕೇಳಲ್ಲಾ, ಹೇಳಲ್ಲಾ ಮಾರಾಯ್ತಿ. ನಿಂಗ್ಯಾವ ತೀರ್ಥ, ಪ್ರಸಾದಗಳನ್ನೂ ಕೊಡಲ್ಲಾ. ನೋ ವರೀಸ್. ಈಗಾ ನಾನು ವಿಷ್ ಮಾಡಿದ್ದು ಯಾಕೆ ಅಂತಾ ಗೊತ್ತಾಯ್ತಾ..??"

ಈಗ ನನಗೆ ಮಾತನಾಡಲಿಕ್ಕೆ ಉತ್ಸಾಹ ಬಂತು. "ನೀನು ಯಾವಾಗ ಏನೆಲ್ಲಾ ವಿಷ್ ಮಾಡ್ತಿಯೋ ಯಾರಿಗೆ ಗೊತ್ತು ಮಾರಾಯ್ತಿ. ಅರ್ಥ ಆಗ್ಲಿಲ್ಲ, ಇವತ್ತ್ಯಾಕೆ ಹೊಸ ವರ್ಷ..??"

"ಇವತ್ತು ಜೂನ್ ಫಸ್ಟ್ ಅಲ್ವಾ..?? ನಮಗೆಲ್ಲಾ ಶಾಲೆ ಶುರುವಾಗ್ತಿದ್ದ ದಿವಸ. ಇದೂ ಕೂಡ ಮರೆತು ಹೋಗಿದೆನಾ ನಿನಗೆ ಏನ್ ಕತೆ..??"

"ಹೇ, ನೆನಪಿದೆ. ಶಾಲೆ ಶುರುವಾಗೋದ್ರ ಜೊತೆಗೆ ಮಳೆಗಾಲನೂ ಶುರುವಾಗ್ತಿತ್ತು. ಜೂನ್ ಬಂತು ಅಂದ್ರೆ ಅದೇನೋ ಉತ್ಸಾಹ, ಸಡಗರ, ಪುಳಕ. ಎಂಜಿನಿಯರಿಂಗ್ ಬಂದ್ಮೇಲೂ, ಎಂಜಿನಿಯರಿಂಗ್ ಮುಗಿದ್ಮೇಲೂ ಸಹ ಶಾಲೆ, ಕಾಲೇಜು ಅಂದ್ರೆ ನಂಗೆ ಜೂನ್ ಅಲ್ಲಿ ಶುರುವಾಗೋದು ಅಂತಾನೇ ಅನ್ಸತ್ತೆ. ಬರೋಬ್ಬರೀ ಹದಿನೈದು ವರ್ಷಗಳ ಕಾಲ ಜೂನ್ ಅಂದ್ರೆ ಹೊಸ ವರ್ಷ ಅನ್ನೋ ವಿಷ್ಯ ತಲೇಲಿ ಇತ್ತಲ್ವಾ. ಅದಿನ್ನೂ ಹಾಗೆ ಇದೆ. ಜನವರಿ ಅಂದ್ರೆ ಅದೊಂದು ಬಗೆಯ ವ್ಯಾವಹಾರಿಕ ಹೊಸ ವರ್ಷ. ಇನ್ನು ಯುಗಾದಿ ಅಂತಂದ್ರೆ ಅದು ನಮ್ಮ ಪರಂಪರೆಯ ಹೊಸ ವರ್ಷ. ಭಾವನಾತ್ಮಕವಾದ ಹೊಸ ವರ್ಷ ಅನ್ನೋದೇನಿದ್ರೂ ಅದು ಜೂನ್ ಒಂದು.”

"ಈಗೆಲ್ಲಾ ಮೇ ೨೯, ೩೦ರ ಹಾಗೆನೇ ಶಾಲೆಗಳು ಬಾಗಿಲು ತೆಗೆದು ಬಿಡತ್ವೆ. ಆದರೂ ನನಗಂತೂ ಜೂನ್ ಒಂದು ಅಂದ್ರೆನೇ ಶಾಲಾ ಪ್ರಾರಂಭೋತ್ಸವ. ಇವತ್ತು ಅದೆಷ್ಟೆಲ್ಲಾ ಪುಟಾಣಿಗಳನ್ನ ನೋಡಿದೆ. ನಂಗೂ ಸ್ಕೂಲ್ ಗೆ ಹೋಗ್ಬಿಡಣಾ ಅನ್ನಿಸ್ತು."

"ಹೌದು ಮಾರಾಯ್ತಿ. ಆ ಸ್ಕೂಲ್ ಡೇಸ್ ಅನ್ನೋದೇ ಇನ್ನೊಂದು ಹತ್ತು-ಹದಿನೈದು ವರ್ಷಗಳು ಇರ್ಬೇಕಿತ್ತು. ಈ ದೊಡ್ಡವರಾದ ಮೇಲಿನ ಕಿರಿಕಿರಿಗಳಿಗಿಂತಾ ಆ ಚಿಕ್ಕವಯಸ್ಸಿನ ಸಿಟ್ಟು, ಬೇಜಾರು, ಅಳು ಎಲ್ಲವೂ ಅದೆಷ್ಟೋ ಬೆಟರು."

ಗಿವ್ ಮಿ ಸಮ್ ಸಮ್ ಶೈನ್
ಗಿವ್ ಮಿ ಸಮ್ ರೇನ್
ಗಿವ್ ಮಿ ಅನದರ್ ಚಾನ್ಸ್
ಐ ವಾನಾ ಗ್ರೋ ಅಪ್ ಒನ್ಸ್ ಅಗೇನ್

ಎಲ್ಲಾ ಶಾಲಾ ಮಕ್ಕಳಿಗೂ ಹ್ಯಾಪೀ ಹ್ಯಾಪೀ ಹ್ಯಾಪೀ ನ್ಯೂ ಇಯರ್.